ಭಾನುವಾರ, ನವೆಂಬರ್ 5, 2023

ಭಕ್ತಿಪರವಶಗೊಳಿಸಿದ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೃತ್ಯರೂಪಕ

 ಕಲೆ ಮತ್ತು ಸಾಹಿತ್ಯಕ್ಕೆ ಅತಿ ಹೆಚ್ಚಿನ ಮನ್ನಣೆಯನ್ನು ನಮ್ಮ ಕನ್ನಡ ನಾಡು  ಹಿಂದಿನಿಂದಲೂ ನೀಡುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿಯ ಪ್ರೋತ್ಸಾಹ ಬೆಂಬಲ ಇಂದಿಗೂ ಮುಂದುವರೆದಿರುವುದು ಈ ನಾಡಿನ ವಿಶೇಷ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ, ಕಲಾ ಪೋಷಕರು ಮತ್ತು ಕಲಾಸಕ್ತರ ಸಂಖ್ಯೆಯೂ ದ್ವಿಗುಣಗೊಳ್ಳುತಿದೆ ಜತೆಗೆ ಶಾಸ್ತ್ರೀಯ ನೃತ್ಯ ಮತ್ತು ಸಂಗೀತವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿರುವುದು ಗಮನಾರ್ಹ. ಇದಕ್ಕೆ ಪೂರಕವೆಂಬಂತೆ, ಬೆಂಗಳೂರು, ಮೈಸೂರು ನಗರ ಸೇರಿದಂತೆ ರಾಜ್ಯದ ಒಂದಲ್ಲ ಒಂದು ಕಡೆ ಕಲೆ ಮತ್ತು ಸಾಹಿತ್ಯಕ್ಕೆ ಸಂಭಂಧಿಸಿದಂತೆ ಕಾರ್ಯಕ್ರಮಗಳು ನಡೆಯುತ್ತಿರುವುದನ್ನ ನಾವು ಕಾಣಬಹುದು.

        ಇತ್ತೀಚೆಗೆ ಬೆಂಗಳೂರಿನ ಜಯನಗರದ ಶಿವರಾತ್ರೀಶ್ವರ ಜೆ ಎಸ್ ಎಸ್ ಸಭಾಂಗಣದಲ್ಲಿ ನಡೆದ  ಶ್ರೀಮತಿ ಸುಮಾ ರಾಜೇಶ್ ರವರ  ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶಾಸ್ತ್ರೀಯ ನೃತ್ಯರೂಪಕವನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಒದಗಿ ಬಂದಿತ್ತು. ಪರಿಚಿತರ ಆಹ್ವಾನದ ಕರೆಗೆ ಓಗೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು.   ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ನೃತ್ಯ ರೂಪಕವನ್ನಾಗಿ ಸಂಯೋಜಿಸಿ, ಅದಕ್ಕೆ ಸೂಕ್ತವಾದ ಸಂಗೀತ ನೀಡಿ ಮತ್ತು ಸಾಹಿತ್ಯವನ್ನು ರಚಿಸಿ, ವೇದಿಕೆ ಮೇಲೆ ಪ್ರಸ್ತುತ ಪಡಿಸಿದ ರೀತಿ ಮಾತ್ರ ಅದ್ಭುತ ಮತ್ತು ಅನನ್ಯ. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ದೃಶ್ಯಕಾವ್ಯವನ್ನ ನೋಡಲು ಸಭಾಂಗಣವು ಕಿಕ್ಕಿರಿದು ತುಂಬಿತ್ತು. ಕಳೆದ ಬಾರಿ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿಯೂ ಇದೇ ರೀತಿ ಜನ ಕಿಕ್ಕಿರಿದು ಸೇರಿದ್ದರು. ಇದನ್ನೆಲ್ಲ ನೋಡಿದಾಗ ಕಲೆಗೆ ನಮ್ಮ ಕರುನಾಡಿನ ಜನ ನೀಡುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹ ಕಂಡು ಬಹಳ ಖುಷಿಯಾಗುತ್ತಿದೆ.

            ಈ ನೃತ್ಯ ರೂಪಕದಲ್ಲಿ ನೃತ್ಯಶಾಲೆಯ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿಭಿನ್ನ ಪಾತ್ರಧಾರಿಗಳಿದ್ದರು, ಇವರೆಲ್ಲರೂ ಪ್ರತಿಯೊಂದು ದೃಶ್ಯವನ್ನು ಪ್ರಸ್ತುತ ಪಡಿಸಿದ ರೀತಿ ಮಾತ್ರ ಶ್ಲಾಘನೀಯ. ಪಾತ್ರಧಾರಿಗಳು ತಾವು ಧರಿಸಿದ ವೇಷಭೂಷಣಗಳ ಜತೆಗೆ ಸನ್ನಿವೇಶಕ್ಕೆ ತಕ್ಕಂತೆ ಮುಖದ ಭಾವನೆಗಳನ್ನು ವ್ಯಕ್ತಪಡಿಸುತ್ತ ನೃತ್ಯ ಮಾಡುವುದು ಒಂದು ಸವಾಲಿನ ಕೆಲಸ. ಆದರೆ ನೃತ್ಯಶಾಲೆಯ ವಿಧ್ಯಾರ್ಥಿಗಳು ಅಚ್ಚುಕಟ್ಟಾಗಿ ತಮ್ಮ ಜವಬ್ದಾರಿಯನ್ನು ನಿಭಾಯಿಸಿ ರೂಪಕವನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಇವರ ಅಭಿನಯಕ್ಕೆ ಮನಸೋತ ಪ್ರೇಕ್ಷಕರು ಪ್ರತಿ ದೃಶ್ಯಕ್ಕೆ ಚಪ್ಪಾಳೆ ಯೊಡೆದು ವಿದ್ಯಾರ್ಥಿಗಳನ್ನ ಹುರಿದುಂಬಿಸುತಿದ್ದದು ಕಂಡುಬಂತು. ಜನರ ಚಪ್ಪಾಳೆ ಮತ್ತು ಮೆಚ್ಚುಗೆಯೇ ಕಲಾವಿದರಿಗೆ ಬಹುದೊಡ್ಡ ಪಾರಿತೋಷಕವೆನ್ನಬಹುದು. ಇಲ್ಲದೆ ಇದ್ದರೆ ಕಾರ್ಯಕ್ರಮ ನೀರಸ.

        ಪಾತ್ರಗಳಿಗೆ ಪಾತ್ರಧಾರಿಯ ಆಯ್ಕೆಯೂ ತುಂಬಾ ಚೆನ್ನಾಗಿಯೇ ನಡೆದಿತ್ತು.  ಶ್ರೀನಿವಾಸ, ಪದ್ಮಾವತಿ, ಈಶ್ವರ, ಪಾರ್ವತಿ, ಭೃಗು ಮಹರ್ಷಿ, ಆಕಾಶರಾಜ, ಧರಣಿದೇವಿ ಹೀಗೆ ಪ್ರತಿಯೊಬ್ಬ ಪಾತ್ರಧಾರಿಯೂ ತಮ್ಮ ಪಾತ್ರಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ ನ್ಯಾಯ ಒದಗಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಕೆಲೆವೆಡೆ ಚಿಕ್ಕ ಅಚಾತುರ್ಯಗಳು ನಡೆದವು ಆದರೂ, ಆ ಕಲಾವಿದರು ಅದನ್ನು ಸಂಭಾಳಿಸಿದ ರೀತಿ ಮಾತ್ರ ಅದ್ಭುತ.  ವಿದೂಷಿ ಶ್ರೀಮತಿ ಸುಮಾ ರಾಜೇಶ್ ಅವರು, ವಿಧ್ಯಾರ್ಥಿಗಳಿಗೆ ವೇದಿಕೆಯ ನಡಾವಳಿಗಳ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಿದ್ದಾರೆ ಎಂದೇ ಹೇಳಬಹುದು.

        ಈ ಸುಂದರವಾದ ನೃತ್ಯಕ್ಕೆ ಕೊಳಲು, ತಂಬೂರ, ತಬಲ, ವೀಣೆ ಇತ್ಯಾದಿ ವಾದ್ಯಗಳನ್ನು ಸುಮಧುರವಾಗಿ ನುಡಿಸಿ ನೋಡುಗರ ಕಿವಿಯನ್ನು ಇಂಪಾಗಿಸಿ ಒಟ್ಟಾರೆ ನೃತ್ಯರೂಪಕವನ್ನು ಮನಸೂರೆಗೊಳಿಸಿದ ವಾದ್ಯತಂಡ ವೀಕ್ಷರನ್ನು ಭಕ್ತಿಪರವಶರಾಗುವಂತೆ ಮಾಡಿತ್ತು.  ಹಾಗೆಯೇ ಈ ನೃತ್ಯಕ್ಕೆ ಪೂರಕವಾಗಿ ಸಾಥ್ ನೀಡಿದ್ದು ಬೆಳಕು ಮತ್ತು ಧ್ವನಿ ನೀಡಿದ ತಂತ್ರಜ್ನರು. ಅವರ ಕೈಚಳಕದಿಂದ ಪ್ರತಿ ದೃಶ್ಯಕ್ಕೂ ಬಣ್ಣ ಬಣ್ಣದ ಬೆಳಕನ್ನ ನೀಡಿ, ನೃತ್ಯ ರೂಪಕವನ್ನು ವರ್ಣರಂಜಿತವನ್ನಾಗಿ ಮಾಡಿದ ಕೀರ್ತಿ ತಂತ್ರಜ್ನರಿಗೆ ಸಲ್ಲುತ್ತದೆ. 

        ಕಾರ್ಯಕ್ರಮದ ಹೈಲೈಟ್ ಏನೇಂದರೆ ಶ್ರೀನಿವಾಸ ಕಲ್ಯಾಣದ ಕಟ್ಟ ಕಡೆಯ ದೃಶ್ಯಾವಳಿ, ಪಾತ್ರಧಾರಿಗಳೆಲ್ಲರೂ ವೇದಿಕೆಯ ಮೇಲೆ ಒಟ್ಟಾಗಿ ನಿಂತು ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸುವ ದೃಶ್ಯ ತುಂಬಾ ಸುಂದರವಾಗಿ ಮತ್ತು ಮನತಟ್ಟುವಂತೆ ಮೂಡಿಬಂತು. ಭಕ್ತಿಭಾವದಲ್ಲಿ ಮಿಂದೆದ್ದ ವೀಕ್ಷಕರು ಸತತವಾಗಿ ಚಪ್ಪಾಳೆ ತಟ್ಟುವುದರ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದಲ್ಲದೆ, ಬಹುತೇಕರು ಎದ್ದು ನಿಂತು ಗೌರವ ಸೂಚಿಸಿದ್ದು ವಿಶೇಷವಾಗಿತ್ತು. 

        ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ನಂತಹ ಕಲಾ ಶಾಲೆಗಳು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಅವರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದು  ಉತ್ತಮ ನೃತ್ಯಗಾರ್ತಿಯರನ್ನಾಗಿ ಮಾಡುತ್ತಿರುವ ಕೆಲಸ ಅಭಿನಂದನೀಯ. ಇದೇ ರೀತಿಯ ಕೆಲಸವನ್ನು ಶಾಸ್ತ್ರೀಯ ನೃತ್ಯ ಕಲಿಸುತ್ತಿರುವ ಎಲ್ಲಾ ನೃತ್ಯಶಾಲೆಗಳು ಮಾಡುತ್ತ ಬಂದರೆ, ಇನ್ನು ಹಲವಾರು ಶತಮಾನಗಳವರೆಗೆ ನಮ್ಮ ಶಾಸ್ತ್ರೀಯ ನೃತ್ಯ ಪರಂಪರೆ ಉಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


2 ಕಾಮೆಂಟ್‌ಗಳು:

Click below headings