ಬುಧವಾರ, ಆಗಸ್ಟ್ 2, 2023

ಜೋರ್ಡಾನ್‌ನಲ್ಲಿ ಪತ್ತೆಯಾದ 14400 ವರ್ಷಗಳ ಹಿಂದಿನ ಬ್ರೆಡ್‌(ರೊಟ್ಟಿ)

 




ನಮ್ಮ ಪೂರ್ವ ಇತಿಹಾಸವನ್ನು ಶಿಲಾಯುಗ, ನವ ಶಿಲಾಯುಗ, ಕಂಚಿನ ಯುಗ, ತಾಮ್ರಯುಗ, ಕಬ್ಬಿಣದ ಯುಗ ಹೀಗೆ ಸಾವಿರಾರು ವರ್ಷಗಳ ಇತಿಹಾಸವನ್ನು ವಿಂಗಡಿಸಲಾಗಿದೆ. ಯುಗ ಬದಲಾದಂತೆ ನಾಗರಿಕತೆ ಸಹ ಬೆಳೆದು ಸಾಕಷ್ಟು ಬದಲಾವಣೆಯನ್ನು ನಮ್ಮ ಪ್ರಪಂಚ ಕಂಡಿದೆ. ಇತಿಹಾಸಕಾರರ ಪ್ರಕಾರ ಮಾನವ ತನ್ನ ಧೈನಂಧಿನ ಆಹಾರಕ್ಕಾಗಿ ವಿವಿಧ ಮಾರ್ಗಗಳನ್ನು ಅಳವಡಿಸಿಕೊಂಡಿದ್ದ. ಬೇಟೆಯಾಡುವುದರಿಂದ ಹಿಡಿದು, ಬೆಳೆ ಬೆಳೆದು ಆಹಾರವನ್ನು ಬೇಯಿಸಿಕೊಳ್ಳುವವರೆಗೂ  ಸಾವಿರಾರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿ ಕೊಂಡಿದ್ದ ಎಂದು ಸಂಶೋಧಕರು ಹೇಳುತ್ತಾರೆ. ಇದಕ್ಕೆಲ್ಲ ಪುರಾವೆಗಳು ಎಂದರೆ, ವಿವಿಧ ದೇಶಗಳಲ್ಲಿರುವ ಆರ್ಕಿಯಾಲಜಿ (ಪುರಾತತ್ವ) ಇಲಾಖೆಯವರ ಸಂಶೋಧನೆ. ನಿಖರವಾಗಿ ಇಷ್ಟು ವರ್ಷಗಳ ಹಳೆಯದು ಎಂದು ಹೇಳುವಷ್ಟರ ಮಟ್ಟಿಗೆ ಇತ್ತೀಚಿಗಿನ ತಂತ್ರಜ್ನಾನ ಈ ಕೆಲಸವನ್ನು ಸುಲಭಮಾಡಿದೆ.

 


"ಹೊಸ ಶಿಲಾಯುಗ"ಎಂದರೆ "ನಿಯೋಲಿಥಿಕ್" , ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಸುಮಾರು 11200 BCE ಯಿಂದ, ನಂತರ ಪ್ರಪಂಚದ ಇತರ ಭಾಗಗಳಲ್ಲಿ, 4500 ಮತ್ತು 2000 BCE ನಡುವೆ ಈ ಯುಗ ಕೊನೆಗೊಂಡಿತು. ಇದು ತಾಂತ್ರಿಕ ಮತ್ತು ಸಾಮಾಜಿಕ ಬೆಳವಣಿಗೆಗಳ ಅವಧಿಯಾಗಿದ್ದು, ಬೆಳೆ ಬೆಳೆಯುವುದು ಮತ್ತು ಪ್ರಾಣಿಗಳ ಪಳಗಿಸುವಿಕೆ ಯಂತಹ ಚಟುವಟಿಕೆಗಳು ಈ ಯುಗದಲ್ಲಿ ಪ್ರಾರಂಭವಾಯಿತು. ಈ ರಾಷ್ಟ್ರಗಳಲ್ಲಿ ಉತ್ಖನನ ಮಾಡಿದಾಗ ದೊರೆತ ಪುರಾವೆಗಳ ಆಧಾರದ ಮೇಲೆ ಆಹಾರಕ್ಕಾಗಿ ಕೃಷಿಯ ಅವಲಂಬನೆ ಹೊಸ ಶಿಲಾಯುಗದಲ್ಲಿ ಆರಂಭವಾಗಿತ್ತು ಎಂದು ಊಹಿಸಲಾಗಿತ್ತು.

 










ಜೋರ್ಡಾನ್ ರಾಷ್ಟ್ರ, ಇಸ್ರೇಲ್, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲಿ ಸಹಸ್ರಾರು ವರ್ಷಗಳ ಹಿಂದಿನ ಜೀವನ ಪದ್ದತಿ, ಮಾನವನ ನಾಗರಿಕತೆ ಬೆಳವಣಿಗೆ ಕುರಿತು ಇಂದಿಗೂ ಉತ್ಕನನ ನಡೆಯುತ್ತಿದೆ. ಇತಿಹಾಸಕಾರರಿಗೆ, ಪುರಾತತ್ವ ಸಂಶೋಧಕರಿಗೆ ದೊರೆಯುವ ಈ ಪುರಾವೆಗಳು   ಅತ್ಯಮೂಲ್ಯ. ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ಸಮಯದಲ್ಲಿ ಹಲವಾರು ನಾಗರಿಕತೆ ಅಥವಾ ಸಮುದಾಯಗಳು ನಶಿಸಿಹೋಗಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಭೂಮಿಯಲ್ಲಿ ಅದೆಷ್ಟು ಸತ್ಯಗಳು ಹುದುಗಿವೆಯೋ ಗೊತ್ತಿಲ್ಲ. ಆದರೆ ಭೂಮಿಯನ್ನು ಬಗೆದಷ್ಟು ಸತ್ಯಗಳು ಹೊರಬರುತ್ತಿರುವುದನ್ನ ನಾವು ಇಂದಿಗೂ ಕಾಣುತಿದ್ದೇವೆ.

 


ಜೋರ್ಡಾನ್ ರಾಷ್ಟ್ರ  ಪಶ್ಚಿಮ ಏಷ್ಯಾದ ಅರಬ್ ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ ಸಿರಿಯಾ, ಈಶಾನ್ಯಕ್ಕೆ ಇರಾಕ್, ಪಶ್ಚಿಮದಲ್ಲಿ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ ಸೌದಿ ಅರೇಬಿಯಾ ರಾಷ್ಟ್ರಗಳಿವೆ.  ಮಧ್ಯ ಪ್ರಾಚ್ಯದ ಈ ರಾಷ್ಟ್ರವು ಸೇರಿದಂತೆ ಇಸ್ರೇಲ್, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲಿ ಶಿಲಾಯುಗದ ಕಾಲದ ಅವಶೇಷಗಳು ಪತ್ತೆಯಾಗುತ್ತಲೇ ಇವೆ. ಹತ್ತಾರು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಈ ಪುರಾವೆಗಳು ಒದಗಿಸುತ್ತಿವೆ. ಜನ ಜೀವನವಿಧಾನಗಳಲ್ಲಿ ಉಂಟಾಗುತ್ತಿದ್ದ ಸುಧಾರಣೆಗಳ ಪರಿಚಯ ಈ ಎಲ್ಲ ನೆಲೆಗಳಲ್ಲೂ ನಡೆಸಿದ ಉತ್ಖನನಗಳಿಂದ ದೊರಕುತ್ತದೆ. ಈ ಪ್ರದೇಶದಲ್ಲಿ ಪ್ರಾರಂಭಕಾಲದಿಂದಲೂ ಆದಿ ಮಾನವ ವಾಸಿಸುತ್ತಿದ್ದನೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.

 

ಉತ್ತರ ಅಫ್ರಿಕದಲ್ಲಿ ರೂಢಿಯಲ್ಲಿದ್ದ ಪೂರ್ವಶಿಲಾಯುಗ ಸಂಸ್ಕಂತಿಗಳು ಈಜಿಪ್ಟಿನ ಮಾರ್ಗವಾಗಿ ಜೋರ್ಡನ್ ಪ್ರದೇಶವನ್ನು ಪ್ರವೇಶಿಸಿದ್ದವು. ಇಲ್ಲಿಯ ಅಲ್-ಉಬೇದಿಯ ಎಂಬಲ್ಲಿ ಆಸ್ಟ್ರಲೊ-ಪಿತಿಕಲ್ ವರ್ಗಕ್ಕೆ ಸೇರಿದ ಆದಿಮಾನವನ ದೇಹದ ಪಳೆಯುಳಿಕೆಗಳೂ ಆಗಿನ ಕಲ್ಲಿನಾಯುಧಗಳೂ ದೊರಕಿವೆ. ಜಾರ್ಡನಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿರುವ ಮರಳ್ಗಾಡು ಪ್ರದೇಶದಲ್ಲಿ ಪೂರ್ವಶಿಲಾಯುಗದ ಬೇಟೆಗಾರರು ಅಲೆದಾಡುತ್ತಿದ್ದುದಕ್ಕೆ ಆಧಾರಗಳಿವೆ.

 


ಮಧ್ಯಪ್ರಾಚ್ಯದ ಪಶ್ಚಿಮ ಏಶಿಯಾದ ರಾಷ್ಟ್ರಗಳಲ್ಲಿ ಆಗಿನ ಮಧ್ಯ ಶಿಲಾಯುಗದ ಬೇಟೆಗಾರರು ಬದಲಾಗುತ್ತಿದ್ದ ಹವಮಾನ ಮತ್ತು ವಾಯುಗುಣಗಳಿಂದಾಗಿ ಅಲೆಮಾರಿ ಜೀವನ ಮತ್ತು ಆಹಾರಸಂಗ್ರಹದ ಹಂತದಿಂದ ಮುಂದುವರಿದು, ಒಂದೆಡೆಯಲ್ಲಿ ನೆಲೆ ನಿಂತು ಆಹಾರ ಉತ್ಪಾದಿಸುವ ಹಂತವನ್ನು ಕ್ರಮೇಣ ತಲುಪಿದರೆಂದು ಗ್ರಾಮೀಣ ಜೀವನವನ್ನು ರೂಢಿಸಿಕೊಂಡರೆಂದೂ ಈ ಶೋಧನೆಗಳಿಂದ ತಿಳಿದುಬರುತ್ತದೆ. ಗುಡಿಸಲು ಮಾದರಿಯ ಕಲ್ಲಿನ ರಕ್ಷಣಾ ಕೋಟೆಗಳನ್ನು ನಿರ್ಮಿಸಿಕೊಂಡು ಅದರಲ್ಲಿ ವಾಸಿಸುತಿದ್ದರು ಮತ್ತು ಆಹಾರ ಸಂರಕ್ಷಣೆಯನ್ನೂ ಸಹ ಮಾಡಿಕೊಳ್ಳುತಿದ್ದರು. ಮೊದಲಿಗೆ ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಪಾತ್ರೆಗಳನ್ನು ಬಳಸಿದ ಪುರಾವೆಗಳು ದೊರೆತಿವೆ. ಕಾಲಕ್ರಮೇಣ  ಗ್ರಾಮೀಣ ಜೀವನದಲ್ಲಿ ಹಲವು ಸುಧಾರಣೆಗಳಾದುವು. ಜೇಡಿಮಣ್ಣಿನಲ್ಲಿ ಮಾಡಿ ಸುಟ್ಟ ಮಡಕೆಗಳ ಉಪಯೋಗ ಪ್ರಾರಂಭವಾಯಿತು. ಕೃಷಿ ಚಟುವಟಿಕೆಗಳು ಕ್ರಿ.ಪೂ 9000 ವರ್ಷಗಳ ಹಿಂದೆ ಪ್ರಾರಂಭವಾಗಿರಬಹುದು ಎಂದು ಅಂದಾಜಿಸಲಾಗಿತ್ತು.

 

ಆದರೆ ಇತ್ತೀಚಿಗೆ ಈಶಾನ್ಯ ಜೋರ್ಡಾನ್‌ನ ಕಪ್ಪು ಮರುಭೂಮಿಯಲ್ಲಿ ಪುರಾತತ್ತ್ವಜ್ಞರು ಸಂಶೋಧನೆಗಾಗಿ ಉತ್ಖನನ ಮಾಡಿದಾಗ ದೊರೆತ ಬ್ರೆಡ್‌ನ (ರೊಟ್ಟಿ) ಪುರಾವೆ ಇದುವರೆವಿಗೂ ಬರೆದಿದ್ದ ಇತಿಹಾಸವನ್ನು ತಿದ್ದಬೇಕಾಗಿದೆ ಎನ್ನಬಹುದು. ಈ ಸಂಶೊಧನೆಯಲ್ಲಿ 14400 ವರ್ಷಗಳ ಹಿಂದೆ ಬೇಯಿಸಿದ ರೊಟ್ಟಿಯ ಸುಟ್ಟ ಅವಶೇಷಗಳನ್ನು ಕಂಡುಹಿಡಿಯಲಾಗಿದೆ, ಅಂದರೆ ಕೃಷಿಯ ಆಗಮನಕ್ಕೆ 4000 ವರ್ಷಗಳ ಹಿಂದೆ ಈ ಭಾಗದಲ್ಲಿ ಜನರು ರೊಟ್ಟಿಯನ್ನ ಬೇಯಿಸಿಕೊಂಡು ತಿನ್ನುತಿದ್ದರು ಎನ್ನುವುದು ವಿಶೇಷ.  ರೊಟ್ಟಿಯನ್ನು ಬೇಯಿಸಿಕೊಂಡು ತಿನ್ನುವ ಮಟ್ಟಿಗಿನ ಬುದ್ದಿಶಕ್ತಿ ಇರಬೇಕಾದರೆ, ಧಾನ್ಯಬೆಳೆಯುವ ಕಲೆಯೂ ಗೊತ್ತಿರಬೇಕಲ್ಲವೇ?

 


ಜೋರ್ಡಾನಿನ ಶುಬಾಯ್ಕಾ 1 ಎಂದು ಕರೆಯಲ್ಪಡುವ ನ್ಯಾಟುಫಿಯನ್ ಬೇಟೆಗಾರ-ಸಂಗ್ರಾಹಕ ಸೈಟ್‌ನಲ್ಲಿ ಎರಡು ಬೆಂಕಿಗೂಡುಗಳಲ್ಲಿ 24 (ಇಪ್ಪತ್ತನಾಲ್ಕು) ಪಿಜ್ಜಾ ಬ್ರೆಡ್ ಮಾದರಿಯ ರೊಟ್ಟಿ ಗಳು ದೊರೆತಿವೆ. ಕೇವಲ ಒಂದು ರೊಟ್ಟಿ ಸಿಕ್ಕಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು ಆದರೆ, 24 ರೊಟ್ಟಿಗಳು, ಅದನ್ನು ಸುಡುವ ಒಲೆ, ಹಿಟ್ಟನ್ನು ಮಾಡಲು ಉಪಯೋಗಿಸುವ ರುಬ್ಬುವ ಕಲ್ಲುಗಳು ಇತ್ಯಾದಿ ದೊರಕಿವೆ. ಅಲ್ಲಿ ದೊರೆತ ರೊಟ್ಟಿಯನ್ನು ಪರೀಕ್ಷೀಸಿದಾಗ ಗೋಧಿಯಂತಹ ಕಾಳುಗಳನ್ನು ಉಪಯೋಗಿಸಿ ಬೀಸುವ ಕಲ್ಲಿನಲ್ಲಿ ಹಿಟ್ಟನ್ನು ಮಾಡಲಾಗಿದೆ, ಅದಕ್ಕೆ ನೀರನ್ನು ಬೆರೆಸಿ, ಚಪಾತಿ ಮಾದರಿ ಹಿಟ್ಟಿನ ಉಂಡೆಗಳಂತೆ ಮಾಡಿ ಕೈಯಿಂದ ಅದನ್ನು ತಟ್ಟಿ ನಂತರ ಅದನ್ನು ತೆರೆದ ಬೆಂಕಿಯಲ್ಲಿ ಬೇಯಿಸಲಾಗಿದೆ.

 


ಸಾಮಾನ್ಯವಾಗಿ ಆಗಿನಕಾಲದಲ್ಲಿ, ಬೇಟೆಯಾಡಿ ಆಹಾರ ಸೇವಿಸುತಿದ್ದರಿಂದ ಏಕದಳ ಆಧಾರಿತ ಆಹಾರ ಪದಾರ್ಥಗಳನ್ನು ತಯಾರಿಸುವುದು ಕಷ್ಟ ಎಂದು ಆಗಿನ ಜನರಿಗೆ ತಿಳಿದಿತ್ತು ಎಂದು ಕಾಣುತ್ತದೆ. ಹೊಸ ಆಹಾರ, ರುಚಿ ಎಲ್ಲವನ್ನು ಮನಗಂಡು ಆಹಾರ ಪದ್ದತಿ ಬದಲಾಗಿರುವ ಸಂಭವವೂ ಇದೆ. ಜೋರ್ಡಾನಿನಲ್ಲಿ ದೊರೆತಿರುವ ಅವಶೇಷಗಳ ಪ್ರಕಾರ, ಅಥಿತಿಗಳು ಕುಳಿತುಕೊಳ್ಳುವ ಆಸನ, ಅಥಿತಿಗಳಿಗೆ ಆತಿಥ್ಯ ನೀಡಲು  ಈ ಬ್ರೆಡ್ ಅನ್ನು ತಯಾರಿಸುತಿದ್ದುದು ಇತ್ಯಾದಿಗಳನ್ನು ನೋಡಿದರೆ, ಬಹುಷಃ ಆ ಸಮಯದಲ್ಲಿಯೇ ಅಲ್ಲೊಂದು ನಾಗರೀಕತೆ ಬೆಳೆದಿರುವ ಸಂಭವವಿದೆ. ಬಹುಶಃ ಆಗಿನ ಕಾಲದ ರೊಟ್ಟಿತಯಾರಿಕೆಯು ನವಶಿಲಾಯುಗದ ಕೃಷಿ ಕ್ರಾಂತಿಗೆ ಕೊಡುಗೆ ನೀಡಿರಬಹುದು.  ಈ ಹಿಂದೆ, ಬ್ರೆಡ್ ಉತ್ಪಾದನೆಯ ಪುರಾವೆಗಳು ಟರ್ಕಿ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ನವಶಿಲಾಯುಗದ ಕೊನೆಯ ಸ್ಥಳಗಳಲ್ಲಿ ಕಂಡುಬಂದಿವೆ. ಜೋರ್ಡಾನ್‌ನಲ್ಲಿ ಸುಟ್ಟ ಅವಶೇಷಗಳು ಬ್ರೆಡ್ ಉತ್ಪಾದನೆಯು ಕೃಷಿಗೆ ಮುಂಚಿತವಾಗಿರುವುದಕ್ಕೆ ಮೊದಲ ನೇರ ಸಾಕ್ಷಿಯಾಗಿದೆ.

 

ಜೋರ್ಡಾನಿನ ಈ ಸ್ಥಳದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ, ವಿಶ್ಲೇಷಣೆ ಮಾಡಿದಾಗ, ಆಗಿನ ಸ್ಥಳೀಯರು ಸುಮಾರು 95 ವಿವಿಧ ಸಸ್ಯಗಳನ್ನು ಬಳಸಿರುವುದನ್ನು ಕಂಡು ಕೊಳ್ಳಲಾಗಿದೆ. ಹೆಚ್ಚಾಗಿ ಖಾದ್ಯ ಬೇರುಗಳು, ಚಿಗುರುಗಳು, ಬಾರ್ಲಿ, ಓಟ್ಸ್ ಮತ್ತು ಗೋಧಿಯನ್ನು ಸಹ ದೊರಕಿವೆ. ಆದಾಗ್ಯೂ, ಈ ಪ್ರಾಚೀನ ಜನರು ಉದ್ದೇಶಪೂರ್ವಕವಾಗಿ ಧಾನ್ಯಗಳನ್ನು ಬೆಳೆದಿದ್ದಾರೋ ಅಥವಾ ಸಂಗ್ರಹಿಸಿದ್ದರೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಈ ರೊಟ್ಟಿಯ ಮಾಡುವ ವಿಧಾನವನ್ನು ಅವರು 14000 ವರ್ಷಗಳ ಹಿಂದೆಯೇ ಕಲಿತು ರೂಡಿಸಿಕೊಂಡಿದ್ದರೆ, ಕೃಷಿ ಚಟುವಟಿಕೆ ಖಂಡಿತವಾಗಿ ಅದಕ್ಕಿಂತ ಹಿಂದೆಯೇ ಇರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು. ಇಸ್ರೇಲ್ ನಲ್ಲಿ 23000 ವರ್ಷಗಳ ಹಿಂದೆಯೇ ಕೃಷಿ ಚಟುವಟಿಕೆ ಆರಂಭವಾಗಿತ್ತು ಎಂದು ಇನ್ನೊಂದು ಸಂಶೋಧನೆ ಹೇಳುತ್ತದೆ. ವಿಜ್ನಾನ ಮುಂದುವರೆದಂತೆ ಸಂಶೋಧನೆಯ ತೀವ್ರತೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ವಿಚಾರಗಳು ಜಗತ್ತಿಗೆ ತಿಳಿಯುತ್ತಿವೆ. ಮುಂಬರುವ ಕಾಲದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಪ್ರಪಂಚಕ್ಕೆ ಸಿಕ್ಕರೂ ಸಿಗಬಹುದು.

ಸಾವಿರಾರು ವರ್ಷಗಳ ಹಿಂದೆ ಕಂಡು ಹಿಡಿದ ಈ ಪ್ರಕ್ರಿಯೆಯನ್ನು ನಾವು ಇಂದಿನ ಆಧುನಿಕ ಯುಗದಲ್ಲೂ ಅದೇ ರೀತಿ ಬಳಸುತಿದ್ದೇವೆ. ನಗರದಲ್ಲಿ ರೊಟ್ಟಿ ಮಾಡುವ ವಿಧಾನ ಬದಲಾಗಿರಬಹುದುಆದರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಅಫ್ಘನಿಸ್ತಾನಪಾಕಿಸ್ತಾನಉತ್ತರ ಭಾರತದ ಹಳ್ಳಿಗಳ ಕಡೆ ಇನ್ನೂ ಹಳೆಯ ಪದ್ದತಿಯನ್ನು ಅಳವಡಿಸಿಕೊಂಡಿರುವುದನ್ನು ನಾವು ಗಮನಿಸಬಹುದು.

 

ಬರಹ:- ಪಿ.ಎಸ್.ರಂಗನಾಥ

ಮಸ್ಕತ್ - ಒಮಾನ್ ರಾಷ್ಟ್ರ


 

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings