ಚಂದ್ರನ ಒಂದು ತುಂಡು ಇಲ್ಲಿ ಬಿದ್ದಿತಂತೆ.
ಅದು ಸಮತಟ್ಟವಾದ
ಭೂಮಿ, ಅಲ್ಲೊಂದು ಕಡೆ ಮಾತ್ರ ಸುಮಾರು 50 x 70 ಮೀಟರ್ ಸುತ್ತಳತೆ
ಮತ್ತು 20 ಮೀಟರ್ ಆಳದ ದೊಡ್ಡದಾದ ಕುಳಿ. ಆ ಜಾಗವನ್ನ ಕಂಡೊಡನೆ ನಮಗನಿಸುವುದು, ಇಲ್ಲಿ ಯಾವುದೋ ಒಂದು ಆಕಾಶಕಾಯ ಮೇಲಿನಿಂದ ಬಿದ್ದಹಾಗಿದೆಯಲ್ಲ? ಅದು ಬಿದ್ದರೆ ಉಂಟಾಗುವ ಒಂದು ತಗ್ಗಿನ ಹೊಂಡದಂತೆ
ಇದೆಯಲ್ಲ ಆ ಜಾಗ!!!
ಚಂದ್ರನ ತುಂಡೋ, ಧೂಮಕೇತುವೋ
ಅಥವ ಯಾವುದೋ ಒಂದು ಆಕಾಶಕಾಯ ಬಿದ್ದಿರಬಹುದೇನೋ ಎಂದು ಅನಿಸುತ್ತೆ. ಅಂತಹ ವಸ್ತು ಬಿದ್ದರೆ ಹೇಗಿರಬಹುದು
ಎಂದು ನೋಡುವುದಕ್ಕೆ ಇದು ಒಂದು ಸೂಕ್ತವಾದ ಸ್ಥಳ. ಆ ಜಾಗವನ್ನೊಮ್ಮೆ ನೋಡಿದರೆ, ವಾವ್ ಎನ್ನುವ ಉದ್ಗಾರ ಬರದೇ ಇರದು. ಕೆಲವೆಡೆ ಬಟಾ ಬಯಲು ಪ್ರದೇಶ, ಪಕ್ಕದಲ್ಲಿ ಗುಡ್ಡದ ಸಾಲು, ಸ್ವಲ್ಪ ಮುಂದೆ ವಿಶಾಲವಾದ ಅರಬ್ಬಿ
ಸಮುದ್ರ. ಹೀಗೇ ಎಲ್ಲವೂ ಒಟ್ಟಿಗೆ ನೋಡಿದರೆ, ದಿನನಿತ್ಯದ ಜಂಜಾಟದ ನಡುವೆ
ಈ ನಯನ ಮನೋಹರ ಪ್ರದೇಶ ಕಣ್ತಂಪು ಮಾಡುವುದು ಖಂಡಿತ.
ಅಂದ ಹಾಗೆ ಇದು
ಇರುವುದು ಒಮಾನ್ ದೇಶದಲ್ಲಿ. ರಾಜಧಾನಿ ಮಸ್ಕತ್ ನಿಂದ ಸೂರ್ ರಸ್ತೆಯಲ್ಲಿ ಕುರಿಯತ್ ಮಾರ್ಗವಾಗಿ ಸುಮಾರು
130 ಕಿ.ಮಿ. ದೂರದಲ್ಲಿ "ಬಿಮ್ಮ ಸಿಂಕ್ ಹೋಲ್" ಎಂಬಲ್ಲಿದೆ ಈ ಸ್ಥಳ. ಮಸ್ಕತ್ ನಿಂದ ಸೂರ್
ರಸ್ತೆ ಮಾರ್ಗವಾಗಿ ಸಂಚರಿಸಿದರೆ ದಿಬಾಬ್ ಮತ್ತು ಹವಿಯತ್ ನಜ್ಮ್ ಪಾರ್ಕ್ ಸೂಚನಾ ಫಲಕ ಕಾಣಿಸುತ್ತೆ.
ಪಾರ್ಕ್ ಒಳಗೆ ಸ್ವಲ್ಪ ನಡೆದು ಹೋದರೆ ಅತಿ ಸುಂದರ ಆಳವಾದ ನೀರಿನ ಹೊಂಡ ಕಾಣಿಸುತ್ತೆ. ನೀಲಿ ಬಣ್ಣದ
ನೀರು,
ಸ್ವಲ್ಪ ಹಸಿರು ಮಿಶ್ರಿತ ಹಾಗೂ ಕಡು ನೀಲಿ ಪದರ ದಂತೆ ಕಾಣುವ ನೀರು ಬಹಳ ಆಕರ್ಷಕ
ವಾಗಿದೆ.
ಅರಬ್ಬೀ ಸಮುದ್ರ
ತೀರದಿಂದ ಸುಮೂರು 600 ಮೀಟರ್ ದೂರದಲ್ಲಿ ರುವುದರಿಂದ, ಸಮುದ್ರದ ಉಪ್ಪು ನೀರು ಹಾಗು ಇಲ್ಲಿನ
ಅಂತರ್ಜಲ ಎರಡು ಮಿಶ್ರಿತ ವಾಗಿರುವುದರಿಂದ ನೀರು ತುಂಬಾ ಆಕರ್ಷಕ ಬಣ್ಣ ದಲ್ಲಿ ಕಾಣುತ್ತೆ.
ಸ್ಥಳೀಯರ ಪ್ರಕಾರ
ಇಲ್ಲಿ ಆಕಾಶಕಾಯವೊಂದು ಬಿದ್ದಿದೆ. ಕೆಲವರು ಚಂದ್ರನ
ಒಂದು ತುಂಡು ಬಿದ್ದು ಹೀಗೆ ಆಗಿದೆ ಎನ್ನುತ್ತಾರೆ. ಆದರೆ ಭೂಗರ್ಭ ಶಾಸ್ತ್ರಜ್ನರ ಪ್ರಕಾರ ಇಲ್ಲಿರುವ
ಅತಿ ಹೆಚ್ಚು ಸುಣ್ಣದಕಲ್ಲು ಗಳು ಸವೆದು ಸವೆದು ನೆಲದ ಪದರ ಜರುಗಿ ಭೂಮಿ ಕುಸಿದಿರಬಹುದೆಂದು ಅಂದಾಜಿಸಿದ್ದಾರೆ.
ಒಮಾನ್ ನಲ್ಲಿ ಸುಣ್ಣದಕಲ್ಲಿನ ಪ್ರದೇಶಗಳನ್ನ ಯಥೇಚ್ಚವಾಗಿ ಕಾಣಬಹುದು. ಹೀಗಾಗಿ ಹಲವೆಡೆ, ಭೂ ಸವಕಳಿಯಂತಹ ಪ್ರದೇಶಗಳು
ಇಲ್ಲಿ ಸಿಗುತ್ತವೆ. ಇದೊಂದು ನೈಸರ್ಗಿಕ ಕ್ರಿಯೆ. ಸಾವಿರಾರು ವರ್ಷಗಳಿಂದ ನಡೆದಿರಬಹುದಾಗಿದೆ.
ಒಮಾನ್ ನಲ್ಲಿ
ನಿಸರ್ಗ ನಿರ್ಮಿತ ಪ್ರವಾಸಿ ತಾಣಗಳಿಗೆ ಕೊರತೆ ಏನು ಇಲ್ಲ. ಪಕ್ಕದ ದುಬೈ ನಲ್ಲಿ ಮಾನವನಿರ್ಮಿತ ಪ್ರವಾಸಿ
ತಾಣಗಳಿದ್ದರೆ,
ಒಮಾನ್ ನಲ್ಲಿ ನೋಡೋದಿಕ್ಕೆ ನೈಸರ್ಗಿಕ
ನಿರ್ಮಿತ ಹಲವಾರು ಪ್ರದೇಶಗಳು ಇವೆ. ಇವುಗಳಲ್ಲಿ ಪ್ರಸಿದ್ದ
ವಾದ ಒಂದು ಪ್ರವಾಸಿ ತಾಣ "ಬಿಮ್ಮ ಸಿಂಕ್ ಹೋಲ್".
ಪ್ರವಾಸಿಗರು
ಈ ಹೊಂಡದಲ್ಲಿ ಈಜುತ್ತಾರೆ,
ಡೈವ್ ಹೊಡೆಯುತ್ತಾರೆ, ಆಟವಾಡುತ್ತಾರೆ, ದಡದಲ್ಲಿರುವ ನೀರಿನಲ್ಲಿ ಕಾಲಿಟ್ಟು ಸಣ್ಣ ಸಣ್ಣ ಮೀನುಗಳಿಂದ ಕಾಲ್ಬೆರಳುಗಳನ್ನು ಕಚ್ಚಿಸಿಕೊಳ್ಳುತ್ತಾರೆ, ಇದು ಒಂಥರಾ ದುಡ್ಡು ಕೊಡದೆ ಫಿಶ್ ತೆರಪಿ ಮಾಡಿಸಿ ಕೊಂಡ ಹಾಗಿರುತ್ತೆ.
ಸಿಂಕ್ ಹೋಲ್ ನ ಒಳಗೆ ಇಳಿಯಲು ಮೆಟ್ಟಿಲುಗಳನ್ನು ಮಾಡಲಾಗಿದೆ, ಮೇಲೆ ಸುರಕ್ಷೆ ಗಾಗಿ
4 ಅಡಿಯ ರಕ್ಷಣಾ ಗೋಡೆ ಯಿದೆ. ಸುಸಜ್ಜಿತ ಶೌಚಾಲಯ
ಸಹಿತ ಉದ್ಯಾನವನ, ಹತ್ತಿರದಲ್ಲಿ ಸುಂದರ ಸಮುದ್ರ
ತೀರ, ಒಟ್ಟಿನಲ್ಲಿ ಸುಂದರ ಸಂಜೆ
ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಬಹುತೇಕ ವಿದೇಶಿ ಪ್ರವಾಸಿಗರು ಅದರಲ್ಲೂ ಯುರೋಪಿಯನ್ನರು ಇಲ್ಲಿಗೆ ಅತಿ ಹೆಚ್ಚು ಭೇಟಿ ಕೊಡುತ್ತಾರೆ, ಇಲ್ಲಿನ ನಗರ ಪಾಲಿಕೆ ಯವರು
ವಿಹಾರಕ್ಕಾಗಿ ಒಂದು ಉದ್ಯಾನವನ ಮಾಡಿದ್ದಾರೆ. ವಾರ ಪೂರ್ತಿ ಕೆಲಸದ ದಣಿವನ್ನು ನಿವಾರಿಸುಕೊಳ್ಳುವುದಕ್ಕೆ
ಒಂದು ದಿನದ ಹೊರ ಸಂಚಾರವನ್ನು ಯೋಜಿಸಿದಲ್ಲಿ, ಹತ್ತಿರದಲ್ಲಿ ವಾದಿ ಶಾಬ್, ವಾದಿ ತಿವಿ ಸ್ಥಳಗಳಿದ್ದು, ಮಾರ್ಗ ಮಧ್ಯದಲ್ಲಿ ಸಿಂಕ್
ಹೋಲ್ ಗೆ ಬೇಟಿ ನೀಡುವ ಯೋಜನೆ ಹಾಕಿ ಕೊಂಡರೆ ಒಂದು ದಿನದ ಪ್ರವಾಸ ಮನಕ್ಕೆ ಮುದ ನೀಡುವುದರಲ್ಲಿ ಸಂಶಯವಿಲ್ಲ.
ಒಮಾನ್ ದೇಶಕ್ಕೆ ಭೇಟಿ ನೀಡಿದಾಗ ಈ ಸಿಂಕ್ ಹೋಲ್ ನೋಡುವುದನ್ನ ಮರೆಯಬೇಡಿ. ಒಮಾನ್ ನಲ್ಲಿ
ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಬೇಸಿಗೆ ಕಾಲವಿರುತ್ತದೆ. ನಂತರ ನಾಲ್ಕೈದು ತಿಂಗಳು ತಂಪಾದ ಹವಾಮಾನ
ವಿರುತ್ತದೆ. ಹೀಗಾಗಿ ಅಕ್ಟೋಬರ್ ನಿಂದ ಮಾರ್ಚ್ ನ ಮಧ್ಯೆ ಯಾವಾಗಲಾದರೊಮ್ಮೆ ಭೇಟಿ ನೀಡಿದರೆ ಇನ್ನೂ
ಚೆನ್ನ. ಇಲ್ಲದೆ ಇದ್ದರೆ, ಈ ಬಿರು ಬೇಸಿಗೆ ಸೆಖೆ ನಮ್ಮ ಮೈಯಲ್ಲಿರುವ ನೀರನ್ನೆಲ್ಲ ಹಿಂಡಿ ಬೆವರಿನ ರೂಪದಲ್ಲಿ ಹೊರ ಹಾಕುವುದು
ನಿಶ್ಚಿತ.
ಪ್ರಪಂಚದ ಕೆಲವೇ ಕೆಲವು ಇಂತಹ ಸಿಂಕ್ ಹೋಲ್ ಗಳಲ್ಲಿ ಒಮಾನ್ ದೇಶದ "ಬಿಮ್ಮ ಸಿಂಕ್ ಹೋಲ್"
ಸಹ ಇದರಲ್ಲಿ ಒಂದು ಎನ್ನುವುದು ಒಮಾನಿಗಳಿಗೆ ಹೆಮ್ಮೆಯಿದೆ. ಇದು ಅತಿ ಪುರಾತನವಾದದ್ದರಿಂದ, ಇಲ್ಲಿನ ಸರ್ಕಾರ ಇದನ್ನು
ಸಂರಕ್ಷಿಸಿ, ಒಮಾನ್ ಪ್ರವಾಸಿ ತಾಣಗಳ
ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ.
ಪ್ರಪಂಚದಲ್ಲಿರುವ ಕೆಲ ದೊಡ್ಡದಾದ ಸಿಂಕ್ ಹೋಲ್ ಗಳು ಈ ಕೆಳಗಿನಂತಿವೆ.
1. ಈಜಿಪ್ಟ್ ದೇಶದ ಖಟ್ಟಾರ
ಡಿಪ್ರೆಶನ್
(Qattara Depression,
West of Cairo, Egypt)
2. ರಷ್ಯ ದೇಶದ ಬೆರೆಜ಼ಿಕಿ (Berezniki, Russia)
3. ಗ್ವಾಟಿಮಾಲ (Guatemala City)
4. ಟೆಕ್ಸಾಸ್ ನ ಡೆವಿಲ್ ಸಿಂಕ್ ಹೋಲ್ (Texas Devil’s Sinkhole)
5. ವೆನೆಜ಼ುವೆಲಾ ಸರಿಸಾರಿನಾಮ
ಸಿಂಕ್ ಹೋಲ್ಸ್, (Sarisarinama Sinkholes, Venezuela)
6. ಒಮಾನ್ ಬಿಮ್ಮ ಸಿಂಕ್ ಹೋಲ್ (Bimmah sinkhole, Oman)
7. ಫ್ಲೋರಿಡಾದ ಆಗ್ರಿಕೋ ಜಿಪ್ಸಮ್
ಸ್ಟಾಕ್
(Agrico Gypsum Stack,
Florida)
8. ಮ್ಯಾಕುಂಗಿ ಸಿಂಕ್‌ಹೋಲ್, ಪೆನ್ಸಿಲ್ವೇನಿಯಾ (Macungie Sinkhole, Pennsylvania)
9. ಡೈಸೆಟ್ಟಾ ಸಿಂಕ್‌ಹೋಲ್, ಟೆಕ್ಸಾಸ್ (Daisetta Sinkhole,
Texas)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ