ಶುಕ್ರವಾರ, ಜೂನ್ 28, 2024

ಜೀವನ ಪಾಠ


 *ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ❓*

ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ. 

ಬಹಳಷ್ಟು ಜನರಲ್ಲಿ ನಿವೃತ್ತಿ ನಂತರ ಒಂಟಿತನ ಕಾಡುವುದಕ್ಕೆ ಶುರುವಾಗುತ್ತದೆ. ಕೆಲವರು ಖಿನ್ನತೆಗೂ ಒಳಗಾಗುತ್ತಾರೆ. ನ್ಯಾಯ ನೀತಿ, ನೇರ ಮತ್ತು ನಿಷ್ಟುರತೆಯಿಂದ ಬದುಕಿದವರೂ ಇನ್ನೂ ಹೆಚ್ಚಿನ ಖಿನ್ನತೆಗೆ ಒಳಗಾಗುವ ಸಾಧ್ಯತೆ ಜಾಸ್ತಿಯಿರುತ್ತದೆ. ಜತೆಯಲ್ಲಿರುವವರು ಖಿನ್ನತೆಯಿಂದ ಪಾರುಮಾಡುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಮಾನಸಿಕ ಆರೋಗ್ಯದ ಪರಿಣಾಮ ದೇಹದ ಮೇಲೂ ಬೀರಲು ಪ್ರಾರಂಭಿಸುತ್ತದೆ. 

ಒಂದು ನಗರದಲ್ಲಿ, ಅಂದಾಜು 70 ವರ್ಷ ವಯಸ್ಸಿನ ಒಬ್ಬ ಸಂಭಾವಿತ ವ್ಯಕ್ತಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು, ಎಲ್ಲದರಲ್ಲೂ ನಿರಾಸಕ್ತಿ, ಯಾವಗಲೂ ಯೋಚನೆ ಮಾಡುವುದು, ಆ ಸಮಸ್ಯೆ, ಈ ಸಮಸ್ಯೆ ಅಂತ ಗೊಣಗಾಡುವುದು ನಡೆದಿತ್ತು. ವಯಸ್ಸಾಯ್ತು, ಆರಾಮಾಗಿರಿ ಎಂದು ಮನೆಯವರು ಹೇಳಿದರು, ಕೇಳ್ತಿರಲಿಲ್ಲ. ಇವರ ಅವಸ್ಥೆ ಕಂಡ ಅವರ ಪತ್ನಿ, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಲು ಕೌನ್ಸೆಲಿಂಗ್ ಸಲಹೆಗಾರರೊಂದಿಗೆ ಮಾತನಾಡಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಒಂದು ದಿನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. 

ಇವರನ್ನ ಭೇಟಿ ಮಾಡಿದ ವೈದ್ಯರು, ಏನು ಸಮಸ್ಯೆ? ಅಂತ ಕೇಳ್ತಾರೆ.

"ಅವರು ತೀವ್ರ ಖಿನ್ನತೆಯಲ್ಲಿದ್ದಾರೆ, ದಯವಿಟ್ಟು ಅದನ್ನು ನೋಡಿ.."  ಎಂದು ಪತ್ನಿ, ಮನೆಯಲ್ಲಿ ಅವರು ನಡೆದುಕೊಳ್ಳುವ ವಿಷಯದ ಕುರಿತು ಹೇಳ್ತಾರೆ...

ಆಯ್ತು ನೀವು ಹೊರಗೆ ಕುಳಿತುಕೊಳ್ಳಿ, ಇವರ ಬಳಿ ಪರ್ಸನಲ್ ಆಗಿ ಮಾತನಾಡುವುದಿದೆ ಎಂದು ಹೆಂಡತಿಯನ್ನು ಹೊರಕಳಿಸುತ್ತಾರೆ.

ವೈದ್ಯರು, ಕೆಲವು ವೈಯಕ್ತಿಕ ವಿಷಯಗಳನ್ನು ಆ ಹಿರಿಯರ ಬಳಿ ಕೇಳುವ ಮೂಲಕ ತಮ್ಮ ಕೌನ್ಸೆಲಿಂಗ್ ಅನ್ನು ಪ್ರಾರಂಭಿಸುತ್ತಾರೆ.

ಆ ಹಿರಿಯರು ಮಾತನಾಡುತ್ತ ಹೋಗ್ತಾರೆ, 

ನನ್ನ ನಿವೃತ್ತಿ ನಂತರ ಬಹಳಷ್ಟು ವಿಷಯಗಳು ಕುರಿತು ಚಿಂತೆ ಮಾಡ್ತಿದ್ದೇನೆ. ಮನೆ ಸಮಸ್ಯೆ, ಮಕ್ಕಳ ಭವಿಷ್ಯ, ಈಗಿರುವ ಸಾಲಗಳು, ಮಗನ ಮದುವೆ, ಮಗಳ ಜೀವನದ ಭದ್ರತೆ, ಹೀಗೆ ಎಲ್ಲದರ ಕುರಿತು ಬಹಳಷ್ಟು ಯೋಚಿಸ್ತಿದ್ದೇನೆ. ನಾನು ಇಷ್ಟಪಡುವ ಎಲ್ಲದರಲ್ಲೂ ನಾನು ಆಸಕ್ತಿ ಕಳೆದುಕೊಂಡಿದ್ದೇನೆ. ಹೊರ ಜಗತ್ತಿನ ಜನ, ನಾನು ಬಹಳ ಅದೃಷ್ಟಶಾಲಿ, ಉತ್ತಮ ಜೀವನ ನಡೆಸ್ತಿದ್ದಾನೆ. ಎಲ್ಲ ಸೌಕರ್ಯ ಇದೆ ಅಂತ ಅಂದುಕೊಂಡಿದ್ದಾರೆ, ನಿಜ ಹೇಳಬೇಕೆಂದರೆ, ಅವರು ಭಾವಿಸಿದಷ್ಟು ಹಣ, ಆಸ್ತಿ, ಅಂತಸ್ತು, ಸುಖ ನೆಮ್ಮದಿ ನನ್ನಲ್ಲಿಲ್ಲ.  ಈಗ ಬರೀ 70 ವರ್ಷ ವಯಸ್ಸು, ಇನ್ನೂ ಜೀವನದಲ್ಲಿ ಏನಾದರು ಮಾಡಬೇಕು ಎನ್ನುವ ಆಸೆ ಇದೆ. ಆದರೆ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದೇನೆ. ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ಏನು ಮಾಡುವುದು ಗೊತ್ತಾಗ್ತಿಲ್ಲ ಎಂದು ಮನ ಬಿಚ್ಚಿ ಮಾತನಾಡುತ್ತಾರೆ.


ಆಗ ಆ ವೈದ್ಯರು, "ನೀವು ಯಾವ ಮಾಧ್ಯಮಿಕ ಶಾಲೆಯಲ್ಲಿ ಓದಿದ್ದೀರಿ." ಎಂದು ಪ್ರಶ್ನಿಸಿದರು.


ಆ ಸಜ್ಜನರು ತಾವು ಓದಿದ ಶಾಲೆ, ಅವರ ಊರಿನ ಹೆಸರನ್ನು ಹೇಳಿದರು.

ಗುಡ್, ನಿಮಗೆ ನಿಮ್ಮ ಶಾಲೆ ಹೆಸರು ನೆನಪಿದೆ. ನನ್ನ ಟ್ರೀಟ್ ಮೆಂಟ್ ನ ಮೊದಲ ಭಾಗ ಏನೆಂದರೆ,  ನೀವು ಆ ಶಾಲೆಗೆ ಹೋಗಿ, ಅಲ್ಲಿನ ಮುಖ್ಯೋಪಾಧ್ಯಯರನ್ನ ಭೇಟಿ ಮಾಡಿ  ನಿಮ್ಮ 'ಕ್ಲಾಸ್ ರಿಜಿಸ್ಟರ್' ಇನ್ನೂ ಇದ್ದರೆ ಅದನ್ನು ಪತ್ತೆ ಮಾಡಿ, ನಿಮ್ಮ ಗೆಳೆಯರ ಹೆಸರುಗಳನ್ನು ಬರೆದುಕೊಂಡು, ಅವರ ಪ್ರಸ್ತುತ ಯೋಗಕ್ಷೇಮದ ಬಗ್ಗೆ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿ. ಅವರ ಬಗ್ಗೆ ನಿಮಗೆ ಸಿಗುವ ಎಲ್ಲಾ ಮಾಹಿತಿಯನ್ನು ಬರೆದು ಒಂದು ತಿಂಗಳ ನಂತರ ನನ್ನನ್ನು ಭೇಟಿ ಮಾಡಿ..❗ ಎಂದು ಅವರನ್ನ ಬೀಳ್ಕೊಟ್ಟರು.

ಆ ಹಿರಿಯರು ತಾವು ಓದಿದ ಶಾಲೆಗೆ ಹೋಗಿ, ಅಲ್ಲಿನ ಮುಖ್ಯೋಪಾದ್ಯಯರನ್ನ ಭೇಟಿ ಮಾಡಿ, ಅಂದಿನ ರಿಜಿಸ್ಟರ್ ಅನ್ನು ಪಡೆದು, ತನ್ನ ಸಹಪಾಠಿಗಳ ಪ್ರತಿ ಹೆಸರನ್ನು ಬರೆದುಕೊಂಡರು. ಅದರಲ್ಲಿ ಒಟ್ಟು 120 ಹೆಸರುಗಳಿದ್ದವು. ಅವರು ಒಂದು ತಿಂಗಳು ಹಗಲಿರುಳು ಪ್ರಯತ್ನಿಸಿ ಸಾಧ್ಯವಾದಷ್ಟು ಜನರ ಸ್ಥಿತಿಗತಿಯನ್ನು ದಾಖಲಿಸುತ್ತ ಹೋದರು.

▪️ಅವರಲ್ಲಿ 20 ಮಂದಿ ಈಗಾಗಲೇ ಮರಣ ಹೊಂದಿದ್ದರು. 

▪️ 4 ಜನರು ವಿಧವೆಯರಾಗಿದ್ದರು

▪️ 4 ಜನರು ವಿದುರರಾಗಿದ್ದರು

▪️13 ಮಂದಿ ವಿಚ್ಛೇದನ ಪಡೆದಿದ್ದರು.

▪️10 ಮಂದಿ ಕುಡುಕರು ಮತ್ತು ಮಾದಕ ವ್ಯಸನಿಗಳಾಗಿದ್ದರು.

▪️ 5 ಜನರ ಬದುಕು ಶೋಚನೀಯವಾಗಿತ್ತು, 

▪️ 6 ಜನರು ನಂಬಲು ಸಾಧ್ಯವಾಗದಷ್ಟು ಶ್ರೀಮಂತರಾಗಿದ್ದರು.

▪️ಕೆಲವು ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದರು.

▪️ಕೆಲವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು,

▪️ಕೆಲವರು ಮಧುಮೇಹಿಗಳು,

▪️ಕೆಲವರು ಆಸ್ತಮಾ ರೋಗಿಗಳು,

▪️ ಕೆಲವರು ಹೃದ್ರೋಗ ರೋಗಿಗಳು.

▪️ ಕೆಲವರು ಕೈ/ಕಾಲು ಅಥವಾ ಬೆನ್ನುಹುರಿಗೆ ಗಾಯಗಳಾಗಿ ಹಾಸಿಗೆಯಲ್ಲಿದ್ದರು.

▪️ ಕೆಲವರ ಮಕ್ಕಳು ಮಾದಕವ್ಯಸನಿಗಳು, ಅಲೆಮಾರಿಗಳು, ಕೆಲವರು ಮನೆಬಿಟ್ಟು ಹೋಗಿದ್ದರು.

▪️ ಒಬ್ಬರು ಜೈಲಿನಲ್ಲಿದ್ದರು.

▪️ ಮತ್ತೊಬ್ಬ ಎರಡು ವಿಚ್ಛೇದನದ ನಂತರ ಒಬ್ಬ ವ್ಯಕ್ತಿಯು ಮೂರನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದನು.

ಇಷ್ಟು ವಿವರ ಮಾತ್ರ ಪಡೆಯಲು ಸಾಧ್ಯವಾಯಿತು. ಕೇವಲ ಎಪ್ಪತ್ತು ಎಂಬತ್ತು ಜನರ ಸ್ಥಿತಿಗತಿ ಹೀಗಿತ್ತು. ಎಲ್ಲವನ್ನ ದಾಖಲಿಸಿಕೊಂಡು ವೈದ್ಯರನ್ನ ಭೇಟಿ ಮಾಡಿದರು.

ವೈದ್ಯರು ಪಟ್ಟಿಯನ್ನು ನೋಡಿ, ವಾವ್ ಅದ್ಭುತವಾದ ಕೆಲಸ ಮಾಡಿದ್ದೀರಿ, ಎಷ್ಟೆಲ್ಲ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿದ್ದೀರಿ. ನೀವು ತುಂಬಾ ಗ್ರೇಟ್ ಎಂದು ಹೊಗಳಿದರು. "ಈಗ ನಿಮ್ಮ ಖಿನ್ನತೆ ಹೇಗಿದೆ" ಎಂದು ಪ್ರಶ್ನೆ ಹಾಕಿದರು.

ಆ ಹಿರಿಯರಿಗೆ ಸಂಪೂರ್ಣವಾಗಿ ಅರಿವಾಯಿತು.

▪️ ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ,

▪️ ಅವರು ಹಸಿವಿನಿಂದ ಬಳಲುತ್ತಿರಲಿಲ್ಲ,

▪️ ಅವರ ಮನಸ್ಸು ಪರಿಪೂರ್ಣವಾಗಿತ್ತು,

▪️ ಅವರು ದುರದೃಷ್ಟವಂತನಾಗಿರಲಿಲ್ಲ.

▪️ ತನ್ನ ಹೆಂಡತಿ ಮತ್ತು ಮಕ್ಕಳು ತುಂಬಾ ಒಳ್ಳೆಯವರು ಮತ್ತು ಆರೋಗ್ಯವಂತರಾಗಿದ್ದಾರೆ.

▪️ ತಾವು ತುಂಬಾ ಅದೃಷ್ಟವಂತರು ಎಂದು ಭಾವಿಸಿದರು.

▪️ ಸ್ವತಃ ಅವರು ಸಹ ಆರೋಗ್ಯವಾಗಿದ್ದರು, ಅವರು ದಿನಕ್ಕೆ ಮೂರು ಊಟವನ್ನು ಸಂಪೂರ್ಣವಾಗಿ ಜೇರ್ಣಿಸಿಕೊಳ್ಳವರಾಗಿದ್ದರು. 

▪️ ತಮ್ಮ ಸ್ನೇಹಿತರ ಮುಂದೆ ಇವರ ಸಮಸ್ಯೆಗಳು ಪೇಲವವಾಗಿದ್ದವು. 


ಜಗತ್ತಿನಲ್ಲಿ ಕೆಲ ಜನರು ನಿಜಕ್ಕೂ ಕಷ್ಟ ಅನುಭವಿಸುತಿದ್ದಾರೆ. ಕೆಲವರು ಬಹಳಷ್ಟು ದುಃಖಿಗಳು. ಅವರಿಗೆ ಹೋಲಿಸಿದರೆ ತಾನು ತುಂಬಾ ಸಂತೋಷದಿಂದ್ದೇನೆ ಮತ್ತು ತಾನು ನಿಜಕ್ಕೂ ಅದೃಷ್ಟಶಾಲಿ ಎಂದು ಆ ವ್ಯಕ್ತಿ ಅರಿತುಕೊಳ್ತಾನೆ.

ಅರ್ಥ ಆಯಿತು ಡಾಕ್ಟ್ರೆ, ನನಗೆ ಯಾವುದೇ ಸಮಸ್ಯೆ ಇಲ್ಲ. ಏನೇನೋ ಯೋಚಿಸಿ, ಮನಸ್ಸನ್ನ ಕೆಡಿಸಿಕೊಳ್ತಿದ್ದೆ. ಜೀವನ ಬಂದಹಾಗೆ ಸ್ವೀಕರಿಸುತ್ತ ಹೋಗಬೇಕು ಎನ್ನುವುದನ್ನ ಮರೆತಿದ್ದೆ. ಏನು ಆಗಬೇಕು ಅಂತ ಭಗವಂತ ನಿರ್ಧರಿಸಿರುತ್ತಾನೋ, ಅದು ಹಾಗೆಯೇ ನಡೆಯುತ್ತ ಹೋಗುತ್ತೆ. ಚಿಂತೆ ಮಾಡಿ ಪ್ರಯೋಜನವಿಲ್ಲ, ಬರ್ತೀನಿ ಡಾಕ್ಟ್ರೆ. ಧನ್ಯವಾದಗಳು ಎಂದು ಅಲ್ಲಿಂದ ಹೊರಟರು.

*******

ಜೀವನ ಪಾಠ ಏನೆಂದರೆ, ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಬಾರದು. ಇನ್ನೊಬ್ಬರ ತಟ್ಟೆಗಳಲ್ಲಿ ಇಣುಕಿ ನೋಡುವ ಅಭ್ಯಾಸವನ್ನು ಬಿಡಿ,  ನಮ್ಮ ತಟ್ಟೆಯಲ್ಲಿನ ಆಹಾರವನ್ನು ಪ್ರೀತಿಯಿಂದ ತೆಗೆದುಕೊಂಡು ಸೇವಿಸಬೇಕು. ಪ್ರತಿಯೊಬ್ಬರೂ ಅವರವರ ಹಣೆಬರಹದ ಪ್ರಕಾರ ಜೀವನ ನಡೆಸುತಿದ್ದಾರೆ. ನಾವು ಸಹ ಅಷ್ಟೆ, ಅದೇ ಸಮಾನಗತಿಯಲ್ಲಿ ಜೀವಿಸುತಿದ್ದೇವೆ, ನಾವು ಬೇರೆಯವರಿಗಿಂತ ತಡವಾಗಿ ಅಥವಾ ಮುಂಚೆ ಎನ್ನುವ ಭಾವ ಇಲ್ಲವೇ ಇಲ್ಲ.

ಪಾಲಿಗೆ ಬಂದದ್ದು ಪಂಚಾಮೃತ, ಒಳ್ಳೆಯದು ಅಥವಾ ಕೆಟ್ಟದ್ದು, ದೊಡ್ಡದು ಅಥವಾ ಚಿಕ್ಕದು, ಭೇದ ಭಾವ ಸಲ್ಲದು. ಇವತ್ತು ದೇವರು ಕೊಟ್ಟಿರುವ ಉತ್ತಮ ಜೀವನಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮುಂದೆ ಸಾಗೋಣ. ಈ ಜಗತ್ತಿಗೆ ನಾವು ಒಬ್ಬ ಪ್ರಯಾಣಿಕ ನಿದ್ದಂತೆ, ಪ್ರಯಾಣದಲ್ಲಿ ಎಲ್ಲವನ್ನ ಅನುಭವಿಸುತ್ತ ಸಾಗಬೇಕು, ನಮ್ಮ ನಿಲ್ದಾಣ ಬಂದಾಗ ಇಳಿದು ಹೋಗುತ್ತಿರಬೇಕು. 

ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದಂತೆ, 

''ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|

ಮಾ ಕರ್ಮಫಲಹೇತುರ್ಭೂ ಮಾ ತೇ ಸಂಗೋಸ್ತ್ವಕರ್ಮಣಿ||''


ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ  ಕೆಲಸದಲ್ಲಿ ಮಾತ್ರ ಹಕ್ಕನ್ನು ಹೊಂದಿರುತ್ತಾನೆ ವಿನಃ, ಅದರ ಫಲಿತಾಂಶಗಳಲ್ಲಿ ಅಲ್ಲ. ಆದ್ದರಿಂದ, ನಿಮ್ಮ ಕ್ರಿಯೆಗಳ ಫಲಿತಾಂಶಗಳ ಬಗ್ಗೆ ಹೆಚ್ಚು ಯೋಚಿಸಬೇಡಿ ಅಥವಾ ನೀವು ಮಾಡುವ ಕೆಲಸದಲ್ಲಿ ಫಲ ಸಿಗುತ್ತದೆಯೇ..? ಅಥವಾ ಇಲ್ಲವೇ..? ಎಂಬುದರ ಬಗ್ಗೆ ಯೋಚಿಸದಿರಿ. ಇಷ್ಟು ಅರ್ಥ ಮಾಡಿಕೊಂಡರೆ ಜೀವನ ತುಂಬಾ ಸರಳ. 

ವಿ.ಸೂ:  ಈ ಲೇಖನದ ಮೂಲ ಇಂಗ್ಲೀಷಿನಲ್ಲಿ ಯಾರೋ ಬರೆದಿದ್ದು, ತುಂಬಾ ಚೆಂದದ ಬರಹ. ಇದನ್ನ ಕನ್ನಡಕ್ಕೆ ಭಾವಾನುವಾದ ಮಾಡಿ ಜನರಿಗೆ ಜೀವನದ ವಿಷಯವನ್ನ ಸರಳವಾಗಿ ಹೇಳುವ ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೀನಿ. ಧನ್ಯವಾದಗಳು.

PS.Photo is just illustrative, not relevant to above Article




ಸೋಮವಾರ, ಜೂನ್ 10, 2024

ಕರ್ನಾಟಕಕ್ಕೆ ನಾಲ್ಕು ಮಂತ್ರಿ ಸ್ಥಾನ ನೀಡಿ, ಬಿಜೆಪಿ ಹೈಕಮಾಂಡ್ ಏನು ಸಂದೇಶ ನೀಡಲು ಹೊರಟಿದೆ?

ಶ್ರೀ ನರೇಂದ್ರ ಮೋದಿ ಅವರು 09-06-2024 ರಂದು ಮೂರನೇ ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಜತೆಯಲ್ಲಿ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಜೆಡಿಎಸ್‌ನ  ಹೆಚ್‌ ಡಿ ಕುಮಾರಸ್ವಾಮಿ, ಪ್ರಹ್ಲಾದ್‌ ಜೋಷಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್‌ ಸಚಿವರಾಗಿದ್ದಾರೆ. ನಿರ್ಮಲಾ ಸೀತಾರಾಮನ್‌ ಹೊರತು ಪಡಿಸಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ವಿಂಗಡಿಸಿ ನೋಡೋದಾದ್ರೆ, ಉತ್ತರ ಕರ್ನಾಟಕದಿಂದ ಕೇವಲ ಒಬ್ಬರಿಗೆ ಮಾತ್ರ ಮತ್ತು ದಕ್ಷಿಣ ಕರ್ನಾಟಕ ದಿಂದ ಮೂವರಿಗೆ ಮಂತ್ರಿಯಾಗುವ ಅವಕಾಶ ದೊರೆತಿದೆ. NDA ಪಾಲುದಾರರಾಗಿರುವುದರಿಂದ ಸಹಜವಾಗಿ ಜೆಡಿಎಸ್‌ನ  ಹೆಚ್‌.ಡಿ.ಕುಮಾರಸ್ವಾಮಿಗೆ ಮಂತ್ರಿ ಪದವಿ ಅನಾಯಾಸವಾಗಿ ಒಲಿದು ಬಂದಿದೆ. ಪ್ರಹ್ಲಾದ್‌ ಜೋಷಿ ಒಬ್ಬ ಅನುಭವಿ ರಾಜಕಾರಣಿ ಯಾಗಿರುವುದರಿಂದ ಅವರನ್ನ ಮತ್ತೊಮ್ಮೆ ಕ್ಯಾಬಿನೆಟ್ ಮಂತ್ರಿಯನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪರ ಬಳಗದಲ್ಲಿ ಗುರುತಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಂದು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. ಅಚ್ಚರಿಯ ಸನ್ನಿವೇಶದಲ್ಲಿ ವಿ. ಸೋಮಣ್ಣನವರು ರಾಜ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡಿನ ಸಂದೇಶದಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ನಿಂತು ಸೋತಿದ್ದ ಇವರು ಇದೀಗ ತುಮಕೂರು ಲೋಕಸಭೆಯಿಂದ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. 

    ಮೋದಿ ನೇತೃತ್ವದ ಎನ್ಡಿಎ ಸರಕಾರ ಮೂರನೆ ಬಾರಿ ಅಧಿಕಾರಕ್ಕೇರಿ, ಈಗ ಸೋಲು ಗೆಲುವಿನ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ.    ಕಳೆದ ಬಾರಿ 25 ಕ್ಷೇತ್ರ ಗೆದ್ದು ಅತಿ ಹೆಚ್ಚು ಗಳಿಸುವ ವಿಶ್ವಾಸ ಹೊಂದಿದ್ದ  ಕರ್ನಾಟಕದಲ್ಲಿ ಈ ಬಾರಿ ಸೀಟ್ ಗಳು ಕಡಿಮೆಯಾಗಿದ್ದು ಬಿಜೆಪಿ ಹೈಕಮಾಂಡಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ಉತ್ತರ ಕರ್ನಾಟಕದ 12 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಲಿದಿರುವುದು ಕೇವಲ ಆರು. ದಕ್ಷಿಣ ಕರ್ನಾಟಕದ 16 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ ಗೆದ್ದಿರುವುದು, ಬರೋಬ್ಬರಿ 13 ಕ್ಷೇತ್ರಗಳು. 

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ, ಸುಲಭವಾಗಿ ಗೆಲ್ಲಬಹುದಾಗಿದ್ದ, ದಾವಣಗೆರೆ, ಚಿಕ್ಕೋಡೀ, ಬೀದರ್, ಬಳ್ಳಾರಿ, ಕೊಪ್ಪಳ ಕ್ಷೇತ್ರಗಳು ತಪ್ಪಿ ಹೋಗಿದೆ. ಕರ್ನಾಟಕದಲ್ಲಿ ಪ್ರತಿಬಾರಿ ಅಧಿಕಾರಕ್ಕೆ ಬಂದಾಗ ಲಿಂಗಾಯತ ಸಮುದಾಯಕ್ಕೆ ಅತಿ ಹೆಚ್ಚು ಪ್ರಾತಿನಿಧ್ಯ ಕೊಟ್ಟಿದ್ದರೂ ಸಹ ಸ್ಥಳೀಯ ನಾಯಕತ್ವ ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ಪಾಳಯದಲ್ಲಿ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಗೆ ಅತೀವ ಲಾಭವಾಗಿದೆ ಆದರೆ, ಈ ಬಾರಿ ಬೆಂಬಲಿಸುತಿದ್ದ ಲಿಂಗಾಯತರು ಬಿಜೆಪಿಯ ಕೈ ಹಿಡಿಯಲಿಲ್ಲ ಎನ್ನುವುದಕ್ಕಿಂತ, ಸ್ಥಳೀಯ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಲಿಲ್ಲ ಎನ್ನುವ ಬೇಸರ ಹೈಕಮಾಂಡಿನಲ್ಲಿದೆ. 

ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಗೆದ್ದರೂ, ಪಕ್ಕದ ದಾವಣಗೆರೆ ಕ್ಷೇತ್ರ ಉಳಿಸಿಕೊಳ್ಳಲಾಗಲಿಲ್ಲ. ಜಗದೀಶ ಶೆಟ್ಟರ್ ಬೆಳಗಾವಿ ಗೆದ್ದರೂ ಪಕ್ಕದ ಚಿಕ್ಕೋಡಿ ಗೆಲ್ಲಿಸಿಕೊಡಲಾಗಲಿಲ್ಲ, ಹೀಗಾಗಿ ಇವರಿಬ್ಬರಿಗೆ ಮಂತ್ರಿ ಪದವಿ ತಪ್ಪಿರಬಹುದು ಎಂದು ಊಹಿಸಲಾಗುತ್ತಿದೆ. ಅದೂ ಅಲ್ಲದೆ, ಇವರಿಬ್ಬರೂ ಮುಖ್ಯಮಂತ್ರಿಯಾಗಿ ಕೆಲಸಮಾಡಿರುವುದರಿಂದ ಬಿಎಸ್ ವೈ ವಿರೋಧಿ ಎಂದೇ ಗುರುತಿಸಿಕೊಂಡಿರುವ ಸೋಮಣ್ಣನಂತಹ ಲಿಂಗಾಯಿತ ನಾಯಕನಿಗೆ ಮಣೆ ಹಾಕಿದ್ದಾರೆ. ಬಿಎಸ್ ವೈ ಅವರ ಮಗ ಬಿ.ವೈ.ರಾಘವೇಂದ್ರ ಮೂರನೇ ಬಾರಿಗೆ ಸಂಸದರಾಗಿರುವುದರಿಂದ ಅವರಿಗೆ ಮಂತ್ರಿ ಪದವಿ ಸಿಗಬಹುದು ಎನ್ನುವ ಲೆಕ್ಕಾಚಾರವಿತ್ತು. ವಿಜಯೇಂದ್ರ ಕರ್ನಾಟಕದ ಅಧ್ಯಕ್ಷರಾಗಿರುವುದರಿಂದ, ರಾಘವೇಂದ್ರ ಅವರನ್ನ ಪರಿಗಣಿಸಲಿಲ್ಲ. 

    ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಕಡಿಮೆಯಾಗಿದೆ ಎನ್ನುವ ಮುನ್ಸೂಚನೆ ಬಿಜೆಪಿ ಹೈಕಮಾಂಡಿಗೆ ಮೊದಲೇ ದೊರಕಿತ್ತು. ಪಂಚ ಗ್ಯಾರಂಟಿಯಿಂದಾಗಿ  ಕಾಂಗ್ರೆಸ್ ಪಾಳಯ 18-20 ಸೀಟ್ ಗಳನ್ನ ಗಳಿಸುವ ವಿಶ್ವಾಸ ಹೊಂದಿತ್ತು. ಈ ಸೂಚನೆ ಮೊದಲೆ ಸಿಕ್ಕಿದ್ದರಿಂದ  ಬಿಜೆಪಿ ಹೈಕಮಾಂಡ್, ಜೆಡಿಎಸ್ ಜತೆಗೆ ಮೈತ್ರಿ ಮುಂದಾಯಿತು. ಜೆಡಿಎಸ್ ಮೈತ್ರಿಯಿಂದಾಗಿ, ಒಕ್ಕಲಿಗರು ಸಂಪೂರ್ಣವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಇದಕ್ಕೆ ಪುಷ್ಟಿ ನೀಡುವಂತೆ ಒಕ್ಕಲಿಗ ಬೆಲ್ಟ್ ನಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಎರಡು ಕ್ಷೇತ್ರಗಳು. 

    ಈಬಾರಿ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ - 9, ಒಕ್ಕಲಿಗರಿಗೆ - 3, ಬ್ರಾಹ್ಮಣರಿಗೆ - 2, ಪರಿಶಿಷ್ಟ ಜಾತಿಯವರಿಗೆ - 4  ವಾಲ್ಮೀಕಿ ಜನಾಂಗದವರಿಗೆ - 2, ಬಂಜಾರ,   ಕ್ಷತ್ರಿಯ, ಬಲಿಜ, ಬಂಟ್ಸ್ ಮತ್ತು ಬಿಲ್ಲವ ಸಮುದಾಯಕ್ಕೆ ತಲಾ 1 ಟಿಕೆಟ್ ನೀಡಲಾಗಿದೆ. ಈ ಸಾರಿ ಕಂಪ್ಲೀಟ್ ಸ್ವೀಪ್ ಮಾಡಬೇಕೆಂದು, ಯಡಿಯೂರಪ್ಪ ಹೇಳಿದವರಿಗೆ ಪಕ್ಷ ಟಿಕೆಟ್ ಕೊಟ್ಟರೂ ಸಹ, ಈ ಬಾರಿ 17ಕ್ಕೆ ಕುಸಿದಿರುವುದರಿಂದ ತೀವ್ರ ಅಸಮಧಾನಗೊಂಡಿರುವ ಬಿಜೆಪಿಯ ಹೈಕಮಾಂಡ್, ಮುಂಬರುವ ಚುನಾವಣೆಗಳಲ್ಲಿ ಇದೇ ರೀತಿ ಕೆಲಸ ಮಾಡಿದರೆ, ಈಗಿರುವ ಸ್ಥಳೀಯ ನಾಯಕತ್ವವನ್ನ ಬದಲಾಯಿಸಬೇಕಾಗಬಹುದು ಎಂದು ಯಡಿಯೂರಪ್ಪ ಬಳಗಕ್ಕೆ ಬಲವಾದ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ. 

    ಇವೆಲ್ಲಾ ಏನೇ ಇದ್ದರೂ, ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದಿದ್ದೆ. ಜಾತಿ ಲೆಕ್ಕಾಚಾರಕ್ಕಿಂತ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣವನ್ನ ಎಲ್ಲಾ ನಾಯಕರು ರೂಡಿಸಿಕೊಳ್ಳಬೇಕಿದೆ. ಮುಂಬರುವ ಚುನಾವಣೆಗಳಿಗೆ ಈಗಿನಿಂದಲೇ ಕಾರ್ಯತಂತ್ರ ರೂಪಿಸುವುದು ಅಗತ್ಯ. ಕಾಂಗ್ರೆಸ್ಸಿನ ಗ್ಯಾರಂಟಿಯ ಹೊಡೆತದಿಂದ ಬಚಾವಾಗುವ ಸನ್ನಿವೇಶ ಸೃಷ್ಟಿಯ ಅಗತ್ಯತೆ ಇದೆ. ಕೇವಲ ಮೋದಿ ಅಲೆ, ಮೋದಿ ಮುಖ ನೋಡಿ ಜನ ಓಟ್ ಹಾಕುತ್ತಾರೆ ಎನ್ನುವ ಭ್ರಮೆಯಿಂದ ಹೊರಬಂದು ಎಲ್ಲಾ ನಾಯಕರು ಪಕ್ಷ ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ಸಿನ ಪ್ರತಿಯೊಂದು ತಪ್ಪನ್ನ ಹುಡುಕಿ ಜನರ ಮುಂದೆ ಕೊಂಡೋಯ್ದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಹೋರಾಡಲು ಸಾಧ್ಯವಾಗುತ್ತದೆ. ಇಲ್ಲದೆ ಇದ್ದರೆ, ಕಾಂಗ್ರೆಸ್ಸಿನ ಅಹಿಂದ ರಾಜಕಾರಣ ಮತ್ತು ಹೊಸ ಗ್ಯಾರಂಟಿಗಳ ಅಲೆಯಲ್ಲಿ ಕೊಚ್ಚಿಹೋಗುವುದು ನಿಶ್ಚಿತ. ಸೋಲಿನ ಬೇಗುದಿ, ಕಾಂಗ್ರೆಸ್ ನಲ್ಲಿಯೂ ಜೋರಾಗಿಯೆ ಇದೆ.  ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಹ ಡಿಕೆಶಿ ಮತ್ತು ಸಿದ್ದರಾಮಯ್ಯನವರ ಮೇಲೆ ಬೇಸರಿಸಿಕೊಂಡಿದ್ದಾರೆ. ಅಲ್ಲೂ ನಾಯಕತ್ವ ಬದಲಾದರೂ ಅಚ್ಚರಿಯಿಲ್ಲ. 


ಗುರುವಾರ, ಜೂನ್ 6, 2024

ಕೈ ಪಾಲಾದ ಕಲ್ಯಾಣ ಕರ್ನಾಟಕ



 2024ರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.  ಕಳೆದ ಬಾರಿ ಮಾತ್ರ ಬಿಜೆಪಿ ಪಕ್ಷ ಪ್ರಾಬಲ್ಯ ಸಾಧಿಸಿತ್ತು, ಈ ಬಾರಿ ಕಾಂಗ್ರೆಸ್ಸಿನ ಅದೃಷ್ಟ ಖುಲಾಯಿಸಿದೆ. ಈ ಕ್ಷೇತ್ರಗಳ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ, ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳು ಮುಂಚೆಯಿಂದಲೂ ಕಾಂಗ್ರೆಸ್ಸಿನ ಭದ್ರಕೋಟೆಯಾಗಿಯೇ ಇತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಹನ್ನೆರೆಡಕ್ಕೂ ಹೆಚ್ಚುಬಾರಿ ಕಾಂಗ್ರೆಸ್ ಜಯಗಳಿಸಿದೆ.  ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮುಸ್ಲಿಂ, ಕುರುಬ ಮತ್ತು ಹಿಂದುಳಿದ ವರ್ಗದವರ ಮತಗಳೇ ನಿರ್ಣಾಯಕ. 

    ಈ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ (SC), ವರ್ಗ(ST), ಹಿಂದುಳಿದ ವರ್ಗ (OBC) ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರೇ ಅಧಿಕವಾಗಿದ್ದಾರೆ. ಈ ಸಮುದಾಯಗಳು ಆರ್ಥಿಕವಾಗಿ ಹಿಂದುಳಿರುವುದರಿಂದ ಬೆಂಗಳೂರು. ಕರಾವಳಿ ಮಲೆನಾಡು ಕಡೆ ದುಡಿಯುವುದಕ್ಕೆ ಹೋಗುವಂತಹವರು. ಹೀಗಾಗಿ ಇಲ್ಲಿನ ಹೆಚ್ಚಿನ ಮಕ್ಕಳು ತುಮಕೂರಿನ ಸಿದ್ದಗಂಗ ಮಠದಲ್ಲಿ ಉಚಿತ ಶಿಕ್ಷಣ ಪಡೆಯುತಿದ್ದಾರೆ. ಅತ್ಯಂತ ಮುಗ್ಧ ಜನರು ಇವರು, ಯಾರಾದರು ಆಸೆ ತೋರಿಸಿದರೆ ಅದಕ್ಕೆ ಮಾರು ಹೋಗುವಂತಹ ಮುಗ್ಧರು. ಹೀಗಿರುವಾಗ, ಇಷ್ಟು ವರ್ಷಗಳ ಕಾಲ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು  ಇವರನ್ನು ವೋಟಿಗಾಗಿ ಬಳಸಿಕೊಂಡಿದ್ದಾರೆ ವಿನಹ ಅಭಿವೃದ್ದಿ ಪಡಿಸುವಂತಹ ಕೆಲಸಕ್ಕೆ ಹೋಗಿಲ್ಲ. ಈ ಬಾರಿ ಕಾಂಗ್ರೆಸ್ಸಿನ ಗ್ಯಾರಂಟಿಗಾಗಿ ಜನ ಮರುಳಾಗಿರುವುದ್ದಾರೆ.

    ಮೈಸೂರು, ಬೆಂಗಳೂರು, ಮಲೆನಾಡು ಮತ್ತು ಕರಾವಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಆರ್ಥಿಕವಾಗಿ ಪ್ರಬಲವಾಗಿಲ್ಲ. ಶೈಕ್ಷಣಿಕವಾಗಿ ಸಹ ಹಿಂದುಳಿವೆ. ಬಿಸಿಲ ನಾಡು ಬರಪ್ರದೇಶ ಎಂದೇ ಹೆಸರುವಾಸಿ, ತುಂಗಭದ್ರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು, ಕೃಷ್ಣಾ ನದಿ ಹರಿಯುವ ಪ್ರದೇಶದ ಹಳ್ಳಿಗಳು ಬಿಟ್ಟರೆ ಮಿಕ್ಕೆಲ್ಲ ಪ್ರದೇಶ ಮಳೆಯಾಧಾರಿತ. ಅಲ್ಲಿನ ಜನರು ಬಹುತೇಕ ಬಡವರು,  ಬಳ್ಳಾರಿ ಮತ್ತು ಹೊಸಪೇಟೆ ಮಾತ್ರ ಸ್ವಲ್ಪ ಮುಂದುವರಿದಿದೆ ಎನ್ನಬಹುದು ಬಿಟ್ಟರೆ, ಮಿಕ್ಕೆಲ್ಲ ಜಿಲ್ಲೆಗಳು ಅತೀ ಹಿಂದುಳಿವೆ. ಇನ್ನೂ ಸಹ ಈ ಭಾಗವನ್ನು ಅಭಿವೃದ್ದಿ ಪಡಿಸಲಿಕ್ಕೆ ಸಾಧ್ಯವಾಗಿಲ್ಲ. ಇಲ್ಲಿನ ಪೂರ್ವಜರು ಹೈದರಬಾದಿನ ನಿಜಾಮರ ಆಡಳಿತ ಕಾಲದಲ್ಲಿ ರಜಾಕರ ದಾಳಿಗೆ ನೊಂದು ಬೆಂದವರು. 

    ಚುನಾವಣೆ ರಾಜಕೀಯ ಎಂದ ಮೇಲೆ ಪ್ರತಿಯೊಂದು ಜಾತಿ ಸಮುದಾಯ ಮತಗಳು ಸಹ ನಿರ್ಣಾಯಕವಾಗುತ್ತವೆ. ಬುದ್ದಿವಂತರು ವಿವೇಚಿಸಿ ಮತನೀಡುತ್ತಾರೆ, ಕೆಲವರು ಜಾತಿ ಅಥವ ಹಣದ ಆಮಿಷಕ್ಕೆ ಒಳಗಾಗುತ್ತಾರೆ. ಒಂದು ಕ್ಷೇತ್ರದಲ್ಲಿ ಎರಡು ಪಕ್ಷದವರು ಒಂದೇ ಜಾತಿಯವರಾದರೂ ಸಹ, ಮುಂಬರುವ ದಿನಗಳಲ್ಲಿ ಯಾವ ಪಕ್ಷದಿಂದ ಅವರ ಸಮುದಾಯಕ್ಕೆ ಬೆಂಬಲ ಸಿಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಉದಾ: ಪರಿಶಿಷ್ಟ ಜಾತಿ (SC), ವರ್ಗ(ST), ಜನರು ಯಡಿಯೂರಪ್ಪ ದೇವೆಗೌಡರಿಗಿಂತ, ಸಿದ್ದರಾಮಯ್ಯ, ಖರ್ಗೆ ಮೇಲೆ ನಂಬಿಕೆ ಜಾಸ್ತಿ. ಹಾಗೆಯೇ ಅಂದಾಜು 15% ಇರುವ ಮುಸ್ಲಿಂ ಸಮುದಾಯ ಪಕ್ಕಾ ಕಾಂಗ್ರೆಸ್ಸಿಗೆ ಹಾಕುವುದು ನಿಶ್ಚಿತ. ಅದೇ ರೀತಿ 50 ರಿಂದ 60% ಪರಿಶಿಷ್ಟ ಜಾತಿ (SC), ವರ್ಗ(ST),  ಖಂಡಿತ ಕಾಂಗ್ರೆಸಿಗೆ ಹಾಕುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕುರುಬರ ಓಟುಗಳು ಸಹ ಕಾಂಗ್ರೆಸ್ಸಿಗೆ. ಇನ್ನು ಕಾಂಗ್ರೆಸಿನ ಪಂಚ ಗ್ಯಾರಂಟಿ ಕೆಲವರಿಗೆ ಪಥ್ಯವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ ಕಾಂಗ್ರೆಸ್ಸಿಗೆ ಈ ಭಾಗ ಕೈಹಿಡಿದಿರುವುದು ಸ್ಪಷ್ಟವಾಗುತ್ತಿದೆ.

ಬೀದರ್ ಲೋಕಸಭಾ ಕ್ಷೇತ್ರ:

ಈ ಕ್ಷೇತ್ರದಲ್ಲಿ ೧೦ ಬಾರಿ ಕಾಂಗ್ರೆಸ್, ೭ ಬಾರಿ ಬಿಜೆಪಿ,  ಗೆಲುವು ಸಾಧಿಸಿದೆ. ಎಂದಿನಂತೆ, ಕಾಂಗ್ರೆಸ್ ದಲಿತ, ಹಿಂದುಳಿದ ಮತ್ತು ಮುಸ್ಲಿಂ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಬಿಜೆಪಿ ಹೆಚ್ಚಾಗಿ ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿದ್ದರು ಸಹ ಈಶ್ವರ್ ಖಂಡ್ರೆ ಯವರ ಸತತ ಪರಿಶ್ರಮದಿಂದ ಈ ಬಾರಿ ಬಿಜೆಪಿಗೆ ಸೋಲಾಯಿತು. ಈ ಬಾರಿ ಆಳಂದದಲ್ಲಿ ಮಾತ್ರ ಬಿಜೆಪಿಗೆ ಮುನ್ನೆಡೆ ದೊರೆತಿದೆ ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ಸಿನ ಸಾಗರ್ ಈಶ್ವರ್ ಖಂಡ್ರೆ ಅವರು ಬಿಜೆಪಿಯ ಭಗವಂತ್ ಖೂಬಾ ವಿರುದ್ಧ 1 ಲಕ್ಷದ 28 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು 4,66,000 ಮಂದಿ ಇದ್ದರೆ, SC, ST ಸಮುದಾಯದ ಮತದಾರರು 4,26,000 ಮಂದಿ ಇದ್ದಾರೆ. ಇನ್ನು ಮುಸ್ಲಿಂ - 2,31,000, ಲಂಬಾಣಿ - 1,50,000, ಕುರುಬ - 97,000, ಮರಾಠ - 1,60,000 ಹಾಗೂ ಇತರೇ ಸಮುದಾಯದ ಮತಾದರರು 3,13,787 ಮಂದಿ ಇದ್ದಾರೆ.

ಗುಲ್ಬರ್ಗ ಲೋಕಸಭಾ ಕ್ಷೇತ್ರ:- . 

ಈವರೆಗೆ ನಡೆದಿರುವ 18 ಚುನಾವಣೆಗಳಲ್ಲಿ ಕಾಂಗ್ರೆಸ್ 15 ಬಾರಿಗೆ ಗೆದ್ದಿದೆ. 90ರ ದಶಕದಲ್ಲಿ ಒಮ್ಮೆ ಜನತಾ ದಳ, ಎರಡು ಬಾರಿ ಬಿಜೆಪಿ ಇಲ್ಲಿ ಜಯ ಕಂಡದ್ದು ಬಿಟ್ಟರೆ ಇಲ್ಲಿ ಕೈ ಪಾಳಯದ್ದೇ ಮೇಲುಗೈ. ಪರಿಶಿಷ್ಟ ಜಾತಿ (SCಗಳು):  24%, ಪರಿಶಿಷ್ಟ ಪಂಗಡಗಳು (STಗಳು): 3%, ಮುಸ್ಲಿಂ: 24%. ಹಿಂದುಳಿದ ವರ್ಗ: 27%, ಇತರೆ 22%.  ಈ ಲೆಕ್ಕಾಚಾರ ನೋಡಿದರೆ, ಕಾಂಗ್ರೆಸ್ಸಿಗೆ ಗೆಲುವು ಸುಲಭ ಮತ್ತು ಸಹಜ.

ಕಾಂಗ್ರೆಸ್ಸಿನ ರಾಧಾಕೃಷ್ಣ ದೊಡ್ಡಮನಿ ಅವರು ಬಿಜೆಪಿಯ ಡಾ. ಉಮೇಶ್ ಜಾಧವ್ ವಿರುದ್ಧ ಕೇವಲ 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ನಿರ್ಣಾಯಕ ಪಾತ್ರವಹಿಸಿದ ಮುಸ್ಲಿಂ ಮತದಾರರು ಮಾತ್ರ

ಜಾಧವ್​ ವಿರುದ್ಧ ಗೆಲ್ಲಲು ಕಾರಣವಾಗಿದ್ದು, ಕಲಬುರಗಿ ಉತ್ತರ ಕ್ಷೇತ್ರ. ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ (ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ದಿವಂಗತ ಕಮರ್-ಉಲ್-ಇಸ್ಲಾಂ ಅವರ ಪತ್ನಿ) ಪತ್ರಿನಿಧಿಸುವ ಕಲಬುರಗಿ ಉತ್ತರ ಕ್ಷೇತ್ರವೊಂದರಲ್ಲೇ ಕಾಂಗ್ರೆಸ್‌ ಬರೋಬ್ಬರಿ 51,729 ಮತಗಳ ಭಾರೀ ಮುನ್ನಡೆ ತಂದುಕೊಂಡಿದೆ. ಈ ಮೂಲಕ ಮೂಲಕ ಉಳಿದ ಕ್ಷೇತ್ರಗಳಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಈ ಕ್ಷೇತ್ರ ನೆರವಾಯಿತು. ಮುಸ್ಲೀಮ್ ಬಾಹುಳ್ಯವಿರುವ ಕ್ಷೇತ್ರದಲ್ಲಿ ಡಾ.ಜಾಧವ್ ಇಲ್ಲಿ 70,313 ಮತಗಳನ್ನ ಪಡೆದರೆ, ದೊಡ್ಡಮನಿ ಬರೋಬ್ಬರಿ 1,22,042 ಮತಗಳನ್ನು ಪಡೆದರು. ದೊಡ್ಡ ಅಂತರವೇ ಅವರ ಗೆಲುವಿಗೆ ಕಾರಣವಾಯಿತು.

ರಾಯಚೂರು ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 14 ಬಾರಿ ಕಾಂಗ್ರೆಸ್, 2 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 1 ಬಾರಿ ಜನತಾದಳ ಗೆಲುವು ಸಾಧಿಸಿದೆ.  ಪರಿಶಿಷ್ಟ ಜಾತಿ – 18%, ಪರಿಶಿಷ್ಟ ಪಂಗಡ – 19%, ಲಿಂಗಾಯತ – 16%,  ಕುರುಬ ಸಮುದಾಯ – 13% ಮುಸ್ಲಿಂ – 15% ಇತರೆ – 19%.  ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜ. ಕಾಂಗ್ರೆಸ್ಸಿನ ಕುಮಾರ್ ನಾಯಕ್ ಅವರು ಬಿಜೆಪಿಯ ರಾಜಾ ಅಮರೇಶ್ವರ ನಾಯಕ್  ವಿರುದ್ಧ  79 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಕೊಪ್ಪಳ ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 10 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 2 ಬಾರಿ ಜನತಾದಳ  ಗೆಲುವು ಸಾಧಿಸಿದೆ. ಲಿಂಗಾಯತ 27%, ಕುರುಬ 21%, SC 21%, ಮುಸ್ಲಿಂ –  10% , ಇತರೆ – 21%. ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜವಾಗಿ ದೊರೆತಿದೆ. ಎರಡು ಬಾರಿ ಬಿಜೆಪಿಯಿಂದ ವಿಜಯಿಯಾಗಿದ್ದ ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡದೆ ಇರುವುದು ಸಹ ಬೀಜೆಪಿ ಸೋಲಲು ಒಂದು ಕಾರಣ ಎಂದು ಹೇಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದ್ದರೆ, ಗಂಗಾವತಿಯಲ್ಲಿ ಕೆಆರ್‌ಪಿಪಿಯಿಂದ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಷ್ಟಗಿಯಿಂದ ಬಿಜೆಪಿಯ ದೊಡ್ಡನಗೌಡ ಪಾಟೀಲ್‌ ಗೆದ್ದಿದ್ದಾರೆ.

ಕಾಂಗ್ರೆಸ್ಸಿನ ರಾಜಶೇಖರ್‌ ಹಿಟ್ನಾಳ್‌ ಅವರು ಬಿಜೆಪಿಯ ಡಾ ಬಸವರಾಜ ಕೆ ಶರಣಪ್ಪ ವಿರುದ್ಧ 46 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡಿದ್ದಿದ್ದರೆ, ಬಹುಶಃ ಬಿಜೆಪಿಯು ಸುಲಭವಾಗಿ ಗೆಲ್ಲುತಿತ್ತು ಎಂದೆನಿಸುತ್ತದೆ.

ಬಳ್ಳಾರಿ  ಲೋಕಸಭಾ ಕ್ಷೇತ್ರ 

 ಈ ಕ್ಷೇತ್ರದಲ್ಲಿ 15 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, ಗೆಲುವು ಸಾಧಿಸಿದೆ. ಈ ಬಾರಿ ಕಾಂಗ್ರೆಸ್ಸಿನ ತುಕಾರಾಂ ಅವರು ಬಿಜೆಪಿಯ ಶ್ರೀರಾಮುಲು ವಿರುದ್ಧ 98 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಳ್ಳಾರಿ ಕ್ಷೇತ್ರವೂ ಸಹ ಕಾಂಗ್ರೆಸ್ಸಿನ ಭದ್ರ ಕೋಟೇಯಾಗಿತ್ತು. ರೆಡ್ಡಿ ಸಹೋದರರ ನಂತರ ಈ ಕ್ಷೇತ್ರದಲ್ಲಿ ಬಿಜೆಪಿಯು ಪ್ರಾಬಲ್ಯವನ್ನು ಮೆರೆದಿದೆ.  

ಮುಸ್ಲಿಂ, ಬಲಿಜ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿ ಸಮುದಾಯದವರು ನಿರ್ಣಾಯಕರಾಗಿದ್ದಾರೆ.

1999 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಸೋನಿಯಾ ಗಾಂಧಿಯವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಸುಷ್ಮಾ ಸ್ವರಾಜ್ ಅವರನ್ನು 56,100 ಮತಗಳ ಅಂತರದಿಂದ ಸೋಲಿಸಿದ್ದರು.

ಬಿಜೆಪಿಗೆ 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಿ ಕರುಣಾಕರ ರೆಡ್ಡಿ ಅವರಿಗೆ ಜಯ ಲಭಿಸಿದ ಬಳಿಕ, 2009ರಲ್ಲಿ ಬಿಜೆಪಿಯ ಜೆ ಶಾಂತಾ ಸಂಸದೆಯಾಗಿ ಆಯ್ಕೆಯಾದರು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಬಿ ಶ್ರೀರಾಮುಲು ಅವರು ಸಂಸದರಾದರು. 2019ರಲ್ಲಿ ದೇವೆಂದ್ರಪ್ಪ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.  ಜನಾರ್ದನ ರೆಡ್ಡಿ ಅವರ ಬೆಂಬಲದ ಮಧ್ಯೆಯೂ ಬಿಜೆಪಿ ಈ ಬಾರಿ ಸೋತಿದೆ.

Click below headings