ಬುಧವಾರ, ಸೆಪ್ಟೆಂಬರ್ 27, 2023

ಕೃಷಿ ಸ್ವಾವಲಂಬನೆಯತ್ತ ಅರಬ್ ರಾಷ್ಟ್ರಗಳು



ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಕತಾರ್, ಒಮಾನ್, ಬಹರೈನ್, ಯುಏಇ ಮತ್ತಿತರ ರಾಷ್ಟ್ರಗಳು ನಮ್ಮ ಭಾರತದಂತೆ ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿಲ್ಲ ಇಲ್ಲಿನ ಬಹುತೇಕ ಜಾಗ ಮರುಭೂಮಿಯಿಂದ ಆವೃತವಾಗಿದೆ, ಮಳೆ ಬಹಳ ವಿರಳ, ನದಿ ಸರೋವರಗಳು ಇಲ್ಲಿ ಬಹಳ ಕಡಿಮೆ.  ಏಳೆಂಟು ತಿಂಗಳು ಬೇಸಿಗೆ ಕಾಲ, ಆ ಸಮಯದಲ್ಲಿ ಅತಿ ಹೆಚ್ಚು ಎಂದರೆ 40-55 ಡಿಗ್ರಿ .ಸೆಲ್ಶಿಯಸ್ ನಷ್ಟು ತೀಕ್ಷ್ಣವಾದ ಬಿಸಿಲು. ಇಂತಹ ವೈರುಧ್ಯಮಯವಾದ ವಾತಾವರಣದಲ್ಲಿ ಬೆಳೆ ಬೆಳೆಯುವುದು ಬಹಳ ಕಷ್ಟ. ಇಲ್ಲಿ ತೈಲ ಆವಿಷ್ಕಾರ ವಾಗುವವರೆಗೂ ನೂರಾರು ವರ್ಷಗಳಿಂದ ಇಲ್ಲಿನ ಜನರು ಭಾರತದಂತಹ ರಾಷ್ಟ್ರಗಳನ್ನ ಅಗತ್ಯ ವಸ್ತುಗಳಿಗಾಗಿ  ಅವಲಂಬಿಸಿದ್ದರು. ಆದರೆ, ಇಪ್ಪತ್ತನೇ ಶತಮಾನದಲ್ಲಿ ತೈಲದ ಆವಿಷ್ಕಾರದ ನಂತರ ಇಲ್ಲಿಯ ಬದುಕಿನ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ತೈಲದ ಬೇಡಿಕೆ ದಿನೇ ದಿನೇ ಹೆಚ್ಚಿದಂತೆಲ್ಲ ತೈಲ ಉತ್ಪಾದನೆ ಹೆಚ್ಚಾಯಿತು. ಈ ತೈಲ ಮಾರಿ ಬಂದ ಹಣದಲ್ಲಿ ಇಲ್ಲಿನ ಮೂಲ ಭೂತ ಸೌಕರ್ಯಗಳನ್ನ ಅಭಿವೃದ್ದಿ ಪಡಿಸಿದ್ದಲ್ಲದೆ, ದೇಶಕ್ಕೆ ಬೇಕಾದ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನ ನಿರ್ಮಿಸಿ ಕೊಳ್ಳುತ್ತ ಬಂದಿದ್ದಾರೆ. ಜನರಿಗೆ ಬೇಕಾದ ಎಲ್ಲಾ ರೀತಿಯ ಅಗತ್ಯ ಉತ್ಪನ್ನಗಳನ್ನು  ಪ್ರಪಂಚದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಮೇರಿಕ, ಆಸ್ಟ್ರೇಲಿಯಾ, ಯೂರೋಪ್ ರಾಷ್ಟ್ರಗಳ ಉತ್ತಮ ಗುಣಮಟ್ಟದ ಹಣ್ಣು ತರಕಾರಿ, ದಿನಸಿ ವಸ್ತುಗಳನ್ನು ಆಮದು ಮಾಡಿಕೊಳ್ಳುತಿದ್ದಾರೆ. ಇಲ್ಲಿನ ಸೂಪರ್ ಮಾರ್ಕೆಟ್ ಗಳು, ಮಾಲ್ ಗಳಲ್ಲಿ ದೇಶ ವಿದೇಶಗಳ ವಸ್ತುಗಳು ದೊರೆಯುತ್ತಿವೆ.

 

ಅರಬ್ ರಾಷ್ಟ್ರಗಳಲ್ಲಿ ಕೇವಲ ಮರುಭೂಮಿ ಮತ್ತು ತೈಲ ನಿಕ್ಷೇಪಗಳು ಮಾತ್ರವಲ್ಲದೆ ಕೆಲ ಪ್ರದೇಶಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳು ಸಹ ಇವೆ. ಹೀಗಾಗಿ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಬೆಳೆಗಳನ್ನು ಬೆಳೆಯುತಿದ್ದಾರೆ. ಕೆಲೆವೆಡೆ ಕೃಷಿ ಭೂಮಿ ಸೇರಿದಂತೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಅತ್ಯುನ್ನತ ತಂತ್ರಜ್ನಾನವನ್ನು ಉಪಯೋಗಿಸುತಿದ್ದಾರೆ. ಇವೆಲ್ಲವನ್ನ ಕಣ್ಣಾರೆ ನೋಡಿದಾಗ ಕೃಷಿಯನ್ನು ಹೀಗೂ ಮಾಡಬಹುದಾ ಎಂದು ಆಶ್ಚರ್ಯವಾಗುತ್ತದೆ.

 ಮರುಭೂಮಿಯಲ್ಲಿ ಅದ್ಭುತವಾದ ಬೆಳೆ ತೆಗೆಯುತ್ತಿರುವ ಸೌದಿ ಅರೇಬಿಯಾ

ಸೌದಿ ಅರೇಬಿಯಾದ ಭೂಪ್ರದೇಶದ ಸುಮಾರು 1.5% ಮಾತ್ರ ಕೃಷಿ ಮಾಡಲು ಯೋಗ್ಯವಾಗಿದೆ. ಹೀಗಾಗಿ ದೇಶದ ಅಗತ್ಯ ಆಹಾರ ಪೂರೈಕೆಯ 80% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಂದೊಂದು ದಿನ ಜಾಗತಿಕ ಆಹಾರ ಪೂರೈಕೆ ಜಾಲದಲ್ಲಿ ಏನಾದರು ಕುಸಿತ ಕಂಡರೆ ದೇಶ ಅಪಾಯಕ್ಕೆ ಸಿಲುಕುವ ಸಂಭವನೀಯತೆ ಹೆಚ್ಚಿರುತ್ತದೆ. ಹೀಗಾಗಿ ಜಾಗತಿಕ ಆಹಾರ ಪೂರೈಕೆ ಜಾಲದ ಸಂಭವನೀಯ ಅಪಾಯಗಳನ್ನು ಮನಗಂಡು ಆಹಾರ ಭದ್ರತೆ ಗಾಗಿ ಅತ್ಯುನ್ನತ ವಿದೇಶಿ ತಂತ್ರಜ್ನಾನವನ್ನು ಉಪಯೋಗಿಸಿ ಮರುಭೂಮಿಯನ್ನು ಕೃಷಿಭೂಮಿಯನ್ನಾಗಿ ಸೌದಿ ಅರೇಬಿಯಾ ಪರಿವರ್ತಿಸುತ್ತಿದೆ.  ಇದರ ಪರಿಣಾಮ ಕೆಲೆವೆಡೆ ನೂರಾರು ಕಿ.ಮಿ.ಗಳಷ್ಟು ಉದ್ದಕ್ಕೂ ಕೃಷಿ ಚಟುವಟಿಕೆಯನ್ನು ಇಂದು ಕಾಣಬಹುದಾಗಿದೆ. ಇದರಿಂದಾಗಿ ಆಹಾರಕ್ಕಾಗಿ ಸಂಪೂರ್ಣ ಸುಸ್ಥಿರ ಸ್ವಾವಲಂಬನೆಯತ್ತ ಹೆಜ್ಜೆಹಾಕುತ್ತಿದೆ.

 

ತುಬರ್ಜಲ್  ಎನ್ನುವ ಪ್ರದೇಶದಲ್ಲಿ ಲಕ್ಷಾಂತರ ಎಕರೆ ಮರುಭೂಮಿ ಇಂದು ಕೃಷಿಭೂಮಿಯಾಗಿ ಪರಿವರ್ತಿತ ಗೊಂಡಿದೆ. 300 ರಿಂದ 500 ಮೀಟರ್ ತ್ರಿಜ್ಯದ ವೃತ್ತಾಕಾರದಲ್ಲಿ ಈ ಕೃಷಿ ಭೂಮಿಗಳಿವೆ. ಗೂಗಲ್ ಮ್ಯಾಪ್ ನಲ್ಲಿ ನೋಡಿದರೆ ಚುಕ್ಕಿಗಳಂತೆ ಕಾಣುವ ಈ ಪ್ರದೇಶ ಸಾವಿರಾರು ಚದರ ಕಿ.ಮಿ. ನಷ್ಟು ಹರಡಿಕೊಂಡಿದೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ನೀರಿಗಾಗಿ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ಇದರಿಂದ ಭೂಮಿಯ ಆಳದಲ್ಲಿರುವ ನೀರನ್ನು ತೆಗೆದು 300 ಮೀಟರ್ ರಿಂದ 500 ಮೀಟರ್ ತ್ರಿಜ್ಯದಲ್ಲಿ ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಮುಖಾಂತರ ಅಥವಾ ಸೆಂಟರ್-ಪಿವೋಟ್ ನೀರಾವರಿ ಪದ್ದತಿಯಿಂದ ಬೆಳೆಗಳಿಗೆ ನೀರನ್ನು ಪೂರೈಸಲಾಗುತ್ತಿದೆ. ಅಷ್ಟೇ ಅಲ್ಲದೆ ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಇನ್ನು ಮುಂತಾದ ತಂತ್ರಜ್ನಾನವನ್ನು ಉಪಯೋಗಿಸಿ ಬೆಳೆಗಳಿಗೆ ನೀರುಣಿಸುತಿದ್ದಾರೆ. ಬಹುತೇಕ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇಲ್ಲಿ ಉಪಯೋಗಿಸುವುದರಿಂದ ಹೆಚ್ಚಿನ ಕೃಷಿ ಕಾರ್ಮಿಕರ ಅಗತ್ಯತೆ ಕಂಡು ಬರುತ್ತಿಲ್ಲ. ನೀರಿನ ಬಳಕೆಯೂ ಇಲ್ಲಿ ಕಡಿಮೆ. ಇಲ್ಲಿ, ವಿವಿಧ ರೀತಿಯ ಹಣ್ಣು, ಹೂವು ತರಕಾರಿ, ಖರ್ಜೂರ, ಧವಸ ಧಾನ್ಯಗಳಾದ ಗೋಧಿ, ಬಾರ್ಲಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ 100% ಎಲ್ಲಾ ಕೃಷಿ ಉತ್ಪನ್ನಗಳು ದೇಶದೊಳಗೆ ಸರಬರಾಜಾಗುತಿದ್ದು, ಹೆಚ್ಚುವರಿ ಉತ್ಪನ್ನಗಳನ್ನ ಪಕ್ಕದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಸಾಂಪ್ರದಾಯಿಕ ಕೃಷಿಯ ಜತೆಗೆ, ನೂತನ ತಂತ್ರಜ್ನಾನಗಳಾದ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ಅನ್ನು ಕೆಲೆವೆಡೆ ಅಳವಡಿಸಿಕೊಂಡು ಕೃಷಿಮಾಡಲಾಗುತ್ತಿದೆ.

 ಒಮಾನ್ ರಾಷ್ಟ್ರವೂ ಸಹ ಕೃಷಿ ಸ್ವಾವಲಂಬನೆಯತ್ತ ದಾಪುಗಾಲು ಹಾಕುತ್ತಿದೆ.

 ಒಮಾನ್ ನಲ್ಲಿಯೂ ಸಹ ವಿವಿಧ ತರಹದ ಹೂ, ಹಣ್ಣು ಸೊಪ್ಪುಗಳನ್ನ ಬೆಳೆಯಲಾಗುತ್ತಿದೆ. ಇಲ್ಲಿಯೂ ಲಕ್ಷಾಂತರ ಎಕರೆಯಷ್ಟು ಕೃಷಿ ಭೂಮಿಯಿದೆ. ಈ ತೋಟಗಳಲ್ಲಿ ಗೋಧಿ, ಬಾರ್ಲಿ, ಖರ್ಜೂರ, ಬಾಳೆಹಣ್ಣು, ಮಾವಿನಹಣ್ಣು, ಸೀಬೆ ಹಣ್ಣು, ಸಪೋಟ, ಪಪ್ಪಾಯ, ಕಲ್ಲಂಗಡಿ ಹಣ್ಣು, ದಾಳಿಂಬೆ, ಕರಭೂಜ, ಸೋರೆಕಾಯಿ, ಕುಂಬಳ್ಕಾಯಿತೆಂಗಿನಕಾಯಿ, ಕೊತ್ತಂಬರಿ, ಪುದಿನ, ಲೆಟ್ಟ್ಯೂಸ್, ಬದನೆಕಾಯಿ, ಟೊಮಾಟೋ, ಕ್ಯಾಪ್ಸಿಕಮ್, ನಿಂಬೆಹಣ್ಣು, ನುಗ್ಗೆಕಾಯಿ, ಆಲೂಗಡ್ಡೆ ಮುಂತಾದವಗಳನ್ನು ಇಲ್ಲಿ ಬೆಳೆಯುತ್ತಾರೆ. ಉತ್ಸಾಹಿ ಒಮಾನಿ ಕೃಷಿಕರು ವಿವಿಧ ರೀತಿಯ ಪ್ರಯೋಗಗಳನ್ನ ನಡೆಸುತ್ತಿರುವುದು ವಿಶೇಷ. ಮಲೆನಾಡಿನಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಸಹ ಇಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಅಂಜೂರದ ಹಣ್ಣುಗಳು, ಏಪ್ರಿಕಾಟ್ಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ ಬೆಳೆಯುತ್ತಿರುವುದು ವಿಶೇಷವಾಗಿದೆ, ಯಾಕೆಂದರೆ ಇಲ್ಲಿನ ವಾತಾವರಣ ಅತಿ ಬಿಸಿಲಿನಿಂದ ಕೂಡಿದ್ದು, ಇಂತಹ ಅತಿ ಕಡಿಮೆ ಮಳೆ ಪ್ರದೇಶದಲ್ಲಿ ಇಂತಹವುಗಳನ್ನ ಬೆಳೆಯಲು ಸಾಧ್ಯವಾಗಿದ್ದೆ ವಿಶೇಷವೆಂದೇ ಹೇಳಬೇಕು.

 

ಕೆಲೆವೆಡೆ ಹನಿ ನಿರಾವರಿ ಪದ್ದತಿ, ಸ್ಪ್ರಿಂಕ್ಲರ್ ವ್ಯವಸ್ಥೆ, ವೃತ್ತಾಕಾರದ ಸಿಂಪರಣಾ ವ್ಯವಸ್ಥೆಯ ಜತೆಗೆ ಕೆಲೆವೆಡೆ ಹೈಡ್ರೋಪೋನಿಕ್ಸ್ ಮತ್ತು ಏರೋಪೋನಿಕ್ಸ್ ನಂತಹ ತಂತ್ರಜ್ನಾನಗಳನ್ನು ಉಪಯೋಗಿಸಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ತಂತ್ರಜ್ನಾನವನ್ನು ಉಪಯೋಗಿಸಿ ಈ ರಾಷ್ಟ್ರಗಳಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ.

 

ಒಮಾನ್ ರಾಷ್ಟ್ರದ ಬೆಟ್ಟ ಗುಡ್ಡಗಾಡು ಪ್ರದೇಶಗಳ ಬುಡದಲ್ಲಿ ವರ್ಷಪೂರ್ತಿ ನೈಸರ್ಗಿಕವಾಗಿ ಹರಿಯುವ ಸಾವಿರಾರು ನೀರಿನ ಝರಿಗಳಿವೆ, ಈ ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದ್ದು, ಮಿಕ್ಕ ಕೆಲೆವೆಡೆ ಬೋರ್ ವೆಲ್ ಗಳನ್ನು ಕೊರೆದು ಕೃಷಿಗಾಗಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ದುಬೈ ನಿಂದ ಒಮಾನ್ ರಾಷ್ಟ್ರದ ಮಸ್ಕತ್ ಗೆ ರಸ್ತೆಯಲ್ಲಿ ಪ್ರಯಣಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಕಿ.ಮಿ. ದೂರದಷ್ಟು ಹಚ್ಚ ಹಸಿರಿನಿನ ತೋಟಗಳನ್ನು ಕಾಣಬಹುದು, ಇದೇ ರೀತಿ ಸಲಾಲ್ಹ, ಸೂರ್, ನಿಜ್ವ ಮುಂತಾದ ಪ್ರದೇಶಗಳಲ್ಲಿಯೂ ಸಹ ಹೊಲಗದ್ದೆಗಳಿವೆ. ಸಲಾಲ್ಹ ಪ್ರದೇಶವಂತೂ ನಮ್ಮ ಸಹ್ಯಾದ್ರಿ ತಪ್ಪಲಿನ ಒಂದು ಪಟ್ಟಣದಂತೆ ಇದೆ. ರಾಜಧಾನಿ ಮಸ್ಕತ್ ಸೇರಿದಂತೆ ಇತರೆ ನಗರಗಳಾದ ಸಲಾಲ್ಹ, ಸೋಹಾರ್, ಸೂರ್ ಮುಂತಾದೆಡೆ ಮುಖ್ಯರಸ್ತೆ ಬದಿಯಲ್ಲಿರುವ ಹಚ್ಚ ಹಸಿರಿನ ಉದ್ಯಾನವನಗಳು, ಕೈತೋಟಗಳು, ಗಿಡ ಮರಗಳನ್ನು ನೋಡಿದೊಡನೆ, ಪ್ರವಾಸಿಗರಿಗೆ ಆಶ್ಚಯವಾಗುವುದು ಖಂಡಿತ. ಒಮಾನಿನ ಕೆಲೆವೆಡೆ ಮಣ್ಣು ಫಲವತ್ತಾಗಿದೆ, ಇಲ್ಲಿನ ಗಿಡ ಮರಗಳಿಗೆ ಸೂಕ್ತ ಪ್ರಮಾಣದ ನೀರನ್ನು ಪೂರೈಸಿದರೆ, ಗಿಡ ಮರಗಳು ಸೊಂಪಾಗಿ ಬೆಳೆಯುತ್ತವೆ. ಮನೆಮುಂದಿನ ಜಾಗಗಳಲ್ಲಿ ಬಹುತೇಕ ಜನರು ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವುದಲ್ಲದೆ, ಅಲಂಕಾರಿಕ ಗಿಡಗಳನ್ನು ಬೆಳೆಸುತ್ತಾರೆ.

 

ಈ ಅರಬ್ ರಾಷ್ಟ್ರಗಳಲ್ಲಿ ತ್ಯಾಜ್ಯನೀರನ್ನ ಸಂಸ್ಕರಿಸಿ ಆ ನೀರನ್ನು ಈ ಉದ್ಯಾನವನಗಳಿಗೆ ಸರಬರಾಜು ಮಾಡಲಾಗುತ್ತದೆ. ಹನಿ ನೀರಾವರಿ ಪದ್ದತಿ, ಸ್ಪ್ರಿಂಕ್ಲರ್ ಪದ್ದತಿ ಮುಖಾಂತರ ಗಿಡಗಳಿಗೆ ಅಗತ್ಯವಾದ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಿ ಉದ್ಯಾನವನಗಳಿಗೆ ಪೂರೈಸಲಾಗುತ್ತಿದೆ.

 

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪಡೆಯುವುದರ ಜತೆಗೆ ಕೃಷಿ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡುವುದು ಮಾತ್ರವಲ್ಲದೆ, ಕೃಷಿಯನ್ನು ಸಹ ಒಂದು ಉದ್ಯಮವನ್ನಾಗಿ ಪರಿಗಣಿಸಿ, ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯವಾದ ಸೌಕರ್ಯಗಳನ್ನು ಅರಬ್ ರಾಷ್ಟ್ರಗಳು ಕಲ್ಪಿಸಿಕೊಡುತ್ತಿವೆ.  ಕೃಷಿ ವಲಯದಲ್ಲಿ ಹೂಡಿಕೆ ಮಾಡುವ ಸಲುವಾಗಿ ವಿದೇಶಿ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಕೃಷಿ ಉಪಕರಣಗಳ ಆಮದು ಸುಂಕ  ವಿನಾಯಿತಿ, ಕಡಿಮೆ ಬಡ್ಡಿದರದ ಸಾಲ ಇತ್ಯಾದಿ ಸೌಕರ್ಯಗಳನ್ನು ನೀಡಲಾಗಿದೆ. ಕೃಷಿಯ ಜತೆಗೆ ಅತ್ಯಾಧುನಿಕ ತಂತ್ರಜ್ನಾನದ ಸುಸಜ್ಜಿತ ಹೈನುಗಾರಿಕೆ ಫಾರಂಗಳು, ಕೋಳಿ ಸಾಕಾಣಿಕೆ ಕೇಂದ್ರಗಳು ಸಾಕಷ್ಟಿವೆ. ಇಲ್ಲಿ ಉತ್ಪಾದನೆಯಾಗುವ ಉತ್ತಮ ಗುಣಮಟ್ಟದ ಹಾಲು, ಮೊಸರು, ಬೆಣ್ಣೆ, ತುಪ್ಪ ದೇಶದೆಲ್ಲೆಡೆ ಬಳಕೆಯಾಗುವುದಲ್ಲದೆ ಇತರೆ ರಾಷ್ಟ್ರಗಳಿಗೂ ಸಹ ರಫ್ತು ಮಾಡಲಾಗುತ್ತಿದೆ.

 ಇಲ್ಲಿನ ಮಣ್ಣಿನಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಜತೆಗೆ ನಾಗರೀಕರ ಅಗತ್ಯಕ್ಕೆ ತಕ್ಕಂತೆ ಬೇಕಾದ ಕುರಿ ಕೋಳಿ ಮುಂತಾದವುಗಳನ್ನ ಇಲ್ಲಿ ಬೆಳೆಸಿ  ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಯಾವುದೇ ಒಂದು ರಾಷ್ಟ್ರ, ಆಹಾರದಂತಹ ವಿಷಯದಲ್ಲಿ ಬೇರೆಯವರ ಅವಲಂಬನೆಯಲ್ಲಿರುವುದು ಸರಿಯಲ್ಲ. ಈಗ ಸಾಕಷ್ಟು ಹಣ ಇದೆ ಎಂದು ಬೇಕಾದದ್ದನ್ನು ರಫ್ತು ಮಾಡಿಕೊಂಡು ಜೀವಿಸುವುದು ಸಹ ಉತ್ತಮ ನಿರ್ಧಾರವಲ್ಲ, ಮುಂದಿನ ಕನಿಷ್ಟ ಐವತ್ತು ವರ್ಷಗಳಿಗೆ ಮತ್ತು ಮುಂದಿನ ಪೀಳಿಗೆಗೆ ಬೇಕಾದ ಸೂಕ್ತ ಯೋಜನೆಗಳನ್ನ ಹಾಕಿಕೊಂಡು ಮುಂದಡಿಯಿಡುವುದು ಉತ್ತಮ ಲಕ್ಷಣ. ಆ ನಿಟ್ಟಿನಲ್ಲಿ, ಅರಬ್ ರಾಷ್ಟ್ರಗಳು ಮುಂದಾಲೋಚನೆಯಿಂದ ಸ್ವಾವಲಂಬನೆಯತ್ತ ಎಚ್ಚರಿಕೆಯ ಹೆಜ್ಜೆಇಡುತ್ತಿರುವುದು ಇತರೆ ರಾಷ್ಟ್ರಗಳಿಗೆ ಒಂದು ಪಾಠ ಎಂದು ಹೇಳಬೇಕು.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

2 ಕಾಮೆಂಟ್‌ಗಳು:

  1. ಅದ್ಭುತ ಮಾಹಿತಿ...ಹಾಗೇನೆ ಸ್ವಾವಲಂಬನೆ ಪ್ರತಿರಾಷ್ರ್ಟದ ಮುಖ್ಯಧಾರೆಯಾಗಬೇಕು ಇಲ್ಲದಿದ್ದರೆ ಬದಲಾದ ದಿನಮಾನಗಳಲ್ಲಿ ಸಂದಿಗ್ಧತೆ ಪಡಬೇಕಾಗುತ್ತದೆ...

    ಪ್ರತ್ಯುತ್ತರಅಳಿಸಿ
  2. Karmanye se fruits ka yog..avvaaji only can de sakte hai..from taila to jalada aadimoola avvajiya yog karma sukoushalam through technology medium as did by 99% digital bharat.great sir ramgnath ji Hari 🕉

    ಪ್ರತ್ಯುತ್ತರಅಳಿಸಿ

Click below headings