ಸೋಮವಾರ, ನವೆಂಬರ್ 16, 2020

50 ವರ್ಷಗಳ ಬಳಿಕ ಸುಲ್ತಾನ್ ಕಾಬೂಸ್ ಇಲ್ಲದ ಮೊದಲ ರಾಷ್ಟ್ರೀಯ ದಿನ

*50 ವರ್ಷಗಳ ಬಳಿಕ ಸುಲ್ತಾನ್ ಕಾಬೂಸ್ ಇಲ್ಲದ ಮೊದಲ ರಾಷ್ಟ್ರೀಯ ದಿನ



ಪ್ರತಿ ವರ್ಷ ಸಂಭ್ರಮದಿಂದ ಆಚರಿಸುವ ಒಮಾನ್ ರಾಷ್ಟ್ರೀಯ ದಿನಾಚರಣೆ ಮತ್ತೊಮ್ಮೆ ಬಂದಿದೆ. ಬರುವ ನವೆಂಬರ್ 18 ರಂದು ಒಮಾನ್ ದೇಶದ ಐವತ್ತನೇ ರಾಷ್ಟ್ರೀಯ ದಿನಾಚರಣೆ (National Day of Oman) ಹಾಗೂ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ಅಲ್ ಸಯೀದ್ ರವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. 1650 ರಲ್ಲಿ
ಪೋರ್ಚಗೀಸ್ ರಿಂದ ಸ್ವಾತಂತ್ರ್ಯಗೊಂಡ ದಿನವೂ ಸಹ ನವೆಂಬರ್ ಹದಿನೆಂಟು. ಹೀಗಾಗಿ, ಈ ದಿನ ಬಹು ಪ್ರಮುಖವಾದದ್ದು. ಸುಲ್ತಾನ್ ಕಾಬೂಸ್ ರವರು ಬದುಕಿದ್ದಿದ್ದರೆ, ಅವರ ಆಳ್ವಿಕೆಯ ಐವತ್ತನೇ ವರ್ಷ ಸಂಪೂರ್ಣವಾಗುತಿತ್ತು. ಈ ಬಾರಿ ಹಿಂದಿನ ಸುಲ್ತಾನ್ ಕಾಬೂಸ್ ರವರ ಅನುಪಸ್ಥಿತಿಯಲ್ಲಿ ಈಗಿನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಂದ ಐವತ್ತನೇ ರಾಷ್ಟ್ರೀಯ ದಿನಾಚರಣೆ ಆಚರಿಸಲಾಗುತ್ತಿದೆ.

ಅಂದು ಒಮಾನ್ ರಾಷ್ಟ್ರದೆಲ್ಲೆಡೆ, ಸಂಭ್ರಮಾಚಾರಣೆಗೆ ಮಿತಿ ಇಲ್ಲ. ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣದಿಂದ ಹಿಡಿದು, ಪ್ರಮುಖವಾದ ಸ್ಥಳದಲ್ಲಿ, ಸುಲ್ತಾನ್ ರವರಿಗೆ ಮಿಲಿಟರಿ ಪಡೆಗಳಿಂದ ಅತ್ಯುನ್ನತ ಮಟ್ಟದ ಗೌರವವನ್ನು ಸಲ್ಲಿಸಲಾಗುತ್ತದೆ. ಮಿಲಿಟರಿ ಕವಾಯತು, ಮೆರವಣಿಗೆ, ರಾಷ್ಟ್ರಗೀತೆ, ಮಿಲಿಟರಿ ಬ್ಯಾಂಡ್ ಗಳಿಂದ ಸಂಗೀತ ಕಾರ್ಯಕ್ರಮ, ಒಮಾನ್ ದೇಶದ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಪಟಾಕಿಗಳನ್ನು ಸಿಡಿಸುವ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ತಿಂಗಳುಗಳ ಕಾಲ ಪ್ರಮುಖ ನಗರಗಳ ಮುಖ್ಯ ರಸ್ತೆಗಳು ದೀಪಾಲಂಕಾರಗೊಂಡು ಸಿಂಗರಿಸಲ್ಪಡುತ್ತವೆ. ಪ್ರತಿ ನೂರು ಮೀಟರ್ ಗೊಂದು ರಾಷ್ಟ್ರ ಧ್ವಜಗಳು ಹಾರಾಡುತ್ತಿರುತ್ತವೆ.

ಒಮಾನಿಗಳು ತಮ್ಮ ತಮ್ಮ ವಾಹನಗಳನ್ನು ರಾಷ್ಟ್ರಧ್ವಜದಲ್ಲಿರುವ ಬಣ್ಣಗಳಂತೆ, ವಿವಿಧರೀತಿಯಲ್ಲಿ ಹಲವು ದಿನಗಳ ಕಾಲ ಅಲಂಕರಿಸುತ್ತಾರೆ. ಅಂದು ಸಂಜೆ, ಪ್ರಮುಖ ನಗರಗಳ ಬೀದಿಗಳಲ್ಲಿ ಮೆರವಣಿಗೆ ರೀತಿಯಲ್ಲಿ ನೂರಾರು ಕಾರುಗಳಲ್ಲಿ ಜನ
ರಾಷ್ಟ್ರ ಧ್ವಜವನ್ನಿಡಿದು ಸುತ್ತುತ್ತಾರೆ. ಒಮಾನಿಗಳು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ರಸ್ತೆಗಳಲ್ಲಿ ಬಾವುಟವನ್ನಿಡಿದು ಸುತ್ತುವ ಅವರ ರಾಷ್ಟ್ರ ಪ್ರೇಮವನ್ನು ಅಂದು ಕಾಣ ಬಹುದಾಗಿದೆ.

ಇಲ್ಲಿ ಒಮಾನ್ ಪ್ರಜೆಗಳ ನಂತರ ಅತಿದೊಡ್ಡ ಜನಸಂಖ್ಯೆಯಲ್ಲಿ ಸುಮಾರು ಐದಾರು ಲಕ್ಷ ಭಾರತೀಯ ಪ್ರಜೆಗಳು ಈ ದೇಶದಲ್ಲಿದ್ದಾರೆ. ಭಾರತೀಯರು ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಇಲ್ಲಿನ ವ್ಯಾಪಾರ ವಹಿವಾಟು ನಡೆಸುವ ಕಂಪನಿಗಳಲ್ಲಿ ಭಾರತೀಯರ ಪಾತ್ರ ಪ್ರಮುಖವಾದದ್ದು. ಒಮಾನ್ ದೇಶದ ಸುಲ್ತಾನರು ಮತ್ತು ಪ್ರಜೆಗಳು, ಭಾರತೀಯರನ್ನು ಅತ್ಯಂತ ಪ್ರೀತ್ಯಾದರಗಳಿಂದ ಕಾಣುತ್ತಾರೆ.

ಈ ಬಾರಿ ಕೋವಿಡ್-19 ರ ಕರಾಳ ಛಾಯೆಯ ನಡುವೆಯೂ, ಒಮಾನ್ ದೇಶ ಸಿಂಗರಿಸಿಕೊಂಡು ನಿಂತಿದೆ. ರಾಷ್ಟ್ರ ಪ್ರೇಮ ಒಮಾನಿಗಳಲ್ಲಿ ಪುಟಿದೆದ್ದಿದೆ. ಕೊರೋನಾ ತಂದಿಟ್ಟ ಸಂಧಿಗ್ದ ಪರಿಸ್ಥಿತಿಯಲ್ಲಿ, ಜನ ಕೊರೋನಾ ಸಮಯದಲ್ಲಿ ಹಲವಾರು ಕಟ್ಟು ನಿಟ್ಟಿನ ಕಾನೂನುಗಳನ್ನು ಇಲ್ಲಿ ರೂಪಿಸಲಾಗಿದೆ. ಜನ ಎಲ್ಲೆಂದರಲ್ಲಿ ಗುಂಪು ಗೂಡುವಂತಿಲ್ಲ. ಪಾರ್ಕ್ ಗಳು, ಬೀಚ್ ಗಳು ಮುಚ್ಚಿವೆ. ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ಸುಮಾರು ನೂರು ರಿಯಾಲ್ ದಂಡ( 19200 ರೂಪಾಯಿ ಗಳು) ವಿಧಿಸಲಾಗುತ್ತಿದೆ. ಕಾನೂನನ್ನ ಮೀರಿ ಗುಂಪು ಗೂಡಿದವರನ್ನ ದಂಡದ ಜತೆಗೆ ತಿಂಗಳುಗಳ ಕಾಲ ಸೆರೆಮನೆವಾಸ ಅನುಭವಿಸುವ ಶಿಕ್ಷೆ ವಿಧಿಸಲಾಗುತ್ತಿದೆ. ಜನರು ಈಗಾಗಲೆ ಜಾಗೃತಿಗೊಂಡಿದ್ದು, ಮಾಸ್ಕ್ ಇಲ್ಲದೆ ಎಲ್ಲೂ ಓಡಾಡುತ್ತಿಲ್ಲ. ಅನಗತ್ಯವಾಗಿ ಮನೆಯಿಂದ ಹೊರಬರಲು ಹಿಂಜರಿಯುತಿದ್ದಾರೆ.

ಒಮಾನ್ ದೇಶದ 50ನೇ ರಾಷ್ಟ್ರೀಯ ದಿನಾಚರಣೆಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಬೇಕಿದ್ದ ಈ ಸಂಧರ್ಭದಲ್ಲಿ, ದೇಶದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ರವರು 2020ರ ವರ್ಷದ ಆರಂಭದಲ್ಲಿ ನಿಧನರಾದ ನೋವು ಹಾಗೂ ಕೋವಿಡ್-19 ರ ಈ ಪರಿಸ್ಥಿತಿಯಿಂದಾಗಿ ಈ ಬಾರಿ ರಾಷ್ಟ್ರಿಯ ಹಬ್ಬಕ್ಕೆ ಹಿಂದಿನ ಕಳೆ ಇಲ್ಲ.

ಲೇಖನ: ಪಿ.ಎಸ್.ರಂಗನಾಥ,
ಮಸ್ಕತ್. ಒಮಾನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings