ಕವಿತೆ: ಮರದಂತೆ ಜೀವಿಸು
ಜನರಿಗೆ ನೆರಳಾಗಿ
ಬಳ್ಳಿಗೆ ಆಸರೆಯಾಗಿ
ಪ್ರಾಣಿ ಪಕ್ಷಿಗಳಿಗೆ
ಹಸಿವು ನೀಗಿಸುವ
ಫಲವ ನೀಡುವ
ಮರದಂತೆ ಜೀವಿಸು
ಫಲ ತಿಂದವರು
ಮರದ ನೆರಳಲ್ಲಿ
ನಲಿದು ಕುಪ್ಪಳಿಸಿದವರು
ಕೊಡಲಿ ಹಾಕಿದರೂ
ಏನು ಆಗಲೇ ಇಲ್ಲ ಎನ್ನುವ
ಮರದಂತೆ ಜೀವಿಸು
ಕೊರಡು ಅವರಿಗೆ
ಆಸರೆಯಾದೀತು
ಕಟ್ಟಿಗೆ ಅವರು ತಿನ್ನುವ
ಅನ್ನಕ್ಕಾಯಿತು ಎನ್ನುವ
ಮರದಂತೆ ಜೀವಿಸು
ನಿನ್ನ ಸಂಭ್ರಮಕ್ಕೆ ಯಾರು
ಜತೆಯಾಗದಿದ್ದರೂ
ನಿನ್ನ ಕಷ್ಟ ಸುಖ ಯಾರು
ವಿಚಾರಿಸದೇ ಇದ್ದರೂ
ನಿನ್ನ ಕಾಯಕದಲ್ಲಿ
ನಿರತನಾಗಿ
ಮರದಂತೆ ಜೀವಿಸು
ಕೊರಗಿ ಕೊರಗಿ
ಕೃಶವಾಗಬೇಡ
ಯಾವುದೂ ಶಾಶ್ವತವಲ್ಲ
ಎಲ್ಲರಿಗೂ ಒಂದು ದಿನ
ಕೊನೆಯೆಂಬುದಿದೆ ಎಂದು
ಅರಿತು
ಮರದಂತೆ ಜೀವಿಸು
ಚೈತ್ರದ ಚಿಗುರೇ
ನಿನ್ನ ಸಂಭ್ರಮವೆಂಬಂತೆ
ಕಡಿದರೂ ಮತ್ತೆ ಮತ್ತೆ
ಚಿಗುರೊಡೆಯುತ
ನಳನಳಿಸುವ
ಮರದಂತೆ ಜೀವಿಸು
ಮನುಜ ನೀನು
ಮರದಂತೆ ಜೀವಿಸು
-ಪಿ.ಎಸ್.ರಂಗನಾಥ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ