ಸೀತಾಫಲಕ್ಕೂ ಜಟಿಂಗ ರಾಮೇಶ್ವರ ಬೆಟ್ಟ ಮತ್ತು ರಾಮಾಯಣದ ನಂಟಿನ ಕಥೆ.
ನಮ್ಮೂರು ರಾಂಪುರದ ಸುತ್ತಮುತ್ತಲಿನ ಪ್ರದೇಶಗಳು ರಾಮಾಯಣದೊಂದಿಗೆ ನಂಟನ್ನು ಹೊಂದಿವೆ ಎಂದು ಬಹಳ ಹಿಂದೆ ಒಂದು ಲೇಖನ ಬರೆದಿದ್ದೆ. ಶ್ರೀರಾಮ ಈ ಪ್ರದೇಶದ ಮೂಲಕ ಹೋಗಿದ್ದರಿಂದ ನಮ್ಮೂರಿಗೆ ರಾಂಪುರ ಎನ್ನುವ ಹೆಸರು ಬಂದಿದೆ. ಪ್ರಾರ್ಥನೆ ಮಾಡುವ ಸಲುವಾಗಿ ಬೆಟ್ಟದಲ್ಲಿ ಲಿಂಗವನ್ನ ಪ್ರತಿಷ್ಟಾಪಿಸಿ ಪೂಜಿಸಿದ್ದರಿಂದ ರಾಮೇಶ್ವರ ಎನ್ನುವ ಹೆಸರು ಬಂದಿದೆ.
ರಾವಣ ಸೀತಾಮಾತೆಯನ್ನ ಹೊತ್ತೋಯ್ಯುವಾಗ ಜಟಾಯು ಪಕ್ಷಿಯು ಅಡ್ಡಿಯುಂಟುಮಾಡುತ್ತದೆ. ಆಗ ರಾವಣ ಮತ್ತೆ ಜಟಾಯುವಿನೊಂದಿಗೆ ಯುದ್ದವಾಗುತ್ತದೆ. ಆ ಯುದ್ದವಾದ ಜಾಗ ಮತ್ತು ಜಟಾಯು ಗಾಯಗೊಂಡ ಜಾಗವೇ ಜಟಿಂಗ ರಾಮೇಶ್ವರ ಬೆಟ್ಟ ಎಂದು ಮುಂದೆ ಪ್ರಸಿದ್ದವಾಯಿತು.
ಐತಿಹಾಸಿಕ ಪುರಾಣಪ್ರಸಿದ್ದ ಸ್ಥಳದ ಈ ಕಥೆ ಇಲ್ಲಿನ ಸ್ಥಳೀಯರಲ್ಲಿ ಜನಜನಿತವಾಗಿದೆ.
ರಾಮಾಯಣದ ಕಥೆಯ ಪ್ರಕಾರ, ಜನಕರಾಜನ ಅರಮನೆಯ ಹತ್ತಿರ ಯಜ್ಞದ ಸಲುವಾಗಿ ನೇಗಿಲಿನಿಂದ ನೆಲವನ್ನು ಊಳುತ್ತಿದ್ದ ನೇಗಿಲಗುಳಕ್ಕೆ ಪೆಟ್ಟಿಗೆ ಸಿಕ್ಕಿಕೊಂಡಿತಂತೆ. ಆಗ ಜನಕರಾಜ ಪೆಟ್ಟಿಗೆಯನ್ನು ತೆಗೆದು ನೋಡಿದರೆ ಒಳಗೆ ಒಂದು ಹೆಣ್ಣು ಶಿಶು, ಆ ಮಗುವನ್ನು ಕಂಡು ಅರಮನೆಗೆ ಕೊಂಡೊಯ್ದು ತನ್ನ ಮಗಳಂತೆ ಸಾಕುತ್ತಾನೆ. ನೇಗಿಲ ಗುಳಕ್ಕೆ ಸಿಕ್ಕು ಲಭಿಸಿದ್ದರಿಂದ ಸೀತೆ ಎಂದು ಹೆಸರಿಡುತ್ತಾರೆ.
ಈ ಕಥೆಯ ಪ್ರಕಾರ ನೋಡಿದರೆ, ಜನಕರಾಜ ಕೃಷಿ ಮಾಡುತಿದ್ದ ಎಂದು ನಾವು ತಿಳಿದುಕೊಳ್ಳಬಹುದು, ಕೆಲವರ ಪ್ರಕಾರ ಜನಕರಾಜ ಕೃಷಿಯಲ್ಲಿ ಬಹಳ ಸಾಧನೆಗೈದಿದ್ದನಂತೆ ವಿವಿಧ ರೀತಿಯ ಪ್ರಯೋಗಳನ್ನ ಕೈಗೊಂಡು ಕೃಷಿಯ ಆಳ ಅಗಲವನ್ನ ಅರಿತಿದ್ದನಂತೆ, ಹೀಗಾಗಿ ಸೀತಾ ಮಾತೆಯು ಸಹ ತಂದೆಯ ವಿದ್ಯೆಯನ್ನ ಕೈವಶಮಾಡಿಕೊಳ್ಳುತ್ತಾಳೆ. ಹೀಗೇ ಪ್ರಯೋಗ ಮಾಡುತ್ತ ವಿವಿಧರೀತಿಯ ಫಲ ಕೊಡುವ ಬೀಜಗಳ ತಳಿಗಳನ್ನು ಉತ್ಪಾದಿಸುತ್ತಾಳೆ. ಆ ಬೀಜಗಳನ್ನ ಶ್ರೀ ರಾಮನ ಜತೆ ವಿವಾಹವಾದ ಮೇಲೆ ಅಯೋಧ್ಯೆಗೆ ತರುತ್ತಾಳೆ.
ಮುಂದೆ ವನವಾಸಕ್ಕೆ ಹೊರಟಾಗ ಬರಿಗೈಯಲ್ಲಿ ಬರದೇ ವಿವಿಧ ರೀತಿಯ ಬೀಜಗಳನ್ನ ತಂದು ಕಾಡಿನಲ್ಲಿ ನೆಡುತ್ತಾಳೆ. ಆ ಪ್ರಯೋಗದ ಕೆಲ ಫಲಗಳೇ ಈ ಸೀತಾಫಲ, ರಾಮಫಲ, ಲಕ್ಷ್ಮಣಫಲ, ಹನುಮಫಲ.
ಸೀತಾಮಾತೆ ಶ್ರೀರಾಮಚಂದ್ರನೊಂದಿಗೆ ವನವಾಸದಲ್ಲಿರುವಾಗ, ರಾವಣ ಸೀತಾಮಾತೆಯನ್ನ ಹೊತ್ತೊಯ್ಯುತ್ತಾನೆ, ರಾವಣನ ಮೋಸದಾಟಕ್ಕೆ ಬಲಿಯಾದ ಸೀತಾದೇವಿ ಹೀಗೆ ಹೋಗುವಾಗ, ತನ್ನ ಸೆರಗಿನಲ್ಲಿದ್ದ ಹಣ್ಣಿನ ಬೀಜಗಳನ್ನ ಪುಷ್ಪಕ ವಿಮಾನದ ಹಾದಿಯುದ್ದಕ್ಕೂ ಉದುರಿಸುತ್ತಾ ಹೋಗುತ್ತಾಳೆ. ಒಂದಲ್ಲ ಒಂದು ದಿನ ಈ ಹಣ್ಣುಗಳಿಂದ ಶ್ರೀರಾಮನಿಗೆ ತನ್ನ ಸುಳಿವು ಸಿಗಬಹುದು ಎನ್ನುವ ಆಶಾವಾದದಿಂದ ಕಣ್ಣೀರಿಡುತ್ತಾಳೆ.
ಕಾಲ ಕಳೆದ ಮೇಲೆ, ಈ ಬೀಜಗಳು ಮೊಳಕೆಹೊಡೆದು ಸಸಿಯಾಗಿ ಹಣ್ಣಿನ ಮರವಾಗಿ ಫಲ ಕೊಡುತ್ತವೆ. ಶ್ರೀರಾಮ ಸೀತೆಯನ್ನ ಹುಡುಕುತ್ತ ಉತ್ತರದಿಂದ ದಕ್ಷಿಣಕ್ಕೆ ಬರುವಾಗ ಒಂದು ಕಡೆ ಮಂಗಗಳು ಸೀತಾಫಲದ ಹಣ್ಣನ್ನ ತಿನ್ನುತ್ತ ಖುಷಿಯಿಂದಿರುತ್ತವೆ. ಸೀತಾಮಾತೆಯ ಕೃಷಿಯ ಬಗ್ಗೆ ಅರಿವಿದ್ದ ಶ್ರೀರಾಮ, ಮಂಗಗಳು ತಿನ್ನುವ ಹಣ್ಣುಗಳನ್ನ ಕಂಡೊಡನೇ, ಅರೇ ಲಕ್ಷ್ಮಣ ಈ ಹಣ್ಣುಗಳು ಸೀತಾದೇವಿಯ ಕೈ ಚಳಕದಿಂದ ಬಿಟ್ಟಿರುವಂತಹದ್ದು. ಎಂದು ಹೇಳುತ್ತಾನೆ. ಆಗ ಹಂಪೆಯ ಮಾರ್ಗವಾಗಿ ಲಂಕೆಗೆ ಹೋಗಿರುವ ಸುಳಿವು ದೊರೆಯುತ್ತದೆ.
ಅದರಂತೆ ಶ್ರೀರಾಮ, ಹಂಪೆಯಿಂದ ಜಟಿಂಗ ರಾಮೇಶ್ವರ ಬೆಟ್ಟಕ್ಕೆ ಬರುತ್ತಾನೆ, ಅಲ್ಲಿ ಜಟಾಯುವಿನ ಕುರುಹು ಸಿಗುತ್ತದೆ. ನಂತರ ಲೇಪಾಕ್ಷಿ, ತದನಂತರ ರಾಮೇಶ್ವರ. ಹೀಗೆ ಶ್ರೀರಾಮನ ಪ್ರಯಾಣ ಸಾಗುತ್ತದೆ.
ಅಂದು ಸೀತಾಮಾತೆ ಬೀಜಗಳನ್ನ ಉದುರಿಸಿದ್ದರ ಫಲ, ನಮ್ಮ ಮೊಳಕಾಲ್ಮೂರು ತಾಲೂಕಿನಲ್ಲಿ ಅತಿ ಹೆಚ್ಚಿನ ಸೀತಾಫಲದ ಗಿಡಗಳನ್ನ ಕಾಡಿನಲ್ಲಿ ಕಾಣಬಹುದು. ಕಾಲಕ್ರಮೇಣ ಈ ಹಣ್ಣುಗಳನ್ನ ಎಲ್ಲ ಕಡೆ ಬೆಳೆಯುವಂತಾಯಿತು. ಕೆಲ ರೈತರು ತಮ್ಮ ಹೊಲದಲ್ಲಿ ಬೆಳೆಸುತಿದ್ದರೆ, ನಮ್ಮ ತಾಲೂಕಿನಲ್ಲಿ ಕಾಡಿನಲ್ಲಿ ಅಸಂಖ್ಯಾತ ಗಿಡಗಳು ಬೆಳೆದು ದೊಡ್ಡದಾಗಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ