ಚೈನಾ ಪ್ರವಾಸದ ಕಥೆಗಳು ಭಾಗ ೨
ಚೀನಾದಲ್ಲಿ ಯಾರೂ ಭೂಮಿಯ "ಒಡೆಯರಾಗಲು" ಸಾಧ್ಯವಿಲ್ಲ!
ಹೌದು, ಇದು ನಂಬಲಾಗದ ಸತ್ಯ. ಹೀಗಾಗಿ ಇಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಅಂತಹ ದೊಡ್ಡ ಮಟ್ಟದಲ್ಲಿಲ್ಲ, ಇಲ್ಲಿನ ಸರ್ಕಾರದ ವ್ಯವಸ್ಥೆಯ ಪ್ರಕಾರ, ದೇಶದ ಯಾವುದೇ ಭಾಗದ ನೆಲದ ಮೇಲೂ ಯಾವುದೇ ಒಬ್ಬ ವ್ಯಕ್ತಿಗೆ ಖಾಸಗಿ ಮಾಲೀಕತ್ವದ (Private Ownership) ಹಕ್ಕು ಇರುವುದಿಲ್ಲ. ನಗರ ಪ್ರದೇಶಗಳಲ್ಲಿನ ಎಲ್ಲಾ ಭೂಮಿಯು ನೇರವಾಗಿ ಸರ್ಕಾರಕ್ಕೆ ಸೇರಿರುತ್ತದೆ. ಹಳ್ಳಿಗಳಲ್ಲಿನ ಕೃಷಿ ಭೂಮಿಯು ಅಲ್ಲಿನ ಸ್ಥಳೀಯ ಗ್ರಾಮೀಣ ಸಮುದಾಯಗಳಿಗೆ (Village Collectives) ಸೇರಿರುತ್ತದೆ. ಚೀನಾದಲ್ಲಿ ಒಬ್ಬ ಪ್ರಜೆ ಮನೆ ಅಥವಾ ಫ್ಲ್ಯಾಟ್ ಕೊಂಡುಕೊಂಡಾಗ, ಅವರು ಕೇವಲ ಆ ಕಟ್ಟಡದ ಮಾಲೀಕರಾಗುತ್ತಾರೆಯೇ ಹೊರತು, ಆ ಕಟ್ಟಡವಿರುವ ನೆಲದ ಮಾಲೀಕರಲ್ಲ. ವಸತಿ ಉದ್ದೇಶಗಳಿಗಾಗಿ ಸರ್ಕಾರವು ಗರಿಷ್ಠ 70 ವರ್ಷಗಳ ಅವಧಿಗೆ ಗುತ್ತಿಗೆ (Lease) ಆಧಾರದ ಮೇಲೆ "ಭೂಮಿ ಬಳಕೆಯ ಹಕ್ಕನ್ನು" ಮಾರಾಟ ಮಾಡುತ್ತದೆ (ವಾಣಿಜ್ಯ ಉದ್ದೇಶಗಳಿಗೆ ಇದು 40 ರಿಂದ 50 ವರ್ಷಗಳು ಮಾತ್ರ). ನಿಯಮಗಳ ಪ್ರಕಾರ, 70 ವರ್ಷಗಳ ಅವಧಿ ಮುಗಿದ ನಂತರ ನಿಗದಿತ ಶುಲ್ಕ ಪಾವತಿಸಿ ಅದನ್ನು ನವೀಕರಿಸಿಕೊಳ್ಳಬೇಕು ಅಥವಾ ಸರ್ಕಾರ ಆ ಭೂಮಿಯನ್ನು ಮರಳಿ ಪಡೆಯಬಹುದು. ಮನೆ ಕಟ್ಟಲು ಸಿಗುವುದು ಕೇವಲ "ಬಳಕೆಯ ಹಕ್ಕು" (Land Use Rights)
ಭಾರತದಲ್ಲಿ ನಗರದಲ್ಲಿರುವವರು ಹಳ್ಳಿಗೆ ಹೋಗಿ ಜಮೀನು ಕೊಂಡು ಕೃಷಿ ಮಾಡುವ ಅಥವಾ ತೋಟದ ಮನೆ ಕಟ್ಟುವ ಸ್ವಾತಂತ್ರ್ಯವಿದೆ. ಆದರೆ ಚೀನಾದಲ್ಲಿ ಇದು ಅಸಾಧ್ಯ: ಹಳ್ಳಿಯ ರೈತರಿಗೆ ಕೃಷಿ ಮಾಡಲು ಸರ್ಕಾರವು 30 ವರ್ಷಗಳ ಅವಧಿಗೆ ಜಮೀನನ್ನು ಗುತ್ತಿಗೆಗೆ ನೀಡುತ್ತದೆ. ಯಾವುದೇ ಒಬ್ಬ ನಗರದ ನಿವಾಸಿ ಅಥವಾ ಹೊರಗಿನ ವ್ಯಕ್ತಿ ಹಳ್ಳಿಗೆ ಹೋಗಿ ಕೃಷಿ ಭೂಮಿಯನ್ನು ಕೊಳ್ಳಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ರೈತರು ತಮಗೆ ನೀಡಿದ ಕೃಷಿ ಭೂಮಿಯಲ್ಲಿ ಕೃಷಿಯನ್ನೇ ಮಾಡಬೇಕು. ಅದನ್ನು ರಿಯಲ್ ಎಸ್ಟೇಟ್ ಆಗಿ ಬದಲಾಯಿಸುವ ಅಥವಾ ಅಲ್ಲಿ ತಾವೇ ಸ್ವತಃ ದೊಡ್ಡ ಮನೆ/ಫ್ಯಾಕ್ಟರಿ ಕಟ್ಟುವ ಅಧಿಕಾರ ಅವರಿಗಿರುವುದಿಲ್ಲ
ಚೀನಾದಲ್ಲಿ ಭೂಮಿಯ ಮಾಲೀಕತ್ವದ ವಿಷಯದಲ್ಲಿ ಭಾರತಕ್ಕೂ ಮತ್ತು ಚೀನಾಕ್ಕೂ ಆಕಾಶ ಭೂಮಿಯ ವ್ಯತ್ಯಾಸವಿದೆ. ಚೀನಾದಲ್ಲಿರುವ ಇಂತಹ ಕಠಿಣ ಕಾನೂನು ಭಾರತಕ್ಕೆ ಬಂದರೆ ಜನ ಯಾವ ರೀತಿ ಸ್ವೀಕರಿಸುತ್ತಾರೆ ಯೋಚಿಸಿ ನೋಡಿ? ಇಂತಹ ಕಾನೂನಿನ ಕಾರಣದಿಂದ, ಚೈನಾ ದೇಶದಲ್ಲಿ ಅಭಿವೃದ್ದಿಗಾಗಿ ಭೂಮಿವಶಪಡಿಸಿಕೊಳ್ಳಲು ಸುಲಭವಾಗಿದೆ, ಯಾವುದೇ ಯೋಜನೆಯಾದರು ಅಂದುಕೊಂಡ ಸಮಯದಲ್ಲಿ ಮುಗಿಯಲು ಸಾಧ್ಯವಾಗಿದೆ. ಭೂಮಿ ವಶಪಡಿಸಿಕೊಳ್ಳುವ ಸಮಯದಲ್ಲಿ ಜನರ ಪ್ರತಿಭಟನೆಗೆ ಅವಕಾಶವೇ ಇಲ್ಲ.
ಚೀನಾದಲ್ಲಿ ಹುಕೌ (hukou) ಎಂಬ ಗೃಹನೋಂದಣಿ ವ್ಯವಸ್ಥೆ:
ನಮ್ಮ ಭಾರತದೇಶದಲ್ಲಿ ನಾವು ಎಲ್ಲಿ ಬೇಕಾದರೂ ಹೋಗಿ ನೆಲೆಸಬಹುದು, ಉದ್ಯೋಗ ಮಾಡಬಹುದು. ಹೀಗೆ ಸ್ಥಳ ಬದಲಾಯಿಸಿದ ಮೇಲೆ, ನಮ್ಮ ಸರ್ಕಾರದ ದಾಖಲೆಗಳಲ್ಲಿ ನಾವು ವಿಳಾಸವನ್ನು ಬದಲಾಯಿಸುವುದಿಲ್ಲ. ಆಧಾರ್ ಕಾರ್ಡ್, ಪಾಸ್ ಪೋರ್ಟ್ ಹೀಗೆ ಎಲ್ಲಾ ದಾಖಲೆಗಳಲ್ಲಿ ನಾವು ಪ್ರಸ್ತುತ ವಾಸ ಮಾಡುವ ಸ್ಥಳ ನಮೂದಾಗಿರುವುದಿಲ್ಲ. ಬಹುತೇಕ ಜನರ ದಾಖಲೆಗಳಲ್ಲಿ ಹಳೆಯ ವಿಳಾಸವೇ ಇರುತ್ತದೆ. ಚೀನಾದಲ್ಲಿ ಒಬ್ಬ ವ್ಯಕ್ತಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಿ ನೆಲೆಸಲು ಮತ್ತು ಅಧಿಕೃತವಾಗಿ ಕೆಲಸ ಮಾಡಲು ಸರ್ಕಾರದ ಒಂದು ರೀತಿಯ ಅನುಮತಿ ಅಥವಾ ನೋಂದಣಿಯ ಅಗತ್ಯವಿದೆ. ಈ ವ್ಯವಸ್ಥೆಯನ್ನು ಚೀನಾದಲ್ಲಿ "ಹುಕೌ" (Hukou) ಎಂದು ಕರೆಯಲಾಗುತ್ತದೆ. ಚೀನಾದ ಕೌಟುಂಬಿಕ ನೋಂದಣಿ (Household Registration) ವ್ಯವಸ್ಥೆಯಾಗಿದೆ. ಪ್ರತಿಯೊಬ್ಬ ಪ್ರಜೆಗೂ ಅವರು ಹುಟ್ಟಿದ ಅಥವಾ ಅವರ ಪೋಷಕರು ವಾಸಿಸುವ ಸ್ಥಳದ ಆಧಾರದ ಮೇಲೆ ಗ್ರಾಮೀಣ ಅಥವಾ ನಗರ 'ಹುಕೌ' ನೀಡಲಾಗುತ್ತದೆ. ಒಬ್ಬ ವ್ಯಕ್ತಿ ತನ್ನ ನೊಂದಾಯಿತ ನಗರವನ್ನು ಬಿಟ್ಟು ಬೇರೆ ನಗರದಲ್ಲಿ ಕೆಲಸ ಮಾಡಲು ಹೋದರೆ, ಅವರು ಆ ಹೊಸ ನಗರದಲ್ಲಿ ತಾತ್ಕಾಲಿಕ ನಿವಾಸ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು.
ಭೌತಿಕವಾಗಿ ಪ್ರಯಾಣಿಸಿ ಕೆಲಸ ಮಾಡುವುದು ಸಾಧ್ಯವಿದ್ದರೂ, ಸ್ಥಳೀಯ ನಗರದ 'ಹುಕೌ' ಇಲ್ಲದಿದ್ದರೆ ಅವರನ್ನು "ವಲಸೆ ಕಾರ್ಮಿಕರು" (Floating population) ಎಂದು ಪರಿಗಣಿಸಲಾಗುತ್ತದೆ. ಇವರಿಗೆ ಆ ಹೊಸ ನಗರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಸಬ್ಸಿಡಿ ದರದಲ್ಲಿ ವೈದ್ಯಕೀಯ ಸೌಲಭ್ಯ, ಮನೆ ಖರೀದಿಸುವ ಹಕ್ಕು ಮತ್ತು ಪಿಂಚಣಿಯಂತಹ ಸಾಮಾಜಿಕ ಭದ್ರತೆಗಳು ಸಿಗುವುದಿಲ್ಲ. ಸ್ಥಳೀಯ ಸಾರ್ವಜನಿಕ ಸೇವೆಗಳು (ಶಾಲೆ, ಆರೋಗ್ಯ ಸೇವೆ, ಕೆಲವು ಸಾಮಾಜಿಕ ಕಲ್ಯಾಣ ಯೋಜನೆಗಳು ಇತ್ಯಾದಿ) ಪಡೆಯಲು ನಿರ್ಬಂಧಗಳು ಇವೆ
ಬೃಹತ್ ನಗರಗಳಲ್ಲಿ ಹುಕೌ ಪಡೆಯುವುದಕ್ಕೆ ಕಠಿಣ ನಿಯಮವಿದೆ. ಬೀಜಿಂಗ್, ಶಾಂಘೈ, ಮತ್ತು ಶೆನ್ಜೆನ್ನಂತಹ ದೊಡ್ಡ ನಗರಗಳಿಗೆ ಹೋಗಿ ಕೆಲಸ ಮಾಡುವುದು ಮತ್ತು ಅಲ್ಲಿನ ಸ್ಥಳೀಯ ಹುಕೌ ಪಡೆಯುವುದು ಅತ್ಯಂತ ಕಷ್ಟಕರ. ಅಲ್ಲಿ ಅಂಕ-ಆಧಾರಿತ (Point-based) ಕಟ್ಟುನಿಟ್ಟಾದ ಕೋಟಾ ವ್ಯವಸ್ಥೆ ಇದೆ. ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ನಗರೀಕರಣವನ್ನು ಉತ್ತೇಜಿಸಲು ಚೀನಾ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ನಗರಗಳಲ್ಲಿ ಈ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದೆ. ಆದರೆ ದೊಡ್ಡ ನಗರಗಳಲ್ಲಿ ನಿಯಮಗಳು ಇನ್ನೂ ಕಠಿಣವಾಗಿಯೇ ಮುಂದುವರಿದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ ಪ್ರಯಾಣಿಸಲು ಅನುಮತಿ ಬೇಕಿಲ್ಲವಾದರೂ, ಇನ್ನೊಂದು ನಗರದಲ್ಲಿ ಅಧಿಕೃತವಾಗಿ ಕೆಲಸ ಮಾಡಲು, ನೆಲೆಸಲು ಮತ್ತು ಎಲ್ಲಾ ನಾಗರಿಕ ಸೌಲಭ್ಯಗಳನ್ನು ಪಡೆಯಲು ಸ್ಥಳೀಯ ಆಡಳಿತದ ಅನುಮತಿ (ನೋಂದಣಿ) ಕಡ್ಡಾಯವಾಗಿದೆ.
ಚೀನಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ರಾಂತಿ:
ಚೈನಾದಲ್ಲಿ ಒಂದು ಕಾಲಘಟ್ಟದ್ದಲ್ಲಿ ಸಾರ್ವಜನಿಕವಾಗಿ ದೇವರ ಪೂಜೆ, ದೇವಸ್ಥಾನ ಇವೆಲ್ಲವನ್ನೂ ನಿರ್ಭಂಧಿಸಲಾಗಿತ್ತು. ಚೀನಾದ ಇತಿಹಾಸದಲ್ಲಿ, ವಿಶೇಷವಾಗಿ ೧೯೬೬ ರಿಂದ ೧೯೭೬ ರ ನಡುವಿನ ದಶಕದಲ್ಲಿ ಸಾರ್ವಜನಿಕವಾಗಿ ದೇವರ ಪೂಜೆ, ದೇವಸ್ಥಾನಗಳು, ಚರ್ಚ್ಗಳು ಮತ್ತು ಮಸೀದಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ಘಟ್ಟವನ್ನು ಇತಿಹಾಸದಲ್ಲಿ 'ಸಾಂಸ್ಕೃತಿಕ ಕ್ರಾಂತಿ' (Cultural Revolution) ಎಂದು ಕರೆಯಲಾಗುತ್ತದೆ.
೧೯೪೯ ರಲ್ಲಿ ಮಾವೋ ತ್ಸೆತುಂಗ್ (Mao Zedong) ನೇತೃತ್ವದಲ್ಲಿ ಕಮ್ಯುನಿಸ್ಟ್ ಪಕ್ಷವು ಚೀನಾದಲ್ಲಿ ಅಧಿಕಾರಕ್ಕೆ ಬಂದಿತು. ಕಮ್ಯುನಿಸ್ಟ್ ಸಿದ್ಧಾಂತದ ಪಿತಾಮಹ ಕಾರ್ಲ್ ಮಾರ್ಕ್ಸ್ನ "ಧರ್ಮವು ಜನಸಾಮಾನ್ಯರ ಪಾಲಿನ ಅಫೀಮು" ಎಂಬ ತತ್ವವನ್ನು ಚೀನಾ ಸರ್ಕಾರ ಅಳವಡಿಸಿಕೊಂಡಿತು. ಸರ್ಕಾರವು ಅಧಿಕೃತವಾಗಿ 'ನಾಸ್ತಿಕತೆ'ಯನ್ನು (Atheism) ಉತ್ತೇಜಿಸಲು ಪ್ರಾರಂಭಿಸಿತು. ಆರಂಭಿಕ ವರ್ಷಗಳಲ್ಲಿ ಧರ್ಮದ ಮೇಲೆ ನಿಯಂತ್ರಣವಿದ್ದರೂ, ಅದು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿರಲಿಲ್ಲ. ೧೯೬೬ ರಲ್ಲಿ ಮಾವೋ ತ್ಸೆತುಂಗ್ ಚೀನಾದಿಂದ ಹಳೆಯ ಸಂಪ್ರದಾಯಗಳನ್ನು ಬೇರುಸಹಿತ ಕಿತ್ತುಹಾಕಲು 'ಸಾಂಸ್ಕೃತಿಕ ಕ್ರಾಂತಿ'ಯನ್ನು ಪ್ರಾರಂಭಿಸಿದರು. ಇದು ಚೀನಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಅತ್ಯಂತ ಒಂದು ಪ್ರಮುಖ ಘಟ್ಟವಾಗಿತ್ತು.
೧೯೭೬ ರಲ್ಲಿ ಮಾವೋ ತ್ಸೆತುಂಗ್ ನಿಧನದೊಂದಿಗೆ ಸಾಂಸ್ಕೃತಿಕ ಕ್ರಾಂತಿ ಕೊನೆಗೊಂಡಿತು. ತರುವಾಯ ಅಧಿಕಾರಕ್ಕೆ ಬಂದ ಡೆಂಗ್ ಶಿಯಾವೋಪಿಂಗ್ (Deng Xiaoping) ಕೆಲವು ಸುಧಾರಣೆಗಳನ್ನು ತಂದರು. ೧೯೮೨ ರಲ್ಲಿ ಚೀನಾ ಸರ್ಕಾರವು 'ಸಂವಿಧಾನದ ೩೬ನೇ ವಿಧಿ'ಯ ಮೂಲಕ ನಾಗರಿಕರಿಗೆ "ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯ"ವನ್ನು ಮರುಸ್ಥಾಪಿಸಲಾಯಿತು. ಇಂದು ಚೀನಾದಲ್ಲಿ ಧರ್ಮವನ್ನು ಆಚರಿಸಲು ಅವಕಾಶವಿದ್ದರೂ, ಅದು ಸರ್ಕಾರದ ಕಟ್ಟುನಿಟ್ಟಿನ ನಿಯಂತ್ರಣದಲ್ಲಿದೆ. ಸರ್ಕಾರವು ಬೌದ್ಧಧರ್ಮ, ಟಾವೋ ಧರ್ಮ, ಇಸ್ಲಾಂ, ಕ್ಯಾಥೋಲಿಕಿಸಂ ಮತ್ತು ಪ್ರಾಟೆಸ್ಟಾಂಟಿಸಂ ಎಂಬ ಕೇವಲ ಐದು ಧರ್ಮಗಳನ್ನು ಮಾತ್ರ ಅಧಿಕೃತವಾಗಿ ಗುರುತಿಸುತ್ತದೆ. ಪ್ರತಿಯೊಂದು ಧಾರ್ಮಿಕ ಚಟುವಟಿಕೆಯು ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಮತ್ತು ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಹೊಸ ದೇವಸ್ಥಾನ ಅಥವಾ ಪ್ರಾರ್ಥನಾ ಮಂದಿರಗಳನ್ನು ಕಟ್ಟುವಂತಿಲ್ಲ.
ಸಾರ್ವಜನಿಕ ಸುರಕ್ಷತೆ:
ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಚೀನಾದ ಅನೇಕ ನಗರಗಳು ಸುರಕ್ಷಿತವೆಂದು ಹೇಳಬಹುದು. ಪ್ರತಿ ರಸ್ತೆ, ಬೀದಿಗಳ ಕೆಲವೇ ಮೀಟರ್ ಗಳ ಅಂತರದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇವೆ, ನಗರಗಳಲ್ಲಿ ಹೆಚ್ಚಿನ ಪ್ರಮಾಣದ ಸಿಸಿಟಿವಿ (CCTV) ಕ್ಯಾಮೆರಾಗಳ ಬಳಕೆ ಇದೆ. ಪೊಲೀಸ್ ವ್ಯವಸ್ಥೆ ವ್ಯಾಪಕವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳು ಕಟ್ಟುನಿಟ್ಟಾಗಿವೆ. ಒಟ್ಟಾರೆ China ದೇಶವನ್ನು ಅನೇಕ ಇತರ ದೊಡ್ಡ ದೇಶಗಳೊಂದಿಗೆ ಹೋಲಿಸಿದರೆ ಬೀದಿ ಅಪರಾಧ (street crime) ಕಡಿಮೆ ಇರುವ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ದರೋಡೆ, ಸಾರ್ವಜನಿಕ ಸ್ಥಳಗಳಲ್ಲಿ ಹಲ್ಲೆ, ಮನೆ ಕಳ್ಳತನ, ಶಸ್ತ್ರಾಸ್ತ್ರ ಬಳಸಿ ನಡೆಯುವ ಅಪರಾಧಗಳು ಬಹಳ ಕಡಿಮೆ. ರಾತ್ರಿಯಲ್ಲಿಯೂ ಅನೇಕ ನಗರಗಳಲ್ಲಿ ಜನರು ಸುರಕ್ಷಿತವಾಗಿ ಓಡಾಡುತ್ತಾರೆ. ಸಾಮಾನ್ಯ ನಾಗರಿಕರಿಗೆ ಕಾಣುವ ಬೀದಿ ಅಪರಾಧಗಳು ತುಲನಾತ್ಮಕವಾಗಿ ಕಡಿಮೆ. ಆನ್ಲೈನ್ ಮತ್ತು ಹಣಕಾಸು ವಂಚನೆಗಳು ಅಲ್ಲಲ್ಲಿ ನಡೆಯುತ್ತವಂತೆ. ಅಪರಾಧಕ್ಕೆ, ಶಿಕ್ಷೆಗಳು ಕಠಿಣವಾಗಿರುವುದರಿಂದ ಕೆಲವು ರೀತಿಯ ಅಪರಾಧಗಳು ಕಡಿಮೆ ಇರಲು ಕಾರಣವಾಗಿರಬಹುದು. ಆದರೆ ವ್ಯಾಪಕ ನಿಗಾವ್ಯವಸ್ಥೆ, ಗೌಪ್ಯತೆ ಮತ್ತು ಮಾನವ ಹಕ್ಕುಗಳ ಕುರಿತಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ಮತ್ತು ಟೀಕೆಗಳೂ ನಾವು ಕಾಣಬಹುದು. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಚೀನಾದ ಅನೇಕ ನಗರಗಳು ಸುರಕ್ಷಿತವೆಂದು ಪರಿಗಣಿಸಲ್ಪಟ್ಟರೂ, ಅಪರಾಧ ನಿಯಂತ್ರಣಕ್ಕಾಗಿ ಅನುಸರಿಸುವ ವಿಧಾನಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ನಡುವಿನ ಸಮತೋಲನದ ಬಗ್ಗೆ ವಿವಿಧ ಅಭಿಪ್ರಾಯಗಳಿವೆ.
ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯ ನಿರ್ಮಾಣ ವಿಚಾರದಲ್ಲಿ, ಸುರಕ್ಷತೆಗೆ ಅತಿ ಪ್ರಮುಖ ಆದ್ಯತೆಯನ್ನು ಇಲ್ಲಿನ ಆಡಳಿತ ನೀಡುತ್ತದೆ. ಉದಾಹರಣೆಗೆ, ಒಂದು ರಸ್ತೆಯಲ್ಲಿ ಗುಂಡಿ ತೋಡುವುದು, ರಸ್ತೆ ಅಗಲೀಕರಣ ಮಾಡುವುದು, ಪಿಲ್ಲರ್ ನಿರ್ಮಿಸುವುದು, ಮೇಲು ಸೇತುವೆ ನಿರ್ಮಾಣ ಇಂತಹ ಯಾವುದೇ ಕಾಮಗಾರಿಗಳಲ್ಲಿ, ಬ್ಯಾರಿಕೇಡ್ ಹಾಕುವುದು, ಎಚ್ಚರಿಕೆ ಸೂಚನ ಫಲಕಗಳು, ದೂಳೂ ಹರಡದಂತೆ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಕೆಲವೆಡೆ ದೂಳೂ ಹರಡದಂತೆ, ಆ ತಡೆಗೋಡೆಗಳ ಮೇಲೆ ಹೊದಿಕೆ ಹಾಕಿ ಅದಕ್ಕೆ ನೀರನ್ನು ಸಿಂಪಡಿಸುತ್ತಾರೆ, ಕಾಮಗಾರಿ ಸಮಯದಲ್ಲಿ ಎದ್ದೇಳುವ ದೂಳನ್ನು ಈ ಹೋದಿಕೆಗಳು ತಡೆಯುತ್ತವೆ. ಯಾವುದೇ ಕೆಲಸಗಾರ, ರಕ್ಷಣಾ ಸಾಮಗ್ರಿಗಳಿಲ್ಲದೆ, ಅಲ್ಲಿ ಕೆಲಸ ಮಾಡುವಂತಿಲ್ಲ, ಅದು ಕಂಡು ಬಂದರೆ, ಆ ಕಂಪನಿಗೆ ದಂಡ ವಿಧಿಸಲಾಗುತ್ತದೆ. ಪ್ರಜೆಗಳ ಸುರಕ್ಷೆಯೂ ಸಹ ಇಲ್ಲಿನ ಸರ್ಕಾರದ ಪ್ರಮುಖ ಆದ್ಯತೆ ಆಗಿದೆ.
ಅಥಿತಿ ಸತ್ಕಾರದಲ್ಲಿ ಎತ್ತಿದ ಕೈ:-
ಸರ್ಕಾರದ ಮಾರ್ಗದರ್ಶನವೋ ಏನೋ ಗೊತ್ತಿಲ್ಲ, ವ್ಯವಹಾರಕ್ಕೆ ವಿದೇಶಿಯರು ಇಲ್ಲಿಗೆ ಬಂದರೆ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಥಿತಿ ಸತ್ಕಾರದಲ್ಲಿ ಇವರದು ಒಂದು ಕೈ ಮುಂದೇ ಎಂದು ಹೇಳಬಹುದು. ವಿದೇಶಿಯರು ಬಿಜಿನೆಸ್ ಕೊಡ್ತಾರೋ ಇಲ್ಲವೋ ಎನ್ನುವ ಚಿಂತೆಯೇ ಇಲ್ಲ. ನಮ್ಮಲ್ಲಿಗೆ ಬಂದಿದ್ದಾರೆ, ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಧರ್ಮ ಎಂದು ಭಾವಿಸಿ ಅವರ ಎಲ್ಲ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾರೆ. ವ್ಯವಹಾರದ ವಿಷಯಕ್ಕೆ ಬಂದಾಗ ಇದುವರೆಗೂ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಂಪನಿ ಮತ್ತು ಕಾರ್ಖಾನೆಗಳಿಗೆ ಭೇಟಿ ನೀಡಿದ್ದೇನೆ. ಪ್ರತಿ ಕಂಪನಿಯೂ ನಮಗಾಗಿ ವಿಶೇಷ ವ್ಯವಸ್ಥೆ ಮಾಡಿರುವುದು ಆಶ್ಚರ್ಯವೆನಿಸುತ್ತದೆ. ನಮಗೆ ಸೂಕ್ತ ಹೋಟೆಲ್ ಬುಕ್ ಮಾಡುವುದು, ನಮಗೆ ಬೇಕಾದ ಆಹಾರ ವ್ಯವಸ್ಥೆ, ನಮ್ಮನ್ನು ಕರೆದು ಕೊಂಡು ಹೋಗಲು ಸೂಕ್ತ ಮತ್ತು ದೊಡ್ಡ ಕಾರಿನ ವ್ಯವಸ್ಥೆ. ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಒಂದು ಬಾರಿ ನಮ್ಮ ಹಿರಿಯ ಸಹದ್ಯೋಗಿಯೊಬ್ಬರ ಜತೆ ಚೈನಾಗೆ ಭೇಟಿ ನೀಡಿದ್ದೆವು. ಅವರು ಮುಸ್ಲಿಂ ಧರ್ಮದವರು, ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ತಪ್ಪದೆ ನಮಾಜು ಮಾಡುವುದನ್ನ ರೂಡಿಸಿಕೊಂಡಿದ್ದಾರೆ. ನಾವು ಭೇಟಿ ಕೊಟ್ಟ ಕಛೇರಿ ಅಥವ ಕಾರ್ಖಾನೆಗಳಲ್ಲಿ, ಪ್ರಾರ್ಥನೆಗಾಗಿ ಸ್ಥಳವೇನಾದರು ಇದೆಯೇ ಎಂದು ಕೇಳಿದರೆ, ಅವರಿಗಾಗಿ ನಮಾಜು ಮಾಡಲು, ಸ್ಥಳವನ್ನು ಮಾಡಿಕೊಡೂತಿದ್ದರು. ಒಂದು ಕಾರ್ಖಾನೆಯಲ್ಲಿ ಪ್ರಾರ್ಥನಾ ಮಂದಿರವನ್ನೇ ನಿರ್ಮಿಸಿದ್ದರು. ಇದ್ಯಾಕೆ ನಿರ್ಮಿಸಿದ್ದೀರಿ? ಎಂದು ಕೇಳಿದ್ದಕ್ಕೆ, ಮಧ್ಯ ಪ್ರಾಚ್ಯರಾಷ್ಟ್ರಗಳಿಂದ ಬರುವ ಗ್ರಾಹಕರು ನಮಾಜ್ ಮಾಡಲು ಸ್ಥಳವನ್ನು ಕೇಳುತ್ತಿರುತ್ತಾರೆ, ಅದಕ್ಕಾಗಿ ಅವರಿಗೆ ಯಾವುದೇ ತೊಂದರೆಯಾಗದಂತೆ ಇರಲಿ ಎನ್ನುವ ಉದ್ದೇಶದಿಂದ ಅವರಿಗಾಗಿಯೇ ಒಂದು ಸ್ಥಳವನ್ನು ನಿರ್ಮಾಣ ಮಾಡಿದ್ದೇವೆ ಎಂದರು. ಮುಸ್ಲಿಂ ಜನಾಂಗದವರು ಹಲಾಲ್ ಊಟ ಮಾಡುವುದು ಕಡ್ಡಾಯ. ಅದಕ್ಕಾಗಿಯೇ, ಅವರು ಹೊರದೇಶಕ್ಕೆ ಹೋದಾಗ ಅ ಹಲಾಲ್ ಊಟವನ್ನು ಕೇಳುವುದು ಸಹಜ, ಅಂತಹವರಿಗಾಗಿಯೇ ಅಲ್ಲಲ್ಲಿ ಹಲಾಲ್ ಹೋಟೆಲ್ ಗಳು ಇರುವುದು ನಾವು ನೋಡಿದ್ದೇವೆ. ಅಷ್ಟೇ ಅಲ್ಲದೆ, ಹೋಟೆಲ್ ನಾಮಫಲಕಗಳಲ್ಲಿ ಹಲಾಲ್ ಎಂದು ನಮೂದಿಸಿರುವದನ್ನು ನೋಡಿದ್ದೇವೆ. ನಾನು ಸಸ್ಯಹಾರಿಯಾಗಿದ್ದರಿಂದ, ನನಗಾಗಿಯೇ, ವಿವಿಧ ರೀತಿಯ ಹಣ್ಣುಗಳನ್ನ ಖರೀದಿಸಿ ತಂದಿಡುತಿದ್ದರು. ಮತ್ತು ಯಾವುದೇ ಹೋಟೆಲ್ ಗಳಿಗೆ ಹೋದಾಗ, ಅಲ್ಲಿ ಸಸ್ಯಹಾರಿ ಊಟವನ್ನೇ ನನಗೆ ಆರ್ಡರ್ ಮಾಡುತಿದ್ದರು. ಸೇವೆ ವಿಚಾರದಲ್ಲಿ ಇಲ್ಲಿನ ಖಾಸಗಿ ಕಂಪನಿಗಳು ಸೇರಿದಂತೆ ಇಲ್ಲಿ ನಾವು ಉಳಿದು ಕೊಳ್ಳುತಿದ್ದ ಎಲ್ಲಾ ಹೋಟೆಲ್ ಗಳು ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತಿದ್ದವು. ಎಲ್ಲವೂ ಅತ್ಯುತ್ತಮ. ಇಲ್ಲಿನ ಬಹುತೇಕ ಕೆಲಸಗಾರರಿಗೆ ಇಂಗ್ಲೀಷ್ ಬರುತ್ತಿರಲಿಲ್ಲ, ಅದಕ್ಕಾಗಿ ಅವರು ಟ್ರಾನ್ಸ್ ಲೇಟರ್ ಗಳನ್ನು ಬಳಸುತ್ತಾರೆ, ಹೀಗಾಗಿ ನಾವು ಎಲ್ಲಿಯೇ ಹೋದರು, ಯಾವುದೇ ತೊಂದರೆ ಆಗುತ್ತಿರಲಿಲ್ಲ,
ಇವೆಲ್ಲವನ್ನು ಗಮನಿಸುತಿದ್ದಾಗ, ನನಗನಿಸಿದ್ದು, ಚೀನಿಯರು ಯಾವುದೇ ಕೆಲಸ ಮಾಡಿದರು ಸಂಪೂರ್ಣ ಇಚ್ಚಾ ಶಕ್ತಿಯಿಂದ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವುದನ್ನ ಗಮನಿಸಿದ್ದೇನೆ.
ಚೀನಿಯರ ಜೀವನ ಶೈಲಿ:
ಉದ್ಯೋಗಿಗಳು ಮತ್ತು ಕಾರ್ಮಿಕರ ದಿನಚರಿ:
'996' ಕಾರ್ಯ ಸಂಸ್ಕೃತಿ: ಚೀನಾದ ಅನೇಕ ಖಾಸಗಿ, ವಿಶೇಷವಾಗಿ ತಂತ್ರಜ್ಞಾನ ಕಂಪನಿಗಳಲ್ಲಿ '996' ಪದ್ಧತಿ ಬಹಳ ಸಾಮಾನ್ಯ. ಅಂದರೆ, ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ, ವಾರದಲ್ಲಿ 6 ದಿನಗಳ ಕಾಲ ಕೆಲಸ ಮಾಡುವುದು. ಹಲವಾರು ಕಛೇರಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಮಧ್ಯಾಹ್ನದ ವೇಳೆ ಚೀನಿಯರು ನಿದ್ರಿಸುವುದನ್ನ ಕಂಡು ನಾನು ದಂಗಾಗಿದ್ದೆ. ಇದೇನಿಂದು ಕಛೇರಿಯಲ್ಲಿ ಹೀಗೆಲ್ಲ ಮಲಗುತ್ತಾರೆ ಎಂದು ಆಶ್ಚರ್ಯ ಪಟ್ಟಿದ್ದೆ. ಚೀನಿಯರು ಮಧ್ಯಾಹ್ನದ ಊಟದ ನಂತರ ೩೦ ನಿಮಿಷದಿಂದ ೧ ಗಂಟೆಯವರೆಗೆ ನಿದ್ದೆ ಮಾಡುವುದನ್ನು (Nap) ಬಹಳ ಮುಖ್ಯವೆಂದು ಪರಿಗಣಿಸುತ್ತಾರೆ. ಕಾರ್ಖಾನೆ ಮತ್ತು ಕಚೇರಿಗಳಲ್ಲಿ ಊಟದ ಬಳಿಕ ತಮ್ಮ ಮೇಜಿನ ಮೇಲೆಯೇ ತಲೆಹಾಕಿ ಮಲಗುವುದು ಅಲ್ಲಿನ ಸಾಮಾನ್ಯ ದೃಶ್ಯ. ಈ ರೀತಿ ನಿದ್ದೆ ಮಾಡುವುದನ್ನು ಶಿಯುಶಿ (Xiuxi) ಎಂದು ಕರೆಯುತ್ತಾರೆ:
ವಿಶ್ವದ ಕಾರ್ಖಾನೆ ಎಂದೇ ಕರೆಸಿಕೊಳ್ಳುವ ಚೀನಾದಲ್ಲಿ, ಲಕ್ಷಾಂತರ ಕಾರ್ಮಿಕರು ಶಿಫ್ಟ್ ಆಧಾರದ ಮೇಲೆ ೧೦ ರಿಂದ ೧೨ ಗಂಟೆಗಳ ಕಾಲ ನಿರಂತರವಾಗಿ ಯಂತ್ರಗಳಂತೆ ಕೆಲಸ ಮಾಡುತ್ತಾರೆ. ಬಹುತೇಕರು ದೂರದ ಹಳ್ಳಿಗಳಿಂದ ಬಂದು, ಕಾರ್ಖಾನೆಯ ಆವರಣದಲ್ಲೇ ಇರುವ ವಸತಿಗೃಹಗಳಲ್ಲಿ (Dormitories) ವಾಸಿಸುತ್ತಾರೆ. ನಾನು ಭೇಟಿ ನೀಡಿದ ಬಹುತೇಕ ಕಾರ್ಖಾನೆಗಳಲ್ಲಿ ಇಂತಹ ವಸತಿಗೃಹಗಳಿವೆ. ಇಲ್ಲಿ ಪೋಷಕರು ಸೇರಿದಂತೆ, ಮಕ್ಕಳು ಸಹ ಬೆಳೆಯುತ್ತಾರೆ.
ವಿದ್ಯಾರ್ಥಿಗಳ ದೈನಂದಿನ ಬದುಕು:*
ದೀರ್ಘಾವಧಿಯ ಶಾಲೆ: ಚೀನಾದಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಶಾಲೆಗಳು ಬೆಳಿಗ್ಗೆ 7:30 ಕ್ಕೆ ಶುರುವಾಗಿ ಸಂಜೆ 5 ರವರೆಗೆ ಇರುತ್ತವೆ. ಶಾಲೆಯ ನಂತರ, 'ಗಾವೋಕಾವೋ' (Gaokao - ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ) ಸಿದ್ಧತೆಗಾಗಿ ರಾತ್ರಿ 9 ಅಥವಾ 10 ರವರೆಗೆ ವಿಶೇಷ ತರಗತಿಗಳಿಗೆ (Cram schools) ಹೋಗುತ್ತಾರೆ. ಯುವಜನತೆಗೆ ಆಟವಾಡಲು ಅಥವಾ ವಿರಮಿಸಲು ಹೆಚ್ಚಿನ ಸಮಯವಿರುವುದಿಲ್ಲ.
ಹಿರಿಯ ನಾಗರಿಕರ ದಿನಚರಿ:
ಒಮ್ಮೆ ನಾವು ಫೋಶನ್ ನಗರದಲ್ಲಿ ತಂಗಿದ್ದೆವು, ನಮ್ಮ ಹೋಟೇಲ್ ಬಳಿ ಒಂದು ದೊಡ್ಡ ನದಿ ಹರಿಯುತಿತ್ತು. ಅದರ ಪಕ್ಕದಲ್ಲಿಯೇ ಸುಂದರವಾದ ಉದ್ಯಾನವನವಿತ್ತು. ಮುಂಜಾನೆ ಎದ್ದು ಆ ಸ್ಥಳಕ್ಕೆ ವಾಯುವಿಹಾರಕ್ಕಾಗಿ ಹೋಗಿದ್ದೆವು. ಅಲ್ಲಿ ಹಿರಿಯನಾಗರಿಕರು ವ್ಯಾಯಾಮ ಮಾಡುವುದು, ವಾಕಿಂಗ್ ಮಾಡುವುದು ಕಂಡು ಆಶ್ಚರ್ಯವಾಗಿತ್ತು. ನಮಗೆ ಆತಿಥ್ಯವನ್ನು ನೀಡಿದ ಕಂಪನಿಯವರಲ್ಲಿ ವಿಚಾರಿಸಿದಾಗ, ಜನರು ೫ ಅಥವಾ ೬ ಗಂಟೆಗೆ ಎದ್ದು, ಸಾರ್ವಜನಿಕ ಉದ್ಯಾನವನಗಳಲ್ಲಿ (Parks) ಗುಂಪಾಗಿ ಸೇರಿ 'ತೈ ಚಿ' (Tai Chi) ವ್ಯಾಯಾಮ ಅಥವಾ ಕತ್ತಿವರಸೆ ಅಭ್ಯಾಸ ಮಾಡುವುದು ಸಾಮಾನ್ಯವೆಂದು ಹೇಳಿದರು. ಸಂಜೆಯ ವೇಳೆ ವಯಸ್ಸಾದ ಮಹಿಳೆಯರು ಚೌಕಗಳಲ್ಲಿ ಸೇರಿ 'ಸ್ಕ್ವೇರ್ ಡ್ಯಾನ್ಸ್' (Square Dancing) ಮಾಡುತ್ತಾರೆ. ಯುವಕರು ದಿನವಿಡೀ ಕೆಲಸದಲ್ಲಿರುವ ಕಾರಣ, ಮೊಮ್ಮಕ್ಕಳನ್ನು ಶಾಲೆಗೆ ಬಿಡುವುದು ಮತ್ತು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಹಿರಿಯರೇ ವಹಿಸಿಕೊಳ್ಳುತ್ತಾರೆ.
ಸಂಜೆ ಮತ್ತು ಬಿಡುವಿನ ಸಮಯ:
ಜನರು ದಿನಪೂರ್ತಿ ದುಡಿದ ನಂತರ, ಊಟ ಮತ್ತು ಮನರಂಜನೆವಿಷಯಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡುತ್ತಾರೆ. ಕೆಲಸದ ನಂತರ ಆನ್ಲೈನ್ ಶಾಪಿಂಗ್, 'ಡೌಯಿನ್' (Douyin - ಚೀನಾದ ಟಿಕ್ಟಾಕ್) ನಲ್ಲಿ ವಿಡಿಯೋಗಳನ್ನು ನೋಡುವುದು, ಅಥವಾ ವಿಚಾಟ್ (WeChat) ಬಳಸುವುದು ಅವರ ಪ್ರಮುಖ ಮನರಂಜನೆ. ವಾರಾಂತ್ಯದಲ್ಲಿ ಅಥವಾ ಬಿಡುವಿದ್ದಾಗ ಬೀದಿ ಬದಿಯ ಆಹಾರ ಮಾರುಕಟ್ಟೆಗಳಲ್ಲಿ ಸ್ನೇಹಿತರೊಂದಿಗೆ ಊಟ ಮಾಡುವುದು ಮತ್ತು ಸಮಯ ಕಳೆಯುವುದು ಚೀನಿಯರ ಜೀವನಶೈಲಿಯ ಪ್ರಮುಖ ಭಾಗವಾಗಿದೆ.
ಒಟ್ಟಾರೆಯಾಗಿ, ಚೀನಿಯರ ಜೀವನವು ಕೆಲಸ, ಸ್ಪರ್ಧೆ ಮತ್ತು ಆರ್ಥಿಕ ಭದ್ರತೆಯ ಸುತ್ತಲೇ ಸುತ್ತುತ್ತದೆ.
ಸರಣಿ ಮುಂದುವರಿಯುವುದು.......................

ಅತ್ಯುತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದ
ಪ್ರತ್ಯುತ್ತರಅಳಿಸಿ