ನಾನು ಕೆಲಸ ಮಾಡುವ ಒಮಾನ್ ರಾಷ್ಟ್ರದ ಆಫೀಸಿನ ಬಿಜಿನೆಸ್ ಗೆ ಸಂಭಂದ ಪಟ್ಟಂತೆ ಒಮ್ಮೆ ಚೈನಾ ಪ್ರವಾಸಕ್ಕೆ ಹೋಗಿದ್ದೆ. ಈ ಪ್ರವಾಸದಲ್ಲಿ ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ ಮತ್ತು ಸುಝೋ ನಗರಗಳಲ್ಲಿ ಭೇಟಿ ನೀಡುವ ಅವಕಾಶ ಒದಗಿಬಂದಿತ್ತು. ಒಟ್ಟು ಒಂದು ವಾರದ ಕೆಲಸ. ಮಸ್ಕತ್ ಗೆ ವಾಪಾಸು ಹಿಂದಿರುಗುವ ದಿನ ನಮ್ಮ ಆಥಿತೇಯ ಕಂಪನಿಯವರು ಪ್ರಾಚೀನ ಐತಿಹಾಸಿಕ ನಗರವಾದ ಸುಝೋ ನಗರದ ಪ್ರವಾಸವನ್ನು ಆಯೋಜಿಸಿದ್ದರು. ಸುಝೋ ನಗರ ಚೀನಾದ ಅತಿ ಪುರಾತನವಾದ ಸಾಂಸ್ಕೃತಿಕ ನಗರ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಈ ನಗರವಿದೆ. ಕ್ರಿ.ಪೂ.514ರಲ್ಲಿ ಈ ನಗರವನ್ನು ನಿರ್ಮಾಣಮಾಡಿದ್ದರು ಎಂದು ಹೇಳಲಾಗುತ್ತಿದೆ. 15ನೇ ಶತಮಾನದ ಅಂತ್ಯದಿಂದ 19 ನೇ ಶತಮಾನದವರೆಗೆ, ಸುಝೋ ನಗರ ಚೀನಾದ ಆರ್ಥಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಈ ನಗರ ಇಂದಿಗೂ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಐತಿಹಾಸಿಕ ಪುರಾತನ ನೀರಿನ ಕಾಲುವೆಗಳು, ಕಲ್ಲಿನ ಸೇತುವೆಗಳು, ಪಗೋಡಗಳು ಮತ್ತು ಸುಂದರ ಉದ್ಯಾನವನಗಳು ಪ್ರಮುಖ ಪ್ರವಾಸಿ ಆಕರ್ಷಣೆಗಳು.
ಈ ನಗರವನ್ನು ಸಾಮಾನ್ಯವಾಗಿ "ವೆನಿಸ್ ಆಫ್ ದಿ ಈಸ್ಟ್" ಅಥವಾ
"ವೆನಿಸ್ ಆಫ್ ಚೀನಾ" ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಯುರೋಪಿನ ವೆನೀಸ್ ನಗರದಲ್ಲಿರುವಂತೆ ಇಲ್ಲಿಯೂ ಸಹ ಭಾಗಶಃ
ನಗರ ನೀರಿನೊಳಗೆ ಇದೆ. ಇಲ್ಲಿನ ಕಾಲುವೆಗಳಲ್ಲಿ ಸಂಚರಿಸಲು
ದೋಣಿಗಳ ವ್ಯವಸ್ಥೆಯಿದೆ. ಕಾಲುವೆಯ ಇಕ್ಕೆಲಗಳಲ್ಲಿ ಮನೆಗಳಿವೆ, ಅಂಗಡಿಗಳಿವೆ,
ಹೋಟೇಲ್ ರೆಸ್ಟಾರೆಂಟ್ ಗಳಿವೆ. ಈ ಪ್ರದೇಶದ ಸೌಂದರ್ಯವನ್ನು ಅನುಭವಿಸಲು ದೋಣಿಯಲ್ಲಿಯೇ ಪ್ರಯಾಣಿಸಬೇಕು. ನಮ್ಮ ಪ್ರವಾಸದ ಸಮಯದಲ್ಲಿ
ಈ ಕಾಲುವೆಯಲ್ಲಿ ನಾವು ಪ್ರಯಾಣಿಸುವಾಗ, ಇದರ ಕುರಿತು ಹಲವಾರು ಕುತುಹಲಕಾರಿ
ವಿಷಯಗಳನ್ನು ತಿಳಿದುಕೊಂಡೆವು. ಈ ಕಾಲುವೆಗಳೆಲ್ಲ ದೊಡ್ಡದಾದ ಗ್ರ್ಯಾಂಡ್ ಕೆನಾಲ್ ಅನ್ನು ಸಂಪರ್ಕಿಸುತ್ತವೆ.
ಸುಝೋ ನಗರದ ಕೆಲ ಭಾಗ ಈ ಬೃಹತ್ ನೀರಿನ ಕಾಲುವೆ ಆಕ್ರಮಿಸಿದೆ. ಈ ಕಾಲುವೆಗೆ ಸುಧೀರ್ಘವಾದ ಇತಿಹಾಸವಿದೆ.
ಶತಶತಮಾನಗಳ ಹಿಂದೆ ಸುಲಭವಾಗಿ ಸರಕು ಸರಂಜಾಮುಗಳನ್ನು ಸರಬರಾಜು ಮಾಡಲು ಈ ಕಾಲುವೆಯನ್ನು ಕಟ್ಟಲಾಗಿದೆ
ಎಂದು ಹೇಳುತ್ತಾರೆ. ಆದರೆ ಕೆಲವರ ಪ್ರಕಾರ ಅಂದಿನ ರಾಜಪರಿವಾರದವರಿಗೆ ನೂರಾರು ಕಿ.ಮಿ. ದೂರದ ಊರುಗಳಿಗೆ
ರಸ್ತೆ ಮೂಲಕ ಪ್ರಯಾಣದಲ್ಲಿ ಕುದುರೆ, ಎತ್ತಿನಗಾಡಿ ಮುಂತಾದವುಗಳಲ್ಲಿ ಪ್ರಯಾಣಿಸಿದರೆ
ವಿಪರೀತವಾದ ಮೈ ನೋವು ಬರುತಿತ್ತು, ಸುಸ್ತಾಗುತಿತ್ತು. ಇಂತಹ ಧೀರ್ಘವಾದ ಪ್ರಯಾಣವನ್ನು ರಾಜಪರಿವಾರದ ಅದರಲ್ಲೂ ರಾಜ,
ರಾಣಿ, ರಾಜಕುಮಾರಿ ಮತ್ತಿತರು ಕಾಲುವೆ ಮುಖಾಂತರ ಸುಲಭವಾಗಿ
ಪ್ರಯಾಣ ಮಾಡಲು ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ಅದೇನೆ ಇರಲಿ, ಈ ಕಾಲುವೆಯ
ಉಪಯೋಗದಿಂದ ಚೀನಾದ ಆರ್ಥಿಕ ಪರಿಸ್ಥಿತಿ ತುಂಬಾ ಬಲಗೊಂಡಿತ್ತು ಎಂದು ಹಲವಾರು ಕಾಲಘಟ್ಟದಲ್ಲಿ ದಾಖಲಾಗಿದೆ.
ಈ ಕಾಲುವೆಯ ಉದ್ದ ಸುಮಾರು 1776 km (ಕಿ.ಮಿ) ನಷ್ಟು (ಬೀಜಿಂಗ್‌ನಿಂದ ಝೆಜಿಯಾಂಗ್
ಪ್ರಾಂತ್ಯದವರೆಗೆ), ಉದ್ದವಿದೆ. ಇದು ವಿಶ್ವದ ಅತಿ
ಉದ್ದದ ದೊಡ್ಡ ಕಾಲುವೆಯಾಗಿದ್ದು, ಮಾನವ ನಿರ್ಮಿತ ಕೃತಕ ನದಿಯಾಗಿದೆ. ಬೀಜಿಂಗ್‌ನಿಂದ ಪ್ರಾರಂಭಿಸಿ, ಟಿಯಾಂಜಿನ್ ಮತ್ತು ಹೆಬೈ, ಶಾಂಡೊಂಗ್, ಜಿಯಾಂಗ್ಸು ಮತ್ತು ಝೆಜಿಯಾಂಗ್ ಪ್ರಾಂತ್ಯಗಳ
ಮೂಲಕ ಹಾಂಗ್‌ಝೌ ನಗರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕ್ರಿ.ಪೂ. 5 ನೇ ಶತಮಾನದಲ್ಲಿ ಇದನ್ನು ಮೊದಲು
ಕಟ್ಟಲು ಪ್ರಾರಂಭಿಸಿದರು, ನಂತರ ಕ್ರಿ.ಶ. 581–618 ರಲ್ಲಿ
ಮತ್ತು ಕ್ರಿ.ಶ. 1271–1633, ಹೀಗೆ ವಿವಿಧ ಕಾಲಘಟ್ಟದಲ್ಲಿ ಇಲ್ಲಿನ ರಾಜಮನೆತನಗಳು ಇದನ್ನು ವಿಸ್ತರಿಸುತ್ತ
ಬಂದಿದ್ದಾರೆ. ಈ ಕಾಲುವೆ ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ. ಈ ಕಾಲುವೆಯಲ್ಲಿ
ಪ್ರಮುಖವಾಗಿ ಆಹಾರಧಾನ್ಯಗಳನ್ನು ಸಾಗಿಸಲಾಗುತಿತ್ತು. ಸೇನಾ ತುಕಡಿಗಳನ್ನು ಒಂದುಕಡೆ ಇನ್ನೊಂದು ಕಡೆಗೆ
ಸಾಗಿಸಲು ಸಹ ಇದನ್ನ ಬಳಸುತಿದ್ದರು. ಈ ಕಾಲುವೆಯಲ್ಲಿ
ಸಂಚರಿಸಲು, ಅಂದಿನ ಕಾಲದಲ್ಲಿಯೇ ತಂತ್ರಜ್ನಾನವನ್ನು ಉಪಯೋಗಿಸಿ
ಪ್ರಯಾಣಕ್ಕೆ ಸೂಕ್ತವಾದ ದೋಣಿಗಳನ್ನು ನಿರ್ಮಿಸುತಿದ್ದರು. ಸಾಗಾಣೆದಾರರು ಅಂದಿನ ಆಡಳಿತಗಾರರಿಗೆ, ಸುಂಕವನ್ನ ನೀಡಬೇಕಿತ್ತು. ಇದೊಂದು ಉತ್ತಮವಾದ
ಆದಾಯವಾಗಿತ್ತು. ಈ ಸಾಗಾಟದ ಸಮಯದಲ್ಲಿ ದರೋಡೆಕೋರರು, ಲೂಟಿಕೋರರು ದಾಳಿಯಿಡುತಿದ್ದರಂತೆ, ಅವರಿಂದ ರಕ್ಷಿಸಲು ಅಲ್ಲಲ್ಲಿ ಸೈನಿಕರ ತುಕಡಿಗಳನ್ನ
ನಿಯೋಜಿಸುತಿದ್ದರು. ಆದರೂ ಸಂಧರ್ಭ ನೋಡಿ, ಈ ದಾಳಿಕೋರರು ಆಹಾರಧಾನ್ಯಗಳು ಸೇರಿದಂತೆ ಮತ್ತಿತರ ವಸ್ತುಗಳನ್ನ ದರೋಡೆ
ಮಾಡುತಿದ್ದರು.
ಒಂದು ಕಾಲದಲ್ಲಿ ಪ್ರತಿವರ್ಷ 8000 ಕ್ಕೂ
ಹೆಚ್ಚಿನ ದೋಣಿಗಳು ಸಂಚರಿಸುತಿದ್ದ 1776 km (ಕಿ.ಮಿ) ಉದ್ದದ ಈ ಐತಿಹಾಸಿಕ ಕಾಲುವೆ ಕಾಲನ ಹೊಡೆತಕ್ಕೆ ಸಿಕ್ಕಿ, ಇಂದು ಹಾಳಾಗಿದೆ. ಕೆಲೆವೆಡೆ ಇದರ ಗುರುತುಗಳೇ
ನಾಶವಾಗಿವೆ. ಕೆಲೆವೆಡೆ ಕಾಲುವೆ ಮುಚ್ಚಿ ಹೋಗಿದೆ. ಇಂದಿನ ಆಧುನಿಕ ಯುಗದಲ್ಲಿ ರಸ್ತೆ ರೈಲು ಮಾರ್ಗವನ್ನು
ಯಥೇಚ್ಚವಾಗಿ ಉಪಯೋಗಿಸುತ್ತಿರುವುದರಿಂದ, ಎಲ್ಲೆಲ್ಲಿ ಅತಿ ಹೆಚ್ಚು ನೀರು ಇದೆಯೋ ಮತ್ತು ಸಂಪರ್ಕಯೋಗ್ಯವಿದೆಯೋ ಆ
ಕಾಲುವೆ/ನದಿ ಮಾತ್ರ ಬಳಕೆಯಲ್ಲಿದೆ, ಮಿಕ್ಕಿದ್ದು ಹೂಳು ತುಂಬಿ ಮುಚ್ಚಿ ಹೋಗಿದೆ. ಕೆಲೆವೆಡೆ ಗುರುತೇ ಸಿಗದಷ್ಟು
ಹಾಳಾಗಿದೆ. 12ನೇ ಶತಮಾನದ ಪ್ರಸಿದ್ದ ಪ್ರವಾಸಿಗ ಮಾರ್ಕೋಪೋಲೋ ಸೇರಿದಂತೆ ವಿವಿಧ ವಿದೇಶಿ ಪ್ರವಾಸಿಗರು
ಈ ಐತಿಹಾಸಿಕ ಕಾಲುವೆ ಕುರಿತು ದಾಖಲಿಸಿದ್ದಾರೆ.
ಸುಝೋದಲ್ಲಿ, ಈ ಕಾಲುವೆ ಪ್ರಯಾಣದ ನಂತರ ವಿವಿಧ ಪ್ರವಾಸಿತಾಣಗಳಿಗೆ
ನಮ್ಮ ಕರೆದುಕೊಂಡು ಹೋದರು. ಎಲ್ಲ ಸ್ಥಳಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ಈ ಎಲ್ಲಾ ಸ್ಥಳಗಳು
ನೂರಾರು ವರ್ಷಗಳ ಹಿಂದೆ ಕಟ್ಟಿದಂತಹವು. ಅವುಗಳನ್ನ ಇಂದಿಗೂ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡಿರುವುದು
ಇಲ್ಲಿನ ವೈಶಿಷ್ಟ್ಯ. ಸುಝೋ ನಗರದ ಈ ಸ್ಥಳಗಳನ್ನ ನೋಡಿದೊಡನೆ, ಪುರಾತನ ಚೀನಾದ ನಗರವೊಂದನ್ನು ನೋಡಿದಂತಹ
ಅನುಭವವಾಗುತ್ತದೆ.
*ಪ್ಯಾನ್ಮೆನ್ (ಪ್ಯಾನ್ ಗೇಟ್)*. ಪ್ಯಾನ್ಮೆನ್
ಎನ್ನುವ ಈ ರಮಣೀಯ ಪ್ರದೇಶವನ್ನು ಶಾಸ್ತ್ರೀಯ ಉದ್ಯಾನಗಳ ವಾಸ್ತುಶಿಲ್ಪದ ರಚನೆಯನ್ನು ಬಳಸಿಕೊಂಡು ಕೆಲವು
ಐತಿಹಾಸಿಕ ತಾಣಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇಲ್ಲಿ
"ಮೂರು ಸುಂದರ ದೃಶ್ಯಾವಳಿಗಳನ್ನು" ನೋಡಬಹುದು. 1) ಪನ್ಮೆನ್ ಗೇಟ್, 2) ವೂ ಮೆನ್ ಸೇತುವೆ ಮತ್ತು 3) ರುಯಿಗುವಾಂಗ್
ಪಗೋಡಾ. ಪ್ಯಾನ್ಮೆನ್ ಗೇಟ್ ಸುಝೌನಲ್ಲಿ 2500 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಐತಿಹಾಸಿಕ
ಹೆಗ್ಗುರುತಾಗಿದೆ. ಇಂದಿಗೂ ಪ್ರಾಚೀನ ಕೋಟೆಗಳಲ್ಲಿ ಒಂದಾಗಿ ಇದು ಉಳಿದಿದೆ. ಆಕರ್ಷಕವಾದ "ವು ಮೆನ್" ಸೇತುವೆಯು ಸುಝೌದಲ್ಲಿ
ಅತಿ ಎತ್ತರವಾದ ಪುರಾತನ ಸೇತುವೆಯಾಗಿದೆ. ಇದು ಸಾಂಗ್
ರಾಜವಂಶದ (ಕ್ರಿ.ಶ. 960-1279) ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ.
ಏಳು ಅಂತಸ್ತಿನ ಪಗೋಡವನ್ನು ಮರದ ವೇದಿಕೆಗಳೊಂದಿಗೆ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಇಲ್ಲಿನ ಕಿರಿದಾದ ಮೆಟ್ಟಿಲುಗಳ ಮೇಲೆ ಹತ್ತಿದ
ನಂತರ, ಸುಝೋ ನಗರದ ಹೃದಯಭಾಗವನ್ನು ನೋಡಬಹುದು. ಹಚ್ಚ
ಹಸಿರಿನ ಸುಂದರವಾದ ಉದ್ಯಾನವನಗಳು, ನೀರಿನ ಕಾಲುವೆಗಳು ಇತ್ಯಾದಿಗಳನ್ನ ಕಣ್ತುಂಬಿಕೊಳ್ಳಬಹುದು.
*ಟೈಗರ್ ಹಿಲ್:* ಟೈಗರ್ ಹಿಲ್ ಸುಝೋ ನಗರದ ಒಂದು ಪ್ರವಾಸಿಗರ ಆಕರ್ಷಣೆಯಾಗಿದೆ. ಇದಕ್ಕೆ 2500 ವರ್ಷಗಳ ಇತಿಹಾಸವಿದೆ.
ಇಲ್ಲಿಯೂ ಸಾಕಷ್ಟು ಪುರಾತನ ವಾಸ್ತುಶಿಲ್ಪಗಳನ್ನು
ನೋಡಬಹುದು. 2500 ವರ್ಷಗಳ ಹಿಂದೆ ಇಲ್ಲಿನ ಒಂದು ಯುದ್ದದಲ್ಲಿ ಈ ಪ್ರಾಂತ್ಯದ ರಾಜನೊಬ್ಬ ಮರಣಹೊಂದುತ್ತಾನೆ. ಅವನ ಮಗ "ಫೂ ಚಾಯ್", ಅವನನ್ನು ಸರ್ಜಿಂಗ್ ಸೀ ಹಿಲ್ ಎನ್ನುವ ಈ ಪ್ರದೇಶದಲ್ಲಿ ಸಮಾಧಿ ಮಾಡುತ್ತಾನೆ.
ಮೂರು ದಿನಗಳ ನಂತರ ಇಲ್ಲಿಗೆ ಬಿಳಿ ಹುಲಿಯೊಂದು ಬಂದಿತು ಎಂಬ ಐತಿಹ್ಯವಿದೆ. ಆದ್ದರಿಂದ ಜನರು ಅಂದಿನಿಂದ
ಅದನ್ನು ಟೈಗರ್ ಹಿಲ್ ಎಂದು ಮರುನಾಮಕರಣ ಮಾಡಿದ್ದಾರೆ.
ಸುಝೌವನ್ನು *"ಉದ್ಯಾನಗಳ ನಗರ"*
ಎಂದು ಸಹ ಕರೆಯಲಾಗುತ್ತದೆ. 16ನೇ ಶತಮಾನದಲ್ಲಿ 170 ಉದ್ಯಾನಗಳು ಈ ನಗರದಲ್ಲಿವಂತೆ. ಈಗ ಅಂದಾಜು
50 ಖಾಸಗಿ ಮತ್ತು ಸರ್ಕಾರಿ ಉದ್ಯಾನವನಗಳಿವೆ. ಈ ಎಲ್ಲಾ ಉದ್ಯಾನವನಗಳನ್ನು ತೋಟಗಾರಿಕೆಯ ವಿಶ್ವ ಇತಿಹಾಸದಲ್ಲಿ
ಶ್ರೇಷ್ಠ ಮೇರುಕೃತಿಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಒಂಬತ್ತು ಉದ್ಯಾನವನಗಳನ್ನು ವಿಶ್ವ ಸಾಂಸ್ಕೃತಿಕ
ಪರಂಪರೆಗಳಲ್ಲಿ ಪಟ್ಟಿ ಮಾಡಲಾಗಿದೆ. ಚೀನೀ ಉದ್ಯಾನ ಸಂಸ್ಕೃತಿಯ ಹೆಮ್ಮೆಯೆಂದು ಗುರುತಿಸಲ್ಪಡುವ ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್ ಮತ್ತು ಲಿಂಗರಿಂಗ್
ಗಾರ್ಡನ್ ಇಂದಿಗೂ ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ.
*ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್*
ಅನ್ನು ಕ್ರಿ.ಶ 1509 ರಲ್ಲಿ ನಿರ್ಮಿಸಲಾಯಿತು. ಇದು ಸುಝೋದಲ್ಲಿನ ಅತಿದೊಡ್ಡ ಶಾಸ್ತ್ರೀಯ ಸಾಂಪ್ರದಾಯಿಕ
ಉದ್ಯಾನವನವಾಗಿದೆ. ಇಡೀ ಉದ್ಯಾನವು ನೀರಿನ ಕೊಳ, ಕಾಲುವೆಗಳಿಂದೆ, ಆಕರ್ಷಕ ಕಲ್ಲು ಬಂಡೆಗಳು, ಮಂಟಪಗಳು, ವಿವಿಧ ರೀತಿಯ ಸುಂದರವಾದ ಹೂವಿನ ಗಿಡಗಳು, ಆಕರ್ಷಕ ಮರಗಿಡಗಳಿಂದ ಕೂಡಿದ ಇಲ್ಲಿನ ದೃಶ್ಯಾವಳಿ
ಮನಸ್ಸಿಗೆ ಮುದ ನೀಡುತ್ತವೆ. ಅಂಕುಡೊಂಕಾದ ಹಾದಿಯಲ್ಲಿ ನಡೆಯುತ್ತಾ ಮುಂದೆ ಹೋದಂತೆ , ಪ್ರತಿಯೊಂದು ಹೆಜ್ಜೆಗೂ ವಿಭಿನ್ನ ದೃಶ್ಯಾವಳಿಗಳು
ಗೋಚರಿಸುತ್ತವೆ. ರಮಣೀಯ ಮತ್ತು ಶಾಂತಿಯುತ, ಉದ್ಯಾನದಲ್ಲಿ ಪ್ರತಿಯೊಂದು ವಸ್ತುವೂ ಹಿಂದಿನ ಕಥೆಯನ್ನು ಹೇಳುತ್ತದೆ.
*ಲಿಂಗರಿಂಗ್ ಗಾರ್ಡನ್* (ಲಿಯುವಾನ್ ಗಾರ್ಡನ್)
ಚೀನಾದಲ್ಲಿ ಅತಿ ದೊಡ್ಡ ಪ್ರಮಾಣದ ಕ್ಲಾಸಿಕಲ್ ಖಾಸಗಿ ಉದ್ಯಾನವಾಗಿದ್ದು, 23300 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ, ಇದು ಕ್ವಿಂಗ್ ರಾಜವಂಶದ ಶೈಲಿಯ ವಿನ್ಯಾಸವನ್ನು
ಪ್ರತಿನಿಧಿಸುತ್ತದೆ. ಸೊಗಸಾದ ವಾಸ್ತುಶಿಲ್ಪ ಕಲೆ, ಭವ್ಯವಾದ ಸಭಾಂಗಣಗಳು ಮತ್ತು ಸುಂದರವಾದ ಗಾರ್ಡೆನ್
ಅಂಗಳಗಳಿಗೆ ಹೆಸರುವಾಸಿಯಾಗಿದೆ. ಈ ಗಾರ್ಡನ್ ಅನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಪೂರ್ವದಲ್ಲಿ
ಮುಖ್ಯವಾಗಿ ವಾಸ್ತುಶಿಲ್ಪ, ಮಧ್ಯದಲ್ಲಿ ವಿಶಾಲವಾದ ಉದ್ಯಾನವನ, ಪಶ್ಚಿಮವು ಕಲ್ಲು ಬಂಡೆಗಳಿಂದ ಕೂಡಿದ ಮತ್ತು
ಉತ್ತರಕ್ಕೆ ಗ್ರಾಮೀಣ ದೃಶ್ಯಾವಳಿಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.
*ರೇಷ್ಮೆ ನಗರಿ:-* ಸಾವಿರಾರು ವರ್ಷಗಳಿಂದ, ಸುಝೋ ನಗರದ ಜನರು ಅದ್ಭುತವಾದ ರೇಷ್ಮೆಬಟ್ಟೆಗಳನ್ನುತಯಾರಿಸುವ
ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. 4700 ವರ್ಷಗಳ ಹಿಂದೆ ಇಲ್ಲಿ ರೇಷ್ಮೆ
ಉಪಯೋಗದಲ್ಲಿತ್ತು ಎಂದು ಉತ್ಖನನದ ವೇಳೇ ದೊರೆತ ಅವಶೇಷಗಳಿಂದ ಸಾಬೀತು ಪಡಿಸಲಾಗಿದೆ. ಹೀಗಾಗಿ ಸುಝೋ
ನಗರವನ್ನು ಸಿಲ್ಕ್ ಸಿಟಿ ಎಂದು ಕರೆಯುವುದಲ್ಲದೆ ಇಲ್ಲಿ ಸಿಲ್ಕ್ ರೋಡ್ ಇತ್ತು ಎಂದು ಹೇಳಲಾಗುತ್ತಿದೆ.
1991 ರಲ್ಲಿ ನಿರ್ಮಿಸಲಾದ ಸುಝೋ ಸಿಲ್ಕ್ ಮ್ಯೂಸಿಯಂ ಚೀನಾದಲ್ಲಿ ರೇಷ್ಮೆಯ ಕುರಿತಾದ ಮೊದಲ ವಸ್ತು
ಸಂಗ್ರಹಾಲಯವಾಗಿದೆ. ಇಲ್ಲಿ ಚೀನಾದ 7000 ವರ್ಷಗಳ ರೇಷ್ಮೆ ಇತಿಹಾಸವನ್ನು ತಿಳಿದುಕೊಳ್ಳಬಹುದು, ರೇಷ್ಮೆ ಹುಳುಗಳ ಜೀವನ, ಸಾಂಪ್ರದಾಯಿಕ ರೇಷ್ಮೆ ನೇಯ್ಗೆ ಕೌಶಲ್ಯವನ್ನು
ವೀಕ್ಷಿಸಬಹುದು.
ಹೀಗೆ ಚೀನಾದ ಪ್ರವಾಸದ ವೇಳೆ ಹಲವಾರು ವಿಷಯಗಳನ್ನು
ತಿಳಿದುಕೊಳ್ಳುವ ಅವಕಾಶ ನಮಗೆ ಒದಗಿಬಂತು. ಚೀನಾದ
ಹಳೆಯ ಚಲನ ಚಿತ್ರಗಳಲ್ಲಿ ಚೈನಾದ ಸಾಂಪ್ರದಾಯಿಕ ಊರುಗಳು, ಕಟ್ಟಡಗಳನ್ನು ನೋಡಿದ್ದ ನಮಗೆ ಪ್ರತ್ಯಕ್ಷವಾಗಿ
ಸುಝೋದಲ್ಲಿ ಅಂತಹ ಸ್ಥಳಗಳನ್ನು ಕಾಣುವಂತಾಯಿತು. ಒಂದೆಡೆ ಗಗನಚುಂಬಿ ಆಧುನಿಕ ಕಟ್ಟಡಗಳು, ಮೆಟ್ರೋ ಟ್ರೈನ್, ಮೋನೋ ರೈಲ್, ಎಕ್ಸ್ಪ್ರೆಸ್ ಹೆದ್ದಾರಿ, ದೊಡ್ಡದಾದ ಫ್ಲೈ ಓವರ್ ಗಳು ಮತ್ತೊಂದೆಡೆ
ಸಾಂಪ್ರದಾಯಿಕ ಶೈಲಿಯ ಪುರಾತನ ನಗರ ಜೀವನವನ್ನು ಕಣ್ತುಂಬಿಕೊಳ್ಳುವ ಅನುಭವಾಯಿತು.
ಬರಹ:- ಪಿ.ಎಸ್.ರಂಗನಾಥ
ಮಸ್ಕತ್ - ಒಮಾನ್ ರಾಷ್ಟ್ರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ