ಬುಧವಾರ, ಜುಲೈ 12, 2023

ಕಲ್ಲಣೆ ಹೋಗಿ ಕಲ್ಯಾಣಿ ಆಯ್ತು

ನೀರು ಇಲ್ಲದೆ ನಮ್ಮ ಬದುಕು ಇಲ್ಲ, ಮಾನವನ ನಾಗರೀಕತೆ ಬೆಳೆದಿದ್ದೇ ನೀರಿರುವ ಸ್ಥಳಗಳಲ್ಲಿ. ಮನುಷ್ಯನ ಬದುಕು ಅರಳಿದ್ದೇ ಈ ನೀರಿನ ಸೆಲೆಗಳಲ್ಲಿ ಎನ್ನುವುದು ಕಟು ಸತ್ಯ. ಶತ ಶತಮಾನಗಳ ಹಿಂದೆ ನಮ್ಮ ಪೂರ್ವಜರು  ನೀರಿನ ಸಂಗ್ರಹಣೆಗಾಗಿ ಕೆರೆಕಟ್ಟೆಗಳನ್ನು ನಿರ್ಮಿಸುತ್ತ ಬಂದರು. ಗ್ರಾಮೀಣ ಪ್ರದೇಶಗಳಲ್ಲಿ ಧೈನಂದಿನ ಬಳಕೆಗಾಗಿ ಅಂದು ನಿರ್ಮಿಸಿದ ನೀರಿನ ಹೊಂಡ ಅಥವ ಕೊಳಗಳು ಇಂದಿಗೂ ಮೂಲಸ್ವರೂಪದಲ್ಲಿ ಇರುವುದನ್ನು ನಾವು ಕಾಣುತಿದ್ದೇವೆ.  ಮಳೆ ನೀರು ಅಥವ ಭೂಮಿಯಿಂದ ಬಸಿಯುವ ನೀರು ಈ ಹೊಂಡಗಳಲ್ಲಿ ಸಂಗ್ರಹವಾಗುತಿತ್ತು. ಬಯಲು ಸೀಮೆಯಲ್ಲಿನ ಊರುಗಳಲ್ಲಿ ಅದರಲ್ಲೂ ನದಿ, ಹಳ್ಳ, ಕೆರೆಗಳು ಇರದೆ ಇರುವ ಊರಿನಲ್ಲಿನ ಈ ಕೊಳದ ನೀರು ಬಹಳಷ್ಟು ಉಪಯೋಗವಾಗುತಿತ್ತು. ಅಲ್ಲದೇ ಹಳ್ಳ, ಕೆರೆಗಳು ಊರಿನಿಂದ ದೂರವಿರುತಿದ್ದರಿಂದ, ಜನರ ಧೈನಂದಿನ ನೀರಿನ ಅಗತ್ಯತೆ ಕಂಡು ಅಂದಿನ ಆಡಳಿತಗಾರರು ಊರಿನೊಳಗೆ ಕೊಳಗಳನ್ನು ನಿರ್ಮಿಸುತಿದ್ದರು. ನೀರಿದ್ದರೆ, ಊರು ಕೇರಿ ಬೆಳೆಯಲು ಸಾಧ್ಯ. ಹಾಗಾಗಿ ಊರಿನ ಜನರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ದೊಡ್ಡದಾದ ಹೊಂಡ ನಿರ್ಮಿಸಿ ಅದರ  ಸುತ್ತಲೂ ಇರುವ ಮಣ್ಣಿನ ಗೋಡೆಯು ಕುಸಿದು ಹೋಗಬಾರದು ಎಂದು ಕಲ್ಲುಗಳನ್ನು ಜೋಡಿಸಿ ಹಾಗೂ ಮೆಟ್ಟಿಲುಗಳನ್ನಿಟ್ಟು ನೋಡಲು ಸುಂದರವಾಗಿ ಆಕರ್ಷಕವಾಗಿರುವಂತೆ ಕಟ್ಟುತಿದ್ದರು. ಈ ನೀರಿನ ಕೊಳಗಳನ್ನು "ಕಲ್ಯಾಣಿ" ಎಂದು ಜನರು ಕರೆಯುತಿದ್ದರು. ರಾಜ್ಯದ ಹಲೆವೆಡೆ ಸುಂದರವಾದ ಕಲ್ಯಾಣಿಗಳನ್ನು ಇಂದೂ ಸಹ ಕಾಣಬಹುದು. ಜನರು ಈ ಮೆಟ್ಟಿಲುಗಳ ಮುಖಾಂತರ ಕಲ್ಯಾಣಿಯೊಳಗೆ ಇಳಿದು ನೀರು ತುಂಬಿಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಬೇಸಿಗೆ ಕಾಲದಲ್ಲಿ ಈ ಕಲ್ಯಾಣಿಗಳು ಜನರಿಗೆ ಬಹಳಷ್ಟು ಉಪಯುಕ್ತವಾಗಿದ್ದವು. ಕೆಲವು ದೇವಸ್ಥಾನಗಳಲ್ಲಿ ಈ ಕಲ್ಯಾಣಿಗಳನ್ನು ನಾವು ಇಂದಿಗೂ ಕಾಣುತ್ತೇವೆ. ಕೆಲೆವೆಡೆ ಪುಷ್ಕರಣಿ, ತೀರ್ಥ ಎನ್ನುವ ಹೆಸರಿನಲ್ಲಿ ಕರೆಯುತ್ತಾರೆ.

 ಈ ನೀರಿನ ಕೊಳಕ್ಕೆ ಕಲ್ಯಾಣಿ ಎನ್ನುವ ಹೆಸರು ಹೇಗೆ ಸೂಕ್ತ ಎಂದು ಯೋಚಿಸುತ್ತಿರುವಾಗ, ಕಲ್ಯಾಣಿ ಶಬ್ದವು "ಕಲ್ಲು" ಮತ್ತು "ಅಣೆ" ಎರಡು ಪದಗಳಿಂದ ಯಾಕೆ ರೂಪುಗೊಂಡಿರಬಾರದು ಎನ್ನು ಆಲೋಚನೆ ಬಂತು. ಯಾಕೆಂದರೆ "ಅಣೆ" ಶಬ್ದದ ಅರ್ಥ ಒಡ್ಡು ಅಥವ ಅಡ್ಡಗಟ್ಟುವುದು. ಅಣೆಕಟ್ಟು ಅಂದರೆ ನೀರಿನ ಹರಿವಿಗೆ ಅಡ್ಡಲಾಗಿ ಹಾಕಿದ ಕಟ್ಟೆ. ಆದ್ದರಿಂದ ಕಲ್ಲುಗಳನ್ನು ಹಾಕಿ ಒಡ್ಡು ಕಟ್ಟಿರುವುದರಿಂದ  ಕಲ್ಲ್+ಅಣೆ= ಕಲ್ಲಣೆಯಾಗಿರಬಹುದು ಎಂದು ಅನಿಸಿತು. ಕಾಲಾನಂತರದಲ್ಲಿ ಜನರ ಆಡುಮಾತಿನಲ್ಲಿ ಕಲ್ಯಾಣಿಯಾಗಿ ಬದಲಾವಣೆಯಾಗಿರುವ ಸಾಧ್ಯತೆಯೂ ಬಲವಾಗಿ ಕಂಡುಬಂತು.

 

ಉತ್ತರ ಮತ್ತು ಮಧ್ಯ ಕರ್ನಾಟಕದ ಗ್ರಾಮೀಣ ಜನತೆ ಹಳ್ಳಿಗಳಲ್ಲಿ ಬಹಳಷ್ಟು ಶಬ್ದಗಳನ್ನು ಮೂಲ ಉಚ್ಚಾರಣೆಯಿಂದ ಭಿನ್ನವಾಗಿ ಬಳಕೆ ಮಾಡುತ್ತಿರುವುದನ್ನು ಗಮನಿಸಬಹುದು. ಉದಾಹರಣೆಗೆ ಬೇಸಾಯ - ಬ್ಯಾಸಾಯ, ಬೇಡ - ಬ್ಯಾಡ, ಬೇಸರ - ಬ್ಯಾಸರ ಎಂದು ಉಪಯೋಗಿಸುತ್ತಾರೆ. ಇಂತಹ ಹಲವಾರು ಶಬ್ದಗಳನ್ನು ನಾವು ಉದಾಹರಿಸಬಹುದು. ಪ್ರತಿ ನೂರಾರು ಕಿ.ಮಿ.ಗೆ ಮಾತನಾಡುವ ಭಾಷೆಯ ಶೈಲಿ, ಆಹಾರ ಪದ್ದತಿ ಹೇಗೆ ಬದಲಾಗುತ್ತವೋ ಹಾಗೆಯೇ ಕೆಲವು ಶಬ್ದಗಳು ಸಹ ಬದಲಾಗುವುದು ಸಾಮಾನ್ಯ. ಇನ್ನು ಹೊರಗಿನವರ ಪ್ರಭಾವ ದಿಂದಲೂ ಸಹ ಕ್ರಮೇಣ ಬದಲಾಗುವುದನ್ನ ಕಂಡಿದ್ದೇವೆ. ಬೆಂಗಳೂರನ್ನು ಆಂಗ್ಲರು ತಮ್ಮ ಉಚ್ಚಾರಣೆಯಲ್ಲಿ ಬ್ಯಾಂಗಲೋರ್ ಎಂದು ಬದಲಾಯಿಸಿದ್ದಲ್ಲದೆ, ಹೊರರಾಜ್ಯದವರು ಸಹ ಇಂದಿಗೂ ಬ್ಯಾಂಗಲೋರ್ ಎಂದು ಕರೆಯುವುದನ್ನ ಕಾಣುತಿದ್ದೇವೆ. ಅದೇ ರಿತಿ ಬಹಳಷ್ಟು ಜನರು ಚಿಕ್ಕಮಗಳೂರನ್ನು, ಚಿಕ್ಕಮಂಗಳೂರು ಎಂದೇ ಕರೆಯುತ್ತಾರೆ. ಮಂಗಳೂರಿನಲ್ಲಿ ಹಂಪನಕಟ್ಟೆ ಎನ್ನುವ ಪ್ರದೇಶವಿದೆ. ಶತಮಾನದ ಹಿಂದೆ ಇದಕ್ಕೆ ಅಪ್ಪಣ್ಣ ಕಟ್ಟೆ ಎನ್ನುವ ಹೆಸರಿತ್ತಂತೆ. ಅಲ್ಲಿನ ಸ್ಥಳೀಯರಾದ ಅಪ್ಪಣ್ಣ ಎನ್ನುವವರು ಅಲ್ಲಿನ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನಗರಕ್ಕೆ ಬಂದ ಜನರಿಗೆ ನೀರನ್ನು ಕೊಡುತಿದ್ದರಂತೆ. ಹಾಗಾಗಿ ಆ ಕಟ್ಟೆಗೆ ಅಪ್ಪಣ್ಣ ಕಟ್ಟೆ ಎನ್ನುವ ಹೆಸರು ಇತ್ತು, ಆದರೆ ವರ್ಷಗಳು ಉರುಳಿದಂತೆ, ತಲೆಮಾರುಗಳು ಬದಲಾದಂತೆ ಅಪ್ಪಣ್ಣಕಟ್ಟೆಯಾಗಿದ್ದ ಪ್ರದೇಶ ಹಂಪನಕಟ್ಟೆ ಎಂದು ಬದಲಾಗಿದೆ. ಕರುನಾಡು, ಕರ್ಣಾಟ, ಕರ್ನಾಟಕ ಆಗಿ ಬದಲಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ, ಶತಶತಮಾನಗಳ ಹಿಂದಿದ್ದ ಕೆಲ ಶಬ್ದಗಳು ಜನರು ಬಳಸುತ್ತ ಇಂದು ಅದರ ಮೂಲ ಸ್ವರೂಪದಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇದೆ.

 

ಜನರಿಗೆ ಧೈನಂದಿನ ಉಪಯೋಗಕ್ಕೆ ಅನುಕೂಲಕರವಾಗಲಿ ಎನ್ನುವ ಉದ್ದೇಶದಿಂದ ಅಂದಿನ ರಾಜಮಹಾರಾಜರು, ಪಾಳೇಗಾರರು ಈ ಕಲ್ಯಾಣಿಗಳನ್ನು ಕಟ್ಟಿಸುತಿದ್ದರು, ಒಂದರ್ಥದಲ್ಲಿ ಜನಕಲ್ಯಾಣಕ್ಕೆ ಉಪಯೋಗವಾಗಿದ್ದರಿಂದ ಕಲ್ಯಾಣಿ ಎಂದು ಹೆಸರಿಟ್ಟಿರುವ ಸಾಧ್ಯತೆಯನ್ನು ಸಹ ಅಲ್ಲಗಳೆಯಲಾಗದು. ಗಿರಿಜೆ, ಪಾರ್ವತಿ, ಜಗನ್ಮಾತೆಯ ಇನ್ನೊಂದು ಹೆಸರೇ ಕಲ್ಯಾಣಿ, ಸಾಮಾನ್ಯವಾಗಿ ನದಿಗಳಿಗೆ ಹೆಣ್ಣಿನ ಹೆಸರನ್ನು ಇಡುತ್ತಾರೆ, ಆದರೆ ನದಿಗೆ ಮತ್ತು ಕೆರೆಗೆ ಹೋಲಿಸಿದರೆ ಚಿಕ್ಕದಾದ ನೀರಿನ ಕೊಳಕ್ಕೆ ದೇವಿಯ ಹೆಸರನ್ನು ಇಟ್ಟಿರುವ ಸಾಧ್ಯತೆಯಿಲ್ಲ. ಹೀಗಾಗಿ ಜನರ ಆಡುಮಾತಿನಿಂದ ಕಲ್ಲಣೆ ಕಲ್ಯಾಣಿಯಾಗಿದೆ ಎಂದು ಹೇಳಬಹುದು.

 ಬರಹ:- ಪಿ.ಎಸ್.ರಂಗನಾಥಮಸ್ಕತ್

 



#Oman #Kannada #Karnataka #kannadiga #Dubai #gulf #Dolphin #Muscat #bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings