ಶುಕ್ರವಾರ, ಫೆಬ್ರವರಿ 27, 2015

ದೇವರು ಅಷ್ಟೊಂದು ಕ್ರೂರಿನಾ?

ಆಟ ಆಡಿ ತಡವಾಗಿ ಮನೆಗೆ ಬಂದ ಮಗನನ್ನು ಕಂಡು, ಇಷ್ಟೊತ್ತು ಎಲ್ಲಿ ಹೋಗಿದ್ದೆ ?

ಅಮ್ಮ, ಪಕ್ಕದಮನೆಗೆ ಬಂದಿದ್ದ ಆ ಹುಡುಗನ ಜೊತೆ ಆಟ ಆಡೋಕೆ ಹೋಗಿದ್ದೆ. 

ಓಹ್ ಹೌದಾ,  ನಿಮ್ಮಪ್ಪ ಬರೋ ತನಕ ಸ್ವಲ್ಪ ಹೊತ್ತು ಕಾಯ್ತ ಇರು. ಇನ್ನು ಅಡುಗೆ ಆಗಿಲ್ಲ.

ನೀನು ಯಾವಗಲು ಹೀಗೆ ಯಾಕೆ ಮಾಡ್ತೀಯ. ಮನೇಲಿ ಏನ್ ಸಾಮಾನು ಇರೋದಿಲ್ಲೆನು? ಅಪ್ಪ ತಂದ್ರೆ ಮಾತ್ರ ಅಡುಗೆ ಮಾಡೋದಾ?

ಹೌದಪ್ಪ, ಮನೆ ನಲ್ಲಿ ಯಾವ ಸಾಮಾನು ಇಲ್ಲ, ಈ ವರ್ಷ ಸಹ ಮಳೆ ಕೈ ಕೊಡ್ತು. ಬೆಳೆ ಬರಲಿಲ್ಲ. ನಿಮ್ಮಪ್ಪ ಏನಾದರು ಕೂಲಿ ಮಾಡಿಕೊಂಡು ಬಂದ್ರೆ, ಅಂಗಡಿಯಿಂದ ಸಾಮಾನು ತಂದು ಅಡುಗೆ ಮಾಡ್ತೀನಿ.

ಅಂದ್ರೆ, ಈ ಊರಿನಲ್ಲಿ ತುಂಬ ಜನರ ಮನೆಯಲ್ಲಿ ಇದೇ ಸಮಸ್ಯೆನ?

ಹೌದು, ಊರಲ್ಲಿ ಮಳೆ ಬೆಳೆ ಆಗದಿದ್ರೆ, ಇದೇ ಸಮಸ್ಯೆ ಎಲ್ಲರ ಮನೆ ಯಲ್ಲಿ ಇರುತ್ತೆ.

ಮತ್ತೆ ದೇವರು ಯಾಕಮ್ಮ ಸಹಾಯ ಮಾಡಲ್ಲ, ಜನರ ಕಷ್ಟ ನಿವಾರಿಸೋಕೆ ದೇವರು ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡ್ತಾರೆ ಅಂತ ಕಥೆ ಗಳನ್ನು ಹೇಳ್ತೀಯಾ. ನಮ್ಮ ಊರಿನಲ್ಲಿ ಕೆರೆ ಬಾವಿಗಳಲ್ಲಿ ನೀರಿಲ್ಲ, ನದಿಗಳಿಲ್ಲ. ಯಾಕಮ್ಮ ಹಿಂಗೆ. 



ಪಕ್ಕದ ಮನೆಗೆ ಬಂದಿದಾನಲ್ಲ ಆ ಹುಡುಗನ, ಊರು ತುಂಬಾ ದೂರ ಅಂತೆ, ನಮ್ಮ ದೊಡ್ಡಮ್ಮನ ಊರು ಇದೆಯಲ್ಲ ಹಾಗೆ ಇದೆ ಅಂತೆ ಅವನ ಊರು, ಅಲ್ಲಿ ನದಿ, ಬೆಟ್ಟ, ಜಲಪಾತ, ಕಾಡು, ಅಡವಿ ಪ್ರಾಣಿಗಳು, ಇನ್ನು ಏನೇನೋ ಇದೆಯಂತೆ., ಕಾಡಿಗೆ ಹೋದರೆ, ತಿನ್ನೋದಿಕ್ಕೆ ಎಷ್ಟೊಂದು ರೀತಿಯ ಹಣ್ಣುಗಳು ಸಿಗುತ್ತವೆ ಅಂತೆ. ನೀರಲ್ಲಿ ಆಟ ಆಡೋದಿಕ್ಕೆ ಎಲ್ಲಕಡೆ ಯಾವಗಲು ನೀರು ಇರುತ್ತಂತೆ. ಅವರ ಊರು ತುಂಬಾ ಚೆನ್ನಾಗಿದೆಯಂತೆ, ಅವನಿಗೆ ಇಲ್ಲಿ ಬಂದು ಬೇಜಾರಾಗಿದೆ ಮತ್ತೆ ವಾಪಾಸ್ಸು ಹೋಗಬೇಕು ಅಂತ ಅನ್ನಿಸುತ್ತಿದೆಯಂತೆ,  





ಈ ಊರಲ್ಲಿ, ಏನು ಇಲ್ಲ, ಸರಿಯಾಗಿ ತಿನ್ನೋದಿಕ್ಕೆ ಸಹ ಸಿಗಲ್ಲ, ಯಾವಗಲು ಬಿಸಿಲು, ಊರು, ಹೊಲ,ಗದ್ದೆ ಎಲ್ಲ ಬಟಾ ಬಯಲು ಎಂತ ದರಿದ್ರದ ಊರು ಇದು ಅಂತ ಬೈತಾಯಿದ್ದ. ನನಗೊಂದು ಪ್ರಶ್ನೆ, ದೇವರು ಯಾಕೆ ಹೀಗೆ ಮಾಡ್ತಾನೆ, ಒಂದು ಊರನ್ನು ಚೆನ್ನಾಗಿ, ಇನ್ನೊಂದು ಊರನ್ನು ಕೆಟ್ಟದಾಗಿ ಯಾಕೆ ಸೃಷ್ಟಿ ಮಾಡಿದ್ದಾನೆ. ಈ ಊರಿನ ಜನರು ಬದುಕೋಕೆ ತಿನ್ನೊ ಅನ್ನಕ್ಕಾಗಿ ಎಷ್ಟೊಂದು ಕಷ್ಟ ಪಡಬೇಕು. ಹಾಗಾದರೆ ದೇವರು ಅಷ್ಟೊಂದು ಕ್ರೂರಿನಾ?



ಮಗನ ಮುಗ್ಧ ಪ್ರಶ್ನೆ ಗಳಿಗಾಗಿ, ಅಮ್ಮ ನ ಕಣ್ಣಲ್ಲಿ ನೀರು ಜಿನುಗಿತ್ತು. ಅಂಥ ಊರುಗಳಲ್ಲಿ ನಾವ್ಯಾಕೆ ಹುಟ್ಟಲಿಲ್ಲ, ಹಾಗಾದ್ರೆ ದೇವರು ಪಕ್ಷಪಾತಿನ?  ಯಾಕೆ ದೇವರು ಹೀಗೆ ಮಾಡ್ತಾನೆ. ಪೂರ್ವ ಜನ್ಮದ ಕರ್ಮ ಫಲ ಅಂತ, ಯಾವುದೋ ಒಂದು ಜನ್ಮದಲ್ಲಿ ಮಾಡಿದ ತಪ್ಪಿಗೆ ಈ ಜನ್ಮದಲ್ಲಿ ಈ ಪರಿ ಶಿಕ್ಷೆ ಯಾ? ನಮ್ಮ ಒಂದು ಸಂಪೂರ್ಣ ಜನ್ಮವನ್ನು ಕಷ್ಟದಲ್ಲಿ ಕಳೆಯೋದಿಕ್ಕೆ ನಮ್ಮನ್ನು ಹೀಗೆ ಸೃಷ್ಟಿ ಮಾಡಿ ಬಿಡೋದಿಕ್ಕೆ ನಿಜವಾಗಲು ದೇವರು ಅಷ್ಟೊಂದು ಕ್ರೂರಿನಾ? ಕ್ಷಮೆ ಅನ್ನೋದೆ ಇಲ್ವ. ಛೇ ನಮ್ಮದು ಒಂದು ಬದುಕೇ? 

ಮನಸ್ಸು ಆತ್ಮಹತ್ಯೆ ಕಡೆ ಯೊಚಿಸುತಿತ್ತು. ಆದರೆ ಮಗನ ಉತ್ತಮ ಭವಿಷ್ಯಕ್ಕಾಗಿ ಬದುಕಬೇಕು ಅಂತ ತಿರ್ಮಾನಿಸಿ ಆತ್ಮಹತ್ಯೆ ನಿರ್ಧಾರ ಕೈ ಬಿಡುವಂತಾಯಿತು.

Photo Courtesy: Internet source.

2 ಕಾಮೆಂಟ್‌ಗಳು:

Click below headings