ಮತ್ತೊಮ್ಮೆ ನವೆಂಬರ್ 18 ಬಂದಿದೆ. ಈ ದಿನದ ವಿಶೇಷ ವೇನೆಂದರೆ, ಒಮಾನ್ ರಾಷ್ಟ್ರದ ಈ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ಅಲ್ ಸಯೀದ್ ರವರ ಜನ್ಮದಿನ, ಅವರು ಒಮಾನ್ ರಾಷ್ಟ್ರದ ಆಡಳಿತ ವಹಿಸಿಕೊಂಡಾಗಿನಿಂದ, ಅವರ ಜನ್ಮದಿನವನ್ನು ಇಲ್ಲಿನ ಪ್ರಜೆಗಳು ಒಮಾನ್ ರಾಷ್ಟ್ರೀಯ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಾರೆ. ಕಾಕತಾಳೀಯವೆಂಬಂತೆ, 1650 ರಲ್ಲಿ ಪೋರ್ಚಗೀಸ್ ರಿಂದ ಸ್ವಾತಂತ್ರ್ಯಗೊಂಡ ದಿನವೂ ಸಹ ನವೆಂಬರ್ ಹದಿನೆಂಟು. ಹೀಗಾಗಿ, ಒಮಾನ್ ದೇಶದಲ್ಲಿ ನವೆಂಬರ್ 18ನೇ ತಾರೀಖಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ. ಸುಲ್ತಾನರ ಜನ್ಮದಿನದ ನೆನಪಿಗಾಗಿ ಮಸ್ಕತ್ ನಲ್ಲಿ 18ನೇ ನವೆಂಬರ್ ಸ್ಟ್ರೀಟ್ ಎನ್ನುವ ಹದಿನೇಳು ಕಿ.ಮಿ. ಉದ್ದದ ರಸ್ತೆ ಸಹ ಇದೆ.
1970ರಲ್ಲಿ ಒಮಾನ್ ದೇಶದ ಸುಲ್ತಾನ್ ಆಗಿ ಅಧಿಕಾರ ಸ್ವೀಕರಿಸಿದ್ದ ಇವರು, 49 ವರ್ಷಗಳ ಅತಿ ದೀರ್ಘಕಾಲ ದೇಶದ ಆಳ್ವಿಕೆ ನಡೆಸಿದ್ದರು. ಜನರ ಪ್ರೀತಿ ವಿಶ್ವಾಸ ಗಳಿಸಿದ್ದಇವರು10 ಜನವರಿ 2020 ರಂದು ನಿಧನರಾಗಿದ್ದು, ಅವರು ಬದುಕಿದ್ದಿದ್ದರೆ ಅವರ ಆಳ್ವಿಕೆಯ 50ನೇ ವರ್ಷ ಸಂಪೂರ್ಣವಾಗಿ, ಅವರಿಗೆ 80 ವರ್ಷ ತುಂಬಿರುತಿತ್ತು. ಈ ಬಾರಿ "ಸುಲ್ತಾನ್ ಕಾಬೂಸ್" ರವರ ಅನುಪಸ್ಥಿತಿಯಲ್ಲಿ ಈಗಿನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರಿಂದ ಐವತ್ತನೇ ರಾಷ್ಟ್ರೀಯ ದಿನಾಚರಣೆ ಆಚರಿಸಲಾಗುತ್ತಿದೆ.
ಒಮಾನ್ ದೇಶದ ಇಂದಿನ ಅಭಿವೃದ್ಧಿಗೆ, ಜನಮಾನಸದಲ್ಲಿ ನೆಲೆಸಿರುವ ಸುಲ್ತಾನ್ ಖಾಬೂಸ್‌ರವರ ಕೊಡುಗೆ ಬಹಳಷ್ಟಿದೆ. ಅವರು ಒಮಾನ್ ದೇಶದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮುಂಚಿನ ಪರಿಸ್ಥಿತಿ ಹಾಗೂ ಇಂದಿನ ಪರಿಸ್ಥಿತಿ ಗೆ ಅಜಗಜಾಂತರ ವ್ಯತ್ಯಾಸವಿದೆ. ಈ ಕಾರಣಕ್ಕೆ, ಅಂದಿನ ಪರಿಸ್ಥಿತಿಯನ್ನು ನೋಡಿದವರು, ಇವರ ಆಳ್ವಿಕೆಯಲ್ಲಿ ಕಂಡ ಬದಲಾವಣೆಗಳನ್ನ ನೋಡಿ ಸುಲ್ತಾನ್ ರನ್ನು ದೇವರ ಇನ್ನೊಂದು ರೂಪದಲ್ಲಿ ನೋಡುತ್ತಿದ್ದರು. ಹಿಂದಿನ ಮತ್ತು ಇವರ ಆಡಳಿತ, ಎರಡನ್ನೂ ನೋಡಿರುವ ಹಳೇ ತಲೆಮಾರಿನ ಒಮಾನಿನ ಜನತೆ, ಇಂದಿನ ತಲೆಮಾರಿನವರಿಗೆ ಎಲ್ಲವನ್ನು ಮನಮುಟ್ಟುವಂತೆ ಕಾಲಕಾಲಕ್ಕೆ ತಮ್ಮ ಎಲ್ಲ ಅನುಭವಗಳನ್ನ ಹೇಳುತ್ತಾ ಬಂದಿದ್ದಾರೆ. ಹೀಗಾಗಿ, ಬಹಳಷ್ಟು ಜನರು ಅವರನ್ನು "ಬಾಬ" ಎಂದೇ ಕರೆಯುತ್ತಾರೆ. ಅವರು ಅಧಿಕಾರ ವಹಿಸಿಕೊಳ್ಳುವ ಮುಂಚೆ ಕೇವಲ ಬೆರಳೆಣಿಕೆಯಷ್ಟು ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಬರೀ ನೂರಾರು ಕಿ.ಮಿ. ಉದ್ದದ ಡಾಂಬಾರ್ ರಸ್ತೆ ಗಳು ಮಾತ್ರ ನಿರ್ಮಾಣ ಗೊಂಡಿದ್ದವು. ಆಗ ಒಮಾನ್ ಜಾಗತಿಕ ಬದಲಾವಣೆಗೆ ಇನ್ನೂ ಮುಕ್ತವಾಗಿರಲಿಲ್ಲ. ವಿದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿಬಂದಿದ್ದ ಸುಲ್ತಾನ್ ರವರು, ಈ ಬಗ್ಗೆ ಪ್ರತಿಯೊಂದನ್ನೂ ಅವಲೋಕಿಸಿ ಒಮಾನ್ ದೇಶದ ಬದಲಾವಣೆಗೆ ಮುನ್ನುಡಿ ಬರೆದರು.
ಈ ಐವತ್ತು ವರ್ಷಗಳಲ್ಲಿ, ಒಮಾನ್ ದೇಶದಲ್ಲಿ ಅತ್ಯುತ್ತಮ ಆಸ್ಪತ್ರೆ ಗಳು, ಶಾಲಾ ಕಾಲೇಜುಗಳು, ಅಂತರಾಷ್ಟ್ರೀಯ ಮಟ್ಟದ ರಸ್ತೆಗಳು, ಕ್ರೀಡಾಂಗಣಗಳು, ಸತತ ವಿದ್ಯುತ್, ನೀರು, ಎಲ್ಲರಿಗೂ ಉದ್ಯೋಗ, ಜನಸಾಮಾನ್ಯರು ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ಬಡ್ಡಿ ರಹಿತ ಸಾಲದ ವ್ಯವಸ್ಥೆಯನ್ನ ಜಾರಿಗೆ ತಂದರು. ದೇಶದಲ್ಲಿ ಎಲ್ಲ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ. 35 ರಷ್ಟು ಮೀಸಲಾತಿ ಜಾರಿ ಮಾಡಿದ್ದಾರೆ. ಅದು ಮುಂದೆ ಐವತ್ತರಷ್ಟು ತಲುಪುವ ಗುರಿಯನ್ನು ಮುಂದಿಟ್ಟಿದ್ದಾರೆ. 3 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಒಮಾನ್ ರಾಷ್ಟ್ರದಾದ್ಯಂತ ಅಂತರಾಷ್ಟ್ರೀಯ ದರ್ಜೆಯ ರಸ್ತೆ ಮತ್ತು ಹೆದ್ದಾರಿಗಳ ನಿರ್ಮಾಣ ಪ್ರಪಂಚದ ಅತ್ಯುತ್ತಮ 10 ರಾಷ್ಟ್ರಗಳ ಪಟ್ಟಿಯಲ್ಲಿ ಒಮಾನ್ ಗೆ ಸ್ಥಾನ ಸಿಗುವಂತೆ ಮಾಡಿದೆ. ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳಾದ, ವಸತಿ, ರಸ್ತೆ, ನೀರು, ವಿದ್ಯುತ್, ಶಾಲಾ ಕಾಲೇಜುಗಳು, ಆಸ್ಪತ್ರೆ ಇನ್ನು ಮುಂತಾದವುಗಳನ್ನು ಒಮಾನ್ ರಾಷ್ಟ್ರದ ಎಲ್ಲೆಡೆ ದೊರಕುವಂತೆ ಮಾಡಿದ್ದಾರೆ. ಬೇರೆ ರಾಷ್ಟ್ರಗಳಲ್ಲಿ ದೊರಕುವಂತೆ ಇಲ್ಲಿ ಅನಿಲ ಮತ್ತು ಪೆಟ್ರೋಲ್ ಸಂಪನ್ಮೂಲಗಳು ಕಡಿಮೆ. ಆದರೂ ಅದರಲ್ಲಿ ಬರುವ ಆದಾಯದಿಂದ ಒಮಾನ್‌ನಾದ್ಯಂತ ಹಲವಾರು ಯೋಜನೆಗಳನ್ನು ರೂಪಿಸಿ ಸಂಪೂರ್ಣ ಸಶಕ್ತ ರಾಷ್ಟ್ರ ನಿರ್ಮಿಸಿದ್ದಾರೆ. ಹೀಗೆ, ಅವರ ಕಾರ್ಯಗಳು ಮನೆ ಮನ ಮುಟ್ಟಿದವು. ಅವರ ಪ್ರತಿಯೊಂದು ಕಾರ್ಯಗಳನ್ನು ಒಮಾನಿನ ಪ್ರತಿಯೊಬ್ಬರೂ ಶ್ಲಾಘಿಸುತ್ತಾರೆ. ಇವರ ನಾಯಕತ್ವದಲ್ಲಿ ಒಮಾನ್ ರಾಷ್ಟ್ರ ಸತತ ಅಭಿವೃದ್ದಿ ಕಂಡಿದೆ. ದೇಶ ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ಪ್ರಗತಿಯತ್ತ ಸಾಗಿದೆ. ಸಂಪೂರ್ಣ ಒಮಾನ್‌ನ ವಿವಿಧ ಪ್ರಾಂತ್ಯದ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಆಡಳಿತ ನೀಡುವಲ್ಲಿ ಅವರು ಯಶಸ್ವಿಯಾಗಿದ್ದರು. ಸರ್ಕಾರದ ಕೊಡುಗೆಗಳಿಂದ ಬದುಕುವುದಕ್ಕಿಂತ, ಸ್ವಾವಲಂಬಿಯಾಗಿ ಬದುಕುವುದು ಹೇಗೆ ಎಂದು ಜನರಿಗೆ ಪ್ರೇರೇಪಿಸಿ, ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದ್ದರು.
ಒಮಾನ್ ದೇಶದಲ್ಲಿ, ಮಾನವ ನಿರ್ಮಿತ ಪ್ರವಾಸಿ ತಾಣಗಳಿಗಿಂತ ನೈಸರ್ಗಿಕ ನಿರ್ಮಿತ ಹಲವಾರು ಅದ್ಭುತ ತಾಣಗಳಿವೆ. ಅಂತಹ ಪ್ರವಾಸಿತಾಣಗಳನ್ನ ಅಭಿವೃದ್ದಿ ಪಡಿಸಿ, ಲಕ್ಷಾಂತರ ವಿದೇಶಿ ಪ್ರವಾಸಿಗರು ಭೇಟಿನೀಡುವಂತೆ ಮಾಡಿದ್ದಾರೆ. ಈ ಮೂಲಕ ಸಾವಿರಾರು ಒಮಾನಿಗಳು ಸ್ವಾವಲಂಬಿಯಾಗಿ ಬದುಕುವುಂತೆ ಮಾಡಿದ್ದಾರೆ.
ತಮ್ಮ ಸರಳ ವ್ಯಕ್ತಿತ್ವ, ನಡೆ ನುಡಿಯಿಂದ ಸುಲ್ತಾನ್ ಖಾಬೂಸ್ ಒಮಾನ್ ಪ್ರಜೆಗಳಲ್ಲದೆ, ಭಾರತೀಯರು ಮತ್ತು ಬೇರೆ ದೇಶಗಳಿಂದ ಇಲ್ಲಿಗೆ ಉದ್ಯೋಗಕ್ಕಾಗಿ ಬಂದಿರುವ ಪ್ರತಿಯೊಬ್ಬ ವಲಸಿಗರಿಗೂ ಮತ್ತು ಪಕ್ಕದ ಜಿಸಿಸಿ ರಾಷ್ಟ್ರಗಳ (ಯುಏಇ, ಸೌದಿ ಅರೇಬೀಯಾ, ಕುವೈತ್, ಬಹರೇನ್, ಕತಾರ್) ಜನರಿಗೂ ಸಹ ಪ್ರೀತಿ ಪಾತ್ರರಾಗಿದ್ದರು. ಒಮಾನಿನ ಅಚ್ಚು ಮೆಚ್ಚಿನ ರಾಜರಾಗಿದ್ದ ಅವರು, ಗಲ್ಫ್ ರಾಷ್ಟ್ರಗಳಲ್ಲಿ ಸುಲ್ತಾನ್‌ರವರಿಗೆ ಪ್ರತ್ಯೇಕವಾದ ಸ್ಥಾನವಿದೆ. ಈ ಪ್ರದೇಶದ ಶಾಂತಿ ನೆಲೆಸುವಲ್ಲಿ ಅವರ ಪಾತ್ರ ಮುಖ್ಯವಾದುದು. ಅವರೊಬ್ಬ ಪ್ರಶ್ನಾತೀತ ನಾಯಕನಾಗಿದ್ದರು. ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಾಗಿದ್ದ ಧೀಮಂತ ನಾಯಕ ಅವರು.
ಅವರು ಮಾಡಿರುವ ಎಲ್ಲಾ ಕೆಲಸಗಳು ಇಲ್ಲಿನ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ತಮ್ಮ ಅಧಿಕಾರಾವಧಿಯಲ್ಲಿ ಪ್ರಜೆಗಳೊಂದಿಗೆ, ಪಕ್ಕದ ರಾಷ್ಟ್ರಗಳು ಹಾಗೂ ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಾಗ ತಾವು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸುತಿದ್ದರು. 2013ರಲ್ಲಿ ಇರಾನ್ ಮತ್ತು ಅಮೆರಿಕಾ ಮಧ್ಯೆ ಶೀತಲ ಸಮರ ತಾರಕಕ್ಕೇರಿದಾಗ ಎರಡು ರಾಷ್ಟ್ರಗಳ ಮನವೊಲಿಸಿ ಅಂದಿನ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಹೀಗಾಗಿ ಗಲ್ಫ್ ರಾಷ್ಟ್ರಗಳಲ್ಲಿ ಇವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಮಧ್ಯ ಪ್ರಾಚ್ಯದಲ್ಲಿ ಕೆಲ ರಾಷ್ಟ್ರಗಳ ಸರ್ವಾಧಿಕಾರಿ ಧೋರಣೆ ಖಂಡಿಸಿ ಒಂದಲ್ಲ ಒಂದು ಕಡೆ ದಂಗೆಗಳು, ಯುದ್ಧಗಳು, ಸರಕಾರ ಮತ್ತು ಬಂಡುಕೋರರ ಯುದ್ಧ ಭೀತಿ ವಾತಾವರಣ ನಿರ್ಮಾಣವಾಗಿರುವ ಸನ್ನಿವೇಶದಲ್ಲೂ ಸಹ ಒಮಾನ್ ದೇಶದಲ್ಲಿ ಅಂತಹ ಚಟುವಟಿಕೆಗಳಿಗೆ ಆಸ್ಪದ ಕೊಡದೆ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಅವರು ಜನ ಮನ್ನಣೆ ಗಳಿಸಿದ್ದರು.
ಒಮಾನ್ ನಲ್ಲಿ ಭಾರತೀಯರು: ಈ ಹಿಂದೆ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಭಾರತೀಯ ಉದ್ಯಮಿಗಳು, ಒಮಾನ್ ದೇಶಕ್ಕೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅದರಲ್ಲಿ ಕಿಮ್ಜಿ ಕುಟುಂಬ ಪ್ರಮುಖವಾದುದು. ಅವರಿಗೆ ಒಮಾನ್‌ನ ಅತ್ಯುನ್ನತ ಶೇಖ್ ಪದವಿಯನ್ನು ನೀಡಿ ಗೌರವಿಸಲಾಗಿದೆ. ಹಿಂದೂಗಳಿಗೆ ದೇವಸ್ಥಾನಗಳು, ಕ್ರಿಶ್ಚಿಯನ್‌ರಿಗೆ ಚರ್ಚ್‌ಗಳು ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಜತೆಗೆ ಒಮಾನ್ ದೇಶದ ಸಂಕಷ್ಟ ಕಾಲದಲ್ಲಿ ಸಹಾಯ ಮಾಡಿದ ನೂರಾರು ಭಾರತೀಯರಿಗೂ ಸಹ ಪೌರತ್ವ ನೀಡಿದ್ದಾರೆ. ಸುಮಾರು ಇಪ್ಪತ್ತು ಲಕ್ಷದಷ್ಟು ವಲಸಿಗರಿರುವ ಒಮಾನ್ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಇಲ್ಲಿ ನೆಲೆಸಿದ್ದಾರೆ. ಕಾರ್ಮಿಕನಿಂದ ಹಿಡಿದು, ಇಂಜಿನಿಯರ್, ಡಾಕ್ಟರ್, ಲೆಕ್ಚರರ್ಸ್, ಪ್ರೊಫೆಸರ್ಸ್, ಇನ್ನು ಮುಂತಾದ ಅತ್ಯುನ್ನತ ಉದ್ಯೋಗದಲ್ಲಿ ಭಾರತೀಯರು ಇಲ್ಲಿ ಕೆಲಸ ಮಾಡುತಿದ್ದಾರೆ. ಒಮಾನ್ ಜನರ ಅತಿ ನಂಬುಗೆಯ ಮತ್ತು ಅತಿ ಹೆಚ್ಚು ವಿಶ್ವಾಸ ಗಳಿಸಿರುವ ಮೊದಲ ಸಾಲಿನಲ್ಲಿ ಭಾರತೀಯರಿದ್ದಾರೆ.
ಒಮ್ಮೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು, ಮಸ್ಕತ್ ನಲ್ಲಿ ನಮ್ಮ ಕನ್ನಡಿಗರು ಆಯೋಜಿಸಿದ್ದ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರು. ಹೀಗೆ ಮಾತನಾಡುತ್ತ, ಒಮಾನ್ ದೇಶವನ್ನು ಮತ್ತು ಸುಲ್ತಾನ್ ರವನ್ನು ಬಾಯ್ತುಂಬ ಹೊಗಳಿದರು. ನಾವು ಶ್ರೀರಾಮನ ರಾಜ್ಯಭಾರದ ಕುರಿತು ಕೇಳಿದ್ವಿ, ಓದಿದ್ದಿವಿ. ಆದರೆ ಕಣ್ಣಾರೆ ಕಾಣುವ ಭಾಗ್ಯವಿರಲಿಲ್ಲ. ಅಂತಹ ಆಡಳಿತವನ್ನು ಇಲ್ಲಿನ ಜನರಿಗೆ ಅವರು ಕೊಟ್ಟಿದ್ದಾರೆ. ಅವರ ಆಡಳಿತವನ್ನು ನೀವೆಲ್ಲ ಕಾಣುತಿದ್ದೀರಿ. ಇಂತಹ ಆಡಳಿತ ಪ್ರತಿಯೊಂದು ದೇಶ ಮತ್ತು ರಾಜ್ಯಗಳಲ್ಲಿ ಬರಬೇಕು ಎಂದಿದ್ದರು.
2014 ರಲ್ಲಿ ಚಿಕಿತ್ಸೆಗಾಗಿ ತಿಂಗಳುಗಳ ಕಾಲ ಸುಲ್ತಾನ್ ರವರು ಜರ್ಮನಿಗೆ ಹೋಗಿದ್ದಾಗ , ಇಲ್ಲಿನ ಜನರು ಪ್ರಾರ್ಥನೆಗಳಲ್ಲಿ ತೊಡಗಿ, ಅವರು ಆರೋಗ್ಯವಂತರಾಗಿ ಮರಳಲು ಕಾಯುತಿದ್ದರು. ಬಂದ ನಂತರ ಒಮಾನಿನಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ನಡೆಯಿತು. ಭಾರತದಲ್ಲೂ ಸಹ ಅದರಲ್ಲೂ ನಮ್ಮ ಕರ್ನಾಟಕದ ಹಲವೆಡೆ, ಒಮಾನ್ ಸುಲ್ತಾನ್ ರ ಆರೋಗ್ಯಕ್ಕಾಗಿ ಪೂಜೆ, ಯಾಗಗಳೂ ನಡೆದಿದ್ದವು. ಮೂಡುಬಿದಿರೆಯ ಅನಿವಾಸಿ ಭಾರತೀಯರೊಬ್ಬರು ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಚಂಡಿಕಾ ಮಹಾಯಾಗ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು.
ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, 2018 ರಲ್ಲಿ ಒಮಾನ್ ದೇಶಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿದ್ದರು. ಇಲ್ಲಿನ ಸುಲ್ತಾನ್ ಕಾಬೂಸ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯರನ್ನ ಉದ್ದೇಶಿಸಿ ಕಾರ್ಯಕ್ರಮ ನಡೆಸಲು ಸೂಕ್ತ ಸುರಕ್ಷತೆ ಮತ್ತು ಭದ್ರತೆ ಯೊಂದಿಗೆ ಅನುವು ಮಾಡಿಕೊಡಲಾಗಿತ್ತು. ಸಾಮಾನ್ಯವಾಗಿ, ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ಚಟುವಟಿಕೆ ಮತ್ತು ಸುಲ್ತಾನ್ ರವರ ಕಾರ್ಯಕ್ರಮ ಹೊರತು ಪಡಿಸಿ ಬೇರಾವುದೇ ಕಾರ್ಯಕ್ರಮ ಅಲ್ಲಿ ನಡೆಯುವುದಕ್ಕೆ ಅವಕಾಶವಿಲ್ಲ. ಆದರೆ ಭಾರತ ದೇಶದೊಂದಿಗಿನ ತಮ್ಮ ಉತ್ತಮ ಬಾಂಧವ್ಯ ದಿಂದ ಅಂತಹ ಕಾರ್ಯಕ್ರಮ ನಡೆಯಲು ಅವಕಾಶ ಮಾಡಿ ಕೊಟ್ಟಿದ್ದರು.
ಒಮಾನ್ ರಾಷ್ಟ್ರ ದಿನಾಚರಣೆ: ಸಾಮಾನ್ಯವಾಗಿ ಈ ದಿನ ದಂದು ರಾಷ್ಟ್ರದೆಲ್ಲೆಡೆ, ಸಂಭ್ರಮಾಚಾರಣೆಗೆ ಮಿತಿ ಇರುವುದಿಲ್ಲ. ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣದಿಂದ ಹಿಡಿದು, ಪ್ರಮುಖವಾದ ಸ್ಥಳದಲ್ಲಿ, ಸುಲ್ತಾನ್ ರವರಿಗೆ ಮಿಲಿಟರಿ ಪಡೆಗಳಿಂದ ಅತ್ಯುನ್ನತ ಮಟ್ಟದ ಗೌರವವನ್ನು ಸಲ್ಲಿಸಲಾಗುತ್ತದೆ. ಮಿಲಿಟರಿ ಕವಾಯತು, ಮೆರವಣಿಗೆ, ರಾಷ್ಟ್ರಗೀತೆ, ಮಿಲಿಟರಿ ಬ್ಯಾಂಡ್ ಗಳಿಂದ ಸಂಗೀತ ಕಾರ್ಯಕ್ರಮ, ಒಮಾನ್ ದೇಶದ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಪಟಾಕಿಗಳನ್ನು ಸಿಡಿಸುವ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ತಿಂಗಳುಗಳ ಕಾಲ ಪ್ರಮುಖ ನಗರಗಳ ಮುಖ್ಯ ರಸ್ತೆಗಳು ದೀಪಾಲಂಕಾರಗೊಂಡು ಸಿಂಗರಿಸಲ್ಪಡುತ್ತವೆ. ಪ್ರತಿ ನೂರು ಮೀಟರ್ ಗೊಂದು ರಾಷ್ಟ್ರ ಧ್ವಜಗಳು ಹಾರಾಡುತ್ತಿರುತ್ತವೆ.
ಒಮಾನಿಗಳು ತಮ್ಮ ತಮ್ಮ ಕಾರ್ ಗಳನ್ನು ರಾಷ್ಟ್ರಧ್ವಜದಲ್ಲಿರುವ ಬಣ್ಣಗಳಂತೆ, ವಿವಿಧರೀತಿಯಲ್ಲಿ ಹಲವು ದಿನಗಳ ಕಾಲ ಅಲಂಕರಿಸುತ್ತಾರೆ. ಅಂದು ಸಂಜೆ, ಪ್ರಮುಖ ನಗರಗಳ ಬೀದಿಗಳಲ್ಲಿ ಮೆರವಣಿಗೆ ರೀತಿಯಲ್ಲಿ ನೂರಾರು ಕಾರುಗಳಲ್ಲಿ ಜನ ರಾಷ್ಟ್ರ ಧ್ವಜವನ್ನಿಡಿದು ಸುತ್ತುತ್ತಾರೆ. ಒಮಾನಿಗಳು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ರಸ್ತೆಗಳಲ್ಲಿ ಬಾವುಟವನ್ನಿಡಿದು ಸುತ್ತುವ ಅವರ ರಾಷ್ಟ್ರ ಪ್ರೇಮವನ್ನು ಅಂದು ಕಾಣ ಬಹುದಾಗಿದೆ.
ಈ ಬಾರಿ ಕೋವಿಡ್-19 ರ ಕರಾಳ ಛಾಯೆಯ ನಡುವೆಯೂ, ಒಮಾನ್ ದೇಶ ಸಿಂಗರಿಸಿಕೊಂಡು ನಿಂತಿದೆ. ರಾಷ್ಟ್ರ ಪ್ರೇಮ ಒಮಾನಿಗಳಲ್ಲಿ ಪುಟಿದೆದ್ದಿದೆ. ಕೊರೋನಾ ತಂದಿಟ್ಟ ಸಂಧಿಗ್ದ ಪರಿಸ್ಥಿತಿಯಲ್ಲಿ, ಜನ ಕೊರೋನಾ ಸಮಯದಲ್ಲಿ ಹಲವಾರು ಕಟ್ಟು ನಿಟ್ಟಿನ ಕಾನೂನುಗಳನ್ನು ಇಲ್ಲಿ ರೂಪಿಸಲಾಗಿದೆ. ಜನ ಎಲ್ಲೆಂದರಲ್ಲಿ ಗುಂಪು ಗೂಡುವಂತಿಲ್ಲ. ಪಾರ್ಕ್ ಗಳು, ಬೀಚ್ ಗಳು ಮುಚ್ಚಿವೆ. ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ದಂಡ ವಿಧಿಸಲಾಗುತ್ತಿದೆ. ಒಮಾನ್ ದೇಶದ 50ನೇ ರಾಷ್ಟ್ರೀಯ ದಿನಾಚರಣೆಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಬೇಕಿದ್ದ ಈ ಸಂಧರ್ಭದಲ್ಲಿ, ದೇಶದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದ ಹಿಂದಿನ ಸುಲ್ತಾನ್ ಕಾಬೂಸ್ ಬಿನ್ ಸಯೀದ್ ರವರ ಅನುಪ ಸ್ಥಿತಿಯಲ್ಲಿ ಅದರಲ್ಲೂ ಕೋವಿಡ್-19 ರ ಈ ಪರಿಸ್ಥಿತಿಯಲ್ಲಿ ಈ ಸಂಭ್ರಮವನ್ನು ತುಂಬ ಸರಳವಾಗಿ ಆಚರಿಸಲಾಗುತ್ತಿದೆ.
PC:Google
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ