ಬಡವ ಬಲ್ಲಿದ ಎನ್ನದೆ ಹಸಿದ ಹೊಟ್ಟೆ ತುಂಬಿಸುವ "ಕುಬೂಸ್"
ಗಲ್ಫ್ ರಾಷ್ಟ್ರಗಳಲ್ಲಿ ಕೈತುಂಬಾ ದುಡಿಯಬಹುದು ಎನ್ನುವ ಕಾರಣಕ್ಕೆ ಬಹಳಷ್ಟು ಜನರು ಉದ್ಯೋಗಕ್ಕಾಗಿ ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಬರುತ್ತಾರೆ. ಕೇವಲ ಭಾರತ ಮಾತ್ರವಲ್ಲದೆ, ಪಾಕಿಸ್ತಾನ, ಬಾಂಗ್ಲಾದೇಶ್, ಫಿಲಿಫಿನ್ಸ್, ಅಫ್ಘಾನಿಸ್ತಾನ್, ಆಫ್ರಿಕಾ ದೇಶಗಳು ಇತ್ಯಾದಿ ದೇಶಗಳ ಕಡೆಯಿಂದ ಬಂದು ಒಂದಲ್ಲ ಒಂದು ಉದ್ಯೋಗ ಮಾಡುತ್ತಾರೆ. ಇಲ್ಲಿಗೆ ಬರುವ ಒಬ್ಬೊಬ್ಬರದು ಒಂದೊಂದು ಉದ್ದೇಶ, ಊರಿನಲ್ಲಿ ತಮ್ಮ ಮನೆಯವರ ಹೊಟ್ಟೆ ತುಂಬಿಸಲು, ಮನೆಯಲ್ಲಿನ ಸಹೋದರಿಯರು/ ಮಕ್ಕಳ ಮದುವೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಮತ್ತು ಸ್ವಂತಕ್ಕೊಂದು ಸೂರು ಹೀಗೆ ವಿವಿಧ ಕಾರಣ ಹೊತ್ತು ಇಲ್ಲಿಗೆ ಲಗ್ಗೆ ಇಡುವುದು ಸಾಮಾನ್ಯ ಸಂಗತಿ. ಊರಿನಲ್ಲಿ ತಿಂಗಳಿಗೆ ಹತ್ತುಸಾವಿರ ದುಡಿಯಲು ಸಾಧ್ಯವಾಗದವರು, ಇಲ್ಲಿಗೆ ಬಂದು ಇಪ್ಪತ್ತು, ಮೂವತ್ತು ಸಾವಿರಕ್ಕೂ ಹೆಚ್ಚು ದುಡಿಯುತ್ತಾರೆ.
ಇಷ್ಟು ದೂರ ಬಂದು, ಇಲ್ಲಿ ದುಡಿದ ಮೇಲೆ ಅನಗತ್ಯ ಖರ್ಚುಮಾಡಿದರೆ ಬಂದ ಉದ್ದೇಶ ಸಾರ್ಥಕವಾಗುವುದಿಲ್ಲವೆಂದು ಹೆಚ್ಚು ಹೆಚ್ಚು ಉಳಿತಾಯ ಮಾಡಲು ಯೋಚಿಸುತ್ತಾರೆ. ಹೀಗಾಗಿ
ಅತ್ಯಂತ ಕಡಿಮೆ ಖರ್ಚಿನ ಊಟ, ಅತಿ ಕಡಿಮೆ ದರದಲ್ಲಿ ದೊರೆಯುವ ವಸತಿ ಸೌಲಭ್ಯ,
ಸಾರಿಗೆ ಸೌಲಭ್ಯ ಇತ್ಯಾದಿ, ಹೀಗೆ ವಿವಿಧ ಮಾರ್ಗಗಳನ್ನು
ಕಂಡು ಕೊಳ್ಳುವುದು ಸಹಜ. "ಅವನು ಕುಬೂಸ್ ತಿಂದು ದುಡ್ಡು ಉಳಿಸುತ್ತಾನೆ" ಎಂದು ಕೆಲವರು
ತಮಾಷೆಗಾಗಿ ಹೇಳುತ್ತಾರೆ, ಅದು ನಿಜ. ಹೆಚ್ಚಿನ ಹಣ ಮತ್ತು ಅಡುಗೆ ತಯಾರಿಸುವ
ಸಮಯ ಉಳಿಸಲು ಈ ಕುಬೂಸ್ ನೆರವಾಗುತ್ತದೆ. ಹೋಟೇಲ್ ಗಳಲ್ಲಿ ಒಂದು ಚಪಾತಿಯ ಬೆಲೆ ಹತ್ತು ರುಪಾಯಿಂದ
ಇಪ್ಪತ್ತು ರೂಪಾಯಿವರೆಗೆ ಇದ್ದರೆ, ಅದೇ ಹತ್ತುರೂಪಾಯಿಗೆ ಮೂರ್ನಾಲ್ಕು ಕುಬೂಸ್
ಗಳು ಸಿಗುತ್ತವೆ. ಅದಕ್ಕೆ ಜತೆಯಾಗಿ ಮನೆಯಿಂದ ಏನಾದರು ತರಕಾರಿ ಪಲ್ಯತಂದರೆ ಸಾಕು. ಅತ್ಯಂತ ಕಡಿಮೆ
ಖರ್ಚಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ವಿಧಾನ ಇದು. ಒಂದೊತ್ತಿನ ಊಟಕ್ಕಾಗಿ ಸುಖಾ ಸುಮ್ಮನೆ ಜಾಸ್ತಿ
ಹಣ ಏಕೆ ಖರ್ಚು ಮಾಡುವುದು ಎಂದು ಯೋಚಿಸುವ ಸಾವಿರಾರು ಬಡ ಕಾರ್ಮಿಕರು ಈ ಪದ್ದತಿಯನ್ನು ಅವಲಂಬಿಸಿದ್ದಾರೆ.
ತೆಳ್ಳನೆಯ ಮೃದುವಾದ ಲೆಬನೀಸ್ ಕುಬೂಸ್, ದಪ್ಪದಾದ ಬ್ರೆಡ್ ನಂತೆ ಇರುವ ಕುಬೂಸ್, ಗೋದಿಯಿಂದ ಮಾಡಿದ ತರಿತರಿಯಾಗಿರುವ ಕುಬೂಸ್ ಹೀಗೆ ವಿಧವಿಧದ ಕುಬೂಸ್ ಗಳು ಇಲ್ಲಿ ಲಭ್ಯವಿದೆ.
ಚಪಾತಿ ಅಥವ ಪೂರಿಮಾಡುವ ರೀತಿಯಲ್ಲಿ ಮೈದಾ ಅಥವ ಗೋಧಿ
ಹಿಟ್ಟನ್ನು ಕಲೆಸಿ, ಚಪಾತಿಯಂತೆ ಉದ್ದಿ ಅದನ್ನು ಓವೆನ್ ನಲ್ಲಿ ಹದವಾಗಿ
ಬೇಯಿಸುತ್ತಾರೆ. ಮಶಿನ್ ನಲ್ಲಿ ನಿಮಿಷಕ್ಕೆ ನೂರಾರು ಕುಬೂಸ್ ಗಳು ತಯಾರಾಗುತ್ತವೆ. ಇದಕ್ಕೆ ಬಳಸುವ
ಪ್ರಿಸರ್ವೇಟೀವ್ಸ್ ನಿಂದ ಎರಡು ಮೂರು ದಿನಗಳವರೆಗೂ ಈ ಕುಬೂಸ್ ಗಳು ಹಾಳಾಗದೆ ಇರುತ್ತವೆ. ಮನೆಗೆ ಕೊಂಡೋಯ್ದ
ಮೇಲೆ ಮತ್ತೊಮ್ಮೆ ಬಿಸಿ ಮಾಡುವ ಅಗತ್ಯವಿರುವುದಿಲ್ಲ. ನೇರವಾಗಿ ಯಾವುದಾದರು ಪಲ್ಯದ ಜತೆ ತಿನ್ನಬಹುದು.
ಇವುಗಳನ್ನ ಪ್ಯಾಕೆಟ್ ಮಾಡಿ ಬೇಕರಿ, ಹೋಟೆಲ್, ರೆಸ್ಟಾರೆಂಟ್, ಕ್ಯಾಂಟೀನ್, ಮೆಸ್,
ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಹೀಗೆ ಎಲ್ಲಾ ಕಡೆ ಸರಬರಾಜು ಮಾಡುತ್ತಾರೆ. ಬಹಳಷ್ಟು ಕಡೆ ಚಪಾತಿ ಸಿಗದಿದ್ದರೂ,
ಐದಾರು ಕುಬೂಸ್ ಗಳಿರುವ ಪ್ಯಾಕೆಟ್ ಎಲ್ಲಾ ಕಡೆಗಳಲ್ಲಿ ಲಭ್ಯವಿರುತ್ತದೆ. ಕುಬೂಸ್
ಪ್ಯಾಕೆಟ್ ಮೇಲೆ ತಯಾರಾದ ದಿನಾಂಕ ಮತ್ತು ಎಕ್ಸ್ಪೈರಿ ದಿನಾಂಕ ನಮೂದು ಮಾಡಿ ಮಾರಾಟ ಮಾಡುವುದು ಕಡ್ಡಾಯ. ಎಕ್ಸ್ಪೈರಿ ದಿನಾಂಕದೊಳಗೆ ಬಿಕರಿಯಾಗದ ಪ್ಯಾಕೆಟ್ ಗಳನ್ನು
ಮಾರುವಂತಿಲ್ಲ ಹೀಗಾಗಿ ಮಿಕ್ಕುಳಿದ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಆಯಾ ಕಂಪನಿಗಳಿಗೆ
ಮರಳಿಸುತ್ತಾರೆ.
ಇನ್ನು, ಅಫ್ಘನಿಸ್ತಾನಿಗಳು,
ಪಾಕಿಸ್ತಾನಿಗಳು, ಇರಾನಿಗಳು ನಡೆಸುವ ಮ್ಯಾನುಯಲ್ ಬೇಕರಿಯಲ್ಲಿ
ತಯಾರಿಸಲ್ಪಡುವ ತಂದೂರಿ ರೊಟ್ಟಿಗಳು ಸಹ ಇಲ್ಲಿ ಬಹಳ ಪ್ರಸಿದ್ದ. ಗಾತ್ರದಲ್ಲಿ ಚಪಾತಿಯ ಎರಡು ಅಥವ
ಮೂರರಷ್ಟಿರುವ ಈ ರೊಟ್ಟಿಗಳು ಸಹ ಅತಿ ಕಡಿಮೆ ದರದಲ್ಲಿ ದೊರೆಯುತ್ತವೆ. ಈ ತಂದೂರಿ ರೊಟ್ಟಿಗಳು ಸಂಜೆಯ
ವೇಳೆಯಲ್ಲಿ ಮಾತ್ರ ತಯಾರಿಸಲ್ಪಡುತ್ತವೆ. ಕೊಲ್ಲಿ ರಾಷ್ಟ್ರಗಳಲ್ಲಿ ಕುಬೂಸ್ ಪ್ರಸಿದ್ದವಾದರೆ,
ಈಜಿಪ್ಟ್ ಮತ್ತು ಇರಾನಿನಲ್ಲಿ "ಪಾಕೆಟ್" ಪಿಟಾ ಬ್ರೆಡ್ ಮತ್ತು ಇರಾಕ್‌ನಲ್ಲಿ
ಫ್ಲಾಟ್ ತನ್ನೂರ್ ಬ್ರೆಡ್ ಎಂದು ಕರೆಯಲ್ಪಡುತ್ತವೆ.
ಕೆಲ ಕಾಫೀ ಶಾಪ್ ಗಳಲ್ಲಿ ಈ ಕುಬೂಸ್ ಅನ್ನು ಉಪಯೋಗಿಸಿ, ವೆಜಿಟೇಬಲ್, ಪಲಾಫಿಲ್, ಚಿಕನ್ ಶವರ್ಮ , ಮೊಟ್ಟೆ ಇತ್ಯಾದಿ ವಿಧದಲ್ಲಿ ಸ್ಯಾಂಡ್ ವಿಚ್ ತಯಾರಿಸಿಕೊಡುತ್ತಾರೆ. ಕಡಿಮೆ ಬೆಲೆಯಲ್ಲಿ, ಅತಿ ಬೇಗನೇ ತಯಾರಿಸಿಕೊಡುವ ಈ ಸ್ಯಾಂಡ್ ವಿಚ್, ಬೆಳಿಗ್ಗೆ ಮನೆಯಲ್ಲಿ ತಿಂಡಿ ಮಾಡಿಕೊಳ್ಳಲು ಆಗದೆ ಇರುವವರಿಗೆ ಹಾಗೂ ಹೊರಡುವ ಗಡಿಬಿಡಿಯಲ್ಲಿರುವವರಿಗೆ ಒಂದು ವರದಾನ. ನಗರ ಪ್ರದೇಶದಿಂದ ದೂರವಿರುವ ಗುಡ್ಡಗಾಡು, ಮರುಭೂಮಿಗಳಲ್ಲಿ ವಾಸಿಸುವ ಬಡ ಬದ್ದುಗಳು(ಬೆದೋಯಿನ್ಸ್) ಸಹ ಈ ಕುಬೂಸ್ ಅನ್ನು ಇಷ್ಟ ಪಡುತ್ತಾರೆ. ಬಡವ ಬಲ್ಲಿದ ಎನ್ನದೆ ಎಲ್ಲರಿಗೂ ಪ್ರಿಯವಾದ ರೊಟ್ಟಿ ಈ ಕುಬೂಸ್. ಕೆಲ ಪಂಚತಾರ ಹೊಟೇಲ್ ಗಳ ಬಫೆಯಲ್ಲೂ ಈ ಕುಬೂಸ್ ದೊರಕುತ್ತದೆ.
ಬಹುತೇಕ ಅರಬ್ ರಾಷ್ಟ್ರಗಳಲ್ಲಿ 'ಕುಬೂಸ್' ಪ್ರಧಾನ ಆಹಾರವಾಗಿದೆ. ತಮ್ಮ ದೇಶದಲ್ಲಿ ಒಬ್ಬ ಬಡಪಾಯಿಯೂ
ಹೊಟ್ಟೆ ಹಸಿವಿನಿಂದ ನರಳಬಾರದು ಎನ್ನುವ ಉದ್ದೇಶದಿಂದ ಇಲ್ಲಿನ ಸರ್ಕಾರಗಳು ಅತಿ ಕಡಿಮೆ ಬೆಲೆಯಲ್ಲಿ
ಮಾರುಕಟ್ಟೆಯಲ್ಲಿ ದೊರೆಯುವಂತಹ ವ್ಯವಸ್ಥೆ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಒಂದೇ ಬೆಲೆಯಿರುವುದು
ಇಲ್ಲಿನ ವಿಶೇಷ. ಸರ್ಕಾರಗಳು ಬೆಲೆ ನಿಯಂತ್ರಣದ ಮಾಡುವುದಲ್ಲದೆ, ಬೆಲೆ ಏರಿಕೆ
ಬಗ್ಗೆ ಮತ್ತು ತೂಕದ ಬಗ್ಗೆಯೂ ನಿಗಾವಹಿಸುತ್ತಾರೆ.
ಬಹುತೇಕ ಎಲ್ಲಾ ದೇಶಗಳಲ್ಲಿ, ಅಲ್ಲಿನ ಫ್ಲೋರ್ ಮಿಲ್ ಗಳು ಮತ್ತು
ದೊಡ್ಡ ದೊಡ್ಡ ಬೇಕರಿಗಳು ಈ ಕುಬೂಸ್ ಅನ್ನು ತಯಾರಿಸುತ್ತವೆ. ಈ ಸಂಸ್ಥೆಗಳಿಗೆ ಲಕ್ಷಾಂತರ ರಿಯಾಲ್
ಗಳ ಸಬ್ಸಿಡಿ, ಅನುದಾನವನ್ನು ಸರಕಾರಗಳು ನೀಡುತ್ತವೆ ಮತ್ತು ಅತಿ ಕಡಿಮೆದರದಲ್ಲಿ
ಗೋಧಿ ಹಿಟ್ಟನ್ನು ಪೂರೈಸಲಾಗುತ್ತದೆ. ಆಹಾರ ಭದ್ರತೆಯ ಒಂದು ಒಳ್ಳೆಯ ಉದ್ದೇಶದಿಂದ ಈ ವ್ಯವಸ್ಥೆ ಇಲ್ಲಿ
ಜಾರಿಯಲ್ಲಿದೆ. ಇಂತಹ ವಿಧಾನವನ್ನು ಭಾರತದಲ್ಲೂ ಸಹ ಜಾರಿಗೆ ತಂದರೆ, ಬಡ
ಕೂಲಿ ಕಾರ್ಮಿಕರು, ನಿರ್ಗತಿಕರು, ಅಸಹಾಯಕರಿಗೆ
ಬಹಳಷ್ಟು ಅನುಕೂಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಲ್ಲಿ ಕಷ್ಟಪಟ್ಟು ದುಡಿಯುವ ಒಬ್ಬ ಅನಿವಾಸಿ ಒಂದೆರೆಡು ವರ್ಷಕ್ಕೊಮ್ಮೆ
ಊರಿಗೆ ಹೋದಾಗ, ಅವನ ಆಗಮನ ಮನೆಯವರಲ್ಲದೆ ಸ್ನೇಹಿತರಲ್ಲೂ
ಬಹಳಷ್ಟು ನಿರೀಕ್ಷೆ ಇರುತ್ತದೆ. ಸಾವಿರಾರು ರೂಪಾಯಿ
ಹಣಗಳಿಸುತ್ತಾನೆ ಎಂದು ಯೋಚಿಸುತ್ತಾರೆ ವಿನಹ ಇಲ್ಲಿ ಹೇಗೆ ದುಡಿಯುತ್ತಾರೆ? ಎಷ್ಟು ಕಷ್ಟ ಪಡುತ್ತಾರೆ ಎನ್ನುವ ಮಾಹಿತಿಯಿರುವುದಿಲ್ಲ. ಬಂಧು ಬಳಗ, ಸ್ನೇಹಿತರು ಇಲ್ಲದ ದೂರದೂರಿಗೆ ಬಂದು ದುಡಿಮೆಯ ಪ್ರತಿ ರುಪಾಯಿ ಗಳಿಕೆಯ ಹಿಂದೆ ಒಂದೊಂದು
ಕಥೆಯಿರುತ್ತದೆ. ಅತಿ ಕಡಿಮೆ ಸಂಭಳಕ್ಕೆ ಕೆಲಸ ಮಾಡುವ ಕಾರ್ಮಿಕರ ಕಥೆಗಳು ಮನಸ್ಸನ್ನು ಭಾರಗೊಳಿಸುತ್ತವೆ.
ಕೆಲವು ಕಡೆ ಒಂದೇ ಕೋಣೆಯಲ್ಲಿ ಏಳೆಂಟು ಕಾರ್ಮಿಕರು ಹಂಚಿಕೊಂಡು ವಾಸಿಸುವುದು ಸಾಮಾನ್ಯ. ಕೆಲಸ ಮಾಡುವ
ಕಂಪನಿ, ದೊಡ್ಡದಾಗಿದ್ದರೆ ಸೌಲಭ್ಯಗಳು ಪರವಾಯಿಲ್ಲ. ಚಿಕ್ಕ ಪುಟ್ಟ ಕಂಪನಿಗಳಾದರೆ,
ಅಲ್ಲಿನ ವ್ಯವಸ್ಥೆಗಳು ಅಷ್ಟಕ್ಕಷ್ಟೆ.
ಮೂರು ಹೊತ್ತು ಒಳ್ಳೆಯ ಊಟ ತಿನ್ನದೆ ತನ್ನವರಿಗಾಗಿ ತಾಯ್ನಾಡನ್ನು ಬಿಟ್ಟು ದೂರದೂರದಲ್ಲಿ
ದುಡಿಯುವ ಅನಿವಾಸಿಗಳ ಕರುಣಾಜನಕ ಕಥೆಗಳು ಬಹಳಷ್ಟಿವೆ, ಅವುಗಳ ಬಗ್ಗೆ ಬರೆದರೆ
ಒಂದು ಕಾದಂಬರಿಯಾಗಬಹುದು.
ಪಿ.ಎಸ್.ರಂಗನಾಥ
ಮಸ್ಕತ್-ಒಮಾನ್ ರಾಷ್ಟ್ರ