ಭಾನುವಾರ, ಮಾರ್ಚ್ 3, 2024

ಪ್ರಾಮಾಣಿಕತೆ ಮೆರೆದಿದ್ದ ನನ್ನ ಅವ್ವ ತಾತ



ನಮ್ಮ ತಾತ ದಿ. ನೆಟ್ಟಕಲ್ಲಪ್ಪ ಮತ್ತು ದಿ.ನಾಗಮ್ಮ ನವರು ಪ್ರಾತಃ ಸ್ಮರಣೀಯರು. ನಮ್ಮ ಇಡೀ ಜೀವಮಾನವೇ ನೆನೆಪಿಸಿಕೊಳ್ಳುವಂತಹ ಆದರ್ಶ  ಗುಣಗಳುಳ್ಳ, ಯಾವುದೇ ಸ್ವಾರ್ಥವಿಲ್ಲದೆ ಜೀವನ ನಡೆಸಿದ ಪುಣ್ಯಾತ್ಮರು. ಕಾಯಿಲೆ ಬಂದು ಹಾಸಿಗೆ ಹಿಡಿಯುವವರೆಗೂ ಕಷ್ಟಪಟ್ಟು ದುಡಿದು ಅನ್ನ ಉಂಡವರು. ಇನ್ನೊಬ್ಬರ ಹಣಕ್ಕೆ ಎಂದೂ ಆಸೆ ಪಡಲಿಲ್ಲ, ಬೇರೊಬ್ಬರ ಆಸ್ತಿ ಅಂತಸ್ತು ನೋಡಿ ಅಸೂಯೆ ಪಟ್ಟುಕೊಳ್ಳಲಿಲ್ಲ. ಇನ್ನೊಬ್ಬರಿಂದ ಕಿತ್ತುಕೊಂಡು ತಿನ್ನುವ ಗುಣ ಇಬ್ಬರಲ್ಲೂ ಇರಲಿಲ್ಲ. ತಮ್ಮ ಬಡತನದಲ್ಲಿಯೂ ದೊಡ್ಡ ಕುಟುಂಬವನ್ನು ಸಾಕಿ ಬೆಳೆಸಿದ್ದಲ್ಲದೆ, ನನ್ನನ್ನೂ ಸೇರಿ ಹೆಣ್ಣುಮಕ್ಕಳ ಮೂರು ಮೊಮ್ಮಕ್ಕಳನ್ನು ಸಾಕಿ ಬೆಳೆಸಿದವರು. ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡುವಾಗ ಯಾವುದೇ ವರದಕ್ಷಿಣೆಗಾಗಿ ಆಸೆ ಪಡಲಿಲ್ಲ, ಅಷ್ಟೇ ಅಲ್ಲದೆ ತಮ್ಮ ಸ್ವಂತ ದುಡ್ಡಿನಲ್ಲಿಯೇ ಮನೆ ಮುಂದೆ ಮಕ್ಕಳಿಗೆ ಮಾಡಿದವರು. ಇವರ ಉತ್ತಮ ಗುಣಗಳಿಗೇನು ಕೊರತೆಯೇ ಇಲ್ಲ. 

ಈವತ್ತಿನ ಕಾಲದಲ್ಲಿ, ಕಂಡವರ ದುಡ್ಡಿಗೆ ಮತ್ತು ಅನಾಯಾಸವಾಗಿ ಬರುವ ದುಡ್ಡಿಗೆ ಆಸೆ ಪಡದೆ ಇರುವವರು ಬಹಳ ಕಡಿಮೆ. ಇನ್ನೊಬ್ಬರ ಸ್ವತ್ತಿನ ಮೇಲೆ, ಸಂಪಾದನೆ ಮೇಲೆ ಕಣ್ಣು ಹಾಕುವವರು ಅನೇಕರು. ಉಚಿತವಾಗಿ ಸಿಕ್ಕರೆ, ನನಗೂ ಇರಲಿ, ನಮ್ಮಪ್ಪಂಗೂ ಇರಲಿ ಎನ್ನುವವರೇ ಅಧಿಕ.  ಸ್ವಂತ ಬಲದ ಮೇಲೆ ಶಕ್ತಿಮೀರಿ ದುಡಿದು ಹಣ ಸಂಪಾದಿಸು ಎಂದು ಬುದ್ದಿ ಹೇಳಿಕೊಡುವುದರ ಬದಲು, ಇನ್ನೊಬ್ಬರಿಂದ ಹಣ ಹೇಗೆ ಕಿತ್ತುಕೊಳ್ಳುವ ಐಡಿಯಾ ಕೊಡುವವರಿಗೇನು ಕಮ್ಮಿಯಿಲ್ಲ. ನಾಟಕ ಮಾಡಿ, ಅನುಕಂಪ ಹುಟ್ಟಿಸಿ ಹಣ ಪೀಕುವವರು ನಮ್ಮ ಮಧ್ಯೆ ಇದ್ದಾರೆ.  ಕೆಲವರು ಯಾವಾಗಲು ದುಡ್ಡು ದುಡ್ಡು ಎಂದು ಬಾಯಿ ಬಿಡುವವರು, ಅವನೇನು ಕೊಟ್ಟ, ನಮಗೇನು ಮಾಡಿದ ಎಂದು ಗೊಣಗಾಡುವ ಸ್ವಭಾವದವರು. 

ಇಂದಿನ ಗ್ಯಾರಂಟಿ ಯುಗದಲ್ಲಿ ಗ್ಯಾರಂಟಿಯ ಲಾಭ ಪಡೆಯುವವರೇನು ಕಡಿಮೆಯೇ. ಗ್ರಾಮಾಂತರ ಭಾಗದಲ್ಲಿ ಮತ್ತು ನಗರದಲ್ಲಿಯೂ ಸಹ ಉತ್ತಮ ಸ್ಥಿತಿಯಲ್ಲಿರುವವರು, ಕಾರ್ ಹೊಂದಿರುವ ಲಕ್ಷುರಿ ಜೀವನ ನಡೆಸುವವರು, ಮೂರ್ನಾಲ್ಕು ಮನೆ, ಸೈಟುಗಳು ಇರುವವರು, ಸಾವಿರಾರು ರೂಪಾಯಿ ಸಂಪಾದನೆ ಮಾಡುವವರು ಸಹ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಕೊರೋನಾ ಅವಧಿಯಲ್ಲಿ ಉಚಿತವಾಗಿ ಫುಡ್ ಪ್ಯಾಕೆಟ್ ನೀಡುವಾಗ, ಉಳ್ಳವರು ಸಹ ಸರದಿ ಸಾಲಿನಲ್ಲಿ ನಿಂತಿದ್ದರು. ಒಟ್ಟಿನಲ್ಲಿ, ಸುಲಭವಾಗಿ ಸಿಗುವ ಹಣಕ್ಕೂ ಹೆಣವೂ ಬಾಯಿಬಿಡುತ್ತದೆ ಎನ್ನುತ್ತಾರೆ.



1970 ರ ದಶಕದಿಂದಲೂ ನಮ್ಮ ಅಂಗಡಿಯಿದ್ದಿದ್ದು ಬಸ್ಟಾಂಡ್ ನಲ್ಲಿ, ಅಂದಿನ ಕಾಲದಲ್ಲಿ ರಾಂಪುರ ಬಸ್ಟಾಂಡ್ ಬಹಳ ಚಿಕ್ಕದು. ಸೋಡಾ ನೆಟ್ಟಕಲ್ಲಪ್ಪ ಎಂದರೆ ರಾಂಪುರ ಮಾತ್ರವಲ್ಲದೆ, ಸುತ್ತಮುತ್ತಲಿನ ಊರಿನ ಜನರಿಗೂ ಪರಿಚಯ. ನೂರಾರು ಜನರ ಪರಿಚಯವಿತ್ತು. ದಡಗೂರು, ಬುಡ್ಡೇನಹಳ್ಳಿ, ಪಕ್ಕುರ್ತಿ, ಮೇಗಳಕಣಿವೆ ಮುಂತಾದ ಹಳ್ಳಿಗಳ ಪರಿಚಯಸ್ಥ ಜನರು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮುಂತಾದ ಊರುಗಳಿಗೆ ಹೋಗುವಾಗ, ತಮ್ಮ ಊರಿಂದ ಸ್ಕೂಟರ್, ಎಜ಼ಿಡಿ ಬೈಕ್, ಸೈಕಲ್ ಇತ್ಯಾದಿಗಳಲ್ಲಿ ರಾಂಪುರಕ್ಕೆ ಬಂದು ನಮ್ಮ ಅಂಗಡಿಯ ಸ್ಥಳದಲ್ಲಿ ಗಾಡಿಯನ್ನು ನಿಲ್ಲಿಸುತಿದ್ದರು. ಅವರು ಮರಳಿ ಬರುವವರೆಗೂ ನಾವು ಜೋಪಾನವಾಗಿ ಕಾಯುತಿದ್ದೆವು. 

ಒಂದು ದಿನ ರಾತ್ರಿ, ತಾತ ಅವ್ವ ಮಲಗಿರುವಾಗ, ರಾತ್ರಿ ಒಂದು ಗಂಟೆಯ ಸಮಯ ವಿರಬಹುದು, ಹತ್ತಿರದ ಹಳ್ಳಿಯ ಪರಿಚಯಸ್ತರೊಬ್ಬರು ಯಾವುದೋ ಬಸ್ಸಿನಿಂದ ಇಳಿದು ಅವಸರವಸರವಾಗಿ ಅಂಗಡಿ ಬಳಿಗೆ ಬಂದು, ಮಲಗಿದ್ದ ತಾತನನ್ನ ಎಬ್ಬಿಸಿದರು. ಅವರ ಕೈಯಲ್ಲಿದ್ದ ಒಂದು ಬ್ಯಾಗ್ ಅನ್ನು ತಾತನ ಬಳಿಕೊಟ್ಟು, ಈ ಬ್ಯಾಗ್ ಜೋಪಾನವಾಗಿ ನೋಡಿಕೊಳ್ಳಿ. ಸ್ವಲ್ಪ ಕೆಲಸ ಇದೆ ಬಳ್ಳಾರಿಗೆ ಹೋಗಿ ಬರ್ತೀನಿ, ನಾಳೆ ಬಂದು ಈ ಬ್ಯಾಗ್ ತೆಗೆದುಕೊಂಡು ಹೋಗ್ತೀನಿ ಅಂತ ಹೇಳಿ, ಅರ್ಜೆಂಟಾಗಿ ಹೊರಟು ಹೋದರು.  ಅವರ ಬಂದ ಗಡಿಬಿಡಿ, ಅವರ ಅವಸರ ಎಲ್ಲವನ್ನು ನೋಡಿ ನಮ್ಮ ತಾತನಿಗೆ ಗಾಬರಿಯಾಯಿತು. ಮಧ್ಯರಾತ್ರಿ ಬೇರೆ,  ಜನಸಂಚಾರವೇ ಇಲ್ಲದ ಇಷ್ಟೊತ್ತಿನಲ್ಲಿ ಈ ಬ್ಯಾಗ್ ತಂದುಕೊಡುವ ಅವಶ್ಯಕತೆ ಏನಿತ್ತು ಎಂದು ಯೋಚಿಸಿದರು. ರೆಕ್ಸಿನ್ ಬ್ಯಾಗ್ ಹಣ ಮತ್ತು ಕಾಗದ ಪತ್ರಗಳನ್ನ ಇಡುವ ಬ್ಯಾಗ್. ಅದನ್ನ ನೋಡಿದೊಡನೆ ಅನುಮಾನ ಬಂತು, ಏನೋ ಬೆಲೆಬಾಳುವ ವಸ್ತುವೇ ಇದೆ. ಜೋಪಾನವಾಗಿ ಇಟ್ಟುಕೊಳ್ಳೋಣ ಎಂದು, ಸೀಮೇ ಎಣ್ಣೆ ಬುಡ್ಡಿಯ ಬೆಳಕಿನಲ್ಲಿ, ಬ್ಯಾಗ್ ಒಪೆನ್ ಮಾಡಿ ನೋಡಿದರೆ, ಕಂತೆ ಕಂತೆ ನೋಟು. ಜೀವ ಬಾಯಿಗೆ ಬಂದಂತಹ ಪರಿಸ್ಥಿತಿ. ಒಳ್ಳೆ ನಿದ್ರೆ ಮಾಯವಾಯಿತು. ನೋಟಿನ ಕಂತೆ ಕಂತೆ ನೋಡಿದರೆ ಎದೆ ಡವ ಡವ ಎಂದು ಹೊಡೆದುಕೊಳ್ಳಲಾರಂಬಿಸಿತು. ಅಷ್ಟೊತ್ತಿನಲ್ಲಿ ಯಾರಾದರು ಕಳ್ಳಕಾಕರು ಬಂದು ಹೆದರಿಸಿ ಬೆದರಿಸಿ ದುಡ್ಡು ತೆಗೆದುಕೊಂಡು ಹೋದರೆ ಏನು ಗತಿ ಎನ್ನುವ ಆಲೋಚನೆ. 

ಅಂಗಡಿಯಿಂದ ಹೊರಬಂದು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದರು, ಗಾಡಕತ್ತಲು. ಒಂದು ನರ ಪಿಳ್ಳೆಯ ಸುಳಿವು ಇಲ್ಲ. ಯಾವಗಲಾದರು ಒಮ್ಮೆ, ಒಂದು ಬಸ್ಸೋ, ಲಾರಿಯೋ ಬಂದು ಹೋಗುವುದು ಬಿಟ್ಟರೆ ಬೇರೆ ಚಲನವಲನಗಳೇ ಇಲ್ಲ. ಆ ನಮ್ಮ ಅಂಗಡಿ ಗುಡಿಸಲಿನಂತಹದ್ದು, ಸುತ್ತಲೂ ಬಿದಿರಿನ ತಡಿಕೆ, ಜಾಡಿಸಿ ಕಾಲಿನಿಂದ ಒದ್ದರೆ ತಡಿಕೆ ಬಿದ್ದು ಹೋಗುತಿತ್ತು, ಯಾವುದೇ ಭದ್ರತೆ ಇರಲಿಲ್ಲ. ಬಿಸಿಲಿನ ಸೆಖೆಗೆ, ಆ ಅಂಗಡಿಯಲ್ಲಿ ತಂಪಾಗಿರುತ್ತದೆ ಎನ್ನುವ ಒಂದು ಆಲೋಚನೆ ಒಂದು ಕಡೆ, ಇನ್ನೊಂದು ಸೋಡ ಮಶಿನ್ ಸೋಡ ಗ್ಯಾಸ್ ಸಿಲಿಂಡರ್, ಮತ್ತಿತರ ವಸ್ತುಗಳು ಕಳುವು ಆಗಬಾರದು ಎನ್ನುವ ಉದ್ದೇಶ ಇನ್ನೊಂದು ಕಡೆ. ಆಗ ಬಸ್ಟಾಂಡ್ ನಲ್ಲಿ ಇದ್ದ ಅಂಗಡಿಗಳು ಕೆಲವೇ ಕೆಲವು. ಅದೂ ಬೆರಳೆಣಿಕೆಯಷ್ಟು. ಜನರ ಓಡಾಟ ಇಲ್ಲವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಹಣವನ್ನು ಕಾಯಬೇಕಾದ ಒತ್ತಡದ ಪರಿಸ್ಥಿತಿ. 

ಅಷ್ಟೊಂದು ದುಡ್ಡು ನೋಡಿದೊಡನೇ, ಯಾರ ಮನಸ್ಸಿನಲ್ಲಿಯಾದರೂ ಹಲವಾರು ಆಲೋಚನೆಗಳು ಬುಗಿಲೇಳುತಿದ್ದವು. ಉದಾ:- ಅವರು ಬ್ಯಾಗ್ ಕೊಟ್ಟಿದ್ದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ.  ಅದರಲ್ಲಿ ಎಷ್ಟು ಹಣ ಇತ್ತು ಅಂತ ಹೇಳಿರಲಿಲ್ಲ. ಆ ದಿನಗಳಲ್ಲಿನ ಕಷ್ಟದ ಪರಿಸ್ಥಿತಿಗೆ  ಆ ಬ್ಯಾಗಿನಲ್ಲಿದ್ದ ಒಂದು ಕಂತೆ ನೋಟು ಎತ್ತಿಕೊಂಡಿದ್ದರೂ ಅಥವ ಕೆಲವು ನೋಟುಗಳನ್ನು ಸಾಕಿತ್ತು, ಆದರೆ ಅದರಲ್ಲಿನ ಒಂದು ರೂಪಾಯಿಯನ್ನ ಮುಟ್ಟಲಿಲ್ಲ. ಸ್ವಯಾರ್ಜಿತ ವಲ್ಲದ ದುಡ್ಡು ನಮ್ಮದು ಅಲ್ಲ ಎನ್ನುವ ಅವರ ಆದರ್ಶ, ಯಾವುದೇ ಕೆಟ್ಟ ಆಲೋಚನೆ ಮಾಡಲಿಲ್ಲ. ಬದಲಿಗೆ, ಅಲ್ಲಿರುವ ಎಲ್ಲ ದುಡ್ಡನ್ನು ಜೋಪಾನವಾಗಿಡಬೇಕು ಎನ್ನುವ ಧೃಡ ಮನಸ್ಸಿನೊಂದಿಗೆ, ಅಂಗಡಿಯ ಒಳಗೆ ಸುತ್ತಲೂ ಕಣ್ಣಾಡಿಸಿದರು. ಯಾವುದೇ ರೀತಿಯ ಪೆಟ್ಟಿಗೆ ಟ್ರಂಕ್ ಯಾವುದೂ ಇರಲಿಲ್ಲ. ಒಂದು ವೇಳೆ ಇದ್ದರೂ ಸಹ, ಕಳ್ಳ ಬಂದರೆ ಮೊದಲು ಕಣ್ಣು ಹಾಕುವುದು ಪೆಟ್ಟಿಗೆಯ ಮೇಲೆ. ಅದಕ್ಕಾಗಿ ಅವರು ಮಲಗಿದ್ದ ಹಾಸಿಗೆಯನ್ನ ಎತ್ತಿ, ಕೆಳಗೆ ಗೋಣೀಚೀಲ ಹಾಕಿ ಅದರ ಮೇಲೆ ನೋಟಿನ ಕಂತೆಗಳನ್ನ ಒಂದೊಂದಾಗಿ ಜೋಡಿಸಿಟ್ಟರು. ಅದರ ಮೇಲೆ ಮತ್ತೊಂದು ಗೋಣಿ ಚೀಲ ಹಾಕಿ, ಮೇಲೆ ಅವರು ಮಲಗುತಿದ್ದ ಕೌದಿಯಂತಹ ಬಟ್ಟೆಯನ್ನ ಹಾಕಿ ಅದರ ಮೇಲೆ ಮಲಗಿದರು. ಬೆಳಿಗ್ಗೆ ಎದ್ದ ಮೇಲೆ, ಮನೆಗೆ ತೆಗೆದುಕೊಂಡು ಹೋಗಿ ಜೋಪಾನವಾಗಿಟ್ಟಿದ್ದರು. ಎರಡು ದಿನ ಹೀಗೆ ಕಷ್ಟ ಪಟ್ಟು ಅದನ್ನ ಕಾದಿಟ್ಟುಕೊಂಡಿದ್ದರು.

ಮೂರನೇ ದಿನ ಆ ವ್ಯಕ್ತಿ ಬಂದರು. ಬಂದೊಡನೆ ಬ್ಯಾಗ್ ಕೇಳಿದರು. ತಾತನಿಗೆ ಒಂದು ಕಡೆ ಕೋಪ, ಏನಪ್ಪ ನೀನು ನಮ್ಮ ಪ್ರಾಣಕ್ಕೆ ಸಂಚಕಾರ ತಂದುಬಿಡ್ತಿದ್ದಿಯಲ್ಲ? ಅಕಸ್ಮಾತ್ ಆಗಿ ಯಾರಾದರು ಕಳ್ಳನೋ, ಕೊಲೆಗಾರನೋ ಬಂದಿದ್ದರೆ ಏನು ಗತಿ? ಈ ಗುಡಿಸಲಿನಂತಹ ಅಂಗಡಿಯಲ್ಲಿ ಇಷ್ಟು ದುಡ್ಡನ್ನ ಹೇಗೆ ಜೋಪಾನವಾಗಿಟ್ಟುಕೊಳ್ಳುವುದು, ಎರಡು ದಿನ ನಮಗೆ ನಿದ್ರೆಯೇ ಇರಲಿಲ್ಲ ಕಣಪ್ಪ ಅಂತ ತಮ್ಮ ಬೇಗುದಿಯನ್ನ ಹೊರಹಾಕಿದರು. ನೀನು ಕೊಟ್ಟ ಹಣ ಸರಿಯಿದೆಯಾ ಅಂತ ಚೆಕ್ ಮಾಡ್ಕೊಳ್ಳಪ್ಪ. ನಾವಂತು ಒಂದು ರೂಪಾಯಿಯನ್ನ ಮುಟ್ಟಿಲ್ಲ. ಒಮ್ಮೆ ನೋಡಿಕೊಂಡುಬಿಡು ಎಂದು ಪ್ರಾಮಾಣಿಕತೆಯಿಂದ ಹೇಳಿದರು. 

ಆಗ ಅವರು, ಬಳ್ಳಾರಿ, ಹೊಸಪೇಟೆ ಆ ಕಡೆ ಕೆಲಸ ಇತ್ತು. ಇಷ್ಟೊಂದು ದುಡ್ಡು ಜತೆಯಲ್ಲಿ ಇಟ್ಕೊಂಡು ತಿರುಗಾಡುವುದು ಒಳ್ಳೆಯದಲ್ಲ ಎಂದು ನಿನ್ನ ಮೇಲಿನ ನಂಬಿಕೆಯಿಂದಲೇ ಈ ಬ್ಯಾಗ್ ಇಲ್ಲಿ ಬಿಟ್ಟು ಹೋಗಿದ್ದು, ಇಲ್ಲದೆ ಇದ್ದಿದ್ದರೆ ನನ್ನ ಜತೆಗೆ ತೆಗೆದುಕೊಂಡು ಹೋಗ್ತಿದ್ದೆ ಎಂದು ಧನ್ಯವಾದಗಳನ್ನ ಹೇಳಿ ಆ ಹಣವನ್ನು ಪಡೆದುಕೊಂಡು ಹೋದರು.

ಮನಸ್ಸು ಮಾಡಿದ್ದರೆ, ಸ್ವಲ್ಪ ಹಣವನ್ನು ಕೇಳಿ ಪಡೆಯಬಹುದಿತ್ತು. ಆದರೆ ತಾತ ಮಾತ್ರ, ಒಂದು ರೂಪಾಯಿಯನ್ನ ಪಡೆಯಲಿಲ್ಲ. ಕಷ್ಟಪಟ್ಟು ದುಡಿದ ಹಣ ನಮ್ಮ ಬಳಿಯಿರುವುದಿಲ್ಲ ಅಂತಹದರಲ್ಲಿ, ಬೇರೆಯವರ ಹಣದಿಂದ ಎಷ್ಟು ದಿನ ಬದುಕಲು ಸಾಧ್ಯ. ಇಂತಹ ಪ್ರಾಮಾಣಿಕತೆಯ ಕೆಲಸವನ್ನ ನಮ್ಮ ತಾತ ಅವ್ವ ಮಾಡಿದರು ಎಂದು ಹೇಳಿಕೊಳ್ಳಲು ನನಗೆ ಯಾವಾಗಲು ಹೆಮ್ಮೆ ಎನಿಸುತ್ತದೆ. ಇಂತಹ ಹಲವಾರು ನಿಯತ್ತಿನ ಘಟನೆಗಳು ಅವರ ಜೀವನದಲ್ಲಿ ನಡೆದಿವೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings