ಗುರುವಾರ, ಸೆಪ್ಟೆಂಬರ್ 8, 2022

ದೋಫಾರ್: ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್

 UNESCO ಯಿಂದ ಪಾರಂಪಾರಿಕ ತಾಣ ಎಂದು ಗುರುತಿಸಲ್ಪಟ್ಟಿರುವ ಒಮಾನಿನ ಸಲಾಲಃ ಪ್ರಾಂತ್ಯದ ವಿಶೇಷವಾದ ಲೋಭಾನ/ಸಾಂಭ್ರಾಣಿ ಕುರಿತ ಮಾಹಿತಿ ಇಂದಿನ ಕನ್ನಡ ಪ್ರಭದ NRI ಅಂಕಣದಲ್ಲಿ ಪ್ರಕಟವಾಗಿದೆ.

Thanks to Kannadaprabha.
01/09/2022.




ದೋಫಾರ್: ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್
ಬರಹ: ಪಿ.ಎಸ್.ರಂಗನಾಥ
ಮಸ್ಕತ್- ಒಮಾನ್ ರಾಷ್ಟ್ರ.
ಒಮ್ಮೆ ಒಮಾನ್ ದೇಶದ ಸಲಾಲಃದ ಬೆಟ್ಟ ಪ್ರದೇಶದಲ್ಲಿ ಸ್ನೇಹಿತನ ಜತೆ ಹೋಗುತ್ತಿರುವಾಗ, ಅವರು ಫ್ರಾಂಕಿನ್ಸೆನ್ಸ್ ಮರವೊಂದನ್ನ ತೋರಿಸಿ, ಈ ಮರದ ವಿಶೇಷ ಏನು ಗೊತ್ತ ಅಂತ ಕೇಳಿದರು. ನಾನು ಹೌದು, ಈ ಫ್ರಾಂಕಿನ್ಸೆನ್ಸ್ ಮರಗಳಿಂದ ಈ ಸುಗಂಧದ್ರವ್ಯಗಳನ್ನ (ಸೆಂಟ್ ಮತ್ತು ಅತ್ತರ್) ತಯಾರಿಸುತ್ತಾರೆ ಅಂತ ಹೇಳಿದೆ. ಆಗ ಅವರು, ಆ ಮರದ ತೊಗಟೆಯಿಂದ ಬರುವ ಅಂಟನ್ನ ತೋರಿಸುತ್ತ ಇದನ್ನ ಸಾಂಭ್ರಾಣಿ ಅಥವ ಲೋಬಾನ ಎನ್ನುತ್ತಾರೆ ಎಂದು ಹೇಳಿದರು. ಮೊಟ್ಟ ಮೊದಲ ಬಾರಿಗೆ ಕಣ್ಣು ಮುಂದೆ ಲೋಬಾನ ವನ್ನ ಗಿಡದಲ್ಲಿ ನೋಡಿದಾಗ ಆಶ್ಚರ್ಯ ಆಯಿತು, ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಕಾಲೇಜಿನ ದಿನಗಳಲ್ಲಿ ನಮ್ಮ ಲೆಕ್ಚರರ್ ಒಬ್ಬರು ಈ ಲೋಬಾನ ಹೇಗೆ ತಯಾರಿಸುತ್ತಾರೆ ಎಂದು ಕೇಳಿದ್ದರು. ಅಂಗಡಿಯಲ್ಲಿ ದುಡ್ಡು ಕೊಟ್ಟು ದೂಪ ಹಾಕುವಾಗ ಬಳಸುವ ಈ ಲೋಬಾನವನ್ನ ಅಂಗಡಿಯಲ್ಲಿ ಖರೀದಿಸಿ ತರುತಿದ್ದ ನಾವು ಉತ್ತರ ಗೊತ್ತಿಲ್ಲದೆ ಸುಮ್ಮನಾಗಿದ್ದೆವು.
ಲೋಬಾನ ಅಥವ ಸಾಂಭ್ರಾಣಿ ಬಹುಶಃ ಎಲ್ಲರಿಗೂ ಗೊತ್ತಿರುವುದಂತಹದ್ದು. ಬಹುಶಃ ತಿಳಿಯದ ಜನರಿರುವುದು ಬಹಳ ವಿರಳ. ಈ ಲೋಬಾನವನ್ನು ಹಸುವಿನ ಬೆರಣಿಯ ಮೇಲೆ ಅಥವಾ ಉರಿಯುವ ಕೆಂಡದ ಮೇಲಿಟ್ಟು ಸುಡುವುದನ್ನ ದೂಪ ಹಾಕುವುದು ಎನ್ನುತ್ತಾರೆ. ಆ ಸಮಯದಲ್ಲಿ ಬರುವ ಹೊಗೆಯಿಂದ ಬಹಳಷ್ಟು ಉಪಯೋಗಗಳಿವೆ ಎಂದು ಎಲ್ಲರಿಗೂ ಗೊತ್ತಿರುವಂತಹದ್ದು.
ಸಾಮಾನ್ಯವಾಗಿ ಪೂಜೆ ಮಾಡುವ ಸಮಯದಲ್ಲಿ, ಧೂಪದಲ್ಲಿ ಸಾಂಬ್ರಾಣಿ ಹಾಕುವುದು ವಾಡಿಕೆ. ಆಗ ಹೊರಬರುವ ಸುಗಂಧ ಭರಿತವಾದ ವಾಸನೆ ಪೂಜೆಯಲ್ಲಿ ನಮ್ಮ ಮನಸ್ಸನ್ನು ಪ್ರಶಾಂತಗೊಳಿಸಿ, ಗಮನ ಕೇಂದ್ರೀಕರಿಸಲು ನೆರವಾಗುತ್ತದೆ. ಹಾಗಾಗಿ ಪೂಜೆಯ ಸಮಯದಲ್ಲಿ ಅವನ್ನು ಹಚ್ಚಲಾಗುತ್ತದೆ. ಅದೇ ರೀತಿ ದರ್ಗಾಗಳಲ್ಲಿ ಸಹ ಸಾಂಭ್ರಾಣಿ ಹಾಕುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಕಾರಣ ವೇನೆಂದರೆ, ನಾವು ಅದರ ಸುಗಂಧವನ್ನು ಆಸ್ವಾದಿಸಿದಾಗ, TRPV3 ಪ್ರೋಟೀನ್ ಅನ್ನು ನಮ್ಮ ಮೆದುಳಿಗೆ ಪ್ರಚೋದಿಸುತ್ತದೆ. ಇದರಿಂದ ನಮ್ಮ ಇಂದ್ರಿಯಗಳೆಲ್ಲ ಸಡಿಲಗೊಂಡು, ಒತ್ತಡ ಕಡಿಮೆಯಾಗುತ್ತದೆ. ವಾಸ್ತು ಪ್ರಕಾರ ಸಹ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಿವಾರಿಸಲು ದೂಪ ಹಾಕುವುದಕ್ಕೆ ಹೇಳುತ್ತಾರೆ. ಧೂಪದ್ರವ್ಯಗಳು ಗಾಳಿಯಲ್ಲಿರುವ ಹಾನಿಕಾರಕ ಕಂಪನಗಳನ್ನು ತಟಸ್ಥಗೊಳಿಸುವ ಮೂಲಕ ಸಕಾರಾತ್ಮಕತೆಯನ್ನು ಹರಡುತ್ತವೆ. ಜೊತೆಗೆ ಹಾನಿಕಾರಕ ಕೀಟಾಣುಗಳೂ ನಾಶವಾಗಲಿ ಎನ್ನುವ ಉದ್ದೇಶದಿಂದ ಮನೆಯಲ್ಲಿ ದೂಪ ಹಾಕುವ ಪದ್ದತಿ ನಮ್ಮ ಭಾರತೀಯರಲ್ಲಿದೆ. ಅಷ್ಟೇ ಅಲ್ಲದೆ ಎಳೆಕೂಸಿಗೆ ಎಣ್ಣೆಹಚ್ಚಿ ಸುಡುನೀರಲಿ ಮೀಯಿಸಿ ಲೋಬಾನ ಹಾಕಿ, ಕಾಡಿಗೆ ಹಚ್ಚಿ ಬಿಸಿಲಿಗೆ ಮೈಯನೊಡ್ಡುವುದು ಹಾಗೂ ಕೆಲವೆಡೆ ಬಾಣಂತಿಯರಿಗೂ ಸ್ನಾನದ ನಂತರ ಕಡಾಯಿಯಲ್ಲಿ ಕಾಯಿಸಿದ ಬೆಂಕಿಯ ಕೆಂಡದ ಮೇಲೆ ಲೋಬಾನ ಹಾಕುವುದು ಇಂದಿಗೂ ಹಳ್ಳಿಗಳಲ್ಲಿ ರೂಡಿಯಲ್ಲಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಒಮಾನ್ ಒಂದು ಅಚ್ಚರಿಯ ಮತ್ತು ವಿಭಿನ್ನ ದೇಶ, ಭೌಗೋಳಿಕವಾಗಿ ಕರ್ನಾಟಕಕ್ಕಿಂತ ಒಂದೂವರೆ ಪಟ್ಟು ಮಾತ್ರ ದೊಡ್ಡದು ಅಷ್ಟೇ. ಆದರೆ ಇಲ್ಲಿ ಅಚ್ಚರಿಯ ಸಂಗತಿಗಳಿಗೆ ಕೊರತೆ ಏನಿಲ್ಲ. ಒಮಾನಿನ ಪ್ರವಾಸೋಧ್ಯಮ ಇಲಾಖೆ ಒಮಾನಿನಲ್ಲಿರುವ ವಿಶೇಷ ಸ್ಥಳಗಳನ್ನ ಗುರುತಿಸಿ ಅದನ್ನ ಅಚ್ಚುಕಟ್ಟಾಗಿ ಅಭಿವೃದ್ದಿ ಪಡಿಸುವುದಲ್ಲದೆ ಅತ್ಯುತ್ತಮವಾಗಿ ನಿರ್ವಹಿಸುವುದನ್ನ ನಾವು ಇಲ್ಲಿ ಕಾಣಬಹುದು. ಮಿಕ್ಕ ಅರಬ್ ರಾಷ್ಟ್ರಗಳು ಮರುಭೂಮಿಯಂತೆ ಗೋಚರಿಸಿದರೆ, ಒಮಾನ್ ನಲ್ಲಿ ಮಾತ್ರ ಪ್ರಕೃತಿ ನಿರ್ಮಿತ ಪ್ರವಾಸಿ ತಾಣಗಳಿಂದ ಹಿಡಿದು ಹಲವಾರು ವಿಷಯಗಳಲ್ಲಿ ವಿಶೇಷವಾದ ಸಂಗತಿಗಳನ್ನ ನಾವು ಇಲ್ಲಿ ಕಾಣುತ್ತೇವೆ. ಇಡೀ ಒಮಾನ್ ನ 25% ಭಾಗ ಮರುಭೂಮಿಯಂತಿದ್ದರೆ, 25% ಜಾಗ ಕಲ್ಲು ಗುಡ್ಡ, ಮತ್ತು ಬೆಟ್ಟಗಳ ಸಾಲು, ಸುಣ್ಣದಕಲ್ಲಿನ ಪ್ರದೇಶವನ್ನ ಹೊಂದಿದೆ 30% ಜಾಗ ಸಮತಟ್ಟಾಗಿದೆ ಇನ್ನುಳಿದ ಪ್ರದೇಶ ಒಮಾನ್ ನ ದಕ್ಷಿಣದ ಭಾಗವಾದ ದೋಫಾರ್ ಪ್ರಾಂತ್ಯ ನಮ್ಮ ಕರಾವಳಿ ಹಾಗು ಪಶ್ಚಿಮ ಘಟ್ಟದ ಪ್ರದೇಶ ದಂತಿದೆ. ಈ ಸ್ಥಳದಲ್ಲಿ, ಸಾವಿರಾರು ಎಕರೆಯ ಪ್ರದೇಶದಲ್ಲಿ ತೆಂಗಿನ ತೋಟಗಳು, ಬಾಳೆಗಿಡಗಳು ಹಾಗು ತರಕಾರಿ ಬೆಳೆಯುವ ತೋಟಗಳಿವೆ. ಘಟ್ಟ ಪ್ರದೇಶ ಮತ್ತು ಕರಾವಳಿಯ ಕೆಲ ಭಾಗದಲ್ಲಿ ಫ್ರಾಂಕಿನ್ಸೆನ್ಸ್ ಅಥವಾ ಬೋಸ್ವೆಲಿಯಾ ಸ್ಯಾಕ್ರ ಎಂದು ಕರೆಯಲ್ಪಡುವ ಈ ಸುಗಂಧ ಜಾತಿಯ ಫ್ರಾಂಕಿನ್ಸೆನ್ಸ್ ಮರಗಳನ್ನ ಕಾಣ ಬಹುದು.
ದೋಫಾರ್ ಪ್ರಾಂತ್ಯದ ಸಲಾಲಃ ನಗರದ ಉತ್ತರ ಭಾಗದಲ್ಲಿನ ಬೆಟ್ಟಗುಡ್ಡಗಳಲ್ಲಿ ಬೆಳೆಯುತ್ತವೆ. ಈ ಭಾಗವನ್ನ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಎಂದು ಕರೆಯುತ್ತಾರೆ. ಈ ಸ್ಥಳವನ್ನು 2000 ಇಸವಿಯಲ್ಲಿ ಫ್ರಾಂಕಿನ್ಸೆನ್ಸ್ ಟ್ರಯಲ್ ಎಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು ಮತ್ತು 2005 ರಲ್ಲಿ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಇಷ್ಟೇ ಅಲ್ಲದೆ, ಇಲ್ಲೊಂದು ದೊಡ್ಡದಾದ ಮ್ಯೂಸಿಯಂ ಕೂಡ ಇದೆ. ಒಮಾನ್ ದೇಶದ ಸರ್ಕಾರವು, ಅಲ್-ಬಲೀದ್ ಪುರಾತತ್ವ ಉದ್ಯಾನವನದ ಸಹಯೋಗದೊಂದಿಗೆ ಮ್ಯೂಸಿಯಂ ಆಫ್ ಲ್ಯಾಂಡ್ ಆಫ್ ಫ್ರಾಂಕಿನ್ಸೆನ್ಸ್ ಅನ್ನು ಅಭಿವೃದ್ದಿ ಪಡಿಸಿದೆ. ವಿದೇಶಗಳಿಂದ ಬರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡದೆ ಮರಳುವುದಿಲ್ಲ.
ಪ್ರಾಚೀನ ಕರಾವಳಿ ನಗರವಾದ ಸುಮ್ಹುರಾಮ್‌ನಲ್ಲಿ (ಈಗ ಖೋರ್ ರೋರಿ) ಈ ಫ್ರಾಂಕಿನ್ಸೆನ್ಸ್ ನ ಉತ್ಪನ್ನಗಳ ವ್ಯಾಪಾರ ನಡೆಯುತ್ತಿತ್ತು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದ ಈ ಜಾಗ ಇಂದು ಅಳಿದು ಹೋಗಿದೆ. ಆದರೂ ಅಂದು ವಾಣಿಜ್ಯ ವಹಿವಾಟು ನಡೆಯುತಿದ್ದ ಪ್ರದೇಶದ ಕುರುಹುಗಳನ್ನ ನಾವು ಇಂದಿಗೂ ಕಾಣ ಬಹುದು. ಈಗ ವಾಣಿಜ್ಯ ವಹಿವಾಟಿಗೆ ಅಂತರಾಷ್ಟ್ರೀಯ ಗುಣಮಟ್ಟದ ಹಲವಾರು ಬಂದರು ಪ್ರದೇಶಗಳು ಒಮಾನ್ ನಲ್ಲಿವೆ. ಹಲವಾರು ವಾಣಿಜ್ಯ ಕೇಂದ್ರಗಳು ಸರ್ಕಾರಿ ಮತು ಖಾಸಗಿ ಸಂಸ್ಥೆಗಳ ಮುಖಾಂತರ ಇಲ್ಲಿನ ಉತ್ಪನ್ನಗಳನ್ನ ವಿವಿಧರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಅರಬ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಯತೇಚ್ಚವಾಗಿ ಲೋಬಾನವನ್ನ ಬಳಸಲಾಗುತ್ತದೆ. ಫ್ರಾಂಕಿನ್ಸೆನ್ಸ್ ಗಿಡಗಳಿಂದ ಉತ್ಪತ್ತಿಯಾಗುವ ಈ ಅಂಟನ್ನು ಸುಗಂಧದ್ರವ್ಯಗಳು, ಕೆಲವು ಬಗೆಯ ಧೂಪದ್ರವ್ಯಗಳು, ಮತ್ತು ಔಷಧಿಯಲ್ಲಿ ಬಳಸಲಾಗುತ್ತದೆ. ಕೇವಲ ಒಮಾನ್ ಮಾತ್ರವಲ್ಲ ಇತರೆ ಅರಬ್ ರಾಷ್ಟ್ರಗಳಲ್ಲಿ ಕೆಲವೆಡೆ ಹಾಗೂ ಪರ್ಶಿಯನ್ ಕೊಲ್ಲಿಯಲ್ಲಿ ಈ ಸಾಂಭ್ರಾಣಿಯನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ.
ಇನ್ನು ಫ್ರಾಂಕಿನ್ಸೆನ್ಸ್ ಮರಗಳು ಹವಾಮಾನ ಮತ್ತು ವಾತಾವರಣಕ್ಕೆ ತಕ್ಕಂತೆ ವಿವಿಧ ಗುಣಮಟ್ಟದ ಅಂಟನ್ನ ಉತ್ಪಾದಿಸುತ್ತವೆ. ಅಷ್ಟೇ ಅಲ್ಲದೆ ಅಂಟನ್ನ ತೆಗೆಯುವ ಋತು, ಸಮಯ ಮತ್ತು ಕೃಷಿಕನ ಕೌಶಲ್ಯಗಳನ್ನು ಅವಲಂಬಿಸುತ್ತದೆ. ಮುಂಗಾರು ಸಮಯದಲ್ಲಿ ಬೀಸುವ ತಂಪಾದ ಗಾಳಿಯು ಧೋಫರ್‌ನ ಮಾನ್ಸೂನ್ ಪರ್ವತಗಳ ಹಿಂದೆ ಹಾದು ಹೋಗುತ್ತದೆ. ಅಲ್ಲಿರುವ ಎತ್ತರದ ಶುಷ್ಕ ಪ್ರದೇಶದಲ್ಲಿ ಮತ್ತು ಸುಣ್ಣದ ಕಲ್ಲುಗಳಿಂದ ಸಮೃದ್ಧವಾಗಿರುವ ಕಲ್ಲಿನ ಮಣ್ಣು ವ್ಯಾಪ್ತಿಯಲ್ಲಿರುವ ಈ ಗಿಡಗಳು ಈ ವಾತಾವರಣಕ್ಕೆ ಒಗ್ಗಿ ಕೊಂಡಿರುವುದರಿಂದ ಉತ್ತಮ ಗುಣಮಟ್ಟದ ಅಂಟನ್ನ ಉತ್ಪಾದಿಸುತ್ತವೆ.
ಈ ಸುಗಂಧ ದ್ರವ್ಯಕ್ಕೆ ಬಳಸುವ ಈ ಸಾಂಬ್ರಾಣಿ ಅಥವ ಲೋಬಾನದಲ್ಲಿ ವಿವಿಧ ಗುಣಮಟ್ಟದ ನಾಲ್ಕು ವಿಧಗಳಿವೆ. ಅತ್ಯುತ್ತಮ ಗುಣಮಟ್ಟದ ಸಾಂಬ್ರಾಣಿಯನ್ನ"ಅಲ್-ಹೊಜಾರಿ" , ಇದನ್ನ ಬೇಸಿಗೆ ಕಾಲದಲ್ಲಿ ಕೋಯ್ಲು ಮಾಡುತ್ತಾರೆ."ಅನ್ನಜ್ಡಿ" ಎನ್ನುವ ವಿಧವನ್ನ ಮಾನ್ಸೂನ್ ನಂತರದ ತಿಂಗಳುಗಳಲ್ಲಿ ಕೋಯ್ಲು ಮಾಡುತ್ತಾರೆ.
ಕೋಯ್ಲು ಆರಂಭಿಸುವ ಋತುವಿನ ಮೊದಲ ಬಾರಿಗೆ ಕಟಾವು ಮಾಡುವುದನ್ನ"ಅಶಾಜ್ರಿ" ಎನ್ನುತ್ತಾರೆ. ಕೊನೆಯ ಬಾರಿಗೆ ಕಟಾವು ಮಾಡುವುದನ್ನ ಅಶಾಬಿ" ಇದನ್ನು "ಅಸ್ಸಾಹಿಲಿ" ಎಂದೂ ಕರೆಯುತ್ತಾರೆ, ಇದನ್ನು ಚಳಿಗಾಲದಲ್ಲಿ ಕೊಯ್ಲು ಮಾಡಲಾಗುತ್ತದೆ.
ಕರಾವಳಿ ಪ್ರದೇಶದಿಂದ ಅತಿ ದೂರದಲ್ಲಿ ರುವ ಅತಿ ಎತ್ತರದ ಬೆಟ್ಟ ಗುಡ್ಡಗಳಲ್ಲಿ ಶುಷ್ಕ ವಾತಾವರಣದ ಬೆಳೆಯುವ ಮರಗಳಿಂದ "ಅಲ್-ಹೊಜಾರಿ" ಅಂಟನ್ನ ತೆಗೆಯುತ್ತಾರೆ. ಈ ಪ್ರದೇಶದಲ್ಲಿ, ಮುಂಗಾರು ಮೋಡಗಳು, ಮಂಜು ತೇವಾಂಶ, ಆರ್ದ್ರತೆ ಕಡಿಮೆ ಇರುವುದಿಲ್ಲ.
ಇನ್ನು "ಆಶಾಬಿ" ಫ್ರಾಂಕಿನ್ಸೆನ್ಸ್ ಅತ್ಯಂತ ಕಡಿಮೆ ಬೆಲೆಬಾಳುವದು, ಮರಗಳು ಸಮುದ್ರದ ಸಮೀಪದಲ್ಲಿ ಬೆಳೆಯುವುದರಿಂದ ಮತ್ತು ಮಾನ್ಸೂನ್ ಮಳೆಯಿಂದ ಪ್ರಭಾವಿತವಾಗಿರುವ ಕಾರಣದಿಂದ ಇದು ಅತಿ ಕಡಿಮೆ ಗುಣಮಟ್ಟದ್ದಾಗಿರುತ್ತದೆ.
ಫ್ರಾಂಕಿನ್ಸೆನ್ಸ್ ಗಿಡಗಳನ್ನ ನೆಟ್ಟು ಎಂಟು ಹತ್ತು ವರ್ಷಗಳ ಬಳಿಕ ಅಂಟನ್ನ ಉತ್ಪಾದಿಸಲು ಪ್ರಾರಂಭಿಸುತ್ತವೆ. ಅದರ ನಂತರ ವಾತಾವರಣ ಸೂಕ್ತವಾಗಿದ್ದರೆ ಅತಿ ವೇಗವಾಗಿ ಬೆಳೆಯುತ್ತವೆ. ಈ ಮರಗಳ ಎತ್ತರ ಐದು ಮೀಟರ್ ಗಳಿಷ್ಟುರುತ್ತವೆ. ಹಾಗೂ ಒಂದೇ ಒಂದು ಬೇರನ್ನು ಹೊಂದಿರುತ್ತದೆ. ಗಿಡ ಬೆಳೆದಂತೆ ತೊಗಟೆಯ ಕೆಳಗೆ ಸಣ್ಣ ಗುಂಪುಗಳಲ್ಲಿ ಗಮ್ ರಾಳದ ಗ್ರಂಥಿಗಳು ಬೆಳೆಯುತ್ತವೆ, ಎಲೆಗಳ ರೂಪದಲ್ಲಿ ತೊಗಟೆಯಿಂದ ಈಚೆ ಬಂದು ಬೆಳೆಯುತ್ತವೆ. ಮರದ ಕೊಂಬೆಗಳು ಚಿಕ್ಕದಾಗಿದ್ದು ಮತ್ತು ದಟ್ಟವಾಗಿರುತ್ತವೆ. ಎಲೆಗಳು ಅವುಗಳ ಬದಿಗಳಲ್ಲಿ ಬೆಳೆಯುತ್ತವೆ. ದ್ರಾಕ್ಷಿಯ ಗೊಂಚಲಿನಂತೆ ಗುಂಪಾದ ಆಕಾರವನ್ನು ಹೊಂದಿರುವ ಸಣ್ಣ ಹೂವುಗಳು ರೆಂಬೆಗಳ ಬದಿಗಳಲ್ಲಿ ಸಂಗ್ರಹವಾಗುತ್ತ ಹೋಗುತ್ತದೆ. ಹೂ ಬಿಡುವ ಅವಧಿಯ ನಂತರ, ಒಣ ಬೀಜಗಳು ಹಸಿರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ನಂತರ ಬೀಳುತ್ತವೆ. ಪ್ರಾಚೀನ ಕಾಲದಲ್ಲಿ ಮರದ ಎಲ್ಲಾ ಭಾಗಗಳನ್ನು ಬಳಸಲಾಗುತ್ತಿತ್ತು. ತೊಗಟೆಯನ್ನು ಹತ್ತಿ ಬಟ್ಟೆಗೆ ಬಣ್ಣವಾಗಿ, ಎಲೆಗಳು ಪ್ರಾಣಿಗಳ ಮೇವಾಗಿ ಮತ್ತು ಮೊಗ್ಗುಗಳು, ಹೂವುಗಳು ಮತ್ತು ಹಣ್ಣುಗಳು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಬಾಯಿಯ ವಾಸನೆಯನ್ನು ಹೊರಹಾಕಲು ಟಾನಿಕ್ ಆಗಿ ಬಳಸಲಾಗುತಿತ್ತು.
ಇಲ್ಲಿನ ಸ್ಥಳೀಯ ಸರ್ಕಾರ, ಹೀಗೆ ಇಂತಹ ಹಲವಾರು ವಿಶೇಷಗಳನ್ನ ಗುರುತಿಸಿ ಅದನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯುವ ಕೆಲಸವನ್ನ ಮಾಡುತ್ತದೆ. ಅಷ್ಟೇ ಅಲ್ಲದೆ ಆ ಪ್ರದೇಶಗಳನ್ನ ಅಭಿವೃದ್ದಿ ಪಡಿಸುವುದಲ್ಲದೆ ಅತ್ಯುತ್ತಮವಾಗಿ ನಿರ್ವಹಿಸುವುದನ್ನ ಮರೆಯುವುದಿಲ್ಲ ಹಾಗು ಜನ ಜಾಗೃತಿ ಮಾಡುವುದರಲ್ಲಿ ಮುಂಚೂಣಿಯಲ್ಲಿರುತ್ತದೆ.











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings