ಗುರುವಾರ, ಜೂನ್ 6, 2024

ಕೈ ಪಾಲಾದ ಕಲ್ಯಾಣ ಕರ್ನಾಟಕ



 2024ರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.  ಕಳೆದ ಬಾರಿ ಮಾತ್ರ ಬಿಜೆಪಿ ಪಕ್ಷ ಪ್ರಾಬಲ್ಯ ಸಾಧಿಸಿತ್ತು, ಈ ಬಾರಿ ಕಾಂಗ್ರೆಸ್ಸಿನ ಅದೃಷ್ಟ ಖುಲಾಯಿಸಿದೆ. ಈ ಕ್ಷೇತ್ರಗಳ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ, ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳು ಮುಂಚೆಯಿಂದಲೂ ಕಾಂಗ್ರೆಸ್ಸಿನ ಭದ್ರಕೋಟೆಯಾಗಿಯೇ ಇತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಹನ್ನೆರೆಡಕ್ಕೂ ಹೆಚ್ಚುಬಾರಿ ಕಾಂಗ್ರೆಸ್ ಜಯಗಳಿಸಿದೆ.  ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮುಸ್ಲಿಂ, ಕುರುಬ ಮತ್ತು ಹಿಂದುಳಿದ ವರ್ಗದವರ ಮತಗಳೇ ನಿರ್ಣಾಯಕ. 

    ಈ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ (SC), ವರ್ಗ(ST), ಹಿಂದುಳಿದ ವರ್ಗ (OBC) ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರೇ ಅಧಿಕವಾಗಿದ್ದಾರೆ. ಈ ಸಮುದಾಯಗಳು ಆರ್ಥಿಕವಾಗಿ ಹಿಂದುಳಿರುವುದರಿಂದ ಬೆಂಗಳೂರು. ಕರಾವಳಿ ಮಲೆನಾಡು ಕಡೆ ದುಡಿಯುವುದಕ್ಕೆ ಹೋಗುವಂತಹವರು. ಹೀಗಾಗಿ ಇಲ್ಲಿನ ಹೆಚ್ಚಿನ ಮಕ್ಕಳು ತುಮಕೂರಿನ ಸಿದ್ದಗಂಗ ಮಠದಲ್ಲಿ ಉಚಿತ ಶಿಕ್ಷಣ ಪಡೆಯುತಿದ್ದಾರೆ. ಅತ್ಯಂತ ಮುಗ್ಧ ಜನರು ಇವರು, ಯಾರಾದರು ಆಸೆ ತೋರಿಸಿದರೆ ಅದಕ್ಕೆ ಮಾರು ಹೋಗುವಂತಹ ಮುಗ್ಧರು. ಹೀಗಿರುವಾಗ, ಇಷ್ಟು ವರ್ಷಗಳ ಕಾಲ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು  ಇವರನ್ನು ವೋಟಿಗಾಗಿ ಬಳಸಿಕೊಂಡಿದ್ದಾರೆ ವಿನಹ ಅಭಿವೃದ್ದಿ ಪಡಿಸುವಂತಹ ಕೆಲಸಕ್ಕೆ ಹೋಗಿಲ್ಲ. ಈ ಬಾರಿ ಕಾಂಗ್ರೆಸ್ಸಿನ ಗ್ಯಾರಂಟಿಗಾಗಿ ಜನ ಮರುಳಾಗಿರುವುದ್ದಾರೆ.

    ಮೈಸೂರು, ಬೆಂಗಳೂರು, ಮಲೆನಾಡು ಮತ್ತು ಕರಾವಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಆರ್ಥಿಕವಾಗಿ ಪ್ರಬಲವಾಗಿಲ್ಲ. ಶೈಕ್ಷಣಿಕವಾಗಿ ಸಹ ಹಿಂದುಳಿವೆ. ಬಿಸಿಲ ನಾಡು ಬರಪ್ರದೇಶ ಎಂದೇ ಹೆಸರುವಾಸಿ, ತುಂಗಭದ್ರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು, ಕೃಷ್ಣಾ ನದಿ ಹರಿಯುವ ಪ್ರದೇಶದ ಹಳ್ಳಿಗಳು ಬಿಟ್ಟರೆ ಮಿಕ್ಕೆಲ್ಲ ಪ್ರದೇಶ ಮಳೆಯಾಧಾರಿತ. ಅಲ್ಲಿನ ಜನರು ಬಹುತೇಕ ಬಡವರು,  ಬಳ್ಳಾರಿ ಮತ್ತು ಹೊಸಪೇಟೆ ಮಾತ್ರ ಸ್ವಲ್ಪ ಮುಂದುವರಿದಿದೆ ಎನ್ನಬಹುದು ಬಿಟ್ಟರೆ, ಮಿಕ್ಕೆಲ್ಲ ಜಿಲ್ಲೆಗಳು ಅತೀ ಹಿಂದುಳಿವೆ. ಇನ್ನೂ ಸಹ ಈ ಭಾಗವನ್ನು ಅಭಿವೃದ್ದಿ ಪಡಿಸಲಿಕ್ಕೆ ಸಾಧ್ಯವಾಗಿಲ್ಲ. ಇಲ್ಲಿನ ಪೂರ್ವಜರು ಹೈದರಬಾದಿನ ನಿಜಾಮರ ಆಡಳಿತ ಕಾಲದಲ್ಲಿ ರಜಾಕರ ದಾಳಿಗೆ ನೊಂದು ಬೆಂದವರು. 

    ಚುನಾವಣೆ ರಾಜಕೀಯ ಎಂದ ಮೇಲೆ ಪ್ರತಿಯೊಂದು ಜಾತಿ ಸಮುದಾಯ ಮತಗಳು ಸಹ ನಿರ್ಣಾಯಕವಾಗುತ್ತವೆ. ಬುದ್ದಿವಂತರು ವಿವೇಚಿಸಿ ಮತನೀಡುತ್ತಾರೆ, ಕೆಲವರು ಜಾತಿ ಅಥವ ಹಣದ ಆಮಿಷಕ್ಕೆ ಒಳಗಾಗುತ್ತಾರೆ. ಒಂದು ಕ್ಷೇತ್ರದಲ್ಲಿ ಎರಡು ಪಕ್ಷದವರು ಒಂದೇ ಜಾತಿಯವರಾದರೂ ಸಹ, ಮುಂಬರುವ ದಿನಗಳಲ್ಲಿ ಯಾವ ಪಕ್ಷದಿಂದ ಅವರ ಸಮುದಾಯಕ್ಕೆ ಬೆಂಬಲ ಸಿಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಉದಾ: ಪರಿಶಿಷ್ಟ ಜಾತಿ (SC), ವರ್ಗ(ST), ಜನರು ಯಡಿಯೂರಪ್ಪ ದೇವೆಗೌಡರಿಗಿಂತ, ಸಿದ್ದರಾಮಯ್ಯ, ಖರ್ಗೆ ಮೇಲೆ ನಂಬಿಕೆ ಜಾಸ್ತಿ. ಹಾಗೆಯೇ ಅಂದಾಜು 15% ಇರುವ ಮುಸ್ಲಿಂ ಸಮುದಾಯ ಪಕ್ಕಾ ಕಾಂಗ್ರೆಸ್ಸಿಗೆ ಹಾಕುವುದು ನಿಶ್ಚಿತ. ಅದೇ ರೀತಿ 50 ರಿಂದ 60% ಪರಿಶಿಷ್ಟ ಜಾತಿ (SC), ವರ್ಗ(ST),  ಖಂಡಿತ ಕಾಂಗ್ರೆಸಿಗೆ ಹಾಕುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕುರುಬರ ಓಟುಗಳು ಸಹ ಕಾಂಗ್ರೆಸ್ಸಿಗೆ. ಇನ್ನು ಕಾಂಗ್ರೆಸಿನ ಪಂಚ ಗ್ಯಾರಂಟಿ ಕೆಲವರಿಗೆ ಪಥ್ಯವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ ಕಾಂಗ್ರೆಸ್ಸಿಗೆ ಈ ಭಾಗ ಕೈಹಿಡಿದಿರುವುದು ಸ್ಪಷ್ಟವಾಗುತ್ತಿದೆ.

ಬೀದರ್ ಲೋಕಸಭಾ ಕ್ಷೇತ್ರ:

ಈ ಕ್ಷೇತ್ರದಲ್ಲಿ ೧೦ ಬಾರಿ ಕಾಂಗ್ರೆಸ್, ೭ ಬಾರಿ ಬಿಜೆಪಿ,  ಗೆಲುವು ಸಾಧಿಸಿದೆ. ಎಂದಿನಂತೆ, ಕಾಂಗ್ರೆಸ್ ದಲಿತ, ಹಿಂದುಳಿದ ಮತ್ತು ಮುಸ್ಲಿಂ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಬಿಜೆಪಿ ಹೆಚ್ಚಾಗಿ ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿದ್ದರು ಸಹ ಈಶ್ವರ್ ಖಂಡ್ರೆ ಯವರ ಸತತ ಪರಿಶ್ರಮದಿಂದ ಈ ಬಾರಿ ಬಿಜೆಪಿಗೆ ಸೋಲಾಯಿತು. ಈ ಬಾರಿ ಆಳಂದದಲ್ಲಿ ಮಾತ್ರ ಬಿಜೆಪಿಗೆ ಮುನ್ನೆಡೆ ದೊರೆತಿದೆ ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ಸಿನ ಸಾಗರ್ ಈಶ್ವರ್ ಖಂಡ್ರೆ ಅವರು ಬಿಜೆಪಿಯ ಭಗವಂತ್ ಖೂಬಾ ವಿರುದ್ಧ 1 ಲಕ್ಷದ 28 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು 4,66,000 ಮಂದಿ ಇದ್ದರೆ, SC, ST ಸಮುದಾಯದ ಮತದಾರರು 4,26,000 ಮಂದಿ ಇದ್ದಾರೆ. ಇನ್ನು ಮುಸ್ಲಿಂ - 2,31,000, ಲಂಬಾಣಿ - 1,50,000, ಕುರುಬ - 97,000, ಮರಾಠ - 1,60,000 ಹಾಗೂ ಇತರೇ ಸಮುದಾಯದ ಮತಾದರರು 3,13,787 ಮಂದಿ ಇದ್ದಾರೆ.

ಗುಲ್ಬರ್ಗ ಲೋಕಸಭಾ ಕ್ಷೇತ್ರ:- . 

ಈವರೆಗೆ ನಡೆದಿರುವ 18 ಚುನಾವಣೆಗಳಲ್ಲಿ ಕಾಂಗ್ರೆಸ್ 15 ಬಾರಿಗೆ ಗೆದ್ದಿದೆ. 90ರ ದಶಕದಲ್ಲಿ ಒಮ್ಮೆ ಜನತಾ ದಳ, ಎರಡು ಬಾರಿ ಬಿಜೆಪಿ ಇಲ್ಲಿ ಜಯ ಕಂಡದ್ದು ಬಿಟ್ಟರೆ ಇಲ್ಲಿ ಕೈ ಪಾಳಯದ್ದೇ ಮೇಲುಗೈ. ಪರಿಶಿಷ್ಟ ಜಾತಿ (SCಗಳು):  24%, ಪರಿಶಿಷ್ಟ ಪಂಗಡಗಳು (STಗಳು): 3%, ಮುಸ್ಲಿಂ: 24%. ಹಿಂದುಳಿದ ವರ್ಗ: 27%, ಇತರೆ 22%.  ಈ ಲೆಕ್ಕಾಚಾರ ನೋಡಿದರೆ, ಕಾಂಗ್ರೆಸ್ಸಿಗೆ ಗೆಲುವು ಸುಲಭ ಮತ್ತು ಸಹಜ.

ಕಾಂಗ್ರೆಸ್ಸಿನ ರಾಧಾಕೃಷ್ಣ ದೊಡ್ಡಮನಿ ಅವರು ಬಿಜೆಪಿಯ ಡಾ. ಉಮೇಶ್ ಜಾಧವ್ ವಿರುದ್ಧ ಕೇವಲ 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ನಿರ್ಣಾಯಕ ಪಾತ್ರವಹಿಸಿದ ಮುಸ್ಲಿಂ ಮತದಾರರು ಮಾತ್ರ

ಜಾಧವ್​ ವಿರುದ್ಧ ಗೆಲ್ಲಲು ಕಾರಣವಾಗಿದ್ದು, ಕಲಬುರಗಿ ಉತ್ತರ ಕ್ಷೇತ್ರ. ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ (ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ದಿವಂಗತ ಕಮರ್-ಉಲ್-ಇಸ್ಲಾಂ ಅವರ ಪತ್ನಿ) ಪತ್ರಿನಿಧಿಸುವ ಕಲಬುರಗಿ ಉತ್ತರ ಕ್ಷೇತ್ರವೊಂದರಲ್ಲೇ ಕಾಂಗ್ರೆಸ್‌ ಬರೋಬ್ಬರಿ 51,729 ಮತಗಳ ಭಾರೀ ಮುನ್ನಡೆ ತಂದುಕೊಂಡಿದೆ. ಈ ಮೂಲಕ ಮೂಲಕ ಉಳಿದ ಕ್ಷೇತ್ರಗಳಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಈ ಕ್ಷೇತ್ರ ನೆರವಾಯಿತು. ಮುಸ್ಲೀಮ್ ಬಾಹುಳ್ಯವಿರುವ ಕ್ಷೇತ್ರದಲ್ಲಿ ಡಾ.ಜಾಧವ್ ಇಲ್ಲಿ 70,313 ಮತಗಳನ್ನ ಪಡೆದರೆ, ದೊಡ್ಡಮನಿ ಬರೋಬ್ಬರಿ 1,22,042 ಮತಗಳನ್ನು ಪಡೆದರು. ದೊಡ್ಡ ಅಂತರವೇ ಅವರ ಗೆಲುವಿಗೆ ಕಾರಣವಾಯಿತು.

ರಾಯಚೂರು ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 14 ಬಾರಿ ಕಾಂಗ್ರೆಸ್, 2 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 1 ಬಾರಿ ಜನತಾದಳ ಗೆಲುವು ಸಾಧಿಸಿದೆ.  ಪರಿಶಿಷ್ಟ ಜಾತಿ – 18%, ಪರಿಶಿಷ್ಟ ಪಂಗಡ – 19%, ಲಿಂಗಾಯತ – 16%,  ಕುರುಬ ಸಮುದಾಯ – 13% ಮುಸ್ಲಿಂ – 15% ಇತರೆ – 19%.  ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜ. ಕಾಂಗ್ರೆಸ್ಸಿನ ಕುಮಾರ್ ನಾಯಕ್ ಅವರು ಬಿಜೆಪಿಯ ರಾಜಾ ಅಮರೇಶ್ವರ ನಾಯಕ್  ವಿರುದ್ಧ  79 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಕೊಪ್ಪಳ ಲೋಕಸಭಾ ಕ್ಷೇತ್ರ 

ಈ ಕ್ಷೇತ್ರದಲ್ಲಿ 10 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, 1 ಬಾರಿ ಪಕ್ಷೇತರ, 2 ಬಾರಿ ಜನತಾದಳ  ಗೆಲುವು ಸಾಧಿಸಿದೆ. ಲಿಂಗಾಯತ 27%, ಕುರುಬ 21%, SC 21%, ಮುಸ್ಲಿಂ –  10% , ಇತರೆ – 21%. ಇಲ್ಲಿಯೂ ಸಹ ಕೈ ಪಾಳಯದ್ದೇ ಮೇಲುಗೈ. ಅಹಿಂದ ಓಟ್ ಗಳನ್ನ ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗೆ ಗೆಲುವು ಇಲ್ಲಿ ಸಹಜವಾಗಿ ದೊರೆತಿದೆ. ಎರಡು ಬಾರಿ ಬಿಜೆಪಿಯಿಂದ ವಿಜಯಿಯಾಗಿದ್ದ ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡದೆ ಇರುವುದು ಸಹ ಬೀಜೆಪಿ ಸೋಲಲು ಒಂದು ಕಾರಣ ಎಂದು ಹೇಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದ್ದರೆ, ಗಂಗಾವತಿಯಲ್ಲಿ ಕೆಆರ್‌ಪಿಪಿಯಿಂದ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಷ್ಟಗಿಯಿಂದ ಬಿಜೆಪಿಯ ದೊಡ್ಡನಗೌಡ ಪಾಟೀಲ್‌ ಗೆದ್ದಿದ್ದಾರೆ.

ಕಾಂಗ್ರೆಸ್ಸಿನ ರಾಜಶೇಖರ್‌ ಹಿಟ್ನಾಳ್‌ ಅವರು ಬಿಜೆಪಿಯ ಡಾ ಬಸವರಾಜ ಕೆ ಶರಣಪ್ಪ ವಿರುದ್ಧ 46 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕರಡಿ ಸಂಗಣ್ಣರಿಗೆ ಈ ಸಾರಿ ಟಿಕೆಟ್ ನೀಡಿದ್ದಿದ್ದರೆ, ಬಹುಶಃ ಬಿಜೆಪಿಯು ಸುಲಭವಾಗಿ ಗೆಲ್ಲುತಿತ್ತು ಎಂದೆನಿಸುತ್ತದೆ.

ಬಳ್ಳಾರಿ  ಲೋಕಸಭಾ ಕ್ಷೇತ್ರ 

 ಈ ಕ್ಷೇತ್ರದಲ್ಲಿ 15 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, ಗೆಲುವು ಸಾಧಿಸಿದೆ. ಈ ಬಾರಿ ಕಾಂಗ್ರೆಸ್ಸಿನ ತುಕಾರಾಂ ಅವರು ಬಿಜೆಪಿಯ ಶ್ರೀರಾಮುಲು ವಿರುದ್ಧ 98 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಳ್ಳಾರಿ ಕ್ಷೇತ್ರವೂ ಸಹ ಕಾಂಗ್ರೆಸ್ಸಿನ ಭದ್ರ ಕೋಟೇಯಾಗಿತ್ತು. ರೆಡ್ಡಿ ಸಹೋದರರ ನಂತರ ಈ ಕ್ಷೇತ್ರದಲ್ಲಿ ಬಿಜೆಪಿಯು ಪ್ರಾಬಲ್ಯವನ್ನು ಮೆರೆದಿದೆ.  

ಮುಸ್ಲಿಂ, ಬಲಿಜ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿ ಸಮುದಾಯದವರು ನಿರ್ಣಾಯಕರಾಗಿದ್ದಾರೆ.

1999 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಸೋನಿಯಾ ಗಾಂಧಿಯವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಸುಷ್ಮಾ ಸ್ವರಾಜ್ ಅವರನ್ನು 56,100 ಮತಗಳ ಅಂತರದಿಂದ ಸೋಲಿಸಿದ್ದರು.

ಬಿಜೆಪಿಗೆ 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಿ ಕರುಣಾಕರ ರೆಡ್ಡಿ ಅವರಿಗೆ ಜಯ ಲಭಿಸಿದ ಬಳಿಕ, 2009ರಲ್ಲಿ ಬಿಜೆಪಿಯ ಜೆ ಶಾಂತಾ ಸಂಸದೆಯಾಗಿ ಆಯ್ಕೆಯಾದರು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಬಿ ಶ್ರೀರಾಮುಲು ಅವರು ಸಂಸದರಾದರು. 2019ರಲ್ಲಿ ದೇವೆಂದ್ರಪ್ಪ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.  ಜನಾರ್ದನ ರೆಡ್ಡಿ ಅವರ ಬೆಂಬಲದ ಮಧ್ಯೆಯೂ ಬಿಜೆಪಿ ಈ ಬಾರಿ ಸೋತಿದೆ.

4 ಕಾಮೆಂಟ್‌ಗಳು:

  1. ಬಹಳ ವಸ್ತುನಿಷ್ಠವಾದ ಕಲ್ಯಾಣ ಕರ್ನಾಟಕದ ಲೋಕಸಭಾ ಚುನಾವಣೆಯ ಆಳವಾದ ವಿಶ್ಲೇಷಣೆ ಮಾಡಿದ್ದೀರಿ. ಧನ್ಯವಾದಗಳು.

    ಕಲ್ಯಾಣ ಕರ್ನಾಟಕದ, ಪ್ರತೀ ಕ್ಷೇತ್ರದ ಅವಲೋಕನವನ್ನು ಓದುತ್ತಾ ಹೋದಂತೆ, ಜಾತಿ ಸಮೀಕರಣಗಳ ಸಂಕೀರ್ಣ ಲೋಕ ನನ್ನ ಮುಂದೆ ತೆರೆದುಕೊಳ್ಳುತ್ತಾ ಹೋಯ್ತು. ಪಕ್ಷಗಳು ಮಾಡಿದ ಅಭಿವೃದ್ಧಿ ಕಾರ್ಯಗಳು, ಗೌಣವಾಗಿ, ಎಲ್ಲೋ ಮೂಲೆಯ ಮರೆಗೆ ಸರಿದು ಹೋಗಿ, ಕ್ಷೇತ್ರದ ಜಾತಿಗಣಿತ ಮುನ್ನೆಲೆಗೆ ಬಂದು ನಿಂತತ್ತಾಯ್ತು. ಕೂಡು, ಕಳೆ, ಗುಣಿಸು, ಭಾಗಿಸು ಎನ್ನುವ ಅಂಕಗಣಿತವನ್ನು ಮೀರಿದ ಈ ಜಾತಿ ಗಣಿತವನ್ನು ಆಯಾಯ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಅಭ್ಯಸಿಸಿದ ಪಕ್ಷ ಗೆಲುವಿನ ಮಾಲೆಯನ್ನು ತೊಡುತ್ತದೆ. ಕ್ಷೇತ್ರದಿಂದ ಕ್ಷೇತ್ರಕ್ಕೆ, ಮತಗಟ್ಟೆಯಿಂದ ಮತಗಟ್ಟೆಗೆ ಬದಲಾಗುತ್ತಾ ಹೋಗುವ ಈ ಗಣಿತವನ್ನು ಕರಗತ ಮಾಡಿಕೊಳ್ಳುವುದು ಕಷ್ಟಸಾಧ್ಯ.

    ಈ ಅವಲೋಕನವನ್ನು ಕೂಲಂಕುಷವಾಗಿ ಓದಿದ ನಂತರ, ಸೋಲು- ಗೆಲುವುಗಳನ್ನು ನಾವು ಹುಟ್ಟಿನಿಂದಲೇ ಜೊತೆಗೆ ಕಟ್ಟಿಕೊಂಡೇ ಬರುತ್ತೇವೆಯೇನೋ ಎಂದು ಅನ್ನಿಸುವುದಕ್ಕೆ ಶುರುವಾಗಿದೆ. ಹೆಚ್ಚೂ ಕಡಿಮೆ, ದೇಶದ ಯಾವ ಕ್ಷೇತ್ರಗಳಲ್ಲಿಯೂ, ಲೋಕಸಭೆಯ ದೃಷ್ಟಿಯಿಂದ ಇರಲಿ, ವಿಧಾನಸಭೆಯ ನಿಟ್ಟಿನಲ್ಲಿರಲಿ, ಮತಗಣಿತದ ಪ್ರಕಾರ, ಅಲ್ಪ ಸಂಖ್ಯಾತರಾದ ಬ್ರಾಹ್ಮಣ, ಪದ್ಮಸಾಲಿ, ಸ್ವಕುಳಸಾಲಿ, ಭಾವಸಾರ ಕ್ಷತ್ರಿಯ, ಇಂತಹ ಹಲವು ಹತ್ತಾರು ಜಾತಿಯ ಮಂದಿ, ಎಂದೂ ತಮ್ಮ ಜಾತಿಯ ಪ್ರತಿನಿಧಿತ್ವವನ್ನು ವಿಧಾನ ಸಭೆಯಲ್ಲಿ ಯಾ ಲೋಕಸಭೆಯಲ್ಲಿ ಪಡೆಯಲು ಆಗುವುದೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ, ದೇಶದ ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ಕೊಡಬೇಕು ಎನ್ನುವ ಸಂವಿಧಾನದ ಮೂಲ ಪರಿಚ್ಛೇದ ಹಾಸ್ಯಾಸ್ಪದ ಎನ್ನಿಸುವುದಿಲ್ಲವೇ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಜ ಸರ್, ಜಾತಿ ಲೆಕ್ಕಾಚಾರ ಬಹಳ ಸಂಕೀರ್ಣವಾದ ವಿಷಯ. ದುರದೃಷ್ಟಕರ ವಿಚಾರವೇನೆಂದರೆ, ಪಕ್ಷಗಳು ಮಾಡುವ ಜಾತಿ ಲೆಕ್ಕಾಚಾರದಲ್ಲಿ ಯಾವ ಜಾತಿ ಅತಿಹೆಚ್ಚು ಜನಸಂಖ್ಯೆ ಹೊಂದಿದೆಯೋ ಅವರಿಗೆ ಮಾತ್ರ ರಾಜಕೀಯ ಪ್ರಾಧಾನ್ಯತೆ ನೀಡಲಾಗಿದೆ ವಿನಃ ಕಡಿಮೆ ಜನಸಂಖ್ಯೆ ಇರುವ ಜಾತಿಗಳನ್ನ ಕಡೆಗಣಿಸಲಾಗಿದೆ. ಅದಕ್ಕಾಗಿಯೇ, ಈ ಜಾತಿಗಳ ಜನ ರಾಜಕೀಯದ ಗೊಡವೆಗೆ ಹೋಗುವುದಿಲ್ಲ. ಕೆಲವೊಮ್ಮೆ ಮತಗಟ್ಟೆಗೂ ಬರುವುದಿಲ್ಲ. ಸರ್ಕಾರದಿಂದ ಅತಿ ಹೆಚ್ಚಿನ ಪ್ರಯೋಜನವೇನೂ ಸಿಗುವುದಿಲ್ಲ ಎನ್ನುವ ಕಟು ಸತ್ಯವನ್ನರಿತು ತಮ್ಮ ಪಾಡಿಗೆ ತಾವಿರುತ್ತಾರೆ. ಹೀಗಾಗಿಯೇ ಈ ಜಾತಿಗಳಲ್ಲಿ ಅಂತ ಪ್ರಬಲ ನಾಯಕರು ಯಾರೂ ಇಲ್ಲ. ಇರುವುದರಲ್ಲಿಯೇ, ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲರಿಗೂ ಅವಕಾಶ ಕೊಡುವ ಪ್ರಯತ್ನ ಮಾಡುತ್ತಿದೆ.

      ಅಳಿಸಿ
  2. ನೀವುಗಳು ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕದ ಭಾಗವಾಗಿರುವ ಎಲ್ಲಾ ಜಿಲ್ಲೆಗಳ ಬಗ್ಗೆ ತುಂಬಾ ಚೆನ್ನಾಗಿ ವಿಶ್ಲೇಷಣಾ ಮಾಡಿದ್ದೀರಿ.
    ನನಗೆ ತಿಳಿದ ಮಟ್ಟಿಗೆ ಕೊಪ್ಪಳದ ಬಗ್ಗೆ ಹೇಳಬೇಕೆಂದರೆ, ನೀವು ಹೇಳಿದಾಗೆ ಕೊಪ್ಪಳದಲ್ಲಿ ಸಂಗಣ್ಣ ಕರಡಿಗೆ ಕೊಟ್ಟಿದ್ದರೆ ಗೆಲ್ಲುವ ಚಾನ್ಸಸ್ ಗಳು ತುಂಬಾ ಇತ್ತು. ಆದರೆ ಅವರು ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಿದ್ದರಿಂದ ಪಕ್ಷ ಅವರಿಗೆ ಟಿಕೆಟ್ ಕೊಡಲಿಲ್ಲ, ಎಂಎಲ್ಎ ಎಲೆಕ್ಷನ್ ನಲ್ಲಿ ಒಂದು ಬಾರಿ ತನ್ನ ಮಗನಿಗೆ ಕೊಟ್ಟು ನೋಡಿದರೂ, ಆತ ಗೆಲ್ಲಲಿಲ್ಲ, ನಂತರದ ಎಲೆಕ್ಷನ್ನಲ್ಲಿ ಅವರ ಸೊಸೆಗೆ ಎಂಎಲ್ಎ ಎಲೆಕ್ಷನ್ ನಲ್ಲಿ ಟಿಕೆಟ್ ಕೊಡಲಾಯಿತು
    ಆಕೆಯೂ ಕೂಡಯೂ ಕೂಡ ಗೆಲ್ಲಲಿಲ್ಲ. ಸಂಗಣ್ಣ ಕರಡಿಯವರು ಸುಮಾರು 20 ವರ್ಷಗಳ ಕಾಲ ಪಕ್ಷದ ಎಲ್ಲಾ ಹುದ್ದೆಗಳ ಅಲಂಕರಿಸಿ ಕೊನೆಗೆ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವ ತಂತ್ರ ಮಾಡಿದರು ,ಆದರೆ ಬಿಜೆಪಿ ಪಕ್ಷ ಶಿಸ್ತಿನ ಪಕ್ಷವಾಗಿದ್ದರಿಂದ ಅದನ್ನು ಅವರು ಗಂಭೀರವಾಗಿ ತೆಗೆದುಕೊಂಡು ಅವರಿಗೆ ಟಿಕೆಟ್ ನಿರಾಕರಿಸಿದ್ರು.
    ಮುಖ್ಯವಾಗಿ ಎಲ್ಲಾ ತಾಲೂಕುಗಳ ಲೀಡ್ ನೋಡಿದಾಗ ಮುಖ್ಯವಾಗಿ ಗಂಗಾವತಿ ಮತ್ತು ಸಿರುಗುಪ್ಪ ತಾಲೂಕುಗಳಲ್ಲಿ ಅತಿ ಹೆಚ್ಚಿನ ಮತದಾನ ಆಗಿ ಅಲ್ಲಿ ಕುರುಬ ಮತ್ತೆ ಮುಸ್ಲಿಂ ಮತಗಳು ಕಾಂಗ್ರೆಸ್ಸಿಗೆ ಅತಿ ಹೆಚ್ಚು ಲೀಡ್ ಕೊಟ್ಟು. ಗಂಗಾವತಿ ಎಂಎಲ್ಎ ಆಗಿದ್ದ ಶ್ರೀ ಗಾಲಿ ಜನಾರ್ಧನ ರೆಡ್ಡಿ ಅವರು ಹೆಚ್ಚು ಸೀರಿಯಸ್ಸಾಗಿ ಕೆಲಸ ಮಾಡಲಿಲ್ಲ, ಯಾಕೆಂದರೆ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗಂಗಾವತಿಯಲ್ಲಿ ಸ್ಪರ್ಧೆ ಮಾಡಿದಾಗ ಅವರಿಗೆ ಕೊಪ್ಪಳದ ಕಾಂಗ್ರೆಸ್ಸಿನ ಎಂಪಿ ಹಿಟ್ನಾಳ ಕುಟುಂಬ ಇವರಿಗೆ ಸಂಪೂರ್ಣ ಕುರುಬರ ವೋಟುಗಳು ಬರಲು ಪ್ರಯತ್ನ ಮಾಡಿದವು, ಅದಕ್ಕೆ ಗಾಲಿ ಜನಾರ್ದನ್ ರೆಡ್ಡಿ ಅವರು ಅವರಿಗೆ ಕೃತಜ್ಞತೆ ರಾಗಿದ್ದರು. ಈ ಕಾರಣಕ್ಕೆಗಂಗಾವತಿ ಕ್ಷೇತ್ರದಲ್ಲಿ ಅವರು ಹೆಚ್ಚು ಪ್ರಚಾರ ಮಾಡದೆ ತಟಸ್ಥರಾಗಿ ಉಳಿದರು. ಅದಕ್ಕೆ ಬಿಜೆಪಿಗೆ ತುಂಬಾ ಹಿನ್ನಡೆಯಾಗಿದೆ. ಇದು ಒಂದು ಕಾರಣ ಎಂದು ಹೇಳಬಹುದು.
    ಇನ್ನೊಂದು ಕಾರಣ ಏನೆಂದರೆ ನಮ್ಮ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ದುಡ್ಡು ಖರ್ಚು ಮಾಡದೆ ಹೆಚ್ಚು ಕ್ಯಾನ್ವಾಸ್ ಮಾಡದೆ ಮೋದಿ ಹೆಸರು ಮೇಲೆ ಬರುತ್ತೇವೆ ಎಂದು ಕಾಲಹರಣ ಮಾಡಿದರು.
    ಕಾಂಗ್ರೆಸ್ನವರು ಅತಿ ಹೆಚ್ಚು ದುಡ್ಡು ಖರ್ಚು ಮಾಡಿ ಹಾಗೂ ತಳಮಟ್ಟದಲ್ಲಿ ತುಂಬಾ ಗಂಭೀರವಾಗಿ ಪ್ರಚಾರ ನಡೆಸಿ ನಿಜವಾಗಲೂ ಕಾರ್ಯಕರ್ತ ತುಂಬಾ ಕೆಲಸ ಮಾಡಿದ್ದಾರೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರತಿಯೊಂದು ಸೋಲಿಗೂ ಮತ್ತು ಗೆಲುವಿಗೂ ಪ್ರತಿಕ್ಷೇತ್ರದಲ್ಲೂ ಒಂದೊಂದು ಕಾರಣವಿರುತ್ತದೆ. ಅಧಿಕಾರ ಅನುಭವಿಸಿದ ಕರಡಿ ಸಂಗಣ್ಣನವರು ಬ್ಲಾಕ್ ಮೇಲ್ ಮಾಡಿದ್ದು ತಪ್ಪು, ಮುಂದೊಂದು ದಿನ ಕರಡಿ ಸಂಗಣ್ಣ ಇಲ್ಲವೇ ಅವರ ಕುಟುಂಬದವರಿಗೆ ಬಿಜೆಪಿ ಬೆಂಬಲ ಮತ್ತು ಸಹಕಾರ ಖಂಡಿತಾ ನೀಡುತಿತ್ತು.

      ಅಳಿಸಿ

Click below headings