ವಿದೇಶಿ ನೆಲದಲ್ಲಿ ಕನ್ನಡ ಸಾಹಿತ್ಯದ ಕಂಪು: ಒಮಾನ್ ಕನ್ನಡಿಗರ ‘ಕಸ್ತೂರಿ ಸಿಂಚನ’ ರಾಜ್ಯೋತ್ಸವ ವಿಶೇಷಾಂಕ ಲೋಕಾರ್ಪಣೆ
ವಿದೇಶಿ ನೆಲದಲ್ಲಿದ್ದರೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಜೀವಂತವಾಗಿರಿಸಿಕೊಂಡಿರುವ ಒಮಾನ್ ಕನ್ನಡಿಗರ ಸಾಹಿತ್ಯಾಸಕ್ತಿಗೆ ಮತ್ತೊಂದು ಸಾಕ್ಷಿಯಾಗಿ, ಒಮಾನ್ ಕನ್ನಡಿಗರು ಸಾಹಿತ್ಯ ಬಳಗದ ವತಿಯಿಂದ ಪ್ರಕಟಗೊಂಡಿರುವ ‘ಕಸ್ತೂರಿ ಸಿಂಚನ – ಒಮಾನ್ ಕನ್ನಡಿಗರು ರಾಜ್ಯೋತ್ಸವ ವಿಶೇಷಾಂಕ 2026’ ಕೃತಿ ನವೆಂಬರ್ 13, 2026ರಂದು ಮಸ್ಕತ್ ಕನ್ನಡ ಸಂಘ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಮಸ್ಕತ್ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಕೃತಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು.
ಈ ವಿಶೇಷಾಂಕದಲ್ಲಿ ಒಮಾನ್ನಲ್ಲಿ ನೆಲೆಸಿರುವ 30ಕ್ಕೂ ಹೆಚ್ಚು ಕನ್ನಡ ಬರಹಗಾರರ ಲೇಖನಗಳು, ಕಥೆಗಳು, ಕವನಗಳು, ಪ್ರವಾಸ ಕಥನಗಳು ಹಾಗೂ ಸಂದರ್ಶನಗಳು ಸೇರಿದಂತೆ ವೈವಿಧ್ಯಮಯ ಸಾಹಿತ್ಯ ಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಒಮಾನ್ ಕನ್ನಡಿಗರು ಸಾಹಿತ್ಯ ಬಳಗದ ವತಿಯಿಂದ ಪ್ರಕಟವಾಗುತ್ತಿರುವ ನಾಲ್ಕನೇ ಕೃತಿ ಇದಾಗಿದ್ದು, ಈ ಹಿಂದಿನ ಪ್ರಕಟಣೆಗಳಾದ 1)‘ಅರಬ್ಬರ ನಾಡಿನಲ್ಲಿ ಕನ್ನಡಿಗರು’, 2)‘Beyond the Horizon – Indian Voices from Oman’ ಹಾಗೂ 3) ‘ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ – 2025’ ಕೃತಿಗಳು ಓದುಗರ ಗಮನ ಸೆಳೆದಿದ್ದವು. ಈ ಎಲ್ಲ ಕೃತಿಗಳ ವಿಶೇಷತೆಯೆಂದರೆ, ಒಮಾನ್ನಲ್ಲಿ ವಾಸವಾಗಿರುವ ಕನ್ನಡಿಗರೇ ತಮ್ಮ ಅನುಭವ, ಆಲೋಚನೆ, ಸೃಜನಶೀಲತೆ ಮತ್ತು ಸಾಹಿತ್ಯ ಪ್ರತಿಭೆಯನ್ನು ಅಕ್ಷರರೂಪದಲ್ಲಿ ಅಭಿವ್ಯಕ್ತಿ ಪಡಿಸಿರುವುದು.
ಈ ಸಾಹಿತ್ಯಿಕ ಚಟುವಟಿಕೆಗಳ ಹಿಂದೆ ನಿರಂತರವಾಗಿ ಶ್ರಮಿಸುತ್ತಿರುವವರು ಕರ್ನಾಟಕ ಮೂಲದ ಶ್ರೀ ಪಿ.ಎಸ್. ರಂಗನಾಥ ಅವರು. ಕಳೆದ 20 ವರ್ಷಗಳಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಅವರು, ಕುವೈತ್ ಮತ್ತು ದುಬೈಗಳಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡು, ಪ್ರಸ್ತುತ ಒಮಾನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಅವರ ಪ್ರೀತಿ ಹಾಗೂ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಹವ್ಯಾಸವಾಗಿ ಆರಂಭವಾದ ಅವರ ಸಾಹಿತ್ಯ ಕೃಷಿ ಇಂದು ಗಮನಾರ್ಹ ಬೆಳವಣಿಗೆ ಕಂಡಿದೆ. ಅವರು ರಚಿಸಿರುವ ಲೇಖನಗಳು, ಕಥೆಗಳು ಹಾಗೂ ಕವನಗಳು ವಿವಿಧ ಕನ್ನಡ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ.
ತಮ್ಮ ವೈಯಕ್ತಿಕ ಸಾಹಿತ್ಯಾಸಕ್ತಿಯನ್ನು ಸಮುದಾಯದ ಸಾಹಿತ್ಯಿಕ ಬೆಳವಣಿಗೆಯೊಂದಿಗೂ ಬೆಸೆದುಕೊಂಡಿರುವ ಶ್ರೀ ರಂಗನಾಥ ಅವರು, ಒಮಾನ್ನಲ್ಲಿ ನೆಲೆಸಿರುವ ಕನ್ನಡ ಬರಹಗಾರರನ್ನು ಗುರುತಿಸಿ, ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಒಮಾನ್ ಕನ್ನಡಿಗರು ಸಾಹಿತ್ಯ ಬಳಗವನ್ನು ಮುನ್ನಡೆಸುತ್ತಿದ್ದಾರೆ. ಹೊಸಬರು ಮತ್ತು ಅನುಭವಿಗಳೆಂಬ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳು ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ.
ವಿದೇಶಿ ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದರೂ ಮಾತೃಭಾಷೆಯ ಮೇಲಿನ ಪ್ರೀತಿ, ಸಾಹಿತ್ಯದ ಮೇಲಿನ ಆಸಕ್ತಿ ಹಾಗೂ ಕನ್ನಡ ಸಂಸ್ಕೃತಿಯೊಂದಿಗಿನ ನಂಟನ್ನು ಉಳಿಸಿಕೊಂಡಿರುವ ಒಮಾನ್ ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ರಂಗನಾಥ ಅವರ ಪ್ರಯತ್ನಗಳು ಮಹತ್ವದ ಪಾತ್ರ ವಹಿಸಿವೆ.
ಪ್ರತಿ ವರ್ಷದ ಪ್ರಕಟಣೆಯೂ ಹಿಂದಿನದಕ್ಕಿಂತ ಹೊಸತನ ಹಾಗೂ ವೈವಿಧ್ಯತೆಯಿಂದ ಮೂಡಿಬರುತ್ತಿರುವುದು ಈ ಬಳಗದ ಸಾಹಿತ್ಯಿಕ ಪ್ರಯತ್ನದ ಹೆಗ್ಗಳಿಕೆ. ಪ್ರತಿ ಕೃತಿಯಲ್ಲೂ ಅನುಭವಸಂಪನ್ನ ಹಳೆಯ ಬರಹಗಾರರ ಜತೆಗೆ ಹೊಸ ಪ್ರತಿಭೆಗಳೂ ಸೇರ್ಪಡೆಯಾಗುತ್ತಿರುವುದು ವಿಶೇಷ. ಇದರಿಂದ ಒಮಾನ್ನ ಕನ್ನಡ ಸಾಹಿತ್ಯ ವಲಯ ವಿಸ್ತಾರಗೊಳ್ಳುವುದರ ಜತೆಗೆ ಹೊಸ ತಲೆಮಾರಿನ ಬರಹಗಾರರಿಗೂ ತಮ್ಮ ಅಭಿವ್ಯಕ್ತಿಗೆ ಸೂಕ್ತ ವೇದಿಕೆ ದೊರೆಯುತ್ತಿದೆ.
‘ಕಸ್ತೂರಿ ಸಿಂಚನ’ ವಿಶೇಷಾಂಕಕ್ಕಾಗಿ ಲೇಖನ, ಕಥೆ ಹಾಗೂ ಕವನಗಳನ್ನು ಆಹ್ವಾನಿಸಿದಾಗ ಒಮಾನ್ನ 30ಕ್ಕೂ ಹೆಚ್ಚು ಬರಹಗಾರರು ತೋರಿದ ಉತ್ಸಾಹ ಮತ್ತು ಸ್ಪಂದನೆ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಅನೇಕ ಹೊಸ ಬರಹಗಾರರು ತಮ್ಮೊಳಗಿನ ಸೃಜನಶೀಲತೆಯನ್ನು ಮೊದಲ ಬಾರಿಗೆ ಅಕ್ಷರಗಳ ಮೂಲಕ ಅಭಿವ್ಯಕ್ತಿಸಿರುವುದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕೃತಿಯ ಮೂಲಕ ಆರಂಭವಾಗುವ ಅವರ ಸಾಹಿತ್ಯ ಪಯಣ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ ಎಂಬುದು ಪಿ.ಎಸ್. ರಂಗನಾಥ ಅವರ ಆಶಯವಾಗಿದೆ.
ಸಾಮಾನ್ಯವಾಗಿ ವಿದೇಶಗಳಲ್ಲಿರುವ ಕನ್ನಡ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಾಡು, ನೃತ್ಯ ಸೇರಿದಂತೆ ಮನರಂಜನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಆದರೆ ಸಾಹಿತ್ಯ ಕ್ಷೇತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಿ, ನಿರಂತರವಾಗಿ ಪುಸ್ತಕಗಳನ್ನು ಪ್ರಕಟಿಸಿ, ಲೋಕಾರ್ಪಣೆ ಮಾಡುವ ಮೂಲಕ ಒಮಾನ್ ಕನ್ನಡಿಗರು ಸಾಹಿತ್ಯ ಬಳಗ ವಿಶಿಷ್ಟ ಮಾದರಿಯನ್ನು ರೂಪಿಸಿದೆ. ವಿದೇಶಿ ನೆಲದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಇಂತಹ ನಿರಂತರ ಪ್ರಯತ್ನಗಳು ಮಹತ್ವದ ಕೊಡುಗೆಯಾಗಿವೆ.
ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ; ಅದು ನಮ್ಮ ಸಂಸ್ಕೃತಿ, ಪರಂಪರೆ, ಭಾವನೆ ಮತ್ತು ಅಸ್ಮಿತೆಯ ಪ್ರತೀಕ. ಸಾವಿರಾರು ಮೈಲುಗಳ ದೂರದಲ್ಲಿದ್ದರೂ ಕನ್ನಡದ ಕಂಪನ್ನು ಹರಡುತ್ತಿರುವ ಒಮಾನ್ ಕನ್ನಡಿಗರ ಈ ಸಾಹಿತ್ಯಿಕ ಚಟುವಟಿಕೆಗಳು ನಿಜಕ್ಕೂ ಅಭಿನಂದನೀಯ. ವಿಶೇಷವಾಗಿ, ಹೊಸ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಶ್ರೀ ಪಿ.ಎಸ್. ರಂಗನಾಥ ಅವರ ಕನ್ನಡ ಸೇವೆ ಅನನ್ಯವಾದುದು.
‘ಕಸ್ತೂರಿ ಸಿಂಚನ’ದಂತಹ ಕೃತಿಗಳು ಒಮಾನ್ನ ಕನ್ನಡಿಗರ ಸಾಹಿತ್ಯಿಕ ಬದುಕಿನ ದಾಖಲೆಗಳಾಗಿ ಉಳಿಯುವುದರ ಜತೆಗೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಪರಿಚಯಿಸುವ ಸೇತುವೆಗಳಾಗಲಿವೆ. ವೃತ್ತಿ ಬದುಕಿನ ಜವಾಬ್ದಾರಿಗಳ ನಡುವೆಯೂ ಕನ್ನಡದ ನುಡಿ, ನೆಲ, ಸಂಸ್ಕೃತಿ ಮತ್ತು ಸಾಹಿತ್ಯಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುತ್ತಿರುವ ರಂಗನಾಥ ಅವರ ಪ್ರಯತ್ನಗಳು ಇನ್ನಷ್ಟು ಕನ್ನಡಿಗರಿಗೆ ಪ್ರೇರಣೆಯಾಗಲಿ. ವಿದೇಶಿ ನೆಲದಲ್ಲೂ ಕನ್ನಡದ ದೀಪವನ್ನು ನಿರಂತರವಾಗಿ ಬೆಳಗಿಸುತ್ತಿರುವ ಈ ಸಾಹಿತ್ಯ ಸೇವೆ ಮತ್ತಷ್ಟು ವಿಸ್ತಾರಗೊಂಡು, ಕನ್ನಡ ಸಾಹಿತ್ಯದ ಕಂಪು ಜಗದಗಲ ಪಸರಿಸಲಿ ಎಂಬ ಆಶಯದೊಂದಿಗೆ ‘ಕಸ್ತೂರಿ ಸಿಂಚನ’ದ ಹೊಸ ಸಂಚಿಕೆಗೆ ಹಾರ್ದಿಕ ಶುಭಾಶಯಗಳು.
#Oman_Kannadigaru #Muscat #Oman #Kannada #Karnataka #Bengaluru #Bangalore #kasturi_sinchana #ಕಸ್ತೂರಿ_ಸಿಂಚನ #ಪಿ_ಎಸ್_ರಂಗನಾಥ #ಒಮಾನ್_ಕನ್ನಡಿಗ


.jpeg)
ಒಮಾನ್ ಕನ್ನಡಿಗರ ಕಸ್ತೂರಿ ಸಿಂಚನ ಸುಂದರವಾಗಿ ಮೂಡಿಬಂದಿದೆ.
ಪ್ರತ್ಯುತ್ತರಅಳಿಸಿಎಲ್ಲರನ್ನೂ ಪ್ರೋತ್ಸಾಹಿಸಿ ಹೊರನಾಡಿನಲ್ಲಿ ಕನ್ನಡಿಗರು ಬರೆಯುವಂತೆ ಪ್ರೇರೇಪಿಸುತ್ತಿರುವ ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು💐🫡
ಕನ್ನಡ ಉತ್ಸವದ ಶುಭ ದಿನದಂದು, ಸಾಹಿತ್ಯ ಕೃಷಿಯಲ್ಲಿ ಮತ್ತೊಂದು ಮೈಲಿಗಲ್ಲಾಗಿ ಹೊರಬಂದಿರುವ ಕಸ್ತೂರಿ ಸಿಂಚನ ಕೃತಿಯ ಬಿಡುಗಡೆಗೆ ಶ್ರೀಯುತ ರಂಗನಾಥ್ ರವರಿಗೆ ಮತ್ತು ಎಲ್ಲ ಕವಿಗಳು , ಲೇಖಕರಿಗೆ ಅನಂತ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಕಸ್ತೂರಿಯಂತೆ ಕನ್ನಡದ ಸುಗಂಧವನ್ನು ಎಲ್ಲೆಡೆ ಪಸರಿಸಲಿರುವ ಈ ಪುಸ್ತಕವು ಓದುಗರ ಮನಸ್ಸನ್ನು ತಣಿಸಲಿ ಮತ್ತು ಸಾಹಿತ್ಯಾಸಕ್ತರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸುತ್ತೇನೆ.
ರಂಗನಾಥ್ ಸರ್, ನಮ್ಮನ್ನು ಪ್ರೋತ್ಸಾಹಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು💐
ಕಸ್ತೂರಿ ಸಿಂಚನ ಒಮಾನ್ ಕನ್ನಡಿಗರು ರಾಜ್ಯೋತ್ಸವ ವಿಶೇಷಾಂಕ ಸುಂದರವಾಗಿ ಮೂಡಿಬಂದಿದೆ.
ಪ್ರತ್ಯುತ್ತರಅಳಿಸಿಎಲ್ಲರನ್ನೂ ಬರೆಯಲು ಪ್ರೋತ್ಸಾಹಿಸಿ ಶ್ರಮವಹಿಸಿ ಪ್ರಕಟಿಸಿದ ರಂಗನಾಥ್ ರವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು
ಈ ಸಂಚಿಕೆಯಲ್ಲಿ ಭಾಗಿ ಆಗಿ ಲೇಖನ, ಕವನ,ಕಥೆ ಬರೆದ್ ಎಲ್ಲಾ ಬರಹಗಾರರಿಗೆ ಅಭಿನಂದನೆಗಳು 💐💐ಖಂಡಿತ ನಾವು ಓದಿ ಬೇರೆಯವರಿಗೂ ಈ link ನ್ನು ಕಳಿಸುವೆ. ರಂಗನಾಥ್ sir ನಿಮ್ಮ ಈ ಸೇವೆ ಹೀಗೆ ನಿರಂತರ ವಾಗಿ ಸಾಗಲಿ
ಪ್ರತ್ಯುತ್ತರಅಳಿಸಿರಂಗನಾಥ್ ಅವರೇ,
ಪ್ರತ್ಯುತ್ತರಅಳಿಸಿಎಲ್ಲಾ ಸಾಹಿತಿಗಳಿಗಿಂತ ನಿಮ್ಮ ಸಾಹಿತ್ಯ ಸೇವೆ ವಿಶಿಷ್ಟವಾಗಿದೆ; ಅದು ಕೇವಲ ಬರವಣಿಗೆಯಲ್ಲ, ಮತ್ತೊಬ್ಬ ಪ್ರತಿಭೆಗಳಿಗೆ ಒಂದು ದಾರಿ ದೀಪವಾಗಿದೆ.
ಒಬ್ಬ ಸಾಹಿತಿ ತನ್ನ ಕೃತಿಯಿಂದ ಸಾಹಿತ್ಯ ಸೃಷ್ಟಿಸುತ್ತಾನೆ; ಆದರೆ ನೀವು ಅನೇಕ ಸಾಹಿತಿಗಳ ಹುಟ್ಟಿಗೆ ಕಾರಣರಾಗುತ್ತಿದ್ದೀರಿ. ನಿಮ್ಮ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ನಿರಂತರ ಸೇವೆಯಿಂದ ಅನೇಕ ಪ್ರತಿಭೆಗಳು ತಮ್ಮ ಧ್ವನಿಯನ್ನು ಕಂಡುಕೊಳ್ಳುತ್ತಿವೆ.
ನಿಮ್ಮ ಈ ಸೇವೆ ಇನ್ನಷ್ಟು ಉಜ್ವಲವಾಗಿ ಮುಂದುವರೆಯಲಿ. ನಿಮ್ಮ ಕಾರ್ಯದ ಬೆಳಕಿನಲ್ಲಿ ಮುಂದೆ ಇನ್ನೂ ಹಲವು ಸಾಹಿತಿಗಳು ಉದಯಿಸಲಿ; ಮಸ್ಕತ್ ಕನ್ನಡ ಸಾಹಿತ್ಯ ಸಾರಸ್ವತ ಲೋಕ ನಿಮ್ಮ ಸೇವೆಗೆ ಸದಾ ಕೃತಜ್ಞವಾಗಿರಲಿದೆ.
ಅಭಿನಂದನೆಗಳು!💐💐
ಹೌದು ಸಾರ್ ನಿಮ್ಮ ಮಾತು ಅಕ್ಷರಸಹ ಸತ್ಯ. ಬರೆಯುವುದು ದೊಡ್ಡ ಮಾತಲ್ಲ ಭಾವ ಬೆಳೆಯುತ್ತೆ ಅದಕ್ಕೆ ಅಕ್ಷರ ರೂಪ ತೊಡಿಸಬಹುದು ಅದನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಬಹುದು ಆದರೆ ಅದನ್ನು ಕ್ರೂಡಿಕರಿಸಿ ಬೆಳೆಸುವುದು ನಿಜಕ್ಕು ಕಷ್ಟ ಅಂತೆಯೇ ಮತ್ತೊಬ್ಬರನ್ನು ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿ ಬೆಳೆಸುವುದು ಇನ್ನು ಕಷ್ಟ ಅದನ್ನು ನಮ್ಮ ಆತ್ಮೀಯ ರಂಗನಾಥ್ ಸಾರ್ ಸುಲಲಿತವಾಗಿ ಸುಂದರವಾಗಿ ಪೋಣಿಸಿ ಕೊಡುತ್ತಿರುವುದನ್ನು ನೋಡಿದರೆ ನಮಗೆ ಒಂದು ಸಂತೋಷವಾದರೆ ಮತ್ತೊಮ್ಮೆ ಇಷ್ಟು ದೊಡ್ಡ ಕೆಲಸದಲ್ಲಿ ನಮ್ಮ ವಯಕ್ತಿಕ ಕಾಣಿಕೆ ಇಲ್ಲವಲ್ಲ ಎನ್ನುವ ಕೊರಗು ಸಹ ಇದೆ.
ಪ್ರತ್ಯುತ್ತರಅಳಿಸಿಎಲ್ಲ ಜವಾಬ್ದಾರಿಯನ್ನು ಹೆಗಲಮೇಲೆ ಒತ್ತಂತೆ ಅದಕ್ಕೆ ತಮ್ಮ ಸಮಯ ಕೊಟ್ಟು ಇಷ್ಟು ಅದ್ಭುತವಾಗಿ ರೂಪ ಕೊಟ್ಟು ನಮ್ಮೆಲ್ಲರ ಮುಂದೆ ಇಟ್ಟಿದ್ದಾರೆ ಅವರಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಿದರು ಕಮ್ಮಿಯೇ. ನಿಸ್ವಾರ್ಥ ಮನೋಭಾವದಿಂದ ನಿರಹಂಕಾರಿಯಾಗಿ ಇದು ಕನ್ನಡಮ್ಮನ ಸೇವೆ ಎಂದು ತಿಳಿದು ಸಲ್ಲಿಸುತ್ತಿರುವ ಸೇವೆ ಕನ್ನಡಿಗರ ಮನಸಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತೆ. ಅವರ ಈ ಸೇವೆಯನ್ನು ಮಸ್ಕಟ್ ಮುಂದೆಯೂ ಸದಾ ಸ್ಮರಿಸಲಿ ಎಂದು ಪ್ರಾರ್ಥಿಸುತ್ತೇನೆ, ದೇವರು ಅವರಿಗೆ ಇನ್ನು ಹೆಚ್ಚು ಶಕ್ತಿಯನ್ನು ಕೊಟ್ಟು ಪ್ರೇರಣೆಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ 🙏🙏🙏
ಕನ್ನಡ ರಾಜ್ಯೋತ್ಸವ ವಿಶೇಷ ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ 🙏 ನಿಮ್ಮ ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.
ಪ್ರತ್ಯುತ್ತರಅಳಿಸಿನಮ್ಮ ಎಲ್ಲರ ಬರವಣಿಗೆಯನ್ನ ಗುರುತಿಸಿ, ಪ್ರೀತಿ ಇಂದ ಪ್ರೋತ್ಸಾಹಿಸಿ, ಬೆನ್ನುತಟ್ಟಿ ಮುನ್ನಡೆಸೋ ನಿಮ್ಮ ದೊಡ್ಡ ಗುಣಕ್ಕೆ ನಾವು ಯಾವತ್ತೂ ಚಿರಋಣಿ. ನಿಮ್ಮಂಥವರ ಪ್ರೋತ್ಸಾಹ ಸಿಕ್ಕಾಗ ಮನಸ್ಸಿಗೆ ಬರೆಯೋ ಹುಮ್ಮಸ್ಸು, ಕನಸುಗಳಿಗೆ ಹೊಸ ರೆಕ್ಕೆ ಬರ್ತಾವ ರೀ,
ಪ್ರತ್ಯುತ್ತರಅಳಿಸಿಈ ಕಸ್ತೂರಿ ಪರಿಮಳ ಕನ್ನಡ ನಾಡಿನ ಮೂಲೆ ಮೂಲೆಗೂ ಹರಡಲಿ. ನಿಮ್ಮ ಸಾಹಿತ್ಯ ಪಯಣ ಹಿಂಗೇ ಯಶಸ್ಸಿನ ಹೊಸ ಎತ್ತರ ಮುಟ್ಟಲಿ.
ನಮ್ಮನ್ನ ಪ್ರೀತಿಯಿಂದ ಪ್ರೋತ್ಸಾಹಿಸಿದ ನಿಮಗ್ ಮನದುಂಬಿ ಧನ್ಯವಾದಗಳು ಸರ್. ನಿಮ್ಮ ಆಶೀರ್ವಾದ, ಪ್ರೀತಿ ಮತ್ತು ಪ್ರೋತ್ಸಾಹ ಹಿಂಗೇ ನಮ್ಮ ಮೇಲಿರಲಿ.🙏
ಅಕ್ಷರಯೋಗಿ
ಪ್ರತ್ಯುತ್ತರಅಳಿಸಿಭಾವಭಿತ್ತಿಗೆ ಹಳದಿ-ಕೆಂಪಿನ ಕನ್ನಡದ ರಂಗು ಮೆತ್ತಿದಿರಿ
ಕಸ್ತೂರಿ ಸಿಂಚನದಲಿ ಮನ ಮೀಯಿಸಿ ಕಾಯಕಲ್ಪ ನೀಡಿದಿರಿ
ಮೂಕವಾಗಿ ಮಣ್ಣು ಸೇರುವ ಅನಂತ ಮಾತುಗಳಿಗೆ ಅನಂತಕಾಲದ ದನಿಯಾದಿರಿ
ಬರೆಯಲಾರೆವು ಎನ್ನುವ ಕನ್ನಡ ಬೆರಳುಗಳಿಗೆ ನವಚೇತನ ತುಂಬಿದಿರಿ
ಓದದೆಯೂ ಕಾವ್ಯಪ್ರಯೋಗ ಮಾಡಬಲ್ಲ ಓದಿದ ಕನ್ನಡಿಗರಲ್ಲಿ ಆತ್ಮವಿಶ್ವಾಸದ ಝಳಕು ಮೂಡಿಸಿದಿರಿ
ತೊರೆದ ಮಣ್ಣಿನ ಸುವಾಸನೆಯನು ದೇವಲಿಪಿಯಲಿ ಹೊರ ಹೊಮ್ಮಿಸಿದಿರಿ
ಎದೆಯಲ್ಲಿ ಬಿದ್ದ ಅಕ್ಷರಗಳನು ಸಾಸಿರ ಎದೆಗಳಲಿ ಬಿತ್ತಿದ ಅಕ್ಷರಯೋಗಿಯಾದಿರಿ
ಕನ್ನಡ ಕಾಯಕದ ದಿವಿನಾದ ಮಾದರಿಯೊಂದನು ಕಣ್ಣೆದುರು ಕಟ್ಟಿ ನಿಲ್ಲಿಸಿದಿರಿ
ರಕ್ತದಲಿ ಹರಿಯುವ ಕನ್ನಡವನು ಪುಪ್ಪಸಗಳಲಿ ತುಂಬಿದಿರಿ
ಕಂಪು ಬೀರುವ ಮೂವತ್ತು ಕುಸುಮಗಳಿಗೆ ನಲ್ಮೆಯ ಮಾಲಿಯಾದಿರಿ
ಹಣದ ಭ್ರಮೆಯ ಬದುಕಿಗೆ ಅಕ್ಷರಗಳ ಅಲೌಕಿಕ ಮೆರುಗು ನೀಡಿ ಶ್ರೀರಂಗಪಟ್ಟಣದ ರಂಗನಾದಿರಿ
ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್
"ನಮಸ್ಕಾರಗಳು,
ಪ್ರತ್ಯುತ್ತರಅಳಿಸಿ“ಕಸ್ತೂರಿ ಸಿಂಚನ ಒಮಾನ್ ಕನ್ನಡಿಗರು ರಾಜ್ಯೋತ್ಸವದ ವಿಶೇಷಾಂಕ -2026”ಈ ಒಂದು ಒಮಾನ್ ಕನ್ನಡ 'ವಿಶೇಷಾಂಕ'ವನ್ನು ಪ್ರಸ್ತುತತಾವಾಗಿ ಬಿಡುಗಡೆ ಆಗಿದ್ದಕ್ಕೆ ತುಂಬಾ ಅತ್ಯಂತ ಸಂತೋಷದ ವಿಷಯ. ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಕನ್ನಡದ ಗುಣಮಟ್ಟ, ಬದ್ಧತೆ ಮತ್ತು ಕನ್ನಡ ಮನೋಭಾವವನ್ನು ಉಳಿಸಿಕೊಂಡು ನಮ್ಮೆಲ್ಲರನ್ನು ಪ್ರೋತ್ಸಾಹಿಸಿ ಉತ್ತಮ ಬರಹ ಲೇಖನಗಳನ್ನು ಸ್ವೀಕರಿಸಿ ಒಂದು ವಿಶೇಷವಾಗಿ ವಿಶೇಷಾಂಕನಾವನ್ನು ಬಿಡುಗಡೆ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು 🙏ಕನ್ನಡದ ಭಾಷೆ ,ನಾಡು ,ನುಡಿ ,ಕೀರ್ತಿ ಎಲ್ಲೆಲ್ಲೂ ಪಸರಿಸಲಿ ಎಂದು ಹರಿಸುತ್ತೇನೆ.
ಧನ್ಯವಾದಗಳು,,
🙏ಜೈ ಭಾರತ ಜನನಿಯ ತನುಜಾತೆ ,
🙏ಜಯ ಹೇ ಕರ್ನಾಟಕ ಮಾತೆ
🙏ಜೈ ಕನ್ನಡಾಂಬೆ 🙏
ಓಮನ್ ಕನ್ನಡಿಗರಿಗಾಗಿ ಈ ಪುಸ್ತಕವನ್ನು ತಂದಿದ್ದಕ್ಕಾಗಿ ಸಂಪಾದಕರಿಗೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿಕಸ್ತೂರಿ ಸಿಂಚನ ಎಂಬ ಈ E-ಪುಸ್ತಕ ಕೇವಲ ರಾಜ್ಯೋತ್ಸವದ ವಿಶೇಷಾಂಕ ವಲ್ಲ … ಸಾಗರದಾಚೆ ಇರುವ ಒಮಾನ್ ಕನ್ನಡಿಗರ ಧ್ವನಿ.
ಪ್ರತ್ಯುತ್ತರಅಳಿಸಿಮೊಬೈಲ್ ನಲ್ಲಿಯೇ ಕಾಲ ಕಳೆಯುವ ಎಷ್ಟೋ ಜನಗಳ ಮಧ್ಯೆ ಸಾಹಿತ್ಯಕ್ಕೆ ಪ್ರಾಶಸ್ತ್ಯ ಕೊಟ್ಟು, ಕನ್ನಡ ಸಾಹಿತ್ಯವನ್ನ ಉಳಿಸಿ ಬೆಳಸುವಲ್ಲಿ ಆಸಕ್ತಿ ತೋರಿದ ಪ್ರತಿಯೊಬ್ಬ ಬರಹಗಾರರಿಗೆ ಅಭಿನಂದನೆಗಳು.
ವಿಶೇಷವಾಗಿ ಈ ವಿಶೇಷಾಂಕದ ಬಿಡುಗಡೆಗೆ ಕಾರಣರಾದ ರಂಗನಾಥ್ ಸರ್ ರವರಿಗೆ ವಿಶೇಷ ಅಭಿನಂದನೆಗಳು. ತಮ್ಮ ಮುಂದಾಳತ್ವ ಹಾಗೂ ಸಂಪಾದಕತೆಯಲ್ಲಿ ಮೂಡಿ ಬರುವ ಎಲ್ಲಾ ಪುಸ್ತಕಗಳು ನಮಗೆ ವಿಶೇಷವೇ….
ಬಳಗದ ಎಲ್ಲ ಸದಸ್ಯರನ್ನು ನೀವು ವ್ಯಕ್ತಿಗತವಾಗಿ ಸಂಪರ್ಕಿಸಿ, ಬರಹಗಳನ್ನ ಸಂಗ್ರಹಿಸಿ, ಮೊಬೈಲ್ ನಲ್ಲಿಯೇ ಪುಸ್ತಕದ ಪುಟಗಳನ್ನ ತಿರಿವಿದಷ್ಟೆ ಸುಲಭವಾಗಿ ತಿರುವಿ ಓದುವ ಹಾಗೆ ಮಾಡಿಕೊಟ್ಟು, ಓದುಗರ ಮನಸ್ಸನ್ನ ಸೆಳೆದಿದ್ದೀರಿ. ತಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ. ಮುಂದಾಳತ್ವ ವಹಿಸಿ ಕಾರ್ಯ ನಿರ್ವಹಿಸುವುದು ಅಷ್ಟು ಸುಲಭವಲ್ಲ.
ಮತ್ತೊಮ್ಮೆ ತಮಗೆ ವಿಶೇಷ ಅಭಿನಂದನಗಳು. ವಿಶೇಷಾಂಕ ಬಹಳ ಸುಂದರವಾಗಿ ಪ್ರಕಟಣೆಯಾಗಿದೆ.
ಅಕ್ಷರ ಸೇವೆಯ ಮೂಲಕ ಕನ್ನಡದ ಕಂಪನ್ನು ಪಸರಿಸುತ್ತಿರುವ ರಂಗನಾಥರಿಗೆ ಅಭಿನಂದನೆಗಳು.💐
ಪ್ರತ್ಯುತ್ತರಅಳಿಸಿಶ್ರೀ ಪಿ.ಎಸ್. ರಂಗನಾಥ ಅವರು ನಮ್ಮ ಮಸ್ಕತ್ನ ಕನ್ನಡ ಬರಹಗಾರರಿಗೆ ಸದಾ ಪ್ರೇರಣೆಯ ಚಿಲುಮೆಯಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಕನ್ನಡ ಬರಹಗಾರರನ್ನು ಒಗ್ಗೂಡಿಸಿ, ಅವರ ಸಾಹಿತ್ಯ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವುದರೊಂದಿಗೆ, ವಿದೇಶಿ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುವಲ್ಲಿ ತಾವು ಯಶಸ್ವಿಯಾಗಿದ್ದೀರ
ಓಮಾನ್ ಕನ್ನಡಿಗರ ಸಾಹಿತ್ಯ ಬಳಗದ ವತಿಯಿಂದ ಪ್ರಕಟಗೊಂಡಿರುವ ಕಸ್ತೂರಿ ಸಿಂಚನ ಓಮಾನ್ ಕನ್ನಡಿಗರು ರಾಜ್ಯೋತ್ಸವ ವಿಶೇಷಾಂಕ 2026 ವೈವಿಧ್ಯಮಯ ಲೇಖನಗಳು, ಕಥೆಗಳು, ಕವನಗಳು, ಪ್ರವಾಸ ಕಥನಗಳು ಹಾಗೂ ಸಂದರ್ಶನಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುವಂತಾಗಿದೆ.
ಕರ್ಮಭೂಮಿಯಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸಿ, ಬೆಳೆಸುವ ತಮ್ಮ ಈ ನಿರಂತರ ಅಕ್ಷರ ಸೇವೆ ನಿಜಕ್ಕೂ ಶ್ಲಾಘನೀಯ.
ಅಕ್ಷರಗಳ ಮೂಲಕ ಕನ್ನಡ ಮನಸುಗಳನ್ನು ಬೆಸೆಯುತ್ತಿರುವ ರಂಗನಾಥರೇ, ನಿಮಗಿದೋ ನಮ್ಮದೊಂದು ಹೃದಯಪೂರ್ವಕ ಸಲಾಂ
ತಮಗೂ ಹಾಗೂ ಸಮಸ್ತ ಸಾಹಿತ್ಯ ಬಳಗದ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು.💐💐
ಜೈ ಕರ್ನಾಟಕ! ಜೈ ಕನ್ನಡಾಂಬೆ!
*ಶಿವಾನಂದ ಕೋಟ್ಯಾನ್ ಕಟಪಾಡಿ*
ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು
ಮಸ್ಕತ್–ಓಮಾನ್ ಘಟಕ
ಕಸ್ತೂರಿಯ ಸಿಂಚನ ಹೆಸರೇ ಹೇಳುವಂತೆ ಪರಿಮಳದ ಕಸ್ತೂರಿಯ ಸುಗಂಧವನ್ನು, ಸುವಾಸನೆಯನ್ನು ಎಲ್ಲೆಡೆ ಪಸರಿಸುವ ಉತ್ತಮ ಕೆಲಸವನ್ನು ರಂಗನಾಥ್ ರವರು ಮಾಡುವ ಮೂಲಕ ಒಮಾನ್ ದೇಶದ ಕನ್ನಡಿಗರ ಸಾಹಿತ್ಯದ ಕಂಪನ್ನು ಎಲ್ಲೆಡೆ ಹರಡುತ್ತಿದ್ದಾರೆ. ಈ ಹೊತ್ತಗೆಯನ್ನು ಸರಿಯಾದ ಹೊತ್ತಿಗೆ ತರಲು ಅವರು ಲೇಖಕರನ್ನು ಹುರಿದುಂಬಿಸಿದ್ದಾರೆ, ಮೀರುತ್ತಿರುವ ಕಾಲದ ಪರಿದಿಗೆ ಲೇಖನಗಳನ್ನು ಹೊಂದಿಸಲು ಲೇಖಕರನ್ನು ಬೆನ್ನಟ್ಟಿದ್ದಾರೆ, ಹುರಿದುಂಬಿಸಿದ್ದಾರೆ. ಅವರ ಪರಿಶ್ರಮದ ಫಲ ನಮ್ಮ ಕಣ್ಣೆದುರಿಗಿದೆ. ಕಸ್ತೂರಿ ಸಿಂಚನ ದ ಪರಿಮಳವು ಎಲ್ಲೆಡೆ ಹರಡಲಿ ಎಂಬ ಹಾರೈಕೆ ನಮ್ಮದು.
ಪ್ರತ್ಯುತ್ತರಅಳಿಸಿಆತ್ಮೀಯ ರಂಗನಾಥ್ ಪಿ.ಎಸ್. ಅವರೇ,
ಪ್ರತ್ಯುತ್ತರಅಳಿಸಿಕನ್ನಡ ರಾಜ್ಯೋತ್ಸವ ವಿಶೇಷಾಂಕ 2026ರ ಅಂಗವಾಗಿ ಕನ್ನಡದ ವಿವಿಧ ಲೇಖನಗಳು, ಬರಹಗಳು ಹಾಗೂ ಸಾಹಿತ್ಯಿಕ ಅಭಿವ್ಯಕ್ತಿಗಳನ್ನು ಒಗ್ಗೂಡಿಸಿ, ಎಲ್ಲರಿಂದಲೂ ಬರಹಗಳನ್ನು ಸಂಗ್ರಹಿಸಿ ಒಂದು ಸುಂದರ ವಿಶೇಷಾಂಕದ ರೂಪ ನೀಡಲು ನೀವು ಮಾಡಿರುವ ಪರಿಶ್ರಮ ನಿಜಕ್ಕೂ ಅಸಾಧಾರಣ.
ಇದು ಕೇವಲ ಬರಹಗಳ ಸಂಗ್ರಹವಲ್ಲ; ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೀತಿಯಿಂದ ಬೆಸೆಯುವ ಒಂದು ಮಹತ್ವದ ಪ್ರಯತ್ನ.
ನಿಮ್ಮ ಸಮಯ, ಶ್ರಮ, ತಾಳ್ಮೆ, ಆಸಕ್ತಿ ಮತ್ತು ಕನ್ನಡದ ಮೇಲಿನ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ.
ನಿಮ್ಮ ಕೆಲಸ ಅಸಾಧಾರಣ! ಕನ್ನಡದ ಸೇವೆಯಲ್ಲಿ ನಿಮ್ಮ ಈ ನಿಸ್ವಾರ್ಥ ಪ್ರಯತ್ನ ಹೀಗೆಯೇ ಮುಂದುವರಿಯಲಿ.
ಮನಃಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು!
ಕಸ್ತೂರಿ ಸಿಂಚನ ಬಿಡುಗಡೆ ಅದ್ಬುತ ವಾಗಿತ್ತು, ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು, ಎಂಬ ಕವಿವಾಣಿಯಂತೆ , ಕಸ್ತೂರಿ ಸಿಂಚನ ರಾಜ್ಯೋತ್ಸವ ವಿಶೇಷ ಮೂಲಕ ನಮ್ಮನ್ನೆಲ್ಲ ಸಾಹಿತ್ಯ ಲೋಕಕ್ಕೆ ಕರೆದ್ಯೋದ ರಂಗನಾಥ್ sir ನಾವು ಸದಾ ಚಿರಋಣಿ 🙏🙏
ಪ್ರತ್ಯುತ್ತರಅಳಿಸಿ"ಕಸ್ತೂರಿ ಸಿಂಚನ" ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂಚಿಕೆಯ ಬಿಡುಗಡೆಯನ್ನು ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು ಬಹು ವಿಶೇಷ ವಾಗಿತ್ತು.
ಪ್ರತ್ಯುತ್ತರಅಳಿಸಿಈ ಸಂಚಿಕೆಯ ಮೂಲಕ ನಮಗೂ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಬೆಳೆಸಲು ಒಂದು ಅವಕಾಶ ಕೊಟ್ಟದ್ದಕ್ಕಾಗಿ ಶ್ರೀಯುತ ರಂಗನಾಥ ಸರ್ ಅವರಿಗೆ ಅನಂತ ಧನ್ಯವಾದಗಳು.🙏🙏
ಕಸ್ತೂರಿ ಸಿಂಚನ ಇಂತಹ ಒಂದು ದೊಡ್ಡ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು ತುಂಬಾ ಸಂತೋಷದ ವಿಷಯ ಕಸ್ತೂರಿ ಕನ್ನಡದ ಕಂಪನ್ನು ಸೋಸುವ ಹಾಗೆ ನಮ್ಮ ಕರ್ನಾಟಕ ರಾಜ್ಯೋತ್ಸವ ಮಸ್ಕತ ನಲ್ಲಿ ಆಚರಿಸುವ ದಿನದಲ್ಲಿ ಬಿಡುಗಡೆಯಾಗಿರೋದು ಇನ್ನು ಹೆಚ್ಚು ಹೆಮ್ಮೆಯ ವಿಷಯ ವಾಗಿದೆ ಇದಕ್ಕೆಲ್ಲ ಕಾರಣಭೂತರಾದ ಶ್ರೀ ರಂಗನಾಥ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಇನ್ನು ಹೆಚ್ಚು ಕಥೆ ಕಾದಂಬರಿ ಕವನ ಲೇಖನ ಇವುಗಳನ್ನೆಲ್ಲವನ್ನು ಬರೆಯಲು ಎಲ್ಲಾ ಲೇಖಕರಿಗೂ ರಂಗನಾಥ್ ಸರ್ ಅವರುಇನ್ನೂ ಹೆಚ್ಚು ಹುರಿದುಂಬಿಸುವಂಥಾಗಲಿ ಎಂದು ನಾನು ಹಾರಿಸುತ್ತೇನೆ🙏🏻🙏🏻
ಪ್ರತ್ಯುತ್ತರಅಳಿಸಿ