ಬುಧವಾರ, ಜುಲೈ 12, 2023

ಪ್ರವಾಸಿಗರಿಗೆ ಥ್ರಿಲ್ ನೀಡುವ ಒಮಾನಿನ ಡಾಲ್ಫಿನ್ ಗಳು



ಒಮಾನಿನ ಕಡಲ ತೀರ ಸಾಕಷ್ಟು ಆಕರ್ಷಕ ಸಮುದ್ರ ಜೀವಿಗಳಿಗೆ ನೆಲೆಯಾಗಿದೆ, ಇಲ್ಲಿನ ಅರಬ್ಬಿ ಸಮುದ್ರದಲ್ಲಿ ವೈವಿಧ್ಯಮಯ ಜೀವರಾಶಿಗಳಾದ, ತಿಮಿಂಗಿಲಗಳು, ಡಾಲ್ಫಿನ್‌ಗಳು, ಆಮೆಗಳು, ಎಲ್ಲಾ ರೀತಿಯ ಮೀನುಗಳು ಮತ್ತು ಉಷ್ಣವಲಯದ ಮೀನುಗಳು ಹೇರಳವಾಗಿವೆ. ಆಮೆಗಳು ಮತ್ತು ಡಾಲ್ಫಿನ್‌ಗಳು ನೋಡುವುದಕ್ಕಾಗಿಯೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುವುದು ಇಲ್ಲಿನ ವಿಶೇಷ.  ಒಮಾನಿನಲ್ಲಿ ಡಾಲ್ಫಿನ್ ವೀಕ್ಷಣೆ ಮತ್ತು ಆಮೆಗಳ ವೀಕ್ಷಣೆ ಜನಪ್ರಿಯ ಚಟುವಟಿಕೆಯಾಗಿವೆ. ಒಮಾನ್ ರಾಷ್ಟ್ರವು ಸುಂದರವಾದ ಮರುಭೂಮಿ ಭೂಪ್ರದೇಶದ ಹೊಂದಿರುವುದರ ಜತೆಗೆ ಸುಂದರವಾದ ಕಡಲತೀರಗಳನ್ನು ಹೊಂದಿದ್ದು ಕೆಲವೆಡೆ ಸ್ಫಟಿಕದಷ್ಟೆ ಸ್ಪಷ್ಟವಾಗಿ ಕಾಣುವ ನೀರನ್ನು ಹೊಂದಿರುವ ಈ ಸುಂದರ ಕಡಲ ತೀರಗಳು ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ಬಹಳಷ್ಟು ಆಕರ್ಷಿಸುತ್ತವೆ. ಸುಮಾರು 3165 ಕಿ.ಮಿ (1967 ಮೈಲು) ಉದ್ದದ ಕರಾವಳಿ ಪ್ರದೇಶವನ್ನು ಒಮಾನ್ ರಾಷ್ಟ್ರ ಹೊಂದಿದೆ. ಈ ಸಮುದ್ರದಲ್ಲಿ ಅಳಿವಿನಂಚಿನಲ್ಲಿರುವ  ಹಂಪ್‌ಬ್ಯಾಕ್ ತಿಮಿಂಗಿಲಗಳ ಜತೆಗೆ ಪಿಗ್ಮಿ ಬ್ಲೂ ವೇಲ್‌ಗಳು, ಬ್ರೈಡ್‌ನ ತಿಮಿಂಗಿಲಗಳು, ಸ್ಪರ್ಮ್ ತಿಮಿಂಗಿಲಗಳು, ಕಿಲ್ಲರ್ ವೇಲ್ಸ್ , ರಿಸ್ಸೋಸ್ ಡಾಲ್ಫಿನ್‌ಗಳು, ಸ್ಪಿನ್ನರ್ ಡಾಲ್ಫಿನ್‌ಗಳು, ಬಾಟಲ್‌ನೋಸ್ ಡಾಲ್ಫಿನ್‌ಗಳು, ಇಂಡೋ-ಪೆಸಿಫಿಕ್ ಹಂಪ್‌ಬ್ಯಾಕ್ಡ್ ಡಾಲ್ಫಿನ್‌ಗಳು ಇವೆ.

 

ಒಮಾನ್ ರಾಷ್ಟ್ರಕ್ಕೆ ಪ್ರವಾಸ ಬಂದವರು ಭೇಟಿ ನೀಡುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇಲ್ಲಿನ ಪ್ರಸಿದ್ದ "ಡಾಲ್ಫಿನ್ ವಾಚಿಂಗ್"  ಖಂಡಿತಾ ಇರುತ್ತದೆ. ಪ್ರವಾಸಿಗಳು ಅಷ್ಟೇ ಅಲ್ಲದೆ, ವಲಸೆ ಉದ್ಯೋಗಿಗಳ ಬಂಧು ಬಳಗ ಮತ್ತಿತರ ಅಥಿತಿಗಳು ತಪ್ಪದೇ ಇಲ್ಲಿಗೆ ಭೇಟಿ ನೀಡುವುದು ಇಲ್ಲಿನ ವಿಶೇಷ. ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾದ ಡಾಲ್ಫಿನ್‌ಗಳು ಒಮಾನ್‌ನ ಕರಾವಳಿ ಪ್ರದೇಶದಲ್ಲಿ ಯಥೇಚ್ಚವಾಗಿ ಕಂಡುಬರುತ್ತವೆ. ಈ ಡಾಲ್ಫಿನ್‌ಗಳನ್ನು ನೋಡಲು, ಇಲ್ಲಿನ ಕೆಲ ಕಂಪನಿಗಳು ಪ್ರವಾಸಗಳನ್ನು ಆಯೋಜಿಸುತ್ತಾರೆ. ಮುಸಂದಮ್, ಮಸ್ಕತ್ ಮತ್ತು ದಮಾನಿಯತ್ ಪ್ರದೇಶಗಳು ಡಾಲ್ಫಿನ್ ವೀಕ್ಷಣೆಗೆ ಜನಪ್ರಿಯವಾಗಿವೆ. ಈ ಪ್ರವಾಸದ ಸಮಯದಲ್ಲಿ ಡಾಲ್ಫಿನ್‌ಗಳನ್ನು ನೋಡುವುದರ ಜೊತೆಗೆ ಒಮಾನಿನ ಕರಾವಳಿಯ ರಮಣೀಯ ಸೌಂದರ್ಯವನ್ನು ವೀಕ್ಷಿಸಬಹುದು.ಡಾಲ್ಫಿನ್ ವೀಕ್ಷಣೆ ಜತೆಗೆ ಸ್ನಾರ್ಕ್ಲಿಂಗ್, ಸರ್ಫಿಂಗ್ ಹೀಗೆ ಹಲವಾರು ವಿವಿಧ ರೀತಿಯ ಆಟಗಳನ್ನು ಇಲ್ಲಿನ ಆಯೋಜಕರು ಆಯೋಜಿಸುತ್ತಾರೆ.

 

ದುಬೈ, ಮಲೇಶಿಯ, ಅಂತಹ ಅಂತರಾಷ್ಟ್ರೀಯ ನಗರಗಳಲ್ಲಿ ಡಾಲ್ಫಿನ್ ಗಳ ವೀಕ್ಷಣೆ ಒಂದು ಚಟುವಟಿಕೆಯಾಗಿದೆDolphinarium ಒಂದು ಸ್ಟೇಡಿಯಂ ಮಾದರಿಯಲ್ಲಿ ದೊಡ್ಡಾದ ಈಜುಕೊಳದಲ್ಲಿ ಸಾಕಿ ಪಳಗಿಸಿರುವ ಡಾಲ್ಫಿನ್ ಗಳ ಜತೆ ವಿವಿಧ ರೀತಿಯ ಆಟಗಳನ್ನು ಪ್ರದರ್ಶಕರು ಪ್ರಸ್ತುತ ಪಡಿಸುತ್ತಾರೆ. ವೀಕ್ಷರನ್ನು ರಂಜಿಸಲು ಈ ಡಾಲ್ಫಿನ್ ಗಳಿಗೆ ಸೂಕ್ತ ತರಬೇತಿಗಳನ್ನು ನೀಡಿರುತ್ತಾರೆ. ಸರ್ಕಸ್ ನಲ್ಲಿ ಕುಳಿತುಕೊಂಡು ನೋಡಿದ ಹಾಗೆ ಈ ಪ್ರದರ್ಶನ ವಿರುತ್ತದೆ. ಆದರೆ ಒಮಾನಿನ ಡಾಲ್ಫಿನ್ ವೀಕ್ಷಣೆ ನೈಸರ್ಗಿಕವಾದದ್ದು, ಇಲ್ಲಿ ಈ ಜೀವಿಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಲಾಗುವುದಿಲ್ಲ. ಅವುಗಳಿರುವೆಡೆಗೆ ಪ್ರವಾಸಿಗರು ಪ್ರಯಾಣಿಸುವ ದೋಣಿ ಸಾಗುತ್ತದೆ. ಅವುಗಳ ಆಟವನ್ನು ನೋಡಿದ ನಂತರ ದೋಣಿಯು ತನ್ನ ಮೂಲಸ್ಥಾನಕ್ಕೆ ಹಿಂತಿರುಗುತ್ತದೆ.

 

ಡಾಲ್ಫಿನ್‌ ವೀಕ್ಷಣೆ ಇಷ್ಟೊಂದು ಪ್ರಖ್ಯಾತಿ ಪಡೆಯಲು ಕಾರಣವೇನೆಂದರೆ, ಒಮಾನಿನ ಸಮುದ್ರದಲ್ಲಿ ಹೇರಳವಾಗಿ ಕಾಣ ಸಿಗುವ ವಿವಿಧ ಪ್ರಾಕಾರದ  ಡಾಲ್ಫಿನ್‌ ಗಳು ಮುಂಜಾನೆ ಹೊತ್ತಿನಲ್ಲಿ ಸಮುದ್ರದ ಮೇಲ್ಭಾಗಕ್ಕೆ ಬಂದು ಎತ್ತರಕ್ಕೆ ನೆಗೆಯುವುದು, ಗುಂಪು ಗುಂಪಾಗಿ ಈಜುವುದು, ಲಾಂಗ್ ಜಂಪ್ ಮಾಡುವುದು ಇತ್ಯಾದಿ, ಹೀಗೆ ತನ್ನ ವಿವಿಧ ಆಟಗಳನ್ನು ನೈಸರ್ಗಿಕವಾಗಿ ಪ್ರದರ್ಶಿಸುವ ಪರಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಸಾಗುವ ದೋಣಿಯ ಪಕ್ಕದಲ್ಲಿಯೇ ಈ ಎಲ್ಲ ಆಟಗಳನ್ನು ನೋಡಬಹುದು. ಅವುಗಳ ಚಮತ್ಕಾರಿಕ ಪ್ರದರ್ಶನಗಳನ್ನು ನೋಡುವುದೇ ಒಂದು ಥ್ರಿಲ್. ಮಕ್ಕಳಿಗೆ ಈ ಡಾಲ್ಫಿನ್ ಗಳ ಆಟ ಬಹಳ ಇಷ್ಟವಾಗುತ್ತವೆ.

 

ಪ್ರವಾಸಿಗಳನ್ನು ಕೊಂಡೋಯ್ಯುವ ದೋಣಿಗಳ ಚಾಲಕರು ಹೇಳುವ ಪ್ರಕಾರ, ಪ್ರವಾಸಿಗರಿಗೆ ಡಾಲ್ಫಿನ್ ನೋಡುವ ಅದೃಷ್ಟ ವಿದ್ದರೆ  ಒಮ್ಮೊಮ್ಮೆ ನೂರಾರು ಡಾಲ್ಫಿನ್ ಗಳನ್ನು ನೋಡಬಹುದು. ಒಂದೊಂದು ಸಾರಿ ಅವುಗಳನ್ನು ಹುಡುಕಲು ನಾವು ಒಂದು ಗಂಟೆಯವರೆಗೆ ಸಮುದ್ರದೊಳಗೆ ಪ್ರಯಾಣಿಸಬೇಕಾಗಬಹುದು. ಕೆಲವೊಮ್ಮೆ ಒಂದು ಡಾಲ್ಫಿನ್ ಸಹ ನೋಡಲು ಸಿಗುವುದಿಲ್ಲ.  ಇದರ ಅರ್ಥ ಡಾಲ್ಫಿನ್ ಗಳು ಇರುವುದಿಲ್ಲ ಅಂತಲ್ಲ, ಆದರೆ ಸಮುದ್ರದ ಮೇಲೆ ಡಾಲ್ಫಿನ್ ಗಳು ಬರುವುದು ಕಡಿಮೆ. ಹೀಗೆ ಗುಂಪು ಗುಂಪಾಗಿ ಸಿಗುವ ಡಾಲ್ಫಿನ್ ಗಳು ಒಂದು ಇದ್ದಕಡೆ ಇನ್ನೊಂದು ದಿನ ಇರುವುದಿಲ್ಲ. ಪ್ರವಾಸ ಆಯೋಜಕರಿಗೆ ಇದು ಸ್ವಲ್ಪ ತಲೆನೋವಿನ ವಿಷಯವಾದರೂ, ದೋಣಿಗಳ ಚಾಲಕರು ತಾವು ಕಂಡ ಡಾಲ್ಫಿನ್ ಗಳು ಇರುವ ಸ್ಥಳವನ್ನು ಬೇರೆ ದೋಣಿಯವರಿಗೆ ತಿಳಿಸುತ್ತಾರೆ, ಪ್ರವಾಸಿಗರನ್ನು ಹೊತ್ತ ದೋಣಿಗಳು ಅವರು ತಿಳಿಸಿದ ಜಾಗಕ್ಕೆ. ಲಗ್ಗೆ ಇಡುತ್ತಾರೆ. ಪ್ರವಾಸ ಹೊರಡುವ ಸಮಯದಲ್ಲಿ, ಮುಂಜಾಗ್ರತೆಗಾಗಿ, ಅದೃಷ್ಟವಿದ್ದರೆ ಡಾಲ್ಫಿನ್ ಗಳನ್ನು ನೋಡಬಹುದು ಅಥವ ಇಲ್ಲ ಎನ್ನುವುದರ ಬಗ್ಗೆ ಮುಂಚೆಯೇ ಪ್ರವಾಸಿಗರಿಗೆ ತಿಳಿಸುತ್ತಾರೆ. ಈ ರೀತಿಯ ಒಂದು ಎಚ್ಚರಿಕೆ ಮಾತುಗಳು ಆಯೋಜಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಭವ ಕಡಿಮೆ. ಡಾಲ್ಫಿನ್ ವೀಕ್ಷಿಸಲು ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಮೇ ನಡುವೆ. ಮೋಡ ಕವಿದ ದಿನಗಳಲ್ಲಿ ಅವುಗಳನ್ನು ಗುರುತಿಸುವ ಅಥವಾ ನೀರಿನಿಂದ ಜಿಗಿಯುವ ಸಾಧ್ಯತೆ ಕಡಿಮೆ, ಆದ್ದರಿಂದ ಪ್ರಕಾಶಮಾನವಾದ, ಬಿಸಿಲಿನ ದಿನಗಳಲ್ಲಿ ಡಾಲ್ಫಿನ್ ವೀಕ್ಷಿಸಲು ಶಿಫಾರಸು ಮಾಡಲಾಗುತ್ತದೆ.  ಬಿಬಿಸಿ ನ್ಯೂಸ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಚಾನೆಲ್ ಗಳು ಈ ಡಾಲ್ಫಿನ್ ಗಳ ಕುರಿತು ಡಾಕ್ಯುಮೆಂಟರಿಗಳನ್ನು ಮಾಡಿವೆ.

 

ಒಮಾನಿನ ಸಮುದ್ರ ತೀರದಲ್ಲಿ ಕಾಣ ಸಿಗುವ ಡಾಲ್ಫಿನ್‌ಗಳ ಪ್ರಕಾರಗಳು:

೧) ಹಿಂದೂ ಮಹಾಸಾಗರದ ಡಾಲ್ಫಿನ್‌ಗಳು,

೨) ಇಂಡೋ-ಪೆಸಿಫಿಕ್ ಹಂಪ್‌ಬ್ಯಾಕ್ ಡಾಲ್ಫಿನ್‌ಗಳು,

೩) ರಿಸ್ಸೋಸ್ ಡಾಲ್ಫಿನ್‌ಗಳು,

೪) ಬಾಟಲ್‌ ನೋಸ್ ಡಾಲ್ಫಿನ್‌ಗಳು,

೫) ಇಂಡೋ-ಪೆಸಿಫಿಕ್ ಬಾಟಲ್‌ನೋಸ್ ಡಾಲ್ಫಿನ್‌ಗಳು,

೬) ಒರಟಾದ-ಹಲ್ಲಿನ ಡಾಲ್ಫಿನ್‌ಗಳು,

೭) ಪ್ಯಾಂಟ್ರೊಪಿಕಲ್ ಸ್ಪಾಟೆಡ್ ಡಾಲ್ಫಿನ್‌ಗಳು,

೮) ಸ್ಟ್ರೈಪ್ದ್ ಡಾಲ್ಫಿನ್ ಗಳು

೯) ಸ್ಪಿನ್ನರ್ ಡಾಲ್ಫಿನ್ ಗಳು ಮತ್ತು

೧೦)ಉದ್ದ ಕೊಕ್ಕಿನ ಸಾಮಾನ್ಯ ಡಾಲ್ಫಿನ್ ಗಳು.

ಬರಹ:- ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ

#Oman #Kannada #Karnataka #kannadiga #Dubai #gulf #Dolphin #Muscat #bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings