ಈ ಬಿಸಿಲಿನಿಂದ ಪಾರಾಗಲು ಏಸಿಯ ಮೊರೆ ಹೋಗಲೇ ಬೇಕು, ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲೂ ನಾಲ್ಕೈದು ಏಸಿಗಳು ಇರುತ್ತವೆ.
ಕಾರ್, ಬಸ್, ಅಂಗಡಿ, ಮಾಲ್ ಗಳು, ರೆಸ್ಟೋರೆಂಟ್ ಗಳು
ಎಲ್ಲಿಯೇ ಹೋದರು ಏಸಿ ಖಂಡಿತ ಇರುತ್ತದೆ. ಬೇಸಿಗೆಯಲ್ಲಿ ಏಸಿ ಇಲ್ಲದೆ ಇಲ್ಲಿ ಕೆಲಸಮಾಡಲು ಸಾಧ್ಯವೇ
ಇಲ್ಲ. ಆರೇಳು ತಿಂಗಳುಗಳ ಕಾಲ ಏಸಿಯಿಂದ ಬರುವ ತಂಪಾದ
ಗಾಳಿಯೊಂದಿಗೆ ಜೀವನ ನಡೆಸಲೇ ಬೇಕು.
ಭಾರತದಲ್ಲಿ ಬಹಳಷ್ಟು ಜನರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಎಷ್ಟು ಬಿಸಿಲು ಇರುತ್ತೆ? ಅದು ಎಷ್ಟು ತಿಂಗಳುಗಳವರೆಗೂ ಇರುತ್ತೆ, ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಯಾವಾಗ ಪ್ರಾರಂಭ ಎಂದು ಗೊತ್ತಿರುವುದಿಲ್ಲ. ಇಲ್ಲಿರುವುದು ಎರಡೇ ಕಾಲ ಎಂದರೆ ನಂಬ್ತೀರಾ? ಖಂಡಿತಾ ಇಲ್ಲ.
ಅದು ಹೇಗೆ ಸಾಧ್ಯ, ಆಂಗ್ಲರ ಪದ್ಧತಿಯ ಪ್ರಕಾರ ನಾಲ್ಕು ಕಾಲಗಳು ಇರಬೇಕಲ್ಲವೇ?
ಎಂದು ನಮ್ಮ ಮೆದುಳು ನಾಲ್ಕು ಕಾಲಗಳ ಬಗ್ಗೆ ಯೋಚಿಸಲಾರಂಬಿಸುತ್ತದೆ. 1) ಸ್ಪ್ರಿಂಗ್
(spring) ಅಥವಾ ವಸಂತ, 2) ಸಮ್ಮರ್ (summer) ಅಥವಾ ಬೇಸಿಗೆ ಕಾಲ, 3) ಆಟಂ (autumn) ಅಥವಾ ಶರದೃತು ಹಾಗೂ 4) ವಿಂಟರ್ (winter) ಅಥವಾ ಚಳಿಗಾಲ. ವಾಸ್ತವವಾಗಿ, ಈ ಗಲ್ಫ್ ರಾಷ್ಟ್ರಗಳಲ್ಲಿ ಇರುವುದು ಒಂದು ಬೇಸಿಗೆ ಕಾಲ ಮತ್ತೊಂದು ಚಳಿಗಾಲ. ಇಲ್ಲಿ ಮಳೆಗಾಲ
ಇಲ್ಲವೇ ಇಲ್ಲ.
ನಮ್ಮ ಭಾರತ ದೇಶದಲ್ಲಿ ಬೇಸಿಗೆ ಕಾಲ ಮುಗಿದ ನಂತರ ಮುಂಗಾರು ಶುರುವಾಗುತ್ತದೆ
ಮುಂಗಾರು ಮುಗಿದ ನಂತರ ಚಳಿಗಾಲ ನಂತರ ಬೇಸಿಗೆ ಕಾಲ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಚಳಿಗಾಲದ
ನಂತರ ಬೇಸಿಗೆ ಪ್ರಾರಂಭವಾದರೆ, ಅದು ಕೊನೆಗೊಳ್ಳುವುದು ಮತ್ತೊಮ್ಮೆ ಚಳಿಗಾಲ
ಪ್ರಾರಂಭವಾಗುವವರೆಗೆ. ಅಂದರೆ ಇಲ್ಲಿ ಮುಂಗಾರು ಇಲ್ಲವೇ ಇಲ್ಲ. ಏಪ್ರಿಲ್ ನಿಂದ ಬೇಸಿಗೆ ಕಾಲ ಶುರುವಾಗಿ
ಸೆಪ್ಟೆಂಬರ್ ಅಂತ್ಯದವರೆಗೂ ಬೇಸಿಗೆ ಇರುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ರವರೆಗೂ ಭಯಂಕರ ಸುಡು
ಬಿಸಿಲು, ದುಬೈ, ಅಬುಧಾಬಿ, ಒಮಾನ್, ಕುವೈತ್, ಇರಾಕ್, ಬಹರೈನ್, ಸೌದಿ ಅರೇಬಿಯಾ, ಯೆಮನ್ ಕತಾರ್ ಮತ್ತಿತರ ರಾಷ್ಟ್ರಗಳಲ್ಲಿ ತಾಪಮಾನ ಒಮ್ಮೊಮ್ಮೆ 50ಡಿಗ್ರಿ ದಾಟುತ್ತದೆ.
ನಮ್ಮ ಕಡೆ ಜೂನ್ ತಿಂಗಳು ಬಂತೆಂದರೆ, ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಗಾಲದಲ್ಲಿ ಬಯಲುಸೀಮೆಯಲ್ಲಿ ಒಮ್ಮೊಮ್ಮೆ ಮಳೆ ಬರುವುದು
ತಡವಾದರೂ, ವಾತಾವರಣ ತಂಪಾಗಿರುತ್ತದೆ. ಬೇಸಿಗೆಯಲ್ಲಿದ್ದಷ್ಟು ಬಿಸಿಲಿನ ತಾಪಮಾನ
ಇರುವುದಿಲ್ಲ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ಇದೇ ಸಮಯದಲ್ಲಿ ಭಯಾನಕ ಬಿಸಿಲು. ಸರಿ ಸುಮಾರು ಆರು ತಿಂಗಳುಗಳ
ಕಾಲ ಬೇಸಿಗೆಯ ವಾತಾವರಣ ಮತ್ತು ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿಗಾಲವಿರುತ್ತದೆ. ಇನ್ನು ಅಕ್ಟೋಬರ್, ನವೆಂಬರ್, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅಂತ ಚಳಿಯೂ
ಇಲ್ಲ ಮತ್ತು ಹೆಚ್ಚಿನ ಬಿಸಿಲು ಸಹ ಇರುವುದಿಲ್ಲ. ಆದರೆ ಸೌದಿ ಅರೇಬೀಯಾದ ಕೆಲ ಪ್ರದೇಶ, ಮತ್ತು ಇರಾಕ್ ಕುವೈತ್ ನಂತಹ ದೇಶಗಳಲ್ಲಿ ಡಿಸೆಂಬರ್ ಮತ್ತು ಜನವರಿಯಲ್ಲಿ ಮಡುಗಟ್ಟುವ
ಚಳಿಯಿರುತ್ತದೆ. ಈ ಚಳಿಗೆ ಹೋಲಿಸಿದರೆ ಯುಏಇ, ಒಮಾನ್ ಮತ್ತು ಯೆಮನ್ ಮತ್ತಿತರ ದೇಶಗಳಲ್ಲಿ
ಅಂತಹ ಚಳಿಯಿರುವುದಿಲ್ಲ.
ನಮ್ಮ ದೇಶದಲ್ಲಿನ ಕೆಲರಾಜ್ಯಗಳಲ್ಲಿ ಕೆಲವೊಮ್ಮೆ ಮುಂಗಾರಿನಲ್ಲಿ ನಿರೀಕ್ಷಿಸಿದಷ್ಟು ಮಳೆ ಬರದೆ ಇದ್ದಾಗ ಬರಗಾಲ ಘೋಷಿಸುವ ಪದ್ದತಿಯಿದೆ. ಈ ಗಲ್ಫ್ ರಾಷ್ಟ್ರಗಳಲ್ಲಿ ಅಪರೂಪಕ್ಕೆ ಒಮ್ಮೆ ಮಳೆ ಬರುತ್ತದೆ, ಹಾಗಂತ ಬರಗಾಲ ಅಥವ ಬರ ಪೀಡಿತ ಪ್ರದೇಶ ಎಂದು ಇಲ್ಲಿ ಘೋಷಿಸುವುದಿಲ್ಲ. ಮಳೆಯಿಂದ ಬೆಳೆ ಬೆಳೆಯುವ ಪದ್ದತಿ ಇಲ್ಲ. ಜನಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಭಾರತ ಸೇರಿದಂತೆ ಇತರೆ ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈ ಆಮದು ಮಾಡಿಕೊಳ್ಳುವುದು ಇಂದು ನಿನ್ನೆಯಿಂದಲ್ಲ, ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈಗ ಕಾಲ ಬದಲಾಗಿದೆ, ಗಲ್ಫ್ ರಾಷ್ಟ್ರಗಳಲ್ಲಿ ಸಿಗುವ ತೈಲವನ್ನು ಮಾರಿ ಬಂದ ಹಣದಿಂದ ಈ ದೇಶಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಇತರೆ ರಾಷ್ಟ್ರಗಳಿಂದ ಖರೀದಿಸುತ್ತಾರೆ. ವಿಶ್ವದ ಶ್ರೀಮಂತ ಮತ್ತು ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಈ ಅರಬ್ ರಾಷ್ಟ್ರಗಳು ಇವೆ.
ಮಧ್ಯಪ್ರಾಚ್ಯ ರಾಷ್ಟ್ರಗಳು ಬಹುತೇಕ ಮರುಭೂಮಿ ಪ್ರದೇಶವನ್ನು ಹೊಂದಿವೆ. ಸಾಮಾನ್ಯವಾಗಿ ಮರುಭೂಮಿಗಳಲ್ಲಿ ಬಹಳ ಕಡಿಮೆ ಮಳೆ ಬೀಳುತ್ತದೆ. ಇಲ್ಲಿ ಅರಣ್ಯ ಪ್ರದೇಶ ಬಹಳ ಕಡಿಮೆ. ಹಾಗೂ ಈ ಕೊಲ್ಲಿ ಪ್ರದೇಶ ಟ್ರಾಪಿಕ್ ಆಫ್ ಕ್ಯಾನ್ಸರ್ ಅಕ್ಷಾಂಶ ದಲ್ಲಿದೆ, ಇದು ಹೆಚ್ಚಿನ ಒತ್ತಡದ ವಲಯವಾಗಿರುವುದರಿಂದ ಸ್ವಾಭಾವಿಕವಾಗಿ ಮೋಡಗಳ ಕೊರತೆ ಇರುತ್ತದೆ, ಅತಿ ಕಡಿಮೆ ಮೋಡಗಳು ಇರುವುದರಿಂದ ಸೂರ್ಯನ ಶಾಖ ನೇರವಾಗಿ ಇಲ್ಲಿನ ಭೂಭಾಗದಲ್ಲಿ ಬೀಳುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಈ ಸ್ಥಳ ಅತ್ಯಂತ ಬಿಸಿ ಯಾಗಿರುತ್ತದೆ ಎನ್ನುವ ವಾದವಿದೆ. ವಾತಾವರಣದಲ್ಲಿ ಹೆಚ್ಚಿನ ಮಟ್ಟದ ಆರ್ದ್ರತೆಯೂ ಇರುವುದರಿಂದ, ಜನರಿಗೆ ಅತಿಯಾದ ಸೆಖೆಯ ಅನುಭವಾಗುತ್ತದೆ. ಆರ್ದ್ರತೆಯ ಕಾರಣದಿಂದ ಮೈಯಿಂದ ತುಂಬ ಜಾಸ್ತಿ ಬೆವರು ಹೊರಬರುತ್ತದೆ. ಮಧ್ಯಪ್ರಾಚ್ಯದ ಹೆಚ್ಚಿನ ಭಾಗವು ಮತ್ತು ಮೆಡಿಟರೇನಿಯನ್‌ನ ಪ್ರದೇಶವು ವಿಶಿಷ್ಟವಾದ ಶುಷ್ಕ ಬೇಸಿಗೆಯ ಹವಾಮಾನವನ್ನು ಹೊಂದಿದೆ. ಇದೇ ರೀತಿಯ ಹವಾಮಾನ ಪಶ್ಚಿಮ ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ ಮತ್ತು ದಕ್ಷಿಣ ಆಫ್ರಿಕಾದ ಪಶ್ಚಿಮ ಭಾಗಗಳೊಂದಿಗೆ ಮತ್ತು ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನ ಪಶ್ಚಿಮ ಕರಾವಳಿಗಳಲ್ಲಿ ಕಾಣಬಹುದು.
ಪಿ.ಎಸ್.ರಂಗನಾಥ
ಮಸ್ಕತ್, ಒಮಾನ್ ರಾಷ್ಟ್ರ
#Oman #Kannada #Karnataka #kannadiga #Dubai #gulf #Dolphin #Muscat #bengaluru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ