ಕೆಲ ರಾಜ ಮಹಾರಾಜರುಗಳು ಪ್ರಜೆಗಳ ಯೋಗಕ್ಷೇಮಕ್ಕಾಗಿ ಅವರು ನೀಡಿದ ಒಳ್ಳೆಯ ಆಡಳಿತದಿಂದ ಇತಿಹಾಸದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿದ್ದರೆ, ಕೆಲವರು ಪ್ರಜೆಗಳು ಸೇರಿದಂತೆ ವೈರಿಗಳನ್ನು ಕ್ರೂರವಾಗಿ ನಡೆಸಿಕೊಂಡಿದ್ದಕ್ಕೆ ಸಹ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ. ಕ್ರೂರತೆ ಎನ್ನುವುದು ಅಂದಿನ ಕಾಲದಲ್ಲಿ ಸಾಮಾನ್ಯವಾಗಿತ್ತು. ಶತ್ರುಗಳ ಸಂಹಾರ ಮಾಡುವುದಕ್ಕೆ ಮುಂಚೆ ಚಿತ್ರ ಹಿಂಸೆ ನೀಡಿ ಅವರನ್ನು ಕೊಲ್ಲುವುದರಿಂದ, ತಮ್ಮ ವಿರೋಧಿಗಳಿಗೆ ಸಂದೇಶವನ್ನು ಕೊಡುತಿದ್ದರು. ಮತ್ತೊಮ್ಮೆ ನಮ್ಮ ತಂಟೆಗೆ ಯಾರೂ ಬರಬಾರದು ಎನ್ನುವುದು ಅವರ ಉದ್ದೇಶವಾಗಿರುತಿತ್ತು.
ಮಧುರೈ
ಯನ್ನು ಆಳುತಿದ್ದ ಸುಲ್ತಾನ್ ಜಿಯಾಸುದ್ದೀನ್, ಹೊಯ್ಸಳರ ಕೊನೆಯ
ದೊರೆ 80 ವರ್ಷದ ಮೂರನೇ ವೀರ ಬಲ್ಲಾಳರನ್ನು ಬಂಧಿಸಿ ಮಧುರೈ ಮೀನಾಕ್ಷಿ ದೇವಸ್ಥಾನದ ಹೊರಗಿನ
ಕಂಬಕ್ಕೆ ನೇತು ಹಾಕಿ ಜೀವಂತವಾಗಿರುವಾಗಲೇ ಮೈಮೇಲಿನ ಚರ್ಮಸುಲಿದಿದ್ದರಂತೆ, ಅದೇ ಸ್ಥಿತಿಯಲ್ಲಿ ಮರಣ ಹೊಂದಿದ ನಂತರ ಶವವನ್ನು ತಿಂಗಳುಗಳವರೆಗೂ ನೇತು ಹಾಕಿದ್ದರೆಂದು
ಅರಬ್ ಪ್ರವಾಸಿ ಇಬಿನ್ ಬಟೂಟ ದಾಖಲಿಸಿದ್ದಾನೆ.
ಇನ್ನೊಂದು ಘೋರ ಘಟನೆ ಶಿವಾಜಿಯ ಪುತ್ರ ಸಂಭಾಜಿಯದ್ದು. ಔರಂಗ ಜೇಬ್, ಸಂಭಾಜಿಯನ್ನು ಸೆರೆ ಹಿಡಿದು ಚಿತ್ರಹಿಂಸೆ ನೀಡಿ ಸಾಯಿಸಿ ಅವನ ದೇಹವನ್ನು ತುಂಡು
ತುಂಡಾಗಿ ಕತ್ತರಿಸಿ ನದಿಯಲ್ಲಿ ಬಿಸಾಕುತ್ತಾನೆ. ಇಂತಹ ಹಲವಾರು ಘಟನೆಗಳು ಭಾರತದಲ್ಲಿ ನಡೆದಿವೆ.
ಆದರೆ
ರೊಮೇನಿಯಾದ ದೊರೆ ಪ್ರಿನ್ಸ್ ವ್ಲಾಡ್ -3 ನಷ್ಟು ಕ್ರೂರತನವನ್ನು, ಪ್ರಪಂಚದ ಯಾವ ದೊರೆಯೂ ಬಹುಶಃ ಮೆರೆದಿರಲಾರ. ಅಷ್ಟೊಂದು ಕ್ರೂರಿಯಾಗಿದ್ದ ಅವನು.
ಸುಮಾರು 80000 ರಿಂದ 100000
ಜನರನ್ನು ಅವನು ಸಾಯಿಸಿದ ಎಂದು ಹೇಳಲಾಗುತ್ತಿದೆ.
"Vlad the Impaler" ಎನ್ನುವ ಅನ್ವರ್ಥನಾಮ ಅವನಿಗೆ ನೀಡಲಾಗಿತ್ತು. ಹಾಗೆಯೇ ಡ್ರಾಕುಲಾ
ಎನ್ನುವ ಹೆಸರು ಸಹ ಜನಜನಿತವಾಗಿತ್ತು. Impaler
ಅಂದರೆ ಶೂಲಕ್ಕೇರಿಸುವವ ಎಂದು ಅರ್ಥ. ಅಂತಿಂಥ ಶೂಲ
ಅಲ್ಲ ಅದು, ನಮ್ಮ
ಕ್ರಿಕೆಟ್ ಆಟದಲ್ಲಿ ಬಳಸುವ ವಿಕೆಟ್ ಮಾದರಿಯದ್ದು. ವಿಕೆಟ್ ಗಿಂತ ದಪ್ಪ ಮತ್ತು ಎತ್ತರ ಆರು
ಅಡಿಗಿಂತಲೂ ಜಾಸ್ತಿಯಿರುತಿತ್ತು. ಶತ್ರುಗಳನ್ನ ಕೈಕಾಲು ಕಟ್ಟಿ ಮೇಜಿನ ಮೇಲೆ ಬೋರಲಾಗಿ ಮಲಗಿಸಿ
ಅವರ ಗುದದ್ವಾರದಲ್ಲಿ ಈ ಶೂಲವನ್ನು ಏರಿಸಿ ಎದೆಯ ಭಾಗದಿಂದ ಆಚೆ ಬರುವಂತೆ ಹಿಂಬದಿಯಿಂದ
ಹೊಡೆಯುತಿದ್ದರು. ನಂತರ ಆ ದೇಹದ ಸಮೇತ ಶೂಲವನ್ನು ರಸ್ತೆಯ ಬದಿಗಳಲ್ಲಿ ನೆಡುತಿದ್ದರು.
ರಸ್ತೆಯಲ್ಲಿ ಓಡಾಡುವವರು, ಆ ದೇಹಗಳನ್ನು ನೋಡಿ ದೊರೆ ವ್ಲಾಡ್ ನನ್ನು ಕೆಣಕುವ ಪ್ರಯತ್ನವನ್ನು
ಯಾರು ಮಾಡಬಾರದು ಎನ್ನುವ ಸಂದೇಶವನ್ನು ರವಾನಿಸುತಿದ್ದ.
ವ್ಲಾಡ್ ಹುಟ್ಟಿದ್ದು ರೊಮೇನಿಯಾದ ದೇಶದ ಅಂದಿನ ವಲ್ಲಾಚಿಯಾದಲ್ಲಿ.
ಈ ವಲ್ಲಾಚಿಯಾ ಪ್ರಾಂತ್ಯದ ಉತ್ತರಕ್ಕೆ ಕ್ರಿಶ್ಚಿಯನ್ನರು ಆಳುತಿದ್ದ ಯುರೋಪ್ ರಾಷ್ಟ್ರಗಳಿದ್ದವು.
ಇದರ ದಕ್ಷಿಣಕ್ಕೆ ಮುಸ್ಲಿಂ ಒಟ್ಟೋಮನ್ ಗಳು ಆಳುತಿದ್ದ ತುರ್ಕಿರಾಷ್ಟ್ರವಿತ್ತು. ಈ ವಲ್ಲಾಚಿಯಾ
ಪ್ರಾಂತ್ಯವು ಮಧ್ಯದಲ್ಲಿದ್ದರಿಂದ ಪದೇ ಪದೇ ಯುದ್ದಗಳಾಗುತಿದ್ದವು. ಒಟ್ಟೋಮನ್ ಸಾಮ್ರಾಜ್ಯವನ್ನು
ಯುರೋಪ್ ನವರೆಗೂ ವಿಸ್ತರಿಸುವ ಆಕಾಂಕ್ಷೆಗೆ ವಲ್ಲಾಚಿಯಾದಲ್ಲಿನ ಆಡಳಿತಗಾರರು
ಅಡ್ಡಿಯಾಗುತಿದ್ದರು. ವಲ್ಲಾಚಿಯಾದ ಆಡಳಿತಗಾರರಿಗೆ ಯುರೋಪ್ ನ ಹಲವಾರು ರಾಜ ಮನೆತನಗಳು
ಬೆಂಬಲಕ್ಕೆ ನಿಲ್ಲುತಿದ್ದರು.
ತುರ್ಕಿಯ ಒಟ್ಟೋಮನ್ ಸುಲ್ತಾನ್, ವಲ್ಲಾಚಿಯ
ಸೇರಿದಂತೆ ಕಾನ್ ಸ್ಟಾಂಟಿನೋಪಲ್ ಮೇಲೆ ನಿಯಂತ್ರಣ ಹೊಂದಲು ಬಯಸಿದ್ದ. ಒಟ್ಟೋಮನ್ ಸೈನ್ಯ ಬಹಳ
ದೊಡ್ಡದಾಗಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅವರು ಹೊಂದಿದ್ದರು. ಪ್ರಬಲರಾಗಿದ್ದ ಅವರು
ದಿನೇ ದಿನೇ ಪ್ರವರ್ಧಮಾನಕ್ಕೆ ಬರುತಿದ್ದರು. ಇಂತಹ ಬಲಾಡ್ಯ ತುರ್ಕಿ ಸೈನ್ಯದ ಮುಂದೆ ವಲ್ಲಾಚಿಯಾ
ಏನೂ ಅಲ್ಲ. ಕ್ರಿ.ಶ 1442 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಸುಲ್ತಾನ್ ಮುರಾದ್ II ರೊಂದಿಗಿನ
ರಾಜತಾಂತ್ರಿಕ ಸಭೆಗೆ ವ್ಲಾಡ್ II ಅವರನ್ನು ಕರೆಯುತ್ತಾರೆ. ಮಾತುಕತೆಗೆ ಅವರು ತಮ್ಮ ಚಿಕ್ಕ ಮಕ್ಕಳಾದ
ವ್ಲಾಡ್ III ಮತ್ತು
ರಾಡು ಅವರನ್ನು ಕರೆದು ಕೊಂಡು ಹೋಗುತ್ತಾರೆ. ಆದರೆ ಹೆಸರಿಗೆ ಮಾತ್ರ ರಾಜತಾಂತ್ರಿಕ ಸಭೆ.
ವಾಸ್ತವವಾಗಿ ಅದೊಂದು ವ್ಯೂಹ ವಾಗಿತ್ತು. ಮಾತುಕತೆ ಫಲಪ್ರದವಾಗುವುದಿಲ್ಲ. ಈ ಸಂಧರ್ಭದಲ್ಲಿ
ಸಭೆಗೆ ಬಂದ ಮೂವರನ್ನು ಸುಲ್ತಾನ್ ಬಂಧಿಸುತ್ತಾನೆ.
ಬಿಡುಗಡೆ ಯಾಗಬೇಕೆಂದರೆ, ತಮ್ಮ
ಅಡಿಯಾಳಾಗಿರಬೇಕೆಂದು ಷರತ್ತು ವಿಧಿಸಲಾಗುತ್ತದೆ. ಷರತ್ತಿಗೆ ಬದ್ದರಾಗಿರಬೇಕೆಂದರೆ, ತನ್ನ
ಮಕ್ಕಳನ್ನು ಒತ್ತೆಯಾಳಾಗಿಡಬೇಕು. ಇತ್ತ ಬೇರೆ ವಿಧಿಯಿಲ್ಲದೆ ಹಿರಿಯ ವ್ಲಾಡ್ II
ತನ್ನ ಮಕ್ಕಳನ್ನು ಒತ್ತೆಇಟ್ಟು ಷರತ್ತಿನಡಿಯಲ್ಲಿ ತಾನು ಬಿಡುಗಡೆಯಾಗಿ ವಲ್ಲಾಚಿಯಾಗೆ
ಮರಳುತ್ತಾನೆ.
ಒಟ್ಟೋಮನ್ನರ ಒತ್ತೆಯಾಳಾಗಿ ಯುವರಾಜ ವ್ಲಾಡ್ III
ಮತ್ತು ಅವನ ಕಿರಿಯ ಸಹೋದರ ರಾಡು ಇರುತ್ತಾರೆ. ಸುಲ್ತಾನರು ಅವರನ್ನು ಕೇವಲ ಬಂಧಿಸುವುದಷ್ಟೇ ಅಲ್ಲ
ಅವರಿಗೆ ಸೂಕ್ತ ಶಿಕ್ಷಣವನ್ನು ಕೊಡುತ್ತಾರೆ. ಕಿರಿಯ ಸಹೋದರ ರಾಡುವಿಗೆ ವಿಜ್ಞಾನ, ತತ್ವಶಾಸ್ತ್ರ
ಮತ್ತು ಕಲೆಯನ್ನು ಕಲಿಸುತ್ತಾರೆ ವ್ಲಾಡ್ III ಗೆ
ಕುದುರೆ ಸವಾರಿ, ಯುದ್ದದ
ರಣತಂತ್ರಗಳು, ಸೈನ್ಯದಲ್ಲಿ
ಹೋರಾಡುವ ವಿಧಾನಗಳನ್ನು ಕಲಿಸುತ್ತಾರೆ.
ಆದರೆ ವಲ್ಲಾಚಿಯಾದಲ್ಲಿನ ನಂತರದ ಪರಿಸ್ಥಿತಿ ಭಯಂಕರವಾಗುತ್ತದೆ.
ಸ್ಥಳೀಯ ಸೇನಾಧಿಕಾರಿಗಳು (ಬೋಯಾರ್‌ಗಳು)
ದುರ್ಬಲನಾಗಿದ್ದ ವ್ಲಾಡ್ II ರನ್ನು ವಲ್ಲಾಚಿಯಾದ ಆಡಳಿತದದಿಂದ ಕಿತ್ತೊಗೆಯುವುದಷ್ಟೇ ಅಲ್ಲದೆ
ಕ್ರಿ.ಶ. 1447 ರಲ್ಲಿ ವಲ್ಲಾಚಿಯಾದ ಬಾಲ್ಟೆನಿ ಬಳಿ ಅವರನ್ನು ಕೊಲ್ಲುತ್ತಾರೆ. ವ್ಲಾಡ್‌ನ III ಹಿರಿಯ
ಸಹೋದರ ಮಿರ್ಸಿಯಾ ರನ್ನು ಚಿತ್ರಹಿಂಸೆಗೊಳಗಾಗಿಸಿ, ಎರಡು
ಕಣ್ಣುಗಳನ್ನು ಕಿತ್ತು ಕುರುಡರನ್ನಾಗಿ ಮಾಡಿ ಜೀವಂತ ಸಮಾಧಿ ಮಾಡುತ್ತಾರೆ. ಈ ವಿಷಯ ವ್ಲಾಡ್‌ನ III ಕಿವಿಗೆ
ಬಿದ್ದೊಡನೆ, ಅವನು
ವ್ಯಾಘ್ರನಾಗುತ್ತಾನೆ. ಬಹುಶಃ ಈ ಘಟನೆಗಳು ಅವನ ಮನಸ್ಥಿತಿಯನ್ನು ಬದಲಾಯಿಸಿರುವ ಸಾಧ್ಯವಿದೆ ಎಂದು
ಇತಿಹಾಸಕಾರರು ಹೇಳುತ್ತಾರೆ.
ಅತಂತ್ರವಾದ ವಲ್ಲಾಚಿಯಾವನ್ನು ಮುನ್ನೆಡೆಸಲು ವ್ಲಾಡ್‌ನ III ಗೆ
ಅವಕಾಶ ನೀಡಲು ಒಟ್ಟೋಮನ್ ಸುಲ್ತಾನ್ ಯೋಚಿಸುತ್ತಾನೆ. ತನ್ನ ಅಧಿಪತ್ಯದ ಅಡಿಯಲ್ಲಿ
ವಲ್ಲಾಚಿಯಾವನ್ನು ಆಳಬೇಕು ಮತ್ತು ನಮ್ಮ ಮಾತುಗಳನ್ನು ಮೀರಬಾರದು, ಪ್ರತಿವರ್ಷ
ಕಪ್ಪವನ್ನು ಕೊಡಬೇಕು ಎನ್ನುವ ಷರತ್ತಿನೊಂದಿಗೆ ಕ್ರಿ.ಶ.1448 ರಲ್ಲಿ
ವ್ಲಾಡ್‌ನ III ಯನ್ನು
ಬಂಧಮುಕ್ತಗೊಳಿಸಿ ವಲ್ಲಾಚಿಯಾದ ದೊರೆಯಾಗಿ ನೇಮಿಸುತ್ತಾರೆ. ಆದರೆ ವ್ಲಾಡ್ III
ಒಟ್ಟೋಮನ್ ಗಳ ಮೇಲಿನ ದ್ವೇಷದಿಂದ ಅವರ ವಿರುದ್ದ
ಹೋರಾಡಲು ಒಟ್ಟೋಮನ್ ಗಳ ವೈರಿಗಳೊಂದಿಗೆ ಸ್ನೇಹ ಬೆಳೆಸುತ್ತಾನೆ. ಪದೇ ಪದೇ ಯುದ್ದಗಳಿಗೆ
ಒಳಗಾಗುತಿದ್ದ ವಲ್ಲಾಚಿಯಾವನ್ನು ಸಂರಕ್ಷಿಸಿಕೊಳ್ಳಲು ತನ್ನ ಸೈನ್ಯವನ್ನು ಇನ್ನೂ
ದೊಡ್ಡದಾಗಿಸಿಕೊಳ್ಳುತ್ತಾನೆ. ಯುರೋಪಿನ ಹಲವಾರು ರಾಜರು ಸಹಾಯ ಹಸ್ತ ಚಾಚುತ್ತಾರೆ.
ಈ ಮಧ್ಯೆ, ತನ್ನ ಕುಟುಂಬದವರ ಸಾವಿಗೆ ಕಾರಣರಾಗಿದ್ದ ಬೋಯಾರ್ ಗಳನ್ನು ಔತಣ
ಕೂಟಕ್ಕೆ ಆಹ್ವಾನಿಸುತ್ತಾನೆ. ಎಲ್ಲರಿಗೂ ಔತಣ ನೀಡುವ ಸಮಯದಲ್ಲಿ ತನ್ನ ಯೋಧರಿಂದ ಎಲ್ಲಾ
ಪುರುಷರನ್ನು ಬಂಧಿಸುತ್ತಾನೆ, ಕೆಲವರನ್ನು ಅಲ್ಲಿಯೇ ತುಂಡು ತುಂಡಾಗಿ ಕೊಚ್ಚಿ ಹಾಕುತ್ತಾನೆ, ಇನ್ನೂ
ಕೆಲವರನ್ನು ಶೂಲಕ್ಕೇರಿಸುತ್ತಾನೆ. ವಲ್ಲಾಚಿಯಾದ ಹೊರಪ್ರದೇಶಗಳಲ್ಲಿ ನೂರಾರು ಜನರನ್ನು
ರಸ್ತೆಯುದ್ದಕ್ಕೂ ನೇತು ಹಾಕುತ್ತಾನೆ. ಈ ದೃಶ್ಯಗಳು, ತುರ್ಕಿ
ಸೇರಿದಂತೆ ಯುರೋಪಿನ ಹಲವು ಸಾಮ್ರಾಜ್ಯಗಳ ಮೈ ನಡುಗಿಸುತ್ತದೆ. ಡ್ರಾಕುಲಾ ವ್ಲಾಡ್ಎಂದಾಗ ಜನ
ಭಯಭೀತಗೊಳ್ಳುತ್ತಿರುತ್ತಾರೆ. ಇಂತಹ ವಿಕೃತಿಯಿಂದ ತನ್ನ ಶತ್ರುಗಳ ಎದೆ
ಝಲ್ಲೆನಿಸುತ್ತಿರುತ್ತಾನೆ. ಜನರು ಒಮ್ಮೆಗೆ ಪ್ರಾಣ ಬಿಡಬಾರದಂತೆ ಶೂಲಕ್ಕೇರಿಸುತಿದ್ದನಂತೆ, ರಕ್ತವು
ಮೈಯಿಂದ ಹೊರಬಂದು ನಿಧಾನವಾಗಿ ದೇಹದ ಅಂಗಾಂಗಗಳು ನಿಷ್ಕ್ರಿಯವಾಗಿ ಪ್ರಾಣ ಹೋಗುವಂತೆ
ಮಾಡುತಿದ್ದನಂತೆ. ಹಲವಾರು ದಿನಗಳವರೆಗೆ ಜೀವಂತ ಸ್ಥಿತಿಯಲ್ಲಿದ್ದು ನಂತರ ಜನರು ಸಾಯುತಿದ್ದರಂತೆ.
ಈ ರೀತಿ ಚಿತ್ರಹಿಂಸೆ ನೀಡುವುದನ್ನು ತುರ್ಕಿಯಲ್ಲಿದ್ದಾಗ ಕಲಿತಿರಬಹುದು ಎಂದು ಹೇಳಲಾಗುತ್ತಿದೆ.
ಒಟ್ಟೋಮನ್ ಗಳು ಸಹ ತಮ್ಮ ವೈರಿಗಳನ್ನು ಶೂಲಕ್ಕೇರಿಸುತಿದ್ದರಂತೆ.
ಈ ಮಧ್ಯೆ 1453ರಲ್ಲಿ ಕಾನ್ ಸ್ಟಾಂಟಿನೋಪಲ್ ನಗರವನ್ನು ತುರ್ಕರು
ತಮ್ಮ ವಶಮಾಡಿಕೊಳ್ಳುತ್ತಾರೆ. ಈ ಘಟನೆಯಿಂದ ವ್ಲಾಡ್‌ನ III ಚಿಂತಾಕ್ರಾಂತನಾಗುತ್ತಾನೆ.
ತುರ್ಕಿಯ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿಕ್ಕೊಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಾನೆ.
ಪ್ರತಿ ವರ್ಷ ಕಪ್ಪ ಕೊಡುತಿದ್ದ ವ್ಲಾಡ್, ಮೂರ್ನಾಲ್ಕು ವರ್ಷಗಳಿಂದ ಕಪ್ಪ ಕೊಟ್ಟಿರುವುದಿಲ್ಲ. ಮಾತುಕತೆಗೆ
ಬನ್ನಿಯೆಂದು ತುರ್ಕಿಯ ಸುಲ್ತಾನ ಕರೆಕೊಟ್ಟಿರುತ್ತಾನೆ. ತನ್ನ ತಂದೆಗಾದ ಅನ್ಯಾಯವನ್ನು
ಮನಸ್ಸಿನಲ್ಲಿಟ್ಟುಕೊಂಡು ಅಲ್ಲಿಗೆ ಹೋಗುವುದಿಲ್ಲ. ಸಂಧಾನಕ್ಕೆಂದು ಬಂದಿದ್ದ ಒಟ್ಟೋಮನ್
ಸಂಧಾನಕಾರರನ್ನು ಯಾವುದೇ ಮುಲಾಜಿಲ್ಲದೆ ಶೂಲಕ್ಕೇರಿಸುತ್ತಾನೆ. ಈ ಮೂಲಕ ತುರುಕರ ವಿರುದ್ದ
ಹೋರಾಡಲು ನಾನು ಸಿದ್ದ ಎನ್ನುವ ಸಂದೇಶ ರವಾನಿಸುತ್ತಾನೆ. ತುರ್ಕಿಯ ವಿರುದ್ದ ಹಲವಾರು
ಯುದ್ದಗಳನ್ನು ನಡೆಸುತ್ತಾನೆ. ಬಹುತೇಕ ಯುದ್ದಗಳಲ್ಲಿ ಯಶಸ್ವಿಯಾಗುತ್ತಾನೆ. ತನ್ನ ವಿಜಯದ ಬಗ್ಗೆ
ಒಂದು ಪತ್ರದಲ್ಲಿ ಹೀಗೆ ದಾಖಲಿಸುತ್ತಾನೆ.
"ಡ್ಯಾನ್ಯೂಬ್ ನದಿ ಸಮುದ್ರಕ್ಕೆ ಸೇರುವ ಜಾಗದಲ್ಲಿನ ಒಬ್ಲುಸಿಟ್ಜಾ ಮತ್ತು
ನೊವೊಸೆಲೊದಲ್ಲಿ ವಾಸಿಸುತ್ತಿದ್ದ ರೈತರು, ಮಹಿಳೆಯರು
ವೃದ್ದರು ಮತ್ತು ಮಕ್ಕಳು ಎಲ್ಲರನ್ನೂ ನಾನು ಕೊಂದಿದ್ದೇನೆ. ಯುದ್ದದಲ್ಲಿ ನಮ್ಮ ಸೈನ್ಯ 23884 ತುರ್ಕರನ್ನುಕೊಂದಿದೆ. ಮನೆಗಳಲ್ಲಿ ಜೀವಂತವಾಗಿ
ಸುಟ್ಟುಹಾಕಿದ್ದೇವೆ, ಯುದ್ದದಲ್ಲಿ ರುಂಡ ಚೆಂಡಾಡಿದ್ದೇವೆ. ಮಹಾಶಯರೇ, ನಾನು
ಶಾಂತಿಯನ್ನು ಮುರಿದಿದ್ದೇನೆ ಎಂದು ನೀವು ತಿಳಿದಿರಬೇಕು." ಈ ಪತ್ರ ವ್ಲಾಡ್ III ನ
ಪೈಶಾಚಿಕತೆಯನ್ನು ಎತ್ತಿ ತೋರಿಸುತ್ತದೆ. ಆಕ್ರಮಣಕಾರಿ ಒಟ್ಟೋಮನ್‌ಗಳ ಮೇಲಿನ ವ್ಲಾಡ್‌ನ
ವಿಜಯಗಳನ್ನು ವಲ್ಲಾಚಿಯಾ, ಟ್ರಾನ್ಸಿಲ್ವೇನಿಯಾ ಮತ್ತು ಇತರ ಯುರೋಪ್‌ನಾದ್ಯಂತ
ಆಚರಿಸಲಾಗುತ್ತದೆ. ಅಂದಿನ ಪೋಪ್ ಪಯಸ್ II ಸಹ ಈ ವಿಜಯದ ಕುರಿತು ಸಂತೋಷಿಸಿದ್ದರು.
ವ್ಲಾಡ್ ನ ಆಡಳಿತದ ಸಮಯದಲ್ಲಿ ತನ್ನ ವಿರೋಧಿಗಳು ಸೇರಿದಂತೆ ಸುಮಾರು 80,000
ಜನರನ್ನು ಕೊಂದಿದ್ದಾನೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 20,000
ಜನರನ್ನು ಶೂಲಕ್ಕೇರಿಸಲಾಯಿತು ಮತ್ತು ಟಾರ್ಗೋವಿಸ್ಟ್ ನಗರದ ಹೊರಗೆ ಪ್ರದರ್ಶನಕ್ಕೆ ಇಡಲಾಗಿತ್ತು
ಎಂದು ಇತಿಹಾಸಕಾರರು ದಾಖಲಿಸಿದ್ದಾರೆ. ಒಮ್ಮೆ ವಲ್ಲಾಚಿಯಾದ ಮೇಲೆ ಆಕ್ರಮಣ ಮಾಡುವುದಕ್ಕಾಗಿ
ಒಟ್ಟೋಮನ್ ಸುಲ್ತಾನ್ ಮೆಹ್ಮದ್ II ದಂಡೆತ್ತಿ ಬಂದಾಗ, ಶೂಲಕ್ಕೇರಿಸಿದ್ದ
ದೇಹಗಳನ್ನು ಸ್ವತಹ ಈ ಅಸಹ್ಯ ನೋಡಿ ಕಾನ್ಸ್ಟಾಂಟಿನೋಪಲ್ಗೆ ಹಿಂತಿರುಗಿದ
ಎಂದು ಹೇಳಲಾಗಿದೆ. ಈ ದೃಶ್ಯವು ಎಷ್ಟು ಅಸಹ್ಯಕರವಾಗಿತ್ತು ಎಂದರೆ ಸಾವಿರಾರು ಕೊಳೆಯುತ್ತಿರುವ
ದೇಹಗಳಿಂದ ಕಾಗೆಗಳು ಮಾಂಸವನ್ನು ಆಹಾರಕ್ಕಾಗಿ ಕಿತ್ತು ತಿನ್ನುವುದನ್ನು ನೋಡುತಿದ್ದರೆ, ವಲ್ಲಾಚಿಯಾದ ಕಡೆ ತಲೆ ಹಾಕಲೇ ಬಾರದು ಎನ್ನುವ ಸಂದೇಶ
ಹೋಗುತಿತ್ತು.
ಸರಿ ಸುಮಾರು ಎರಡು ದಶಕಗಳಕಾಲ ಒಟ್ಟೋಮನ್ನರು ಮತ್ತು ವ್ಲಾಡ್ III ಮಧ್ಯೆ
ಯುದ್ದ ನಡೆಯುತ್ತದೆ. ಒಂದು ಹಂತದಲ್ಲಿ ವಲ್ಲಾಚಿಯಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ
ಒಟ್ಟೋಮನ್ ಗಳು ವ್ಲಾಡ್ III ತಮ್ಮನಾದ ಯುವರಾಜ ರಾಡು ನನ್ನು ಸಿಂಹಾಸನದ ಮೇಲೆ ಕೂರಿಸುತ್ತಾರೆ.
ಇತ್ತ ವ್ಲಾಡ್ III ಭೂಗತನಾಗುತ್ತಾನೆ.
ಆಗಾಗ್ಗೆ ಹೊರಬಂದು ಒಟ್ಟೋಮನ್ನರ ಮೇಲೆ ಆಕ್ರಮಣ ನಡೆಸುತ್ತಿರುತ್ತಾನೆ. ಹಲವಾರು ಬಾರಿ ರಾತ್ರಿ
ಹೊತ್ತಿನಲ್ಲಿ ಆಕ್ರಮಣ ಮಾಡಿ ನೂರಾರು ಸೈನಿಕರನ್ನು ಕೊಂದು ಹಾಕುತ್ತಾನೆ. ಯಾವ ಹೊತ್ತಿನಲ್ಲಿ
ಎಲ್ಲಿ ಬರುತ್ತಾನೆ ಎನ್ನುವ ಸುಳಿವು ಕೂಡ ಇರುವುದಿಲ್ಲ. ಇತ್ತ ವಲ್ಲಾಚಿಯಾ ಕೈತಪ್ಪಿ ಹೋದಮೇಲೆ, ಯುರೋಪಿನ
ಕೆಲ ಆಡಳಿತಗಾರರು ವ್ಲಾಡ್ ಗೆ ಬೆಂಬಲನೀಡುವುದಿಲ್ಲ.
ಒಮ್ಮೆ 1476 ರಲ್ಲಿ, ಒಟ್ಟೋಮನ್ನರೊಂದಿಗೆ
ಯುದ್ಧ ನಡೆಯುತ್ತಿರುವಾಗ, ವ್ಲಾಡ್ III ನನ್ನು ಹೊಂಚು ಹಾಕಿ ತುರ್ಕಿಯ ಸೈನಿಕರು ಸೆರೆ ಹಿಡಿಯುತ್ತಾರೆ.
ಆದರೆ, ಜೀವಂತವಾಗಿಟ್ಟರೆ
ಮತ್ತೆ ತಮಗೆ ಆಪತ್ತು ತಪ್ಪಿದ್ದಲ್ಲ ಎಂದು ಅವನನ್ನು ಕೊಂದು ಹಾಕುತ್ತಾರೆ. ಅವನ ಶಿರಚ್ಛೇದ ಮಾಡಿ, ತಲೆಯನ್ನು ಕಾನ್ಸ್ಟಾಂಟಿನೋಪಲ್ನಲ್ಲಿದ್ದ ಸುಲ್ತಾನ್ ಮೆಹ್ಮದ್ II ಗೆ
ಕಳಿಸುತ್ತಾರೆ. ವ್ಲಾಡ್ ನ ತಲೆಯನ್ನು ಶೂಲಕ್ಕೇರಿಸಿ ನಗರದ ಮುಖ್ಯದ್ವಾರದಲ್ಲಿ ವಿಜಯದ ಸಂಕೇತವಾಗಿ
ಇಡಲಾಗುತ್ತದೆ. ಇಲ್ಲಿಗೆ ಡ್ರಾಕುಲ ವ್ಲಾಡ್ ನ ರಕ್ತ ಸಿಕ್ತ ಅಧ್ಯಾಯ ಕೊನೆಯಾಗುತ್ತದೆ.
ಮಸ್ಕತ್. ಒಮಾನ್ ರಾಷ್ಟ್ರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ