ಈಜಿಪ್ಟ್ ದೇಶದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈಜಿಪ್ಟ್ ಎಂದೊಡನೆ ಅಲ್ಲಿನ ಪಿರಮಿಡ್ ಗಳು, ನೈಲ್ ನದಿ, ಪುರಾತನ ನಾಗರೀಕತೆ ಎಲ್ಲರಿಗೂ ನೆನಪಾಗುತ್ತದೆ. ಈಜಿಪ್ಟಿನ ನಾಗರೀಕತೆ ಮತ್ತು ಪುರಾತನ ಪಿರಮಿಡ್ ಗಳು ವಿಶ್ವವಿಖ್ಯಾತ. ಪ್ರಪಂಚದ ಮಹಾ ಅದ್ಭುತಗಳ ಪಟ್ಟಿಯಲ್ಲಿ ಈಜಿಪ್ಟ್‌ನ ಪಿರಮಿಡ್‌ಗಳೂ ಸೇರಿವೆ. ಸಾವಿರಾರು ವರ್ಷಗಳ ಹಿಂದೆ ಕಟ್ಟಿರುವ ದೈತ್ಯಗಾತ್ರದ ಪಿರಮಿಡ್ ಗಳನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರನ್ನು ದಿನನಿತ್ಯ ಭೇಟಿ ನೀಡುತಿದ್ದಾರೆ. ಇಲ್ಲಿನ ನೈಲ್ ನದಿ ಈ ದೇಶದ ಜೀವನದಿ. ಎಲ್ಲ ನಾಗರಿಕತೆಗಳಿಗೂ ಸಂಸ್ಕೃತಿಗಳಿಗೂ ನದಿಯೇ ಮೂಲ ಎನ್ನುವಂತೆ, ಅಂದಿನ ಈಜಿಪ್ಟಿನ ಪುರಾತನ ನಾಗರಿಕತೆ ಹುಟ್ಟಿದ್ದು ಈಜಿಪ್ಟಿನ ನೈಲ್ ನದಿ ಹರಿಯುವ ಇಕ್ಕೆಲಗಳಲ್ಲಿ. ಅಗಾಧವಾದ ಮರುಭೂಮಿಯ ಮಧ್ಯೆ ಜನವಸತಿ ಕೇಂದ್ರೀಕೃತವಾಗಿರುವುದು ಈ ನದಿಯ ಎರಡು ದಂಡೆಗಳ ಬದಿಯಲ್ಲಿ ಹಲವಾರು ಹಳ್ಳಿಗಳು, ಪಟ್ಟಣಗಳು ಜನವಸತಿ ಕೇಂದ್ರಗಳನ್ನು ಕಾಣಬಹುದು. ಮಿಕ್ಕಂತೆ ಕಣ್ಣು ಹಾಯಿಸಿದೆಡೆಯಲ್ಲೆಲ್ಲೂ ಮರುಭೂಮಿ.
ಕಣ್ಮರೆಯಾದ ಪ್ರಾಚೀನ ಈಜಿಪ್ಟಿನ ಜನಾಂಗ:-
ಕೇವಲ ಇನ್ನೂರೈವತ್ತು ವರ್ಷಗಳ ಹಿಂದೆ ಕಟ್ಟಲ್ಪಟ್ಟ ಅಮೇರಿಕ ದೇಶ ಇಂದು ಪ್ರಪಂಚದಲ್ಲಿ ದೊಡ್ಡಣ್ಣನೆಂದು ಹೆಸರುವಾಸಿ. ಆಧುನಿಕತೆ, ಆರ್ಥಿಕತೆ, ಮಿಲಿಟರಿ ಶಕ್ತಿ, ಇತ್ಯಾದಿಯಲ್ಲಿ ನಂಬರ್ ಒನ್ ದೇಶ ಎಂದೇ ಗುರುತಿಸಲಾಗುತ್ತಿದೆ. ವಿಷಯ ಹೀಗಿರುವಾಗ ಏಳು ಸಾವಿರ ವರ್ಷಗಳ ಹಿಂದೆಯೇ ಆಧುನಿಕ ನಾಗರೀಕತೆಯನ್ನು ರೂಡಿಸಿಕೊಂಡಿದ್ದ ಈಜಿಪ್ಟ್ ದೇಶ ಹೇಗಿರಬಹುದು ಎನ್ನುವ ಕಲ್ಪನೆ ನಮ್ಮ ಮನದಲ್ಲಿ ಮೂಡಬಹುದು. ಆದರೆ ವಾಸ್ತವ ಸ್ಥಿತಿ ಬೇರೆಯದೇ ಇದೆ. ಅಂದಿನ ಸುವರ್ಣಯುಗ, ಗತ ವೈಭವ ಕೇವಲ ಇಂದು ಪಳೆಯುಳಿಕೆಗಳಾಗಿ ಉಳಿದಿದೆ.
ಇತ್ತೀಚಿನ ಕೆಲ ವರ್ಷಗಳ ಹಿಂದೆ ಈಜಿಪ್ಟ್ ಪ್ರಜೆಗಳ ಕುರಿತು ಹಲವಾರು DNA ವರದಿಗಳನ್ನು ಬಿಡುಗಡೆಗೊಳಿಸಿದರು. ಆ ವರದಿಗಳ ಪ್ರಕಾರ ಮಮ್ಮಿಗಳು ಸೇರಿದಂತೆ, ಅಂದಿನ ಜನರು ಮತ್ತು ಇಂದಿನ ಜನರ ನಡುವೆ ಹೋಲಿಕೆಯೇ ಇಲ್ಲವಂತೆ, ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಮೂಲನಿವಾಸಿಗಳು ಕಾಲಕ್ರಮೇಣ ಕಣ್ಮರೆಯಾಗಿದ್ದಾರೆ. ನಮ್ಮ ಹರಪ್ಪ ಮೆಹೆಂಜದಾರೋ ನಾಗರೀಕತೆಯಂತೆ, ಅಂದಿನ ಜನರು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋದಂತೆ, ಇಲ್ಲಿನ ಮೂಲನಿವಾಸಿಗಳು ಬೇರೆಡೆ ವಲಸೆ ಹೋಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಥವಾ ಆ ಜನಾಂಗ ನಶಿಸಿ ಹೋಗಿದೆಯೋ ಗೊತ್ತಿಲ್ಲ. ಇಂದಿನ ಈಜಿಪ್ಟಿನ ದೇಶದಲ್ಲಿರುವ ಬಹುತೇಕರು ಇತರೆ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದವರು. ಪ್ರಸ್ತುತ ಈಜಿಪ್ಟ್ ಜನರ DNA ಮಧ್ಯಪ್ರಾಚ್ಯ ರಾಷ್ಟ್ರಗಳ ಜನರ ಜನರ ಜತೆ ಹೆಚ್ಚು ಹೋಲಿಕೆಯಾಗುತ್ತದೆಯಂತೆ. ಇನ್ನೂ ಒಂದು ವಿಷಯ ಏನೆಂದರೆ, ಈಜಿಪ್ಟ್ ದೇಶ ಆಫ್ರಿಕಾ ಖಂಡದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಆಫ್ರಿಕಾ ಖಂಡದ ಜನಾಂಗಕ್ಕೂ ಈಗಿರುವ ಈಜಿಪ್ಟ್ ದೇಶದ ಜನರಿಗೂ ಹೋಲಿಕೆಯೂ ಬಹಳ ಕಡಿಮೆ
ಒಂದು ಕಾಲದಲ್ಲಿ ಶ್ರೀಮಂತವಾಗಿ ಮೆರೆದಿದ್ದ ಈಜಿಪ್ಟ್ ರಾಷ್ಟ್ರ, ಈಗ ಬಡ ರಾಷ್ಟ್ರವಾಗಿದೆ. ವರದಿಗಳ ಪ್ರಕಾರ, ಈಜಿಪ್ಟ್ ದೇಶದ 32% ಜನರು ಬಡತನದಲ್ಲಿದ್ದಾರೆ. ದೇಶದ ಆರ್ಥಿಕತೆ ಕುಸಿದಿದ್ದು, ವಿಶ್ವಬ್ಯಾಂಕ್ ಮತ್ತು ಇತರೆ ಅರಬ್ ದೇಶಗಳ ನೆರವಿನಿಂದ ದೇಶವು ಮುನ್ನೆಡೆಯುತ್ತಿದೆ. ಪ್ರವಾಸೋದ್ಯಮದಿಂದ ಅಲ್ಪ ಮಟ್ಟಿನ ಆದಾಯವಿದೆ. ಲಕ್ಷಾಂತರ ಜನರು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ವಿದ್ಯಾವಂತ ಜನ ಉದ್ಯೋಗ ಅರಸಿ ಗಲ್ಫ್ ಸೇರಿದಂತೆ ಇತರೆ ರಾಷ್ಟ್ರಗಳಿಗೆ ವಲಸೆ ಹೋಗುತಿದ್ದಾರೆ. ಕೃಷಿಯು ಬಹುತೇಕ ನೈಲ್ ನದಿಯ ಮೇಲೆ ಅವಲಂಬಿತವಾಗಿರುವುದರಿಂದ, ಆಹಾರ ಪದಾರ್ಥಗಳನ್ನ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಸಾವಿರಾರು ವರ್ಷಗಳ ಹಿಂದೆ ಶ್ರೀಮಂತ ರಾಷ್ಟ್ರವಾಗಿದ್ದ ಈಜಿಪ್ಟ್ ಹೀಗೇಕಾಯ್ತು ಎನ್ನುವುದಕ್ಕೆ ನೂರಾರು ಕಾರಣಗಳು ಸಿಗಬಹುದು.
ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ನಾಗರೀಕತೆ:-
ಅಪರಿಮಿತ ಉತ್ಸಾಹದಿಂದ ಈಜಿಪ್ಟ್ ಪ್ರವಾಸಕ್ಕೆ ಹೋದ ಜನರು, ಮರಳಿ ಬರುವಾಗ ಬೇಸರದಿಂದಲೇ ಮರಳಿ ಬರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರವಾಸಿ ಗೈಡ್ ಗಳು ಎಂದು ಹಲವಾರು ಜನ ಯಾಮಾರಿಸುತ್ತಾರೆ. ಕ್ಯಾಮೆಲ್ ರೈಡ್ ಬೇಕಾ? ಸಿಗರೇಟ್ ಬೇಕಾ? ಗಾಡಿ ಬೇಕಾ? ಕುದರೆ ಸವಾರಿ ಬೇಕಾ? ಎಂದು ಹಲವರು ನಮ್ಮ ಹಿಂದೆ ಬೀಳುವುದು ಸಾಮಾನ್ಯ, ಅವರೆಲ್ಲರನ್ನೂ ನಿರ್ಲಕ್ಷಿಸಿ ಪ್ರವಾಸಿ ಸ್ಥಳಗಳಿಗೆ ಹೋದರೆ ಅಲ್ಲಿನ ಅವ್ಯವಸ್ಥತೆ ಬೇಸರವನ್ನುಂಟು ಮಾಡುತ್ತದೆ. ಕೆಲವರು ಒಂದಕ್ಕೆ ಎರಡರಷ್ಟು ಹಣ ಪಡೆಯುವುದು ಮಾಮೂಲಿಯಾಗಿದೆ. ಏನೇ ಸಹಾಯ ಬೇಕಿದ್ದರೂ, ಉಚಿತವಾಗಿ ದೊರೆಯುವುದು ಕಡಿಮೆ. ಎಲ್ಲದಕ್ಕೂ ಭಕ್ಷೀಸು ಅಥವ ಟಿಪ್ಸ್ ಕೇಳುವುದು ಸಾಮಾನ್ಯ ಸಂಗತಿ. ಇನ್ನು ಸ್ವಚ್ಚತೆ ವಿಷಯದಲ್ಲಂತೂ ಹೇಳುವುದೇ ಬೇಡ. ಎಲ್ಲಿ ನೋಡಿದರೂ ಕಸದ ರಾಶಿ. ಅದು ಪಿರಮಿಡ್ ಗಳಿರಲಿ, ನೈಲ್ ನದಿಯ ಅಕ್ಕಪಕ್ಕದಲ್ಲಾಗಲಿ, ಲಕ್ಸರ್ ನ ದೇವಾಲಯ ಸುತ್ತಮುತ್ತ, ಎಲ್ಲೇ ಆದರು ಕಸ ಕಡಿಮೆ ಏನಿಲ್ಲ. ಕೈರೋ ನಗರ ಜನಸಾಗರ ದಿಂದ ತುಂಬಿ ಹೋಗಿದೆ, ಇನ್ನು ಐವತ್ತು ವರ್ಷಗಳಲ್ಲಿ ಆ ನಗರದ ಜನಸಂಖ್ಯೆ ದುಪ್ಪಟ್ಟಾಗಲಿದೆ. ಮೈಲುಗಟ್ಟಲೆ ಇರುವ ಅಂದವಿಲ್ಲದ ಅಪಾರ್ಟ್ ಮೆಂಟ್ ಗಳು ನೀರಸವೆನಿಸಿ ಬಿಡುತ್ತವೆ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ನಮ್ಮ ಪ್ರವಾಸವನ್ನು ದುಸ್ತರಗೊಳಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ಆಧುನಿಕ ನಾಗರೀಕತೆ ಹೊಂದಿದ್ದ ಈಜಿಪ್ಟ್ ದೇಶಾನ ಇದು ಎಂದೆನಿಸುತ್ತದೆ. ಡಾಕ್ಟರ್ ಇಂಜಿನಿಯರುಗಳು, ಶಿಕ್ಷಕರು, ಪ್ರೊಫೆಸರ್ ಗಳು ಮುಂತಾದ ಸುಶಿಕ್ಷಿತ ಜನರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಇಂದಿನ ಈಜಿಪ್ಟ್ ನ ಸ್ಥಿತಿಗೆ ಇದು ಒಂದು ಕಾರಣ ಸಹ ಎನ್ನಲಾಗುತ್ತಿದೆ. ಮುಂದೊದು ದಿನ ಬದಲಾಗುವ ರಾಜಕೀಯ ಕಾಲಘಟ್ಟದಲ್ಲಿ ಈಜಿಪ್ಟ್ ತನ್ನ ಗತ ವೈಭವ ಪಡೆಯಬಹುದು ಎನ್ನುವ ಆಶಾಭಾವ ಇಲ್ಲಿಗೆ ಭೇಟಿ ನೀಡಿ ಹಿಂತಿರುಗುವ ಪ್ರವಾಸಿಗರಲ್ಲಿದೆ
ಪ್ರಮುಖ ಪ್ರವಾಸಿ ತಾಣಗಳು:-
ಇಲ್ಲಿರುವ ಹಲವಾರು ಪ್ರವಾಸಿ ತಾಣಗಳನ್ನು ನೋಡಲು, ಪ್ರತಿವರ್ಷ ಲಕ್ಷಾಂತರ ಜನರು ಈಜಿಪ್ಟ್ ಪ್ರವಾಸ ಕೈಗೊಳ್ಳುತ್ತಾರೆ. ನೋಡುವುದಕ್ಕೆ ಅಸಂಖ್ಯಾತ ತಾಣಗಳಿದ್ದು, ಭರಪೂರ ಮಾಹಿತಿ ಇಲ್ಲಿ ದೊರೆಯುತ್ತದೆ. ಇತಿಹಾಸ ಓದುವ ವಿಧ್ಯಾರ್ಥಿಗಳಿಗೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಜನರಿಗೆ ಈಜಿಪ್ಟ್ ಪ್ರವಾಸ ಒಂದು ಅದ್ಭುತವಾದ ಅನುಭವವನ್ನೇ ನೀಡುತ್ತದೆ. ಈಜಿಪ್ಟ್ ದೇಶದಲ್ಲಿ ನೋಡುವಂತಹ ಸ್ಥಳಗಳು ಬಹಳಷ್ಟಿವೆ. ಸಾವಿರಾರು ವರ್ಷಗಳ ಹಿಂದೆಯೇ ಏನೆಲ್ಲಾ ತಂತ್ರಜ್ನಾನವನ್ನು ಅಂದಿನ ಕಾಲದಲ್ಲಿ ಅವರು ಉಪಯೋಗಿಸಿದ್ದರು ಅಂತ ಆಶ್ಚರ್ಯವಾಗುತ್ತಿದೆ. ಇವರ ಆರಾಧ್ಯ ದೇವರು "ಸೂರ್ಯ". ಪೂರ್ವ ದಿಕ್ಕು ಸೂರ್ಯ ಉದಯಿಸುವ ದಿಕ್ಕು ಆದ್ದರಿಂದ ಈಜಿಪ್ಟ್ ದೇವತೆಗಳ ಎಲ್ಲ ದೇವಾಲಯಗಳು ನೈಲ್ ನದಿಯ ಪೂರ್ವ ತಟದಲ್ಲಿವೆ. ಸೂರ್ಯ ಮುಳುಗುವುದು ಪಶ್ಚಿಮ ದಿಕ್ಕಿನಲ್ಲಿ, ಹೀಗಾಗಿ ಸತ್ತವರ ಗೋರಿಗಳಿರುವ ಈಜಿಪ್ಟಿನ ಎಲ್ಲ ಪಿರಮಿಡ್‌ಗಳು ನೈಲ್ ನದಿಯ ಪಶ್ಚಿಮ ಭಾಗದಲ್ಲಿವೆ. ಸೂರ್ಯ ಉದಯಿಸುವಾಗ ಬೆಳಕು, ಹೊಸ ಜೀವನ ಮತ್ತು ಸೂರ್ಯ ಮುಳುಗುವಾಗ ಕತ್ತಲು ಅಥವಾ ಮರಣ ಎಂಬರ್ಥದಲ್ಲಿ ಪಿರಮಿಡ್ ಗಳನ್ನು ಮತ್ತು ದೇವಾಲಯಗಳನ್ನು ನಿರ್ಮಿಸಲಾಗಿದೆ
ಈಜಿಪ್ಟ್ ಪ್ರವಾಸಿ ತಾಣಗಳ ಕುರಿತು ಕಿರು ಚಿತ್ರಣ ಇಲ್ಲಿ ನೀಡಲಾಗಿದೆ.
1. ಗಿಜಾದ ಪಿರಮಿಡ್‌ಗಳು (Pyramids of Giza), :
2. ಲಕ್ಸರ್ ದೇವಾಲಯಗಳು ಮತ್ತು ಗೋರಿಗಳು (Luxor's Temples & Tombs),
ಇಂದಿನ ಲಕ್ಸರ್ ನಗರವನ್ನು ಪುರಾತನ ಥೀಬ್ಸ್ ನಗರ ಎಂದು ಕರೆಯುತ್ತಾರೆ. ಇದು ಕೈರೊದಿಂದ ಸುಮಾರು 650 ಕಿ.ಮೀ. ದೂರದಲ್ಲಿದೆ. ಈ ನಗರವು ನೈಲ್ ನದಿಯ ಪೂರ್ವ ದಂಡೆಯಲ್ಲಿದೆ.
ಲಕ್ಸರ್ ಪಟ್ಟಣ ಕೈರೋಗಿಂತ ತುಂಬ ಚಿಕ್ಕ ನಗರ. ಪ್ರಾಚೀನ ಕಾಲದಲ್ಲಿ ಈಜಿಪ್ಟ್‌ನ ರಾಜಧಾನಿಯಾಗಿತ್ತಂತೆ. ಈ ಪ್ರದೇಶದಲ್ಲಿ ಪುರಾತನನ ಈಜಿಪ್ಟ್ ದೇವಾಲಯಗಳ ಸಂಕೀರ್ಣವಿದೆ. ಫೆರೋಗಳು ಬದುಕಿದ್ದಾಗಲೇ ಗೋರಿಗಳನ್ನ ಇಲ್ಲಿ ನಿರ್ಮಿಸುತಿದ್ದರಂತೆ, ಅಂದರೆ ಜೀವಂತ ಸಮಾಧಿಯಾಗಲು ಅಲ್ಲ. ಮುಂದೊಂದು ದಿನ ಸಾವು ಬಂದೇ ಬರುತ್ತದೆ. ಸತ್ತ ನಂತರ ಅವರ ಹೆಸರು ಮತ್ತು ಘನತೆ ಚಿರಸ್ಥಾಯಿಯಾಗಿಯಿರಲು ಭವ್ಯವಾದ ಮಂದಿರ ನಿರ್ಮಾಣ ಮಾಡುತಿದ್ದರು. ಈ ದೇವಾಲಯಗಳಿಗೆ ‘ಅಂತ್ಯಸಂಸ್ಕಾರದ ದೇವಾಲಯ’(ಫ್ಯುನರರಿ ಟೆಂಪಲ್) ಎಂದೂ ಕರೆಯುತ್ತಾರೆ. ಮೂರು ಹಂತಗಳಲ್ಲಿ ಹಟ್‌ಶೆಪ್‌ಸುಟ್ ರಾಣಿ ಕಟ್ಟಿಸಿದ ಈ ಮಂದಿರ ಆ ಕಾಲದಲ್ಲಿ ಇಡೀ ಈಜಿಪ್ಟ್‌ನಲ್ಲೇ ಅತ್ಯಂತ ಭವ್ಯ ಮತ್ತು ಸುಂದರ ದೇವಾಲಯವಾಗಿತ್ತು. ಈಜಿಪ್ಟಿನಲ್ಲಿ ಕೆಲವು ರಾಣಿಯರು ಹಟ್‌ಶೆಪ್‌ಸುಟ್‌ಗಿಂತ ಮೊದಲು ಮಹಿಳಾ ಫೆರೋ ಆಗಿ ರಾಜ್ಯಭಾರ ಮಾಡಿದ್ದರೂ ಸಹ 21 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಹಟ್‌ಶೆಪ್‌ಸುಟ್ ಎಲ್ಲರಿಗಿಂತ ಹೆಚ್ಚು ಪ್ರಖ್ಯಾತ. ವಿಭಿನ್ನ ಫೆರೋಗಳು ಹಂತ ಹಂತವಾಗಿ ಕಟ್ಟಿಸಿದ ಲಕ್ಸರ್ ಮಂದಿರ, ಪುರಾತನ ಈಜಿಪ್ಟ್‌ನ ಅತಿ ದೊಡ್ಡ ದೇವಾಲಯವಾಗಿದೆ. ಸುಮಾರು ಇಪ್ಪತ್ತು ಅಡಿ ಉದ್ದದ 61 ಕಂಬಗಳ ಮೇಲೆ ಹಟ್‌ಶೆಪ್‌ಸುಟ್ ರಾಣಿಯ ಅಡಳಿತಾವಧಿಯ ಸಾಧನೆಗಳು, ಹಲವು ದೇವರ ಕತೆಗಳು ಹಾಗೂ ಧರ್ಮಾಚರಣೆಗಳ ಕುರಿತು ವಿವರಗಳನ್ನು ಕೆತ್ತಲಾಗಿದೆ. ಈ ಲಕ್ಸರ್ ನ ನೈಲ್ ನದಿಯ ಪೂರ್ವ ಮತ್ತು ಪಶ್ಚಿಮ ದಂಡೆಯಲ್ಲಿ ಹಲವಾರು ದೇವಾಲಯಗಳಿವೆ. ಈಜಿಪ್ಷಿಯನ್ನರ ಪ್ರಮುಖ ವಾಸ್ತು ಶಿಲ್ಪ ಹೊಂದಿರುವ ಕಾರ್ನಕ್ ದೇವಾಲಯ ಇದೇ ದಂಡೆಯ ಮೇಲಿದೆ. ಹತ್ತಿರದಲ್ಲಿ, ಲಕ್ಸರ್ ಮ್ಯೂಸಿಯಂ, ಕಾರ್ನಾಕ್ ಟೆಂಪಲ್, ಕೋನ್ಸು ಟೆಂಪಲ್, ಬಿಸಿಗಾಳಿ ಬೆಲೂನ್ ಗಳು ಹಾರಾಡುವ ಸ್ಥಳ, ‘ವ್ಯಾಲೀ ಆಫ್ ಕಿಂಗ್ಸ್ ಏಂಡ್ ಕ್ವೀನ್ಸ್’ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಕಾಣಬಹುದು.
3. ನೈಲ್ ಕ್ರೂಸಿಂಗ್ (Cruising the Nile):-
ಈಜಿಪ್ಟ್ ನ ಜನವಸತಿ ನೈಲ್ ನದಿಗುಂಟ ಹರಡಿಕೊಂಡಿದೆ. ಮರುಭೂಮಿಯ ಮಧ್ಯದಲ್ಲಿ ನೈಲ್ ನದಿ ಮತ್ತು ಎರಡೂ ಕಡೆಯ ದಂಡೆಯ ಮೇಲೆ ಹಸಿರು ಹೊದ್ದ ಹೊಲ ಗದ್ದೆಗಳು ಅಲ್ಲಲ್ಲಿ ಪ್ರಾಚೀನ ದೇವಾಲಯಗಳು ಮತ್ತು ಗೋರಿಗಳು, ಇವೆಲ್ಲವನ್ನು ನದಿಯಲ್ಲಿ ಬೋಟ್ ರೈಡ್ ಮಾಡುತ್ತ ಈ ದೃಶ್ಯಗಳನ್ನ ಕಣ್ ತುಂಬಿಸಕೊಳ್ಳಬಹುದು. ನೈಲ್ ಕ್ರೂಸ್‌ನಲ್ಲಿ ಎರಡು ಜನಪ್ರಿಯ ದೃಶ್ಯಗಳೆಂದರೆ ಕೋಮ್ ಒಂಬೊ ದೇವಾಲಯ ಮತ್ತು ಎಡ್ಫುನಲ್ಲಿರುವ ಹೋರಸ್ ದೇವಾಲಯ, ಅಲ್ಲಿ ಎಲ್ಲಾ ದೊಡ್ಡ ಕ್ರೂಸ್ ದೋಣಿಗಳು ನಿಲ್ಲುತ್ತವೆ.
4. ಆಸ್ವಾನ್(Aswan), :-
ಅತ್ಯಂತ ಪ್ರಶಾಂತವಾದ ಪಟ್ಟಣ ಎಂದು ಕರೆಯುತ್ತಾರೆ, ಅಂಕು ಡೊಂಕಾಗಿ ಹರಿಯುವ ನೈಲ್ ನದಿಯ ಸುತ್ತಲೂ ಈ ನಗರ ಹರಡಿಕೊಂಡಿದೆ. ಇಲ್ಲಿ ಚಿಕ್ಕ ಚಿಕ್ಕ ದ್ವೀಪಗಳು ಇವೆ. ಇವುಗಳನ್ನು ಸಂಪರ್ಕಿಸಲು ಬೋಟ್ ಮುಖಾಂತರವೇ ಹೋಗಬೇಕು. ಇಲ್ಲಿ ಹಲವಾರು ಚಟುವಟಿಕೆಗಳಿಗೆ ಪ್ರಸಿದ್ದ, ರಿವರ್ ಬೋಟಿಂಗ್, ಒಂಟೆ ಸವಾರಿ, ಇಲ್ಲಿನ ಹಳ್ಳಿಗಳಲ್ಲಿ ಒಂದು ಸುತ್ತು ಹಾಕಿ ಇಲ್ಲಿನ ಜನಜೀವನದ ಕುರಿತು ತಿಳಿದುಕೊಳ್ಳಬಹುದು. ಮರುಭೂಮಿಯ ಜತೆಗೆ ನದಿಜೀವನವನ್ನು ಈ ಕಾಣಬಹುದು.ಇಲ್ಲಿಯೂ ಸಹ ಹಲವಾರು ಪ್ರಾಚೀನ ದೇವಾಲಯಗಳಿವೆ. ನದಿಯ ದಂಡೆಯಲ್ಲಿನ ಖರ್ಜೂರದ ಮರಗಳು, ಮರುಭೂಮಿಯ ಮರಳು ರಾಶಿ ಇವೆಲ್ಲದರ ಜತೆಗೆ ಸುರ್ಯೊದಯ ಮತ್ತು ಸೂರ್ಯಾಸ್ತ ದ ವಿಹಂಗಮ ನೋಟವನ್ನು ಸವಿಯಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
5. ಅಬು ಸಿಂಬೆಲ್ (Abu Simbel):-
ಇದೊಂದು ಪ್ರಮುಖ ಪ್ರವಾಸಿ ತಾಣವಾಗಿದ್ದು. ಕೈರೋ ದಿಂದ 1200 ಕಿ.ಮಿ. ದೂರದಲ್ಲಿ ಈ ನಗರವಿದೆ. ಲಕ್ಸರ್ ಮತ್ತು ಆಸ್ವಾನ್ ನ ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ಇಲ್ಲಿಗೆ ಭೇಟಿ ನೀಡಬಹುದು. ಇದು ರಾಮ್‌ಸೆಸ್ II ರ ಮಹಾನ್ ದೇವಾಲಯವಾಗಿದ್ದು, ಇದನ್ನು ಕ್ರಿಸ್ತಪೂರ್ವ 1265 ರಲ್ಲಿ ನಿರ್ಮಿಸಲಾಗಿದೆ, ಆಲಯದ ಹೊರಭಾಗದಲ್ಲಿ ಬೃಹದಾಕಾರದ ಪ್ರತಿಮೆಗಳಿಮ್ದ ಅಲಂಕರಿಸಲ್ಪಟ್ಟಿದೆ ಮತ್ತು ಒಳಭಾಗದ ಗೋಡೆಯು ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ.
ಆಸ್ವಾನ್ ಅಣೆಕಟ್ಟಿನ ಹಿನ್ನೀರಿನಲ್ಲಿ ಈ ಪ್ರದೇಶ ಮುಳುಗಿ ಹೋಗುತಿತ್ತು, ಇದನ್ನು ಮನಗಂಡ ಯುನೆಸ್ಕೋ, ಮೂರು ಸಾವಿರ ವರ್ಷದಷ್ಟು ಹಳೆಯದಾದ ಈ ಸಂಕೀರ್ಣ ಹಾಳಾಗುವುದನ್ನು ಸಂರಕ್ಷಿಸಲು 1968 ರಲ್ಲಿ ಈ ದೇವಾಲಯವನ್ನು ಸ್ಥಳಾಂತರಿಸಲಾಯಿತು. ಆ ಸಮಯದಲ್ಲಿ ಇದಕ್ಕೆ ತಗುಲಿದ ವೆಚ್ಚ ಅಂದಾಜು US$80 million. ಇದರ ಅರ್ಧದಷ್ಟು ಹಣವನ್ನು ಸುಮಾರು 50 ಕ್ಕೂ ಹೆಚ್ಚು ದೇಶಗಳು ದೇಣಿಗೆ ನೀಡಿದ್ದವು.
6. ಸಕ್ಕಾರಾ (Saqqara):-
ಕೈರೋ ನಗರದಿಂದ 30 ಕಿ.ಮಿ. ದೂರದಲ್ಲಿ ಈ ನಗರವಿದೆ. ಇಲ್ಲಿ ಪುರಾತನವಾದ ಪಿರಮಿಡ್ ಗಳನ್ನ ನೋಡಬಹುದು. ಗಿಜಾದಲ್ಲಿನ ಪಿರಮಿಡ್ ಗಳು ಕಟ್ಟುವ ಮುಂಚಿನ ವಿನ್ಯಾಸವನ್ನು ಇಲ್ಲಿ ಕಾಣಬಹುದು, ಬಹುಶಃ ಪಿರಮಿಡ್ ಗಳನ್ನು ರಚಿಸಲು ಪ್ರಾರಂಭಿಸಿದ ಸಮಯದಲ್ಲಿ, ಈ ಆಕಾರದಲ್ಲಿ ವಿನ್ಯಾಸ ಮಾಡಿ ಕಟ್ಟಲಾಗಿದೆ, ಕಾಲಕ್ರಮೇಣ ಅನುಭವ ಮತ್ತು ಕೌಶಲ್ಯತೆ ಕರಗತವಾದ ನಂತರ ಗಿಜಾದಲ್ಲಿ ಉನ್ನತಮಟ್ಟದ ಪಿರಮಿಡ್ ಗಳು ರಚನೆಯಾಗಿರಬಹುದು ಎನ್ನಲಾಗಿದೆ.
7. ಈಜಿಪ್ಟಿನ ವಸ್ತುಸಂಗ್ರಹಾಲಯ(Egyptian Museum):-
ಪ್ರಾಚ್ಯವಸ್ತು ಸಂಶೋಧನೆ ಮತ್ತು ಇತಿಹಾಸದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ನೋಡಲೇ ಬೇಕಾದ ಮ್ಯೂಸಿಯಂ ಇದು. ಪ್ರಪಂಚದ ಅದ್ಭುತಗಳ ಒಂದು ವಸ್ತುಸಂಗ್ರಹಾಲಯ ವೆಂದೇ ಇದನ್ನು ಪರಿಗಣಿಸಲಾಗುತ್ತದೆ. ಈಜಿಪ್ಟ್ ಅನ್ನು ಆಳಿದ ಹಲವು ರಾಜಮನೆತನಗಳ ವಿವರ, ಅವರು ಉಪಯೋಗಿಸಿದ ವಸ್ತುಗಳು, ಫೆರೋಗಳ ಕಾಲದ ಅತ್ಯಮೂಲ್ಯವಸ್ತುಗಳು, ಗೋರಿಗಳನ್ನು ಉತ್ಖನನ ಮಾಡಿದಾಗ, ಮಮ್ಮಿಗಳು ಸೇರಿದಂತೆ ಅವುಗಳ ಜತೆ ದೊರೆತ ಹಲವಾರು ವಸ್ತುಗಳು ಇಲ್ಲಿ ಸಂಗ್ರಹಿಸಲ್ಪಟ್ಟಿವೆ.
8. ವೈಟ್ ಮರುಭೂಮಿ (White Desert Natioanl Park):-
ಈ ಪ್ರದೇಶ ಕೈರೋ ನಗರದಿಂದ 425 ಕಿ.ಮಿ. ದೂರದಲ್ಲಿದೆ. ಮರಳಿನ ಮಧ್ಯೆ ದೊಡ್ಡದಾದ ಮಂಜುಗಡ್ಡೆಗಳ ರೀತಿಯಲ್ಲಿ ಬಿಳಿ ಬಣ್ಣದ ಚಿತ್ರವಿಚಿತ್ರ ಕೆತ್ತನೆಯ ಸುಣ್ಣದ ಕಲ್ಲಿನಲ್ಲಿ ಪ್ರಕೃತಿನಿರ್ಮಿತ ಈ ಆಕೃತಿಗಳು ಪ್ರವಾಸಿಗರ ಕಣ್ ಮನಸೆಳೆಯುತ್ತವೆ. ಲಕ್ಷಾಂತರವರ್ಷಗಳ ಹಿಂದೆ ಈ ಪ್ರದೇಶ ರೂಪುಗೊಂಡಿದೆ ಎಂದು ಭೂವಿಜ್ನಾನಿಗಳು ಹೇಳುತ್ತಾರೆ.
9. ಅಲೆಕ್ಸಾಂಡ್ರಿಯಾ (Alexandria):-
ಈಜಿಪ್ಟಿನ ಎರಡನೇ ಅತಿದೊಡ್ಡ ಪಟ್ಟಣ ಇದಾಗಿದ್ದು, ಕೈರೋ ದಿಂದ 240 ಕಿ.ಮಿ.ದೂರದಲ್ಲಿದೆ. ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ನಿರ್ಮಿಸಿದ ನಗರವಿದು. ರಾಣಿ ಕ್ಲಿಯೋಪಾತ್ರಳು ಸಹ ಹುಟ್ಟಿದ್ದು ಇದೇ ನಗರದಲ್ಲಿ. ಪುರಾತನನಗರವಾದ್ದರಿಂದ ಇಲ್ಲಿ ಐತಿಹಾಸಿಕ ಸ್ಥಳಗಳೇನು ಕಮ್ಮಿಯಿಲ್ಲ. ನಗರವು ಬೆಳೆದು ದೊಡ್ಡದಾಗಿರುವುದರಿಂದ ಬಹುಮುಖ್ಯ ಪ್ರಾಚೀನ ಸಂಗತಿಗಳು ಈ ನಗರದಲ್ಲಿ ಹುದುಗಿಹೋಗಿವೆ. ಸಮುದ್ರದಾಳದಲ್ಲಿ ನಡೆಯುತ್ತಿರುವ ಉತ್ಖನನದಿಂದ ಹಲವು ಪುರಾತನ ವಸ್ತುಗಳು ಆಗಾಗ್ಗೆ ದೊರೆಯುತ್ತಿರುತ್ತವೆ. ಈಜಿಪ್ಟಿನ ಉತ್ತರಭಾಗದಲ್ಲಿರುವ ಮೆಡಿಟೇರಿಯನ್ ಸಮುದ್ರದ ದಂಡೆಯಲ್ಲಿ ಈ ನಗರವಿದ್ದು, ಬೇಸಿಗೆಯಲ್ಲಿ ಸಮುದ್ರದ ಕಡೆಯಿಂದ ಬರುವ ತಂಪಾದಗಾಳಿಯನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಧಾವಿಸುತ್ತಾರೆ. ಪ್ರಪಂಚದ ಅತಿ ಪ್ರಸಿದ್ದ ಗ್ರಂಥಾಲಯ ಈ ನಗರದಲ್ಲಿದೆ. ಇತಿಹಾಸ ಓದುತ್ತಿರುವ ವಿದ್ಯಾರ್ಥಿಗಳಿಗೆ ಭರಪೂರ ಮಾಹಿತಿ ಇಲ್ಲಿ ಲಭಿಸುತ್ತದೆ. ಈ ನಗರವು ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಗ್ರೀಕ್ ಸಾಮ್ರಾಜ್ಯ, ರೋಮನ್ ಆಡಳಿತ, ಒಟ್ಟೋಮನ್ ಆಳ್ವಿಕೆ, ಇಸ್ಲಾಂ ಧರ್ಮ ಆಗಮನ ಹೀಗೆ ಆಯಾ ಕಾಲಘಟ್ಟದಲ್ಲಿ ಪ್ರಮುಖ ಸಂಗತಿಗಳು ಇಲ್ಲಿ ಘಟಿಸಿವೆ.
10. ಅಬಿಡೋಸ್ ದೇವಾಲಯ, (Abydos Temple) :-
ಇದು ಒಸಿರಿಸ್ ನ ದೇವಾಲಯ. ಲಕ್ಸರ್ ಪಟ್ಟಣ ದಿಂದ ನೂರೈವತ್ತು ಕಿ.ಮಿ.ದೂರದಲ್ಲಿ ಈ ದೇವಾಲಯವಿದೆ. ಕ್ರಿ.ಪೂ 13ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅಂದಿನ ಫೆರೋ ಒಂದನೇ ಸೆಟಿ (Seti-1) ಇದನ್ನು ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಕಲಾತ್ಮಕ ಕೆತ್ತನೆಗಳಿವೆ. ಇಲ್ಲಿನ ಗೋಡೆಗಳ ಮೇಲೆ ಅಂದು ಆಳಿದ ರಾಜರುಗಳ ಹೆಸರುಗಳನ್ನ ಸಹ ಕೆತ್ತಲಾಗಿದೆ.
11. ಸಿವಾ ಓಯಸಿಸ್ (Siwa Oasis):-
ಕೈರೋ ನಗರದಿಂದ ಪಶ್ಚಿಮ ದಿಕ್ಕಿಗೆ 760ಕಿ.ಮಿ. ದೂರದಲ್ಲಿ ಸಿವಾ ಪಟ್ಟಣದಲ್ಲಿ ಈ ಪ್ರವಾಸಿತಾಣವಿದೆ. ಇಲ್ಲಿನ ವಿಶೇಷವೇನೆಂದರೆ, ಪುರಾತನ ಮಣ್ಣಿನ ಮನೆಗಳು, ಬಿಸಿನೀರಿನ ಬುಗ್ಗೆಗಳು, ಖರ್ಜೂರದ ತೋಟಗಳು, ಹಾಗೂ ಹಲವಾರು ಪ್ರಾಚೀನ ದೇವಾಲಯಗಳು ಇಲ್ಲಿವೆ. ಮರಳುಗಾಡಿನ ಮಧ್ಯದಲ್ಲಿ, ನೀರು ಸಿಗುವ ಫಲವತ್ತಾದ ಪ್ರದೇಶವಾದ್ದರಿಂದ ಈ ಓಯಸಿಸ್ ಅಂದಿನ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಗ್ರೀಕ್ ದೊರೆ "ದ ಗ್ರೇಟ್ ಅಲೆಕ್ಸಾಂಡರ್" ಮತ್ತು ಪರ್ಶಿಯನ್ ದೊರೆಗಳು ಇಲ್ಲಿಗೆ ಭೇಟಿ ನೀಡಿದ್ದರು,
12. ಸೇಂಟ್ ಕ್ಯಾಥರೀನ್ ಮೊನಸ್ಟೆರಿ (St. Catherine's Monastery):-
ಈಜಿಪ್ಟಿನ ಪೂರ್ವಭಾಗದಲ್ಲಿ ಕೈರೋದಿಂದ 440ಕಿ.ಮಿ.ದೂರದಲ್ಲಿರುವ ಸಿನಾಯಿ ಎನ್ನುವ ಪರ್ವತದ ಬುಡದಲ್ಲಿ ಈ ಪ್ರವಾಸಿತಾಣವಿದೆ. ಆಶ್ಚರ್ಯವೆಂದರೆ, ಮರುಭೂಮಿ ಮತ್ತು ಬೆಟ್ಟಗಳ ಕಡಿದಾದ ಜಾಗದಲ್ಲಿ ನೂರಾರು ಕಿಲೋಮೀಟರ್ ಗಳವರೆಗೂ ಯಾವುದೇ ಜನವಸತಿಯಿಲ್ಲದ ಈ ಪ್ರದೇಶದಲ್ಲಿ ಇದನ್ನು 6ನೇಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಕ್ರಿಶ್ಚಿಯನ್ ಮತ ಅನುನಾಯಿಗಳ ಧಾರ್ಮಿಕ ಶ್ರದ್ದಾಕೇಂದ್ರ ವಾಗಿದೆ. ಪ್ರವಾದಿ ಮೋಸೆಸ್ ಅವರು ಇಲ್ಲಿಗೆ ಭೇಟಿನೀಡಿದ್ದರು. ಅಲೆಕ್ಸಾಂಡ್ರಿಯಾದ ಸನ್ಯಾಸಿ ಕ್ಯಾಥರೀನ್ ಗಾಗಿ ಈ ಮೊನೆಸ್ಟರಿಯನ್ನು ಅಂದಿನ ಈಜಿಪ್ಟಿನ ಪೂರ್ವ ಪ್ರಾಂತ್ಯದ ಚಕ್ರವರ್ತಿ ಜಸ್ಟಿನಿಯನ್ ಕಟ್ಟಿಸಿದ್ದ.
ಈಜಿಪ್ಟಿನಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಒಂದೊಂದು ಪಟ್ಟಣದಲ್ಲೂ ಹಲವಾರು ಪ್ರವಾಸಿತಾಣಗಳಿವೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಪ್ರಾಚೀನ ಈಜಿಪ್ಟಿನ ಇತಿಹಾಸವನ್ನು, ಅಂದಿನ ಕಾಲದ ಕಟ್ಟಡಗಳು, ದೇವಾಲಯಗಳು, ಪಿರಮಿಡ್ ಗಳು, ನೈಲ್ ನದಿ, ಕೆಂಪು ಸಮುದ್ರದ ಕಡಲತೀರಗಳು (Red Sea Beaches), ಪುರಾತನ ಕಾಪ್ಟಿಕ್ ಕೈರೋ (Coptic Cairo), ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡುತಿದ್ದಾರೆ.
ಈಜಿಪ್ಟಿನ ಕೆಲ ವಿಶೇಷತೆಗಳು:-
1. ಹನ್ನೊಂದು ಕೋಟಿ ಜನರಿರುವ ಈಜಿಪ್ಟ್ ದೇಶ ಅರಬ್ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಮತ್ತು ನೈಜೀರಿಯಾ ಮತ್ತು ಇಥಿಯೋಪಿಯಾದ ನಂತರ ಆಫ್ರಿಕಾದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರಾಚೀನ ಈಜಿಪ್ಟಿನವರು ತಮ್ಮ ತಾಯ್ನಾಡನ್ನು ಕೆಮೆಟ್ ಎಂದು ಕರೆಯುತಿದ್ದರು, ಇದರರ್ಥ "ಕಪ್ಪು ಭೂಮಿ". ಇದು ನೈಲ್ ನದಿಯ ಪ್ರವಾಹದ ನಂತರ ಉಳಿದಿರುವ ಫಲವತ್ತಾದ ಮಣ್ಣನ್ನು ಸೂಚಿಸುತ್ತದೆ.
2. ಪ್ರಪಂಚದ ಏಳು ಅದ್ಭುತಗಳಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಒಂದು. ಈ ಪಿರಮಿಡ್ಡ್ ನ ವ್ಯಾಸ - 481 ಅಡಿ ಎತ್ತರ 146 ಅಡಿ ತಳ ಹಾಗೂ 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ
ಇದು 3,800 ವರ್ಷಗಳ ಹಿಂದೆ ಕಟ್ಟಿದ ಏಕೈಕ ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ಪುರಾತನ ರಚನೆಯಾಗಿದೆ. ಈ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆ
3. ಕೈರೋನಗರದಲ್ಲಿ ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾಗಿತ್ತು.
4. ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್
5. ಈಜಿಪ್ಟಿನ ನಾಗರಿಕತೆಯು ವಿಶ್ವದಲ್ಲೇ ಅತ್ಯಂತ ಪುರಾತನವಾಗಿದ್ದು, 7,000 ವರ್ಷಗಳಷ್ಟು ಹಿಂದಿನದ್ದು ಎಂದು ಹೇಳಲಾಗುತ್ತಿದೆ.
6. ವಿಶ್ವದ ಅತ್ಯಂತ ಹಳೆಯ ಉಡುಗೆಯಾದ "ತರ್ಖಾನ್" ಈಜಿಪ್ಟ್‌ನಲ್ಲಿ ಕಂಡುಬಂದಿದೆ. ಇದು ಅಂದಾಜು 5,000 ವರ್ಷಗಳಷ್ಟು ಹಳೆಯದ್ದಾಗಿದೆ.
7. ಪ್ರಾಚೀನ ಈಜಿಪ್ಟಿನವರು ಉಪ್ಪು, ಮೆಣಸು, ನೀರು ಮತ್ತು ಪುದೀನ ಎಲೆಗಳಿಂದ ಮಾಡಿದ ಪೇಸ್ಟ್ ಅನ್ನು ಬಳಸಿಕೊಂಡು ಹಲ್ಲು ಉಜ್ಜುತಿದ್ದರಂತೆ. ವಿಶ್ವದ ಮೊಟ್ಟ ಮೊದಲ ಪೇಸ್ಟ್ ಇದಾಗಿತ್ತು ಎಂದು ಹೇಳಲಾಗುತ್ತಿದೆ.
8. ಈಜಿಪ್ಟಿನ ಮಹಿಳೆಯರು ವ್ಯಾಪಕವಾದ ವೈಯುಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಹೊಂದಿದ್ದರು. ಅಂದಿನ ಕಾಲದಲ್ಲಿಯೇ ಅವರು ಆಸ್ತಿಯನ್ನು ಖರೀದಿಸಬಹುದಿತ್ತು ಮತ್ತು ಮಾರಾಟ ಮಾಡಬಹುದಾಗಿತ್ತಲ್ಲದೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆಯನ್ನೂ ಸಲ್ಲಿಸಬಹುದಾಗಿತ್ತು.
9. ಆಪ್ರಿಕಾ ಖಂಡದ ಮಹಾನದಿ ಎಂದು ನೈಲ್ ನದಿಯನ್ನು ಕರೆಯುತ್ತಾರೆ. ನೈಲ್ ನದಿ, ವಿಶ್ವದ ಅತಿ ಉದ್ದದ ನದಿಯಾಗಿದ್ದು, ಪ್ರಾಚೀನ ಈಜಿಪ್ಟಿನವರು ಕೃಷಿಯಲ್ಲಿ ಈ ನದಿಯು ಪ್ರಮುಖ ಪಾತ್ರ ವಹಿಸಿದ್ದರಿಂದ ಜೀವನಾಡಿಯೆಂದೇ ಪರಿಗಣಿಸಲಾಗಿದೆ.
10. ನೈಲ್ ನದಿಯ ವಾರ್ಷಿಕ ಪ್ರವಾಹವನ್ನು ಊಹಿಸಲು ಅಂದಿನ ಈಜಿಪ್ಟಿನವರು 365-ದಿನಗಳ ವರ್ಷದ ಕ್ಯಾಲೆಂಡರ್ ಅನ್ನು ಕಂಡುಹಿಡಿದಿದ್ದರು. ಮತ್ತು ಜಲಗಡಿಯಾರವನ್ನು ಕಂಡು ಹಿಡಿದಿದ್ದರು.
11. ಈಜಿಪ್ಟ್‌ನ ಸೂಯೆಜ್ ಕಾಲುವೆಯು ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾಗಿದೆ, ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಯುರೋಪ್ ಮತ್ತು ಏಷ್ಯಾದ ನಡುವಿನ ಸಮುದ್ರ ಪ್ರಯಾಣವನ್ನು ಕಡಿಮೆ ಮಾಡುತ್ತದೆ.
12. ಪ್ರವಾಹ ನಿಯಂತ್ರಿಸುವುದಕ್ಕಾಗಿ ಕಟ್ಟಿದ ಅಸ್ವಾನ್ ಹೈ ಅಣೆಕಟ್ಟು, 1970 ರಲ್ಲಿ ಪೂರ್ಣಗೊಂಡಿತು. ಈ ಅಣೆಕಟ್ಟಿನಿಂದ ಕೃಷಿ ಉತ್ಪಾದನೆ ಅಧಿಕವಾಗಿದೆ. ಇಲ್ಲಿ ಜಲವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಈ ಅಣೆಕಟ್ಟು ಕಟ್ಟಿದ ಪರಿಣಾಮ ಹಲವಾರು ಪ್ರಾಚೀನ ಐತಿಹಾಸಿಕ ಸ್ಥಳಗಳು ಜಲಸಮಾಧಿಯಾಗಿವೆ.
13. ಈಜಿಪ್ಟ್ ಒಂದು ಖಂಡಾಂತರ ದೇಶವಾಗಿದ್ದು, ಏಷ್ಯಾ ಮತ್ತು ಆಫ್ರಿಕಾ ಖಂಡದ ಎರಡರಲ್ಲೂ ತನ್ನ ಪ್ರದೇಶವನ್ನು ಹೊಂದಿದೆ.
14. ನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯದ ಹೆಸರು "ಪ್ಯಾಕ್ಸ್"
15. ಪುರಾತನ ನಗರವಾದ ಥೀಬ್ಸ್ (ಈಗ ಲಕ್ಸರ್) ಒಮ್ಮೆ ಈಜಿಪ್ಟ್‌ನ ಧಾರ್ಮಿಕ ರಾಜಧಾನಿಯಾಗಿತ್ತು.
16. ಗ್ರೀಕ್ ದೊರೆ "ದ ಗ್ರೇಟ್ ಅಲೆಗ್ಸಾಂಡರ್" ಈಜಿಪ್ಟ್ ನಲ್ಲಿ ಅಲೆಕ್ಸಾಂಡ್ರಿಯಾ ನಗರವನ್ನು ನಿರ್ಮಿಸಿದ ಮತ್ತು ಟಾಲೆಮಿ ರಾಜಮನೆತನವನ್ನು ಸ್ಥಾಪಿಸಿ ಅಲ್ಲಿನ ಆಡಳಿತವನ್ನು ಅವರ ಕೈಗೆ ನೀಡಿದ್ದ.
17. ಈಜಿಪ್ಟಿನ ಪ್ರಮುಖ ಪಟ್ಟಣಗಳು:- ಕೈರೋ, ಹುರ್ ಗಡಾ, ಅಲೆಕ್ಸಾಂಡ್ರಿಯಾ, ಶರಮ್ ಅಲ್ ಶೇಖ್ ಮತ್ತು ಲಕ್ಸರ್. ಟಿಲ್ ಅಮರ್ನಾ
18. ನೈಲ್ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ನಗರಗಳು - ಆಸ್ಪಾನ್, ಲಕ್ಸರ್ ಹಾಗೂ ಕಾರ್ನಾಕ್
19. ಪುರಾತನ ಈಜಿಪ್ಟ್ನಲ್ಲಿ ಬೆಕ್ಕುಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ, ಕೀಟಗಳನ್ನು ನಿಯಂತ್ರಿಸಲು ಮತ್ತು ರಕ್ಷಣೆಯ ಸಂಕೇತಗಳಾಗಿವೆ. ಆಕಸ್ಮಿಕವಾಗಿಯಾದರೂ ಬೆಕ್ಕನ್ನು ಕೊಲ್ಲುವುದು ಮರಣದಂಡನೆಗೆ ಅರ್ಹವಾದ ಅಪರಾಧವಾಗಿತ್ತು.
20. ಈಜಿಪ್ಟಿನ ಚಿತ್ರಲಿಪಿಗಳು ಪ್ರಪಂಚದ ಅತ್ಯಂತ ಹಳೆಯ ಬರವಣಿಗೆ ವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಚಿತ್ರಗಳಲ್ಲಿ ಚಿಹ್ನೆಗಳನ್ನು 3,000 ವರ್ಷಗಳಿಂದ ಬಳಸಲಾಗುತ್ತಿತ್ತು.
21. ಇತಿಹಾಸದಲ್ಲಿ ಮೊಟ್ಟ ಮೊದಲ ಕಾರ್ಮಿಕ ಮುಷ್ಕರವು ಈಜಿಪ್ಟ್‌ನಲ್ಲಿ ಸುಮಾರು 1152 BC ಯಲ್ಲಿ ನಡೆದಿದೆ, ಡೀರ್ ಎಲ್-ಮದೀನಾದಲ್ಲಿನ ರಾಯಲ್ ನೆಕ್ರೋಪೊಲಿಸ್‌ನ ಕುಶಲಕರ್ಮಿಗಳು ವೇತನವನ್ನು ನೀಡದ ಕಾರಣ ತಮ್ಮ ಕೆಲಸದಿಂದ ಹೊರನಡೆದಿದ್ದರಂತೆ.
22. ಪ್ರಾಚೀನ ಈಜಿಪ್ಟಿನವರು ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ರೂಡಿಸಿಕೊಂಡಿದ್ದರು, ಔಷಧಿ ಗಳನ್ನು ಕಂಡುಹಿಡಿದಿದ್ದರು, ಶಸ್ತ್ರಚಿಕಿತ್ಸೆಯನ್ನು ನಡೆಸುತಿದ್ದರು.
23. ಈಜಿಪ್ಟ್‌ನ ಟಾಲೆಮಿಕ್ ಸಾಮ್ರಾಜ್ಯದ ಕೊನೆಯ ಸಕ್ರಿಯ ಆಡಳಿತಗಾರ ಕ್ಲಿಯೋಪಾತ್ರ VII, ವಾಸ್ತವವಾಗಿ ಗ್ರೀಕ್ ಮೂಲದವನು, ಅಲೆಕ್ಸಾಂಡರ್ ದಿ ಗ್ರೇಟ್‌ನ ಜನರಲ್‌ಗಳಲ್ಲಿ ಒಬ್ಬನಾದ ಪ್ಟೋಲೆಮಿ I ವಂಶದವನು.
24. 1798 ರಲ್ಲಿ ಫ್ರೆಂಚ್ ದೊರೆ ನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ್ದನಂತೆ
25. 1799 ರಲ್ಲಿ ಪತ್ತೆಯಾದ ರೊಸೆಟ್ಟಾ ಸ್ಟೋನ್, ಈಜಿಪ್ಟಿನ ಚಿತ್ರಲಿಪಿಗಳನ್ನು ಅರ್ಥೈಸುವ ಕೀಲಿಯಾಗಿದೆ. ಇದು ಮೂರು ಲಿಪಿಗಳಲ್ಲಿ ಬರೆಯಲಾದ ಶಾಸನವನ್ನು ಒಳಗೊಂಡಿದೆ: ಚಿತ್ರಲಿಪಿ, ಡೆಮೋಟಿಕ್ ಮತ್ತು ಗ್ರೀಕ್.
26. ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿ. ನಂತರದಲ್ಲಿ ಈಜಿಪ್ಷಿಯನ್ನರು ಬಳಸಿದ ಲಿಪಿ - ಹಿರೋಗ್ಲಿಪಿಕ್ಸ್. ಹಿರೋಗ್ಲಿಪಿಕ್ಸ್ ಎಂದರೇ - ಪವಿತ್ರ ಲಿಪಿ. ಪವಿತ್ರ ಲಿಪಿಯನ್ನು ಪುರೋಹಿತ ವರ್ಗವು ಬಳಸುತ್ತಿತ್ತು
27. Paper ಎಂಬ ಪದದ ಮೂಲ ಪದ - ಪ್ಯಾಪಿರಸ್
28. ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸ
29. ಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿ
30. ಬೈಬಲ್ ಪದದ ಅರ್ಥ - ಪುಸ್ತಕ
31. ಮಡಿದವರ ಕುರಿತ ಪುಸ್ತಕವು ಶವ ಪೆಟ್ಟಿಗೆಯ ಎಂದು ಕರೆಯಲ್ಪಡುವ ಮಮ್ಮಿಗಳ ಪೆಟ್ಟಿಗೆಯಲ್ಲಿ ದೊರೆತಿವೆ
32. ಪ್ರಾಚೀನ ಈಜಿಪ್ಷಿಯನ್ನರು ಗಣಿತ ಹಾಗೂ ರೇಖಾಗಣಿತದಲ್ಲಿ ಮುಂದುವರಿದಿದ್ದರು
33. ಪುರಾತನ ಅಲೆಕ್ಸಾಂಡ್ರಿಯಾದ ಲೈಬ್ರರಿಯು ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಗ್ರಂಥಾಲಯಗಳಲ್ಲಿ ಒಂದಾಗಿದೆ.
34. ಗೀಜಾದ ಗ್ರೇಟ್ ಸಿಂಹನಾರಿ ಪ್ರತಿಮೆಯು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಹಳೆಯ ಪ್ರತಿಮೆಗಳಲ್ಲಿ ಒಂದಾಗಿದೆ ಆದರೆ ಅದರ ನಿರ್ಮಾಣದ ಮೂಲ ಮತ್ತು ಇತಿಹಾಸವು ನಿಗೂಢವಾಗಿಯೇ ಉಳಿದಿದೆ.
35. ಅತ್ಯಂತ ಎತ್ತರದ (160 ಅಡಿ) ಮೂರ್ತಿ "ಸ್ಪಿಂಕ್ಸ್" ಅನ್ನು ರಚಿಸಿದ ಈಜಿಪ್ಟ್ ದೊರೆಯ ಹೆಸರು "ಖಪ್ರೆ"
36. ಮೂರನೇ ರಾಮೆಸಸ್ ಇತಿಹಾಸ ಪ್ರಸಿದ್ದ ಕಾರ್ನಾಕ್ ದೇವಾಲಯದ ವನ್ನು ಕಟ್ಟಿಸಿದ್ದ
37. ಪ್ರಾಚೀನ ಈಜಿಪ್ಟಿಯನ್ನರು ಮೊಟ್ಟ ಮೊದಲು ಅಂಚೆ ವ್ಯವಸ್ಥೆ ಹಾಗೂ ಜನಗಣತಿಯನ್ನು ಜಾರಿಗೆ ತಂದಿದ್ದರು.
38. ಪ್ರಾಚೀನ ಈಜಿಪ್ಟಿಯನ್ನರು ಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು
39. ಪ್ರಾಚೀನ ಈಜಿಪ್ಟಿಯನ್ನರು ನೆರಳಿನ ಗಡಿಯಾರವನ್ನು ರೂಪಿಸಿದ್ದರು
40. ಸೂರ್ಯ ಪ್ರಾಚೀನ ಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವನಾಗಿದ್ದ. ಸೂರ್ಯನನ್ನು " ರಾ" ಮತ್ತು ಅಟನ್ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು. ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾ, ಇವರು ವಾಯುದೇವನನ್ನ "ಶು" ಹೆಸರಿನಿಂದ ಕರೆದಿದ್ದಾರೆ. ಇವರ ಕಾಲದ ನ್ಯಾಯ ದೇವರನ್ನ ಒಸಿರಸ್ ಹೆಸರಿನಿಂದ ಕರೆದಿದ್ದಾರೆ. ಸಾವಿನ ದೇವರು ಎಂದು ಹೇಳಲಾಗುತಿತ್ತು. ಭೂ ದೇವಿಯನ್ನ "ಇಸಿಸ್" ಎನ್ನುವ ಹೆಸರಿನಿಂದ ಕರೆಯುತಿದ್ದರು. ಟಗರು" ಅಮನ್ ರಾ ದೇವರ ಪ್ರತೀಕ. ಪ್ರಾಚೀನ ಈಜಿಪ್ಟಿನವರು 2,000 ಕ್ಕೂ ಹೆಚ್ಚು ದೇವರು ಮತ್ತು ದೇವತೆಗಳನ್ನು ಪೂಜಿಸಿದ್ದರು.
41. ದಿರ್ ಎಲ್ ಬಹಾರಿ ದೇವಾಲಯದ ನಿರ್ಮಾತೃ - ಒಂದನೇ ಥುಟ್ ಮೋಸ್ ಹಾಗೂ ಆತನ ಮಗಳು ರಾಣಿ ಹಟ್ಸೆ ಪ್ಸುತ್, ಈದೇವಾಲಯದ ಪ್ರಮುಖ ವಾಸ್ತು ಶಿಲ್ಪಿ - ಸೇನ್ ಮುಥ್
42. ಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್, ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪ
43. ರಾಣಿ ಹಟ್ಸೆಪುತ್ಸಳ ವಿಗ್ರಹ ನ್ಯೂಯಾರ್ಕ್ ಮ್ಯೂಸಿಯಂನಲ್ಲಿದೆ
44. ಈಜಿಪ್ಟಿನ ಫೇರೋಗಳು ಸಾಮಾನ್ಯವಾಗಿ ಹೆಚ್ಚಿನ ತೂಕವನ್ನು ಹೊಂದಿದ್ದರು, ವಾಸ್ತವವಾಗಿ ಚಿತ್ರಪಟಗಳಲ್ಲಿದ್ದಂತೆ, ಉತ್ತಮವಾದ ಮೈಕಟ್ಟಿನ ಯುವಕರ ಚಿತ್ರಗಳಿಗೆ ವಿರುದ್ಧವಾಗಿ ಅವರ ದೇಹವಿತ್ತು. ಅವರ ಆಹಾರದಲ್ಲಿ ಸಕ್ಕರೆ, ಆಲ್ಕೋಹಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದವು ಎಂದು ಸಂಶೋಧನೆಯಿಂದ ತಿಳಿಯಲಾಗಿದೆ .
45. ರಾಣಿ ಕ್ಲಿಯೋಪಾತ್ರ ಈಜಿಪ್ಟ್ ನ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಮಹಿಳೆ
46. 3000 ವರ್ಷಗಳ ದೀರ್ಘ ಇತಿಹಾಸದಲ್ಲಿ ಆಳಿದ ರಾಜರು - 31
47. ಅಖ್ನಾಟನ್ ಎಂಬ ಹೆಸರನ್ನು ಹೊಂದಿದ್ದ ಅರಸ - 4 ನೇ ಅಮನ್ ಹೋಟೆಪ್
48. ಈಜಿಪ್ಟ್ ನ ರಾಜರು ಸ್ವಕುಟುಂಬ ವಿವಾಹವನ್ನು ಹೊಂದಿದ್ದವರು -
49. ಈಜಿಪ್ಟಿಯನ್ನರ ಮೇಧಾವಿ ಅರಸ 4 ನೇ ಅಮನ್ ಹೋಟೆಪ್
50. ಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್
ಬರಹ:- ಪಿ.ಎಸ್.ರಂಗನಾಥ
ಮಸ್ಕತ್ - ಒಮಾನ್ ರಾಷ್ಟ್ರ
Hello Sir,
ಪ್ರತ್ಯುತ್ತರಅಳಿಸಿVery well written article abt Egypt. Took time really to read through fully. Great effort, thank you for the info. I know Rampura very well as I go to Basapura for Mane Devaru, Anjaneya Swamy every shravana month.
Thank you,
Venkatesh
Thank you so much for your comment, Nice to know you are from our place.
ಅಳಿಸಿVery educated research oriented article on history of EGYPT CIVILIZATION
ಪ್ರತ್ಯುತ್ತರಅಳಿಸಿYou have done great efforts and written excellent work on Egypt civilization better than college books article
This is very useful article for every one
I fully appreciate your knowledge and your efforts
Congratulations and best wishes
Thank you
Yours
Dr.LakshmiNaryanappa
Thank you so much for your appreciation Sir. 🙏🙏🙏
ಅಳಿಸಿಅದ್ಭುತ ಲೇಖನ ಸರ್
ಪ್ರತ್ಯುತ್ತರಅಳಿಸಿಮತ್ತೆ ನಾವು ಶಾಲಾ ದಿನಗಳಿಗೆ ಹೋದಂತೆ ಭಾಸವಾಯಿತು. ನಾಗರಿಕತೆ ಹಾಳಾಗಿ ಹೋಗಿದ್ದು ಬೇಸರದ ಸಂಗತಿ.
ಈಗಿನ ಜನಗಳಿಗೆ ತಮ್ಮ ಹಿಂದಿನ ಪೀಳಿಗೆ ಬಗ್ಗೆ ತಿಳುವಳಿಕೆ ಇಲ್ಲಾ ಆದರೂ ಕೆಲವರಿಗೆ ಅದು ಬೇಕಾಗಿಲ್ಲ. ಒಟ್ಟಿನಲ್ಲಿ ಲೇಖನ ಚೆನ್ನಾಗಿದೆ.
ಧನ್ಯವಾದಗಳು ಸರ್ 🙏
ಅಳಿಸಿಈಜಿಪ್ಟ್ ಬಗ್ಗೆ ಬಹಳ ಉಪಯುಕ್ತ ಲೇಖನ ಬರೆದಿದ್ದೀರಿ. ಅಲ್ಲಿಗೆ ಪ್ರವಾಸ ಹೋಗುವವರು ಓದಬೇಕಾದ ಲೇಖನ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್ 🙏💐
ಅಳಿಸಿತುಂಬಾ ಚೆನ್ನಾಗಿ ಈಜಿಪ್ಟ್ ದೇಶದ ವಿವರಣೆ ಲೇಕನಿಯಲ್ಲಿ ಅಚ್ಚುಕಟ್ಟಾಗಿ ವಿವರಿಸಿದ್ದೀರ
ಪ್ರತ್ಯುತ್ತರಅಳಿಸಿಇದು ನಾವು ಈಜಿಪ್ಟ್ ಪ್ರವಾಸ ಮಾಡಿಯೂ (೧೦ ವರ್ಷಗಳ ಹಿಂದೆ) ಇಷ್ಟು ವಿವರಣೆ ನಮಗೆ ದೊರೆತಿರ್ಲಿಲ್ಲ.
Thank you so much
ಅಳಿಸಿ