ಬುಧವಾರ, ಮಾರ್ಚ್ 3, 2021

ಸಾಹುಕಾರ್‌ ಲಕ್ಷ್ಮಯ್ಯ

ಮೈಸೂರು ಮಹಾರಾಜರ ಪೋಷಾಕು ತಯಾರು ಮಾಡ್ತಾ ಇದ್ದೋರು ಯಾರು ಅಂತ ಗೊತ್ತಾದರೆ, ನಿಮಗೆ ಆಶ್ಚರ್ಯವಾಗುತ್ತದೆ. 

ಬೇರೆ ಯಾರು ಅಲ್ಲ, ಅವರೇ ನಮ್ಮ *ಕೊಡಿಯಾಲದ ಪದ್ಮಶಾಲಿ ಸಮಾಜದವರು*.


ಯದು ವಂಶದ ರಾಜ ಜಯಚಾಮರಾಜೇಂದ್ರ ಒಡೆಯರ್‌ ನೇಕಾರರನ್ನು ಆಂಧ್ರಪ್ರದೇಶದಿಂದ ಕೊಡಿಯಾಲ ಗ್ರಾಮಕ್ಕೆ ಕರೆಸಿಕೊಂಡು ಸೌಕರ್ಯ ಒದಗಿಸಿದ್ದರು. ಆಗ ಶುರುವಾದ ನೇಕಾರಿಕೆ ಈಗಲೂ ಮುಂದುವರೆದಿದೆ. ಬದಲಾದ ಕಾಲ ಘಟ್ಟದಲ್ಲಿ ಒಂದೆರಡು ಕೈಮಗ್ಗಗಳು ಮಾತ್ರ ಉಳಿದಿವೆ. ಬಹುಪಾಲು ವಿದ್ಯುತ್‌ಚಾಲಿತ ಯಂತ್ರಗಳೇ ಇವೆ. ನೇಕಾರಿಕೆ ಅನೇಕರಿಗೆ ಉದ್ಯೋಗ ಒದಗಿಸಿದೆ.


ಹೈದರಾಲಿ, ಟಿಪ್ಪು ಸುಲ್ತಾನ್  ಆಳ್ವಿಕೆ ಸಮಯದಿಂದಲೂ ಅರಮನೆಗೆ ಬೇಕಾದ ವಸ್ತ್ರಗಳನ್ನು ತಯಾರಿಸಿಕೊಡುತಿದ್ದವರು ನಮ್ಮ ಪದ್ಮಶಾಲಿ ಸಮಾಜದವರು. 


ಇಂತಹ ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನ ನಾವು ಮರೆಯಬಾರದು.

ಅವರೇ ಸಾಹುಕಾರ್‌ ಲಕ್ಷ್ಮಯ್ಯ. 



ಮೈಸೂರು ರಾಜ ಮನೆತನದ ಜತೆ ನಿಕಟ ಸಂಪರ್ಕ ಮತ್ತು ಅಂದಿನ ದಿವಾನ್ ಸರ್ ಮಿರ್ಜ಼ಾ ಇಸ್ಮಾಯಿಲ್ ರವರ ಒಡನಾಟ  ಹೊಂದಿದ್ದ ಸಾಹುಕಾರ್‌ ಲಕ್ಷ್ಮಯ್ಯ ಅವರು 80 ವರ್ಷಗಳ ಹಿಂದೆಯೇ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮತ್ತು ಪರಿಸರ ಕ್ಷೇತ್ರಗಳಲ್ಲಿ ಮಾದರಿ ಕೆಲಸ ಮಾಡುವ ಮೂಲಕ ಜನರಿಂದ ಸೈ ಎನ್ನಿಸಿಕೊಂಡಿದ್ದರು.


ಹಣವಂತರಿಗೆ ಸಾಮಾ ಜಿಕ ಕಾಳಜಿ ಇರುವುದಿಲ್ಲ, ಕಾಳಜಿ ಇದ್ದವರ ಬಳಿ ಹಣ ಇರುವುದಿಲ್ಲ ಎಂಬ ಮಾತಿಗೆ ಅಪವಾದ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೊಡಿಯಾಲದ ಪದ್ಮಶಾಲಿ ಸಮಾಜದ ಪ್ರಮುಖರಾದ ಸಾಹುಕಾರ್‌ ಲಕ್ಷ್ಮಯ್ಯ. 


ಆ ಕಾಲದಲ್ಲಿ, ರಸ್ತೆಗಳು ಬಹಳ ಅಪರೂಪ, ತಾಲ್ಲೂಕಿನ ಮಂಡ್ಯಕೊಪ್ಪಲು ವೃತ್ತದಿಂದ ಚಿಂದೇಗೌಡನಕೊಪ್ಪಲು– ಅರಕೆರೆ– ತಡಗವಾಡಿ– ಕೊಡಿಯಾಲ– ಹುಣಸನಹಳ್ಳಿ– ಮಂಡ್ಯ ತಾಲ್ಲೂಕಿನ ಯಲಿಯೂರು ವೃತ್ತದವರೆಗೆ ಸ್ವಂತ ಹಣದಿಂದ ರಸ್ತೆ ಅಭಿವೃದ್ಧಿಪಡಿಸಿದ್ದರು. ತಮ್ಮ ಊರಿನಿಂದ ಜನರ ಸುಗಮ ಸಂಚಾರಕ್ಕಾಗಿ  ಪಾದಚಾರಿಗಳ ಅನುಕೂಲಕ್ಕಾಗಿ ಈ ರಸ್ತೆಯನ್ನು ನಿರ್ಮಿಸಿ, ಎರಡೂ ಬದಿಯಲ್ಲಿ ದಾರಿಹೋಕರಿಗೆ ಅನುಕೂಲವಾಗಲೆಂದು ನೆರಳಿಗಾಗಿ ಮರಗಳನ್ನು ನೆಡಿಸಿದ್ದರು. ದೂರದೃಷ್ಟಿ ಹೊಂದಿದ್ದ ಲಕ್ಷ್ಮಯ್ಯ ಅವರು ದೀರ್ಘ ಬಾಳಿಕೆ ಬರಲಿ ಎಂಬ ಕಾರಣಕ್ಕೆ ಆಲದ ಮರಗಳನ್ನೇ ನೆಡಿಸಿದ್ದರು


ಸಾಹುಕಾರ್‌ ಲಕ್ಷ್ಮಯ್ಯ ಅವರು ನೆಡಿಸಿರುವ ಆಲದ ಮರಗಳು ಶ್ರೀರಂಗ ಪಟ್ಟಣ ತಾಲ್ಲೂಕಿನ ಚಿಂದೇಗೌಡನಕೊಪ್ಪಲು– ಅರಕೆರೆ ಗ್ರಾಮಗಳ ಮಧ್ಯೆ ಇರುವ ರಸ್ತೆಯ ಇಕ್ಕೆಲಗಳಲ್ಲಿ ಈಗಲೂ ಉಳಿದಿದ್ದು, ಅವರ ಪರಿಸರ ಕಾಳಜಿಗೆ ಸಾಕ್ಷಿಯಾಗಿವೆ. ‘ಆಲದ ಕೊನೆಗಳನ್ನು ನೆಡಿಸಿ ಅವುಗಳಿಗೆ ನೀರುಣಿಸಲು ತಮ್ಮ ಸ್ವಂತ ಖರ್ಚಿನಲ್ಲಿ ಕೆಲಸಗಾರರನ್ನು ನಿಯೋಜಿಸಿದ್ದರು.


ಬೇಸಿಗೆ ಕಾಲದಲ್ಲಿ ಎಳೆಯ ಸಸಿಗಳು ಒಣಗಿ ಹೋಗದಂತೆ ಎತ್ತಿನ ಗಾಡಿಗಳ ಮೂಲಕ ಹಳಗೆ (ಮಣ್ಣಿನ ದೊಡ್ಡ ಮಡಕೆ)ಗಳಲ್ಲಿ ನೀರು ತಂದು ಹಾಕುತ್ತಿದ್ದರು.ಇಲ್ಲವೆ ಆಸುಪಾಸಿನ ನೆಲ ಬಾವಿಗಳಿಂದ ನೀರು ತಂದು ಮರಗಳ ಪೋಷಣೆ ಮಾಡಲಾಗುತ್ತಿತ್ತು.  ಮರ ಬೆಳೆಸುವ ಕೆಲಸವನ್ನು ಖುದ್ದು ಲಕ್ಷ್ಮಯ್ಯ ಅವರೇ ನೋಡಿಕೊಳ್ಳುತ್ತಿದ್ದರು.


ಕುಡಿಯುವ ನೀರಿಗೆ ಬರ ಬಂದಾಗ, ಜನರಿಗೆ ಕುಡಿಯಲು ನೀರಿನ ಕಲ್ಯಾಣಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಆ ದೊಡ್ಡ ಕಲ್ಯಾಣಿ ಈಗಲೂ ಇದೆ.  ಐದು ಬಾವಿ ಗಳನ್ನು ಊರಿಗೆ ಕೊಟ್ಟಿದ್ದಾರೆ.  ಊರಿನ ಮಕ್ಕಳ  ಶಿಕ್ಷಣಕ್ಕೆ ಶಾಲೆ ನಿರ್ಮಿಸಿಕೊಟ್ಟಿದ್ದಾರೆ. ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದರು. ಅವರ ಸೇವೆ ಅಲ್ಲಿಗೆ ನಿಲ್ಲದೆ, ಅವರ ಮಕ್ಕಳು ಸಹ ಸಾಮಾಜಿಕ ಸೇವೆಗಳಿಗೆ ತೊಡಗಿಕೊಂಡಿದ್ದರು. 

ಒಟ್ಟಿನಲ್ಲಿ ಸಾರ್ಥಕ ಭಾವದಿಂದ ಬಾಳಿ ಬದುಕಿದ ಕುಟುಂಬದವರು.


ಊರಿಗೆ ಎಷ್ಟೆಲ್ಲ ಕೊಡುಗೆ ನೀಡಿದ ಸಾಹುಕಾರ್ ಲಕ್ಷ್ಮಯ್ಯ ನವರ ಕುಟುಂಬದ ಆಸ್ತಿಗಳನ್ನ ಕೆಲ ದುಷ್ಟರು ಕಬಳಿಸಿದ್ದಾರೆ. ಕೊಡುಗೈ ಕರ್ಣನಂತೆ ಮೆರೆದಿದ್ದ ಆ ಕುಟುಂಬಕ್ಕೆ, ಕೆಲ ಕಪಟಿಗಳ  ದ್ರೋಹ ಎಂದೂ ಮರೆಯಲಾರದ್ದು.


ಇನ್ನು ಕೊಡಿಯಾಲ ಬಗ್ಗೆ ಹೇಳುವುದಾದರೆ, 


ಅಂದಿನ ಕಾಲದಲ್ಲಿ, ಕೊಡಿಯಾಲ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕೈಮಗ್ಗಗಳನ್ನು ನಡೆಸುತ್ತಿದ್ದರು. ಬಟ್ಟೆ ನೇಯಲು ಅಗತ್ಯವಾದ ರೇಷ್ಮೆ ಮತ್ತು ಹತ್ತಿಯ ನೂಲು ಹಾಗೂ ಕಲಾಪತ್ತಿನ ಜರಿಯನ್ನು ಬೆಂಗಳೂರಿನಿಂದ ಯಲಿಯೂರು ವರೆಗೆ ರೈಲಿನಲ್ಲಿ ತರಿಸಿಕೊಳ್ಳುತ್ತಿದ್ದರು. ಅಲ್ಲಿಂದ ಕೊಡಿಯಾಲ ಗ್ರಾಮದ ವರೆಗೆ ಎತ್ತಿನ ಗಾಡಿಗಳಲ್ಲಿ ಕಚ್ಛಾ ಸಾಮಗ್ರಿ ತರಲಾಗುತ್ತಿತ್ತು. 


ನೇಕಾರ ಮನೆತನ ಸಾಹುಕಾರ್‌ ಲಕ್ಷ್ಮಯ್ಯ ಮತ್ತು ಇತರ 100ಕ್ಕೂ ಹೆಚ್ಚು ಕುಟುಂಬಗಳು ಹಲವು ದಶಕಗಳ ಹಿಂದೆ ನೇಯ್ಗೆ ಉದ್ಯಮ ಆರಂಭಿಸಿದ್ದು ಕೊಡಿಯಾಲ ಗ್ರಾಮದಲ್ಲಿ. ಹತ್ತಿಪ್ಪತ್ತು ಕೈ ಮಗ್ಗಗಳಿದ್ದ ಈ ಗ್ರಾಮದಲ್ಲಿ ಈಗ 500ಕ್ಕೂ ಹೆಚ್ಚು ಪವರ್‌ಲೂಮ್‌ (ವಿದ್ಯುತ್‌ಚಾಲಿತ ಮಗ್ಗ)ಗಳಿವೆ. ವಾರ್ಷಿಕ ಕೋಟ್ಯಂತರ ರೂಪಾಯಿ ಬಟ್ಟೆ ವ್ಯಾಪಾರ ನಡೆಯುತ್ತದೆ. ಅದರಲ್ಲೂ ಶೇ 95ರಷ್ಟು ಮಂದಿ ಸೀರೆ ನೇಯ್ಗೆಯಲ್ಲಿ ತೊಡಗಿದ್ದಾರೆ.


ಇಲ್ಲಿನ ಪಾಲಿಕಾಟನ್‌ ಸೀರೆಗಳು ಸುತ್ತಮುತ್ತಲ ಗ್ರಾಮಗಳಲ್ಲಿ ಹೆಸರಾಗಿವೆ. ಮಂಡ್ಯ, ಮೈಸೂರು, ಬೆಂಗಳೂರು ಇತರ ನಗರ ಪ್ರದೇಶಗಳ ಮಹಿಳೆಯರು ಇಲ್ಲಿಗೆ ಬಂದು ಸೀರೆ ಕೊಳ್ಳುತ್ತಾರೆ. ಕೊಡಿಯಾಲದ ಸೀರೆಗಳು ಮೈಸೂರಿನ ಹೆಸರಾಂತ ‘ಸುಮಂಗಲಿ’ ಹಾಗೂ ‘ಕರ್ನಾಟಕ ಸ್ಯಾರಿ ಸೆಂಟರ್‌’ನಲ್ಲಿ ಮಾರಾಟವಾಗುತ್ತವೆ.


ಇಲ್ಲಿ ಉತ್ಪಾದನೆಯಾಗುವ ಸೀರೆಗಳಲ್ಲಿ ಶೇ 10ರಿಂದ 15ರಷ್ಟನ್ನು ತಮಿಳನಾಡು ಹಾಗೂ ಆಂಧ್ರಪ್ರದೇಶಕ್ಕೆ ಕಳುಹಿಸಿಕೊಡಲಾಗುತ್ತದೆ. ಸಾದಾ ಸೀರೆ, ಝರಿ ಅಂಚಿನ ಸೀರೆಗಳು ಹೀಗೆ ವಿವಿಧ ಬಗೆಯ, ಮಹಿಳೆಯರ ಅಭಿರುಚಿಗೆ ತಕ್ಕಂತೆ ಸೇರಿಗಳನ್ನು ಉತ್ಪಾದಿಸಲಾಗುತ್ತದೆ. ಬಾಡಿಗೆ, ಕೂಲಿ ಹಾಗೂ ವಿದ್ಯುತ್‌ ದರ ಕಡಿಮೆ ಇರುವುದರಿಂದ ದೊಡ್ಡಬಳ್ಳಾಪುರ, ಆನೇಕಲ್‌, ಚಿತ್ರದುರ್ಗ ಇತರ ಕಡೆಗಳ ನೇಕಾರರು ಕೊಡಿಯಾಲ ಗ್ರಾಮಕ್ಕೆ ಬಂದು ನೇಯ್ಗೆ ಉದ್ಯಮ ಆರಂಭಿಸಿದ್ದಾರೆ. ಕೊಡಿಯಾಲದಲ್ಲಿ ನುರಿತ ಕೆಲಸಗಾರರು ಸಿಗುತ್ತಾರೆ ಎಂಬುದು ಬಟ್ಟೆ ಉದ್ಯಮಿಗಳ ಆಕರ್ಷಣೆಗೆ ಮತ್ತೊಂದು ಕಾರಣ. ಮೊಳಕಾಲ್ಮೂರು ರೇಷ್ಮೆ ಹಾಗೂ ಕಾಟನ್‌ ಸೀರೆಯನ್ನು ಇಲ್ಲಿಗೆ ತರಿಸಿಕೊಂಡು ಇಲ್ಲಿನ ಪಾಲಿಕಾಟನ್‌ ಸೀರೆಗಳನ್ನು ಅಲ್ಲಿಗೆ ಕಳುಹಿಸಿಕೊಡುವವರೂ ಇದ್ದಾರೆ.


‘ಸೂರತ್‌ನಿಂದ ಝರಿ, ಬಾಂಬೆಯಿಂದ ಪಾಲಿಸ್ಟರ್‌ ಹಾಗೂ ಕೋಲ್ಕತ್ತಾದಿಂದ ಹತ್ತಿಯನ್ನು ತರಿಸಿಕೊಳ್ಳುತ್ತೇವೆ. ಇಲ್ಲಿ ಎಳೆಯನ್ನು ಹುರಿ ಮಾಡುವ 3 ಘಟಕಗಳಿದ್ದು, ಸ್ಥಳೀಯ ಪವರ್‌ಲೂಮ್‌ಗಳಿಗೆ ಅಗತ್ಯವಾದ ದಾರವನ್ನು ಪೂರೈಸುತ್ತವೆ. ಒಬ್ಬ ನುರಿತ ನೇಕಾರ ಒಂದು ದಿನದಲ್ಲಿ 8 ಸಾದಾ ಸೀರೆ ಇಲ್ಲವೆ, 4 ಡಿಸೈನ್‌ ಸೀರೆಗಳನ್ನು ಉತ್ಪಾದಿಸುತ್ತಾನೆ. ಒಂದು ತಿಂಗಳಿಗೆ 4ರಿಂದ 5 ಸಾವಿರ ಸೀರೆ ಉತ್ಪಾದಿಸುವ ಘಟಕಗಳೂ ಇವೆ.


ಮಾಹಿತಿ ಸಂಗ್ರಹ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings