ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿರುವ ಹೇರಳ ಉದ್ಯೋಗ ಅವಕಾಶ ಮತ್ತು ಅಧಿಕ ವರಮಾನದ ಆಕರ್ಷಣೆಯಿಂದ ಬಹಳಷ್ಟು ಜನರು ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗುತಿದ್ದರು. ಆದರೆ ಮುಂಬರುವ ದಿನಗಳಲ್ಲಿ ಈ ಅವಕಾಶ ಕಡಿಮೆಯಾಗುವ ಸಂಭವ ಜಾಸ್ತಿ ಅಂತ ಹೇಳಬಹುದು. ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ, ಕುವೈತ್, ಒಮಾನ್, ಕತಾರ್ ಮತ್ತು ಬಹ್ರೇನ್ ದೇಶಗಳು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಉದ್ಯೋಗಗಳಲ್ಲಿ ತಮ್ಮ ದೇಶದ ಪ್ರಜೆಗಳಿಗೆ ಮೊದಲ ಆದ್ಯತೆ ನೀಡುತ್ತಿವೆ. ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಆರ್ಥಿಕತೆಯನ್ನು ಪುನಾರಚಿಸುತ್ತಿವೆ.
ದಶಕಗಳಿಂದ ವಿದೇಶಿ ಕಾರ್ಮಿಕರ ಸ್ವರ್ಗವಾಗಿದ್ದ ಈ ನೆಲದಲ್ಲಿ, ಈಗ 'Workforce Nationalization' (ಉದ್ಯೋಗ ರಾಷ್ಟ್ರೀಕರಣ) ಅಲೆಯು ಜೋರಾಗಿದೆ. ಪ್ರತಿಯೊಂದು ಗಲ್ಫ್ ರಾಷ್ಟ್ರವು ನಿರ್ದಿಷ್ಟ ವಲಯಗಳಲ್ಲಿ ಸ್ಥಳೀಯರಿಗೆ ಮಾತ್ರ ಉದ್ಯೋಗ ಮೀಸಲಿಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರಿಂದಾಗಿ ಖಾಸಗಿ ಕಂಪನಿಗಳು ಇಂತಿಷ್ಟು ಪ್ರಮಾಣದಲ್ಲಿ ಸ್ಥಳೀಯರನ್ನು ಉದ್ಯೋಗದಲ್ಲಿ ನೇಮಿಸಿಕೊಂಡು ವ್ಯವಹಾರಗಳನ್ನು ನಡೆಸಲೇಬೇಕು. ಇಲ್ಲವಾದರೆ, ಕೆಲವು ರಾಷ್ಟ್ರಗಳಲ್ಲಿ ದಂಡ ತೆರಬೇಕು, ಸರ್ಕಾರದ ಸೌಲಭ್ಯಗಳನ್ನು ನಿಲ್ಲಿಸಲಾಗುತ್ತದೆ. ಹೊಸ ಬಿಜಿನೆಸ್ ಮಾಡಲು ಲೈಸೆನ್ಸ್ ಸಿಗುವುದಿಲ್ಲ. ಇರುವ ಲೈಸೆನ್ಸ್ ಅನ್ನು ನವೀಕರಣಗೊಳಿಸುವುದಿಲ್ಲ. ಹೀಗೆ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಲಾಗುತ್ತಿದೆ.
ಗಲ್ಫ್ ರಾಷ್ಟ್ರ ಗಳು ಖಾಸಗಿ ಮತ್ತು ಸರ್ಕಾರಿ ವಲಯದ ಉದ್ಯೋಗಗಳಲ್ಲಿ ನಿರ್ದಿಷ್ಟ ಪ್ರಮಾಣದ ಹುದ್ದೆಗಳನ್ನು ತಮ್ಮ ದೇಶದ ಸ್ಥಳೀಯ ನಾಗರಿಕರಿಗೆ (Locals) ಮೀಸಲಿರಿಸುವುದೇ ಈ ನೀತಿಯ ಉದ್ದೇಶ. ಇದನ್ನು ಸಾಮಾನ್ಯವಾಗಿ 'Workforce Nationalization' ಎಂದು ಕರೆಯಲಾಗುತ್ತದೆ.
ಈ ಬದಲಾವಣೆಗೆ ಪ್ರಮುಖ ಕಾರಣಗಳು:
ಸ್ಥಳೀಯರಲ್ಲಿ ಹೆಚ್ಚುತ್ತಿರುವ ನಿರುದ್ಯೋಗ:
ಗಲ್ಫ್ ದೇಶಗಳಲ್ಲಿ ಯುವಜನತೆಯ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ಸೂಕ್ತ ಉದ್ಯೋಗ ಒದಗಿಸುವುದು ಅಲ್ಲಿನ
ಸರ್ಕಾರಗಳಿಗೆ ಸವಾಲಾಗಿದೆ. ಪದವೀಧರರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ, ವಿದೇಶಿಯರ ಮೇಲಿನ ಅವಲಂಬನೆ ಕಡಿಮೆ ಮಾಡಲು
ಈ ಕ್ರಮ ಕೈಗೊಳ್ಳಲಾಗಿದೆ.
ತೈಲ ಅವಲಂಬನೆ ಕಡಿಮೆ ಮಾಡುವುದು:
ಕೇವಲ ತೈಲ (Oil) ಆದಾಯದ ಮೇಲೆ ಅವಲಂಬಿತವಾಗದೆ, ಆರ್ಥಿಕತೆಯನ್ನು ವೈವಿಧ್ಯಮಯಗೊಳಿಸಲು (Economic Diversification) ಈ ದೇಶಗಳು ಮುಂದಾಗಿವೆ. ಇದರ ಭಾಗವಾಗಿ
ಸ್ಥಳೀಯ ಮಾನವ ಸಂಪನ್ಮೂಲವನ್ನು ಬಲಪಡಿಸಲಾಗುತ್ತಿದೆ.
ಹಣದ ಹೊರಹರಿವು ತಡೆಯುವುದು:
ವಿದೇಶಿ ಉದ್ಯೋಗಿಗಳು ತಾವು ದುಡಿದ ಹಣದಲ್ಲಿ
ಬಹುಪಾಲನ್ನು ತಮ್ಮ ತಾಯ್ನಾಡಿಗೆ ಕಳುಹಿಸುತ್ತಾರೆ (Remittance). ಸ್ಥಳೀಯರಿಗೆ ಉದ್ಯೋಗ ನೀಡುವುದರಿಂದ
ಆ ಹಣ ದೇಶದ ಆರ್ಥಿಕತೆಯಲ್ಲೇ ಉಳಿಯುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ.
ಈ ಎಲ್ಲಾ ಕಾರಣಗಳಿಂದ ಪ್ರತಿಯೊಂದು ಗಲ್ಫ್ ರಾಷ್ಟ್ರವು ತನ್ನದೇ ಆದ ಹೆಸರಿನಲ್ಲಿ ಈ ಮೀಸಲಾತಿ ನೀತಿಯನ್ನು ಜಾರಿಗೊಳಿಸಿದೆ:
ಸೌದಿ ಅರೇಬಿಯಾ ('ನಿತಾಖತ್' (Nitaqat) / ಸೌದೀಕರಣ - Saudization):
ಇಲ್ಲಿನ 'ನಿಜಾಖತ್' (Nitaqat) ವ್ಯವಸ್ಥೆಯು ಅತ್ಯಂತ ಕಠಿಣವಾಗಿದೆ. ಅನೇಕ
ವಲಯಗಳಲ್ಲಿ (ಉದಾಹರಣೆಗೆ: ಮೊಬೈಲ್ ಅಂಗಡಿಗಳು, ಎಚ್‌ಆರ್, ಸೆಕ್ಯುರಿಟಿ, ಡ್ರೈವಿಂಗ್) 100% ಸೌದಿ ಪ್ರಜೆಗಳನ್ನೇ ನೇಮಿಸಬೇಕೆಂಬ ನಿಯಮವಿದೆ.
* ಮೀಸಲಾತಿ ಇರುವ ಪ್ರಮುಖ ಉದ್ಯೋಗಗಳು ಯಾವುದು ಎಂದರೆ
* ಮಾನವ ಸಂಪನ್ಮೂಲ (HR) ವಿಭಾಗದ ಹುದ್ದೆಗಳು.
* ಶಾಂಪಿಂಗ್ ಮಾಲ್‌ಗಳ ಮ್ಯಾನೇಜರ್‌ಗಳು.
* ಸೆಕ್ಯುರಿಟಿ ಗಾರ್ಡ್‌ಗಳು (ಭದ್ರತಾ ಸಿಬ್ಬಂದಿ).
* ಹೋಟೆಲ್ ರಿಸೆಪ್ಷನಿಸ್ಟ್‌ಗಳು.
* ಮೊಬೈಲ್ ಫೋನ್ ಮಾರಾಟ ಮತ್ತು ರಿಪೇರಿ ಅಂಗಡಿಗಳು.
* ಲೆಕ್ಕಪತ್ರ ನಿರ್ವಹಣೆ (Accounting) ಮತ್ತು ಕ್ಲರ್ಕ್ ಹುದ್ದೆಗಳು.
* ಚಾಲಕರು (ಖಾಸಗಿ ವಾಹನ ಮತ್ತು ಟ್ಯಾಕ್ಸಿ).
ಸೌದಿ ಅರೇಬಿಯಾದ ವಿಷನ್ 2030ರ ಪ್ರಕಾರ, ಸ್ಥಳೀಯರ ನಿರುದ್ಯೋಗ ದರವನ್ನು 11.6% ರಿಂದ 7% ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಖಾಸಗಿ ವಲಯದಲ್ಲಿ ಸೌದಿ ಪ್ರಜೆಗಳ ಸಂಖ್ಯೆ 22 ಲಕ್ಷ ದಾಟಿದೆ.
ಯುಎಇ (ಎಮಿರಾಟೈಸೇಶನ್ - Emiratization):
ಯುಎಇ ಸರ್ಕಾರವು 'ನಾಫಿಸ್' (Nafis) ಎಂಬ ಯೋಜನೆಯಡಿ ಖಾಸಗಿ ಕಂಪನಿಗಳಿಗೆ ಸ್ಥಳೀಯರನ್ನು ನೇಮಿಸಿಕೊಳ್ಳಲು ಕಟ್ಟುನಿಟ್ಟಿನ ಗುರಿಗಳನ್ನು (Quota) ನೀಡಿದೆ. ಗುರಿ ತಲುಪದ ಕಂಪನಿಗಳಿಗೆ ಭಾರೀ ದಂಡ ವಿಧಿಸಲಾಗುತ್ತಿದೆ.
ನಿಯಮಗಳು: 50ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಕಂಪನಿಗಳು ಪ್ರತಿ ವರ್ಷ ತಮ್ಮ ನುರಿತ ಉದ್ಯೋಗಿಗಳ ಪೈಕಿ 2% ರಷ್ಟು ಎಮಿರಾತಿ (ಸ್ಥಳೀಯ) ಪ್ರಜೆಗಳನ್ನು ನೇಮಿಸಿಕೊಳ್ಳಲೇಬೇಕು. 2026ರ ವೇಳೆಗೆ ಇದನ್ನು 10% ಕ್ಕೆ ಏರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ದಂಡ: ಕಂಪನಿಗಳು ಒಂದು ವೇಳೆ ಈ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗದೆ ಹೋದರೆ, ನೇಮಕ ಮಾಡದ ಪ್ರತಿ ಹುದ್ದೆಗೆ ತಿಂಗಳ ಲೆಕ್ಕದಲ್ಲಿ ಲಕ್ಷಾಂತರ ರುಪಾಯಿ ದಂಡ ವಿಧಿಸಲಾಗುತ್ತದೆ.
ಕುವೈತ್ (ಕುವೈತೈಸೇಶನ್ - Kuwaitization):
ಸರ್ಕಾರಿ ವಲಯದಲ್ಲಿ ವಿದೇಶಿಯರ ಸಂಖ್ಯೆಯನ್ನು
ಗಣನೀಯವಾಗಿ ಕಡಿಮೆ ಮಾಡಲು ಮತ್ತು ನಿರ್ದಿಷ್ಟ ವಯಸ್ಸಿನ ನಂತರ ವಿದೇಶಿಯರ ವೀಸಾ ನವೀಕರಿಸದಿರಲು ಕುವೈತ್
ನಿರ್ಧರಿಸಿದೆ. ಕುವೈತ್‌ನಲ್ಲಿ
ಸರ್ಕಾರಿ ವಲಯದಿಂದ ವಿದೇಶಿಯರನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಪದವಿ
(Degree) ಇಲ್ಲದ ಮತ್ತು 60 ವರ್ಷ ಮೇಲ್ಪಟ್ಟ ವಿದೇಶಿ ನೌಕರರ ವೀಸಾ ನವೀಕರಣವನ್ನು
ಕುವೈತ್ ಕಠಿಣಗೊಳಿಸಿದೆ ಅಥವಾ ನಿಲ್ಲಿಸಿದೆ. ಇದರಿಂದ ಸಾವಿರಾರು ಹಿರಿಯ ನೌಕರರು ತಾಯ್ನಾಡಿಗೆ ಮರಳುವಂತಾಗಿದೆ.
ಒಮಾನ್ (ಒಮಾನೈಸೇಶನ್ - Omanization):
ಒಮಾನ್ ರಾಷ್ಟ್ರದಲ್ಲಿ ಸರ್ಕಾರಿ ವಲಯದಲ್ಲಿ ಶೇ.85 ಕ್ಕೂ ಹೆಚ್ಚು
ಹುದ್ದೆಗಳಲ್ಲಿ ಈಗ ಒಮಾನಿಗಳೇ ಇದ್ದಾರೆ. ಮುಂಬರುವ ದಿನಗಳಲ್ಲಿ ಇದು ನೂರು ಪ್ರತಿಶತ ಸಾಧಿಸುವತ್ತ
ಹೆಜ್ಜೆ ಹಾಕಲಿದೆ. ಖಾಸಗಿ ವಲಯಗಳಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ
ಸಿಗಬೇಕೆನ್ನುವ ಉದ್ದೇಶದಿಂದ ಒಮಾನೈಸೇಶನ್ (Omanisation) ಶೇಕಡಾವಾರು ಪ್ರಮಾಣವು ವಲಯದಿಂದ ವಲಯಕ್ಕೆ
ಬದಲಾಗುತ್ತದೆ. ಬ್ಯಾಂಕಿಂಗ್‌ನಲ್ಲಿ 60%, ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ 21% ಕೈಗಾರಿಕೆಯಲ್ಲಿ 35%, ಹೋಟೆಲ್‌ಗಳಲ್ಲಿ 30% ಹಾಗೂ ಚಿಲ್ಲರೆ ವ್ಯಾಪಾರದಲ್ಲಿ
20% ರಷ್ಟು ಸ್ಥಳೀಯರಿಗೆ ಮೀಸಲಾತಿ ನೀಡಲೇ ಬೇಕೆನ್ನುವ ಉದ್ದೇಶ ಸರ್ಕಾರಕ್ಕಿದೆ. ವಿಷನ್ 2040 ರ ಗುರಿಗಳನ್ನು
ಬೆಂಬಲಿಸಲು, ಸಾರಿಗೆಯಂತಹ ನಿರ್ದಿಷ್ಟ ಸಚಿವಾಲಯಗಳು ಐಟಿ ಮತ್ತು ನಾಯಕತ್ವದ ಪಾತ್ರಗಳಲ್ಲಿ ಹೆಚ್ಚಿನ ದರಗಳನ್ನು
ತಲುಪಲು ನೀತಿಗಳನ್ನು ಜಾರಿಗೊಳಿಸುತ್ತಿವೆ ಮತ್ತು ಒಮಾನಿ ಪ್ರಾತಿನಿಧ್ಯದಲ್ಲಿ ಗಣನೀಯ ಹೆಚ್ಚಳವನ್ನು
ಗುರಿಯಾಗಿಸಿಕೊಂಡಿವೆ.
ಒಮಾನ್ ರಾಷ್ಟ್ರದಲ್ಲಿ ವಿದೇಶಿಗರಿಗೆ ನಿಷೇಧಿತ ಉದ್ಯೋಗಗಳು:
ಒಮಾನ್ ಕಾರ್ಮಿಕ ಸಚಿವಾಲಯವು ಸುಮಾರು 207 ಕ್ಕೂ ಹೆಚ್ಚು ಉದ್ಯೋಗಗಳನ್ನು
ವಿದೇಶಿಯರಿಗೆ ನಿಷೇದ ಹೇರಲಾಗಿದೆ. ಚಾಲಕರು (ಟ್ಯಾಂಕರ್ ಮತ್ತು ಟ್ರಕ್). ದಿನಸಿ ಅಂಗಡಿಗಳ ಸೇಲ್ಸ್‌ಮನ್‌ಗಳು.
ಇನ್ಶೂರೆನ್ಸ್ ಏಜೆಂಟ್‌ಗಳು. ಫೈನಾನ್ಸ್ ಕ್ಲರ್ಕ್‌ಗಳು. ಹೀಗೆ ವಿವಿಧ ಹುದ್ದೆಗಳಿಗೆ ವೀಸಾ ನಿರಾಕರಿಸಲಾಗಿದೆ.
ಮೇಲಿನ ಅಂಕಿ ಅಂಶಗಳು ಮತ್ತು ಪಟ್ಟಿಗಳನ್ನು ನೋಡಿದರೆ, ಸಾಮಾನ್ಯ ಕೌಶಲ್ಯದ (Blue-collar jobs) ಉದ್ಯೋಗಗಳು ಕ್ಷೀಣಿಸುತ್ತಿವೆ ಎಂದು ಸ್ಪಷ್ಟವಾಗುತ್ತದೆ. ಆದರೆ, ಕೆಳಗಿನ ಕ್ಷೇತ್ರಗಳಲ್ಲಿ ಇನ್ನೂ ವಿಪುಲ ಅವಕಾಶಗಳಿವೆ:
* ವೈದ್ಯಕೀಯ ಕ್ಷೇತ್ರ
(ವೈದ್ಯರು, ನರ್ಸ್‌ಗಳು).
* ಉನ್ನತ ತಂತ್ರಜ್ಞಾನ
(AI, ಕೋಡಿಂಗ್, ಸೈಬರ್ ಸೆಕ್ಯುರಿಟಿ).
* ನಿರ್ಮಾಣ ವಲಯದ
ನುರಿತ ಇಂಜಿನಿಯರ್‌ಗಳು.
ಈ ಮೇಲಿನ ಬದಲಾವಣೆಗಳ ಹಿಂದೆ ಬಲವಾದ ಆರ್ಥಿಕ ಕಾರಣಗಳಿವೆ:
ಹಣದ ಉಳಿತಾಯ: ಗಲ್ಫ್ ದೇಶಗಳಿಂದ ಪ್ರತಿ ವರ್ಷ ಕೋಟ್ಯಂತರ ಡಾಲರ್
ಹಣ ಹೊರದೇಶಗಳಿಗೆ (Remittance) ಹೋಗುತ್ತದೆ. ಉದಾಹರಣೆಗೆ, ಭಾರತಕ್ಕೆ ಬರುವ ಒಟ್ಟು ವಿದೇಶಿ ಹಣದಲ್ಲಿ ಸುಮಾರು 50% ರಷ್ಟು
ಗಲ್ಫ್ ರಾಷ್ಟ್ರಗಳಿಂದಲೇ ಬರುತ್ತದೆ. ಸ್ಥಳೀಯರಿಗೆ ಉದ್ಯೋಗ ನೀಡುವುದರಿಂದ ಈ ಹಣವನ್ನು ತಮ್ಮ ದೇಶದ
ಆರ್ಥಿಕತೆಯಲ್ಲೇ ಉಳಿಸಿಕೊಳ್ಳುವುದು ಅವರ ಉದ್ದೇಶ.
ಜನಸಂಖ್ಯಾ ಸಮತೋಲನ: ಕೆಲವು ಗಲ್ಫ್ ರಾಷ್ಟ್ರಗಳಲ್ಲಿ (ಉದಾ: ಕತಾರ್, ಯುಎಇ) ಸ್ಥಳೀಯರಿಗಿಂತ ವಿದೇಶಿಯರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಸರಿದೂಗಿಸಲು ಈ ಮೀಸಲಾತಿ ಅನಿವಾರ್ಯವಾಗಿದೆ.
ಭಾರತೀಯರ ಮೇಲಾಗುವ ಪರಿಣಾಮಗಳು:-
ಭಾರತೀಯರು, ವಿಶೇಷವಾಗಿ ಕನ್ನಡಿಗರು (ಕರಾವಳಿ ಭಾಗದವರು) ಹೆಚ್ಚಿನ ಸಂಖ್ಯೆಯಲ್ಲಿ ಗಲ್ಫ್‌ನಲ್ಲಿ ನೆಲೆಸಿದ್ದಾರೆ. ಈ ನೀತಿಯಿಂದಾಗಿ ಹಲವಾರು ಜನರು ಉದ್ಯೋಗ ಕಳೆದುಕೊಳ್ಳುತಿದ್ದಾರೆ.
* ಕಡಿಮೆ ಕೌಶಲ್ಯದ ಉದ್ಯೋಗಗಳಿಗೆ ಕುತ್ತು: ಚಾಲಕರು, ಗುಮಾಸ್ತರು, ಸೇಲ್ಸ್ ಮ್ಯಾನ್‌ಗಳು, ರಿಸೆಪ್ಷನಿಸ್ಟ್ ಮುಂತಾದ ಕಡಿಮೆ ಮತ್ತು ಮಧ್ಯಮ
ಕೌಶಲ್ಯದ ಉದ್ಯೋಗಗಳು ಈಗ ಸ್ಥಳೀಯರ ಪಾಲಾಗುತ್ತಿವೆ.
* ವೀಸಾ ನಿಯಮಗಳಲ್ಲಿ ಬಿಗುವು: ಹೊಸ ವೀಸಾಗಳನ್ನು ಪಡೆಯುವುದು
ಮತ್ತು ಹಳೆಯ ವೀಸಾಗಳನ್ನು ನವೀಕರಿಸುವುದು ಈಗ ದುಬಾರಿ ಮತ್ತು ಕಷ್ಟಕರವಾಗಿದೆ.
* ಅನಿಶ್ಚಿತತೆ: ದಶಕಗಳಿಂದ ಅಲ್ಲೇ ನೆಲೆಸಿರುವ ಕುಟುಂಬಗಳಿಗೆ
ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ.
ಮುಂದಿನ ದಾರಿ ಏನು?
ಗಲ್ಫ್ ದೇಶಗಳ 'ಉದ್ಯೋಗ ಮೀಸಲಾತಿ' ನೀತಿಯು ಭಾರತೀಯ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಸ್ಥಳೀಯರು ಸಹ ಉನ್ನತ ವಿದ್ಯಾಭ್ಯಾಸಗಳನ್ನು ಪಡೆಯುತಿದ್ದಾರೆ. ಮುಂಬರುವ
ದಿನಗಳಲ್ಲಿ ತಂತ್ರಜ್ನಾನ ಕ್ಷೇತ್ರದಲ್ಲಿ ಮೀಸಲಾತಿ ಬರುವ ದಿನಗಳು ದೂರವಿಲ್ಲ. ಈಗಾಗಲೇ ಒಮಾನಿನ ತೈಲ
ಕಂಪನಿಗಳಲ್ಲಿ ಬಹುತೇಕ ಸ್ಥಳೀಯರೇ ಕೆಲಸ ಮಾಡುತಿದ್ದಾರೆ. ಗಲ್ಫ್ ರಾಷ್ಟ್ರಗಳ ಈ ನಿರ್ಧಾರವು ಅವರ ದೇಶದ
ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ. ಹಾಗಂತ ಗಲ್ಫ್ ಬಾಗಿಲು ಸಂಪೂರ್ಣ ಮುಚ್ಚಿದೆ ಎಂದರ್ಥವಲ್ಲ. ನುರಿತ
ಕೆಲಸಗಾರರಿಗೆ ಬೇಡಿಕೆ: ಇಂಜಿನಿಯರ್‌ಗಳು, ವೈದ್ಯರು, ಐಟಿ ತಜ್ಞರು, ಮತ್ತು ತಾಂತ್ರಿಕ ಕೌಶಲ್ಯವುಳ್ಳವರಿಗೆ (Skilled Labour) ಈಗಲೂ ಅಲ್ಲಿ ವಿಪುಲ ಅವಕಾಶಗಳಿವೆ. ಅಲ್ಲಿ ಉದ್ಯೋಗ ಅರಸುವವರು ಕೇವಲ ಸಾಂಪ್ರದಾಯಿಕ ಕೆಲಸಗಳನ್ನು
ಅವಲಂಬಿಸದೆ, ಆಧುನಿಕ ತಂತ್ರಜ್ಞಾನ ಮತ್ತು ವಿಶೇಷ ಕೌಶಲ್ಯಗಳನ್ನು ಕಲಿಯುವುದು ಅತ್ಯಗತ್ಯ. ಗಲ್ಫ್ ರಾಷ್ಟ್ರಗಳಲ್ಲಿನ 'ಉದ್ಯೋಗ ಮೀಸಲಾತಿ' ಒಂದು ತಾತ್ಕಾಲಿಕ ಅಲೆಯಲ್ಲ, ಇದೊಂದು ಕಾಯಂ ಬದಲಾವಣೆ. ಇದನ್ನು ಸವಾಲಾಗಿ
ಸ್ವೀಕರಿಸಿ, ಭಾರತೀಯ ಯುವಕರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಗಲ್ಫ್
ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯ.
ಲೇಖಕರು:
ಪಿ.ಎಸ್. ರಂಗನಾಥ
ಮಸ್ಕತ್, ಒಮಾನ್ ರಾಷ್ಟ್ರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ