ನಾವು
ಮನುಷ್ಯರು ಭಾವುಕ ಜೀವಿಗಳು, ನಮ್ಮ ಮನಸ್ಸು ಪ್ರತಿಯೊಂದು
ಕ್ರಿಯೆಗೂ ಸ್ಪಂದಿಸುತ್ತದೆ. ನಮ್ಮಲ್ಲಿ ರಾಗ ದ್ವೇಷ ಅಸೂಯೆ ದುಃಖ ಸುಖ ಶಾಂತಿ ಸಂತೋಷ ಎಲ್ಲವೂ
ಇವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ
ನಮ್ಮ ಮನಸ್ಸನ್ನ ಹೇಗೆ ನಿಯಂತ್ರಿಸಬೇಕು ಎನ್ನುವ ಚಿಂತನೆ ನಮ್ಮಲ್ಲಿ ಬಹಳ ಕಡಿಮೆ. ನಮ್ಮ
ಧೈನಂಧಿನ ಬದುಕಿನ ಜಂಜಾಟದಲ್ಲಿ ಮುಳುಗಿರುವಾಗ ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ
ಮಾಡುತ್ತೀವಿ. ಹೀಗಾಗಿ ಏನಾದರು ಸಂಕಷ್ಟ, ಬಂದಾಗ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ನಾವು ಕಲಿತಿಲ್ಲ. ಗೆಲುವು,
ಯಶಸ್ಸು, ಇತ್ಯಾದಿ ನಾವು ಬಯಸಿದ್ದು ಸಿಗದಿದ್ದಾಗ
ನಿರಾಶರಾಗಿ ದುಃಖ, ಖಿನ್ನತೆ, ಮಾನಸಿಕ
ಒತ್ತಡಗಳಿಂದ ಜರ್ಝರಿತರಾಗುತ್ತೇವೆ. ಯಾವುದೋ ಒಂದು ಸನ್ನಿವೇಶದಲ್ಲಿ ಆದ ಅವಮಾನವನ್ನು
ಸಹಿಸಿಕೊಳ್ಳಲಾಗುವುದಿಲ್ಲ. ಮನೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾರದೆ ಒದ್ದಾಡ್ತಿವಿ, ಬಿಜಿನೆಸ್ ಅನ್ನು ನಿಭಾಯಿಸಲಾಗದೆ ಒದ್ದಾಡ್ತಿವಿ. ಹೀಗೆ ಮನಸ್ಸು ದುರ್ಬಲವಾಗಿದ್ದಾಗ
ಯಾವುದೋ ಒಂದು ಕೆಟ್ಟಗಳಿಗೆಯಲ್ಲಿ ಆತ್ಮಹತ್ಯೆ ಎನ್ನುವ ನಿರ್ಧಾರಕ್ಕೆ ಬಂದು ಕೆಲವರು ಪ್ರಾಣ
ಕಳೆದುಕೊಳ್ಳುತ್ತಾರೆ.
ಒಂದು
ವಿಷಯ ನಮ್ಮ ಮನಸ್ಸಿನಲ್ಲಿ ಯಾವತ್ತೂ ನೆನಪಿಟ್ಟುಕೊಳ್ಳಬೇಕು, ನಮಗಿಂತ
ಬಲಹೀನರು, ಬಡವರು, ಸಮಸ್ಯೆಗಳಿಂದ ನರಳುವವರು,
ಖಂಡಿತಾ ಇರ್ತಾರೆ. ಅಂತಹವರನ್ನ ನೆನಪಿಸಿಕೊಂಡು ನಮ್ಮ ಸಮಸ್ಯೆ ಅವರ ಮುಂದೆ ಏನೂ
ಅಲ್ಲ ಎಂದುಕೊಂಡು ಡಿಪ್ರೆಶನ್ ನಿಂದ ಹೊರಬರಲು
ಪ್ರಯತ್ನಿಸಬೇಕು. ಜಗತ್ತಿನಲ್ಲಿ ಜನರಿಗೆ ನೂರೆಂಟು ಸಮಸ್ಯೆಗಳಿರ್ತಾವೆ, ಪ್ರಾಣಕ್ಕೆ ಸಂಚಕಾರ ಬಂದರೂ ಏನೂ
ಆಗಿಲ್ಲ ಎಂಬಂತೆ ಕೆಲವರು ಇರ್ತಾರೆ, ಮಾರಣಾಂತಿಕ ಕಾಯಿಲೆ ಇದ್ದರೂ
ಕೆಲವರು ಹಾಯಾಗಿರ್ತಾರೆ, ಲಕ್ಷಾಂತರ ಸಾಲ ಮಾಡಿಕೊಂಡು ದಿವಾಳಿಯಾದರೂ
ಚಿಕ್ಕ ಆಶಾವಾದದಿಂದ ಬದುಕ್ತಿರ್ತಾರೆ, ದೊಡ್ಡ ಗಂಡಾಂತರ ಸಿಲುಕಿದ್ದೀವಿ
ಅಂತ ಗೊತ್ತಿದ್ರೂ ಕೆಲವರು ಆರಾಮಾಗಿರ್ತಾರೆ, ಇಂತಹದ್ದೆಲ್ಲವನ್ನು
ಕೇಳಿರ್ತೀವಿ, ನೋಡಿರ್ತೀವಿ, ಆದರೆ ನಮಗೆ
ಸಮಸ್ಯೆ ಬಂದಾಗ ಮಾತ್ರ ಇದೆಲ್ಲವನ್ನು ನಾವು ಮರೆತು ಬಿಡ್ತೀವಿ. ಕೆಲ ಘಟನೆಗಳನ್ನು ಇಲ್ಲಿ
ಪ್ರಸ್ತುತ ಪಡಿಸ್ತಿದ್ದೀನಿ, ಇವರೆಲ್ಲರೂ ಸಮಸ್ಯೆಗಳು ಬಂದಾಗ
ಧೃತಿಗೆಡದೆ, ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮುಂದೆ ಬಂದವರು.
ಉತ್ತರಪ್ರದೇಶದ ಶಾಲಿನಿ ಸಿಂಗ್ ಎನ್ನುವವರು, 19ನೇ
ವಯಸ್ಸಿಗೇ ಎರಡನೇ ವರ್ಷದ ಪದವಿ ಓದುತ್ತಿರುವಾಗ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಅವಿನಾಶ್‌ಸಿಂಗ್
ಬಡೇರಿಯಾ ಎನ್ನುವವರೊಂದಿಗೆ ವಿವಾಹವಾಗುತ್ತದೆ. ಪತಿ ಕಾಶ್ಮೀರದ ಗಡಿಯಲ್ಲಿ ಕೆಲಸ
ಮಾಡುತ್ತಿದ್ದರು. ಶಾಲಿನಿಗೆ ಆಗ ಬರೀ 23 ವರ್ಷ ವಯಸ್ಸು. ಜೀವನದ ವಿವಿಧ ಮಜಲುಗಳನ್ನು ನೋಡುವ ಆಸೆ,
ಆದರೆ ದುರ್ವಿಧಿ ಸುಮ್ಮನಿರಲಿಲ್ಲ, ಪತಿ ಅವಿನಾಶ್
ಅವರು ಒಮ್ಮೆ ಉಗ್ರಗಾಮಿಗಳೊಂದಿಗೆ ಸೆಣೆಸಾಡುವಾಗ ಗುಂಡೇಟಿನಿಂದ ಸಾವನಪ್ಪುತ್ತಾರೆ. ಆ ಚಿಕ್ಕ
ವಯಸ್ಸಿಗೆ ವಿಧವೆಯಾಗುತ್ತಾಳೆ. ಬರಸಿಡಿಲಿನಂತೆ ಬಂದ ಗಂಡನ ಸಾವು ಅವಳನ್ನ ಧಿಕ್ಕೆಟ್ಟಿಸಿತ್ತು.
ಎರಡು ವರ್ಷದ ಮಗು ಕೈಯಲ್ಲಿತ್ತು. ಆದರೆ ಈಕೆ
ಕೊರಗುತ್ತ ಸುಮ್ಮನೆ ಇರಲಿಲ್ಲ. ಗಂಡ ಮೃತ ಪಟ್ಟ ಮೂರು ತಿಂಗಳಿಗೆ ಮಿಲ್ಟ್ರಿ ಟ್ರೈನಿಂಗ್ ಗೆ
ಸೇರುತ್ತಾಳೆ. ತರಬೇತಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಭಯಂಕರ ಕಷ್ಟ, ಆದರೂ ಅದೆಲ್ಲವನ್ನು ಮೆಟ್ಟಿ ನಿಂತು ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಾಳೆ. ಮುಂದೆ
ವಿಆರ್‌ಎಸ್ ಪಡೆದು, ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ
ಗೆಲುವು ಸಾಧಿಸುತ್ತಾರೆ.
ಪಂಜಾಬ್ ನ ಜಲಂಧರ್ ನ ಜಂಗ್ ಜಸ್ವಾಲ್ ಎಂಬಾತ, ಪದವಿ ಮುಗಿಸಿದ ನಂತರ ಫಿಜಿ ದೇಶದ ಕಾಲೇಜೊಂದರಲ್ಲಿ ಪ್ರೊಫೆಸರಾಗಿ ಕೆಲಸಕ್ಕೆ
ಸೇರುತ್ತಾನೆ. ನಂತರ ಅಮೇರಿಕಾದಲ್ಲೊಂದು ಉದ್ಯೋಗವಾಕಾಶ ದೊರೆಯುತ್ತದೆ. ಇರುವ ಕೆಲಸ ಬಿಟ್ಟು
ಅಮೇರಿಕಕ್ಕೆ ಹಾರುತ್ತಾನೆ. ಆದರೆ ಅಲ್ಲಿ ಕೆಲಸ ಪಕ್ಕ ಆಗುವುದಿಲ್ಲ, ಮರಳಿ
ಭಾರತಕ್ಕೆ ಬರದೆ, ಹೊಟ್ಟೆಪಾಡಿಗಾಗಿ ಲಾರಿ ಡ್ರೈವರ್ ಆಗಿ ಕೆಲಸ
ಸೇರುತ್ತಾನೆ. ಆಗ ಕಲಿತ ದುಶ್ಚಟಗಳು ಒಂದಲ್ಲ ಎರಡಲ್ಲ, ವಿಪರೀತ
ಸಿಗರೇಟು, ಮದ್ಯಸೇವನೆ, ಸರಿಯಾದ ಸಮಯದಲ್ಲಿ
ಊಟ ಮಾಡದೆ ಇರುವುದು, ಹೀಗೆ
ಎಲ್ಲವೂ ಹದ್ದು ಮೀರಿದಾಗ ಆರೋಗ್ಯ ಕೈ ಕೊಡುತ್ತದೆ. ಒಮ್ಮೆ ಹೃದಯಾಘಾತವಾಗುತ್ತದೆ. ಇದು ಇಲ್ಲಿಗೆ
ನಿಲ್ಲಲಿಲ್ಲ, ಮುಂದಿನ ಕೆಲವರ್ಷಗಳಲ್ಲಿ 8 ಬಾರಿ ಹೃದಯಾಘಾತವಾಗುತ್ತದೆ.
ಇಲ್ಲೀವರೆಗೆ ಮೂರು ಬಾರಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯಾಗಿದೆ. ಸ್ಟೆಂಟುಗಳನ್ನು
ಅಳವಡಿಸಲಾಗಿದೆ. ಹೃದಯದ ಸಮಸ್ಯೆಯ ಜತೆಗೆ ಮೂತ್ರಪಿಂಡಗಳ ವೈಫಲ್ಯ ಕಾಣಿಸಿಕೊಂಡಿದೆ. ಎರಡುಬಾರಿ
ಪಾರ್ಶ್ವವಾಯು ಆಗಿದೆ. ಇಷ್ಟು ಸಾಲದೆಂಬಂತೆ ಹೃದಯ ಮತ್ತು ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯೂ
ಆಗಿದೆ. ಇಷ್ಟೆಲ್ಲ ಆದಮೇಲೂ ಈ ಮಹರಾಯ, ಆರಾಮವಾಗಿ ಬದುಕುತ್ತಿದ್ದಾನೆ!
ಕೋಲಾರದ K.M
ವಿಶ್ವಾಸ್ ಎನ್ನುವವರು, ವಿದ್ಯುತ್
ಅವಘಡ ಒಂದರಲ್ಲಿ ಎರಡು ಕೈ ಕಳೆದುಕೊಳ್ತಾರೆ, ಮುಂದೆ ರಾಷ್ಟ್ರೀಯ,
ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗೆದ್ದಿರುವ ಇವರ ಕಥೆ
ಕೇಳಿದರೆ, ನಮ್ಮ ಸಮಸ್ಯೇ ಏನೂ ಅಲ್ಲ ಬಿಡಿ. ಇವರ ತಂದೆ ಕೋಲಾರದಲ್ಲಿ
ಹೊಸಮನೆ ಕಟ್ಟಿಸುತ್ತಿದ್ದರು, ಆಗಿನ್ನು ಇವರಿಗೆ ಚಿಕ್ಕವಯಸ್ಸು.
ನಿರ್ಮಾಣ ಹಂತದಲ್ಲಿದ್ದ ಗೋಡೆಗಳಿಗೆ ನೀರು ಹಾಕುವಾಗ, ಆಯತಪ್ಪಿ ಕರೆಂಟ್
ವೈರ್ ಗಳ ಮೇಲೆ ಬಿದ್ದುಬಿಡ್ತಾರೆ. ಆ ಕರೆಂಟಿನ
ತೀವ್ರತೆಗೆ ದೇಹದ ಬಹುಭಾಗ ಸುಟ್ಟುಹೋಗುತ್ತದೆ. ಬರೋಬ್ಬರಿ ಎರಡು ತಿಂಗಳು ಕೋಮಾಗೆ ಹೋಗುತ್ತಾರೆ.
ಎಚ್ಚರವಾದಾಗ ನೋಡಿದರೆ, ಎರಡೂ ಕೈಗಳನ್ನು ಭುಜದವರೆಗೂ, ಕತ್ತರಿಸಿಹಾಕಿರುತ್ತಾರೆ. ಆಮೇಲೆ ಇನ್ನೊಂದು ವಿಷಯ ಗೊತ್ತಾಗುತ್ತದೆ, ಇವರನ್ನು ಉಳಿಸಲು ಹೋಗಿ ಇವರ ತಂದೆ ಅಸುನೀಗಿದರಂತೆ. ಮುಂದೆ ಅನಾರೋಗ್ಯದಿಂದ ತಾಯಿಯೂ
ಮೃತಪಡುತ್ತಾರೆ. ಹೀಗೆ ನಿರಂತರವಾಗಿ ನೋವುಂಡರೂ, ಧೃತಿಗೆಡದೆ ಸ್ನೇಹಿತರ
ಸಹಾಯದಿಂದ ಬಿಕಾಮ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವಿ ಪಡೆಯುತ್ತಾರೆ, ಇವರ ಅಂಗವಿಕಲತೆ ನೋಡಿ ಯಾರೂ ಕೆಲಸ ಕೊಡುವುದಿಲ್ಲ. ಕೆಲ ಹೃದಯವಂತರ ಮಾರ್ಗದರ್ಶನದಲ್ಲಿ
ಈಜು ಕಲಿತರು. ವರ್ಷಗಳ ಸತತ ಪರಿಶ್ರಮದಿಂದ ಪ್ಯಾರಾಓಲಂಪಿಕ್ಸ್ ಈಜು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ನಂತರ
ಪದಕಗಳ ಭೇಟೆ ಶುರುವಾಗುತ್ತದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು
ಮುನ್ನೆಲೆಗೆ ಬರುತ್ತದೆ. ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂದೆ ಡ್ಯಾನ್ಸ್ ಕಲಿತು
ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಾರೆ, ಮದುವೆಯೂ ಆಗುತ್ತೆ ಜತೆಗೆ
ಒಂದು ಮಗು ಸಹ ಹುಟ್ಟುತ್ತದೆ.
ಸಂದೀಪ್
ಸಿಂಗ್ ಅಂತರಾಷ್ಟ್ರೀಯ ಮಟ್ಟದ ಹಾಕಿ ಆಟಗಾರ. ಆಗ ಅವರ ಕ್ರೀಡಾ
ಜೀವನದಲ್ಲಿ ಉತ್ತುಂಗದಲ್ಲಿದ್ದ ಸಮಯ. ಜರ್ಮನಿಯಲ್ಲಿ ನಡೆಯಲಿದ್ದ ವಿಶ್ವಕಪ್ ಗಾಗಿ ಆಡಬೇಕಿತ್ತು, ಒಮ್ಮೆ ಶತಾಬ್ದಿ ರೈಲಿನಲ್ಲಿ ಸಂಚರಿಸುತ್ತಿರುವಾಗ ಆಕಸ್ಮಿಕವಾಗಿ ಗುಂಡೇಟಿಗೆ ಸಿಲುಕಿದ
ಸಿಂಗ್ ಗಂಭೀರವಾಗಿ ಗಾಯಗೊಂಡರು, ಜೀವನದ ಪ್ರಮುಖ ಘಟ್ಟದಲ್ಲಿ ಅಚಾನಕ್ಕಾಗಿ ಈ ಘಟನೆ ನಡೆದೇ ಹೋಯಿತು. ಪಾರ್ಶ್ವವಾಯುವಿಗೆ
ತುತ್ತಾದರು. ಎರಡು ವರ್ಷಗಳ ಕಾಲ ಗಾಲಿಕುರ್ಚಿಯ ಮೇಲೆ ಇದ್ದರು. ಮುಂದೇನು ಎಂದು ದಿಕ್ಕೇ
ತೋಚದಾಯಿತು. ಛಲ ಬಿಡಲಿಲ್ಲ. ಸೋಲನ್ನು ಒಪ್ಪಿಕೊಳ್ಳಲಿಲ್ಲ. ಮುಂದೆ ಗಂಭೀರವಾದ ಗಾಯದಿಂದ
ಚೇತರಿಸಿಕೊಂಡಿದ್ದು ಮಾತ್ರವಲ್ಲದೆ, ಪುನಃ ಹಾಕಿ ತಂಡದಲ್ಲಿ ಪ್ರವೇಶ
ಪಡೆದರು. ತದನಂತರ ಹಲವಾರು ಹಾಕಿ ಕ್ಲಬ್ ಗಳ ನಾಯಕತ್ವ ವಹಿಸಿಕೊಂಡರು, ಮತ್ತೆ
ಕೋಟಿಗಟ್ಟಲೆ ದುಡಿಯಲು ಶುರುಮಾಡಿದರು. ಇಷ್ಟಕ್ಕೆ ಸುಮ್ಮನಾಗದೆ, ರಾಜಕೀಯಕ್ಕೆ
ಕಾಲಿಟ್ಟು, ಶಾಸಕನಾಗಿ ಆಯ್ಕೆಯಾದರು, ಮುಂದೆ
ಮಂತ್ರಿಯೂ ಆದರು.
ಪ್ರೇಮ್
ಗಣಪತಿ ಎನ್ನುವ ಒಬ್ಬ ತಮಿಳಿಗ, ಯಾವುದಾದರೊಂದು ಕೆಲಸ ಮಾಡಿಕೊಂಡು ಜೀವನ ರೂಪಿಸೋಣ ಅಂತ ಮುಂಬೈಗೆ ಬರ್ತಾನೆ. ಬಾಂದ್ರ
ರೈಲ್ವೇ ಸ್ಟೇಶನ್ ನಲ್ಲಿ ಸ್ನೇಹಿತ ಬಂದು ಕರೆದುಕೊಂಡು ಹೋಗ್ತಾನೆ ಅಂತ ಕಾಯ್ತಿರ್ತಾನೆ. ಆದರೆ
ಅವನು ಬರುವುದೇ ಇಲ್ಲ. ವಿಳಾಸ ಗೊತ್ತಿಲ್ಲ, ಕೈಯಲ್ಲಿ ಹಣವಿಲ್ಲ,
ತಮಿಳು ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಮುಂದೇನು ಮಾಡುವುದು ಎಂದು
ದಿಕ್ಕೆಟ್ಟು ಕೂತಿದ್ದಾಗ, ದಾರಿಹೋಕರು ಒಬ್ಬರು ಅವನನ್ನು ಊರಿಗೆ
ಹಿಂತಿರುಗಿಸಲು ಸಹಾಯ ಮಾಡ್ತಾರೆ, ಆದರೆ ಊರಿಗೆ ಹೋಗುವುದು ಬೇಡ
ಇಲ್ಲಿಯೇ ಕೆಲಸ ಮಾಡಿಕೊಂಡು ಜೀವನ ಮಾಡ್ತೀನಿ ಅಂತ ಹೋಟೇಲೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ
ಸೇರ್ತಾನೆ, ಕೆಲ ತಿಂಗಳುಗಳು ಕಳೆದ ನಂತರ ವೈಟರ್/ಸರ್ವರ್ ಕೆಲಸ ಕೊಡಿ
ಅಂತ ಓನರ್ ಅನ್ನು ಕೇಳ್ತಾನೆ. ಓನರ್ ಒಪ್ಪುವುದಿಲ್ಲ, ಅದೇ ಸಮಯದಲ್ಲಿ
ಪಕ್ಕದಲ್ಲಿಯೇ ಹೊಸ ಹೋಟೆಲ್ ಶುರುವಾಗುತ್ತದೆ, ಅಲ್ಲಿ ಟೀ ಬಾಯ್ ಆಗಿ
ಕೆಲಸಕ್ಕೆ ಸೇರುತ್ತಾನೆ. ಸಂಭಳ ಜಾಸ್ತಿಯಾಗುತ್ತದೆ, ಚೆನ್ನಾಗಿ ಕೆಲಸ
ಮಾಡ್ತಾನೆ, ಒಳ್ಳೆಯ ಹೆಸರು ಪಡೆಯುತ್ತಾನೆ. ಕೆಲಸಮಯದ ನಂತರ ಗ್ರಾಹಕರೊಬ್ಬರು, ನನ್ನ ಜತೆ ಬಾ ಹೋಟೆಲ್ ಬಿಜಿನೆಸ್
ಶುರುಮಾಡೋಣ, ಬಂದ ಲಾಭದಲ್ಲಿ 50:50 ಅಂತ ಹೇಳಿ, ಹೋಟೆಲ್ ಪ್ರಾರಂಭಿಸುತ್ತಾರೆ. ವ್ಯಾಪಾರ ಜಾಸ್ತಿಯಾಗುತ್ತಲೆ ಆ ಮಾಲೀಕ ವರಸೆ
ಬದಲಾಯಿಸುತ್ತಾನೆ. ಇವನನ್ನ ಹೋಟೆಲ್ಲಿನಿಂದ ಆಚೆ ಹಾಕುತ್ತಾನೆ. ಮತ್ತೆ ಬೀದಿಗೆ ಬಿದ್ದ ಪ್ರೇಮ್,
ಈ ಬಾರಿ ತನ್ನ ಸಂಭಂಧಿಕರಿಂದ ಸಹಾಯಪಡೆದು, ತಳ್ಳುವ
ಕೈಗಾಡಿಯಲ್ಲಿ ದೋಸೇ ಕ್ಯಾಂಪ್ ಶುರುಮಾಡುತ್ತಾನೆ. ಅದಕ್ಕೂ ಹಲವಾರು ಅಡಚಣೆಗಳು ಬರುತ್ತವೆ,
ಆದರೂ ಛಲದಂಕಮಲ್ಲನಂತೆ ಹಠಬಿಡದೆ, ಮುನ್ನೆಡೆಸುತ್ತಾನೆ,
ನಂತರ ಸ್ವಂತದೊಂದು ಚಿಕ್ಕ ಹೋಟೆಲ್ ಶುರುಮಾಡುತ್ತಾನೆ, ಮುಂದಿದ್ದು ಮಾತ್ರ ಊಹಿಸಲಾಗದ್ದು. ಈವತ್ತು ಅವನ ಉದ್ಯಮ ಚೈನ್ ಆಫ್ ರೆಸ್ಟೋರೆಂಟ್
ಮಾದರಿಯಲ್ಲಿ ಬೆಳೆದಿದೆ. 26 ಕಡೆ ಬ್ರಾಂಚ್
ತೆಗೆದಿದ್ದಾನೆ, 150 ಜನ ಕೆಲಸ ಮಾಡ್ತಿದ್ದಾರೆ. ವಾರ್ಷಿಕವಾಗಿ 5 ಕೋಟಿ
ವ್ಯವಹಾರ ನಡಿತಾಯಿದೆ.
ಸವಾಲುಗಳನ್ನ ಎದುರಿಸಿ ನಿಂತು ಜೀವನದಲ್ಲಿ ಗೆದ್ದ ಸಾವಿರಾರು ಜನರಿದ್ದಾರೆ, ಇಂತಹವರು ನಮಗೆ ಸ್ಪೂರ್ತಿದಾಯಕರಾಗಬೇಕು. ಇವತ್ತು ಸೋತುಹೋದೆವು ಎಂದು ಚಿಂತಿಸದೆ,
ನಾಳೆ ಹೇಗೆ ಗೆಲ್ಲಬೇಕು ಎಂದು ಹೊಸರೀತಿಯಲ್ಲಿ ಆಲೋಚಿಸಬೇಕು. ಕೆಲವರು
ಹೇಳ್ತಿರ್ತಾರೆ, ಎಷ್ಟೊಂದು ಬಾರಿ ಪ್ರಯತ್ನಿಸಿದ್ದೇನೆ ಆದರೆ ಯಶಸ್ಸು
ಸಿಗಲಿಲ್ಲ ಅಂತ!. ಒಂದೇ ರೀತಿ ನೂರು ಬಾರಿ ಪ್ರಯತ್ನ ಮಾಡಿದರು ಸಹ ಗೆಲುವು ಸಿಗುವುದಿಲ್ಲ. ಒಂದು
ಪ್ರಯತ್ನದಲ್ಲಿ ಸೋಲಾದಾಗ, ಅದರ ವಿಮರ್ಶೆ ಮಾಡಿ ಮುಂದಿನಬಾರಿ
ವಿಭಿನ್ನರೀತಿಯಲ್ಲಿ ಪ್ರಯತ್ನಿಸಬೇಕು. ಪತ್ರಕರ್ತರೊಬ್ಬರು ಒಮ್ಮೆ ಎಡಿಸನ್ ಅವರನ್ನು ಕೇಳ್ತಾರೆ,
"ನೀವು ಸಾವಿರ ಬಾರಿ ವಿಫಲವಾದಾಗ ಹೇಗೆ ಅನಿಸಿತು?" ಎಡಿಸನ್ ಅವರ ತುಂಬಾ ಸರಳವಾಗಿತ್ತು
“ನಾನು ಸಾವಿರ ಬಾರಿ ವಿಫಲವಾಗಲಿಲ್ಲ. ಬಲ್ಬ್
ಆವಿಷ್ಕಾರಕ್ಕಾಗಿ 1000 ಪ್ರಯತ್ನಗಳ ಅಗತ್ಯವಿತ್ತು ಎಂದು ಮನಗಂಡೆ". ಎಡಿಸನ್
ಅವರಂತೆಯೇ, ವೈಫಲ್ಯ ಅಥವ ಸೋಲು ಎನ್ನುವುದು ಗೆಲುವಿನ ಮೆಟ್ಟಿಲು ಎನ್ನುವುದನ್ನು
ಅರ್ಥ ಮಾಡಿಕೊಳ್ಳಬೇಕು.
ಆಗುವುದೆಲ್ಲ
ಒಳ್ಳೆಯದಕ್ಕೆ ಎನ್ನುವುದು ಇದು ಒಂದು ನಿದರ್ಶನ. ಸಮಸ್ಯೆಗಳು ಬಂದಾಗ ಕೊರಗಿ ಫಲವಿಲ್ಲ, ಪರಿಹರಿಸುವ ಮಾರ್ಗೋಪಾಯಗಳ ಕಂಡುಹಿಡಿಯುವುದರ ಬಗ್ಗೆ ಗಮನವಹಿಸಬೇಕು. ಎಂಥದೇ ಸಮಸ್ಯೆ ಬರಲಿ, ಅಡಚಣೆಯಾಗಲಿ,
ಏನೇ ಆಗಲಿ, ಆಗಿದ್ದೆಲ್ಲ ಒಳ್ಳೆಯದಕ್ಕೆ ಎನ್ನುವ
ಆಶಾಭಾವನೆ ಇರಲಿ.
ಪಿ.ಎಸ್.ರಂಗನಾಥ
ಮಸ್ಕತ್ - ಒಮಾನ್ ರಾಷ್ಟ್ರ
------------------
*********** -----------------
Nice articles 👌
ಪ್ರತ್ಯುತ್ತರಅಳಿಸಿNice article
ಪ್ರತ್ಯುತ್ತರಅಳಿಸಿಆತ್ಮ ವಿಶ್ವಾಸ ಮೂಡಿಸುವ ಒಂದು ಒಳ್ಳೆಯ ಲೇಖನ. ಕೆಲವೊಂದು ಕೆಟ್ಟ ಸಮಯ ಸಂದರ್ಭಗಳಿಂದ ದ್ಯೆಹಿಕ, ಮಾನಸಿಕ ಅಥವಾ ಆರ್ಥಿಕ ನಷ್ಟ ಉಂಟಾದರೆ ಹತಾಶರಾಗದೆ, ನಿರಾಶೆ ಹೊಂದದೆ ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಹೋದರೆ ಜಗವನ್ನೇ ಗೆಲ್ಲಬಹುದು ಎಂಬ ನಿದರ್ಶನಗಳು ಸಾಕಷ್ಟು ಇವೆ. ಇದೇ ಜೀವನದಲ್ಲಿ ಜೀವ ಇರುವ ವರೆಗೆ ಮುನ್ನಡೆಯಲು ನೀಡುವ ಮಾರ್ಗದರ್ಶನ.
ಪ್ರತ್ಯುತ್ತರಅಳಿಸಿಧನಾತ್ಮಕ ಭಾವನೆಗಳನ್ನು, ಚಿಂತನೆಯನ್ನು ಮೂಡಿಸುವ ಉತ್ತಮ ಲೇಖನ👌👌👍
ಪ್ರತ್ಯುತ್ತರಅಳಿಸಿಬಹಳ ಪ್ರೇರಣಾದಾಯಕವಾದ ಬರಹ. ಬದುಕನ್ನು ಪ್ರೀತಿಸುವವರನ್ನೇ ಬದುಕು ಸಹಾ ಪ್ರೀತಿಸುತ್ತದೆ, ಬದುಕನ್ನು ಪೊರೆಯುವವರನ್ನು ಬದುಕು ಸಹಾ ಪೊರೆಯುತ್ತದೆ, ಇದರಲ್ಲಿ ಎಳ್ಳಷ್ಟೂ ಅನುಮಾನ ಬೇಡ.
ಪ್ರತ್ಯುತ್ತರಅಳಿಸಿನನ್ನದೊಂದು ವಿನಮ್ರ ಸಲಹೆ, ಮಸ್ಕತ್ ಕನ್ನಡ ಶಾಲೆಯ ತರಗತಿಗಳಲ್ಲಿ ಇಂತಹ ಪ್ರೇರಣಾಭರಿತ, ಸ್ಫೂರ್ತಿದಾಯಕ ಹಾಗೂ ಬದುಕನ್ನು ವೈಭವೀಕರಿಸಿ ಆಚರಿಸುವ, ಸತ್ಯಘಟನೆಗಳನ್ನ ಆಧರಿಸಿದ ಪಾಠ, ಪ್ರವಚನಗಳನ್ನ, ಕಾಲಕಾಲಕ್ಕೆ ಮಕ್ಕಳಿಗೆ ಬೋಧಿಸುವುದರಿಂದ ಅವರ ಭವಿಷ್ಯ ಜೀವನಕ್ಕೆ ಸಹಕಾರಿಯಾಗುತ್ತದೆ ಎನ್ನುವುದು ನನ್ನ ಅಭಿಮತ.
ಮಸ್ಕತ್ ಕನ್ನಡ ಶಾಲೆಯ ಸಂಬಂಧಿತ ಶಿಕ್ಷಕ ವರ್ಗ ಈ ದಿಸೆಯಲ್ಲಿ ಮೊದಲಿಡಲಿ ಎನ್ನುವ ಆಶಯ ನನ್ನದು.
ಇಂತಹ ಲೇಖನ ಗಳು ಇನ್ನಷ್ಟು ಮೂಡಿ ಬರಲಿ ರಂಗನಾಥ್ ರವರೆ🤝👍
ಪ್ರತ್ಯುತ್ತರಅಳಿಸಿExcellent one 👌
ಪ್ರತ್ಯುತ್ತರಅಳಿಸಿSuper Sir , ಇವರೆಲ್ಲ ಬದುಕನ್ನು ಪ್ರೀತಿಸಿ ಬದುಕಿದವರು ಅಲ್ವೇ ಸಾರ್🙏 ತುಂಬಾ ಚೆನ್ನಾಗಿ ಮೂಡಿಬಂದಿದೆ ಲೇಖನ ಅಭಿನಂದನೆಗಳು 🙏
ಪ್ರತ್ಯುತ್ತರಅಳಿಸಿಆಶಾದಾಯಕ, ಸುಂದರ ಬರಹ.
ಪ್ರತ್ಯುತ್ತರಅಳಿಸಿBahala chennagi vivarisiddeeri Ranganath sir, '
ಪ್ರತ್ಯುತ್ತರಅಳಿಸಿಕಷ್ಟ ಕ್ಷಣಿಕ ಗೆಲುವನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳಿ ಎಂಬ ಸಾಲುಗಳು ಬಹಳ ಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಮನಸ್ಸಿದ್ದರೆ ಮಾರ್ಗವಿದೆ
ಪ್ರತ್ಯುತ್ತರಅಳಿಸಿಛಲವಿದ್ದರೆ ಜಯವಿದೆ 👌🙏🙏🙏
Motivational
ಪ್ರತ್ಯುತ್ತರಅಳಿಸಿಲೇಖನ ಸ್ಫೂರ್ತಿದಾಯಕವಾಗಿದೆ.
ಪ್ರತ್ಯುತ್ತರಅಳಿಸಿ