ಗುರುವಾರ, ಸೆಪ್ಟೆಂಬರ್ 8, 2022

ನೆಪೋಲಿಯನ್ ನ ಅಂತ್ಯ ಹಾಡಿದ ಜರ್ಮನಿಯ ಲೈಪ್ ಜ಼ಿಗ್ ಯುದ್ದ

 ಉದಯವಾಣಿ NRI Edition ನಲ್ಲಿ ನಾನು ಬರೆದ ಪ್ರವಾಸಿ ಲೇಖನ ಇಂದು ಪ್ರಕಟವಾಗಿದೆ.



Thanks to Udayavani 🙏
ಪ್ರವಾಸಿ ಕಥನ: ನೆಪೋಲಿಯನ್ ನ ಅಂತ್ಯ ಹಾಡಿದ ಜರ್ಮನಿಯ ಲೈಪ್ ಜ಼ಿಗ್ ಯುದ್ದ (Battle of Leipzig)
ಬರಹ:- ಪಿ.ಎಸ್.ರಂಗನಾಥ.
ಮಸ್ಕತ್. ಒಮಾನ್ ರಾಷ್ಟ್ರ.
ಕಛೇರಿಯ ಕೆಲಸದ ನಿಮಿತ್ತ ಜರ್ಮನಿಗೆ ಇದುವರೆವಿಗೂ ಮೂರು ಬಾರಿ ಭೇಟಿ ನೀಡಿದ್ದೇನೆ, ಪ್ರತಿ ಬಾರಿ ಭೇಟಿ ನೀಡಿದಾಗಲೂ ಒಂದಿಲ್ಲೊಂದು ಪ್ರವಾಸಿ ತಾಣಗಳನ್ನ ನೋಡುವುದು ಹವ್ಯಾಸ. ಈ ಬಾರಿ ನಾನು ಪ್ರಯಾಣಿಸಿದ್ದು ಜರ್ಮನಿಯ ಲೈಪ್ ಜ಼ಿಗ್ ಎನ್ನುವ ನಗರಕ್ಕೆ. ಇದು ಫ್ರಾಂಕ್ ಫರ್ಟ್ ನಿಂದ ಸುಮಾರು 395 ಕಿ.ಮಿ. ದೂರದಲ್ಲಿದೆ. ಇದು ಒಂದು ವಾಣಿಜ್ಯ ನಗರವಾಗಿದ್ದರೂ ಸಹ ಜರ್ಮನಿಯ ಇತಿಹಾಸದ ಪುಟದಲ್ಲಿ ಈ ನಗರಕ್ಕೆ ಒಂದು ಪ್ರಮುಖ ಸ್ಥಾನ ಇದೆ. ಫ್ರೆಂಚ್ ಸಾಮ್ರ್ಯಾಜ್ಯಕ್ಕೆ ಮಣ್ಣು ಮುಕ್ಕಿಸಿದ ಖ್ಯಾತಿ ಈ ನಗರಕ್ಕಿದೆ. ಅಲ್ಲೊಂದು ದೊಡ್ಡದಾದ ಯುದ್ದ ಸ್ಮಾರಕವಿತ್ತು, ಅದನ್ನ ನೋಡೋಣ ಎಂದು ಅಂದು ಸಂಜೆ ಅಲ್ಲಿಗೆ ಹೋಗಿದ್ದೆವು. ಆ ಸ್ಥಳಕ್ಕೆ ಹೋದ ಮೇಲೆ, ಆ ನಗರದಲ್ಲಿ ನಡೆದ ಭೀಕರ ಯುದ್ದವೊಂದರ ಮಾಹಿತಿ ದೊರೆಯಿತು.
ನಮ್ಮ ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ವಿಚಾರ ಬಂದಾಗ ಫ್ರೆಂಚ್ ಸೈನ್ಯ, ನೆಪೋಲಿಯನ್ ವಿಚಾರ ಕುರಿತು ಚರ್ಚೆಯಾಗುವುದು ನಾವು ಗಮನಿಸಿರಬಹುದು. ಟಿಪ್ಪು ಸುಲ್ತಾನ್ ಫ್ರೆಂಚ್ ಕ್ರಾಂತಿಯ ವಿಚಾರಗಳು ಮತ್ತು ತತ್ವಶಾಸ್ತ್ರಗಳನ್ನು ಓದಿಕೊಂಡಿದ್ದರಿಂದ ಫ್ರೆಂಚ್ ಕ್ರಾಂತಿಯ ಬಗ್ಗೆ ಪ್ರಭಾವಿತನಾಗಿದ್ದನಂತೆ. ಅಷ್ಟೇ ಅಲ್ಲದೆ ಬ್ರಿಟೀಷರಿಗೆ ಪ್ರಬಲ ಪೈಪೋಟಿ ಒಡ್ಡಿದ್ದ ಫ್ರೆಂಚ್ ಆಡಳಿತಗಾರರು ಮತ್ತು ಸೈನ್ಯಾಧಿಕಾರಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿದ್ದ ಹಾಗೂ ಅವರ ಮೂಲಕ ತನ್ನ ಸೈನ್ಯಕ್ಕೆ ತರಬೇತಿಯನ್ನೂ ಕೊಡಿಸಿದ್ದ ಹೀಗೆ ಹಲವಾರು ವಿಷಯಗಳನ್ನ ನಮ್ಮ ಇತಿಹಾಸಕಾರರು ದಾಖಲಿಸಿದ್ದಾರೆ. ಇತಿಹಾಸ ಅರಿತಿರುವ ಎಲ್ಲರಿಗೂ, ಫ್ರೆಂಚ್ ಸಾಮ್ರ್ಯಾಜ್ಯ, ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಬೋನಾಪಾರ್ಟೆ ಬಗ್ಗೆ ಗೊತ್ತಿರಬಹುದು. ಮೈಸೂರು ಆಂಗ್ಲೋ ಯುದ್ದದ ಸಮಯದಲ್ಲಿ ಫ್ರೆಂಚ್ ಸೈನ್ಯದ ನೆರವು ಪಡೆಯಲು ಟಿಪ್ಪು ಸುಲ್ತಾನ್ ಸಹ ನೆಪೋಲಿಯನ್ ನನ್ನ ಸಂಪರ್ಕಿಸಿದ್ದ ವಿಷಯವನ್ನ ಕೇಳಿದ್ದೇವೆ.
ಅಸಾಧರಣ ಬುದ್ದಿಮತ್ತೆ, ಯುದ್ದಗಳನ್ನ ಗೆಲ್ಲುವ ಕೌಶಲ್ಯತೆಯನ್ನ ಹೊಂದಿದ್ದ, ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಹೊಂದಿದ್ದ ನೆಪೋಲಿಯನ್, ತನ್ನ ಅಧಿಕಾರಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿ ಯಶಸ್ವಿಯಾಗಿದ್ದರಿಂದ, ಅವನು ಫ್ರಾನ್ಸ್‌ನ ಇತಿಹಾಸದಲ್ಲಿ ಅಧಿಪತಿಯಾಗಿ ತುಂಬಾ ಹೆಸರು ಗಳಿಸಿದ್ದ. ಅಷ್ಟೇ ಅಲ್ಲದೆ ಯೂರೋಪಿನ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನ ನೀಡಲಾಗಿದೆ.
ಜನಪರ ಆಡಳಿತಗಾರನಾಗಿದ್ದ ಆತ, ತನ್ನ ಆಳ್ವಿಕೆಯಲ್ಲಿ ಪ್ರಗತಿಪರ ಚಿಂತನೆಗಳನ್ನು ಫ್ರಾನ್ಸ್ ಸೇರಿದಂತೆ ಯೂರೋಪಿನಾದ್ಯಂತ ಹರಡಿದ. ಇದರ ಫಲವಾಗಿ, ಯೂರೋಪಿನ ಅನೇಕ ರಾಷ್ಟ್ರಗಳು ಹಲವು ಸುಧಾರಣೆಗಳನ್ನು ಕಂಡವು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಲ್ಲದೆ, ಮಧ್ಯಮ ವರ್ಗದ ಹಿತ ಕಾಯುವುದಕ್ಕಾಗಿ ಕಾಯಿದೆಗಳನ್ನು ರೂಪಿಸಿ, ಜಾರಿಗೆ ತಂದನು. ಧಾರ್ಮಿಕ ಅಲ್ಪಸಂಖ್ಯಾತರಾದಂತ ಯಹೂದಿಗಳು ಮತ್ತಿತರನ್ನ ಗುಲಾಮಗಿರಿಯಿಂದ ಬಿಡುಗಡೆ ಮಾಡಿದ್ದಲ್ಲದೆ, ಅವರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದಕ್ಕೆ, ಅವಕಾಶಗಳನ್ನ ಕಲ್ಪಿಸಿಕೊಟ್ಟನು. ಯೂರೋಪಿನಾದ್ಯಂತ ಬೇರುಬಿಟ್ಟಿದ್ದ ಊಳಿಗಮಾನ್ಯ ವ್ಯವಸ್ಥೆಯನ್ನು ಕಿತ್ತೊಗೆಯಲು ಅವನ ಆಡಳಿತ ಪ್ರೇರಣೆ ನೀಡಿತು. ನ್ಯಾಯಾಂಗ ವ್ಯವಸ್ಥೆಯಲ್ಲೂ ಅಪಾರ ಸುಧಾರಣೆಗಳನ್ನು ತಂದಿದ್ದಲ್ಲದೇ, ಇಂದಿಗೂ ಆತನ ನ್ಯಾಯ ಸುಧಾರಣೆಗಳನ್ನು ನೆಪೋಲಿಯನಿಕ್ ಕೋಡ್’ ಎಂದು ಫ್ರಾನ್ಸ್ ನಲ್ಲಿ ಕರೆಯಲಾಗುತ್ತದೆ. ಈ ನ್ಯಾಯಾಂಗ ಸುಧಾರಣೆಗಳನ್ನು ಜಗತ್ತಿನಾದ್ಯಂತ ಇಂದಿಗೂ ಬಳಸಿಕೊಳ್ಳುತ್ತಿದ್ದಾರೆ.
ನೆಪೋಲಿಯನ್ ಬೋನಾಪಾರ್ಟೆ 1804 ರಿಂದ 1814 ರವರೆಗೆ ಫ್ರಾನ್ಸ್ ನ ಚಕ್ರವರ್ತಿಯಾಗಿ ಆಳ್ವಿಕೆ ಮಾಡಿದ್ದನು. ಫ್ರೆಂಚ್ ಚಕ್ರವರ್ತಿಯಾಗುವ ಮೊದಲು ಫ್ರೆಂಚರ ಸೈನ್ಯದಲ್ಲಿ ಅತಿ ದೊಡ್ಡದಾದ ಸ್ಥಾನವನ್ನ ಹೊಂದಿದ್ದ. ಆ ಸ್ಥಾನಮಾನ ಸುಮ್ಮನೆ ಸಿಕ್ಕಿದ್ದಲ್ಲ. ಅವನಿಗೆ ಫ್ರೆಂಚ್ ರಾಜಮನೆತನದ ಹಿನ್ನೆಲೆ ಯಿರಲಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನೆಪೋಲಿಯನ್, ಹಂತ ಹಂತವಾಗಿ ಬೆಳೆದು ಯುರೋಪಿನಲ್ಲಿ ಫ್ರೆಂಚ್ ಸಾಮ್ರಾಜ್ಯವನ್ನ ಉತ್ತುಂಗಕ್ಕೆ ಕೊಂಡೋಯ್ದಿದ್ದಲ್ಲದೇ, ಫ್ರಾನ್ಸ್ ನಲ್ಲಿ ನಡೆದ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣೀ ಭೂತನಾಗಿದ್ದ. ಯುರೋಪ್ ರಾಷ್ಟ್ರಗಳನ್ನು ಹಲವಾರು ಯುದ್ದದಲ್ಲಿ ಗೆದ್ದು ಚಕ್ರವರ್ತಿ ಯಾಗಿ ಬೀಗಿದ್ದ. ಅಂತಹ ಚಕ್ರವರ್ತಿ ನೆಪೋಲಿಯನ್ನಿಗೆ ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಆಸೆಯಿತ್ತು. ಆದರೆ, ಸೋಲು ಎನ್ನುವುದು ಅವನಿಗೂ ತಪ್ಪಿರಲಿಲ್ಲ. ಜರ್ಮನ್ನರು, ರಷಿಯನ್ನರು, ಸ್ವೀಡನ್ನರು, ಆಸ್ಟ್ರಿಯನ್ನರ ಒಕ್ಕೂಟದ ಎದುರು 16 ಮತ್ತು19ರ ಅಕ್ಟೋಬರ್ 1813 ರಲ್ಲಿ ನಡೆದ ಮಹಾಯುದ್ದ ದಲ್ಲಿ (Battle of Leipzig) ಅವನು ಸೋತು ಶರಣಾಗಿದ್ದ. ಪ್ರಪಂಚ ಗೆಲ್ಲಬೇಕೆನ್ನುವ ನೆಪೋಲಿಯನ್ ಆಸೆ ಪೂರ್ಣವಾಗಲು, ಒಂದು ಯುದ್ಧ ತಡೆಯಾಯಿತು. ಅದು ಜರ್ಮನ್ ದೇಶದ ಲೈಪ್ಜಿಗ್ ನಲ್ಲಿ ನಡೆದ ಮಹಾಯುದ್ದ. ನೆಪೋಲಿಯನ್ ಯುದ್ದ ದಾಹದಿಂದ ತೊಂದರೆಗೀಡಾಗಿದ್ದ ಜರ್ಮನ್ ಮತ್ತು ಸುತ್ತ ಮುತ್ತಲಿನ ದೇಶಗಳು ಒಂದಾಗಿ ಫ್ರೆಂಚ್ ರ ವಿರುದ್ದ ಸೆಣೆಸಿದ್ದವು.
ನೆಪೋಲಿಯನ್ ನ ಮೊದಲನೇ ಸೋಲನ್ನು ನೋಡಿ ಅವನನ್ನು ಕ್ರೋಶಿಯಾ ಮತ್ತು ಇಟಲಿಯ ಮಧ್ಯೆ ಇರುವ ಎಲ್ಬಾ ಎನ್ನುವ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿ ಕೆಲ ತಿಂಗಳುಗಳ ಕಾಲ ಜೀವಿಸಿದ್ದ. ಆದರೆ ಆ ಯುದ್ದದ ಸೋಲನ್ನು ಅವನು ಅರಗಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ಮತ್ತೊಮ್ಮೆ ಪ್ರಪಂಚವನ್ನ ಗೆಲ್ಲಬೇಕು ಎನ್ನುವ ಅವನ ಆಸೆ ಮತ್ತೆ ಮತ್ತೆ ಚಿಗುರುತಿತ್ತು. ಹೀಗಾಗಿ ಅಲ್ಲಿಂದ ತಪ್ಪಿಸಿಕೊಂಡು ಮರಳಿ ಪ್ರಾನ್ಸ್ಗೆ ವಾಪಸ್ ಬಂದನು. ಮತ್ತೊಮ್ಮೆ ಫ್ರೆಂಚ್ ಸಾಮ್ರಾಜ್ಯವನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಮಾರು 100 ದಿನಗಳ ಕಾಲ ಫ್ರಾನ್ಸ್ ದೇಶವನ್ನ ಮತ್ತೊಮ್ಮೆ ಆಳಿದನು. ಈ ಬಾರಿ ಎಲ್ಲ ದೇಶಗಳು ಏಳನೇ ಬಾರಿಗೆ ಒಕ್ಕೂಟವನ್ನ ರಚಿಸಿಕೊಂಡು, ವಾಟರ್ಲೂ ನಲ್ಲಿ ಮತ್ತೊಮ್ಮೆ ಯುದ್ದ ನಡೆಯಿತು. ಆ ಯುದ್ಧದಲ್ಲಿ ಮಗದೊಮ್ಮೆ ನೆಪೋಲಿಯನ್ ಭಾರಿ ಸೋಲನ್ನೇ ಅನುಭವಿಸಿದ. ಈ ಬಾರಿ ಬ್ರಿಟೀಷರು ನೆಪೋಲಿಯನ್ ನನ್ನ ಸೈಂಟ್ ಹೆಲೆನ ದ್ವೀಪಕ್ಕೆ ಗಡಿಪಾರು ಮಾಡುತ್ತಾರೆ. ವಾಟರ್ಲೂ ಅವನ ಕೊನೆಯ ಯುದ್ಧ. ಸೈಂಟ್ ಹೆಲೆನ ದ್ವೀಪದಲ್ಲಿ ಆರು ವರ್ಷಗಳ ಕಾಲ ಕಳೆಯುತ್ತಾನೆ ನಂತರ ಮೇ 5 1821 ರಂದು ಹೊಟ್ಟೆಯ ಕ್ಯಾನ್ಸರ್ ನಿಂದಾಗಿ ನೆಪೋಲಿಯನ್ ಮರಣ ಹೊಂದುತ್ತಾನೆ. ನೆಪೋಲಿಯನ್ ಬದುಕಿದ್ದು ಕೇವಲ 51 ವರ್ಷಗಳು ಮಾತ್ರ. ಅದರಲ್ಲಿ, ಆರು ವರ್ಷಗಳ ಕಾಲ ಗಡಿಪಾರು ಜೀವನ. ಒಬ್ಬ ಸಾಮಾನ್ಯ ಯುವಕ ಕೇವಲ ನಲವತ್ತೈದು ವರ್ಷಗಳ ಜೀವನದಲ್ಲಿ ಚಕ್ರವರ್ತಿಯಾಗುವ ಹಂತಕ್ಕೆ ಬೆಳೆದಿದ್ದು ಕಡಿಮೆ ಸಾಧನೆ ಏನಲ್ಲ. ಯುದ್ದಗಳ ಗೆಲುವಿನಿಂದ ಬೀಗಿ ಫ್ರೆಂಚ್ ಚಕ್ರವರ್ತಿಯಾದ ನೆಪೋಲಿಯನ್, ಒಂದೆರೆಡು ಯುದ್ದಗಳ ಸೋಲಿನ ಬಳಿಕ ಗಡಿಪಾರಾಗಿ ಮರಣ ಹೊಂದಿದ್ದು ದುರದೃಷ್ಟಕರವಾದ ಸಂಗತಿ.
ಜರ್ಮನ್ ಮತ್ತು ಇತರೆ ಸ್ನೇಹಿತ ರಾಷ್ಟ್ರಗಳಿಗೆ ಇದು ಮರೆಯಲಾರದ ನೆನಪು. ಅವರೆಲ್ಲರೂ ನೆಪೋಲಿಯನ್ ವಿರುದ್ದ ಯುದ್ದ ಗೆದ್ದ ನೆನಪಿಗಾಗಿ ಸ್ಮಾರಕ ವೊಂದನ್ನು ಜರ್ಮನ್ ದೇಶದ ಲೈಪ್ಜಿಗ್ ನಗರದಲ್ಲಿ ನಿರ್ಮಿಸಿದ್ದಾರೆ. ನೂರು ವರ್ಷಗಳ ನಂತರ, ತುಂಬ ವಿಶಾಲವಾದ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಉದ್ದ 80 metres (260 ft), ಅಗಲ, 70 metres (230 ft), ಎತ್ತರ 91 metres (299 ft). 18 October 1898 ರಂದು ಕಟ್ಟಲು ಶುರುಮಾಡಿ, ಹನ್ನೆರೆಡು ವರ್ಷಗಳಲ್ಲಿ ಸ್ಮಾರಕ ಪೂರ್ಣಗೊಂಡು 18 October 1913 ರಂದು ಉದ್ಘಾಟನೆ ಗೊಂಡಿತು.
ಜರ್ಮನಿಯ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇತಿಹಾಸದ ಆ ಘಟನೆಗಳು ಕಣ್ ಮುಂದೆ ಬಂದಂತೆ ಭಾಸವಾಯಿತು. ಜರ್ಮನಿಯಲ್ಲಿ ಯುರೋಪಿಯನ್ನರ ನಡುವೆ ಹಲವಾರು ಯುದ್ದಗಳು ನಡೆದಿವೆ. ಒಂದಲ್ಲ ಒಂದು ನಗರವು ಯಾವುದಾದರೊಂದು ಯುದ್ದವನ್ನ ಕಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings