ಸೋಮವಾರ, ಜೂನ್ 14, 2021

ಅರಬ್ಬರ ಮಲೆನಾಡು.

ಲೇಖನ: ಪಿ.ಎಸ್.ರಂಗನಾಥ ಮಸ್ಕತ್.

 


ಎಲ್ಲರಿಗೂ ಗೊತ್ತಿರುವಂತೆ, ಅರಬ್ಬರು ವಾಸಿಸುವ ಅರೇಬಿಯಾ ಸುತ್ತಮುತ್ತಲೂ, ಬಹುತೇಕ ಭೂ ಪ್ರದೇಶ ಮರುಭೂಮಿಯಿಂದ ಕೂಡಿದೆ, ಇಲ್ಲಿ ತೈಲ ನಿಕ್ಷೇಪ ಗಳಿವೆ, ಯಥೇಚ್ಚವಾಗಿ ಬೆಳೆಯುವ ಖರ್ಜೂರದ ಮರಗಳಿವೆ,  ಅತಿ ಹೆಚ್ಚು ಬಿಸಿಲು ಮತ್ತು  ಮಳೆ ಕಡಿಮೆ ಇರುವ ಜಾಗ ಸಹ ಇದು. ಸ್ವಾಭಾವಿಕವಾಗಿ ನೀರಿನ ಕೊರತೆ ಇಲ್ಲಿದೆ ಎನ್ನುವುದು ಗೊತ್ತಿದೆ. ಭಾರತದಂತೆ ವೈವಿಧ್ಯಮಯವಾದ ವಾತಾವರಣವಿಲ್ಲ ಎನ್ನುವುದು ತಿಳಿದಿರುವಂತಹದ್ದೆ. ಇಲ್ಲಿ ನಾವು ಕಾಣುವುದು ಒಂದು ಬೇಸಿಗೆ ಕಾಲ ಇನ್ನೊಂದು ಚಳಿಗಾಲ (ಕಡಿಮೆ ಬೇಸಿಗೆ ಕಾಲ ಅಂತನೂ ಕರಿಯಬಹುದು). ಈ ಬೇಸಿಗೆ ಸಮಯದಲ್ಲಿ (ಏಪ್ರಿಲ್ ರಿಂದ ಸೆಪ್ಟೆಂಬರ್) ಅತ್ಯಧಿಕ ತಾಪಮಾನ ಇಲ್ಲಿ ದಾಖಲಾಗುತ್ತದೆ. ಹಲವಾರು ಬಾರಿ ಐವತ್ತು ಡಿಗ್ರಿ ಸೆಲ್ಶಿಯಸ್ ಅನ್ನು ದಾಟಿ ಬಿಡುತ್ತದೆ. ಭಾರತದಲ್ಲಿ, ಮಾರ್ಚ್ ನಿಂದ ಮೇ ವರೆಗೂ ಬೇಸಿಗೆಕಾಲವಿದ್ದರೆ,  ಇಲ್ಲಿ ಏಪ್ರಿಲ್ ರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಕಡು ಬೇಸಿಗೆ ಯಿರುತ್ತದೆ, ಅಕ್ಟೋಬರ್ ತಿಂಗಳಿನಿಂದ ತಾಪಮಾನ ಕಡಿಮೆಯಾಗುತ್ತ ಬರುತ್ತದೆ. ಇಲ್ಲಿ ಮಳೆ ಬಹಳ ಅಪರೂಪ. ಇಂತಹ ಬಿರುಬಿಸಿಲಿನ ಜಾಗದಲ್ಲಿ ಇರುವ ಗಿಡ ಮರಗಳಿಗೆ ಸಾಕಷ್ಟು ನೀರನ್ನು ಕೊಡದೆ ಹೋದರೆ, ಅವು ಒಣಗಿ ಹೋಗುತ್ತವೆ.

 

ವಸ್ತು ಸ್ಥಿತಿ ಹೀಗಿರುವಾಗ ಇಲ್ಲಿ ಹೇಗೆ ಮಲೆನಾಡು ಸೃಷ್ಟಿಯಾಗುತ್ತದೆ? ಅದು ಹೇಗೆ ಸಾಧ್ಯ? ಎಲ್ಲೋ ಒಂದು ಕಡೆ ಕೃತಕ ಅರಣ್ಯ ಸೃಷ್ಟಿಸಿ ಅದನ್ನ ಮಲೆನಾಡು ಅಂತ ತಮಾಷೆ ಮಾಡ್ತಿದ್ದೀರಿ, ಎಂದು ನಿಮಗನಿಸಬಹುದು. ಯಾಕೆಂದರೆ, ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮಘಟ್ಟ, ಹಲವಾರು ನದಿಗಳು, ನೂರಾರು ಜಲಪಾತಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿಗಳು, ದಟ್ಟ ಕಾನನಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿಂದೆತ್ತಣ ಸಂಬಂಧ?

 

ಅಂತಹ ನೈಸರ್ಗಿಕ ನಿರ್ಮಿತ ಮಲೆನಾಡಿನಂತಹ ರಮ್ಯ ರಮಣೀಯ ಪ್ರದೇಶ ಒಮಾನ್ ದೇಶದ ದೋಫಾರ್ ಪ್ರಾಂತ್ಯದಲ್ಲಿದೆ. ಇದು ಅರಬ್ಬರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಜೂನ್ ತಿಂಗಳಿಂದ ಆಗಸ್ಟ್ ಕೊನೆಯವರೆಗೂ ಮುಂಗಾರು ಸಮಯದಲ್ಲಿ ಈ ಪ್ರಾಂತ್ಯದಲ್ಲಿ ಸುಮಾರು 10,000 ಚದರ ಕಿ.ಮಿ. ಕ್ಕೂ ಹೆಚ್ಚು ಜಾಗ  ನಮ್ಮ ಕರ್ನಾಟಕ ಕುದುರೆಮುಖದ ಬೆಟ್ಟಗಳ ಶ್ರೇಣಿಯಂತೆ ಹಚ್ಚ ಹಸಿರಿನಿಂದ ಆವೃತ್ತವಾಗುತ್ತದೆ. ಆ ಸ್ಥಳಗಳನ್ನ ನೋಡುತಿದ್ದಾಗ ನಾವು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆ ಅಥವ ಕೊಡಗಿನಲ್ಲಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಬೆಟ್ಟಗಳ ರಾಶಿಯಲ್ಲಿ, ಎಲ್ಲೆಲ್ಲೂ ಹಚ್ಚ ಹಸಿರು. ಬೆಟ್ಟಗಳ ಬದಿಯಲ್ಲಿಯೇ ಇರುವ ವಿಶ್ವದರ್ಜೆಯ ಕಡಲ ತೀರಗಳು. ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಪುಟ್ಟ ಜಲಪಾತಗಳು, ನದಿ ತೊರೆಗಳು, ಮುಂತಾದವೆಲ್ಲವೂ ನಮ್ಮ ಕರಾವಳಿ ಮತ್ತು ಮಲೆನಾಡನ್ನು ಜ್ಞಾಪಿಸುತ್ತವೆ.  

 

ದೋಫರ್ ಪ್ರಾಂತ್ಯದ ಪ್ರಮುಖ ಪಟ್ಟಣ ಸಲಾಲ್ಹ ಎನ್ನುವ ನಗರ. ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ. ರಾಜಧಾನಿ ಮಸ್ಕತ್ ನಿಂದ 1,000 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ. ಸುತ್ತ ಮುತ್ತಲಿನ ಅರಬ್ ದೇಶಗಳಾದ ಸೌದಿ ಅರೇಬಿಯ, ಯುಎಇ, ಕತಾರ್, ಬಹ್ರೇನ್, ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಬೇಸಿಗೆಯಲ್ಲಿ, ಅಂದರೆ ಜೂನ್ ನಿಂದ ಸೆಪ್ಟೆಂಬರ್ ವರೆಗೂ, ಅಲ್ಲಿನ ಬಿಸಿ ವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹದಲ್ಲಿನ ತಂಪಾದ ಹವೆ ಮತ್ತು ವಾತಾವರಣವನ್ನು ಸವಿಯಲು  ಭೇಟಿಯಿಡುತ್ತಾರೆ. ಪ್ರವಾಸಿಗರ ಬೇಸಿಗೆ ರಜೆ ಕಳೆಯಲು ಮತ್ತು ಹಿತಕರವಾದ ಹವಾಮಾನ ಆನಂದಿಸಲು ದೋಫಾರ್ ಗವರ್ನ್ಮೆಂಟ್ ಆಫ್ ಸಲಾಲ ಉತ್ಸವ ನಡೆಸಿ  ಸಂಗೀತ , ನೃತ್ಯ , ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ದೂರದೂರುಗಳಿಂದ ಪ್ರವಾಸಿಗರು ಇಲ್ಲಿ ಬಂದು ಟೆಂಟ್ ಗಳನ್ನು ಹಾಕಿಕೊಂಡು ತಿಂಗಳುಗಳ ಕಾಲ ಇಲ್ಲಿ ವಾಸಿಸುತ್ತ, ಸುತ್ತಮುತ್ತಲಿನ ಎಲ್ಲ ಪ್ರವಾಸಿತಾಣಗಳಿಗೆ ಭೇಟಿ ನೀಡಿ ತಮ್ಮ ರಜಾದಿನಗಳನ್ನ ಕಳೆಯುತ್ತಾರೆ. ಈ ಮೂರುನಾಲ್ಕು ತಿಂಗಳುಗಳು ಇಲ್ಲಿನ ಪ್ರವಾಸಿಗರಿಗೆ ಇದು ಸ್ವರ್ಗವೇ ಸರಿ.

 

ಒಮಾನ್ ದೇಶದ ದಕ್ಷಿಣ ಭೂಭಾಗದಲ್ಲಿ ಹಿಂದೂ ಮಹಾಸಾಗರಕ್ಕಂಟಿಕೊಂಡಿರುವ ಈ ಪ್ರದೇಶ, ನಮ್ಮ ಭಾರತದಲ್ಲಿ ಮುಂಗಾರು ಪ್ರಾರಂಭಗೊಳ್ಳುವ  ಸಮಯದಲ್ಲಿ ಇಲ್ಲೂ ಸಹ ಮುಂಗಾರು ಪ್ರಾರಂಭವಾಗುತ್ತದೆ. ಮುಂಗಾರು ಮಾರುತಗಳು ಈ ಪ್ರದೇಶದ ಮೂಲಕ ಹಾದುಹೋಗುವುದರಿಂದ, ಇಲ್ಲಿನ ಮರಗಿಡಗಳೆಲ್ಲವೂ ಜೀವಕಳೆ ಪಡೆಯುತ್ತವೆ. ಮೋಡ ಮುಚ್ಚಿದ ವಾತಾವರಣ. ಸತತವಾಗಿ ಬೀಳುವ ಇಬ್ಬನಿ, ತಂಪಾದ ಗಾಳಿ. ಇವೆಲ್ಲವೂ ಸೇರಿ ಈ ಭೂ ಪ್ರದೇಶದ ಎಲ್ಲ ಗಿಡಮರಗಳನ್ನ ಹಚ್ಚ ಹಸಿರಾಗಿಸುತ್ತದೆ.  ಪ್ರತಿ ವರ್ಷ ಮಳೆಯಾಗುತ್ತದೆ ಎನ್ನುವ ಭರವಸೆ ಇಲ್ಲ.

ಮುಂಗಾರು ಕಳೆದ ನಂತರ ಈ ಹಚ್ಚ ಹಸಿರಿನ ಗಿಡ ಮರಗಳು, ಹುಲ್ಲು ಎಲ್ಲವೂ ಒಣಗಿಹೋಗುತ್ತವೆ. ಕರೀಫ್ ಸೀಸನ್ ನಲ್ಲಿ ನೋಡಿದ ಹಸಿರು ಪ್ರದೇಶ ಒಮ್ಮೆಲೆ ಅಕ್ಟೋಬರ್ ತಿಂಗಳಲ್ಲಿ ಒಣ ಹುಲ್ಲಿನಂತಾಗುತ್ತದೆ. ಯಾವಾಗಲು ಮಂಜು ಕವಿತಿದ್ದ ರಸ್ತೆಗಳು ಇದ್ದಕ್ಕಿದ್ದ ಹಾಗೆ ಬಟಾ ಬಯಲಿನಂತೆ ಕಾಣತೊಡಗುತ್ತದೆ. ಅಲ್ಲಲ್ಲಿ ಹರಿಯುತಿದ್ದ ಚಿಕ್ಕ ಚಿಕ್ಕ ಝರಿಗಳು ಬತ್ತತೊಡಗುತ್ತವೆ.  ಎಲ್ಲ ಗಿರಿಶಿಖಿರಗಳು ಬೋಳು ಗುಡ್ಡದಂತೆ ಕಾಣುತ್ತವೆ. ಅಲ್ಲಿಗೆ ಕರೀಫ್ ಸೀಸನ್ ಮುಗಿಯುತ್ತದೆ. ಮುಂದಿನ ಜೂನ್ ತಿಂಗಳುವರೆಗೂ ಪ್ರವಾಸಿಗರು ಇತ್ತ ತಲೆ ಹಾಕುವುದು ಕಡಿಮೆ.

 

ಕರೀಫ್ ಸಮಯದಲ್ಲಿ ಬೆಟ್ಟ ಗುಡ್ಡಗಳ ಮೇಲೆ, ಘಟ್ಟ ಪ್ರದೇಶದಲ್ಲಿ 8 - 10 ಡಿಗ್ರಿ ಉಷ್ಣಾಂಶ ವಿದ್ದರೆ, ಬೆಟ್ಟ ಇಳಿದು ಸಲಾಲಃ ನಗರಕ್ಕೆ ಬಂದರೆ, 20 -28 ಡಿಗ್ರಿಯಷ್ಟು ತಾಪಮಾನದ ಅನುಭವ ವಾಗುತ್ತದೆ. ಇದೇ ಸಮಯದಲ್ಲಿ ಒಮಾನ್ ದೇಶ ಮತ್ತು ಇತರೆ ಅರಬ್ ದೇಶಗಳಲ್ಲಿ 45-50 ಡಿಗ್ರಿ ತಾಪಮಾನವಿರುತ್ತದೆ.

ಅರಬ್ಬಿ ಸಮುದ್ರದ ಕಿನಾರೆಯಲ್ಲಿರುವ ಸಲಾಲಃ ಪಟ್ಟಣ ನಮ್ಮ ಪಶ್ಚಿಮ ಘಟ್ಟದ ಕೆಳಗಿನ ಒಂದು ನಗರದಂತೆ ಇದೆ. ಇಲ್ಲಿನ ತೋಟಗಳು, ಹೊಲಗಳು, ಮಂಡ್ಯ ಜಿಲ್ಲೆಯಲ್ಲಿರುವಂತೆ  ಕಾಣುತ್ತದೆ. ಸಲಾಲಃ ಬಾಳೆಹಣ್ಣು, ಎಳೆನೀರು, ಹಾಗೂ ಇನ್ನಿತರೆ ತರಕಾರಿಗಳು ಇಲ್ಲಿ ಪ್ರಸಿದ್ದ. ತೆಂಗಿನ ಮರಗಳು ಮತ್ತು ಬಾಳೆಗಿಡಗಳನ್ನ ಯಥೇಚ್ಚವಾಗಿ ಕಾಣ ಬಹುದು. ಈ ಪ್ರದೇಶ ದಲ್ಲಿ ಬೋರ್ವೆಲ್ ಪಂಪ್ ಗಳಿಂದ ವ್ಯವಸಾಯ ಮಾಡುವುದರಿಂದ ವರ್ಷ ಪೂರ್ತಿ ಸಲಾಲಃ ಭಾಗದಲ್ಲಿ ಹಚ್ಚ ಹಸಿರನ್ನ ಕಾಣಬಹುದು

 

ಸಲಾಲಃ ಬಳಿಯಿರುವ ವಾದಿ ದರ್ಬಾತ್ ನಲ್ಲಿ ಜಲಪಾತವನ್ನ ಕಾಣಬಹುದು. ಈ ಜಲಪಾತದಲ್ಲಿ ಯಾವಾಗಲೂ ನೀರು ಹರಿಯುವುದಿಲ್ಲ, ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ಇಲ್ಲಿ ನೀರನ್ನು ನಾವು  ಕಾಣಬಹುದು. ಸಾಮನ್ಯವಾಗಿ "ಕರೀಫ್ ಸೀಸನ್" ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ. ಆ ಸಮಯದಲ್ಲಿ ಮಾತ್ರ ಕೆಲ ದಿನಗಳ ಮಟ್ಟಿಗೆ, ಮಳೆ ಬಂದಾಗ ಈ ಜಲಪಾತವನ್ನು ಕಾಣಬಹುದು.

ಅಂದಾಜು ನೂರು ಮೀಟರ್ ಉದ್ದ ವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ. ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಸುಂದರ ನೋಟ.ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್  ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ವನ್ನು ಸೇರುತ್ತದೆ.

 

ಸಲಾಲಃ ಸುತ್ತ ಮುತ್ತಲು ಹಲವಾರು ಪ್ರವಾಸಿ ಸ್ಥಳಗಳಿವೆ, ಅವುಗಳಲ್ಲಿ ಪ್ರಮುಖವಾದವು, ಮಗಸೇಲ್ ಕಡಲ ತೀರ, ವಾದಿ ದರ್ಬಾತ್, ಸುಮರಂ, ಅಲ್ ಬಲೀದ್ ಪುರಾತತ್ವ ಉದ್ಯಾನವನ, ತವಿ ಅಟ್ಟೈರ್ ಸಿಂಕ್ ಹೋಲ್, Anti Gravity Point,  ತಾಖಾ ಕ್ಯಾಸೆಲ್,   ದಾಲ್ಖೂಟ್, ರಾಯ್ಖೂಟ್,  ಇನ್ನು ಹಲವಾರು ನಯನ ಮನೋಹರ ಸ್ಥಳಗಳು ಇಲ್ಲಿವೆ.

 

ಒಮಾನ್ ಗೆ ಭೇಟಿ ನೀಡಿದಾಗ, ಕರೀಫ಼್ ಸೀಸನ್ ನಲ್ಲಿ ಸಲಾಲಃಕ್ಕೆ ಭೇಟಿ ನೀಡುವುದನ್ನ ಮರೆಯಬೇಡಿ.

 













ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings