ಮಂಗಳವಾರ, ಜೂನ್ 1, 2021

ಒಮಾನ್ ಪ್ರಜೆಗಳಲ್ಲಿನ ಸ್ನೇಹ, ಆತ್ಮೀಯತೆ ಮತ್ತು ಬಂಧುತ್ವದ ಬಗೆಗಿನ ಕಾಳಜಿಯ ಕಿರು ನೋಟ

 ಒಮಾನ್ ಪ್ರಜೆಗಳಲ್ಲಿನ ಸ್ನೇಹ, ಆತ್ಮೀಯತೆ ಮತ್ತು ಬಂಧುತ್ವದ ಬಗೆಗಿನ ಕಾಳಜಿಯ ಕಿರು ನೋಟ

ಬರಹ:- ಪಿ.ಎಸ್.ರಂಗನಾಥ.


ನಮ್ಮ ಕಡೆ, ಹಬ್ಬ ಹರಿದಿನ, ಜಾತ್ರೆ, ಮದುವೆ, ಮುಂಜಿ, ನಾಮಕರಣ, ಮುಂತಾದ ಕಾರ್ಯಕ್ರಮಗಳಲ್ಲಿ ಬಂಧು ಬಳಗ ಮತ್ತು ಸ್ನೇಹಿತರು ಎಲ್ಲರೂ ಒಟ್ಟಾಗಿ ಸೇರುವುದನ್ನ ನಾವು ಕಾಣುತ್ತೇವೆ. ಕಳೆದ ಎರಡು ಮೂರು ದಶಕಗಳಿಂದ, ಕುಟುಂಬ ಸಮೇತ ಎಲ್ಲರೂ ಪ್ರವಾಸಕ್ಕೆ ಹೋಗಿಬರುವುದು ಮತ್ತು ಟೆಂಪಲ್ ಟೂರ್ ಅಂತ, ಧರ್ಮಸ್ಥಳ, ತಿರುಪತಿ ಮಂತ್ರಾಲಯ, ಶ್ರೀಶೈಲ ಹೀಗೆ ದೇವಸ್ಥಾನಗಳಿಗೆ ಹೋಗಿ ಬರುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ.
ಹಾಗೇಯೇ, ಇತ್ತಿಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿನ ಜನರು ಕುಟುಂಬ ಸಮೇತ ಎಲ್ಲರೂ ಮನೆಯಿಂದ ಹೊರಗಡೆ ಹೋಗಿ, ಅದು ಪಾರ್ಕ್, ಬೀಚ್, ಹೋಟೆಲ್, ಸಿನಿಮಾ ಅಥವ ಮಾಲ್ ಗಳಲ್ಲಿ ಸಮಯ ಕಳೆಯುತ್ತಾರೆ. ಸಾಮಾನ್ಯವಾಗಿ ಜನರು ಕೆಲಸಕ್ಕೆ ಹೊರಗಡೆ ಹೋದರೆ ಮತ್ತೆ ಮನೆಗೆ ಬರುವುದು ಸಂಜೆಯಾಗುತ್ತದೆ, ಹೀಗೆ ವಾರ ಪೂರ್ತಿ ಮಡದಿ ಮಕ್ಕಳು ಮನೆಯಲ್ಲಿ ಇರುತ್ತಾರೆ, ಧೈನಂಧಿನ ಬದುಕಿನ ಏಕಾತಾನತೆಯಿಂದ ಬದಲಾವಣೆ ಇರಲಿ ಎನ್ನುವ ಉದ್ದೇಶದಿಂದ, ಜನರು ಸ್ವಲ್ಪ ಸಮಯವನ್ನು ಕುಟುಂಬದೊಂದಿಗೆ ಹೊರಗಡೆ ಕಳೆಯಲು ಇಷ್ಟಪಡುತ್ತಾರೆ.
ಅದೇ ರೀತಿ ನಾವಿರುವ ಒಮಾನ್ ದೇಶದಲ್ಲಿ, ಒಮಾನಿ ಪ್ರಜೆಗಳು ಸಹ ಈ ಏಕತಾನತೆಯಿಂದ ಬದಲಾವಣೆ ಇರಲಿ ಎನ್ನುವ ಉದ್ದೇಶದಿಂದ ವಾರಕ್ಕೊಮ್ಮೆ ಕುಟುಂಬದೊಂದಿಗೆ ಬೀಚ್ ಅಥವ ಪಾರ್ಕ್ ಗಳಲ್ಲಿ ಎಲ್ಲರೂ ಮನೆಯಿಂದ ಹೊರಗಡೆ ಸೇರುತ್ತಾರೆ.
ಗುರುವಾರ ಸಂಜೆ, ಶುಕ್ರವಾರ ಮತ್ತು ಶನಿವಾರ ದಿನಗಳಂದು ಅದಲ್ಲದೆ ರಜಾದಿನಗಳಂದು ಸಹ ಗುಂಪು ಗುಂಪಾಗಿ ಜನ ಸೇರುವುದನ್ನ ನಾವು ಕಾಣುತ್ತೇವೆ. ಮೊದ ಮೊದಲಿಗೆ ಒಮಾನ್ ಗೆ ಬಂದಾಗ ನನಗೆ ಇದೆಂತಹ ಸೋಜಿಗ ಅನ್ನಿಸುತಿತ್ತು.
ನಾನು ಕಛೇರಿಯಿಂದ ನಮ್ಮ ಹಳೆಯ ಮಸ್ಕತ್, ಸಿದಾಬ್, ಅಲ್ ಭುಸ್ತಾನ್ ರಸ್ತೆ ಮೂಲಕವಾಗಿ ವಾದಿ ಕಬೀರ್ ತಲುಪುವಾಗ, ಇಲ್ಲಿ ಕೆಲ ಪಾರ್ಕ್ ಗಳು ಬರುತ್ತವೆ ಜತೆಗೆ ಸಮುದ್ರವನ್ನ ನೋಡುವ ವೀವ್ ಪಾಯಿಂಟ್ ಗಳು ಇವೆ ಅದರ ಜತೆಗೆ ರಸ್ತೆ ಬದಿಯಲ್ಲಿ ದೊಡ್ಡದಾದ ಹಸಿರು ನೆಲಹಾಸು ಹೊದಿಸಿದಂತಿರುವ ತುಂಬಾ ದೊಡ್ಡ ದೊಡ್ಡ ಜಾಗಗಳಿವೆ ಈ ಜಾಗಗಳಲ್ಲಿ, ಗುರುವಾರ ಸಂಜೆ, ಶುಕ್ರವಾರ ಮತ್ತು ಶನಿವಾರ ದಿನಗಳಂದು ಒಮಾನಿಗಳಂತೆ, ಮಿಕ್ಕ ಅನಿವಾಸಿ ಪ್ರಜೆಗಳು ಸಹ ಗುಂಪು ಗುಂಪಾಗಿ ಕುಳಿತು ಸಮಯ ಕಳೆಯುತ್ತಾರೆ. ನನಗೆ ಹೀಗೆಲ್ಲ ರಸ್ತೆ ಬದಿಯಲ್ಲಿ, ಕುಳಿತು ಕೊಳ್ಳುವುದು ವಿಚಿತ್ರ ವೆನಿಸುತಿತ್ತು. ಹೀಗೇಕೆ ಎಂದು ಕೇಳಿದರೆ, ದಿನಾಲು ಮನೆಯಲ್ಲಿ ಕೂಳಿತು ಊಟ ಮಾಡುವುದು ಸಾಮಾನ್ಯ, ಆದರೆ ಹೊರಗೆ ಬಂದು ಕುಳಿತು ಸಮಯ ಕಳೆಯುವುದು ಚೆನ್ನಾಗಿರುತ್ತದೆ. ಒಂದು ಬದಲಾವಣೆಯನ್ನು ನಾವು ಕಾಣಬಹುದು ಎನ್ನುತ್ತಾರೆ. ಇದು ಮಸ್ಕತ್ ಮಾತ್ರವಲ್ಲ, ಒಮಾನ್ ನ ಎಲ್ಲ ನಗರಗಳಲ್ಲಿ ಈ ತರಹ ಪದ್ದತಿಯಿದೆ,
ಇನ್ನೂ ಗ್ರಾಮೀಣಭಾಗದಲ್ಲಿ ಇನ್ನೂ ವಿಶೇಷವಾಗಿರುತ್ತದೆ ಎನ್ನುತ್ತಾರೆ. ಒಮಾನ್ ನಲ್ಲಿ ಹಲವಾರು ಉತ್ತಮವಾದ ಜಾಗಗಳು ಮಸ್ಕತ್, ಸೋಹಾರ್, ಸಲಾಲ್ಹ ನಿಜ್ವ ಸೂರ್ ಮುಂತಾದ ಪ್ರದೇಶಗಳಲ್ಲಿ ಇವೆ. ಒಮಾನ್ ನಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯೇನಿಲ್ಲ. ಲೆಕ್ಕ ವಿಲ್ಲದಷ್ಟು ಬೀಚ್ ಗಳು, ಪಾರ್ಕ್, ನಿಸರ್ಗ ನಿರ್ಮಿತ ರಮ್ಯತಾಣಗಳು ಒಂದೇ ಎರಡೇ... ಹೀಗೆ ವಾರದ ಕೊನೆಯಲ್ಲಿ, ಈ ಎಲ್ಲ ಜಾಗಗಳು ಪ್ರವಾಸಿಗರಿಂದ ತುಂಬಿರುತ್ತವೆ.
ಇದೆಲ್ಲ ಸಾಮಾನ್ಯ ವಿಷಯವಾದರೆ, ಒಮಾನ್ ನಲ್ಲಿ ಮತ್ತೊಂದು ವಿಶಿಷ್ಟ ಆಚರಣೆಯೊಂದಿದೆ. ನಗರ ಪ್ರದೇಶದಲ್ಲಿ ಕೆಲಸದ ಸಲುವಾಗಿ ವಾಸ ಮಾಡುವ ಒಮಾನಿಗಳು, ವಾರದ ಕೊನೆಯಲ್ಲಿ ತಪ್ಪದೇ ತಮ್ಮ ತಮ್ಮ ಊರುಗಳಿಗೆ ಎರಡು ದಿನಗಳ ಮರಳುತ್ತಾರೆ. ಆ ದಿನಗಳಲ್ಲಿ ಎಲ್ಲರನ್ನು ಭೇಟಿ ಮಾಡುತ್ತಾರೆ, ನಂತರ ವಾಪಾಸ್ಸು ಕೆಲಸಕ್ಕೆ ಮರಳುತ್ತಾರೆ. ತಮ್ಮ ನೆರೆಹೊರೆಯವರು, ಸ್ನೇಹಿತರು ಮತ್ತು ಕುಟುಂಬದ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯಲು ಪ್ರತಿ ಬಾರಿ ಸ್ವಯಂಪ್ರೇರಿತರಾಗಿ ಅವರನ್ನು ಭೇಟಿ ಮಾಡುತ್ತಾರೆ. ಹೀಗೆ ಯಾರನ್ನಾದರು ಬೇಟಿ ಮಾಡಲು ಸಾಧ್ಯವಾಗದೆ ಇದ್ದರೆ, ಅಯ್ಯೋ ಈ ಸಾರಿ ಅವರನ್ನ ಭೇಟಿ ಮಾಡಲಾಗಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಮುಂದಿನ ಸಾರಿ ಅದಕ್ಕಾಗಿ ಸಮಯವನ್ನ ಮೀಸಲಿಡುತ್ತಾರೆ. ಇನ್ನು ನಗರಗಳಲ್ಲಿ ವಾಸಿಸುವ ಒಮಾನಿಗಳು, ಅಲ್ಲಿಯೇ ಇರುವ ತಮ್ಮ ಬಂಧು ಬಳಗದವರೊಂದಿಗೆ ಸಮಯ ಕಳೆಯಲು ಇಚ್ಚಿಸುತ್ತಾರೆ.
ಇಲ್ಲಿನ ಒಮಾನಿಗಳು ಧಾರ್ಮಿಕ ಆಚರಣೆಯಿರಲಿ ಅಥವಾ ಬೇರೆ ಯಾವುದೇ ಕಾರ್ಯಕ್ರಮ ಇರಲಿ, ತಮ್ಮ ಆತ್ಮೀಯರು, ಬಂಧು ಬಳಗದವರೊಂದಿಗೆ, ತಮ್ಮ ಮನೆಯಲ್ಲಿ ತಯಾರಿಸಿದ ವಿಶೇಷ ಆಹಾರ ಮತ್ತು ಸಿಹಿತಿಂಡಿ ಗಳೊಂದಿಗೆ ಆಚರಿಸಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ, ನೆರೆಹೊರೆಯವರೊಂದಿಗೆ ಎಲ್ಲ ರೀತಿಯ ವಿಶೇಷ ಆಹಾರಗಳನ್ನಹಂಚಿಕೊಳ್ಳುವುದನ್ನ ಸಹ ಇಚ್ಚಿಸುತ್ತಾರೆ. ಇನ್ನೂ ಪವಿತ್ರ ತಿಂಗಳು ರಂಜಾನ್ ಸಮಯದಲ್ಲಿ ಹಾಗೂ ಮುಸ್ಲಿಮರು ಮಾಡುವ ಉಪವಾಸದ ನಂತರ ಬರುವ ಈದ್ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸಿ ಅದನ್ನು ಸುತ್ತಮುತ್ತಲಿನ ಎಲ್ಲ ಜನರಿಗೆ ಮತ್ತು ಮುಸ್ಲಿಮೇತರರಿಗೂ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.
ಒಮಾನಿಗಳಲ್ಲಿ ಖಾವಾ ಗೆ ವಿಶಿಷ್ಟ ಸ್ಥಾನ ವಿದೆ. ಖಾವಾ ಎಂದರೆ ಅರೇಬಿಕ್ ಭಾಷೆಯಲ್ಲಿ ಕಾಫಿ., ನಮ್ಮಕಡೆ ಹಾಲು ಸಕ್ಕರೆ ಬೆರೆಸಿದ ಕಾಫಿಯಲ್ಲ. ಡಿಕಾಕ್ಷನ್ ತರಹ ಇರುತ್ತದೆ, ಅದರ ಜತೆಗೆ, ಖರ್ಜೂರ ವನ್ನು ತಪ್ಪದೆ ಸೇವಿಸುತ್ತಾರೆ. ಒಮಾನಿಗಳು ಅಥಿತಿಗಳು ಮನೆಗೆ ಆಹ್ವಾನಿಸಿದರೆ, ಖಾವ, ಖರ್ಜೂರ, ಹಣ್ಣುಗಳು ಮತ್ತು ಒಮಾನಿ ಹಲ್ವ ನೀಡಿ ತಪ್ಪದೆ ಸತ್ಕರಿಸುತ್ತಾರೆ. ತಮ್ಮ ಮನೆಯಲ್ಲಿರುವ ಅತ್ಯುತ್ತಮ ಆಹಾರವನ್ನು ನೀಡಿ ಅಥಿತಿಗಳನ್ನು ಸತ್ಕರಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ.
ಇಲ್ಲಿನ ಪ್ರಾದೇಶಿಕ ರಿಟೈಲ್ ಕಂಪನಿಯೊಂದು ಕಂಪನಿಯೊಂದು ನಡೆಸಿದ ಅಧ್ಯಯನದ ಪ್ರಕಾರ ಸುಮಾರು 94 ಪ್ರತಿಶತದಷ್ಟು ಜನರು ತಮ್ಮ ಪ್ರೀತಿಪಾತ್ರರೊಡನೆ ಗುಣಮಟ್ಟದ ಸಮಯವನ್ನು ಕಳೆಯುವಾಗ ಸಂತೋಷದಿಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಶೇ. 77 ರಷ್ಟು ಜನ ತಮ್ಮ ಕುಟುಂಬ, ಬಂಧು ಬಳಗ ಮತ್ತು ಸ್ನೇಹಿತರ ಜತೆ ಸಮಯ ಕಳೆಯಲು ಇಚ್ಚಿಸುತ್ತಾರೆ. ಹೆತ್ತವರಿಂದ ಮಕ್ಕಳು ದೂರವಿದ್ದರೆ, ಅಂತಹವರು ಕನಿಷ್ಟ ಪಕ್ಷ ತಿಂಗಳಿಗೆ ಎರಡು ಸಾರಿಯಾದರು ಹೆತ್ತವರು, ಸಹೋದರ ಮತ್ತು ಸಹೋದರಿಯರನ್ನ ಕಾಣಲು ಬರುತ್ತಾರೆ ಅಂತ ಅಧ್ಯಯನದಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಭೇಟಿಗಳಲ್ಲಿ, ಊಟ, ಮಾತು, ಹರಟೆ ಇರುತ್ತದೆ. ಅದು ಬಿಟ್ಟರೆ ಯಾವುದೇ ರೀತಿಯ ದುರಭ್ಯಾಸದ ಅಥವ ನಿಷಿದ್ದ ಚಟುವಟಿಕೆಗಳು ಅಲ್ಲಿ ನಡೆಯುವುದಿಲ್ಲ. ಹಳೆಯ ಒಮಾನಿ ಮನೆಗಳು, ಕ್ಯಾಸೆಲ್ ಗಳು, ಮುಂತಾದ ಪ್ರದೇಶಗಳಲ್ಲಿ, ಹತ್ತಾರು ಜನರು ಕೂತುಕೊಳ್ಳುವುದಿಕ್ಕೆ ಒಂದು ಕಾರ್ಪೆಟ್ ಅಥವ ಚಾಪೆ ಹಾಸಿರುತ್ತಾರೆ, ಸುತ್ತಲೂ ತಲೆ ದಿಂಬುಗಳು ಮತ್ತು ಕುಶನ್ ಇರುವ ಚಿಕ್ಕ ಬೆಡ್ ಮಾದರಿಯ ಹಾಸಿಗೆ ಗಳನ್ನು ಹಾಕಿರುತ್ತಾರೆ. ಇನ್ನು ಕೆಲವು ಕಡೆ ನಮ್ಮಲ್ಲಿರುವಂತೆ ಜಗುಲಿ ಕಟ್ಟೆಗಳ ಮಾದರಿಯಲ್ಲಿ ನಿರ್ಮಿಸಿ ಜನ ಕೂತು ಕೊಳ್ಳುವಂತೆ ವ್ಯವಸ್ಥೆ ಮಾಡಿರುತ್ತಾರೆ. ಅವುಗಳನ್ನ "ಬರ್ಜ" ಎಂದು ಕರೆಯುತ್ತಾರೆ. ಈ ಸ್ಥಳಗಳಲ್ಲಿ, ಹಿರಿಯರು ಕಿರಿಯರು ಸೇರಿ, ಮಾತು, ಹಾಡು, ಹರಟೆ ಮತ್ತು ಧಾರ್ಮಿಕ ಬೋಧನೆಯನ್ನು ಮಾಡುತ್ತಾರೆ. ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಕಷ್ಟ ಸುಖ ಮಾತನಾಡಿಕೊಳ್ಳುತ್ತಾರೆ.
ಊರಿನ ಹಿರಿಯರು ಮತ್ತು ಕುಟುಂಬದ ಸದಸ್ಯರು ಇಲ್ಲಿ ಕುಳಿತುಕೊಂಡು ಸಮಾಜದ ಆಗು ಹೋಗುಗಳನ್ನ, ಊರಿನಲ್ಲಿ ನಡೆಯುವ ಕಾರ್ಯಕ್ರಮಗಳು, ಆಗಬೇಕಿರುವ ಕೆಲಸಗಳನ್ನ ಚರ್ಚಿಸುತ್ತಾರೆ. ಇಂತಹ ಸ್ಥಳಗಳಲ್ಲಿ ಈ ಪದ್ದತಿಯನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಹೀಗೆ ತಲೆಮಾರುಗಳಿಂದ ಮುಂದಿನ ಪೀಳಿಗೆಗೆ ಈ ಸಂಪ್ರದಾಯ ಬೆಳೆದುಕೊಂಡು ಬರುತ್ತಿದೆ. ಒಟ್ಟಿನಲ್ಲಿ ಎಲ್ಲರೊಂದಿಗೆ ಸಂಪರ್ಕದಿಂದಿರಲು ಈ ವ್ಯವಸ್ಥೆಯನ್ನು ರೂಡಿಸಿಕೊಂಡಿದ್ದಾರೆ. ಇಂತಹ ಪದ್ದತಿ ಈಗಲೂ ಗ್ರಾಮೀಣ ಪ್ರದೇಶಗಳಲ್ಲಿದೆ. ಇದರ ಮುಂದುವರಿದ ಭಾಗವಾಗಿ, ನಗರ ಪ್ರದೇಶಗಳು ಮತ್ತು ಪಟ್ಟಣಗಳಲ್ಲಿ, ತಮ್ಮ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆಯುತ್ತಾರೆ. ನೂರಾರು ವರ್ಷಗಳ ಹಿಂದೆ ಮೊದ ಮೊದಲಿಗೆ ಷುರ ಎನ್ನುವ ಪ್ರಾಂತ್ಯದಲ್ಲಿ ಈ ಪದ್ದತಿ ಶುರುವಾಗಿತ್ತಂತೆ, ನಂತರ ಅದು ಎಲ್ಲ ಕಡೆ ಪ್ರಚಾರಗೊಂಡು, ಇಂದು ಮನೆ ಮನೆಗೂ ತಲುಪಿದೆ.
ಲೇಖನ ವನ್ನು ಪ್ರಕಟಿಸಿದ ಕನ್ನಡಪ್ರಭ ದಿನಪತ್ರಿಕೆಯವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings