ಕಥೆ:- "ಇಂತವರೂ ಇರ್ತಾರೆ"
ಮುಂಬಯಿಯಲ್ಲಿ ನೆಲಸಿದ್ದ ಸಂಜಯ್, ಹಲವಾರು ವರ್ಷಗಳ ನಂತರ ಮಗಳೊಂದಿಗೆ ಕರ್ನಾಟಕಕ್ಕೆ ಬಂದಿದ್ದರು. ಅದರಲ್ಲೂ ತಾವು ವಿಧ್ಯಾಭ್ಯಾಸ ಪಡೆದ ಹುಬ್ಬಳ್ಳಿಗೆ ಬಂದಿದ್ದರು. ಮೊದಲಿಂದಲೂ ತಮ್ಮ ವಿಧ್ಯಾಭ್ಯಾಸದ ದಿನಗಳ ಕುರಿತು ಮಗಳಿಗೆ ಹೇಳಬೇಕು ಹಾಗು ಅಲ್ಲಿನ ಸ್ಥಳಗಳನ್ನು ತೋರಿಸಬೇಕು ಎಂದು ತುಂಬಾ ಹಂಬಲಿಸಿದ್ದ ಅವರು, ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳದೆ, ತಾವು ಓದಿದ್ದ ಕಾಲೇಜ್, ವಾಸಿಸುತಿದ್ದ ರೂಮನ್ನು, ಹಾಗು ತಾವು ಆಗಾಗ್ಗೆ ನಾಷ್ಟ ಮತ್ತು ಊಟ ಮಾಡುತಿದ್ದ ಹೋಟೆಲ್/ಮೆಸ್ ಗಳನ್ನು ತೋರಿಸಲೆಂದು ಕಾಲೇಜಿಗೆ ಕರೆದೋಯ್ದರು.
ಮಗಳೇ, ಇದೇ ನೋಡು ನಾನು ಓದಿದ ಕಾಲೇಜು. ೨೫ ವರ್ಷದ ನಂತರ ನಾನು ಬಂದಿರುವುದು ಇದೇ ಮೊದಲ ಬಾರಿ. ಕಾಲೇಜಿನ ಮುಂಭಾಗದಲ್ಲಿದ್ದ ಕಾರಂಜಿ ಹಾಗೂ ಹೋತೋಟ ವಿರುವ ಜಾಗವನ್ನು ತೋರಿಸುತ್ತ, ನೋಡು ಈ ಜಾಗವೇ ನಾವು ಹರಟೆ ಹೊಡೆಯುತಿದ್ದ ಜಾಗ, ಇದು ನಾವು ಓಡಾಡುತಿದ್ದ ಕಾಲೇಜಿನ ಕಾರಿಡಾರ್. ಇದು ನಮ್ಮ ಫಿಸಿಕ್ಸ್ ಲ್ಯಾಬ್, ಇದು ಕೆಮಿಸ್ಟ್ರಿ ಲ್ಯಾಬ್, ಎಲೆಕ್ಟ್ರಿಕಲ್ ಲ್ಯಾಬ್, ಮೆಕಾನಿಕಲ್ ಲ್ಯಾಬ್. ಇಲ್ಲೆ ಮೆಟ್ಟಿಲು ಹತ್ತು, ಮೇಲೆ ಫ಼ರ್ಸ್ಟ್ ಫ಼್ಲೋರಿನಲ್ಲಿ ನಮ್ಮ ಕ್ಲಾಸ್ ರೂಮ್ ಗಳಿವೆ. ನಮ್ಮ ಭವಿಷ್ಯ ರೂಪು ಗೊಂಡಿದ್ದು ಇದೇ ಕ್ಲಾಸ್ ರೂಮ್ ಗಳಿಂದ ಎಂದು ಕೆಲ ಕ್ಲಾಸ್ ರೂಮ್ ಗಳನ್ನು ತೋರಿಸಿದರು.
ಅದನ್ನೆಲ್ಲ ನೋಡಿ ಮಗಳು "ಅಪ್ಪ ನಿಮ್ಮ ಆ ದಿನಗಳನ್ನು ಈಗ ನೆನಪಿಸಿಕೊಂಡರೆ ತುಂಬಾ ಮಜವಾಗಿರುತ್ತೆ ಅಲ್ವ"?
ಖಂಡಿತ ಮಗಳೇ, ನಿಜವಾಗಲೂ ಅದು ಗೊಲ್ಡನ್ ಡೇಸ್. ಅದನ್ನು ಮರೆಯೋದಕ್ಕೆ ಆಗಲ್ಲ. ಹಲವಾರು ಸ್ನೇಹಿತರನ್ನು ಸಂಪಾದಿಸಿದ್ದು ಇದೇ ಸ್ಥಳ, ಕೆಲವರ ಜತೆ ಕೀಟಲೆ ಗಳು, ಕಿರಿಕ್, ಹುಸಿ ಮುನಿಸು, ಇವುಗಳ ಜತೆ ಶಿಕ್ಷಣ ಹಾಗು ಗುರುಗಳ ಮಾರ್ಗದರ್ಶನ, ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಈ ಪರಿಸರ, ಇದು ಮರೆಯಲಾರದ ಅನುಭವ ಎಂದು ತುಂಬಾ ಸಂತೋಷ ದಿಂದ ಹೇಳಿಕೊಳ್ಳುತಿದ್ದರು.
ಕ್ಯಾಂಟೀನ್ ಹತ್ತಿರ ಹೋಗುತ್ತ, "ಬಾ, ಇಲ್ಲಿಯೆ ಹತ್ತಿರದಲ್ಲಿ ನಮ್ಮ ಕಾಲೇಜ್ ಕ್ಯಾಂಟೀನ್ ಇದೆ. ಕಾಫೀ ಕುಡಿಯುತ್ತ ಮಾತಾಡೋಣ". ಎಂದು ಹೋದರು. ಕಾಫೀ ಕುಡಿಯುತ್ತ, ಅವರ ಮಾತಿನ ಲಹರಿ ಕಾಲೇಜಿನ ಕೆಲ ಪ್ರಮುಖ ಘಟನೆಗಳತ್ತ ಹೊರಟಿತು. ಮನದಲ್ಲಿ ತುಂಬಿದ್ದ ನೆನಪಿನ ಬುತ್ತಿಯನ್ನು ಮಗಳ ಮುಂದೆ ಹಂಚುತ್ತ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕುತಿದ್ದರು. ಈ ಮಧ್ಯೆ ಮಗಳು "ಅಪ್ಪ, ಆ ಸ್ನೇಹಿತರಲ್ಲಿ ಈಗ ಯಾರಾದರು ಟಚ್ ಅಲ್ಲಿ ಇದ್ದಾರಾ ಎಂದು ಕೇಳಿದಳು". ಹಾ!! ಕೆಲವರು ಇದ್ದಾರೆ, ಆಗಾಗ್ಗೆ ಫೋನ್ ನಲ್ಲಿ ಮಾತಾಡ್ತ ಇರ್ತೇವೆ".
ತಂದೆ ಹೇಳಿದ ಮಾತುಗಳನ್ನು ಕೇಳುತ್ತ, ಆಗಾಗ್ಗೆ ಸೆಲ್ಫಿ ತೆಗೆದುಕೊಳ್ಳುತ್ತ, ಚಿಕ್ಕ ಚಿಕ್ಕ ನೋಟ್ ಮಾಡಿಕೊಳ್ಳುತಿದ್ದಳು. "ಅಪ್ಪ, ಈ ಕಾಲೇಜಿನ ದಿನಗಳಲ್ಲಿ ನಿಮಗೆ ಯಾವತ್ತಾದರು ತುಂಬಾ ಸಂತೋಷ ಆಗಿದ್ದ ಅಥವ ತುಂಬಾ ಬೇಸರ ಆಗಿದ್ದ ಸಂಗತಿ ಇದೆಯಾ?"
"ಮಗಳೇ, ಜೀವನ ಅಂದ ಮೇಲೆ ಅದೊಂದು ಸಿಹಿ ಕಹಿಗಳ ನೆನಪಿನ ಬುತ್ತಿ, ಅದರಲ್ಲಿ ಸುಖ ಮತ್ತು ದುಖ ಇರುತ್ತೆ, ಎರಡನ್ನು ಸಮನಾಗಿ ಸ್ವೀಕರಿಸಿ ನಡೆಯಬೇಕು ಅದುವೇ ಮನುಷ್ಯ ನ ಬುದ್ದಿವಂತಿಕೆಯ ಲಕ್ಷಣ"
"ಅಪ್ಪ ನೀವು ಹುಬ್ಬಳಿಯಲ್ಲಿ ಓದು ಮುಗಿಸಿದ ಮೇಲೆ, ಎಷ್ಟೊಂದು ಊರು ಸುತ್ತಿ ಈಗ ಮುಂಬಯಿಯಲ್ಲಿ ನೆಲೆಸಿದ್ದೀರಿ. ಈ ನಿಮ್ಮ ಅನುಭವದಲ್ಲಿ ಯಾವುದಾದರು ಮರೆಯಲಿಕ್ಕೆ ಆಗದ ಒಂದೆರಡು ಘಟನೆಗಳು ನೆನಪಿಸಿ ಕೊಳ್ತೀರಾ?"
ಹಾಂ! ತುಂಬಾ ವಿಷಯಗಳು ಇವೆ. ನಾನು ಓದು ಮುಗಿಸಿದ ಮೇಲೆ, ನಾನು ಬೆಂಗಳೂರಿನಲ್ಲಿ ಸುಮಾರು ಏಳೆಂಟು ವರ್ಷ ಕೆಲಸ ಮಾಡಿದೆ. ಆ ದಿನಗಳು ನನ್ನ ವೃತ್ತಿ ಜೀವನದ ಫ಼ೌಂಡೇಶನ್ ಅನ್ನು ಹಾಕಿದ ಪ್ರಮುಖ ದಿನಗಳು. ಆ ಏಳೇಂಟು ವರ್ಷ ಗಳಲ್ಲಿ ನಾನು ಕೆಲಸದ ಅನುಭವಕ್ಕಾಗಿ, ಹೊಸ ವಿಷಯದ ಕಲಿಕೆ ಹಾಗೂ ಹೆಚ್ಚಿನ ಗಳಿಕೆಗಾಗಿ ಕೆಲವೊಮ್ಮೆ ತುಂಬಾ ಕಠಿಣ ನಿರ್ಧಾರಗಳನ್ನು ತಗೊಳ್ಳುತಿದ್ದೆ. ಇದು ಅಮ್ಮನಿಗೆ ಇಷ್ಟವಾಗುತ್ತಿರಲಿಲ್ಲ. ಪರ್ಮನೆಂಟ್ ಆಗಿ ಒಂದು ಕೆಲಸ ಮಾಡು ಅಂತ ಅಮ್ಮನ ಒತ್ತಾಯ. ಆದರೆ ನಾನು ತುಂಬಾ ಮಹತ್ವಾಕಾಂಕ್ಷಿ, ಜೀವನದಲ್ಲಿ ಏನಾದರು ಸಾಧಿಸಬೇಕು ಎಂದು ಬಯಸುವವ. ಕೆಲಸದ ಅನುಭವಕ್ಕಾಗಿ, ಮತ್ತು ಉತ್ತಮ ಪೊಸಿಶನ್ ಗಾಗಿ ಕೆಲ ಕಂಪನಿಗಳಲ್ಲಿ ಒಂದೆರಡು ವರ್ಷದಲ್ಲಿ ಬದಲಾಯಿಸುತಿದ್ದೆ. ನಿಜಕ್ಕೂ ಆ ಒಂದು ಹಂತಕ್ಕೆ ಬರಲು ನಾನು ತೆಗೆದುಕೊಳ್ಳುತಿದ್ದ ಆ ನಿರ್ಧಾರಗಳೇ ಕಾರಣ.

ಹೀಗಿರುವಾಗ ಒಂದು ಸಾರಿ ಒಂದು ಕಂಪನಿ ಪ್ರಾಜೆಕ್ಟ್ ಕೆಲಸಕ್ಕಾಗಿ ಮಲೇಶಿಯಾ ಕ್ಕೆ ಹೋಗುವ ಅವಕಾಶ ಬಂತು. ಜೀವನದಲ್ಲಿ ಮೊದಲ ಬಾರಿಗೆ, ವಿದೇಶದಲ್ಲಿ ಕೆಲಸ ಮಾಡುವ ಅನುಭವ. ಆದರೆ ಅದೊಂದು ಕಾಂಟ್ರಾಕ್ಟ್ ಪಿರಿಯಡ್ ಕೆಲಸ ಕೆಲವೇ ವರ್ಷಗಳ ಅಗ್ರಿಮೆಂಟ್. ಸರಿ ಎಂದು ಒಪ್ಪಿಕೊಂಡು ಹೊರಟು ಹೋದೆ. ಆದರೆ ನಾವು ಅಂದುಕೊಂಡದ್ದಕ್ಕಿಂತ ಅತಿ ಬೇಗ ಅಂದರೆ ಕೆಲವೇ ತಿಂಗಳು ಗಳಲ್ಲಿ ಪ್ರಾಜೆಕ್ಟ್ ಮುಗಿಯಿತು. ಕಂಪನಿಯವರು ನಮ್ಮನ್ನೆಲ್ಲ ಮರಳಿ ತಾಯ್ನಾಡಿಗೆ ವಾಪಾಸ್ ಕಳಿಸಿಕೊಡುವ ತರಾತುರಿಯಲ್ಲಿದ್ದರು. ಆದರೆ, ನನಗೆ ಅಲ್ಲಿನ ಜೀವನ ಶೈಲಿ, ಉದ್ಯೋಗವಕಾಶ ಎಲ್ಲವನ್ನು ನೋಡಿ ಅಂದು ಊರಿಗೆ ಮರಳುವ ಆಲೋಚನೆ ಮಾಡಲಿಲ್ಲ. ಕೈಯಲ್ಲಿ ಹಣವಿತ್ತು ಹಾಗಾಗಿ ಅಲ್ಲಿಯೇ ಮತ್ತೆ ಉದ್ಯೋಗಕ್ಕಾಗಿ ಪ್ರಯತ್ನಮಾಡಿದೆ. ಈ ವಿಷಯವನ್ನು ಅಮ್ಮನಿಗೆ ನಾನು ತಿಳಿಸಿದೆ. ಅಮ್ಮ ಬೇಸರದಿಂದ. ಬೇಡ ಕಣಪ್ಪ ವಾಪಾಸ್ಸು ಮನೆಗೆ ಬಂದು ಬಿಡು. ಇಲ್ಲಿಯೇ ನೂರಾರು ಅವಕಾಶಗಳು ಸಿಗುತ್ತವೆ. ಇಲ್ಲಿಯೇ ನೆಮ್ಮದಿಯ ಜೀವನ ಮಾಡೋಣ ಬಂದು ಬಿಡು ಎಂದು ತುಂಬಾ ಕೇಳಿದಳು.
ಅದಕ್ಕೆ ನಾನು ಸುತಾರಾಂ ಒಪ್ಪಲಿಲ್ಲ. ಮಲೇಶಿಯಾದಲ್ಲಿ ಹೊಸ ಕೆಲಸ ಹುಡುಕೋದಿಕ್ಕೆ ಶುರು ಮಾಡಿದೆ.....
ಹೀಗೆ, ಕೆಲವು ದಿನಗಳ ನಂತರ, ಅಮ್ಮನ ಆರೋಗ್ಯ ವಿಚಾರಿಸಿ ಫೋನ್ ನಲ್ಲಿ ಮಾತಾನಾಡ್ತಾಯಿದ್ದೆ. ಆಗ ಅಮ್ಮ "ಸಂಜಯ್ ಒಂದು ಮಾತು ಹೇಳ್ತೀನಿ, ಬೇಜಾರು ಮಾಡ್ಕೋಬೇಡ ಎಂದಳು. ಹೇಳಮ್ಮ, ನಾನು ಬೇಜಾರು ಮಾಡ್ಕೋಳಲ್ಲ. ಏನು ವಿಷಯ ಎಂದು ಕೇಳಿದೆ. ಮಹೇಶ ನ ಹತ್ತಿರ ನಿನ್ನ ಬಗ್ಗೆ ಮಾತಾಡಿದ್ದೆ......
ಯಾವ ವಿಷಯದ ಬಗ್ಗೆ, ಏನು ಮಾತಾಡಿದೆ.?
ಏನಿಲ್ಲ, ಬೇಡ ಬಿಡು. ನೀನು ಬೇಜಾರು ಮಾಡ್ಕೋತೀಯ.....
ಅಮ್ಮ ಯಾವುದೋ ವಿಷಯ ಮುಚ್ಚಿಡುವುದಕ್ಕೆ ಪ್ರಯತ್ನ ಪಡ್ತಾ ಯಿದ್ದಾಳೆ ಅಂತ ಅನಿಸಿತ್ತು. ವಿಷಯ ತಿಳ್ಕೊಳ್ಳೋ ಕುತೂಹಲ ದಿಂದ ನಾನು ನಗುತ್ತ, "ಅಮ್ಮ ನಾನು ಬೇಜಾರು ಮಾಡ್ಕೋತೀನಾ.... ಅಯ್ಯೋ... ಅದಕ್ಕೆಲ್ಲ ಚಾನ್ಸ್ ಕೊಡಲ್ಲ. ಎಮೋಶನಲ್ ಫೀಲಿಂಗ್ಸ್ ಗೆ ನನ್ನ ಹೃದಯಲ್ಲಿ ಜಾಗ ಕಡಿಮೆ, ಆದರೆ ನಿನ್ನ ವಿಷಯ ಬಿಟ್ಟು..."
ನೀನು ಇಷ್ಟೊಂದು ಕಷ್ಟ ಪಡ್ತಿರೋದನ್ನ ನೋಡಿ, ಅದಕ್ಕೆ....ಮಹೇಶ ಎನೋ ಬಿಸಿನೆಸ್ ಮಾಡ್ತಾಯಿದಾನಲ್ಲ, ಅವನಿಗೆ ನಿನ್ನನ್ನ ಸೇರಿಸಿಕೊಂಡು ಇಬ್ಬರು ಏನಾದರು ಮಾಡಬಹುದಲ್ವ ಎಂದು ಕೇಳಿದೆ.
ಅದಕ್ಕೆ ನಾನು ಅಯ್ಯೋ ಅಮ್ಮ, ಅವನ ಬಿಸಿನೆಸ್ ನಲ್ಲಿ ನಾನು ಹೇಗೆ........ ಅದು ಹಾಗಲ್ಲ. ನಿನಗೆ ಅರ್ಥ ಆಗಲ್ಲ ಬಿಡು. ನನ್ನ ಆಸೆಗಳು ಹಲವಾರು ಇವೆ, ಈಗ ಸದ್ಯಕ್ಕೆ ಬಿಸಿನೆಸ್ ಬೇಡ. ನಾನು ಒಳ್ಳೆ ಕೆಲಸ ಹಿಡಿದು ಸ್ವಲ್ಪ ಹಣ ಸಂಪಾದಿಸಿ, ಮುಂದೆ ಬೇಕಾದರೆ ಯೋಚನೆ ಮಾಡ್ತಿನಿ. ಈಗ ಅಂತ ಅವಸರ ಇಲ್ಲ ಎಂದು ಹೇಳಿದೆ.
ಸರಿ ಕಣಪ್ಪ... ಆದರೆ ಅವನು ನಿನ್ನ ಬಗ್ಗೆ ಹೀಗೆಲ್ಲ ಯೋಚನೆ ಮಾಡಿದಾನೆ ಅಂತ ನಾನು ಕನಸು ಮನಸ್ಸಿನಲ್ಲಿಯು ಸಹ ನಾನೆಣಿಸಿರಲಿಲ್ಲ... ಸ್ನೇಹಕ್ಕೆ ಇಷ್ಟೇನ ಬೆಲೆ?
ನೀನು ಅವನನ್ನು ಹಾಸ್ಟೆಲ್ ನಿಂದ ಬಿಡಿಸಿ, ನಿನ್ನ ರೂಮಿನಲ್ಲಿ ಸೇರಿಸಿಕೊಂಡು, ಅವನಿಗೆ ನೀನು ಪಾಠ ಹೇಳಿಕೊಟ್ಟಿದ್ದೀಯಾ, ನೀನು ತಿನ್ನುವ ಅನ್ನವನ್ನು ಹಂಚಿಕೊಂಡಿದ್ದೀಯಾ, ಅವನ ಕೆಲ ಖರ್ಚುಗಳನ್ನು ನೋಡಿಕೊಂಡಿದ್ದೀಯಾ, ಹೀಗೆ ನೀನು ಎಷ್ಟೆಲ್ಲ ಸಹಾಯ ಮಾಡಿದ್ದೀಯ. ಆದರೆ ಅವನು ಅದೆಲ್ಲ ಮರೆತು, ನಿನ್ನ ಬಗ್ಗೆ ಈ ತರಹ ಮನಸ್ಸಿನಲ್ಲಿ ಎಷ್ಟೋಂದು ಸ್ವಾರ್ಥವಾಗಿ ಯೋಚಿಸಿದ್ದಾನೆ ಕಣಪ್ಪ. ಆ ಮಾತುಗಳನ್ನು ಕೇಳಿ ದುಖಃ ಉಮ್ಮಳಿಸಿ ಬಂತು, ತಡ್ಕೊಳ್ಳೋಕೆ ಆಗಲಿಲ್ಲ ಅದಕ್ಕೆ ನಿನ್ನ ಹೇಳಿಕೊಳ್ಳಬೇಕು ಅನ್ನಿಸಿತು.......
ಅಮ್ಮ ಹೇಳಿದ್ದು ಕೇಳಿ ಯಾಕೋ ಮನಸ್ಸು ವಿಚಲಿತವಾಯಿತು... ಮಹೇಶ ನನ್ನ ಬಗ್ಗೆ ಏನು ಹೇಳಿದ್ದಾನೆ. ನಾನೇನು ಅಂತಹದ್ದು ಮಾಡಬಾರದ್ದು ಅವನಿಗೆ ಮಾಡಿದ್ದೀನಿ. ಯಾಕೆ ಏನಾಯ್ತು ಅಂತ ಮನಸ್ಸಿನಲ್ಲಿ ತಳಮಳ ಶುರುವಾಯಿತು. "ಸರಿ, ಅವನು ಏನು ಹೇಳಿದ ಹೇಳು".
"ನಿನಗೆ ಕೋಪ ಜಾಸ್ತಿ ಅಂತೆ, ಬಾಸ್ ಗಳ ಜತೆ ಜಗಳ ಮಾಡ್ತೀಯ, ಒಂದು ಕಂಪನಿಯಲ್ಲಿ ತುಂಬಾ ದಿನ ಕೆಲಸ ಮಾಡೋದಿಲ್ವಂತೆ, ಒಂದ್ನಿಮಿಷ ಇದ್ದ ಮನಸ್ಸು ಇನ್ನೊಂದ್ನಿಮಿಷ ಇರಲ್ಲ. ಚಂಚಲ ಸ್ವಭಾವ. ಹೀಗೆ ಹಲವಾರು ವಿಷಯಗಳಲ್ಲಿ ಸಂಜಯ್ ಸರಿ ಇಲ್ಲ, ಇಂತಹ ಮನಸ್ಥಿತಿ ಇರುವವನ ಜತೆ ನಾನು ಹೇಗೆ ಬಿಸಿನೆಸ್ ಮಾಡಲಿ. ನಮ್ಮ ಕಂಪನಿ ಹೇಗೆ ಉದ್ದಾರ ಆಗುತ್ತೆ. ಅದೆಲ್ಲ ಸರಿ ಹೋಗಲ್ಲ ಆಂಟಿ ಎಂದು ಉಡಾಫೆಯಿಂದ ಹೇಳಿದಾಗ, ಈ ಮಾತುಗಳು ನಮ್ಮ ಮಹೇಶ ಹೇಳ್ತಾಯಿದ್ದಾನ ಎಂದು ನಂಬಲಿಕ್ಕೆ ಆಗಲಿಲ್ಲ. ಅವನ ಮನಸ್ಸಿನಲ್ಲಿ ಈ ತರಹ ಎಲ್ಲ ಲೆಕ್ಕಾಚಾರ ಹಾಕಿದ್ದಾನ, ಎಷ್ಟೊಂದು ಅಮಾಯಕ ನಾಗಿದ್ದ ಹುಡುಗ ಇಷ್ಟೆಲ್ಲ ಬದಲಾಗಿದ್ದಾನ ಅಂತ ಅನಿಸಿತು......ನನಗೆ ನನ್ನ ಮಗನ ಬಗ್ಗೆ ಗೊತ್ತು, ಅವನು ಏನು ಮಾಡಿದರು ಯಾವ ತಪ್ಪು ಮಾಡಲ್ಲ, ಕೋಪ ಜಾಸ್ತಿ ಇರಬಹದು, ಆದರೆ ಅಷ್ಟೇ ಕರುಣಾಮಯಿ ಅವನು, ಅಯ್ಯೋ ಅಂದವರಿಗೆ ಅವನ ಮನಸ್ಸು ಮಿಡಿಯುತ್ತೆ. ಆದರೆ ಸ್ವಾರ್ಥ ಇಲ್ಲ. ಅಂಥವನನ್ನು ನನ್ನ ಮಗನಾಗಿ ಪಡೆದದ್ದು ನನ್ನ ಅದೃಷ್ಟ ಅಂತ ಮನಸ್ಸಿನಲ್ಲಿ ಅಂದ್ಕೊಂಡೆ......... ಹೋಗಲಿ ಬಿಡು ಮಗಾ... ಮನಸ್ಸಿಗೆ ಹಚ್ಚಿಕೊಂಡು ನೀನು ಚಿಂತಿಸಬೇಡ. ನೀನು ಮಾಡಿದ್ದು ನಿನಗೆ, ಅವನು ಮಾಡಿದ್ದು ಅವನಿಗೆ.
ಅಮ್ಮ ಮಹೇಶ ಹೇಳಿದ್ದನ್ನು ಕೇಳುತಿದ್ದರೆ, ಒಂದು ಕ್ಷಣ ನಂಬಲಿಕ್ಕೆ ಆಗಲಿಲ್ಲ. ನನ್ನ ಅತಿ ಹೆಚ್ಚು ನಂಬುಗೆಯ ಸ್ನೇಹಿತ ನನ್ನ ಬಗ್ಗೆ ಈ ತರಹ ಅಭಿಪ್ರಾಯ ಇಟ್ಟುಕೊಂಡಿದಾನಲ್ಲ ಅಂತ ಆಶ್ಚರ್ಯ ವಾಯಿತು..... ಮನುಷ್ಯ ಬದಲಾಗುವುದನ್ನು ಸಿನಿಮಾದಲ್ಲಿ ನೋಡಿದ್ದೆ, ಕಥೆ ಕಾದಂಬರಿಯಲ್ಲಿ ಓದಿದ್ದೆ, ಅವರಿವರು ಹೇಳಿದ್ದನ್ನು ಕೇಳಿದ್ದೆ. ಆದರೆ ಇಂದು ನನ್ನ ಮಿತ್ರ ಬದಲಾಗಿದ್ದು ತುಂಬಾ ದುಖಃ ವಾಯಿತು. ಅವನ ಇಂದಿನ ಜೀವನ ಮಟ್ಟಕ್ಕೆ, ನನ್ನ ಒಂದು ಕಿರು ಸಹಾಯ ಕಾರಣ ಅನ್ನೋದನ್ನ ಸಹ ಮರೆತು ಬಿಟ್ಟನಲ್ಲಾ ಈ ಹುಡುಗ.
ಅವನಿಂದ ನಾನೇನು ನಿರೀಕ್ಷಿಸಿರಲಿಲ್ಲ, ನನಗೆ ಸಹಾಯ ಸಹ ಬೇಕಿರಲಿಲ್ಲ. ಆದರೆ, ಈ ತರಹ ಭಿನ್ನಭಿಪ್ರಾಯದ ಬಗ್ಗೆ ನನ್ನಲ್ಲಿ ಒಂದು ದಿನವೂ ಚರ್ಚಿಸಿರಲಿಲ್ಲ. ಅಂದು ನನ್ನನ್ನು ಎಷ್ಟೊಂದು ಗೌರವ ಪ್ರೀತಿಯಿಂದ ಕಾಣುತಿದ್ದ ಹುಡುಗ ಇವನೇನ ಅನ್ನಿಸಿಬಿಟ್ಟಿತ್ತು. ಸ್ನೇಹಕ್ಕೆ ಇಷ್ಟೇನಾ ಬೆಲೆ? ಅವನು ಓದುವ ಸಮಯದಲ್ಲಿ ನಾನು ನಿಸ್ವಾರ್ಥವಾಗಿ ಅವನಿಗೆ ಎಷ್ಟೆಲ್ಲ ಸಹಾಯ ಮಾಡಿದ್ದೆ, ಆದರೆ ಇಂದು ನನ್ನ ಬಗ್ಗೆ ಈ ತರಹ ಮಾತಾಡಿದ್ದಕ್ಕೆ ತುಂಬ ದುಖಃ ವಾಯಿತು, ನನಗರಿವಿಲ್ಲದಂತೆ ಕಣ್ಣಲ್ಲಿ ನೀರು ಬಂತು...... ಒಬ್ಬ ಸ್ನೇಹಿತನ ಮುಖವಾಡ ಕಳಚಿತ್ತು.......
ಅಮ್ಮ ಈ ವಿಷಯ ಚರ್ಚೆ ಮಾಡಿದ್ದು ಸರಿ ಅನ್ನಿಸಲಿಲ್ಲ....., "ಅಮ್ಮ, ನೀನು ಯಾಕೆ ಬಿಸಿನೆಸ್ ಬಗ್ಗೆ ಕೇಳಿದೆ? ನಾನೇನು ಹೇಳಿದ್ನಾ? ಸುಮ್ ಸುಮ್ನೆ ಈ ಅವಾಂತರ ಯಾಕೆ ಮಾಡಿದೆ? ಇನ್ಮುಂದೆ, ಈ ವಿಷಯದ ಬಗ್ಗೆ ಮಾತಾಡಬೇಡ. ಇದು ಇಲ್ಲಿಗೇ ಮುಗೀತು ಅಂತ ಇಲ್ಲಿಗೆ ಬಿಟ್ಟು ಬಿಡು. ಎಂದು ಹೇಳಿ ಫೋನ್ ಕಟ್ ಮಾಡಿದೆ.
ಇಂದು ಸ್ನೇಹ ಮತ್ತು ವ್ಯವಹಾರದ ಬಗ್ಗೆ ಮಾತಾಡ್ತಾ ಕಟ್ಟುನಿಟ್ಟಾಗಿ ಮಾತಾಡ್ತಯಿರೋದು ನೋಡಿದಾಗ, ಅವನ ಬಗ್ಗೆ ಹೆಮ್ಮೆಯಾಯಿತು. ಆದರೆ ಅಮ್ಮ ಸುಮ್ ಸುಮ್ನೆ ಅವನ ಜತೆ ಬಿಸಿನೆಸ್ ಬಗ್ಗೆ ಯಾಕೆ ಮಾತಾಡಿದರು ಅಂತ ಅವರ ಮೇಲೆ ತುಂಬಾ ಕೋಪ ಬಂತು.
ಆಮೇಲೆ ಮನಸ್ಸು ಮಹೇಶನ ಬಗ್ಗೆ ಯೋಚಿಸುತ್ತಾಯಿತ್ತು. ಕಾಲೇಜಿನ ದಿನಗಳು ಜ್ಞಾಪಕ ವಾಯಿತು. ಒಂದು ಕ್ಷಣ ಅವನ ಅಂದಿನ ಮುಗ್ಧ ಮುಖ ಕಣ್ಣು ಮುಂದೆ ಹಾದು ಹೋದಂತಾಯಿತು.
"ಅಪ್ಪ ಆ ಮಹೇಶ್ ಅಂದ್ರೆ ಯಾರು?"
"ನಮ್ಮ ಕಾಲೇಜಿನಲ್ಲಿದ್ದ ತುಂಬಾ ಬಡ ವಿಧ್ಯಾರ್ಥಿಯಲ್ಲಿ ಅವನೊಬ್ಬ. ತುಂಬಾ ಮುಗ್ಧ, ಹತ್ತಿರದ ಹಾಸ್ಟೆಲ್ ಒಂದರಿಂದ ಬರ್ತಾ ಯಿದ್ದ. ಅವನನ್ನು ನೋಡಿದರೆ ಯಾರಿಗಾದರೂ ಅಯ್ಯೋ ಅನ್ನಿಸುತಿತ್ತು. ನಮ್ಮ ಸ್ನೇಹಿತರ ಕೂಟದಲ್ಲಿಯೆ ಇದ್ದದ್ದರಿಂದ, ಅವನನ್ನು ನಾವು ಸ್ವಲ್ಪ ಹೆಚ್ಚಾಗಿಯೆ ಆತ್ಮೀಯತೆಯಿಂದ ಕಾಣುತಿದ್ದೆವು. ಅವನಿಗೆ ತುಂಬಾ ಸಂಕೋಚ ಸ್ವಭಾವ. ಅವನಿಗೆ ಏನು ಬೇಕು, ಬೇಡ ಎಂದು ಹೇಳ್ಕೋಳ್ಳೋಕೆ ಹಿಂಜರಿಯುತಿದ್ದ. ನೋಡು ತಮ್ಮಾ...... ನೀನು ಹೀಗೆ ಇದ್ದರೆ, ಒಂದೆರಡು ವರ್ಷಕ್ಕೆ ಮನೆಗೆ ವಾಪಾಸ್ಸು ಹೋಗ್ತೀಯಾ. ಕಾಲೇಜ್ ವಿಧ್ಯಾಭ್ಯಾಸ ಮುಗಿಯಲ್ಲ. ಸುಮ್ನೆ ದುಡ್ಡು ವೇಸ್ಟ್, ಟೈಮ್ ವೇಸ್ಟ್. ಹೀಗೆ ನಾವು ಯಾವಾಗಲು ಅವನನ್ನು ರೇಗಿಸುತಿದ್ದೆವು.
ನಿಜಕ್ಕೂ ಅವನ ಪರಿಸ್ಥಿತಿ ತುಂಬಾ ಭೀಕರ ವಾಗಿತ್ತು. ಅವನಿದ್ದ ಹಾಸ್ಟೆಲ್ ನಲ್ಲಿ ಸರಿಯಾಗಿ ಊಟ ಸಹ ಕೊಡ್ತಾಯಿರಲಿಲ್ಲ. ಕೊಟ್ಟರೂ ಸಹ ಅದು ಅಷ್ಟಕ್ಕಷ್ಟೆ. ಓದುವುದಕ್ಕೆ ಪೂರಕವಾದ ವಾತಾವರಣ ಅಲ್ಲಿರಲಿಲ್ಲ. ಅದರಲ್ಲೂ ಅಲ್ಲಿರುವ ವಾರ್ಡನ್ ತುಂಬಾ ಸ್ಟ್ರಿಕ್ಟ್. ಹೊರಗಡೆ ಹೋಗುವುದಕ್ಕೆ ಸಹ ಅನುಮತಿ ಕೊಡ್ತಾಯಿರಲಿಲ್ಲ. ಪ್ರಾರ್ಥನೆ ಸಮಯಕ್ಕೆ ಎಲ್ಲೇ ಇದ್ದರು ಹಾಜರಾಗಬೇಕಿತ್ತು. ತಪ್ಪಿದ್ದರೆ ಊಟ ಕಟ್. ಮೊದಲೇ, ಆ ಊಟ ಅಷ್ಟಕ್ಕಷ್ಟೆ ಆದರೆ ಅದೇ ಕಟ್ ಆದರೆ, ಹೊಟ್ಟೆಗೆ ತಣ್ಣೀರ್ ಬಟ್ಟೆ. ಕಷ್ಟನೋ ನಷ್ಟಾನೋ ಹೇಗಾದರು ಮಾಡಿ ವಿಧ್ಯಾಭ್ಯಾಸ ಮುಗಿಸಿದರೆ ಸಾಕು ಅಂತಿದ್ದ. ಅದು ಅವನ ಪಾಲಕರ ಅಭಿಲಾಷೆ. ಹಾಸ್ಟೆಲ್ ನ ಕಷ್ಟ ಅರಿವಿದ್ದ ನನಗೆ, ಹಾಸ್ಟೆಲ್ ಬದಲಾಯಿಸುವುದಕ್ಕೆ ಅವನ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ, ಅವನಿಗಿದ್ದ ಹಣಕಾಸಿನ ತೊಂದರೆ, ಮತ್ತಿತರ ಕೊರತೆಗಳ ಬಗ್ಗೆ ಯೋಚಿಸಿ ಅದಕ್ಕೆ ಬೇಡವೆಂದು ಹೇಳುತಿದ್ದ. ತುಂಬಾ ದಿನಗಳ ಕಾಲ ಮನವೊಲಿಕೆಯ ಪರಿಣಾಮ ಕೊನೆಗೂ ಹಾಸ್ಟೆಲ್ ಬಿಟ್ಟು ನನ್ನ ಜತೆ ರೂಮ್ ಮಾಡಲು ಒಪ್ಪಿದ್ದ. ರೂಮಿಗೆ ಬಂದ ಮೇಲೆ, ಅವನಿಗೆ ಹೊಟ್ಟೆ ತುಂಬ ಊಟ ಬಡಿಸ್ತಾಯಿದ್ದೆ. ಅವನು ಖುಶಿಯಿಂದ ಊಟ ಮಾಡೋದು ನೋಡಿ ನನಗೆ ತುಂಬ ಸಂತಸ ವಾಗುತಿತ್ತು. ಕೆಲವೇ ದಿನಗಳಲ್ಲಿ ಅವನ ಒಂದು ಕೊರತೆ ನೀಗಿತ್ತು. ಇನ್ನು ಓದಿನ ವಿಷಯದಲ್ಲಿ, ಅವನಿಗೆ ಅರ್ಥವಾಗದ ಹಲವಾರು ವಿಷಯಗಳ ಬಗ್ಗೆ ಸರಳವಾಗಿ ವಿವರಿಸಿ ಅವನ ಓದಿಗೆ ಬಹಳಷ್ಟು ಸಹಾಯ ಮಾಡಿದೆ. ಕೊನೆಗೆ ಪರೀಕ್ಷೆಯಲ್ಲಿ ಪಾಸ್ ಮಾಡಿ ತನ್ನ ಅಂತಿಮ ವಿಧ್ಯಾಭ್ಯಾಸ ಮುಗಿಸುವುದಕ್ಕೆ ನನ್ನದೊಂದು ಚೂರು ಪರಿಶ್ರಮ ಇದ್ದದ್ದು ನಿಜ. ಎಲ್ಲ ಕಡೆ ಒಟ್ಟಿಗೆ ಹೋಗ್ತಾ ಬರ್ತಾಯಿದ್ವಿ, ಸಿನಿಮಾಗಳನ್ನು ನೋಡಿದ್ವಿ, ಊರುಗಳನ್ನು ಸುತ್ತಿದೆವು. ಅಂದು ನಾನು ಮಾಡಿದ ಎಲ್ಲ ಕೆಲಸಗಳೂ ನಿಸ್ವಾರ್ಥವಾಗಿ ಮಾಡಿದ್ದು, ಆದರೆ ಆ ಪುಣ್ಯಾತ್ಮ ಕೊನೆಗೆ ನನ್ನ ಬಗ್ಗೆ ಒಂದು ಒಳ್ಳೆ ಸರ್ಟಿಫಿಕೆಟ್ ಕೊಟ್ಟ. ಹ್ಮೂ!!!! ಪ್ರಪಂಚದಲ್ಲಿ ಜನ ಹೀಗೆ ಇರ್ತಾರೆ ಅಂತ ನಾನು ಕನಸು ಮನಸ್ಸಿನಲ್ಲಿ ಯೋಚಿಸಿರಲಿಲ್ಲ. ಅದೊಂದು ಒಳ್ಳೆಯ ಅನುಭವ. ತಮಾಷೆ ವಿಷಯ ಅಂದರೆ, ಇವತ್ತಿಗೂ ಸಹ ನಾನು ನಿಸ್ವಾರ್ಥವಾಗಿ ಆ ಕೆಲಸ ಮಾಡ್ತಿದ್ದೀನಿ. ಎಷ್ಟೊಂದು ಜನಕ್ಕೆ, ನನ್ನ ಕೈಲಾದ ಸಹಾಯ ಮಾಡಿದ್ದೀನಿ. ಇಂದಿಗೂ ಹಲವಾರು ಜನರು ನನ್ನ ಸಹಾಯ ನೆನಪಿಸಿ ಕೊಂಡು ಫೋನ್ ಮಾಡ್ತಾರೆ, ಬಂದು ಭೇಟಿಯಾಗ್ತಾರೆ. ನಾನು ಮಾಡಿದ ಸಹಾಯದ ಫಲವೋ ಏನೋ, ಒಂದಲ್ಲ ಒಂದು ರೀತಿಯಲ್ಲಿ ನನ್ನ ಜೀವನದಲ್ಲಿ ಹಲವಾರು ಬಾರಿ ಒಳ್ಳೊಳ್ಳೆ ಘಟನೆಗಳು ನಡೆದಿವೆ."

ಹೀಗೆ ಸಂಜಯ್ ತನ್ನ ಬದುಕಿನಲ್ಲಿ ನಡೆದ ಒಂದು ಕಹಿ ಘಟನೆ ಯನ್ನು ನೆನಪಿಸಿಕೊಂಡಾಗ ಕಣ್ಣಲ್ಲಿ ಎರಡು ಹನಿ ಜಿನುಗಿದ್ದು ನೋಡಿದ ಮಗಳು "ಅಪ್ಪ, ಹೋಗಲಿ ಬಿಡಿ, ಬೇಜಾರು ಮಾಡ್ಕೋಬೇಡಿ. ಆಮೇಲೆ ಮಲೇಶಿಯಾದಲ್ಲಿ ಮತ್ತೆ ಏನ್ ಮಾಡಿದ್ರಿ"

ಓಹ್, ಮರೆತು ಬಿಟ್ಟಿದ್ದೆ, ವಿಷಯಾಂತರ ವಾಯಿತು ನೋಡು. ಅಂದು ಅಮ್ಮನನ್ನು ಒಪ್ಪಿಸಿ, ಮಲೇಶಿಯಾದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಟ್ಟೆ. ಇಂಟರ್ ವೀವ್ ಕೊಟ್ಟ ಹಲವಾರು ಕಂಪನಿಗಳಲ್ಲಿ. ಅನಿರೀಕ್ಷಿತವಾಗಿ ಒಟ್ಟು ಮೂರು ಕಂಪನಿಗಳಲ್ಲಿ ಉದ್ಯೋಗ ಖಾತ್ರಿಯಾಯಿತು. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿ ನಾನಿದ್ದೆ. ಕೊನೆಗೂ ಸಿಂಗಪೂರ್ ಕಂಪನಿಯೊಂದರಲ್ಲಿ ಸೇರಿಕೊಂಡೆ. ಕೆಲಸಕ್ಕೆ ಸೇರಿದ ನಂತರ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅಮ್ಮನಿಗೆ ಖುಶಿಯಾಯಿತು ಹಾಗೂ ಸ್ವಲ್ಪ ಬೇಜಾರಿನಲ್ಲಿಯೇ ಇದ್ದಳು, ನಾನು ವಾಪಾಸ್ಸು ಮನೆಗೆ ಬರ್ತೀನಿ ಅಂತ ಯೋಚಿಸುತಿದ್ದಳು. ಆದರೆ ಇಲ್ಲಿರುವ ಸೌಲಭ್ಯಗಳ ಕುರಿತು ಸ್ವಲ್ಪ ವಿವರವಾಗಿ ಹೇಳಿದಾಗ ಆಗ ಸ್ವಲ್ಪ ಮಟ್ಟಿಗೆ ಸಂತೋಷ ವಾಯಿತು. ಸಿಂಗಾಪೂರ್ ನಲ್ಲಿ ಕೆಲಸ ಕ್ಕೆ ಸೇರಿದೆ. ಕೈತುಂಬಾ ಸಂಭಳ, ಮತ್ತೆ ಬೇರೆ ಎಲ್ಲ ಸೌಲಭ್ಯ ತುಂಬಾ ಚೆನ್ನಾಗಿತ್ತು. ಜೀವನ ಸಂತೋಷದಿಂದ ಸಾಗ್ತಾಯಿತ್ತು. ಕೆಲಸ ಮಾಡುವ ವಾತಾವರಣ ಚೆನ್ನಾಗಿತ್ತು, ನಮ್ಮ ಕಂಪನಿಯ ಕೆಲಸಗಾರರಲ್ಲಿ ಲೋಕಲ್ಸ್, ತಮಿಳಿಯನ್ಸ್ ಹಾಗೂ ಕೆಲ ಹಿಂದಿ ಜನ ಬಿಟ್ಟರೆ ಕನ್ನಡದವರು ಅಂತ ಯಾರೂ ಇರಲಿಲ್ಲ. ಸ್ವಲ್ಪ ಬೇಜಾರಾಗ್ತಯಿತ್ತು, ಹೀಗಿರುವಾಗ ಕೇವಲ ಮೂರು ತಿಂಗಳ ಅವಧಿಯಲ್ಲಿ ಆಂಧ್ರ ದಿಂದ ಶ್ರೀ ವತ್ಸ ಎನ್ನುವ ಒಬ್ಬ ಹಿರಿಯ ಉದ್ಯೋಗಿ ಬಂದು ನಮ್ಮ ಕಂಪನಿಗೆ ಜಾಯಿನ್ ಆದರು.

ತುಂಬಾ ಅನುಭವಸ್ಥರು, ಸಹೃದಯಿ, ನಿಷ್ಕಲ್ಮಶ ವ್ಯಕ್ತಿತ್ವ. ಅವರ ಜತೆ ಪರಿಚಯವಾಗಿ ನಮ್ಮಿಬ್ಬರ ಮಧ್ಯೆ ಒಂದು ಒಳ್ಳೆ ಗೆಳೆತನ ಮೂಡಿತ್ತು. ಕಷ್ಟ ಸುಖಃಗಳನ್ನು ಹಂಚಿಕೊಳ್ಳುತಿದ್ದೆವು, ಅವರ ಅನುಭವದ ಮಾತುಗಳನ್ನು ಕೇಳಿ ಕೇಳಿ, ಅವರನ್ನೇ ನಾನು ನನ್ನ ಜೀವನದ ಗುರುವನ್ನಾಗಿ ಸ್ವೀಕರಿಸಿದ್ದೆ. ಇಂತಹ ಸ್ನೇಹಿತರು ನನಗೆ ಮೊದಲೇ ಸಿಗಬಾರದಿತ್ತೆ ಎಂದು ಬಹಳ ಸಾರಿ ಅನ್ನಿಸಿತ್ತು.
ಕಂಪನಿ ಕ್ಯಾಂಟೀನ್ ಊಟ ನಮಗೆ ಇಷ್ಟವಾಗದೆ ಇದ್ದದ್ದರಿಂದ ಮನೆಯಿಂದ ನಾನು ಊಟ ತರುತಿದ್ದೆ. ನನ್ನ ಊಟದಲ್ಲಿ ಅರ್ಧ ಊಟವನ್ನು ಅವರೊಂದಿಗೆ ಹಂಚಿಕೊಳ್ಳುತಿದ್ದೆ. ಪ್ರತಿದಿನ ನಾವು ಹೀಗೆ ಹಂಚಿಕೊಳ್ಳುವುದನ್ನು ನೋಡಿದ ಮತ್ತಿಬ್ಬರು ಸಹೋದ್ಯೋಗಿಗಳು ನಮ್ಮ ಜತೆ ಊಟ ಹಂಚಿ ಕೊಳ್ಳೂವುದಕ್ಕೆ ಶುರು ಮಾಡಿದರು. ಈ ವಿಷಯದ ಕುರಿತು, ಇಂಡಿಯಾದಲ್ಲಿ ಅವರ ಮಡದಿ ಮತ್ತು ಮಕ್ಕಳ ಜತೆ ಪ್ರತಿ ನಿತ್ಯ ಚರ್ಚಿಸುತಿದ್ದರಂತೆ. ನಿಜಕ್ಕೂ ಆ ದಿನಗಳು ತುಂಬಾ ಚೆನ್ನಾಗಿದ್ದವು. ತುಂಬಾ ಸಂತೋಷದಿಂದ ಕಾಲ ದೂಡುತಿದ್ದೆವು. ಹೀಗಿರುವಾಗ ಅವರಿಗೆ ಆಸ್ಟ್ರೇಲಿಯಾದಲ್ಲಿ ಒಳ್ಳೆ ಉದ್ಯೋಗವಕಾಶ ದೊರೆಯಿತು. ಅದಕ್ಕಾಗಿ ನಮ್ಮನ್ನೆಲ್ಲ ತೊರೆದು ಅವರು ಆಸ್ಟ್ರೇಲಿಯಾಕ್ಕೆ ಹೊರಟರು. ಆದರೆ ಅವರೆಂದೂ ನಮ್ಮನ್ನು ಮರೆಯಲಿಲ್ಲ. ಅಲ್ಲಿಂದಲೇ ನಮ್ಮ ಯೋಗ ಕ್ಷೇಮ ವಿಚಾರಿಸುತಿದ್ದರು. ಅವರ ಗೆಳೆತನ ವನ್ನು ಮಾತ್ರ ಯಾವ ಕಾರಣಕ್ಕೂ ನಾನು ಕಳೆದುಕೊಳ್ಳಲಿಲ್ಲ. ಫೋನ್ ನಲ್ಲಿ, ಈಮೇಲ್ ನಲ್ಲಿ ನಮ್ಮ ಸುಖಃ ದುಖಃ ಗಳನ್ನು ಹಂಚಿ ಕೊಳ್ಳುತಿದ್ದೆವು.
ನನಗೆ ಮದುವೇ ಯಾಗಿ ಎರಡು ವರ್ಷವಾಗಿತ್ತು, ಹಾಗೇಯೇ ಸಿಂಗಪೂರ್ ನಲ್ಲಿ ಉದ್ಯೋಗ ಮಾಡ್ತಾ ಮೂರುವರ್ಷ ಆಗಿತ್ತು. ಅಷ್ಟರಲ್ಲಿ ಇಂಡಿಯಾಗೆ ವಾಪಾಸ್ಸು ಹೋಗುವ ಮನಸ್ಸಾಯಿತು. ನನ್ನ ಅಮ್ಮ, ನಿಮ್ಮ ಅಮ್ಮ ಮತ್ತು ನೀನು, ನಿಮ್ಮೆಲ್ಲರ ಜತೆ ಆರಾಮಾಗಿ ಇರೋಣ ಅಂದ್ಕೊಂಡೆ, ಅದನ್ನು ನನ್ನ ಗುರುಗಳ ಹತ್ತಿರ ಹೇಳಿದೆ. ಅವರು ಕೆಲ ಕಾಲ ಯೋಚನೆ ಮಾಡಿ, ವಾಪಸ್ಸು ಹೋಗಬೇಡ. ನನ್ನ ಜತೆ ಆಸ್ಟ್ರೇಲಿಯಾಕ್ಕೆ ಬಾ, ಇಲ್ಲೆ ಕೆಲಸ ಕೊಡಿಸ್ತೀನಿ ಹಾಗೆ ನಿಮ್ಮ ಫ್ಯಾಮಿಲಿಗೆ ವೀಸಾ ವ್ಯವಸ್ಥೆ ಮಾಡೋಣ. ಜಾಸ್ತಿ ಯೋಚನೆ ಮಾಡದೆ, ನಿನ್ನ ರೆಸ್ಯೂಮ್, ಪಾಸ್ ಪೋರ್ಟ್ ಕಳಿಸು ಅಂತ ಹೇಳಿದರು........ ನನಗೆ ಇದು ನಿಜಾನ ಅಂತ ಅನುಮಾನ ಬಂತು. ಗುರುಗಳೇ, ತಮಾಷೆ ಮಾಡ್ತಿಲ್ಲ ತಾನೆ ಎಂದು ಮರು ಪ್ರಶ್ನೆ ಹಾಕಿದೆ. ಅದಕ್ಕೆ, ಅಯ್ಯೋ ಹುಚ್ಚಪ್ಪ ನಾನ್ಯಾಕೋ ತಮಾಷೆ ಮಾಡಲಿ, ನಿಜವಾಗ್ಲೂ ಸೀರಿಯಸ್ ಆಗಿ ಹೇಳ್ತಾಯಿದ್ದೇನೆ. ಇಷ್ಟು ದಿನ ನೀನು ಬ್ಯಾಚೆಲರ್ ಆಗಿ ಜೀವನ ಮಾಡಿದ್ದು ಸಾಕು. ಈಗ ಫ್ಯಾಮಿಲಿ ಜತೆ ನೆಮ್ಮದಿಯಾಗಿ ಜೀವನ ಮಾಡೋದನ್ನು ಕಲಿ..... ಹೀಗೆ ಅವರು ಒಂದೊಂದು ಮಾತು ಹೇಳ್ತಾಯಿದ್ದರೆ, ನಾನು ಆಕಾಶ ದಲ್ಲಿ ತೇಲಾಡ್ತಾಯಿದ್ದೆ. ನಿಜಕ್ಕೂ ದೇವರು ಒಂದಲ್ಲ ಒಂದು ರೂಪದಲ್ಲಿ ಬಂದು ಸಹಾಯ ಮಾಡ್ತಾಯಿದ್ದಾನೆ ಅಂತ ಅನ್ನಿಸಿತ್ತು.

ಮರು ಮಾತನಾಡದೆ ಅವರ ಮಾತನ್ನು ಒಪ್ಪಿ ಆಸ್ಟ್ರೇಲಿಯಾಕ್ಕೆ ನಿಮ್ಮೆಲ್ಲರ ಜತೆ ನೆಲೆಸಿ ಅಮ್ಮನ ಜತೆ ಹಾಗೂ ಅಮ್ಮನ ಜತೆ ಕಳೆದ ಆಕ್ಷಣಗಳನ್ನು ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ.
ಅದಾದ್ಮೇಲೆ, ನಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾದವು. ನಾನು ಕಂಡ ಕನಸುಗಳೆಲ್ಲ ಸಾಕಾರವಾಗಿದ್ದವು.
ಇದು ನನ್ನ ಜೀವನದಲ್ಲಿ ನಡೆದ ಒಂದು ಪ್ರಮುಖ ಘಟನೆ.
ಈಗ ಮುಂಬಯಿಯಲ್ಲಿ ಬಂದು ಸೆಟ್ಲ್ ಆಗಿದ್ದೀನಿ. ಇದೆಲ್ಲ ಮೆಲುಕು ಹಾಕ್ತಾಯಿದ್ದರೆ, ನಾವು ಯಾವತ್ತೂ ಒಳ್ಳೆ ಕೆಲಸ ಮಾಡೋದನ್ನ ಮಾತ್ರ ಬಿಡಬಾರದು. ಒಂದಲ್ಲ ಒಂದು ದಿನ ಒಂದಲ್ಲ ಒಂದು ರೀತಿಯಲ್ಲಿ ಅದು ನಮ್ಮ ಸಹಾಯಕ್ಕೆ ಬರುತ್ತೆ... ಇಂದು ಈ ನೆಮ್ಮದಿಯ ಜೀವನಕ್ಕೆ, ನನ್ನ ಕೈ ಹಿಡಿದು ಮುನ್ನೆಡಿಸಿದ ಪ್ರತಿಯೊಬ್ಬರು ಕಾರಣರಾಗಿದ್ದಾರೆ.
ಅಶಕ್ತರಿಗೆ ಸಹಾಯ ಮಾಡಬೇಕು, ನಮ್ಮ ಚಿಕ್ಕ ಸಹಾಯದಿಂದ ಅವರು ಜೀವನದಲ್ಲಿ ಸಂತೋಷವಾಗಿದ್ದರೆ ಅದಕ್ಕಿಂತ ಬೇರೆ ಏನು ನಿರೀಕ್ಷೆ ಬೇಡ.........
"ನಿಜ ಅಪ್ಪ ನಾನು ಎಲ್ಲೋ ಓದಿದ ಮಾತು ನಿಮ್ಮ ಜೀವನಕ್ಕೆ ಅನ್ವಯ ವಾಗುತ್ತೆ. ಬದುಕೆಂಬ ಪಯಣದಲಿ ಅನೇಕ ಜನರು ಜೊತೆಯಾಗುತ್ತಾರೆ, ಕೆಲವರು ಪ್ರೀತಿಸುತ್ತಾರೆ, ಕೆಲವರು ಪರೀಕ್ಷೀಸುತ್ತಾರೆ, ಕೆಲವರು ಆಶೀವ೯ದಿಸುತ್ತಾರೆ. ಇನ್ನೂ ಕೆಲವರು ಬೆಂಬಲವಾಗಿ ನಿಲ್ಲುತ್ತಾರೆ. ಕೆಲವರು ಕಾರಣವಿಲ್ಲದೇ ಬಿಟ್ಟು ಹೋಗುತ್ತಾರೆ. ಆದರೆ ತಾಳ್ಮೆಯುತ ಬದುಕು ನಮ್ಮದ್ದಾಗಲಿ.ಯಾಕೆಂದರೆ ಇಲ್ಲಿ ಕಾರಣವಿಲ್ಲದೇ ಯಾವ ಕಾರ್ಯವೂ ಸಾಗದು."
ಗುಡ್ ಮಗಳೇ, ಒಳ್ಳೇ ಮಾತು ಹೇಳಿದೆ.
ಮಗಳ ಜತೆ ಹಳೆಯ ನೆನಪುಗಳನ್ನು ಹಂಚಿಕೊಂಡು ಖುಷಿಯಿಂದ ಹುಬ್ಬಳ್ಳಿ-ಧಾರವಾಡ ವನ್ನು ಸುತ್ತಿ ಮತ್ತೆ ವಾಪಾಸ್ಸು ಮುಂಬಯಿ ಕಡೆಗೆ ಪ್ರಯಾಣ ಬೆಳೆಸಿದರು.
----- xxx -----
Photo/Image Credit: Internet source
ಲೇಖಕರು: ಪಿ.ಎಸ್.ರಂಗನಾಥ