ಸೋಮವಾರ, ಜೂನ್ 14, 2021

ಮೈಸೂರು ಸಂಸ್ಥಾನದ 18ನೇ ಶತಮಾನದಲ್ಲಿನ ಇಬ್ಬರು ರಾಜಮಾತೆಯರು. ಭಾಗ-1



 ಮೈಸೂರು ಸಂಸ್ಥಾನದ ೧೮ನೇ ಶತಮಾನದಲ್ಲಿನ ಇಬ್ಬರು ರಾಜಮಾತೆಯರು. ಭಾಗ-1

- ಪಿ.ಎಸ್.ರಂಗನಾಥ. 


ಮೈಸೂರು ಸಂಸ್ಥಾನದಲ್ಲಿ 18ನೇ ಶತಮಾನದಲ್ಲಿ ಇಬ್ಬರು ರಾಜಮಾತೆಯರು ಬಹಳ ಪ್ರಸಿದ್ದರು. ಅವರ ಕುರಿತು ಹಲವಾರು ವಿಷಯಗಳು ದಾಖಲಾಗಿವೆ. ಇಬ್ಬರು ಕಠಿಣ ಸವಾಲುಗಳನ್ನು ಎದುರಿಸಿದವರು. ಮೈಸೂರು ರಾಜ್ಯದ ಹಿತ ಕಾಪಾಡುವ ದಿಟ್ಟಿಯಲ್ಲಿ ಕಾಲದಿಂದ ಕಾಲಕ್ಕೆ ಎದುರಾದ ಎಲ್ಲ ರೀತಿಯ ಅಡೆ ತಡೆಗಳನ್ನು ನಿಭಾಯಿಸುವಲ್ಲಿ ತೆರೆಮರೆಯಲ್ಲಿ ಅಹಿರ್ನಿಶಿ ದುಡಿದ ರಾಜಮಾತೆಯರು ಇವರು. 


1. ಮಹಾರಾಣಿ ದೇವಾಜಮ್ಮಣ್ಣಿ ದೊಡ್ಡ ಕೃಷ್ಣರಾಜ ಒಡೆಯರ್ ಪತ್ನಿ 

2. ಮಹಾರಾಣಿ ಲಕ್ಷ್ಮಿಅಮ್ಮಣ್ಣಿ ಎರಡನೇ ಕೃಷ್ಣರಾಜ ಒಡೆಯರ ಪತ್ನಿ 


ಒಂದು ಸಂಸ್ಥಾನವನ್ನ ಉಳಿಸಿ, ಬೆಳೆಸುವುದು ಬಹಳ ಕಷ್ಟದ ಕೆಲಸ.  ಅತ್ಯಂತ ಪ್ರಬಲವಾಗಿದ್ದ ವಿಜಯನಗರ ಸಾಮ್ರಾಜ್ಯ ಹೇಗೆ ನಾಶ ಹೊಂದಿತು ಎನ್ನುವುದು ನಮಗೆಲ್ಲ ತಿಳಿದಿದೆ. ಅದೇ ರೀತಿ ಮೈಸೂರು ಸಂಸ್ಥಾನವು ಸಹ ವಿನಾಶ ಹೊಂದುವುದರಲ್ಲಿತ್ತು. ಆದರೆ  ಕೆಲ ಪ್ರಾರ್ಥಸ್ಮರಣೀಯರ ಸತತ ಪರಿಶ್ರಮದಿಂದ ರಾಜ್ಯವನ್ನ ರಕ್ಷಿಸಿದ್ದರಿಂದ ಇಂದು ಸಮೃದ್ದವಾಗಿ ಬೆಳೆದಿರುವ ಮೈಸೂರು ಪ್ರಾಂತ್ಯವನ್ನ ನಾವು ಕಾಣುತಿದ್ದೇವೆ. ಅವರಲ್ಲಿ ಈ ರಾಜಮಾತೆಯರ ಪಾಲು ಸಹ ಇದೆ.


ರಾಜಮಾತೆಯರ ವಿಚಾರಕ್ಕೆ ಬರುವ ಮುನ್ನ ಕೆಲವಿಷಯಗಳನ್ನ ನಿಮ್ಮಲ್ಲಿ ಹೇಳಬೇಕಿದೆ. ಮೈಸೂರಿನ ಅರಸರು ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಂತೆ ಕಾರ್ಯನಿರ್ವಹಿಸಿದ್ದರು, ಯಾವಾಗ  ವಿಜಯನಗರ ಸಾಮ್ರಾಜ್ಯ (1565) ಪತನವಾಯಿತೋ ಅಂದಿನಿಂದ ಇವರು ಸ್ವತಂತ್ರವಾಗಿ ಆಳ್ವಿಕೆ ನಡೆಸಲು ಪ್ರಾರಂಭಿಸಿದರು. ಒಂದು ಕಾಲದಲ್ಲಿ, ಅತ್ಯಂತ ಪರಾಕ್ರಮಿ, ವೀರಾಗ್ರಣಿಗಳಾದ ರಣಧೀರ ಕಂಠೀರವ ನರಸರಾಜ ಒಡೆಯರ್ ಮತ್ತು ಚಿಕ್ಕದೇವರಾಜ ಒಡೆಯರ್ ಅವರ ಆಡಳಿತಾವಧಿ ಸಮಯದಲ್ಲಿ ಮೈಸೂರು ರಾಜ್ಯ ಕೀರ್ತಿ ಪ್ರತಿಷ್ಟೆಯಲ್ಲಿ ಉತ್ತುಂಗಕ್ಕೇರಿತ್ತು.


ರಣಧೀರ ಕಂಠೀರವ ನರಸರಾಜ ಒಡೆಯರ್ (ಆಡಳಿತ: 1638-1659) ಕಾಲದಲ್ಲಿ ಮೈಸೂರು ಸಂಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತ್ತು. ಇನ್ನು ಚಿಕ್ಕದೇವರಾಜ ಒಡೆಯರ್ (ಆಡಳಿತ:1673-1704) ಕಾಲದಲ್ಲಿ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತ ಪ್ರಬಲ ರಾಜ್ಯವಾಗಿ ಬೆಳೆದಿತ್ತು. ಈ ಅವಧಿಯಲ್ಲಿ ಮೈಸೂರು ಒಡೆಯರ ವೈಭವ ವಿಕ್ರಮ, ಕೀರ್ತಿ ಪ್ರತಿಷ್ಠೆ, ಶಿಖರಾವಸ್ಥೆ ತಲುಪಿತ್ತು. ಇತಿಹಾಸಕಾರರ ಪ್ರಕಾರ ಈ ಇಬ್ಬರು ಅರಸರು ತಮ್ಮ ಶೌರ್ಯ ಹೋರಾಟಗಳಿಂದ ಹೆಸರುವಾಸಿಯಾಗಿದ್ದರು.  


ಸುಮಾರು ಅರವತ್ತು ವರ್ಷಗಳ ಕಾಲ ಒಬ್ಬರ ನಂತರ ಒಬ್ಬರು ತಮ್ಮ ಶೌರ್ಯ ಪರಾಕ್ರಮಗಳಿಂದ ರಾಜ್ಯವನ್ನ ಸಂರಕ್ಷಿಸಿ, ಗಡಿಯನ್ನು ವಿಸ್ತರಿಸಿ, ಹಲವಾರು ಜನಮೆಚ್ಚುವ ಕೆಲಸಗಳನ್ನ ಮಾಡಿ, ಜನರ ಹೃದಯ ಸಿಂಹಾಸನದಲ್ಲಿ ರಾರಾಜಿಸಿದ್ದ ಚಿಕ್ಕದೇವರಾಜ ಒಡೆಯರ ಕಾಲಾನಂತರ ಇಂತಹ ಪ್ರಬಲ ಸಶಕ್ತ ರಾಜಮನೆತನ, ನಶಿಸಿ ಹೋಗುವ ಅಂಚಿನಲ್ಲಿತ್ತು.  ಒಡೆಯರ ವಾರಸುದಾರ ಕಂಠೀರವ ನರಸರಾಜ ಒಡೆಯರ್ II  (1704-1714) ಇನ್ನೂ ಬಾಲಕ. ಇವರಿಗೆ ಮಾತು ಬರುತ್ತಿರಲಿಲ್ಲ ಹಾಗೂ ಕಿವಿ ಕೇಳಿಸುತ್ತಿರಲಿಲ್ಲ. ಅವರನ್ನ ಮೂಕ ಅರಸರು ಎಂದು ಕರೆಯುತಿದ್ದರು. ವಾರಸುದಾರ ಆದ್ದರಿಂದ ಅವರು ಪಟ್ಟಕ್ಕೇರಬೇಕಾಗುತ್ತದೆ. ಹಾಗೂ ಹೀಗೂ ತಾಯಿ ಮತ್ತು ಮಂತ್ರಿಗಳ ಸಹಕಾರದೊಂದಿಗೆ ಅಧಿಕಾರಕ್ಕೇರುತ್ತಾರೆ. ಇದೇ ಸಂದರ್ಭದಲ್ಲಿ ಅಂದಿನ ದಳವಾಯಿಗಳು ಮೈಸೂರಿನ ಆಡಳಿತವನ್ನು ಕೈಗೆತ್ತಿಕೊಂಡು ಮೈಸೂರಿನ ಅಧಃಪತನಕ್ಕೆ ಅಲ್ಲಿಂದ ಮುನ್ನುಡಿ ಬರೆಯುತ್ತಾರೆ. ಹೆಸರಿಗೆ ಮಾತ್ರ ರಾಜರಿದ್ದರು. ಅಧಿಕಾರವು ದಳವಾಯಿಗಳ ಕೈಯಲ್ಲಿತ್ತು. ಆಗ ನೋಡಿ, ದಳವಾಯಿಗಳ ಆಟ ಶುರುವಾಗುತ್ತದೆ. ಅವರದೇ ಮೇಲಾಟ.  ಕಂಠೀರವ ನರಸರಾಜ ಒಡೆಯರ್ II ಅವರು ಜಾಸ್ತಿ ದಿನ ಆಡಳಿತ ನಡೆಸಲಾಗಲಿಲ್ಲ. ಇವರ ಎರಡನೇ ಪತ್ನಿ ಚೆಲ್ವಜ ಅಮ್ಮಣಿ ಅವರ ಹಿರಿಯ ಪುತ್ರ  ದೊಡ್ಡ ಕೃಷ್ಣರಾಜ ಒಡೆಯರ್ (1714-1732)ರವರು ತಮ್ಮ ಹತ್ತನೇ ಹುಟ್ಟುಹಬ್ಬದ ಒಂದು ತಿಂಗಳ ಮುಂಚೆ ಮೈಸೂರು ಸಿಂಹಾಸನವನ್ನು ಏರಿದರು. 


ದೊಡ್ಡ ಕೃಷ್ಣರಾಜ ಒಡೆಯರ್ 1714 ರಿಂದ 1732ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ನಿಜಾಂ, ಆರ್ಕಾಟ್ ನವಾಬ್, ಸಿರಾ ಕಡಪ, ಕರ್ನೂಲ್, ಸವಾನೂರ್ ಮತ್ತು ಇಕ್ಕೇರಿ ರಾಜರು ಒಟ್ಟಾಗಿ ಯುದ್ಧಕ್ಕೆ ಬಂದಿದ್ದರಿಂದ ಒಂದುಕೋಟಿ ಕಾಣಿಕೆ ನೀಡಿ ಸಂಧಾನ ಮಾಡಿಕೊಳ್ಳಲಾಯಿತು.  ಚಿಕ್ಕ ವಯಸ್ಸು ಅಂದರೆ 29 ವರ್ಷದಲ್ಲಿ ಇವರು ಸಾವನ್ನಪ್ಪಿದರು. ಸುಮಾರು 18 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದರೂ ಸಹ ದಳವಾಯಿಗಳ ಪ್ರಬಲ ಹಿಡಿತದಿಂದ ಮುಕ್ತರಾಗುವುದು ಇವರಿಗೆ ಸಾಧ್ಯವಾಗಿರಲಿಲ್ಲ. 


ಪುತ್ರಸಂತಾನವಿಲ್ಲದ ದೊಡ್ಡ ಕೃಷ್ಣರಾಜ ಒಡೆಯರ್ ಕ್ರಿ.ಶ. 1732ರಲ್ಲಿ ನಿಧನರಾದ ನಂತರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವವಾಯಿತು. ಆಗ ದೊಡ್ಡಕೃಷ್ಣರಾಜ ಒಡೆಯರ್ ಪತ್ನಿ ಮಹಾರಾಣಿ ದೇವಾಜಮ್ಮಣ್ಣಿ ಅವರು ತಮ್ಮ ಸಮೀಪದ ಸಂಬಂಧಿ ಅಂಕನಹಳ್ಳಿ ದೇವರಾಜ ಅರಸ್ ಅವರ ಪುತ್ರ  ಚಾಮರಾಜ ಒಡೆಯರ್ VII  (1732-1734) ಬಹದ್ದೂರ್  ಅವರನ್ನು ದತ್ತು ತೆಗೆದು ಕೊಳ್ಳಲು ನಿರ್ಧರಿಸುತ್ತಾರೆ. ಮೈಸೂರು ರಾಜ್ಯದ ಆಡಳಿತದಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದ ದಳವಾಯಿಗಳು ಮಹಾರಾಣಿಯವರ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಆದರೆ ಅವರ ಪ್ರತಿರೋಧವನ್ನು ಲೆಕ್ಕಿಸದೆ ದತ್ತುಪುತ್ರ ಏಳನೇ ಚಾಮರಾಜ ಒಡೆಯರ್ VII  ಅವರಿಗೆ ಪಟ್ಟ ಕಟ್ಟುವಲ್ಲಿ ಮಹಾರಾಣಿ ದೇವಾಜಮ್ಮಣ್ಣಿ ಯಶಸ್ವಿಯಾಗುತ್ತಾರೆ. ಅವರನ್ನ ಪಟ್ಟಾಭಿಷೇಕ ಮಾಡಿ ಅಧಿಕಾರ ನಡೆಸುತ್ತಾರೆ.  ಈ ಸಮಯದಲ್ಲಿ, ದೇವಾಜಮ್ಮಣ್ಣಿಯವರು ತೆಗೆದುಕೊಂಡ ಹಲವಾರು ನಿರ್ಧಾರಗಳು, ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ. ನಾಲ್ಕನೇ ಚಾಮರಾಜ ಒಡೆಯರ್ 1732ರಿಂದ 1734ರವರೆಗೆ ರಾಜ್ಯವಾಳುತ್ತಾರೆ. ಪಟ್ಟಾಭಿಷೇಕ ಮಾಡಿದ ಯಶಸ್ಸು ಬಹುಕಾಲ ಉಳಿಯುವುದಿಲ್ಲ.


ಚಾಮರಾಜ ಒಡೆಯರ್ ಅಧಿಕಾರ ವಹಿಸಿಕೊಂಡ ಅನಂತರ ಹಲವು ತಿಂಗಳ ಕಾಲ ದಳವಾಯಿಗಳ ಪ್ರಾಬಲ್ಯವನ್ನು ಸಹಿಸಿಕೊಂಡಿದ್ದರು. ಆ ವೇಳೆಗೆ ಆಡಳಿತವೆಲ್ಲವೂ ಕಳಲೆ ಕುಟುಂಬದವರಾದ ದೇವರಾಜಯ್ಯ ಮತ್ತು ಕರಾಚೂರಿ ನಂಜರಾಜಯ್ಯ ಸರ್ವಾಧಿಕಾರಿ ನಂಜರಾಜಯ್ಯ ಇವರ ಕರಗತವಾಗಿತ್ತು. ರಾಜ್ಯದ ಆಡಳಿತ ಮತ್ತು ಹಣಕಾಸಿನ ವ್ಯವಹಾರದ ಜೊತೆಗೆ ಅರಮನೆಯ ಆಡಳಿತ ಹಾಗೂ ರಾಜನಿಗೆ ಸೇರಿದ ಜಮೀನುಗಳ ಉತ್ಪತ್ತಿ ಮೊದಲಾದ ಎಲ್ಲಾ ವಿಷಯಗಳ ಮೇಲ್ವಿಚಾರಣೆಯನ್ನೂ ದಳವಾಯಿಗಳೇ ನಿರ್ವಹಿಸುತ್ತಿದ್ದರು.


 ದಳವಾಯಿಗಳು ಏಳನೇ ಚಾಮರಾಜ ಒಡೆಯರ್ ಅವರನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳುವ ಸರ್ವ ಪ್ರಯತ್ನವನ್ನು ನಡೆಸುತ್ತಾರೆ. ಇಂತಹ ಪ್ರಯತ್ನಗಳಿಗೆ ಮಣಿಯದ ಚಾಮರಾಜ ಒಡೆಯರ್ ರಾಜಮಾತೆ ದೇವಾಜಮ್ಮಣ್ಣಿ ಯವರ ಮಾರ್ಗದರ್ಶನದಲ್ಲಿ ತಮ್ಮ ಸ್ವತಂತ್ರ ಅಸ್ತಿತ್ವ ಪ್ರದರ್ಶಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದ ಆಕ್ರೋಶಗೊಂಡ ದಳವಾಯಿ ಸಹೋದರರು ಪಿತೂರಿ ನಡೆಸಿ ಏಳನೇ ಚಾಮರಾಜ ಒಡೆಯರ್‌ರನ್ನು ಬಂಧಿಸಿ ಕಬ್ಬಾಳು ದುರ್ಗದಲ್ಲಿ ಸೆರೆಯಾಗಿಡುತ್ತಾರೆ. ಚಾಮರಾಜರು ಅಲ್ಲಿಯೇ ನಿಧನ ಹೊಂದುತ್ತಾರೆ.


ದಳವಾಯಿಗಳ ದುರಾಕ್ರಮಣವನ್ನು ತೀವ್ರವಾಗಿ ಪ್ರತಿರೋಧಿಸಿದ ದೇವಾಜಮ್ಮಣ್ಣಿಯವರು ಅರಸು ಪರಂಪರೆಯ ಮತ್ತೊಬ್ಬ ಯುವಕನನ್ನು ದತ್ತು ಪಡೆದು ಅವನಿಗೆ ಪಟ್ಟಕಟ್ಟುತ್ತಾರೆ.  ಅವರೇ ಇಮ್ಮಡಿ ಕೃಷ್ಣರಾಜ ಒಡೆಯರ್ (1735-1766). 


ಇವರು ರಾಜ್ಯಭಾರ ಆರಂಭಿಸಿದ ಮೇಲೆ ಅವರಿಗೂ ದಳವಾಯಿಗಳಿಂದ ಕಿರುಕುಳ ಆರಂಭವಾಗುತ್ತದೆ. ಮತ್ತೆ ದಳವಾಯಿಗಳಿಂದ ಅರಸರಿಗೆ ಸಂಕಟ ಒದಗಬಹುದೆಂದು ಲೆಕ್ಕ ಹಾಕಿದ ದೇವಾಜಮ್ಮಣ್ಣಿಯವರು ಈ ಬಾರಿ ಮೈಸೂರು ರಾಜಪರಂಪರೆಗೆ ನಿಷ್ಠರಾಗಿದ್ದ ಪ್ರಜೆಗಳು ಹಾಗೂ ಸೇನೆಯ ಮೂಲಕ ದಳವಾಯಿಗಳಾದ ದೇವರಾಜಯ್ಯ ಹಾಗೂ ನಂಜರಾಜಯ್ಯನವರ ಸರ್ವಾಧಿಕಾರವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಾರೆ. ಇದನ್ನರಿತ ದಳವಾಯಿ ಸಹೋದರರು ಮೈಸೂರು ಅರಸರ ನಿಷ್ಠರನ್ನು ಬಗ್ಗುಬಡಿಯಲು ಪ್ರತಿತಂತ್ರ ರೂಪಿಸುತ್ತಾರೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ದಳವಾಯಿಗಳ ದರ್ಬಾರನ್ನು ಅಂತ್ಯಗೊಳಿಸಲು ಪ್ರಯತ್ನಿಸಿದ ಪ್ರಜೆಗಳು ಹಾಗೂ ದಂಗೆ ಎದ್ದ ಸೇನಾಪಡೆಯ ಪ್ರಮುಖರನ್ನು ಬಂಧಿಸಿ ಅವರ ಕಿವಿಮೂಗುಗಳನ್ನು ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರ್ ಎದುರೇ ಕತ್ತರಿಸಿ ಹಾಕುವ ಕ್ರೌರ್ಯವನ್ನು ಪ್ರದರ್ಶಿಸುತ್ತಾರೆ. ಆದರೆ ಇದರಿಂದ ಎದೆಗುಂದದ ನಿಷ್ಠಾವಂತ ಪ್ರಜೆಗಳು ಹಾಗೂ ಸೇನಾಪಡೆಗಳು ದಳವಾಯಿಗಳ ದರ್ಪ ಕೊನೆಗಾಣಿಸುವ ನಿಟ್ಟಿನಲ್ಲಿ ಮತ್ತೆ ದಂಗೆ ಏಳುವ ಪ್ರಯತ್ನದಲ್ಲಿರುತ್ತಾರೆ. ಈ ಸಮಯದಲ್ಲಿ ದಳವಾಯಿಗಳು ಮೈಸೂರು ಸೇನಾಪಡೆಯಲ್ಲಿಯೇ ಇದ್ದ ಯುವಕನಾಗಿದ್ದ ಹೈದರಾಲಿಗೆ  ಈ ದಂಗೆಯನ್ನು ಹತ್ತಿಕ್ಕುವ ಜವಾಬ್ದಾರಿಯನ್ನು ವಹಿಸುತ್ತಾರೆ


ಈ ಅವಕಾಶವನ್ನು ಸದುಪಯೋಗಿಸಿಕೊಂಡ ಹೈದರಾಲಿ ಸೇನೆಯಲ್ಲಿ ಎದ್ದ ದಂಗೆಯನ್ನು ಸದೆಬಡಿದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾನೆ. ಈ ಮೂಲಕ ಮೈಸೂರು ರಾಜ್ಯದಲ್ಲಿ ಹೈದರಾಲಿ-ಟಿಪ್ಪು ಸುಲ್ತಾನ್ ಪರ್ವ ಆರಂಭವಾಗುತ್ತದೆ. ಇದರಿಂದ ರಾಜ ಪರಂಪರೆಗೆ ಗ್ರಹಣ ಬಡಿಯುತ್ತದೆ. ದಳವಾಯಿಗಳ ವಿರುದ್ಧ ಹೀಗೆ ನಿರಂತರ ಹೋರಾಟ ನಡೆಸುತ್ತಲೇ ದೇವಾಜಮ್ಮಣ್ಣಿ ನಿಧನ ಹೊಂದುತ್ತಾರೆ. 

ಸಂಗ್ರಹ ಮಾಹಿತಿ .

ಮುಂದುವರಿಯುವುದು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings