ಇಂತಹದೇ ಇನ್ನೊಂದು ವಿಶೇಷ ಸಂಗತಿ ಅರಬ್ ರಾಷ್ಟ್ರಗಳಾದ ಒಮಾನ್ ಮತ್ತು ಯುನೈಟೆಡ್
ಅರಬ್ ಸಂಸ್ಥಾನ (ಯುಏಇ) ದಲ್ಲಿದೆ. ಆದರೆ ಇಲ್ಲಿ ವಿಷಯ ಸ್ವಲ್ಪ ಸಂಕೀರ್ಣ. ಅದು ಏನಪ್ಪ ಎಂದರೆ, ಯುಏಇ ದೇಶದೊಳಗೆ ಒಮಾನ್ ದೇಶದ ಪ್ರದೇಶ, ಆ ಪ್ರದೇಶದೊಳಗೆ ಮತ್ತೆ ಯುಏಇ ಯ ಒಂದು ಗ್ರಾಮ. ಇಲ್ಲಿನ ಆ ಎರಡು ಪ್ರದೇಶಗಳ ಜನರ ಭಾವನೆಗಳು
ಮತ್ತು ನಿರ್ಧಾರಕ್ಕೆ ಬೆಲೆ ಕೊಟ್ಟು ಎರಡು ದೇಶಗಳ ಸರ್ಕಾರಗಳು ಆ ಎರಡು ಹಳ್ಳಿಗಳ ಜನರನ್ನು ಅವರ ಇಚ್ಚೆಯಂತೆಯೇ
ಇರಲು ಅವರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ತರಹದ ಅಂತರಾಷ್ಟ್ರಿಯ ಗಡಿಗಳು ಇಲ್ಲ. ಪ್ರಪಂಚದಲ್ಲಿ ಈ ತರಹದ ಭೂ ಪ್ರದೇಶದ
ದ್ವೀಪಗಳು ಬಹಳ ಅಪರೂಪ. ನೆದರ್ಲ್ಯಾಂಡ್ ಮತ್ತು ಬೆಲ್ಜಿಯಮ್ ರಾಷ್ಟ್ರಗಳಲ್ಲಿ ಸಹ ಈ ತರಹದ ಪ್ರದೇಶವಿದೆ.
ಒಂದು ದೇಶದ ಭೂಭಾಗವನ್ನು ಇನ್ನೊಂದು ದೇಶವು ಸುತ್ತುವರಿದಿದ್ದರೆ ಮತ್ತು ಆ ಭಾಗವನ್ನು ಮತ್ತೊಂದು ದೇಶವು
ಸುತ್ತುವರಿದಿದ್ದರೆ ಅದನ್ನು ಎಕ್ಸ್‌ಕ್ಲೇವ್ ಮತ್ತು ಎನ್‌ಕ್ಲೇವ್ ಎಂದು ಕರೆಯುತ್ತಾರೆ.
ಇಂತಹ ವಿಶಿಷ್ಟವಾದ ಪ್ರದೇಶಗಳ ಹೆಸರು "ಮಾಧಾ" ಮತ್ತು "ನಹ್ವಾ". ಮಾಧಾ ಒಮಾನ್ ರಾಷ್ಟ್ರಕ್ಕೆ ಸೇರಿದ್ದಾದರೆ, ನಹ್ವಾ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸೇರಿದೆ. ಇನ್ನು ಮಾದಾ ಪ್ರದೇಶದ ಜನರು ತಮ್ಮ ರಾಷ್ಟ್ರವಾದ ಒಮಾನಿನ ರಾಜಧಾನಿಯನ್ನು ಸಂಪರ್ಕಿಸಲು ಯುಏಇ ನ ಮುಖಾಂತರ ಹೋಗಬೇಕು. ಅದೇ ರೀತಿ "ನಹ್ವಾ" ಪ್ರದೇಶದ ಜನರು ಯುಏಇಯನ್ನು ಸಂಪರ್ಕಿಸಲು ಒಮಾನಿನ ಮುಖಾಂತರ ಸಂಚರಿಸಬೇಕು.
ಈ ತರಹ ಜನ ಯಾಕೆ ಆಯ್ದುಕೊಂಡರು ಎನ್ನುವ ಹಿನ್ನೆಲೆ ಹೀಗಿದೆ; 1930 ರ ದಶಕದ ಕೊನೆಯಲ್ಲಿ ಅಥವಾ 1940 ರ ದಶಕದ ಆರಂಭದಲ್ಲಿ, ಮುಸಂದಮ್ ಪರ್ಯಾಯದ್ವೀಪವನ್ನು ಆಳಿದ ನಾಲ್ಕು ಪ್ರಮುಖ ಕುಟುಂಬಗಳ ನಾಯಕರು (ರಾಸ್ ಅಲ್ ಖೈಮಾದ ಅಲ್ ಖಾಸಿಮಿ, ಶಾರ್ಜಾದ ಅಲ್ ಖಾಸಿಮಿ, ಫುಜೈರಾದ ಅಲ್ ಶಾರ್ಕಿ ಮತ್ತು ಒಮಾನ್‌ನ ಬು ಸೈದ್ ಮನೆತನ) ಒಂದು ದಿನ ಇಲ್ಲಿನ ಹಲವಾರು ಹಳ್ಳಿಗಳ ಜನರನ್ನು ಸಬೆಗೆ ಕರೆದು ನೀವು ಯಾವ ಶೇಖ್ ಪ್ರಭುತ್ವ ದ ಆಳ್ವಿಕೆಯಲ್ಲಿ ಇರಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಮಾಧಾ ಸುತ್ತಲಿನ ಎಲ್ಲಾ ಇತರ ಹಳ್ಳಿಗಳು ಮತ್ತು ಪಟ್ಟಣಗಳು ಶಾರ್ಜಾ, ಫುಜೈರಾ ಮತ್ತು ರಾಸ್ ಅಲ್ ಖೈಮಾದ ಆಡಳಿತ ಕುಟುಂಬಗಳ ಜತೆ ಇರಲು ಇಚ್ಚಿಸಿದರು, ಆದರೆ ಮಾಧಾ ಪ್ರದೇಶದ ಜನರು ಒಮಾನಿನ ಸುಲ್ತಾನರ ಜತೆ ಇರಲು ಒಪ್ಪಿಗೆ ಸೂಚಿಸಿದರು. ಆ ದಿನಗಳಲ್ಲಿ ಒಮಾನ್ ಶ್ರೀಮಂತ ರಾಷ್ಟ್ರವಾಗಿತ್ತು, ಆಫ್ರಿಕದ ಜಂಜೀಬಾರ್ ಸೇರಿದಂತೆ ಅರಬ್ಬಿ ಸಮುದ್ರದ ಬಹುತೇಕ ಬಂದರುಗಳು ಒಮಾನಿ ಸುಲ್ತಾನರ ವಶದಲ್ಲಿತ್ತು. ಹೀಗಾಗಿ ಸಶಕ್ತ ಸರ್ಕಾರವನ್ನು ಹೊಂದಿರುವ ಒಮಾನ್ ಸುಲ್ತಾನರು ಇಲ್ಲಿಯ ಜನರಿಗೆ ಅಗತ್ಯವಾದ ರಕ್ಷಣೆ ಜತೆಗೆ ನೀರಿನ ಸೌಕರ್ಯವನ್ನು ನೀಡುವರು ಎನ್ನುವ ದೃಢ ನಂಬಿಕೆಯಿಂದ ಮಾಧಾ ಜನತೆ ಒಮಾನ್ ಅನ್ನು ಆಯ್ಕೆ ಮಾಡಿದರು. ಇನ್ನು ಇದೇ ಪ್ರಾಂತ್ಯದ ಒಳಗಿರುವ ಇನ್ನೊಂದು ಗ್ರಾಮ "ನಹ್ವಾ" ದ ಜನತೆಯು ಯುಏಇಯ ಜತೆಗೆ ಇರಲು ಇಷ್ಟಪಟ್ಟರು, ಅದರಂತೆ ಶಾರ್ಜಾದ ಅಲ್ ಖಾಸಿಮಿಯವರ ಆಡಳಿತಕ್ಕೆ ಈ ಗ್ರಾಮವು ಒಳಪಟ್ಟಿತು.
ಸುಮಾರು ನಲವತ್ತು ವರ್ಷಗಳ ನಂತರ, ಬ್ರಿಟಿಷ್ ಪ್ರತಿನಿಧಿಯಾದ ಜೂಲಿಯನ್ ಎಫ್. ವಾಕರ್ ಈ ಎಲ್ಲಾ ಪ್ರಾಂತ್ಯಗಳ ಪ್ರತಿನಿಧಿಗಳು, ಸ್ಥಳೀಯ ಬುಡಕಟ್ಟು ಪ್ರದೇಶದ ಜನರು ಮತ್ತು ನಡುವಿನ ಧೀರ್ಘವಾದ ಸಮಾಲೋಚನೆಗಳ ನಂತರ 1969
ರಲ್ಲಿ ಅಂತರಾಷ್ಟ್ರೀಯ ಗಡಿಯನ್ನು ನಿರ್ಧರಿಸಲಾಯಿತು. ಅಂದಿನಿಂದ ಈ ಎಲ್ಲಾ ಪ್ರಾಂತ್ಯಗಳನ್ನು ಆ ರಾಷ್ಟ್ರಗಳು
ಅಭಿವೃದ್ದಿ ಪಡಿಸುತ್ತಿವೆ. ಈ ಪ್ರದೇಶಗಳ ಪ್ರವೇಶದ ಸ್ಥಳದಲ್ಲಿ ಆಯಾ ರಾಷ್ಟ್ರಗಳ ಪೋಲೀಸ್ ಚೆಕ್ಪೋಸ್ಟ್
ಗಳಿವೆ. ಒಮಾನ್ ರಾಷ್ಟ್ರವು, "ನ್ಯೂ ಮಾಧಾ" ಎನ್ನುವ ಒಂದು ಪಟ್ಟಣವನ್ನು
ನಿರ್ಮಿಸಿ ಅಲ್ಲಿ ಸಾಕಷ್ಟು ಅಭಿವೃದ್ದಿಕಾರ್ಯಗಳನ್ನ ಕೈಗೊಂಡಿದೆ. ರಸ್ತೆಗಳು, ಶಾಲೆ, ಅಂಚೆ ಕಛೇರಿ, ಈದ್ ಮೈದಾನ,
ಪೋಲೀಸ್ ಸ್ಟೇಷನ್, ಒಮಾನಿ ಬ್ಯಾಂಕ್, ವಿದ್ಯುತ್ ಮತ್ತು ನೀರು ಸರಬರಾಜು, ಏರ್‌ಸ್ಟ್ರಿಪ್ ಅನ್ನು ನಿರ್ಮಿಸಿದೆ.
ಅಂದಾಜು 3000 ರಷ್ಟು ಜನಸಂಖ್ಯೆ ಇದೆ.ಮಾಧಾ ಒಳಗಿನ ಯುಏಇ ನಿಯಂತ್ರಣದಲ್ಲಿರುವ ನಹ್ವಾ ಪ್ರದೇಶದಲ್ಲಿ
ಜನಸಂಖ್ಯೆ ಆಸುಪಾಸು 500 ರಷ್ಟಿದೆ. ಅಲ್ಲಿ ಯುಏಇ ರಾಷ್ಟ್ರವು ಅಲ್ಲಿನ ಜನರಿಗೆ ಎಲ್ಲಾ ರೀತಿಯ ಮೂಲಭೂತ
ಸೌಕರ್ಯಗಳನ್ನ ನೀಡಿದೆ
ಈ ವಿಶಿಷ್ಟವಾದ "ಮಾಧಾ ಮತ್ತು ನಹ್ವ" ಪ್ರದೇಶಕ್ಕೆ ವಾರಾಂತ್ಯಗಳಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬೆಟ್ಟಗಳಿಂದ ಆವೃತ್ತವಾದ ಒಮಾನಿನ ಮಾಧಾ ಪ್ರದೇಶದಲ್ಲಿ ಹೇರಳವಾದ ಖರ್ಜೂರದ ತೋಟಗಳಿವೆ. ಇಲ್ಲಿ ಕೆಲವು ನೀರಿನ ಬುಗ್ಗೆಗಳಿವೆ, ದಿನಪೂರ್ತಿ ನೈಸರ್ಗಿಕವಾಗಿ ಭೂಮಿಯಿಂದ ನೀರು ಹೊರಬರುತ್ತಿರುತ್ತದೆ. ಹದಿನೇಳನೇ ಶತಮಾನದಲ್ಲಿ ಒಮಾನಿ ಯಾರುಬಿ ಸುಲ್ತಾನಿಗಳು ನಿರ್ಮಿಸಿದ ಕೋಟೆ ಯೊಂದಿದೆ. ಸರೂಜ್ ಅಣೆಕಟ್ಟೆಯು ಈ ಪ್ರದೇಶದ ಪ್ರಮುಖ ಆಕರ್ಷಣೆ.
ಇಲ್ಲಿನ ಪ್ರಮುಖ ನಾಯಕರಾಗಿದ್ದ ಮುಹಮ್ಮದ್ ಬಿನ್ ಸಲೇಮ್ ಅಲ್ ಮದನಿಯವರು ನಿರ್ಮಿಸಿದ ವಸ್ತುಸಂಗ್ರಹಾಲಯವು ಇದ್ದು, ಇದರಲ್ಲಿ ಪುರಾತನ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಹತ್ತನೇ ಶತಮಾನದ AD ವರೆಗಿನ ಹಲವಾರು ದಾಖಲೆಗಳು, ಹಸ್ತಪ್ರತಿಗಳು ಅಲೆಕ್ಸಾಂಡರ್ ದಿ ಗ್ರೇಟ್ ಆಳ್ವಿಕೆಯಲ್ಲಿ ಬಳಸಲಾದ ಗ್ರೀಕ್ ಬೆಳ್ಳಿ ನಾಣ್ಯ, ಎರಡೂ ಬದಿಗಳಲ್ಲಿ ಕಲ್ಲಿನಿಂದ ಮಾಡಿದ ನಕ್ಷತ್ರವನ್ನು ಹೊಂದಿರುವ ಅತ್ಯಂತ ಚಿಕ್ಕ ನಾಣ್ಯ , ಮತ್ತು ಉಮಯ್ಯದ್ ಮತ್ತು ರಾಜ್ಯ ಯುಗಗಳಲ್ಲಿ ಮುದ್ರಿಸಲಾದ ನಾಣ್ಯಗಳು, ಶಿಲಾ ಶಾಸನಗಳು, ಬಾಣಗಳ ತುಣುಕುಗಳು, ಈಟಿಗಳು, ಇತರ ಪುರಾತನ ಆಯುಧಗಳು, ಗಡಿಯಾರಗಳು, ಕುಂಬಾರಿಕೆಯ ಮಡಿಕೆ ಬಿಂದಿಗೆ, ನಾಣ್ಯ ಮತ್ತು ಕೃಷಿ ಉಪಕರಣಗಳನ್ನು ಒಳಗೊಂಡಂತೆ ಕ್ರಿಸ್ತ ಪೂರ್ವಕಾಲದ ಹಿಂದಿನ ಹಲವಾರು ವಸ್ತುಗಳು ಮತ್ತು ಪ್ರಾಚೀನ ವಸ್ತುಗಳನ್ನು ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು.
ಬರಹ:- ಪಿ.ಎಸ್.ರಂಗನಾಥ
ಮಸ್ಕತ್ - ಒಮಾನ್ ರಾಷ್ಟ್ರ
Ranganathji ತಮ್ಮ ಅನ್ವೇಷಣೆ ಮತ್ತು ಲೇಖನ ತುಂಬಾನೇ ಅಮೂಲ್ಯವಾದುದು
ಪ್ರತ್ಯುತ್ತರಅಳಿಸಿ