ಭಾನುವಾರ, ಮಾರ್ಚ್ 24, 2024

ಅನ್ಯಗ್ರಹ ದಂತೆ ಇರುವ ಸೊಕೊಟ್ರಾ ದ್ವೀಪ (Socotra, Yemen)

ಪ್ರಪಂಚದಲ್ಲಿ ಪ್ರತಿಯೊಂದು ಪ್ರದೇಶವು ತನ್ನದೇ ಆದ ವೈಶಿಷ್ಟ್ಯ ವನ್ನು ಹೊಂದಿರುತ್ತದೆ. ಕೆಲ ಜಾಗದಲ್ಲಿನ ವಿಶಿಷ್ಟತೆ ಬೇರೆಲ್ಲಿಯೂ ಇರುವುದಿಲ್ಲ. ಇಂತಹ ಹಲವಾರು ಪ್ರದೇಶಗಳು ಪ್ರಪಂಚದಲ್ಲಿ ಬಹಳಷ್ಟಿವೆ. ಒಮಾನ್ ರಾಷ್ಟ್ರದ ದಕ್ಷ್ಣಿಣ ದಿಕ್ಕಿನಲ್ಲಿರುವ ಸೊಕೊಟ್ರಾ ದ್ವೀಪವು  ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಭೂಮಿಯ ಮೇಲಿನ ಅನ್ಯಲೋಕದ ಸ್ಥಳದಂತೆ ಮತ್ತು ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಂತೆ ಈ ಪ್ರದೇಶವಿರುವುದು ವಿಶೇಷ. ಭೂಮಿಯ ಮೇಲೆ ಈ ತರಹದ ಸ್ಥಳ ಇದೆಯಾ ಎಂದು ಬಹಳಷ್ಟು ಜನ ಆಶ್ಚರ್ಯ ಪಟ್ಟಿದ್ದಾರೆ.  ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ. ಅರೇಬಿಕ್ ಪ್ರಕಾರ ಸೊಕೋಟ್ರಾ ಶಬ್ದವು ಎರಡು ಪದಗಳಿಂದ ರೂಪುಗೊಂಡಿದೆ. ಒಂದು ಸೂಕ್ ಮತ್ತೊಂದು ಕೊಟ್ರಾ. ಸೂಕ್ ಎಂದರೆ ಬಜಾರ್. ಕೊಟ್ರಾ ಎಂದರೆ, ಡ್ರಾಗನ್ ಬ್ಲಡ್ ಟ್ರೀಯಿಂದ ತೊಟ್ಟಿಕ್ಕುವ ಅಂಟು ಅಥವ ರಸ ಎನ್ನುವ ಅರ್ಥವಿದೆ.

 


ಭೌಗೋಳಿಕ ವಿವರ:

ಭೌಗೋಳಿಕವಾಗಿ ನೋಡುವುದಾದರೆ, ಹಿಂದೂ ಮಹಾಸಾಗರದಲ್ಲಿನ ಯೆಮೆನ್ ಗಣರಾಜ್ಯದ ಭಾಗವಾಗಿರುವ ಈ ದ್ವೀಪ, ಆಫ್ರಿಕಾದ ಖಂಡದ ಸೋಮಾಲಿಯಾ ದೇಶದ ತುತ್ತ ತುದಿಯಿಂದ ಪೂರ್ವಕ್ಕೆ 240 ಕಿಲೋಮೀಟರ್ (150 ಮೈಲಿ) ಮತ್ತು ಅರೇಬಿಯನ್ ಪೆನಿನ್ಸುಲಾದ ಯೆಮನ್ ರಾಷ್ಟ್ರದ ದಕ್ಷಿಣಕ್ಕೆ 380 ಕಿಲೋಮೀಟರ್ ದೂರದಲ್ಲಿದೆ. ಈ ದ್ವೀಪವು ಸರಿಸುಮಾರು 132 ಕಿಲೋಮೀಟರ್ ಉದ್ದ ಮತ್ತು 49.7 ಕಿಲೋಮೀಟರ್ ಅಗಲವನ್ನು ಹೊಂದಿದೆ.  ಒಟ್ಟು 3796 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಭೌಗೋಳಿಕವಾಗಿ ಈ ಸ್ಥಳವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು, ಕರಾವಳಿ ಬಯಲು ಪ್ರದೇಶ, ಸುಣ್ಣಕಲ್ಲಿನ ಪ್ರಸ್ಥಭೂಮಿ (limestone plateau) ಮತ್ತು ಹಜೀರ್ / ಹಗ್ಗಿಯರ್ ಪರ್ವತಗಳು (Hajhir / Hagghier mountains). ಯಮೆನ್, ಒಮಾನ್, ಸೌದಿ ಅರೇಬಿಯಾದ ದೇಶಗಳು ಹತ್ತಿರದಲ್ಲಿರುವುದರಿಂದ ಈ ದ್ವೀಪ ಅರೆ ಮರುಭೂಮಿಯ ಹವಾಮಾನವನ್ನು ಹೊಂದಿದೆ ಮತ್ತು ಸರಾಸರಿ ತಾಪಮಾನವು 25 ಡಿಗ್ರಿಗಳಿಗಿಂತ ಹೆಚ್ಚಾಗಿರುತ್ತದೆ. ಅಲ್ಪ ಪ್ರಮಾಣದಲ್ಲಿ ಮಳೆ ಇಲ್ಲಿ ಬೀಳುತ್ತದೆ. ಭಾರತದಂತೆ, ಜೂನ್ ನಿಂದ ಸೆಪ್ಟೆಂಬರ್ ರವರೆಗೂ ಇಲ್ಲಿ ಮುಂಗಾರು ಇರುತ್ತದೆ.

 


ಇಲ್ಲಿನ ಮೂಲನಿವಾಸಿಗಳು ಸೊಕೋಟ್ರಿ ಎನ್ನುವ ಸ್ಥಳೀಯ ಭಾಷೆಯಲ್ಲಿ ಮಾತನಾಡುತಿದ್ದಾರೆ. ಅಂದಾಜು ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಈ ಭಾಷೆಗೆ ಇದೆ. ಈ ಭಾಷೆಗೆ ಯಾವುದೇ ಲಿಪಿಯಿಲ್ಲ. ಇಲ್ಲಿನ ಪ್ರಮುಖ ಪಟ್ಟಣ "ಹದಿಬು". ಜನಸಂಖ್ಯೆ 60000. ಇಲ್ಲಿನ ಜನಾಂಗದ ಬಗ್ಗೆ ಹೇಳುವುದಾದರೆ, ಪ್ರಧಾನವಾಗಿ ಸೊಕೊಟ್ರಿ ಗಳು ಬಹುಸಂಖ್ಯಾತರು, ಮಿಕ್ಕುಳಿದಂತೆ ಅಲ್ಪಸಂಖ್ಯಾತ ಯೆಮೆನಿಗಳು, ಹದರೆಮ್ ಮತ್ತು ಮೆಹ್ರಿಸ್ ಜನಾಂಗದ ಜನರು ಇಲ್ಲಿದ್ದಾರೆ. ಈ ದ್ವೀಪವು ಗಲ್ಫ್ ಆಫ್ ಏಡೆನ್ ಬಳಿ ಆಯಕಟ್ಟಿನ ಸ್ಥಳದಲ್ಲಿದ್ದರೂ, ಸಮುದ್ರ ಪ್ರಯಾಣದ ನ್ಯಾವಿಗೇಶನ್ ಗೆ ಸಂಭಂಧಿಸಿದ ಸಮಸ್ಯೆಗಳಿಂದ ಸೊಕೊಟ್ರಾ ಎಂದಿಗೂ ಪ್ರಮುಖ ವ್ಯಾಪಾರ ಕೇಂದ್ರವಾಗಲಿಲ್ಲ. ಮುಂಗಾರಿನಲ್ಲಿ ಕಡಲ ತೀರಕ್ಕೆ ಅಪ್ಪಳಿಸುವ ರಭಸದ ಅಲೆಗಳಿಂದಾಗಿ ಇಲ್ಲಿನ ಸಮುದ್ರ ತೀರಗಳು ಹಡಗುಗಳನ್ನು ಲಂಗರು ಹಾಕುವುದಿಕ್ಕೆ ಯೋಗ್ಯವಾಗಿರಲಿಲ್ಲ.

 


* ಇಲ್ಲಿನ ವಿಶೇಷ:* ಸೊಕೊಟ್ರಾವು ಕಠಿಣ ಹವಾಮಾನವನ್ನು ಹೊಂದಿದೆ. ಅತ್ಯಂತ ಬಿಸಿ ಮತ್ತು ಶುಷ್ಕ ವಾತಾವರಣವಿರುವುದರಿಂದ ಈ ದ್ವೀಪವು ತುಂಬಾ ವಿಶಿಷ್ಟ ವಾಗಿದೆ. ಇಲ್ಲಿ ಕಂಡು ಬರುವ  ವಿಭಿನ್ನ ಸಸ್ಯ ಮತ್ತು ಪ್ರಾಣಿಗಳ ಜೀವ ವೈವಿಧ್ಯಗಳ ಕಾರಣದಿಂದಾಗಿ ಪ್ರಪಂಚದ ವಿಚಿತ್ರವಾದ ಪ್ರದೇಶ ಎಂದು ಇದನ್ನು ಗುರುತಿಸಲಾಗಿದ್ದು, ಇಲ್ಲಿ ಕಾಣ ಸಿಗುವ ಪ್ರಾಣಿ, ಪಕ್ಷಿ  ಹೂಗಳು ಮತ್ತು ಇಲ್ಲಿರುವ ಸಸ್ಯ ರಾಶಿಗಳ ಮೂರನೇ ಒಂದು ಭಾಗವು  ಪ್ರಪಂಚದ ಇತರ ಭಾಗದಲ್ಲಿ ಕಾಣಸಿಗುವುದಿಲ್ಲ ಎನ್ನುವುದು ಇಲ್ಲಿನ ವಿಶೇಷ. ಈ ಜಾಗ 825 ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 308 (37%) ಸ್ಥಳೀಯವಾಗಿವೆ. ಈ ಜಾತಿಯ ಗಿಡಗಳು ಭೂಮಿಯ ಮೇಲೆ ಎಲ್ಲಿಯೂ ಕಂಡುಬರುವುದಿಲ್ಲ. ಭೂಮಿಯ ಮೇಲೆ ಅನ್ಯಲೋಕದ ಸ್ಥಳವೆಂದೇ ಇದನ್ನು ಗುರುತಿಸಲಾಗುತ್ತಿದೆ. ವಿಶ್ವದ ಅತ್ಯುತ್ತಮ ಅಲೋವೇರ, ಅಂಬರ್, ಕಸ್ತೂರಿ, ಮುತ್ತುಗಳು ಮತ್ತಿತರ ವಸ್ತುಗಳು ಇಲ್ಲಿ ದೊರಕುತ್ತವೆ.  ಕ್ರಿ.ಪೂ 2400 ವರ್ಶಗಳ  ಹಿಂದಿನಿಂದಲೂ  ಸೊಕೊಟ್ರಾ ದ್ವೀಪವು ಸುಗಂಧ ದ್ರವ್ಯ, ಮಿರ್ಹ್ ಮತ್ತು ಅಲೋವೇರ ಮಾತ್ರವಲ್ಲದೆ ಡ್ರ್ಯಾಗನ್‌ ಬ್ಲಡ್ ಮರ ದಿಂದ ಒಸರುವ ಅಂಟನ್ನು ರಫ್ತು ಮಾಡುತಿದ್ದ ಬಗ್ಗೆ ದಾಖಲೆಗಳು ಲಭ್ಯವಿದೆ.  ಡ್ರ್ಯಾಗನ್‌ ಬ್ಲಡ್ ಟ್ರೀ ಮತ್ತು ಸೊಕೊಟ್ರಾದ ಮರುಭೂಮಿ ಗುಲಾಬಿ ಸೇರಿದಂತೆ ವಿಶಿಷ್ಟ ಸಸ್ಯ ಮತ್ತು ಪ್ರಾಣಿಗಳಿಗೆ ಈ ದ್ವೀಪವು ನೆಲೆಯಾಗಿದೆ. ಸಾಂಪ್ರದಾಯಿಕ ಔಷಧಿಗಳಲ್ಲಿ ಚರ್ಮದ ಚಿಕಿತ್ಸೆಯಾಗಿ ಬಳಸಲಾಗುವ ಉತ್ತಮ ಗುಣಮಟ್ಟದ ಅಲೋ ವೆರಾ ಗಿಡಗಳು ನೈಸರ್ಗಿಕವಾಗಿ ಇಲ್ಲಿ ಬೆಳೆಯುತ್ತಿವೆ. ಭೂಮಿಯ ಮೇಲೆ ಕೆಲವೇ ಕೆಲವು ದ್ವೀಪಗಳು ಮಾತ್ರ ಹೆಚ್ಚಿನ ಸಂಖ್ಯೆಯ ಸ್ಥಳೀಯ ಪ್ರಭೇದಗಳನ್ನು ಹೊಂದಿವೆ, ಅವು, "ಸೊಕೋಟ್ರ",  "ಹವಾಯಿ" ಮತ್ತು "ಗ್ಯಾಲಪಗೋಸ್" ದ್ವೀಪಗಳು.

 




ಡ್ರ್ಯಾಗನ್‌ ಬ್ಲಡ್ ಟ್ರೀ:- ಗೇಮ್ ಆಫ್ ಥ್ರೋನ್ಸ್ ನಲ್ಲಿ ಕಂಡು ಬರುವ ಮರಗಳು ಇವೆಯಲ್ಲ, ಅದೇ ತರಹ ಮರಗಳು ಈ ದ್ವೀಪದಲ್ಲಿವೆ. ಅದನ್ನ ಡ್ರ್ಯಾಗನ್‌ ಬ್ಲಡ್ ಟ್ರೀ  ಎಂದು ಕರೆಯುತ್ತಾರೆ. ಸಸ್ಯಶಾಸ್ತ್ರದ ವೈಜ್ನಾನಿಕ ಹೆಸರು Dracaena cinnabari ಎನ್ನುತ್ತಾರೆ. ಈ ಜಾತಿಯ ಮರ ಬೇರೆಲ್ಲಿಯೂ ಬೆಳೆಯುವುದಿಲ್ಲ.  ಈ ಗಿಡದಿಂದ ತೊಗಟೆಯಿಂದ ಒಸರುವ ರಸವು ಔಷದೀಯ ಗುಣ ಮತ್ತು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ.  ಮಧ್ಯ ಪ್ರಾಚೀನಯುಗದಲ್ಲಿ ಡ್ರಾಗನ್ ಮರದ ರಕ್ತದಂತಹ ಕೆಂಪು ರಸವನ್ನು ಮಾಂತ್ರಿಕ ಮತ್ತು ರಸಾಯನ ಶಾಸ್ತ್ರದ ವಿದ್ಯೆಯಲ್ಲಿ ಬಳಸಲಾಗುತ್ತಿತ್ತು. ಇಲ್ಲಿನ ದಂತಕಥೆಯ ಪ್ರಕಾರ, ಯುದ್ದದಲ್ಲಿ ಆಗುವ ಗಾಯಗಳನ್ನು ಅತಿ ಬೇಗ ವಾಸಿಮಾಡಿಕೊಳ್ಳುವುದಕ್ಕಾಗಿ ಡ್ರಾಗನ್ ಮರದಿಂದ ಒಸರುವ ಈ ಅಂಟಿನಂತಹ ರಾಳವನ್ನು ಗ್ಲಾಡಿಯೇಟರ್ ಗಳು ಮೈಮೇಲೆ ಉಜ್ಜಿಕೊಳ್ಳುತಿದ್ದರಂತೆ. ಹಿಂದಿನ ಕಾಲದಿಂದಲೂ ಈ ಮರಕ್ಕೆ ಅಮೂಲ್ಯವಾದ ಸ್ಥಾನವಿದ್ದು, ಇಂದಿಗೂ ಇದು ಪ್ರಾಶಸ್ತ್ಯವನ್ನು ಪಡೆದಿದೆ. ಈ ಮರಗಳಲ್ಲಿ ದೊರಕುವ ಅಂಟು, ಹಡಗು ನಿರ್ಮಾಣಕ್ಕೆ ಉಪಯೋಗಿಸಲಾಗುತಿತ್ತಂತೆ, ಈ ಅಂಟಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಂದ ಬೇಡಿಕೆಯಿತ್ತು.

 

ಸಾಂಭ್ರಾಣಿ: ಈ ಪ್ರದೇಶದಲ್ಲಿ ಸಾಂಭ್ರಾಣಿ ಮರಗಳು ಇವೆ. ನಮ್ಮ ಲೋಭಾನದ ಅಂಟು ಈ ಮರಗಳಿಂದ ಉತ್ಪತ್ತಿಯಾಗುತ್ತದೆ. ಅದನ್ನು ಇಲ್ಲಿನ ಜನರು ಸಂಗ್ರಹಿಸಿ ಮಾರುತಿದ್ದರಂತೆ. ದೇಶ ವಿದೇಶಗಳಿಂದ ಈ ಪ್ರದೇಶ ದಿಂದ ಹಾದು ಹೋಗುವಾಗ, ಇಲ್ಲಿ ಉತ್ತಮ ದರ್ಜೆಯ ಲೋಭಾನ ಸೇರಿದಂತೆ ಇನ್ನಿತರೆ ವಸ್ತುಗಳ ಮಾರಾಟ ಇಲ್ಲಿ ನಡೆಯುತಿತ್ತು.

 

UNESCO ವಿಶ್ವ ಪರಂಪರೆಯ ತಾಣ: ಈ ದ್ವೀಪದಲ್ಲಿರುವ ವಿಶಿಷ್ಟ ಸಸ್ಯ ಪ್ರಭೇದಗಳು, ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸಲು  2008 ರಲ್ಲಿ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. 

 


ಭಾರತದೊಂದಿಗಿನ ನಂಟು:

ಈ ದ್ವೀಪಕ್ಕೆ ಸಂಸ್ಕೃತದಲ್ಲಿ ಸುಖಧಾರ ದ್ವೀಪ ಎಂದು ಕರೆಯಲಾಗುತ್ತದೆ, ಕಾಲಕ್ರಮೇಣ ಬಳಕೆಯಲ್ಲಿ ಇಂದು ಅಪಭ್ರಂಶವಾಗಿ ಸೊಕೋಟ್ರಾ ವಾಗಿದೆ. ಸಂಶೋಧಕ ಪೀಟರ್ ಡಿ ಗೀಸ್ಟ್ ನೇತೃತ್ವದಲ್ಲಿ, ಇಲ್ಲಿ ಸಂಶೋದನೆ ನಡೆಸಿದಾಗ ಪ್ರಾಚೀನ ಭಾರತೀಯ ಬ್ರಾಹ್ಮಿ ಮತ್ತು ಖರೋಷ್ಟಿ ಲಿಪಿಗಳಲ್ಲಿನ  ಬರಹಗಳುಳ್ಳ ವಸ್ತುಗಳು ಇಲ್ಲಿ ದೊರೆತಿವೆ.  ಇವು ಎರಡನೇ ಶತಮಾನದಿಂದ ನಾಲ್ಕನೇ ಶತಮಾನದವರೆಗಿನ ಹಿಂದಿನ ಅವಧಿಯವು ಎಂದು ಹೇಳಲಾಗುತ್ತಿದೆ. ಅವರ ಸಂಶೋಧನೆಯ ಪ್ರಕಾರ, ದ್ವೀಪಕ್ಕೆ ಭೇಟಿ ನೀಡಿದ ವಸಾಹತುಗಾರರು, ನಾವಿಕರು ಮತ್ತು ವ್ಯಾಪಾರಿಗಳು ಇಲ್ಲಿನ ಗುಹೆಗಳಲ್ಲಿ ಆಶ್ರಯ ಪಡೆದಿರುವ ಸಾಧ್ಯತೆಗಳಿವೆ  ಎನ್ನಲಾಗಿದೆ. ಈ ಬರಹಗಳಲ್ಲಿ ಗುಹೆಯಲ್ಲಿ ಆಶ್ರಯ ಪಡೆದಿದ್ದ ವಿವಿಧ ನಾವಿಕರು ಮತ್ತು ವಸಾಹತುಗಾರರ ಹೆಸರುಗಳನ್ನು ಒಳಗೊಂಡಿವೆ ಎಂದು ಅನ್ವೇಷಿಸಿದ್ದಾರೆ. ಇವರೆಲ್ಲರ ಹೆಸರು ಮತ್ತು ಊರು ಅಖಂಡ ಭಾರತ ದೇಶಕ್ಕೆ ಸಂಭಂಧಿಸಿದಾಗಿದೆ. ಇಲ್ಲಿನ ಕ್ಯಾಂಬೆ ಕೊಲ್ಲಿಯಲ್ಲಿ ದೊರೆತ ಒಂದು ಬರಹದಲ್ಲಿ,  ಹಸ್ತಕವಪ್ರದ ವಿಷ್ಣುಸೇನ ಎನ್ನುವ ಹೆಸರನ್ನು ಬ್ರಾಹ್ಮಿ ಲಿಪಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಬರಹದಲ್ಲಿ ಉಪಶೀಲ ಎನ್ನುವ ಗಾಂಧಾರದ (ಇಂದಿನ ಅಫ್ಘಾನಿಸ್ತಾನ) ವ್ಯಕ್ತಿಯ ಹೆಸರನ್ನು ಖರೋಷ್ಟಿ ಲಿಪಿಯಲ್ಲಿ ಕೆತ್ತಲಾಗಿದೆ.

 


ಭಾರತ, ಆಫ್ರಿಕ ಮತ್ತು ಅರೇಬಿಯಾದ ಕಡಲು ಮಾರ್ಗದ ಆಯಕಟ್ಟಿನ ಜಾಗದಲ್ಲಿ ಈ ಪ್ರದೇಶವಿದ್ದಿದ್ದರಿಂದ ಇಲ್ಲಿ ಭಾರತೀಯ ವ್ಯಾಪಾರಿಗಳು ಸಾವಿರಾರು ವರ್ಷಗಳ ಹಿಂದೆಯೇ ಈ ಪ್ರದೇಶದ ಮುಖಾಂತರ ಹಾದು ಹೋಗುತಿದ್ದರು ಮತ್ತು ಕೆಲವರು ಇಲ್ಲಿ ನೆಲೆಸಲು ಪ್ರಾರಂಭಿಸಿದ್ದರು. ಹಾಗೆಯೇ, ಭಾರತೀಯ ವ್ಯಾಪಾರಿಗಳು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಅಂದಿನ ಅಖಂಡ ಭಾರತದ ಉತ್ತರದ ವ್ಯಾಪಾರಿಗಳು ಒಳನಾಡಿನಿಂದ ಗುಜರಾತಿನ ಕರಾವಳಿಯಲ್ಲಿರುವ ಭರೂಚ್ ನಗರದಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ಪಯಣಿಸುತಿದ್ದರೆನ್ನುವುದಕ್ಕೆ ಇಲ್ಲಿ ದೊರೆತ ದಾಖಲೆಗಳು ಬಲವಾದ ಪುರಾವೆ ನೀಡುತ್ತವೆ. ಇದಕ್ಕೆ ಪೂರಕವೆಂಬಂತೆ ಹರಪ್ಪ ಮೆಹಂಜಾದಾರೋ ಸಮಯದಿಂದಲೂ ಅರಬ್ ರಾಷ್ಟ್ರಗಳೊಂದಿಗೆ ಭಾರತೀಯರು ವ್ಯಾಪಾರ ವಹಿವಾಟು ನಡೆಸುತಿದ್ದ ದಾಖಲೆಗಳು ಒಮಾನ್ ನಲ್ಲಿ ದೊರೆತಿವೆ.

 


ದ್ವೀಪದಲ್ಲಿನ ಹೋಕ್ ಗುಹೆಯಲ್ಲಿ 4 ನೇ ಶತಮಾನದ ವಿಗ್ರಹಗಳು ದೊರೆತಿವೆ. ಈ ಗುಹೆಯಲ್ಲಿ ಸಿಕೋಟ್ರಿ ಮಾತ ಎನ್ನುವ ದೇವರನ್ನು ಪೂಜಿಸುತಿದ್ದರು. ಭಾರತೀಯ ನಾವಿಕರು ಮತ್ತು ವ್ಯಾಪಾರಿಗಳು, ಸಮುದ್ರ ಮಾರ್ಗದಿಂದ ಹಾದು ಹೋಗುವಾಗ, ಯಾವುದೇ ಅಡಚಣೆಗಳು ಎದುರಾಗದಿರಲಿ ಎಂದು ಇಲ್ಲಿ ಪ್ರಾರ್ಥಿಸುತಿದ್ದರು. ಚಿಕ್ಕದಾದ ಮರದ ಹಡಗನ್ನು ಪೂಜಿಸಿ ದೇವತೆಯ ಪಾದದಲ್ಲಿಟ್ಟು ನಮಸ್ಕರಿಸುತಿದ್ದರಂತೆ. ಈಗ ಗುಜರಾತಿನಲ್ಲಿ ಕಂಡು ಬರುವ ಸಿಕೋಟ್ರಿ ಮಾತಾ ಎನ್ನುವ ದೇವಸ್ಥಾನಗಳು ಈ ಸೊಕೋಟ್ರಾ ದಲ್ಲಿ ಪ್ರಾರಂಭಿಸಿದ ನಂಬಿಕೆಯಿಂದ ಪೂಜಿಸಲ್ಪಡುತ್ತಿವೆ ಎಂದು ಹೇಳಲಾಗುತ್ತಿದೆ. ಈ ದೇವತೆ, ನಾವಿಕರು ಮತ್ತು ವ್ಯಾಪಾರಿಗಳಿಗೆ ರಕ್ಷಣೆ ನೀಡುತಿದ್ದಳಂತೆ.

 

ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದೊಂದಿಗಿನ ಸಂಭಂದದ ಕುರಿತಾಗಿ ಹೇಳುವಾಗ, ಒಂದು ಮಹತ್ವದ ವಿಷಯ ಪ್ರಸ್ತಾಪಿಸಬೇಕು. ನಾವು ಧೈನಂದಿನ ಅಡುಗೆಯಲ್ಲಿ ಬಳಸುವ ತುಪ್ಪವನ್ನು ಇಲ್ಲಿಗೆ ಪರಿಚಯಿಸಿದವರು ಭಾರತೀಯರು. ಇಂದು ಅತಿ ಹೆಚ್ಚು, ಉತ್ಕೃಷ್ಟ ಮಟ್ಟದ ತುಪ್ಪ ಇಲ್ಲಿ ತಯಾರಾಗಿ ಪಕ್ಕದ ರಾಷ್ಟ್ರಗಳಿಗೆ ಇಲ್ಲಿಂದ ರಫ್ತು ಮಾಡಲಾಗುತ್ತದೆ.

 


ಪೋರ್ಚೂಗೀಸರ ಆಕ್ರಮಣ:  ಭಾರತದ ಸಂಪತ್ತಿನ ಬಗ್ಗೆ ಇದ್ದ ರೋಚಕ ವಿಷಯಗಳಿಂದ ಆಕರ್ಷಿತರಾಗಿದ್ದ ಪೋರ್ಚುಗೀಸರು, ನಾವಿಕ ವಾಸ್ಕೋಡಗಾಮನ ಮುಖಾಂತರ ಭಾರತಕ್ಕೆ ಸಮುದ್ರ ಮಾರ್ಗವನ್ನ ಕಂಡುಹಿಡಿಯುತ್ತಾರೆ, ನಂತರ, ತಮ್ಮ ದೊಡ್ಡ ಸೈನ್ಯದೊಂದಿಗೆ ಆಫ್ರಿಕಾದಿಂದ ಹಿಡಿದು, ಯಮೆನ್, ಒಮಾನ್, ಪಾಕಿಸ್ತಾನ್, ಭಾರತದ ಕರಾವಳಿ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆಯುತ್ತ ಹೋಗುತ್ತಾರೆ. ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರದ ಕಡಲುಮಾರ್ಗಗಳ ಮೇಲೆ ಸಂಪೂರ್ಣ ಹಿಡಿತವನ್ನು ಅವರು ಹೊಂದುತ್ತಾರೆ.

     1507 ರಲ್ಲಿ, ಅಫೊನ್ಸೊ ಡಿ ಅಲ್ಬುಕರ್ಕ್ ಅವರೊಂದಿಗೆ ಟ್ರಿಸ್ಟಾವೊ ಡ ಕುನ್ಹಾ ನೇತೃತ್ವದಲ್ಲಿ ಪೋರ್ಚುಗೀಸ್ ನೌಕಾಪಡೆಯು ಸೊಕೊಟ್ರಾ ದಲ್ಲಿ ಇಳಿದು ಅಲ್ಲಿ ಆಳ್ವಿಕೆ ನಡೆಸುತಿದ್ದ ಮೆಹರಾ ಸುಲ್ತಾನರ ವಿರುದ್ಧ ಯುದ್ಧ ಮಾಡಿ ಜಯಿಸಿದ ನಂತರ ಆ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಭಾರತಕ್ಕೆ ಹೋಗುವ ಮಾರ್ಗದಲ್ಲಿ ಈ ಆಯಕಟ್ಟಿನ ಸ್ಥಳದಲ್ಲಿ ತಮ್ಮ ರಕ್ಷಣಾ ನೆಲೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಇಲ್ಲಿನ ಸೂಕ್ತ ಬಂದರಿನ ಕೊರತೆ, ಕಠಿಣ ಹವಮಾನ ಮತ್ತು ಬರಡು ಭೂಮಿಯಂತಹ ಪ್ರದೇಶ, ಇವೆಲ್ಲದರ ಕಾರಣದಿಂದ ಇವರ ರಕ್ಷಣಾ ಪಡೆಯು ಕ್ಷಾಮ ಮತ್ತು ಅನಾರೋಗ್ಯಕ್ಕೆ ತುತ್ತಾಯಿತು. ಇಲ್ಲಿ ಲಾಭಕ್ಕಿಂತ, ನಷ್ಟವೇ ಜಾಸ್ತಿಯೆಂದು, ಪೋರ್ಚುಗೀಸರು 1511 ರಲ್ಲಿ ದ್ವೀಪವನ್ನು ತ್ಯಜಿಸುತ್ತಾರೆ.  ಆಗ ಮೆಹರಾ ಸುಲ್ತಾನರು, ದ್ವೀಪದ ನಿಯಂತ್ರಣವನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ.

     ಬ್ರಿಟೀಷರ ಆಳ್ವಿಕೆ: ಭಾರತವನ್ನು ವಸಾಹತುವನ್ನಾಗಿ ಬ್ರಿಟೀಷರು ತಮ್ಮ ಕೈವಶ ಮಾಡಿಕೊಂಡಿದ್ದಾಗ, ಹಲವು ಬಾರಿ ಈ ದ್ವೀಪವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು 1834 ರಲ್ಲಿ ಬ್ರಿಟಿಷರು ದ್ವೀಪವನ್ನು ಖರೀದಿಸಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅಲ್ಲಿನ ಸುಲ್ತಾನ ಮಾರಾಟಕ್ಕೆ ಒಪ್ಪುವುದಿಲ್ಲ. ಕೊನೆಗೆ 1880 ರ ದಶಕದಲ್ಲಿ, ಇಲ್ಲಿನ ಸುಲ್ತಾನನು, ಬ್ರಿಟಿಷ್ ರಕ್ಷಣೆಯನ್ನು ಪಡೆಯಲು  ಒಪ್ಪಿ ಕರಾರು ಮಾಡಿಕೊಳ್ಳುತ್ತಾನೆ. ಹತ್ತೊಂಬತ್ತನೇ ಶತಮಾನಕ್ಕೂ ಮೊದಲು, ಭಾರತ, ಫೂರ್ವ ಆಫ್ರಿಕ ದೇಶಗಳು ಮತ್ತು ಅರಬ್ ರಾಷ್ಟ್ರಗಳನ್ನು ಸಂಪರ್ಕಿಸಲು ಆಫ್ರಿಕಾ ಖಂಡವನ್ನು ಸುತ್ತಿ ಬಳಸಿ ಭಾರತವನ್ನು ತಲುಪಬೇಕಾಗುತಿತ್ತು. ಕಡಿಮೆ ಸಮಯ ಮತ್ತು ಇಂಧನವನ್ನು ಉಳಿಸುವ ನಿಟ್ಟಿನಲ್ಲಿ  ಈಜಿಪ್ಟ್ ರಾಷ್ಟ್ರದ ಬಳಿ ಸೂಯೆಜ್ ಕಾಲುವೆಯನ್ನು ನಿರ್ಮಿಸಲಾಯಿತು. ಯಾವಾಗ ಸೂಯೇಜ್ ಕಾಲುವೆ ನಿರ್ಮಾಣವಾಯಿತೋ, ಆಗ ಈ ಸೊಕೊಟ್ರಾ  ದ್ವೀಪದ ಮೇಲೆ ಬ್ರಿಟೀಷರು ಹಿಡಿತ ಸಾಧಿಸಿದರು. ಭಾರತಕ್ಕೆ ಸಮುದ್ರ ಮಾರ್ಗವಾಗಿ ತೆರಳುವ ಹಡಗುಗಳನ್ನು ನಿಯಂತ್ರಿಸಲು ದ್ವೀಪವು ನಿರ್ಣಾಯಕ ಪಾತ್ರವಹಿತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಂಬಯಿ ಪಟ್ಟಣ ಪ್ರಮುಖ ಲ್ಯಾಂಡಿಂಗ್ ಬಂದರು ಆಗಿದ್ದರಿಂದ, ಸೊಕೊಟ್ರಾ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು ಮತ್ತು ಅಲ್ಲಿಂದ ಬ್ರಿಟಿಷ್ ಭಾರತದ ಭಾಗವಾಗಿ ಆಡಳಿತ ನಡೆಸಲಾಯಿತು. ಇದು 1937 ರವರೆಗೂ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ತದ ನಂತರ, ಈ ದ್ವೀಪವನ್ನು  ಪ್ರತ್ಯೇಕಿಸಿ ಗಲ್ಫ್ ಆಫ್ ಏಡೆನ್ ಪ್ರೊಟೆಕ್ಟರೇಟ್ ಅಡಿಯಲ್ಲಿ ಇರಿಸಲಾಯಿತು. ಭಾರತದಿಂದ ಬ್ರಿಟೀಷರು ಹೊರಟು ಹೋದ ಮೇಲೆ, ಈ ದ್ವೀಪವು ಸಹ ಸ್ವತಂತ್ರಗೊಂಡಿತು.

     ರಷಿಯನ್ನರ ಪ್ರಾಬಲ್ಯ: ಬ್ರಿಟಿಷ್ ಆಳ್ವಿಕೆಯ ಅಂತ್ಯವಾದ ನಂತರ, ಯೆಮನ್ ರಾಷ್ಟ್ರದಲ್ಲಿ ಶೀತಲ ಸಮರ ಪ್ರಾರಂಭ ವಾಯಿತು. ಕೊರಿಯಾ ದೇಶದಂತೆ, ಇಲ್ಲಿಯೂ ದೇಶ ಉತ್ತರ ಯಮೆನ್ ಮತ್ತು ದಕ್ಷಿಣ ಯಮೆನ್ ಎಂದು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತು. ಎರಡು ಕಡೆಯೂ ವಿಭಿನ್ನ ರಾಜಕೀಯ ಶಕ್ತಿಗಳು ಅಧಿಕಾರ ಪಡೆದವು. . ದಕ್ಷಿಣ ಯೆಮೆನ್, ಸೊಕೊಟ್ರಾ ದ್ವೀಪದ ಜೊತೆಗೆ ಸೋವಿಯತ್ ಪ್ರಭಾವಕ್ಕೆ ಒಳಪಟ್ಟಿತು. ಮಾರ್ಕ್ಸ್‌ವಾದಿಗಳು ಅಧಿಕಾರ ವಹಿಸಿಕೊಂಡಂತೆ, ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಯೆಮೆನ್ ಅನ್ನು ಘೋಷಿಸಲಾಯಿತು - ವಿಶ್ವದ ಏಕೈಕ ಅರಬ್ ಕಮ್ಯುನಿಸ್ಟ್ ರಾಜ್ಯ ವೆನ್ನುವ ಹೆಸರು ಪಡೆಯಿತು. ರಷಿಯನ್ ರು ಇಲ್ಲಿಗೆ ಬರಲು ಪ್ರಮುಖ ಕಾರಣ, ಈ ಪ್ರದೇಶದಲ್ಲಿದ್ದ ತೈಲ ನಿಕ್ಷೇಪಗಳು ಹಾಗೂ ಪ್ರಪಂಚದ ಪ್ರಮುಖ ಸಮುದ್ರ ಮಾರ್ಗವೆಂದು ಗುರುತಿಸಿದ್ದ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಮೇಲೆ ಕಣ್ಣಿಡಲು ತಮ್ಮ ರಕ್ಷಣಾ ನೆಲೆಯನ್ನು ಇಲ್ಲಿ ಸ್ಥಾಪಿಸಿದರು. ತದನಂತರ ದ್ವೀಪವನ್ನು ಮುಕ್ತ ಜಗತ್ತಿಗೆ ನಿರ್ಭಂದ ಹೇರಿ, ಇದರ ಬಳಕೆಯನ್ನು ಕೇವಲ ಸೋವಿಯತ್ ಮತ್ತು ದಕ್ಷಿಣ ಯೆಮೆನ್ ಮಿಲಿಟರಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

 


ಯಮೆನ್ ಗಣ ರಾಜ್ಯ:

ಈ ಮೊದಲು ವಿಭಜನೆಗೊಂಡಿದ್ದ  ಯೆಮೆನ್ ರಾಷ್ಟ್ರ, 1990 ರಲ್ಲಿ ಸೋವಿಯತ್ ರಾಷ್ಟ್ರಗಳ ಒಕ್ಕೂಟದ ಪತನದ ನಂತರ,  ಪುನರ್ ಏಕೀಕರಣ ಗೊಂಡಿತು. ಪುನರೇಕೀಕರಣದ ನಂತರ ಮಾತ್ರ ದ್ವೀಪವನ್ನು ಮತ್ತೊಮ್ಮೆ ಜಗತ್ತಿಗೆ ತೆರೆಯಲಾಯಿತು. ಅಂದಿನಿಂದ ಈ ದ್ವೀಪ, ಪ್ರವಾಸಿಗರನ್ನು,  ಸಂಶೋಧಕರು ಮತ್ತು ಮಾನವಶಾಸ್ತ್ರಜ್ಞರು ಭೇಟಿ ನೀಡಿ ಸಂಶೋಧನೆ ನಡೆಸುತಿದ್ದಾರೆ. ಅದ್ಭುತವಾದ ಸಮುದ್ರ ತೀರಗಳು, ವಿಶಿಷ್ಟ ಜಾತಿಯ ಗಿಡಮರಗಳು ಮತ್ತು ದೊಡ್ಡ ದಾದ ಅತಿ ಸುಂದರ ಕಣಿವೆ ಪ್ರದೇಶಗಳು ಇಲ್ಲಿದ್ದರೂ, ಯಮೆನ್ ನಲ್ಲಿನ ರಾಜಕೀಯ ಅನಿಶ್ಚಿತತೆ, ಆಂತರಿಕ ಯುದ್ದಗಳು  ಮತ್ತು ಪಕ್ಕದ ಸೋಮಾಲಿಯಾ ಕಡಲ್ಗಳ್ಲರ ಹಾವಳಿಯಿಂದ ಪ್ರವಾಸೋಧ್ಯಮದಿಂದ ಈ ದ್ವೀಪವು ಜನರಿಂದ ದೂರವೇ ಉಳಿದಿದೆ. ಅಭಿವೃದ್ದಿಯು ಮರೀಚಿಕೆಯಾಗಿದೆ.






ಬರಹ:-

ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ

Photo Credit:  Original Owners, Google

Article is just for knowledge sharing only.

#socotra #oman #muscat #kannada #PSR #PS_Ranganatha #ಸೊಕೊಟ್ರಾ #Bangalore #Karnataka #India #Yemen #muscat #sohar #salalah #sur #nizwa #sanaa  

12 ಕಾಮೆಂಟ್‌ಗಳು:

  1. ಸಾರ್ ಈ ಲೇಖನದ ಬಗ್ಗೆ ಏನು ಹೇಳಬೇಕೋ ಏನು ಬರೆಯಬೇಕೋ ಎನ್ನುವ ಭಾವದಿಂದ ಮೂಕ ವಿಸ್ಮಿತಾನಾಗಿದ್ದೇನೆ. ನಾಲ್ಕು ಬಾರಿ ಓದಿದೆ ಮತ್ತೆ ಮತ್ತೆ ಓದಬೇಕು ಎನಿಸುತ್ತಿದೆ, ನಿಜಕ್ಕೂ ಇದರಲ್ಲಿ ಅನೇಕ ವಿಷಯಗಳು ಅಡಕವಾಗಿವೆ. ತೆರೆದಂತೆಲ್ಲ ಬಿಚ್ಚಿಕೊಳ್ಳುತ್ತಿವೆ, ಪ್ರಾಚೀನತೆಯಿಂದ ಇಂದಿನವರೆಗೂ ಎಲ್ಲ ವಿಚಾರಗಳನ್ನು ಕೂಲಂಕುಷವಾಗಿ ಪ್ರಸ್ತುತ ಪಡಿಸುವ ನಿಮ್ಮ ಸಾಹಿತ್ಯ ದೃಷ್ಟಿಕೋನ ನಿಜಕ್ಕೂ ಶ್ಲಾಘನೀಯ🙏.

    ಪ್ರಾರಂಭದಲ್ಲೇ ಸುಖಧಾರೆ ಎನ್ನುವ ಶಬ್ದವನ್ನು ಬಳಸಿದಿರಿ ಅದು ನನ್ನ ಕಣ್ಣಿಗೆ ಬಿದ್ದ ಒಡನೆ ನನಗೆ ನೆನಪಾದುದು ಮಹರ್ಷಿ ವಿಶ್ವಮಿತ್ರರ ಯಜ್ಞ ಮತ್ತು ಶ್ರೀ ರಾಮ ಲಕ್ಷ್ಮಣರು. ಮಾರೀಚನೊಡನೆ ಬಂದ ಅನೇಕ ಶಕ್ತಿ ಶಾಲಿ ರಾಕ್ಷಸರಲ್ಲಿ ಈತನು ಒಬ್ಬ, ರಾಮ ಲಕ್ಷ್ಮಣರು ದಂಡಿಸುತ್ತ ಅವರ ದೇಹಗಳನ್ನು ದಿಕ್ಕು ದಿಕ್ಕಿಗೆ ದೂರ ದೂರಕೆ ಎಸೆಯುತ್ತಾರೆ. ಈ ರೀತಿ ಎಸೆಯಲ್ಪಟ್ಟ ರಕ್ಕಸನೆ ಈ ಸುಖದಾರೆ.

    ಇಲ್ಲಿ ಬೆಳೆಯುವ ಪ್ರಾಕೃತಿಕ ವೈವಿದ್ಯಮಯ ಗಿಡ ಬಳ್ಳಿಗಳ ಬಗ್ಗೆ ಬರೆದಿರುವ ನಿಮ್ಮ ವೈಜ್ಞಾನಿಕ ಚಿಂತನೆ, ಬರಹ ಅತ್ಯಾಮೂಲ್ಯವಾದುದು.

    ಇತಿಹಾಸ ವಿದ್ಯಾರ್ಥಿಗಳಿಗೆ ಇದು ಒಂದು ಪ್ರಬಂದವೇ ಸರಿ.

    ಪ್ರವಾಸಿಗರಿಗೆ ಕೈಗನ್ನಡಿ, ಕುಳಿತಲ್ಲೇ ಭಾವನಾತ್ಮಕ ಲೋಕವನ್ನು ಕಾಣುವ ಮನಸಿಗೆ ರಸದೌತನ.

    ಈ ರೀತಿಯ ಲೇಖನ ಹೆಚ್ಚಾಗಲಿ, ಸಾಹಿತ್ಯ ಹಸಿವನ್ನು ತಣಿಸಿ. ನನಂತ ಸುತ್ತಲಾರದವರು ಕುಳಿತಲ್ಲೇ ನಿಮ್ಮ ಪುಸ್ತಕ ಓದುತ್ತಾ ಈ ಭೂಮಂಡಲವನ್ನು ಸುತ್ತಬಹುದು.

    ಈ ಲೇಖನವನ್ನು ಹಂಚಿಕೊಂಡ ನಿಮಗೆ ಎಷ್ಟು ಧನ್ಯವಾದ ಹೇಳಿದರು ಅದು ಕಮ್ಮಿಯೇ ಸರಿ. ಈ ವೇದಿಕೆ ಈ ರೀತಿಯ ಲೇಖನಗಳಿಂದ, ಸಾಹಿತ್ಯದಿಂದ ಸಂಭ್ರದ್ಧವಾಗಲಿ ಎಂದು ಪ್ರಾರ್ಥಿಸುತ್ತ 🙏🙏🙏

    ನಿಮ್ನವ
    ಸುರೇಶ್ G ಹುಳ್ಳೇನಹಳ್ಳಿ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಬಹಳ ಸೊಗಸಾದ ಪ್ರತಿಕ್ರಿಯೆ🙏🏻

      ನಿಮ್ಮ ಬರಹದಲ್ಲಿ, ಇಂದಿನ ಸೊಕೊಟ್ರಾ ದ್ವೀಪಕ್ಕೆ "ಸುಖಧಾರ"ಎನ್ನುವ ಹೆಸರು ಹೇಗೆ ಬಂದಿರಬಹುದು? ಎನ್ನುವುದಕ್ಕೆ ಒಂದು ಸಣ್ಣ ಕಲ್ಪನೆಯ ಎಳೆಯ ಜಾಡನ್ನೂ ಬಿಟ್ಟಿದ್ದೀರಿ. ರಾಮಲಕ್ಷ್ಮಣರು ವಧಿಸಿ, ದೂರಕ್ಕೆ ಎಸೆದ ಸುಖಧಾರ ಎನ್ನುವ ರಾಕ್ಷಸನ ದೇಹ, ಮಹರ್ಷಿ ವಿಶ್ವಾಮಿತ್ರರ ಆಶ್ರಮದಿಂದ, ಸದೂರದ, ಇಂದಿನ ಒಮಾನ್ ದೇಶದ, ಬಳಿಯಿರುವ ಈ ಭೂಭಾಗಕ್ಕೆ ಬಂದು ಬಿದ್ದಿರಬಹುದಲ್ಲವೆ? ಈ ಕಾರಣಕ್ಕೇ ಅಲ್ಲಿಯವರೆಗೂ ಅಜ್ಞಾತವಾದ ಈ ಪ್ರದೇಶವನ್ನು ನಮ್ಮ ಹಿರಿಯರು "ಸುಖಧಾರ" ಎಂದು ಕರೆದಿರಬಹುದಲ್ಲವೆ?

      ಒಂದು ವಿಷಯವಂತೂ ಆಗಾಗ್ಗೆ ನನ್ನ ಗಮನಕ್ಕೆ ಬರುತ್ತಲೇ ಇರುತ್ತದೆ. ನಮ್ಮ ಪೂರ್ವಿಕರು ಯಾವ ತಥ್ಯಗಳನ್ನೂ ಸುಮ್ಮನೇ ಹಾಗೆಯೇ ಉಲ್ಲೇಖ ಮಾಡಿದಂತೆ ತೋರುತ್ತಿಲ್ಲ. ಇದು ವ್ಯಕ್ತಿಗಳ ವಿಷಯದಲ್ಲಿ ಎಷ್ಟು ನಿಜವೋ, ಸ್ಥಳ ಐತಿಹ್ಯಗಳ ಬಗ್ಗೆಯೋ ಅಷ್ಟೇ ಸತ್ಯನಿಷ್ಠೆಯಿಂದ ಕೂಡಿದ್ದಾಗಿದೆ. ಇದಕ್ಕೆ ಹೇರಳವಾದ ಪ್ರಮಾಣಗಳು ರಾಮಾಯಣ ಮತ್ತು ಮಹಾಭಾರತದಂತಹ ಸನಾತನ ಧರ್ಮಗ್ರಂಥಗಳಲ್ಲಿ, ಯಥೇಚ್ಚವಾಗಿ ದೊರೆಯುತ್ತವೆ.

      ಇಂದಿಗೂ, ತಮ್ಮ ಅತ್ಯಮೂಲ್ಯ ಕೃತಿರತ್ನಗಳಲ್ಲಿ, ನಮ್ಮ ಪೂರ್ವಿಕರು ಮಾಡಿದ ಭೂಭಾಗಗಳ, ಭೂಪ್ರದೇಶಗಳ ವರ್ಣನೆ ಯಥಾ ಪ್ರಕಾರ ನಮಗೆ ಕಾಣಲು ಸಿಗುತ್ತವೆ. ಹಾಗಾಗಿ ನಮ್ಮ ಉದ್ಗೃಂಥಗಳು "ಸನಾತನತೆಯ ಮೇರುಶೃಂಗಗಳು" ಎನಿಸುವ ಹೊತ್ತೇ ಅತ್ಯಂತ ನಿಖರ ಹಾಗೂ ವಸ್ತುಸ್ಥಿತಿಯ ದರ್ಶನವನ್ನು ಮಾಡುವ ಐತಿಹಾಸಿಕ ಸೂಚಕಗಳಾಗಿಯೂ, ಇತಿಹಾಸದ ಅತ್ಯಪೂರ್ವ ದಾಖಲೆಗಳಾಗಿಯೂ, ಕೆಲಸ ಮಾಡುತ್ತವೆ.

      ಮನುಕುಲದ ಅತಿಶ್ರೇಷ್ಠ ಮಹರ್ಷಿಗಳಿಂದ ರಚಿತವಾದ ಈ ಆರ್ಷೇಯ ಗ್ರಂಥಗಳನ್ನು, ಬಹಳ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ, ತಮ್ಮ ಅಗಾಧ ಕವಿ ಕಲ್ಪನೆಗಳಿಗೆ ಸ್ವಲ್ಪವೂ ರೆಕ್ಕೆ ಪುಕ್ಕಗಳನ್ನು ಹಚ್ಚದ ಹಾಗೆ, ನಿರೂಪಿಸಲಾಗಿದೆ. ಒಂದು ವೇಳೆ ಋಷಿಗಳ ಕವಿಕಲ್ಪನೆಗಳು ಇಲ್ಲಿ ಕೆಲಸ ಮಾಡಿದ್ದಲ್ಲಿ ರಾಮಾಯಣ, ಮಹಾಭಾರತಗಳ ಸ್ವರೂಪ ಬೇರೆಯದೇ ಆಗಿರುತ್ತಿತ್ತು. ಹಾಗಂತ ಇಲ್ಲಿ ಕವಿಗಳು ತಮ್ಮ ಕಲ್ಪನಾ ರಮ್ಯತೆಗಳನ್ನು ಮೆರೆದಿಲ್ಲ ಎಂದಲ್ಲ, ಆದರೆ ಅಂತಹ ಶ್ರೇಷ್ಠ ವಿವರಣೆಗಳ ಕಲ್ಪನಾಶಕ್ತಿ, ಕೇವಲ ವಸ್ತುಸ್ಥಿತಿಯ, ನೈಜತೆಯ ಚೌಕಟ್ಟಿನ ಒಳಗೇ ಮಡುಗಟ್ಟಿ ನಿಂತಂತಿದೆ.

      ಹಾಗಾಗಿ ರಾಮಾಯಣ, ಮಹಾಭಾರತ ಗ್ರಂಥಗಳು ಕೇವಲ ಹಿಂದೂಗಳು ಓದಬೇಕಾದ ಗ್ರಂಥಗಳಷ್ಟೇ ಆಗಿರದೆ, ಜಗತ್ತಿನ ಎಲ್ಲಾ ಇತಿಹಾಸದ ವಿದ್ಯಾರ್ಥಿಗಳು, ಮಾನವ ವಿಕಸನದ ಹಾದಿಯನ್ನು ಅರಿಯ ಬಯಸುವ ವಿಜ್ಞಾನಿಗಳು, ಮನುಷ್ಯನ ಮಾನಸಿಕ ವಿಕಸನವನ್ನು ತಿಳಿಯ ಬಯಸುವ ಮನಃಶಾಸ್ತ್ರಜ್ಞರು, ಮಹಿಳೆಯ ಸಬಲೀಕರಣಕ್ಕೆ ದುಡಿಯುತ್ತಿರುವ ಮಹಿಳಾ ಮಣಿಗಳು, ಮನುಷ್ಯನ ವಲಸೆಯ ಹಾದಿಯನ್ನು ಪತ್ತೆ ಹಚ್ಚಲು ದುಡಿಯುತ್ತಿರುವ ಮಂದಿ, ಹೀಗೆ ಮನುಷ್ಯನ ಭೌತಿಕ ಮತ್ತು ಮಾನಸಿಕ ಚಟುವಟಿಕೆಗಳ ಎಲ್ಲಾ ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರೂ ಓದಬೇಕಾದ ಅಕರ ಗ್ರಂಥಗಳೇ ಆಗಿವೆ.

      ರಾಮಾಯಣ, ಮಹಾಭಾರತ ಗ್ರಂಥಗಳ ಪ್ರಾಮುಖ್ಯತೆಯನ್ನು, ಮನುಷ್ಯನ ಇತಿಹಾಸದ ಬೆಳೆವಣಿಗೆಯ ಹೆಜ್ಜೆಗಳೊಟ್ಟಿಗೆ ತಾಳೆ ಹಾಕಿ ನೋಡಬೇಕೇ ಹೊರತು, ಯಾವುದೋ ಧರ್ಮವಿಶೇಷಕ್ಕೆ ಸಂಬಂಧ ಪಟ್ಟ "ಕಾಗೆ-ಗುಬ್ಬಿ ಕಥೆ"ಗಳೆಂದೋ, "ಅಡಗೋಲಜ್ಜಿ ಕಥೆ"ಗಳೆಂದೋ, ಮೂಗು ಮುರಿದರೆ, ಉಪೇಕ್ಷೆ ಮಾಡಿದರೆ, ಇದರಿಂದ ಉಂಟಾಗುವ ನಷ್ಟ ಕೇವಲ ಮನುಕುಲಕ್ಕಷ್ಟೆ. ಮನುಷ್ಯನ ಆದಿಕಾಲದ ಬೆಳವಣಿಗೆಗಳ ದಾಸ್ತಾನನ್ನು ಸನಾತನ ಗ್ರಂಥಗಳಿಂಗಿತ ಪ್ರಾಂಜಲವಾಗಿ ಹಿಡಿದಿಟ್ಟ ಕೃತಿಗಳು ಬೇರೆಲ್ಲೂ ಇಲ್ಲ ಎನ್ನುವುದು ನನ್ನ ಸುಸ್ಪಷ್ಟ ನಿಲುವು.

      ಇಂದು ರಾಮಾಯಣ, ಮಹಾಭಾರತಗಳ, ಜಾಗತಿಕ ಮಟ್ಟದ ವಸ್ತುನಿಷ್ಠ ಅಧ್ಯಯನಗಳಾದರೆ, ವಿಜ್ಞಾನವನ್ನು ದಿನಬೆಳಗೂ ಕಾಡುತ್ತಿರುವ, ಅನ್ಯಲೋಕ ಜೀವಿಗಳ ಮಾಹಿತಿಯನ್ನೂ ಸೇರಿದಂತೆ, ಇಲ್ಲಿಯವರೆಗೆ ಮನುಕುಲಕ್ಕೆ ಲಭ್ಯವಾಗದ, ಸಾಮಾನ್ಯ ಲೋಹಗಳನ್ನು ಚಿನ್ನಕ್ಕೆ ಪರಿವರ್ತಿಸುವ ಲೋಹಶಾಸ್ತ್ರ, ಕೆಲವೇ ಕ್ಷಣಗಳಲ್ಲಿ ಅನ್ಯಗ್ರಹತಾರೆಗಳನ್ನು ಸಂಪರ್ಕಿಸ ಬಲ್ಲ ಖಗೋಳಶಾಸ್ತ್ರಗಳನ್ನೂ ಸೇರಿದಂತೆ, ಅನೇಕ ಅಮೂಲ್ಯ ತಥ್ಯಗಳು ಕೈವಶವಾದಾವು.

      ಜಗತ್ತಿನ ಜ್ಞಾನಕೋಶಕ್ಕೆ ಕಾಣಿಕೆಯಾಗಿ ಕೊಡಲು ನಮ್ಮ ಧರ್ಮಗ್ರಂಥಗಳಲ್ಲಿ ಬಹಳಷ್ಟಿದೆ, ಇದನ್ನು ಪಡೆಯಲು ಎಷ್ಟು ದೇಶಗಳು ಮುಂದೆ ಬರುತ್ತವೆ? ಕಾದು ನೋಡೋಣ.

      ನಮ್ಮ ಪುರಾತನರು ಅರಿವಿನ ಬೆಳಕನ್ನು ಹಚ್ಚಿದ್ದಾರೆ, ಕತ್ತಲಲ್ಲಿ ಕುಳಿತ ತಾಮಸಿಗರು ಎಷ್ಟು ದಿನ ಈ ಜ್ಞಾನದಿಂದ ದೂರವಿರುವ ಮಡಿವಂತಿಕೆ ಪ್ರದರ್ಶಿಸುತ್ತಾರೆಯೋ ನೋಡೋಣ. ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ. ತನ್ನ ಹಾದಿಯಲ್ಲಿ ಸಾಕಷ್ಟು ದೂರ ನಡೆದರೂ ಅಂತಹ ಘನವಾದ ಏನನ್ನೂ ಪಡೆದಂತೆ ತೋರದ ಪಾಶ್ಚಿಮಾತ್ಯ ನಾಗರೀಕತೆಗಳಿಗೆ, ನಮ್ಮ ಸನಾತನ ಧರ್ಮಗಳು ಭರವಸೆಯ ಕಟ್ಟಕಡೆಯ ಕಿರಣಗಳ ರೂಪದಲ್ಲಿ ತೋರಿದರೂ ಅಚ್ಚರಿಯಿಲ್ಲ.

      ಅಳಿಸಿ
  2. ರಂಗನಾಥ್ ಸರ್, ಹೊಸ, ಹೊಸ ಸ್ಥಳಗಳ ಪರಿಚಯ ಮತ್ತು ಇತಿಹಾಸದ ಅಪರೂಪದ ಸಂಗತಿಗಳನ್ನು ಹೊರಗೆಡುವುದರಲ್ಲಿ ನಿಮ್ಮ ಲೇಖನಿಯ ಕತೃತ್ವಶಕ್ತಿಗೆ ನೀವೇ ಸಾಟಿ.

    ನಿಮ್ಮ ಸ್ಥಳ ಪರಿಚಯಗಳಲ್ಲಿ, ನಿಮ್ಮ ಮೊದಲ ಆಸಕ್ತಿಯಾದ, ಇತಿಹಾಸ, ಆಯಾಯ ಜಾಗಗಳಿಗೆ ಸಂಬಂಧಿಸಿದಂತೆ, ಓದುಗರ ಕಣ್ಣುಗಳನ್ನು ತಪ್ಪಿಸಲಾರದಂತೆ, ಒಡೆದು ತೋರುತ್ತಿರುತ್ತದೆ. ಸ್ಥಳಗಳ ಇತಿಹಾಸದ ಘಾಟು, ನಿಮ್ಮ ಸುಲಲಿತ ಬರವಣಿಗೆಯ ಮುಖೇನ, ಸದೃಹ ಓದುಗರ ನಾಸಿಕಗಳನ್ನು ತಟ್ಟದೇ ಹೋಗಲಿಕ್ಕೆ ಸಾಧ್ಯವೇ ಇಲ್ಲ. ಇದರಿಂದ ಓದುಗರಿಗೆ, ನೀವು ವಿವರಿಸುವ ಸ್ಥಳ ಮಹಿಮೆಗಳ ಸಮಗ್ರ ಚಿತ್ರಣ ಮತ್ತು 360 ಡಿಗ್ರಿಗಳ ವೃತ್ತಾವಲೋಕನ, ಸುಲಿದ ಬಾಳೆಹಣ್ಣಿನಂತೆ, ಲಭ್ಯವಾಗುತ್ತದೆ.

    ಸಾಮಾನ್ಯವಾಗಿ, ಚಾರಿತ್ರಿಕ ಸ್ಥಳಗಳ ವಿವರಣೆ, ಆ ಸ್ಥಳಗಳ ವೀಕ್ಷಣೆಗೆ, ಓದುಗರನ್ನು ಉತ್ಸುಕಗೊಳಿಸುತ್ತವೆ, ಸ್ಥಳವನ್ನು ವೀಕ್ಷಣೆ ಮಾಡಿ, ಮತ್ತಷ್ಟು ಮಗದಷ್ಟು ಸ್ಥಳ ವೈಶಿಷ್ಟ್ಯತೆ ಹಾಗೂ ಚಾರಿತ್ರಿಕ ಅಂಶಗಳನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಇದು ಸ್ಥಳಗಳ ವಿವರಣೆಗಳನ್ನ
    ಅರ್ಧಂಬರ್ಧ ಕಟ್ಟಿಕೊಡುವ ಪಳಗದ ಲೇಖಕರ ಪ್ರಯತ್ನಗಳ ವಾಚನದಿಂದ ಮೂಡಿ ಬರುವ ಪ್ರಯತ್ನಗಳಾದರೆ, ಈ ನಿಟ್ಟಿನಲ್ಲಿ ಭಿನ್ನವಾಗಿ ನಿಲ್ಲುವ ನಿಮ್ಮ ಬರವಣಿಗೆ, ತನ್ನ ಸಮಗ್ರತೆಯ ಕಾರಣದಿಂದ, ನೀವು ವಿವರಿಸುವ ಸ್ಥಳವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ತನ್ಮೂಲಕ, ಸಾಮಾನ್ಯ ಓದುಗನಿಗೆ, ತಾನು ಈ ಜಾಗಕ್ಕೆ ಹೋಗಿ ಇನ್ನೂ ಹೆಚ್ಚಿನದೇನನ್ನು ತಿಳಿಯಬಹುದು? ಎನ್ನುವ ಸಹಜ ಕೌತುಕಕ್ಕೆ ಪೂರ್ಣವಿರಾಮ ಹಾಡುತ್ತದೆ. ನೀವು ಬರೆಯುವ ಪ್ರವಾಸಿ ತಾಣಗಳ ವಿಷಯಕ್ಕೆ ಮೇಲಿನ ಸಂಗತಿ ಖಂಡಿತವಾಗಿ ಅನ್ವಯವಾಗಲಾರದು. ಅದು ಬೇರೆಯದೇ ಆಯಾಮದಲ್ಲಿ ನಡೆಯುವ ಪ್ರಕ್ರಿಯೆ. ಆದರೆ, ಚಾರಿತ್ರಿಕ ತಾಣಗಳ ವಿವರಣೆ ನಿಮ್ಮ ಲೇಖನಗಳಲ್ಲಿ ಇದ್ದ ಹಾಗೆಯೇ ಇರುವುದು ಸೂಕ್ತವೆಂದು ನನ್ನ ಪ್ರಾಮಾಣಿಕ ಅನಿಸಿಕೆ. ಐತಿಹಾಸಿಕ ಸ್ಥಾನಗಳ ವೀಕ್ಷಣೆ ಸಾಮಾನ್ಯ ಪ್ರವಾಸಿಗಳಿಗೆ ಸುಲಭವಾಗಿ ದಕ್ಕವು. ಅಂತಹ ಅವಕಾಶಗಳು ಕೈಗೆಟುಕಿದಾಗಲೂ, ಬಹಳಷ್ಟು ವೇಳೆ, ನಾವು ಚಾರಿತ್ರಿಕ ಸ್ಥಳಗಳನ್ನು, ಅವುಗಳ ಇತಿಹಾಸದ ಹಿನ್ನೆಲೆಯನ್ನು ಹೊರಗಿಟ್ಟೇ ವೀಕ್ಷಿಸುತ್ತೇವೆ. ಇಂತಹ ಸಂದರ್ಭಗಳಲ್ಲಿ, ಆಯಾಯ ಸ್ಥಳದ ಗೈಡ್ಸ್ ಗಳು ನಮಗೆ ಅಲ್ಪಸ್ವಲ್ಪ, ಅರೆಬೆಂದ ರೀತಿಯ, ನೈಜವಲ್ಲದ ವಸ್ತುಸ್ಥಿತಿಯ, ಜನಪದದ ಅಂಶಗಳಿಂದ ಪೂರಿತವಾದ, ವಿವರಣೆಗಳನ್ನು ಲಭ್ಯವಾಗಿಸಿದರೂ, ನಿಮ್ಮಂತಹ ಸಮರ್ಥ ಲೇಖಕರ ಬರವಣಿಗೆಗೆ ಅದು ಪರ್ಯಾಯವಾದೀತು ಎಂದು ಈ ಹೊತ್ತಿನಲ್ಲಿ ನನಗೆ ಅನ್ನಿಸುತ್ತಿಲ್ಲ.

    ರಂಗನಾಥ್, ಕುಳಿತಲ್ಲಿಂದ, ನಮಗೆ ಗೊತ್ತಿರದ, ಸಾಮಾನ್ಯ ಜ್ಞಾನಕ್ಕೆ ನಿಲುಕದ, ಅನೇಕ ಐತಿಹಾಸಿಕ ಸ್ಥಳಗಳ, ಪ್ರವಾಸಿ ತಾಣಗಳ, ವಿಶ್ವಪರ್ಯಟನೆಯನ್ನು ಮಾಡುತ್ತಿದ್ದೀರಿ. ನಿಮ್ಮ ಇಂತಹ ಪ್ರತಿಯೊಂದು ಲೇಖನವೂ, ನಮ್ಮ ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸುತ್ತಲೇ ಸಾಗುತ್ತದೆ. ನಿಮ್ಮ ಶ್ರಮವರಿಯದ, ಇಂತಹ ಬರವಣಿಗೆಗಳ, ಓಘ ಹೀಗೆಯೇ ಸಾಗಲಿ. ನಿಮ್ಮೊಟ್ಟಿಗೆ, ನಾವು ಒಟ್ಟಾಗಿ ವಾಸಿಸುತ್ತಿರುವ, ಅಪರೂಪದ ಗ್ರಹದ ಅತ್ಯಪರೂಪದ, ನಿಗೂಢ, ಮೈನವಿರೇಳಿಸುವ ಕೌತುಕ ಸಂಗತಿಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತಿದ್ದೇವೆ. ವಿಷಯ ವಸ್ತುಗಳ ವೈವಿಧ್ಯಮಯತೆಗೆ ಕನ್ನಡಿ ಹಿಡಿಯುವ ಈ ಕನ್ನಡ ಅಕ್ಷರ ಜಾತ್ರೆ ಹೀಗೆಯೇ ಮುಂದುವರೆಯಲಿ🙏🏻🙏🏻

    ಪ್ರತ್ಯುತ್ತರಅಳಿಸಿ
  3. ನಮಸ್ಕಾರ ಗೆಳೆಯರಾದ ರಂಗನಾಥರೇ. ನಾನು ಇದುವರೆಗೆ ಕೇಳಿರದಿದ್ದ ಸೊಕೋಟ್ರಾ ದ್ವೀಪದ ಬಗ್ಗೆ ಚೆನ್ನಾದ ಮಾಹಿತಿ ನೀಡಿದ್ದೀರಿ. ಈ ದ್ವೀಪ ನಿಜಕ್ಕೂ ಬಹಳ ಕೌತುಕಮಯ. ಅಲ್ಲಿನ ಸಸ್ಯರಾಶಿ ಆಕಾರದಲ್ಲಿ ಬಹಳ ವಿಚಿತ್ರ ವಿಧದಲ್ಲಿವೆ. ಇಂತಹ ವಿಶೇಷ ಭೌಗೋಳಿಕ ವೈವಿಧ್ಯತೆ ಇರುವ ದ್ವೀಪ ಫೋಟೋದಲ್ಲೇ ಇಷ್ಟು ಆಕರ್ಷಕವಾಗಿದೆಯಾದರೆ ನಿಜವಾಗಿಯೂ ನೋಡಲು ಇನ್ನೆಷ್ಟು ಚೆನ್ನಾಗಿ ರಬಹುದು?

    ತಮ್ಮ ಕುತೂಹಲ ಮೂಡಿಸುವ ಈ ಲೇಖನಕ್ಕೆ ಅನೇಕ ಅಭಿನಂದನೆಗಳು ಹಾಗೂ ಧನ್ಯವಾದಗಳು.🙏

    ಪ್ರತ್ಯುತ್ತರಅಳಿಸಿ
  4. ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು sir🙏

    ಪ್ರತ್ಯುತ್ತರಅಳಿಸಿ
  5. ಗೊತ್ತಿರದ ಸ್ಥಳಗಳ ಮಾಹಿತ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್🙏🙏

    ಪ್ರತ್ಯುತ್ತರಅಳಿಸಿ
  6. ಸೊಕೊಟ್ರಾ ದ್ವೀಪವನ್ನು ನಮಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು Sir, ಉತ್ತಮ ಮಾಹಿತಿಯುತ ಲೇಖನ 👌👌👏👏

    ಪ್ರತ್ಯುತ್ತರಅಳಿಸಿ
  7. ಹೊಸ ಹೊಸ ಪ್ರದೇಶ ಮತ್ತು ಅದರ ವಿಶೇಷತೆಯನ್ನು ಪರಿಚಯಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ‌. ಮಲ್ತೊಂದು ಉತ್ತಮ ಲೇಖನ 🙏🙏🙏🙏

    ಪ್ರತ್ಯುತ್ತರಅಳಿಸಿ
  8. ನಮಗೆ ಹೊಸ ಹೊಸ ಬಗ್ಗೆಯ ವಿಷಯಗಳನ್ನು ನಮಗೆ ತಿಳಿಸಿಕೋಡುತ್ತಿರುವ ರಂಗನಾಥ್ ಸಾರ್ ಗೆ ವಂದನೆಗಳು

    ಪ್ರತ್ಯುತ್ತರಅಳಿಸಿ
  9. ಅಪರೂಪದ ಮಾಹಿತಿಯನ್ನು ನೀಡುವ ಲೇಖನ. ಓದಿ ಸಂತೋಷ ವಾಯಿತು.

    ಪ್ರತ್ಯುತ್ತರಅಳಿಸಿ
  10. ಪೋಟೋಗಳು ಅತ್ಯುತ್ತಮವಾಗಿವೆ. ಸಹಜ ಸೌಂದರ್ಯವನ್ನು ಬಿಂಬಿಸುತ್ತದೆ. ಲೇಖನವು ಉತ್ತಮವಾಗಿದ್ದು ದೀರ್ಘವೂ ಅಲ್ಲ ; ಚುಟುಕು ಅಲ್ಲ ಎನುವಂತಿದೆ.

    ಪ್ರತ್ಯುತ್ತರಅಳಿಸಿ

Click below headings