ಶ್ರೀ ನರೇಂದ್ರ ಮೋದಿ ಅವರು 09-06-2024 ರಂದು ಮೂರನೇ ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಜತೆಯಲ್ಲಿ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಜೆಡಿಎಸ್‌ನ ಹೆಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್ ಸಚಿವರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಹೊರತು ಪಡಿಸಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ವಿಂಗಡಿಸಿ ನೋಡೋದಾದ್ರೆ, ಉತ್ತರ ಕರ್ನಾಟಕದಿಂದ ಕೇವಲ ಒಬ್ಬರಿಗೆ ಮಾತ್ರ ಮತ್ತು ದಕ್ಷಿಣ ಕರ್ನಾಟಕ ದಿಂದ ಮೂವರಿಗೆ ಮಂತ್ರಿಯಾಗುವ ಅವಕಾಶ ದೊರೆತಿದೆ. NDA ಪಾಲುದಾರರಾಗಿರುವುದರಿಂದ ಸಹಜವಾಗಿ ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿಗೆ ಮಂತ್ರಿ ಪದವಿ ಅನಾಯಾಸವಾಗಿ ಒಲಿದು ಬಂದಿದೆ. ಪ್ರಹ್ಲಾದ್ ಜೋಷಿ ಒಬ್ಬ ಅನುಭವಿ ರಾಜಕಾರಣಿ ಯಾಗಿರುವುದರಿಂದ ಅವರನ್ನ ಮತ್ತೊಮ್ಮೆ ಕ್ಯಾಬಿನೆಟ್ ಮಂತ್ರಿಯನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪರ ಬಳಗದಲ್ಲಿ ಗುರುತಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಂದು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. ಅಚ್ಚರಿಯ ಸನ್ನಿವೇಶದಲ್ಲಿ ವಿ. ಸೋಮಣ್ಣನವರು ರಾಜ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡಿನ ಸಂದೇಶದಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ನಿಂತು ಸೋತಿದ್ದ ಇವರು ಇದೀಗ ತುಮಕೂರು ಲೋಕಸಭೆಯಿಂದ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ.
ಮೋದಿ ನೇತೃತ್ವದ ಎನ್ಡಿಎ ಸರಕಾರ ಮೂರನೆ ಬಾರಿ ಅಧಿಕಾರಕ್ಕೇರಿ, ಈಗ ಸೋಲು ಗೆಲುವಿನ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ. ಕಳೆದ ಬಾರಿ 25 ಕ್ಷೇತ್ರ ಗೆದ್ದು ಅತಿ ಹೆಚ್ಚು ಗಳಿಸುವ ವಿಶ್ವಾಸ ಹೊಂದಿದ್ದ ಕರ್ನಾಟಕದಲ್ಲಿ ಈ ಬಾರಿ ಸೀಟ್ ಗಳು ಕಡಿಮೆಯಾಗಿದ್ದು ಬಿಜೆಪಿ ಹೈಕಮಾಂಡಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ಉತ್ತರ ಕರ್ನಾಟಕದ 12 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಲಿದಿರುವುದು ಕೇವಲ ಆರು. ದಕ್ಷಿಣ ಕರ್ನಾಟಕದ 16 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ ಗೆದ್ದಿರುವುದು, ಬರೋಬ್ಬರಿ 13 ಕ್ಷೇತ್ರಗಳು.
ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ, ಸುಲಭವಾಗಿ ಗೆಲ್ಲಬಹುದಾಗಿದ್ದ, ದಾವಣಗೆರೆ, ಚಿಕ್ಕೋಡೀ, ಬೀದರ್, ಬಳ್ಳಾರಿ, ಕೊಪ್ಪಳ ಕ್ಷೇತ್ರಗಳು ತಪ್ಪಿ ಹೋಗಿದೆ. ಕರ್ನಾಟಕದಲ್ಲಿ ಪ್ರತಿಬಾರಿ ಅಧಿಕಾರಕ್ಕೆ ಬಂದಾಗ ಲಿಂಗಾಯತ ಸಮುದಾಯಕ್ಕೆ ಅತಿ ಹೆಚ್ಚು ಪ್ರಾತಿನಿಧ್ಯ ಕೊಟ್ಟಿದ್ದರೂ ಸಹ ಸ್ಥಳೀಯ ನಾಯಕತ್ವ ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ಪಾಳಯದಲ್ಲಿ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಗೆ ಅತೀವ ಲಾಭವಾಗಿದೆ ಆದರೆ, ಈ ಬಾರಿ ಬೆಂಬಲಿಸುತಿದ್ದ ಲಿಂಗಾಯತರು ಬಿಜೆಪಿಯ ಕೈ ಹಿಡಿಯಲಿಲ್ಲ ಎನ್ನುವುದಕ್ಕಿಂತ, ಸ್ಥಳೀಯ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಲಿಲ್ಲ ಎನ್ನುವ ಬೇಸರ ಹೈಕಮಾಂಡಿನಲ್ಲಿದೆ.
ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಗೆದ್ದರೂ, ಪಕ್ಕದ ದಾವಣಗೆರೆ ಕ್ಷೇತ್ರ ಉಳಿಸಿಕೊಳ್ಳಲಾಗಲಿಲ್ಲ. ಜಗದೀಶ ಶೆಟ್ಟರ್ ಬೆಳಗಾವಿ ಗೆದ್ದರೂ ಪಕ್ಕದ ಚಿಕ್ಕೋಡಿ ಗೆಲ್ಲಿಸಿಕೊಡಲಾಗಲಿಲ್ಲ, ಹೀಗಾಗಿ ಇವರಿಬ್ಬರಿಗೆ ಮಂತ್ರಿ ಪದವಿ ತಪ್ಪಿರಬಹುದು ಎಂದು ಊಹಿಸಲಾಗುತ್ತಿದೆ. ಅದೂ ಅಲ್ಲದೆ, ಇವರಿಬ್ಬರೂ ಮುಖ್ಯಮಂತ್ರಿಯಾಗಿ ಕೆಲಸಮಾಡಿರುವುದರಿಂದ ಬಿಎಸ್ ವೈ ವಿರೋಧಿ ಎಂದೇ ಗುರುತಿಸಿಕೊಂಡಿರುವ ಸೋಮಣ್ಣನಂತಹ ಲಿಂಗಾಯಿತ ನಾಯಕನಿಗೆ ಮಣೆ ಹಾಕಿದ್ದಾರೆ. ಬಿಎಸ್ ವೈ ಅವರ ಮಗ ಬಿ.ವೈ.ರಾಘವೇಂದ್ರ ಮೂರನೇ ಬಾರಿಗೆ ಸಂಸದರಾಗಿರುವುದರಿಂದ ಅವರಿಗೆ ಮಂತ್ರಿ ಪದವಿ ಸಿಗಬಹುದು ಎನ್ನುವ ಲೆಕ್ಕಾಚಾರವಿತ್ತು. ವಿಜಯೇಂದ್ರ ಕರ್ನಾಟಕದ ಅಧ್ಯಕ್ಷರಾಗಿರುವುದರಿಂದ, ರಾಘವೇಂದ್ರ ಅವರನ್ನ ಪರಿಗಣಿಸಲಿಲ್ಲ.
ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಕಡಿಮೆಯಾಗಿದೆ ಎನ್ನುವ ಮುನ್ಸೂಚನೆ ಬಿಜೆಪಿ ಹೈಕಮಾಂಡಿಗೆ ಮೊದಲೇ ದೊರಕಿತ್ತು. ಪಂಚ ಗ್ಯಾರಂಟಿಯಿಂದಾಗಿ ಕಾಂಗ್ರೆಸ್ ಪಾಳಯ 18-20 ಸೀಟ್ ಗಳನ್ನ ಗಳಿಸುವ ವಿಶ್ವಾಸ ಹೊಂದಿತ್ತು. ಈ ಸೂಚನೆ ಮೊದಲೆ ಸಿಕ್ಕಿದ್ದರಿಂದ ಬಿಜೆಪಿ ಹೈಕಮಾಂಡ್, ಜೆಡಿಎಸ್ ಜತೆಗೆ ಮೈತ್ರಿ ಮುಂದಾಯಿತು. ಜೆಡಿಎಸ್ ಮೈತ್ರಿಯಿಂದಾಗಿ, ಒಕ್ಕಲಿಗರು ಸಂಪೂರ್ಣವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಇದಕ್ಕೆ ಪುಷ್ಟಿ ನೀಡುವಂತೆ ಒಕ್ಕಲಿಗ ಬೆಲ್ಟ್ ನಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ ಎರಡು ಕ್ಷೇತ್ರಗಳು.
ಈಬಾರಿ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ - 9, ಒಕ್ಕಲಿಗರಿಗೆ - 3, ಬ್ರಾಹ್ಮಣರಿಗೆ - 2, ಪರಿಶಿಷ್ಟ ಜಾತಿಯವರಿಗೆ - 4 ವಾಲ್ಮೀಕಿ ಜನಾಂಗದವರಿಗೆ - 2, ಬಂಜಾರ, ಕ್ಷತ್ರಿಯ, ಬಲಿಜ, ಬಂಟ್ಸ್ ಮತ್ತು ಬಿಲ್ಲವ ಸಮುದಾಯಕ್ಕೆ ತಲಾ 1 ಟಿಕೆಟ್ ನೀಡಲಾಗಿದೆ. ಈ ಸಾರಿ ಕಂಪ್ಲೀಟ್ ಸ್ವೀಪ್ ಮಾಡಬೇಕೆಂದು, ಯಡಿಯೂರಪ್ಪ ಹೇಳಿದವರಿಗೆ ಪಕ್ಷ ಟಿಕೆಟ್ ಕೊಟ್ಟರೂ ಸಹ, ಈ ಬಾರಿ 17ಕ್ಕೆ ಕುಸಿದಿರುವುದರಿಂದ ತೀವ್ರ ಅಸಮಧಾನಗೊಂಡಿರುವ ಬಿಜೆಪಿಯ ಹೈಕಮಾಂಡ್, ಮುಂಬರುವ ಚುನಾವಣೆಗಳಲ್ಲಿ ಇದೇ ರೀತಿ ಕೆಲಸ ಮಾಡಿದರೆ, ಈಗಿರುವ ಸ್ಥಳೀಯ ನಾಯಕತ್ವವನ್ನ ಬದಲಾಯಿಸಬೇಕಾಗಬಹುದು ಎಂದು ಯಡಿಯೂರಪ್ಪ ಬಳಗಕ್ಕೆ ಬಲವಾದ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.
ಇವೆಲ್ಲಾ ಏನೇ ಇದ್ದರೂ, ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದಿದ್ದೆ. ಜಾತಿ ಲೆಕ್ಕಾಚಾರಕ್ಕಿಂತ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣವನ್ನ ಎಲ್ಲಾ ನಾಯಕರು ರೂಡಿಸಿಕೊಳ್ಳಬೇಕಿದೆ. ಮುಂಬರುವ ಚುನಾವಣೆಗಳಿಗೆ ಈಗಿನಿಂದಲೇ ಕಾರ್ಯತಂತ್ರ ರೂಪಿಸುವುದು ಅಗತ್ಯ. ಕಾಂಗ್ರೆಸ್ಸಿನ ಗ್ಯಾರಂಟಿಯ ಹೊಡೆತದಿಂದ ಬಚಾವಾಗುವ ಸನ್ನಿವೇಶ ಸೃಷ್ಟಿಯ ಅಗತ್ಯತೆ ಇದೆ. ಕೇವಲ ಮೋದಿ ಅಲೆ, ಮೋದಿ ಮುಖ ನೋಡಿ ಜನ ಓಟ್ ಹಾಕುತ್ತಾರೆ ಎನ್ನುವ ಭ್ರಮೆಯಿಂದ ಹೊರಬಂದು ಎಲ್ಲಾ ನಾಯಕರು ಪಕ್ಷ ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ಸಿನ ಪ್ರತಿಯೊಂದು ತಪ್ಪನ್ನ ಹುಡುಕಿ ಜನರ ಮುಂದೆ ಕೊಂಡೋಯ್ದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಹೋರಾಡಲು ಸಾಧ್ಯವಾಗುತ್ತದೆ. ಇಲ್ಲದೆ ಇದ್ದರೆ, ಕಾಂಗ್ರೆಸ್ಸಿನ ಅಹಿಂದ ರಾಜಕಾರಣ ಮತ್ತು ಹೊಸ ಗ್ಯಾರಂಟಿಗಳ ಅಲೆಯಲ್ಲಿ ಕೊಚ್ಚಿಹೋಗುವುದು ನಿಶ್ಚಿತ. ಸೋಲಿನ ಬೇಗುದಿ, ಕಾಂಗ್ರೆಸ್ ನಲ್ಲಿಯೂ ಜೋರಾಗಿಯೆ ಇದೆ. ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಹ ಡಿಕೆಶಿ ಮತ್ತು ಸಿದ್ದರಾಮಯ್ಯನವರ ಮೇಲೆ ಬೇಸರಿಸಿಕೊಂಡಿದ್ದಾರೆ. ಅಲ್ಲೂ ನಾಯಕತ್ವ ಬದಲಾದರೂ ಅಚ್ಚರಿಯಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ