ಗುರುವಾರ, ಆಗಸ್ಟ್ 24, 2023

ತ್ರಿವಿಕ್ರಮನ ಚಂದ್ರಯಾನಕ್ಕೆ ಅರಬ್ ರಾಷ್ಟ್ರಗಳಿಂದಲೂ ಅಭಿನಂದನೆಗಳ ಸುರಿಮಳೆ








ಚಂದ್ರಯಾನ - 3 ಯೋಜನೆಯ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಮ್‌ ಮತ್ತು  ರೋವರ್‌ ಪ್ರಗ್ಯಾನ್ ಯಶಸ್ವಿಯಾಗಿ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ದೇಶ ವಿದೇಶಗಳಾದ್ಯಾಂತ ಕೋಟ್ಯಾಂತರ ಜನರು ಬುಧವಾರದಂದು ಟೀವಿ ಪರದೆಗಳಿಗೆ ಅಂಟಿ ಕುಳಿತಿದ್ದರು. ಯಾವಾಗ ಚಂದ್ರನ ಮೇಲೆ ವಿಕ್ರಮ್ ಸೇಫಾಗಿ ಲ್ಯಾಂಡ್ ಆಯಿತೋ ನೋಡಿ ಭಾರತ ದೇಶವು  ಇತಿಹಾಸ ನಿರ್ಮಿಸಿದ್ದಲ್ಲದೆ, ಇಡೀ ಜಗತ್ತೇ ಭಾರತದ ಇಸ್ರೋ ವಿಜ್ನಾನಿಗಳ ಸಾಧನೆಯನ್ನ ಸಂಭ್ರಮಿಸಿ ಕೊಂಡಾಡಿದ್ದಲ್ಲದೆ, ವಿಶ್ವದಾದ್ಯಂತದಿಂದ ಭಾರತಕ್ಕೆ ಭರಪೂರ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. #congratulationsindia ಎನ್ನುವ ಹ್ಯಾಶ್ ಟ್ಯಾಗ್ ಕೋಟ್ಯಾಂತರ ಜನರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  


ಅರಬ್ ರಾಷ್ಟ್ರಗಳಲ್ಲಿ, ಪ್ರಮುಖ ವಾಗಿ ಯುನೈಟೆಡ್ ಅರಬ್ ಸಂಸ್ಥಾನದ ಇಲ್ಲಿನ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಮತ್ತು ಯುಎಇ ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು, ಒಮಾನಿನ ವಿದೇಶಾಂಗ ಸಚಿವರು ಸೇರಿದಂತೆ ಬಹುತೇಕರು ಭಾರತದ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ದುಬೈ ಆಡಳಿತಗಾರರು ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು "ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಭಾರತದ ನಮ್ಮ ಸ್ನೇಹಿತರಿಗೆ ಅಭಿನಂದನೆಗಳು. ಸತತ ಪರಿಶ್ರಮಗಳ ಮೂಲಕ ಸಶಕ್ತ  ರಾಷ್ಟ್ರಗಳನ್ನು ಕಟ್ಟಲಾಗುತ್ತಿದೆ, ಯಾವಾಗಲೂ ಭಾರತವು ಇತಿಹಾಸವನ್ನು ನಿರ್ಮಿಸುತ್ತಲೇ ಇದೆ" ಎಂದು ಕೊಂಡಾಡಿದ್ದಾರೆ.


ಯುಏಇ ಯ ಅಧ್ಯಕ್ಷರು ಮತ್ತು ಅಬುಧಾಬಿಯ ಆಡಳಿತಗಾರರು ಆದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು

ಚಂದ್ರನ ಮೇಲೆ ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಯಶಸ್ವಿ ಲ್ಯಾಂಡಿಂಗ್ ಸಾಮೂಹಿಕ ವೈಜ್ಞಾನಿಕ ಪ್ರಗತಿಯ ಮಹತ್ವವನ್ನು ಪ್ರತಿನಿಧಿಸುತ್ತದೆ. ಮನುಕುಲದ ಸೇವೆಯಲ್ಲಿನ ಈ ಐತಿಹಾಸಿಕ ಸಾಧನೆಗಾಗಿ ನಾನು ಪ್ರಧಾನ ಮಂತ್ರಿ @ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.


ಒಮಾನ್  ರಾಷ್ಟ್ರದ ವಿದೇಶಾಂಗ ಸಚಿವರು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲು ಭಾರತವನ್ನು ಅಭಿನಂದಿಸಿದ್ದಾರೆ. “ಚಂದ್ರನ ಮೇಲೆ ಯಶಸ್ವಿಯಾದ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಭಾರತಕ್ಕೆ ಅಭಿನಂದನೆಗಳು. ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ಮೈಲಿಗಲ್ಲು. ಹೊಸ ಆವಿಷ್ಕಾರಗಳು ಮತ್ತು ವೈಜ್ಞಾನಿಕ ಪ್ರಗತಿಯನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಒಮಾನ್‌ನ ವಿದೇಶಾಂಗ ಸಚಿವ ಬದ್ರ್ ಅಲ್ ಬುಸೈದಿ ತಮ್ಮ ತಿಳಿಸಿದ್ದಾರೆ.


ಗಲ್ಫ್ ರಾಷ್ಟ್ರಗಳಲ್ಲಿ, ಚಿಕ್ಕ ಪುಟ್ಟ ಕೆಲಸ ಮಾಡುವುವರಿಂದ ಹಿಡಿದು ಕೋಟ್ಯಾಂತರ ಆಸ್ತಿ ಹೊಂದಿರುವ ವಿವಿಧ ವರ್ಗದ ಐವತ್ತು ಲಕ್ಷಕ್ಕೂ ಹೆಚ್ಚಿನ ವಿವಿಧ ರಾಜ್ಯಗಳ  ಭಾರತೀಯ ಪ್ರಜೆಗಳಿದ್ದಾರೆ.  ಚಂದ್ರಯಾನದ ಯಶಸ್ಸು ಪ್ರತಿಯೊಬ್ಬ ಭಾರತೀಯರಿಗೂ ಅತೀವ ಸಂತಸವನ್ನುಂಟು ಮಾಡಿದ್ದಲ್ಲದೆ, ಭಾರತೀಯರ ಮೇಲಿನ ಗೌರವವನ್ನು ಇಮ್ಮಡಿ ಗೊಳಿಸಿದೆ. ಭಾರತಕ್ಕೆ ಮತ್ತು ವಿಶ್ವಕ್ಕೆ ಮಹತ್ವದ ದಿನ. ಈ ಸಾಧನೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶ ನಮ್ಮದು. ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ನಿರ್ಣಾಯಕ ಮತ್ತು ಕಷ್ಟಕರವಾದ ಮಿಷನ್ ಅನ್ನು ಸಾಕಾರ ಗೊಳಿಸಿದಿದ್ದಕ್ಕಾಗಿ ನಮ್ಮ ಅದ್ಭುತ ವಿಜ್ಞಾನಿಗಳು ಮತ್ತು ಇಸ್ರೋಗೆ ಹ್ಯಾಟ್ಸ್ ಆಫ್ ಎಂದು ಪ್ರತಿಯೊಬ್ಬರು ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡರು. ವಾಟ್ಸಪ್ ಗ್ರೂಪ್ ಗಳು, ಫೇಸ್ ಬುಕ್ ಗಳು ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮೆಸ್ಸೇಜ್ ಗಳು ತುಂಬಿ ತುಳುಕಾಡುತ್ತಿವೆ. ಭಾರತೀಯರಂತೆ ವಿವಿಧ ದೇಶಗಳ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿ ಕೆಲಸ ಮಾಡುತಿದ್ದಾರೆ, ಅದರಲ್ಲಿ ವಿಶೇಷವಾಗಿ ಪಾಕಿಸ್ತಾನಿಗಳು ಸಹ ಭಾರತೀಯರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿನ ವಿವಿಧ ಭಾರತೀಯ ಸಾಂಸ್ಕೃತಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನ ನಡೆಸಿದವು. ಬಹುತೇಕರು ಡಿಪಿಗಳಲ್ಲಿ ತಮ್ಮ ಫೋಟೋವನ್ನ ಇಸ್ರೋ ಗೆ ಅಭಿನಂದಿಸುವ ಮೂಲಕ ಬದಲಾಯಿಸಿಕೊಂಡಿದ್ದರು. 


ವಿದೇಶಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲೂ ಸಹ ಚಂದ್ರಯಾನ ಕುರಿತು ಸತತವಾಗಿ ವಿವಿದ ಬಗೆಯ ಪೋಸ್ಟ್ ಗಳನ್ನ ಹಾಕುತಿದ್ದರು. ಸಾಮಾನ್ಯವಾಗಿ ಭಾರತದ ಬಗೆಗಿನ ಋಣಾತ್ಮಕ ಸುದ್ದಿಗಳನ್ನ ಪೋಸ್ಟ್ ಮಾಡುತಿದ್ದ ಇವರು, ಇಂದು ಚಂದ್ರಯಾನ ಕುರಿತು ಸುದ್ದಿ ಪ್ರಸಾರ ಮಾಡಿ ತಮ್ಮ ನ್ಯೂಸ್ ವೀವರ್ಸ್ ಅನ್ನು ಹೆಚ್ಚಿಸಿಕೊಂಡಿದ್ದನ್ನ ಕಾಣಬಹುದಾಗಿತ್ತು. ಬಿಬಿಸಿ ನ್ಯೂಸ್  ನ ವೆಬ್ ಪೇಜ್ ನಲ್ಲೂ ಕಾಮೆಂಟ್ ಸೆಕ್ಶನ್ ನಲ್ಲಿ ಕೆಲವರು, ಭಾರತದಲ್ಲಿ ಊಟವಿಲ್ಲದೆ ನರಳುತ್ತಿರುವ ಲಕ್ಷಾಂತರ ಜನರಿರುವಾಗ ಈ ತರಹದ ಶೋಕಿ ಭಾರತಕ್ಕೆ ಬೇಕಿತ್ತ ಎಂದು ಕೆಟ್ಟ ಕಾಮೆಂಟ್ ಮಾಡುತಿದ್ದವರಿಗೆ, ನಮ್ಮ ಭಾರತೀಯರು ಸರಿಯಾಗಿಯೇ ಗುನ್ನ ಇಡುತ್ತಿರುವುದು ಕಂಡು ಬಂತು. ನೀವು ಬ್ರಿಟೀಷರು, ಮುನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದು ಬಡ ರಾಷ್ಟ್ರವನ್ನಾಗಿ ಮಾಡಿ ಹೋದಿರಿ, ಅದರಿಂದ ನಿಮಗೆ ನಾಚಿಕೆಯಾಗಬೇಕಿದೆ ಹೊರತು ನಮಗಲ್ಲ. ಅಂತಹ ಬಡತನದ ಸ್ಥಿತಿಯಿಂದ ದೇಶ ಈವತ್ತು ಪ್ರಪಂಚದ ಪ್ರಮುಖ ಆರ್ಥಿಕ ಶಕ್ತಿಯಾಗುವ ಮಟ್ಟಕ್ಕೆ ಭಾರತ ಬೆಳೆದು ನಿಂತಿದೆ, ಅದಕ್ಕೆ ಹೊಟ್ಟೆಕಿಚ್ಚು ಪಡದೆ ಸಂಭ್ರಮಿಸಿ ಎಂದು ಹಲವರು ಕಾಮೆಂಟಿಸುತಿದ್ದರು.  ಅದೇ ಇರಲಿ ಭಾರತ ರಾಷ್ಟ್ರಕ್ಕೂ ಮತ್ತು ಎಲ್ಲ ಭಾರತೀಯರಿಗೂ ಇದೊಂದು ಹೆಮ್ಮೆಯ ಕ್ಷಣ. 


ಬರಹ :- ಪಿ.ಎಸ್.ರಂಗನಾಥ

ಮಸ್ಕತ್, ಒಮಾನ್ ರಾಷ್ಟ್ರ





1 ಕಾಮೆಂಟ್‌:

  1. Hai ಅಣ್ಣಾ ತುಂಬಾ ಸಂತೋಷ ಆಗ್ತಿದೆ ನಾವು ಇಲ್ಲೇ ಇದ್ದು ನಮ್ಮ ಊರಿನ ಬಗ್ಗೆ ಅಷ್ಟಾಗಿ ಚಿಂತನೆ ಮಾಡುತ್ತಿಲ್ಲ ನಿವು ಅಷ್ಟು ದೂರದ ಊರಿನಲ್ಲಿ ಇದ್ದು ಸಹಾ ಸದಾ ನಮ್ಮ ಊರನ್ನೇ ನೆನಪಿಸಿಕೊಳ್ಳುವುದು ತುಂಬಾ ಸಂತೋಷ ಕರ ವಿಷಯ ಮತ್ತು ತುಂಬಾ ಪ್ರೇರಣೆಯ ಸಂಗತಿ ನಿಮ್ಮಂತ ವ್ಯಕ್ತಿ ನಮ್ಮ ಊರಿನವರು ಅಂತ ಕೇಳಿಸಿಕೊಳ್ಳಲು ತುಂಬಾ ಹೆಮ್ಮೆ ಆಗುತ್ತಿದೆ ನಿಮ್ಮ ಬರಹಗಳು ಇನ್ನೂ ಹೆಚ್ಚು ಹೆಚ್ಚು ಪ್ರಸಿದ್ದೆ ಪಡೆದುಕೊಳ್ಳಲಿ ಅಂತ ಅರಸುತ್ತಾ ನಿಮ್ಮೊಂದಿಗೆ ಕರ್ನಾಟಕದ ಏಳು ಕೋಟಿ ಜನರ ಆಶೀರ್ವಾದ ಗಳೊಂದಿಗೆ ಬೆಂಬಲವೂ ಸಹ ನಿಮಾಗಿರಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ
    ಜೈ ಭುವನೇಶ್ವರಿ ಜೈ ಭಾರತಮಾತೆ,

    ಪ್ರತ್ಯುತ್ತರಅಳಿಸಿ

Click below headings